ರೈಲ್ವೇ ಸಚಿವಾಲಯ

ಕೋವಿಡ್-19 ಸವಾಲು ಎದುರಿಸಲು ಭಾರತೀಯ ರೈಲ್ವೆಯಿಂದ 2500ಕ್ಕೂ ಅಧಿಕ ವೈದ್ಯರು ಮತ್ತು 35,000 ಅರೆ ವೈದ್ಯಕೀಯ ಸಿಬ್ಬಂದಿ ನಿಯೋಜನೆ

Posted On: 08 APR 2020 5:34PM by PIB Bengaluru

ಕೋವಿಡ್-19 ಸವಾಲು ಎದುರಿಸಲು ಭಾರತೀಯ ರೈಲ್ವೆಯಿಂದ 2500ಕ್ಕೂ ಅಧಿಕ ವೈದ್ಯರು ಮತ್ತು 35,000 ಅರೆ ವೈದ್ಯಕೀಯ ಸಿಬ್ಬಂದಿ ನಿಯೋಜನೆ

ಹಲವು ವಲಯಗಳಲ್ಲಿ ತಾತ್ಕಾಲಿಕವಾಗಿ ಹೆಚ್ಚಿನ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ನೇಮಕ

ಕೋವಿಡ್-19 ರೋಗಿಗಳ ಚಿಕಿತ್ಸೆಗಾಗಿ 17 ನಿರ್ದಿಷ್ಟ ಆಸ್ಪತ್ರೆಗಳು ಮತ್ತು 33 ರೈಲ್ವೆ ಆಸ್ಪತ್ರೆಗಳ ಬ್ಲಾಕ್ ನಲ್ಲಿ ಸುಮಾರು 5,000 ಹಾಸಿಗೆಗಳು ತುರ್ತು ಚಿಕಿತ್ಸೆಗೆ ಸಿದ್ಧ

ಭಾರತೀಯ ರೈಲ್ವೆಯಿಂದ ಕೋವಿಡ್-19ಗೆ ಕ್ವಾರಂಟೈನ್ ಮತ್ತು ಐಸೋಲೇಶನ್ ಸೌಕರ್ಯಕ್ಕಾಗಿ ಸುಮಾರು 5000 ಕೋಚ್ ಗಳ ಪರಿವರ್ತನೆ; 3250 ಕೋಚ್ ಗಳ ಪರಿವರ್ತನೆ ಪೂರ್ಣ
 

ಕೋಚ್ ಫ್ಯಾಕ್ಟರಿಗಳು, ರೈಲ್ವೆ ಕಾರ್ಯಾಗಾರಗಳು, ಕೋಚಿಂಗ್ ಡಿಪೋಗಳು ಮತ್ತು ಆಸ್ಪತ್ರೆಗಳು  ಪಿಪಿಇ, ಸ್ಯಾನಿಟೈಸರ್, ಮಾಸ್ಕ್ ಮತ್ತಿತರ ಸ್ಥಳೀಯ ಅಗತ್ಯತೆಗೆ ಪಿಪಿಇಗಳ ಉತ್ಪಾದನೆ ಮೂಲಕ ರಾಷ್ಟ್ರೀಯ ಪ್ರಯತ್ನಗಳಿಗೆ ಪೂರಕ ಕ್ರಮ
 

ಕೋವಿಡ್-19 ವಿರುದ್ಧದ ಹೋರಾಟವನ್ನು ಸುಸ್ಥಿರವಾಗಿಡಲು ಭಾರತೀಯ ರೈಲ್ವೆ, ಭಾರತ ಸರ್ಕಾರ ಕೈಗೊಂಡಿರುವ ಎಲ್ಲಾ ಆರೋಗ್ಯ ರಕ್ಷಣಾ ಪ್ರಯತ್ನಗಳಿಗೆ ತಾನೂ ಸಹ ಪೂರಕವಾಗಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೋವಿಡ್-19 ಎದುರಿಸಲು ಹಾಲಿ ಇರುವ ರೈಲ್ವೆ ಆಸ್ಪತ್ರೆಗಳನ್ನು ಸಜ್ಜುಗೊಳಿಸುವುದೂ ಸೇರಿದಂತೆ ನಾನಾ ಆಯಾಮದ ಕ್ರಮಗಳನ್ನು ಕೈಗೊಂಡಿದೆ. ತುರ್ತು ಸಂದರ್ಭಗಳನ್ನು ಎದುರಿಸಲು ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಸಿದ್ಧವಾಗಿಟ್ಟಿರುವುದು, ಹೆಚ್ಚುವರಿ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ನೇಮಕ, ಪ್ರಯಾಣಿಕರ ರೈಲುಗಳನ್ನು ಐಸೋಲೇಶನ್ ಕೋಚ್ ಗಳಾಗಿ ಪರಿವರ್ತಿಸುವುದು, ವೈದ್ಯಕೀಯ ಉಪಕರಣಗಳನ್ನು ಲಭ್ಯವಾಗುವಂತೆ ಮಾಡುವುದು, ಪಿಪಿಇ ಮತ್ತು ವೆಂಟಿಲೇಟರ್ ಗಳನ್ನು ಸ್ವತಃ ಉತ್ಪಾದಿಸುವುದು ಮತ್ತಿತರ ಕ್ರಮಗಳನ್ನು ಕೈಗೊಂಡಿದೆ.

ರೈಲ್ವೆಯ ಆರೋಗ್ಯ ಇಲಾಖೆ ಸನ್ನದ್ಧವಾಗಿದ್ದು, ಅದು ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾರತ ಸರ್ಕಾರ ಕೈಗೊಂಡಿರುವ ಎಲ್ಲಾ ಆರೋಗ್ಯ ರಕ್ಷಣಾ ಪ್ರಯತ್ನಗಳಿಗೆ ಪೂರಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ರೈಲ್ವೆ 586 ಸರಣಿ ಆರೋಗ್ಯ ಘಟಕಗಳನ್ನು ಹೊಂದಿದೆ, ಅದು 45 ಉಪ ವಿಭಾಗೀಯ ಆಸ್ಪತ್ರೆಗಳು, 56 ವಿಭಾಗೀಯ ಆಸ್ಪತ್ರೆಗಳು, 8 ಉತ್ಪಾದನಾ ಘಟಕಗಳ ಆಸ್ಪತ್ರೆಗಳು 16 ವಲಯ ಆಸ್ಪತ್ರೆಗಳನ್ನು ದೇಶಾದ್ಯಂತ ಹೊಂದಿದೆ. ಇವುಗಳಲ್ಲಿ ಮಹತ್ವದ ಭಾಗವನ್ನು ಕೊರೊನಾ ವಿರುದ್ಧದ ಹೋರಾಟಕ್ಕೆ ಮೀಸಲಿಡಲಾಗಿದೆ.

ಒಟ್ಟು 2546 ವೈದ್ಯರ ಹುದ್ದೆಗಳೂ ಮತ್ತು 35153 ಅರೆ ವೈದ್ಯಕೀಯ ಸಿಬ್ಬಂದಿ, ನರ್ಸಿಂಗ್ ಸಿಬ್ಬಂದಿ, ಫಾರ್ಮಸಿಸ್ ಮತ್ತು ಇತರೆ ಸಿಬ್ಬಂದಿ ಸೇರಿ ರೈಲ್ವೆ, ಕೋವಿಡ್-19 ವಿರುದ್ಧದ ಯಾವುದೇ ಸವಾಲನ್ನು ಎದುರಿಸಲು ಸನ್ನದ್ಧವಾಗಿದೆ. ಹೊಸ ಯೋಜನೆಯಲ್ಲಿ ರೈಲ್ವೆಯ ಎಲ್ಲಾ ಆರೋಗ್ಯ ಸೇವೆಗಳು, ದೇಶಾದ್ಯಂತ ಎಲ್ಲಾ ಕೇಂದ್ರ ಸರ್ಕಾರಿ ನೌಕರರಿಗೆ ಲಭ್ಯವಾಗಲಿದೆ. ಇದರಲ್ಲಿ ಪ್ರಾಥಮಿಕ, ದ್ವಿತೀಯ ಹಾಗೂ ಮೂರನೇ ಹಂತದ ಆರೋಗ್ಯ ರಕ್ಷಣಾ ಸೇವೆಗಳು ಸಹ ಸೇರಿವೆ.

ಕೋವಿಡ್-19 ವಿರುದ್ಧ ಹೋರಾಡಲು ಭಾರತೀಯ ರೈಲ್ವೆ ಈ ಕೆಳಗಿನ ಕ್ರಮಗಳನ್ನು ಕೈಗೊಂಡಿದೆ:

  1. ಕೋಚ್ ಗಳನ್ನು ಕ್ವಾರಂಟೈನ್ ಮತ್ತು ಐಸೋಲೇಶನ್ ಸೌಕರ್ಯಗಳಾಗಿ ಪರಿವರ್ತಿಸುವ ಸೇವೆ: ಭಾರತೀಯ ರೈಲ್ವೆ ಕೋವಿಡ್-19 ವಿರುದ್ಧ 80000 ಹಾಸಿಗೆಗಳಿಗೆ ಕ್ವಾರಂಟೈನ್ ಮತ್ತು ಐಸೋಲೇಶನ್ ಸೌಕರ್ಯಗಳಿಗಾಗಿ ದೇಶಾದ್ಯಂತ ಸುಮಾರು 5000 ರೈಲು ಕೋಚ್ ಗಳನ್ನು ಪರಿವರ್ತಿಸುತ್ತಿದೆ. ವಲಯ ರೈಲ್ವೆಗಳಲ್ಲಿ ಸಮರೋಪಾದಿಯಲ್ಲಿ ಈ ಕೆಲಸ ಆರಂಭವಾಗಿದೆ. ಈಗಾಗಲೇ 3250 ಕೋಚ್ ಗಳನ್ನು ಪರಿವರ್ತಿಸಲಾಗಿದೆ.
  2. ಕೋವಿಡ್-19 ರೋಗಿಗಳ ಚಿಕಿತ್ಸೆಗಾಗಿ 5000 ಹಾಸಿಗೆ ಸಿದ್ಧ: ಭಾರತೀಯ ರೈಲ್ವೆಯ 17 ಮೀಸಲಾದ ಆಸ್ಪತ್ರೆಗಳು ಮತ್ತು 33 ಆಸ್ಪತ್ರೆ ಬ್ಲಾಕ್ ಗಳಲ್ಲಿ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ಸುಮಾರು 5,000 ಹಾಸಿಗೆಗಳನ್ನು ಗುರುತಿಸಲಾಗಿದೆ. ಈ ಆಸ್ಪತ್ರೆಗಳು ಮತ್ತು ಬ್ಲಾಕ್ ಗಳನ್ನು ಸರ್ವ ಸನ್ನದ್ಧಗೊಳಿಸಲಾಗಿದೆ.
  3. 11,000 ಕ್ವಾರಂಟೈನ್ ಹಾಸಿಗೆ: ಕೋವಿಡ್-19 ವಿರುದ್ಧ ಭಾರತೀಯ ರೈಲ್ವೆ, ದೇಶಾದ್ಯಂತ ತನ್ನ ಸೌಕರ್ಯಗಳಲ್ಲಿ 11,000 ಕ್ವಾರಂಟೈನ್ ಹಾಸಿಗೆಗಳನ್ನು ಲಭ್ಯವಾಗುವಂತೆ ಮಾಡಿದೆ.
  4. ವೈದ್ಯಕೀಯ ಸಾಮಗ್ರಿ - ವೆಂಟಿಲೇಟರ್ ಮತ್ತು ಪಿಪಿಇಗಳ ಲಭ್ಯತೆ: ಕೋವಿಡ್-19 ವಿರುದ್ಧ ಹೋರಾಟಕ್ಕೆ ವೆಂಟಿಲೇಟರ್ ಸೇರಿದಂತೆ ವೈಯಕ್ತಿಕ ರಕ್ಷಣಾ ಉಪಕರಣಗಳು(ಪಿಪಿಇ) ಅತ್ಯಂತ ಅವಶ್ಯಕವಿದ್ದು, ಅವುಗಳು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಲಾಗಿದೆ. ಕೋವಿಡ್-19 ಎದುರಿಸಲು ಅಗತ್ಯವಾದ ವೆಂಟಿಲೇಟರ್, ಪಿಪಿಇ ಮತ್ತು ವೈದ್ಯಕೀಯ ಉಪಕರಣಗಳನ್ನು ಖರೀದಿಸಲು ವಲಯ ರೈಲ್ವೆ ಮತ್ತು ಉತ್ಪಾದನಾ ಘಟಕಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ.
  5. ರೈಲ್ವೆ ತಾನೇ ಸ್ವತಃ ವೈಯಕ್ತಿಕ ರಕ್ಷಣಾ ಉಪಕರಣ(ಪಿಪಿಇ) ಉತ್ಪಾದನೆಯಲ್ಲಿ ತೊಡಗಿದೆ ಎಂಬುದು ಇಲ್ಲಿ ಉಲ್ಲೇಖಾರ್ಹ. ಸುಮಾರು 1000 ಪಿಪಿಇಗಳನ್ನು ಪ್ರತಿ ದಿನ ಉತ್ಪಾದಿಸಲಾಗುತ್ತಿದ್ದು, ಆ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲಾಗುವುದು.
  6. ಎಲ್ಲ ಕೇಂದ್ರ ಸರ್ಕಾರಿ ನೌಕರರಿಗೆ ರೈಲ್ವೆ ಆರೋಗ್ಯ ಸೇವೆಗಳು ಲಭ್ಯ:  ಎಲ್ಲ ಕೇಂದ್ರ ಸರ್ಕಾರಿ ನೌಕರರು ತಮ್ಮ ಗುರುತಿನ ಚೀಟಿಯನ್ನು ತೋರಿಸಿ, ದೇಶಾದ್ಯಂತ ಇರುವ ಎಲ್ಲ ರೈಲ್ವೆ ಆಸ್ಪತ್ರೆಗಳು/ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ.

 

****

 


(Release ID: 1612377) Visitor Counter : 328