ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಎಸ್.ಸಿ.ಟಿ.ಐ.ಎಂ.ಎಸ್.ಟಿ. ವಿಜ್ಞಾನಿಗಳಿಂದ ಕೋವಿಡ್-19 ರೋಗಿಗಳ ಪರೀಕ್ಷೆಗೆ ಕ್ರಿಮಿನಾಶಕಯುಕ್ತ ಪರೀಕ್ಷಾ ಬೂತ್ ಅಭಿವೃದ್ದಿ

Posted On: 08 APR 2020 11:38AM by PIB Bengaluru

ಎಸ್.ಸಿ.ಟಿ.ಐ.ಎಂ.ಎಸ್.ಟಿ. ವಿಜ್ಞಾನಿಗಳಿಂದ ಕೋವಿಡ್-19 ರೋಗಿಗಳ ಪರೀಕ್ಷೆಗೆ ಕ್ರಿಮಿನಾಶಕಯುಕ್ತ ಪರೀಕ್ಷಾ ಬೂತ್ ಅಭಿವೃದ್ದಿ

ಈ ಪರೀಕ್ಷಾ ಬೂತ್ ಟೆಲಿಫೋನ್ ಬೂತ್ ನಂತಿದ್ದು ಸೋಂಕು ತಡೆಗೆ ವೈದ್ಯರು ರೋಗಿಗಳನ್ನು ನೇರ ಸಂಪರ್ಕ ಇಲ್ಲದೆ ಪರೀಕ್ಷೆ ನಡೆಸಬಹುದು

ಪ್ರತಿಯೊಬ್ಬ ರೋಗಿಯೂ ಬೂತ್ ನಿಂದ ನಿರ್ಗಮಿಸಿದ ಬಳಿಕ ಅದರಲ್ಲಿರುವ ಅಲ್ಟ್ರಾವೊಯಿಲೆಟ್ ಬೆಳಕು ಬೂತ್ ಅನ್ನು ಕ್ರಿಮಿ ಮುಕ್ತಗೊಳಿಸುತ್ತದೆ

ವೈದ್ಯರಿಂದ ಮಾಹಿತಿಗಳನ್ನು ಪಡೆದು ಚಿಂತನಾಪೂರ್ವಕವಾಗಿ ವಿನ್ಯಾಸ ಮಾಡಲಾದ ಈ ರಕ್ಷಣಾ ಬೂತ್ ಸೋಂಕು ಪ್ರಸಾರ ತಡೆಯ ನಿಟ್ಟಿನಲ್ಲಿ ಉತ್ತಮ ನಡೆ” ಎನ್ನುತ್ತಾರೆ ಡಿ.ಎಸ್.ಟಿ. ಕಾರ್ಯದರ್ಶಿ ಪ್ರೊ. ಅಶುತೋಷ್ ಶರ್ಮಾ

 

ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ (ಡಿ.ಎಸ್.ಟಿ.) ಇಲಾಖೆಯ ಸ್ವಾಯತ್ತ ಸಂಸ್ಥೆಯಾದ ಶ್ರೀ ಚಿತ್ರಾ ತಿರುನಾಳ್ ವೈದ್ಯ ವಿಜ್ಞಾನಗಳು ಮತ್ತು ತಂತ್ರಜ್ಞಾನ ಸಂಸ್ಥೆಯ (ಎಸ್.ಸಿ.ಟಿ.ಐ. ಎಂ.ಎಸ್.ಟಿ.) ವಿಜ್ಞಾನಿಗಳು ಕ್ರಿಮಿನಾಶಕಯುಕ್ತ ಆವರಣವುಳ್ಳ ಪರೀಕ್ಷಾ ಬೂತ್ ನ್ನು ಕೋವಿಡ್ -19 ರೋಗಿಗಳನ್ನು ಪರೀಕ್ಷಿಸುವುದಕ್ಕಾಗಿ ವಿನ್ಯಾಸಗೊಳಿಸಿ ಅಭಿವೃದ್ದಿಪಡಿಸಿದ್ದಾರೆ.

ಈ ನವೀನ ಕ್ರಿಮಿನಾಶಕಯುಕ್ತ ಪರೀಕ್ಷಾ ಬೂತ್, ಟೆಲಿಫೋನ್ ಬೂತ್ ನಂತೆ ಮುಚ್ಚಲ್ಪಟ್ಟಿರುತ್ತದೆ. ವೈದ್ಯರಿಗೆ ರೋಗಿಗಳನ್ನು ನೇರ ಸಂಪರ್ಕ ಇಲ್ಲದೆ ಪರೀಕ್ಷೆ ಮಾಡಲು ಅವಕಾಶ ಮಾಡಿಕೊಡುತ್ತದೆ ಮತ್ತು ಸೋಂಕು ಪ್ರಸಾರವನ್ನು ತಡೆಯುತ್ತದೆ. ಇದು ಒಂದು ಲ್ಯಾಂಪ್, ಟೇಬಲ್ ಫ್ಯಾನ್, ಕಪಾಟಿನಂತಹ ರಚನೆ ಮತ್ತು ಅಲ್ಟ್ರಾವೊಯಿಲೆಟ್ ಬೆಳಕನ್ನು ಒಳಗೊಂಡಿರುತ್ತದೆ.

ಬೂತ್ ನಲ್ಲಿ ಅಳವಡಿಕೆಯಾದ ಯು.ವಿ. ಬೆಳಕು ಪ್ರತೀ ರೋಗಿಯೂ ಈ ಚೇಂಬರಿನಿಂದ ಹೊರಗೆ ಹೋದಾಗ ಬೂತ್ ಆನ್ನು ಕ್ರಿಮಿಮುಕ್ತ ಮಾಡುತ್ತದೆ. ಅಳವಡಿಕೆಯಾದ ಯು.ವಿ.ಬೆಳಕು 254 ಎನ್.ಎಂ. ತರಂಗಾಂತರವನ್ನು ಹೊಂದಿದ್ದು, 15 ವ್ಯಾಟ್ ರೇಟಿಂಗ್ ಹೊಂದಿರುತ್ತದೆ, ಇದು ಬೆಳಕು ಬೀರಿದ 3 ನಿಮಿಷಗಳಲ್ಲಿ ವೈರಸ್ ಗಳನ್ನು ನಾಶ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಪರೀಕ್ಷಾ ಬೂತಿನಲ್ಲಿ ಒದಗಿಸಲಾಗುವ ಒಂದು ಜೊತೆ ಗ್ಲೋವ್ಸ್ ಗಳು ರೋಗಿಯ ದೈಹಿಕ ಪರೀಕ್ಷೆಗೆ ನೆರವಾಗುತ್ತವೆ. ಜೊತೆಗೆ ಪ್ರವೇಶದ ಒಂದು ಭಾಗದಲ್ಲಿ ಸ್ಟೆಥೋಸ್ಕೋಪ್ ತೂರಿಸಲು ಅವಕಾಶವಿದೆ. ಇದು ವೈದ್ಯರಿಗೆ ರೋಗಿಯ ಮೇಲೆ ಸ್ಟೆಥೊಸ್ಕೋಪ್ ಇಟ್ಟು ಹೃದಯ ಬಡಿತ ನೋಡಲು ಸಹಾಯ ಮಾಡುತ್ತದೆ.

ಪರೀಕ್ಷೆಯ ಬಳಿಕ ರೋಗಿಗೆ ಚೇಂಬರಿನಿಂದ ಹೊರಗೆ ಹೋಗುವಂತೆ ತಿಳಿಸಲಾಗುತ್ತದೆ ಮತ್ತು ಯು.ವಿ. ಬೆಳಕನ್ನು ಮೂರು ನಿಮಿಷ ಕಾಲ ಹಾಯಿಸಲಾಗುತ್ತದೆ. ಚೇಂಬರಿನಲ್ಲಿ ಯು.ವಿ. ಬೆಳಕು ಹಾಯಿಸುವಿಕೆ ಪೂರ್ಣಗೊಂಡ ಬಳಿಕ ಮುಂದಿನ ರೋಗಿಯನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ, ಮತ್ತು ಇದನ್ನು ಪುನರಾವರ್ತನೆ ಮಾಡಲಾಗುತ್ತದೆ. ಈ ಪರೀಕ್ಷಾ ಬೂತ್ 210 ಸೆ.ಮೀ. (ಎತ್ತರ)x 150 ಸೇ. ಮೀ. (ಉದ್ದ )x 120 ಸೇ. ಮೀ. (ಅಗಲ) ಹೊಂದಿರುತ್ತದೆ ಹಾಗು ಇದು ರೋಗಿಗೆ ಸಾಕಷ್ಟು ಸ್ಥಳಾವಕಾಶವನ್ನು ಒದಗಿಸುತ್ತದೆ.

ವೈದ್ಯರಿಗೆ ಗರಿಷ್ಟ ಮಟ್ಟದ ಸುರಕ್ಷೆಯನ್ನು ಒದಗಿಸುವುದು ಮತ್ತು ಮುಂಚೂಣಿ ವೈದ್ಯಕೀಯ ಕಾರ್ಯಕರ್ತರಿಗೆ ರೋಗಿಯ ಜೊತೆ ವ್ಯವಹರಿಸುವಾಗ ಅತ್ಯಂತ ಅಪಾಯಕಾರಿ ಸಾಂಕ್ರಾಮಿಕವಾಗಿರುವ ವೈರಸ್ ಹರಡದಂತೆ ತಡೆಯುವುದು ಅತ್ಯಂತ ಸಂಕೀರ್ಣ ಆದ್ಯತೆಯಾಗಿರುತ್ತದೆ. ಅತ್ಯಂತ ಚಿಂತನಾಪೂರ್ವಕವಾಗಿ ವೈದ್ಯರಿಂದ ಮಾಹಿತಿಗಳನ್ನು ಪಡೆದು ವಿನ್ಯಾಸಗೊಳಿಸಲಾಗಿರುವ ಈ ರಕ್ಷಣಾ ಬೂತ್ ಗಳು ಆ ನಿಟ್ಟಿನಲ್ಲಿ ಒಂದು ಉತ್ತಮ ನಡೆ “ ಎಂದಿದ್ದಾರೆ ಡಿ.ಎಸ್.ಟಿ. ಕಾರ್ಯದರ್ಶಿಯಾಗಿರುವ ಪ್ರೊ. ಅಶೊತೋಷ್ ಶರ್ಮಾ

ಎಸ್.ಸಿ.ಟಿ.ಐ.ಎಂ.ಎಸ್.ಟಿ. ಯ ಈ ಸಂಶೋಧಕರ ತಂಡವು ಶ್ರೀ ಮುರಳೀಧರನ್ ಸಿ.ವಿ, ಶ್ರೀ ರಮೇಶ್ ಬಾಬು ವಿ., ಶ್ರೀ ಡಿ.ಎಸ್.ನಾಗೇಶ್, ಇಂಜಿನಿಯರ್ ಸೌರಭ್ ಎಸ್. ನಾಯರ್, ಇಂಜಿನಿಯರ್ ಅರವಿಂದ ಕುಮಾರ್ ಪ್ರಜಾಪತಿ, ಡಾ. ಶಿವಕುಮಾರ್ ಕೆ.ಜಿ.ವಿ ಮತ್ತು ಕೃತಕ ಆಂತರಿಕ ಒಳಾಂಗಣ ಘಟಕದ ತಂಡ ಮತ್ತು ಎಕ್ಸ್ಟ್ರಾ ಕಾರ್ಪೋರಿಯಲ್ ಉಪಕರಣ ವಿಭಾಗದ ತಂಡಗಳನ್ನು ಒಳಗೊಂಡಿದೆ. ಈ ಪರೀಕ್ಷಾ ಬೂತಿನ ತಂತ್ರಜ್ಞಾನ ವಿವರಗಳನ್ನು ಈಗಾಗಲೇ ತಿರುವನಂತಪುರದ ಫ್ಲೈ ಟೆಕ್ ಇಂಡಸ್ಟ್ರೀಸ್ ಗೆ ವರ್ಗಾಯಿಸಲಾಗಿದೆ.

 

 (ಹೆಚ್ಚಿನ ವಿವರಗಳಿಗೆ ದಯವಿಟ್ಟು ಸಂಪರ್ಕಿಸಿ: ಶ್ರೀಮತಿ ಸ್ವಪ್ನ ವಾಮದೇವನ್ , ಸಾರ್ವಜನಿಕ ಸಂಪರ್ಕಾಧಿಕಾರಿ, ಎಸ್.ಸಿ.ಟಿ.ಐ.ಎಂ.ಎಸ್.ಟಿ., ದೂರವಾಣಿ ಸಂಖ್ಯೆ: Email: pro@sctimst.ac.in )

***

 


(Release ID: 1612298) Visitor Counter : 212