ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಪರಿಹಾರ ಕಾರ್ಯಾಚರಣೆಗೆ ನೇರವಾರಿ ಎಫ್.ಸಿ.ಐ.ನಿಂದ ಆಹಾರ ಧಾನ್ಯ ಖರೀದಿಸಲು ಎನ್.ಜಿ.ಓ.ಗಳಿಗೆ ಅನುಮತಿ

Posted On: 08 APR 2020 8:47PM by PIB Bengaluru

ಪರಿಹಾರ ಕಾರ್ಯಾಚರಣೆಗೆ ನೇರವಾರಿ ಎಫ್.ಸಿ.ಐ.ನಿಂದ ಆಹಾರ ಧಾನ್ಯ ಖರೀದಿಸಲು ಎನ್.ಜಿ.ಓ.ಗಳಿಗೆ ಅನುಮತಿ

 

ಎನ್.ಜಿ.ಓ.ಗಳು ಮತ್ತು ದತ್ತಿ ಸಂಸ್ಥೆಗಳು ದೇಶವ್ಯಾಪಿ ಲಾಕ್ ಡೌನ್ ಇರುವ ಸಂದರ್ಭದಲ್ಲಿ ಅಗತ್ಯ ಇರುವವರಿಗೆ ಮತ್ತು ಬಡಜನರಿಗೆ ಬೇಯಿಸಿದ ಆಹಾರ ಒದಗಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿವೆ. ಇಂಥ ಸಂಘಟನೆಗಳಿಗೆ ತಡೆರಹಿತವಾಗಿ ಆಹಾರ ಧಾನ್ಯ ಪೂರೈಕೆಯನ್ನು ಖಾತ್ರಿ ಪಡಿಸಲು ಇಂಥ ಸಂಘಟನೆಗಳಿಗೆ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ಓಎಂಎಸ್.ಎಸ್.) ದರದಲ್ಲಿ ಇ-ಹರಾಜು ಪ್ರಕ್ರಿಯೆ ಇಲ್ಲದೆಯೇ ಗೋಧಿ ಮತ್ತು ಅಕ್ಕಿಯನ್ನು ಒದಗಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇಲ್ಲಿಯವರೆಗೆ ರಾಜ್ಯ ಸರ್ಕಾರಗಳು ಮತ್ತು ರೋಲರ್ ಹಿಟ್ಟಿನ ಗಿರಣಿಗಳಂತಹ ನೋಂದಾಯಿತ ಬೃಹತ್ ಬಳಕೆದಾರರಿಗೆ ಮಾತ್ರ ಒಎಂಎಸ್.ಎಸ್ ದರದಲ್ಲಿ ಎಫ್‌.ಸಿಐಯಿಂದ ಆಹಾರ ಧಾನ್ಯ ಖರೀದಿಸಲು ಅವಕಾಶವಿತ್ತು. ಈ ಸಂಘಟನೆಗಳು 1ರಿಂದ 10 ಮೆಟ್ರಿಕ್ ಟನ್ ಧಾನ್ಯವನ್ನು ಏಕ ಕಾಲದಲ್ಲಿ ಎಫ್.ಸಿ.ಐ.ನಿಂದ ಮೇಲೆ ತಿಳಿಸಲಾದ ಮೀಸಲು ದರದಲ್ಲಿ ಖರೀದಿಸಬಹುದಾಗಿದೆ. ಎಫ್.ಸಿ.ಐ. ದೇಶದಲ್ಲಿ 2000ಕ್ಕೂ ಹೆಚ್ಚು ಗೋದಾಮುಗಳನ್ನು ಹೊಂದಿದ್ದು, ಇಷ್ಟು ದೊಡ್ಡ ಗೋದಾಮು ಜಾಲ ಇಂಥ ಸಂಘಟನೆಗಳಿಗೆ ಸಂಕಷ್ಟದ ಕಾಲದಲ್ಲಿ ಸುಗಮವಾಗಿ ಆಹಾರ ಧಾನ್ಯ ಪೂರೈಕೆಯ ಖಾತ್ರಿ ಪಡಿಸಲಿದೆ.

ಇದು ದೇಶದ ಪರಿಹಾರ ಶಿಬಿರಗಳಲ್ಲಿರುವ ಬಡ ಮತ್ತು ವಲಸೆ ಕಾರ್ಮಿಕರಿಗೆ ಆಹಾರ ನೀಡುವ ಪರೋಪಕಾರಿ ಕಾರ್ಯಗಳಿಗೆ ಸಹಾಯ ಮಾಡುತ್ತದೆ. ಅಂತಹ ಸಂಸ್ಥೆಗಳು ಪಡೆದುಕೊಳ್ಳುವ ಆಹಾರ ಧಾನ್ಯಗಳು ನಿರ್ದಿಷ್ಟ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಲು ವಿವರಗಳನ್ನು ಸಂಬಂಧಪಟ್ಟ ಡಿಎಂಗಳಿಗೆ ತಿಳಿಸಲಾಗುತ್ತದೆ. ದೇಶದಾದ್ಯಂತ ತ್ವರಿತ ಗತಿಯಲ್ಲಿ ಆಹಾರ ಧಾನ್ಯ ಸಾಗಣೆ ನಿರ್ವಹಿಸಲು ಎಫ್.ಸಿ.ಐ ಲಾಕ್ ಡೌನ್ ಆರಂಭವಾದ ದಿನದಿಂದ 2.2. ದಶಲಕ್ಷ ಟನ್ ಆಹಾರ ಧಾನ್ಯವನ್ನು ಅತಿ ಹೆಚ್ಚಿರುವ ರಾಜ್ಯಗಳಿಂದ ಸಾಗಿಸಿದೆ. ಈವರೆಗೆ ಅದು ಪಿಎಂಜಿಕೆವೈ ಯೋಜನೆ ಅಡಿಯಲ್ಲಿ ಉಚಿತವಾಗಿ ಹಂಚಿಕೆ ಮಾಡಲು 1 ದಶಲಕ್ಷ ಟನ್ ಆಹಾರ ಧಾನ್ಯಗಳನ್ನು ರಾಜ್ಯ ಸರ್ಕಾರಗಳಿಗೆ ಹಸ್ತಾಂತರಿಸಿದೆ.

ಎಫ್.ಸಿ.ಐ. 24.03.2020ರಿಂದ ನಿಯಮಿತ ಎನ್.ಎಫ್.ಎಸ್.ಎ. ಅಗತ್ಯಗಳನ್ನು ಪೂರೈಸಲು 3.2 ದಶಲಕ್ಷ ಟನ್ ಆಹಾರ ಧಾನ್ಯವನ್ನು ರಾಜ್ಯ ಸರ್ಕಾರಗಳಿಗೆ ಒದಗಿಸಿದೆ. ದೇಶದಲ್ಲಿನ ಪ್ರತಿಯೊಂದು ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿನ ಆಹಾರಧಾನ್ಯ ದಾಸ್ತಾನಿನ ಬಗ್ಗೆ ಹತ್ತಿರದಿಂದ ನಿಗಾ ವಹಿಸಲಾಗಿದ್ದು, ಎಲ್ಲ ಪ್ರದೇಶಗಳಲ್ಲೂ ಅಗತ್ಯ ಪ್ರಮಾಣದ ಆಹಾರ ಧಾನ್ಯ ಲಭ್ಯತೆಯ ಖಾತ್ರಿ ಪಡಿಸಿಕೊಳ್ಳಲಾಗುತ್ತಿದೆ. 07.04.2020ರಲ್ಲಿದ್ದಂತೆ ಎಫ್.ಸಿ.ಐ. 54.42 ದಶಲಕ್ಷ ಮೆಟ್ರಿಕ್ ಟನ್ (ಎಂಎಂಟಿ) ಆಹಾರ ಧಾನ್ಯವನ್ನು (30.62 ಎಂಎಂಟಿ ಅಕ್ಕಿ ಮತ್ತು 23.80 ಎಂಎಂಟಿ ಗೋಧಿ) ಹೊಂದಿದೆ. ಪಿಡಿಎಸ್ ಮತ್ತು ಇತರ ಸರ್ಕಾರಿ ಯೋಜನೆಗಳಿಗೆ ಅಗತ್ಯ ಆಹಾರ ಧಾನ್ಯ ಪೂರೈಕೆ ಖಚಿತ ಪಡಿಸಲು ಎಫ್.ಸಿ.ಐ. ಮುಕ್ತ ಮಾರುಕಟ್ಟೆಯಲ್ಲಿ ದರ ಹೆಚ್ಚಳ ತಡೆಯಲು ಆರೋಗ್ಯಪೂರ್ಣ ಮಟ್ಟದಲ್ಲಿ ಪೂರೈಕೆ ಖಚಿತ ಪಡಿಸುತ್ತಿದೆ. ಓಎಂಎಸ್ಎಸ್. ಅಡಿಯಲ್ಲಿ ಅದು ನಿಯಮಿತವಾಗಿ ನೇರವಾಗಿ ರಾಜ್ಯಗಳಿಗೆ ಅಕ್ಕಿ ಪೂರೈಸುತ್ತಿದೆ ಮತ್ತು ಸಂಬಂಧಿತ ಡಿಎಂ/ಡಿಸಿಗಳ ಶಿಫಾರಸಿನನ್ವಯ ಪೂರೈಕೆ ಮತ್ತು ದರವನ್ನು ಸಮತೋಲನದಲ್ಲಿಡಲು ಗೋಧಿಯನ್ನು ಹಿಟ್ಟಿನ ಗಿರಣಿಗಳಿಗೆ ಪೂರೈಸುತ್ತಿದೆ. ಈವರೆಗೆ 1.45 ಎಲ್.ಎಂ.ಟಿ. ಗೋಧಿ ಮತ್ತು 1.33 ಎಲ್.ಎಂ.ಟಿ. ಅಕ್ಕಿಯನ್ನು ಹಂಚಿಕೆ ಮಾಡಲಾಗಿದೆ. ಲಾಕ್ ಡೌನ್ ಅವಧಿಯಲ್ಲಿ ದೇಶದಲ್ಲಿ ಆಹಾರ ಧಾನ್ಯಗಳ ಸ್ಥಿರ ಮತ್ತು ನಿಯಮಿತ ಪೂರೈಕೆಯನ್ನು ಕಾಪಾಡಿಕೊಳ್ಳಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ.

*****

 


(Release ID: 1612448) Visitor Counter : 311