ಕೃಷಿ ಸಚಿವಾಲಯ

ಕೇಂದ್ರ ಕೃಷಿ ಸಚಿವರು, ರಾಜ್ಯಗಳ ಕೃಷಿ ಸಚಿವರೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ನ ಮುಂದುವರಿದ ಭಾಗವಾಗಿ ಕೈಗೊಂಡಿರುವ ನಿರ್ಧಾರಗಳ ಅನುಷ್ಠಾನಕ್ಕೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸೂಚನೆ

Posted On: 09 APR 2020 7:54PM by PIB Bengaluru

ಕೇಂದ್ರ ಕೃಷಿ ಸಚಿವರು, ರಾಜ್ಯಗಳ ಕೃಷಿ ಸಚಿವರೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ನ ಮುಂದುವರಿದ ಭಾಗವಾಗಿ ಕೈಗೊಂಡಿರುವ ನಿರ್ಧಾರಗಳ ಅನುಷ್ಠಾನಕ್ಕೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸೂಚನೆ

ಪಿಎಸ್ಎಸ್ ಯೋಜನೆ ಅಡಿ ಬೇಳೆಕಾಳು ಮತ್ತು ಎಣ್ಣೆ ಬೀಜಗಳ ಖರೀದಿ ಆರಂಭಿಸುವ ದಿನಾಂಕ ನಿರ್ಧರಿಸಲಿರುವ ರಾಜ್ಯಗಳು

ಲಾಕ್ ಡೌನ್ ಹಿನ್ನೆಲೆಯಲ್ಲಿ ಹಾಳಾಗಬಹುದಾದ ಬೆಳೆಗಳಿಗೆ ಸ್ಪರ್ಧಾತ್ಮಕ ದರ ಖಾತ್ರಿಪಡಿಸಲು ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ ಜಾರಿಗೊಳಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ

50 ರೈಲುಗಳಲ್ಲಿ ಹಾಳಾಗುವ ಕೃಷಿ/ ತೋಟಗಾರಿಕಾ ಉತ್ಪನ್ನಗಳ ಸಾಗಾಣೆ ಆರಂಭ

 

ಕೇಂದ್ರ ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಅವರು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕೃಷಿ ಸಚಿವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿ, ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಲಾಕ್ ಡೌನ್ ಮಾಡಿರುವುದರಿಂದ ರೈತರು ಮತ್ತು ಕೃಷಿ ಚಟುವಟಿಕೆಗಳ ಮೇಲೆ ಆಗಿರುವ ಪರಿಣಾಮಗಳ ಕುರಿತು ಸಮಾಲೋಚನೆ ನಡೆಸಿದರು. ಆ ಸಮಾಲೋಚನೆಗಳ ಮುಂದುವರಿದ ಭಾಗವಾಗಿ ಭಾರತ ಸರ್ಕಾರ ಇಂದು ಈ ಕೆಳಗಿನ ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು, ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಆ ನಿರ್ಧಾರಗಳನ್ನು ತಲುಪಿಸಿದೆ.

· ದರ ಬೆಂಬಲ ಯೋಜನೆ(ಪಿಎಸ್ಎಸ್) ಯಡಿ ಬೇಳೆ-ಕಾಳು ಮತ್ತು ಎಣ್ಣೆ ಬೀಜಗಳನ್ನು ಖರೀದಿಸುವ ಪ್ರಕ್ರಿಯೆ ಆರಂಭಿಸುವ ದಿನಾಂಕವನ್ನು ಆಯಾ ರಾಜ್ಯ ಸರ್ಕಾರಗಳೇ ನಿರ್ಧರಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಖರೀದಿ ಪ್ರಕ್ರಿಯೆ ಆರಂಭವಾದ ನಂತರ 90 ದಿನಗಳ ವರೆಗೆ ಅದು ಮುಂದುವರಿಯಬೇಕು.

· ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಾರುಕಟ್ಟೆ ಮಧ್ಯಪ್ರವೇಶದ ಮೂಲಕ ಹಾಳಾಗುವ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳನ್ನು ಆಕರ್ಷಕ ದರದಲ್ಲಿ ಖರೀದಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಭಾರತ ಸರ್ಕಾರದಿಂದ ಶೇ.50ರಷ್ಟು (ಈಶಾನ್ಯ ರಾಜ್ಯಗಳಿಗೆ ಶೇ. 75ರಷ್ಟು) ನೆರವು ನೀಡುವ ಯೋಜನೆಯನ್ನು ರಾಜ್ಯ ಸರ್ಕಾರಗಳು ಅನುಷ್ಠಾನಗೊಳಿಸುವಂತೆ ಸೂಚಿಸಲಾಗಿದೆ. ಇಂದು ಹೊರಡಿಸಲಾದ ಸುತ್ತೋಲೆಯಲ್ಲಿ ರಾಜ್ಯಗಳಿಗೆ ಈ ಕುರಿತು ವಿವರವಾದ ಮಾರ್ಗಸೂಚಿಯನ್ನು ನೀಡಲಾಗಿದೆ.

ಇತರೆ ಪ್ರಗತಿಗಳು

· ಲಾಕ್ ಡೌನ್ ಅವಧಿಯಲ್ಲಿ 2020ರ ಮಾರ್ಚ್ 24ರಿಂದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್) ಯೋಜನೆ ಅಡಿ ಸುಮಾರು 7.30 ಕೋಟಿ ರೈತ ಕುಟುಂಬಗಳಿಗೆ ಅನುಕೂಲವಾಗಿದೆ ಮತ್ತು ಈವರೆಗೆ 14,605 ಕೋಟಿ ರೂ. ಹಣ ಬಿಡುಗಡೆಯಾಗಿದೆ.

· ರೈತರು/ ಎಫ್ ಪಿ ಒ ಗಳು/ ಸೊಸೈಟಿಗಳು ಇತ್ಯಾದಿಗಳಿಂದ ನೇರವಾಗಿ ಖರೀದಿಗೆ ಅನುಕೂಲವಾಗುವಂತೆ 2020ರ ಏಪ್ರಿಲ್ 4ರಂದು ಎಲ್ಲ ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿದ್ದು, ರಾಜ್ಯಗಳ ಎಪಿಎಂಸಿ ಕಾಯ್ದೆ ಅಡಿ ದೊಡ್ಡ ಪ್ರಮಾಣದ ಖರೀದಿದಾರರು/ದೊಡ್ಡ ಸಗಟು ಖರೀದಿದಾರರು ಮತ್ತು ಸಂಸ್ಕರಣೆದಾರರಿಗೆ ಮಿತಿಯನ್ನು ನಿಗದಿಪಡಿಸಲಾಗಿದೆ. ತಮಿಳುನಾಡು, ಕರ್ನಾಟಕ ಮತ್ತು ಜಾರ್ಖಂಡ್ ಸೇರಿ ಹಲವು ರಾಜ್ಯಗಳಲ್ಲಿ ಈಗಾಗಲೇ ಮಾರ್ಗಸೂಚಿಯಂತೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

· ಹಾಳಾಗುವ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳನ್ನು 50 ರೈಲುಗಳ ಮೂಲಕ ಇಂದಿನಿಂದ ಸಾಗಾಣೆ ಮಾಡುವ ಕಾರ್ಯ ಆರಂಭವಾಗಿದೆ.

· ಈ ಮೊದಲು ಕೃಷಿ ಇಲಾಖೆ ಇ-ನ್ಯಾಮ್ ಆಪ್ ನಲ್ಲಿ ಈ ಕುರಿತ ಸಾಗಾಣೆ ವಿವರಗಳನ್ನು ಹಾಕಿದೆ. ಈ ಮಾದರಿಯನ್ನು ರೈತರು/ವ್ಯಾಪಾರಿಗಳು ಬಳಕೆ ಮಾಡಿಕೊಳ್ಳಬಹುದಾಗಿದೆ ಮತ್ತು ಈಗಾಗಲೇ 200ಕ್ಕೂ ಅಧಿಕ ಮಂದಿ ಅದನ್ನು ಬಳಕೆ ಮಾಡುತ್ತಿದ್ದಾರೆ.

 

*****



(Release ID: 1612826) Visitor Counter : 203