ರಕ್ಷಣಾ ಸಚಿವಾಲಯ

ಮುಂಬೈನ ಘಾಟ್ ಕೋಪರ್ ನ ನೌಕಾ ಕ್ವಾರಂಟೈನ್ ಶಿಬಿರದಲ್ಲಿದ್ದ 44 ಸ್ಥಳಾಂತರಗೊಂಡವರು ಮನೆಗೆ ವಾಪಸ್

Posted On: 13 APR 2020 11:52AM by PIB Bengaluru

ಮುಂಬೈನ ಘಾಟ್ ಕೋಪರ್ ನ ನೌಕಾ ಕ್ವಾರಂಟೈನ್ ಶಿಬಿರದಲ್ಲಿದ್ದ 44 ಸ್ಥಳಾಂತರಗೊಂಡವರು ಮನೆಗೆ ವಾಪಸ್

 

ಮುಂಬೈನ ಘಾಟ್ ಕೋಪರ್ ನಲ್ಲಿರುವ ಭಾರತೀಯ ನೌಕಾ ಪಡೆಯ ಕ್ವಾರಂಟೈನ್ ಸೌಕರ್ಯದಲ್ಲಿ ಇರಾನ್ ನಿಂದ ಸ್ಥಳಾಂತರಿಸಲಾಗಿದ್ದ(24 ಮಹಿಳೆಯರೂ ಸೇರಿದಂತೆ) 44 ಮಂದಿ ಕ್ವಾರಂಟೈನ್ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈ ಎಲ್ಲ 44 ನಾಗರಿಕರು 2020ರ ಮಾರ್ಚ್ 13ರಿಂದ 30 ದಿನಗಳ ಕಾಲ ಕ್ವಾರಂಟೈನ್ ಸೌಕರ್ಯದಲ್ಲಿದ್ದರು. ಕಳೆದ ಮಾರ್ಚ್ 28ರಂದು ಕೋವಿಡ್-19 ಪರೀಕ್ಷೆಯಲ್ಲಿ ಪ್ರತಿಯೊಬ್ಬರಿಗೂ ನೆಗೆಟಿವ್ ವರದಿ ಬಂದಿದೆ.

ನೌಕಾಪಡೆಯ ನಿರ್ದಿಷ್ಟ ವೈದ್ಯಕೀಯ ತಂಡ ಈ ಸ್ಥಳಾಂತರಗೊಂಡವರ ಆರೋಗ್ಯ ನಿರ್ವಹಣೆಗೆ ಅವರಿತವಾಗಿ ಶ್ರಮಿಸಿದೆ. ಆ ತಂಡಕ್ಕೆ ಅಗತ್ಯ ಸಿಬ್ಬಂದಿ ಮತ್ತು ಸೌಕರ್ಯದ ಶುಚಿತ್ವದಲ್ಲಿ ತೊಡಗಿದ್ದ ನೌಕರರು ಸಂಪೂರ್ಣ ಸಹಕಾರ ನೀಡಿದ್ದು, ಸ್ಥಳಾಂತರಗೊಂಡವರ ಯೋಗಕ್ಷೇಮವನ್ನು ನೋಡಿಕೊಳ್ಳಲಾಗಿದೆ. ಅವರಿಗೆ ವಿಶೇಷ ನಿಗಾದಡಿ ಆಹಾರವನ್ನು ತಯಾರಿಸಿ, ಅವರ ಅಗತ್ಯತೆಗಳಿಗೆ ತಕ್ಕಂತೆ ನೀಡಲಾಗಿತ್ತು.

ಕ್ವಾರಂಟೈನ್ ಸೌಕರ್ಯದಲ್ಲಿ ಸ್ಥಳಾಂತರಗೊಂಡವರಿಗಾಗಿ ಸೂಕ್ತ ವಾಸ್ತವ್ಯದ ವ್ಯವಸ್ಥೆ, ಗ್ರಂಥಾಲಯ, ಟಿವಿ ಕೊಠಡಿ, ಒಳಾಂಗಣ ಕ್ರೀಡೆಗಳನ್ನಾಡಲು ಜಾಗ, ಸಣ್ಣ ಜಿಮ್ನಾಶಿಯಂ ಮತ್ತು ಕ್ರಿಕೆಟ್ ಆಡಲು ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು.

ರಾಷ್ಟ್ರವ್ಯಾಪಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಹೆಚ್ಚಿನ ಮಳಿಗೆಗಳು ಇಲ್ಲದ ಕಾರಣ ಹೆಚ್ಚುವರಿ ಸವಾಲುಗಳನ್ನು ಎದುರಿಸಿ ಆವಿಷ್ಕಾರಗಳ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ. ಸ್ಥಳಾಂತರ ಗೊಂಡವರು ತಮ್ಮ ತವರು ಶ್ರೀನಗರ ಮತ್ತು ಲಡಾಕ್ ಗೆ ತೆರಳಲು ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲದೆ ಇರುವ ಕಾರಣ ಅವರ ವಾಸ್ತವ್ಯ ಅಲ್ಲಿಯೇ ಮುಂದುವರಿದಿತ್ತು. ನಂತರ ಐಎಎಫ್ ನ ವಿಮಾನದ ಮೂಲಕ 2020ರ ಏಪ್ರಿಲ್ 12ರಂದು ಅವರನ್ನು ಸಿ-130 ವಿಮಾನದ ಮೂಲಕ ಶ್ರೀನಗರಕ್ಕೆ ವಾಪಸ್ ಕರೆದೊಯ್ಯಲಾಯಿತು. ಅವರುಗಳು ವಾಪಸ್ಸಾಗುವಾಗ ಪ್ರತಿಯೊಬ್ಬ ಸ್ಥಳಾಂತರಗೊಂಡ ವ್ಯಕ್ತಿಗೂ ಆಹಾರ ಪ್ಯಾಕೆಟ್, ರಿಪ್ರೆಶ್ ಮೆಂಟ್ ಮತ್ತು ಎರಡು ಹೊಲಿದ ಮಾಸ್ಕ್ ಗಳನ್ನು ಎನ್ ಡಬ್ಲ್ಯೂಡಬ್ಲ್ಯೂಎ ಘಾಟ್ ಕೋಪರ್ ನಿಂದ ಸೌಹಾರ್ದಯುತವಾಗಿ ನೀಡಿ ಕಳುಹಿಸಲಾಯಿತು.

ಭಾರತೀಯ ನೌಕಾಪಡೆ ಕೋವಿಡ್-19 ವಿರುದ್ಧದ ರಾಷ್ಟ್ರೀಯ ಪ್ರಯತ್ನಗಳಿಗೆ ನೆರವು ನೀಡಲು ಬದ್ಧವಾಗಿದೆ ಮತ್ತು ಭಾರತದ ನಾಗರಿಕರಿಗೆ ಮತ್ತು ನಾಗರಿಕ ಆಡಳಿತಕ್ಕೆ ಸಾಧ್ಯವಾದ ಎಲ್ಲ ರೀತಿಯಲ್ಲೂ ನೆರವು ನೀಡಲು ಸದಾ ಸನ್ನದ್ಧವಾಗಿದೆ.

*********

 

 



(Release ID: 1613911) Visitor Counter : 120