ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ

ಎರಡು ಪದರಗಳ ಖಾದಿ ಮುಖಗವಸುಗಳನ್ನು ಅಭಿವೃದ್ಧಿಪಡಿಸಿದ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ)

Posted On: 12 APR 2020 5:31PM by PIB Bengaluru

ಎರಡು ಪದರಗಳ ಖಾದಿ ಮುಖಗವಸುಗಳನ್ನು ಅಭಿವೃದ್ಧಿಪಡಿಸಿದ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ); ಬೃಹತ್ ಪ್ರಮಾಣದ ಖರೀದಿ ಆದೇಶಗಳು

ಶೀಘ್ರದಲ್ಲೇ ಜಮ್ಮು ಮತ್ತು ಕಾಶ್ಮೀರಕ್ಕೆ 7.5 ಲಕ್ಷ ಮುಖಗವಸುಗಳನ್ನು ಪೂರೈಸಲಿರುವ ಕೆವಿಐಸಿ

ಎಲ್ಲ ಜಿಲ್ಲಾಧಿಕಾರಿಗಳಿಗೆ 500 ಮುಖಗವಸುಗಳನ್ನು ಉಚಿತವಾಗಿ ನೀಡುವಂತೆ ಕೆವಿಐಸಿ ಅಧ್ಯಕ್ಷರ ಮನವಿ

 

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ಎರಡು ಪದರುಗಳ ಖಾದಿ ಮುಖಗವಸನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದೆ ಮತ್ತು ಅದನ್ನು ಪೂರೈಸಲು ದೊಡ್ಡ ಪ್ರಮಾಣದ ಆದೇಶಗಳನ್ನು ಪಡೆದುಕೊಂಡಿದೆ. ಕೆವಿಐಸಿ ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಮಾತ್ರ 7.5 ಲಕ್ಷ ಖಾದಿ ಮುಖಗವಸುಗಳನ್ನು ಪೂರೈಸುವ ಆದೇಶವನ್ನು ಪಡೆದುಕೊಂಡಿದೆ. ಇದರಲ್ಲಿ ಜಮ್ಮು ಜಿಲ್ಲೆಗೆ 5 ಲಕ್ಷ, ಫುಲ್ವಾಮಾ ಜಿಲ್ಲೆಗೆ ಒಂದು ಲಕ್ಷ ನಲವತ್ತು ಸಾವಿರ, ಉಧಂಪುರ ಜಿಲ್ಲೆಗೆ ಒಂದು ಲಕ್ಷ ಮತ್ತು ಕುಪ್ವಾರಾ ಜಿಲ್ಲೆಗೆ 10,000 ಮುಖಗವಸುಗಳನ್ನು ಪೂರೈಸಲಾಗುವುದು. ಏಪ್ರಿಲ್ 20 ರೊಳಗೆ ಜಿಲ್ಲೆಗಳ ಅಭಿವೃದ್ಧಿ ಆಯುಕ್ತರಿಗೆ ಮುಖಗವಸುಗಳನ್ನು ಪೂರೈಸಲಾಗುವುದು. ಹತ್ತಿ ಮರುಬಳಕೆ ಮಾಡಬಹುದಾದ ಮುಖಗವಸು 7 ಇಂಚು (ಉದ್ದ) 9 ಇಂಚು (ಅಗಲ) ಹಾಗೂ ಮೂರು ನಿರಿಗೆಗಳೊಂದಿಗೆ, ಕಟ್ಟಲು ಮೂಲೆಯಲ್ಲಿ ನಾಲ್ಕು ಪಟ್ಟಿಗಳನ್ನು ಹೊಂದಿರುತ್ತದೆ.

" ಮುಖಗವಸುಗಳ ತಯಾರಿಕೆಗಾಗಿ ಕೆವಿಐಸಿ ನಿರ್ದಿಷ್ಟವಾಗಿ ಡಬಲ್ ಟ್ವಿಸ್ಟೆಡ್ ಖಾದಿ ಬಟ್ಟೆಯನ್ನು ಬಳಸುತ್ತಿದೆ, ಏಕೆಂದರೆ ಇದು ಶೇ.70 ರಷ್ಟು ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ, ಹಾಗೆಯೇ ಗಾಳಿಯು ಸುಲಭವಾಗಿ ಹಾದುಹೋಗಲು ಮಾರ್ಗವನ್ನು ಒದಗಿಸುತ್ತದೆ, ಆದ್ದರಿಂದ ಈಗ ಲಭ್ಯವಿರುವ ಅತ್ಯುತ್ತಮ ಕಡಿಮೆ ವೆಚ್ಚದ ಪರ್ಯಾಯ ಮುಖಗವಸು ಎಂದು ಸಾಬೀತುಪಡಿಸುತ್ತದೆ" ಎಂದು ಕೆವಿಐಸಿ ಅಧ್ಯಕ್ಷ ಶ್ರೀ ವಿ.ಕೆ. ಸಕ್ಸೇನಾ ಹೇಳಿದ್ದಾರೆ.

" ಮುಖಗವಸುಗಳು ಹೆಚ್ಚು ವಿಶೇಷವಾದವು, ಏಕೆಂದರೆ ಅವುಗಳು ಕೈಯಿಂದ ನೂಲುವ, ಕೈಯಿಂದ ನೇಯ್ದ ಖಾದಿ ಬಟ್ಟೆಯಿಂದ ಮಾಡಲ್ಪಟ್ಟಿವೆ. ಇವು ಸರಾಗವಾಗಿ ಉಸಿರಾಡಲು ಸಹಾಯ ಮಾಡುತ್ತವೆ, ತೊಳೆದು ಮರುಬಳಕೆ ಮಾಡಬಹುದು ಮತ್ತು ಜೈವಿಕವಾಗಿ ಕರಗುತ್ತವೆ" ಎಂದು ಶ್ರೀ ಸಕ್ಸೇನಾ ತಿಳಿಸಿದರು.

ಪ್ರಸ್ತುತ, ಜಮ್ಮು ಸಮೀಪದ ನಾಗ್ರೊಟ್ಟಾ ಖಾದಿ ಹೊಲಿಗೆ ಕೇಂದ್ರವನ್ನು ಉಖಗವಸು ಹೊಲಿಗೆ ಕೇಂದ್ರವನ್ನಾಗಿ ಮಾಡಲಾಗಿದೆ, ಇದು ದಿನಕ್ಕೆ 10,000 ಮುಖಗವಸುಗಳನ್ನು ಉತ್ಪಾದಿಸುತ್ತಿದೆ, ಉಳಿದ ಮುಖಗವಸುಗಳನ್ನು ಶ್ರೀನಗರ ಸುತ್ತಮುತ್ತಲಿನ ವಿವಿಧ ಸ್ವಸಹಾಯ ಗುಂಪುಗಳು ಮತ್ತು ಖಾದಿ ಸಂಸ್ಥೆಗಳಲ್ಲಿ ತಯಾರಿಸಲಾಗುತ್ತಿದೆ.

ಒಂದು ಮೀಟರ್ಖಾದಿ ಬಟ್ಟೆಯಲ್ಲಿ 10 ಎರಡು ಪದರುಗಳ ಮುಖಗವಸುಗಳನ್ನು ತಯಾರಿಸಲಾಗುವುದು. 7.5 ಲಕ್ಷ ಮುಖಗವಸುಗಳನ್ನು ತಯಾರಿಸಲು, ಸುಮಾರು 75,000 ಮೀಟರ್ ಖಾದಿ ಬಟ್ಟೆಯನ್ನು ಬಳಸಲಾಗುವುದು, ಇದು ಖಾದಿ ಕುಶಲಕರ್ಮಿಗಳಿಗೆ ಜೀವನೋಪಾಯದ ಅವಕಾಶಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ. ಜಮ್ಮು ಮತ್ತು ಕಾಶ್ಮೀರ ಖಾದಿ ಸಂಸ್ಥೆಗಳು ಉಣ್ಣೆಯ ಬಟ್ಟೆಯನ್ನು ಮಾತ್ರ ಉತ್ಪಾದಿಸುತ್ತಿರುವುದರಿಂದ, ಮುಖಗವಸುಗಳಿಗೆ ಹತ್ತಿ ಬಟ್ಟೆಯನ್ನು ಹರಿಯಾಣ ಮತ್ತು ಉತ್ತರ ಪ್ರದೇಶ ಖಾದಿ ಸಂಸ್ಥೆಗಳಿಂದ ಸಂಗ್ರಹಿಸಲಾಗುತ್ತದೆ ಮತ್ತು ಜಿಲ್ಲಾಡಳಿತದಿಂದ ವಿಶೇಷ ಅನುಮತಿ ಪಡೆದು ಕಳುಹಿಸಲಾಗುತ್ತದೆ.

ಏತನ್ಮಧ್ಯೆ, ದೇಶಾದ್ಯಂತ ಸ್ಥಳೀಯ ಆಡಳಿತವನ್ನು ಬೆಂಬಲಿಸಲು, ಅಧ್ಯಕ್ಷರು ಕೆವಿಐಸಿ ಎಲ್ಲಾ ಖಾದಿ ಸಂಸ್ಥೆಗಳು ಕನಿಷ್ಠ 500 ಮುಖಗವಸುಗಳನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಬಳಕೆ ಮತ್ತು ಪ್ರಸರಣಕ್ಕಾಗಿ ಉಚಿತವಾಗಿ ನೀಡುವಂತೆ ಕೆವಿಐಸಿ ಅಧ್ಯಕ್ಷರು ಎಲ್ಲಾ ಖಾದಿ ಸಂಸ್ಥೆಗಳಿಗೆ ಮನವಿ ಮಾಡಿದ್ದಾರೆ. ಕೆವಿಐಸಿ 2400 ಸಕ್ರಿಯ ಖಾದಿ ಸಂಸ್ಥೆಗಳನ್ನು ಹೊಂದಿದೆ ಮತ್ತು ಒಂದು ಕ್ರಮದಿಂದಲೇ ದೇಶಾದ್ಯಂತ 12 ಲಕ್ಷ ಮುಖಗವಸುಗಳನ್ನು ಒದಗಿಸಲಾಗುವುದು. ಅಧ್ಯಕ್ಷರ ಮನವಿಯ ನಂತರ, ಅನೇಕ ಖಾದಿ ಸಂಸ್ಥೆಗಳು ಜಿಲ್ಲಾಧಿಕಾರಿಗಳಿಗೆ 500 ಮುಖಗವಸುಗಳನ್ನು ನೀಡಲು ಪ್ರಾರಂಭಿಸಿವೆ. “ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಮುಖಗವಸುಗಳು ಅತ್ಯಂತ ನಿರ್ಣಾಯಕ ಸಾಧನಗಳಾಗಿವೆ. ಡಿಟಿ ಹತ್ತಿಯಿಂದ ತಯಾರಿಸಿದ ಮುಖಗವಸುಗಳು ವೈದ್ಯಕೀಯ ಮಾರ್ಗಸೂಚಿಗಳಿಗನುಗುಣವಾಗಿದ್ದು, ಬೇಡಿಕೆಯ ಗುಣಮಟ್ಟ ಮತ್ತು ಪ್ರಮಾಣವನ್ನು ಪೂರೈಸಬಲ್ಲ ಭಾರತದ ಏಕೈಕ ಪರಿಹಾರವಾಗಿವೆಎಂದು ಶ್ರೀ ಸಕ್ಸೇನಾ ಹೇಳಿದರು,

***


(Release ID: 1613795) Visitor Counter : 243