ಉಪರಾಷ್ಟ್ರಪತಿಗಳ ಕಾರ್ಯಾಲಯ

ಕೋವಿಡ್-19 ಕುರಿತ ತಪ್ಪು ಮಾಹಿತಿಯ ಸೋಂಕನ್ನು ತುರ್ತು ಪರಿಶೀಲಿಸಿ: ಉಪ ರಾಷ್ಟ್ರಪತಿ

Posted On: 06 APR 2020 1:34PM by PIB Bengaluru

ಕೋವಿಡ್-19 ಕುರಿತ ತಪ್ಪು ಮಾಹಿತಿಯ ಸೋಂಕನ್ನು ತುರ್ತು ಪರಿಶೀಲಿಸಿ: ಉಪ ರಾಷ್ಟ್ರಪತಿ

ಮೂಢ ನಂಬಿಕೆಗಳು ಮತ್ತು ವದಂತಿಗಳು ಕೊರೊನಾ ಸೋಂಕಿನ ವಿರುದ್ಧ ನಮ್ಮ ಯುದ್ಧವನ್ನು ದುರ್ಬಲಗೊಳಿಸಲು ಬಿಡಬಾರದು: ಉಪ ರಾಷ್ಟ್ರಪತಿ

ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮವನ್ನು ಹಗುರವಾಗಿ ಪರಿಗಣಿಸಬಾರದು ಎಂಬುದನ್ನು ಎಲ್ಲ ಧಾರ್ಮಿಕ ಗುಂಪುಗಳು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ: ಉಪ ರಾಷ್ಟ್ರಪತಿ

ಸಮುದಾಯಗಳಲ್ಲಿನ ಕೆಲವು ಸಾಮಾನ್ಯ ನಂಬಿಕೆಗಳನ್ನು ತೊಡೆದು ಹಾಕುವಂತೆ ಉಪ ರಾಷ್ಟ್ರಪತಿ ಕರೆ

ವೈದ್ಯಕೀಯ ವೃತ್ತಿಪರರು ವಿಶೇಷವಾಗಿ ಮುಂಚೂಣಿ ಯೋಧರ ಸುರಕ್ಷತೆ ಅತ್ಯಂತ ಅವಶ್ಯಕ: ಉಪ ರಾಷ್ಟ್ರಪತಿ

 

ಮೂಢನಂಬಿಕೆಗಳು ಮತ್ತು ವದಂತಿಗಳು, ಕೋವಿಡ್-19 ವಿರುದ್ಧ ನಾವು ನಡೆಸುತ್ತಿರುವ ಯುದ್ಧ ದುರ್ಬಲವಾಗಲು ಅವಕಾಶ ನೀಡುವಂತಾಗಬಾರದು ಎಂದು ಎಚ್ಚರಿಕೆ ನೀಡಿರುವ ಭಾರತದ ಉಪ ರಾಷ್ಟ್ರಪತಿಗಳಾದ ಶ್ರೀ ಎಂ.ವೆಂಕಯ್ಯ ನಾಯ್ಡು ಅವರು, ತಪ್ಪು ಮಾಹಿತಿ ಹರಡುವುದು ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳಲ್ಲಿನ “ಸೋಂಕನ್ನು” ಪರಿಶೀಲಿಸುವ ಅಗತ್ಯತೆ ಇದೆ ಎಂದು ಹೇಳಿದರು.

ಸುಳ್ಳು ಮಾಹಿತಿಗಳು ಮತ್ತು ವದಂತಿಗಳನ್ನು ತೊಡೆದು ಹಾಕಲು ಖಚಿತ ಮಾಹಿತಿಯನ್ನು ಮುಕ್ತವಾಗಿ ಪಸರಿಸುವುದು ಅತ್ಯವಶ್ಯಕ ಎಂದು ಶ್ರೀ ನಾಯ್ಡು ಅವರು, ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಹೇಳಿದ್ದಾರೆ. ಈ ಸಮಸ್ಯೆಯ ತೀವ್ರತೆಯನ್ನು ಅರ್ಥಮಾಡಿಕೊಳ್ಳದೆ ಹೋದರೆ ಅಥವಾ ಸರಿಯಾಗಿ ಅರ್ಥಮಾಡಿಕೊಳ್ಳದಿದ್ದರೆ ನಾವು ಸೋಂಕಿನ ವಿರುದ್ಧ ಯುದ್ಧವನ್ನು ಗೆಲ್ಲಲಾಗದು ಎಂದು ಅವರು ಹೇಳಿದ್ದಾರೆ.

ಕೆಲವು ರಾಜ್ಯಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮಾರ್ಗಸೂಚಿಗಳನ್ನು ಬೇಜವಾಬ್ದಾರಿಯಿಂದ ಉಲ್ಲಂಘಿಸುತ್ತಿರುವ ಬಗ್ಗೆ ಉಲ್ಲೇಖಿಸಿರುವ ಅವರು, ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಸಭೆ ಅದಕ್ಕೊಂದು ನಿದರ್ಶನವಾಗಿದೆ ಮತ್ತು ಇಂತಹ ಸಂದರ್ಭದಲ್ಲಿ ಮಾರ್ಗಸೂಚಿಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವುದು ಅಗತ್ಯ ಮತ್ತು ಅವುಗಳನ್ನು ಕಠಿಣ ರೀತಿಯಲ್ಲಿ ಅನುಷ್ಠಾನಗೊಳಿಸಬೇಕು ಎಂದು ಹೇಳಿದ್ದಾರೆ.

ಹೆಚ್ಚಿನ ಜಾಗೃತಿ ಮೂಡಿಸುವ ತುರ್ತು ಅಗತ್ಯತೆ ಇದೆ, ವೈಜ್ಞಾನಿಕ ಪುರಾವೆಗಳಿಂದ ಸೋಂಕು ಒಟ್ಟಾರೆ ಸಮಾಜಕ್ಕೆ ಹರಡುತ್ತದೆ, ಅದು ಜಾತಿ, ಧರ್ಮ, ವರ್ಗ, ಭಾಷೆ, ಪ್ರದೇಶಗಳನ್ನು ಮತ್ತು ಧರ್ಮಗಳನ್ನು ಮೀರಿ ಹರಡುವಂತಹುದು ಎಂಬುದು ಸಾಬೀತಾಗಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಶ್ರೀ ನಾಯ್ಡು ಅವರು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮವನ್ನು ಯಾವುದೇ ಧಾರ್ಮಿಕ ಗುಂಪುಗಳು ಹಗುರವಾಗಿ ತೆಗೆದುಕೊಳ್ಳಬಾರದು ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಈ ಸವಾಲಿನಿಂದ ಹೊರಬರುವವರೆಗೆ ಯಾವುದೇ ರೀತಿಯ ದೊಡ್ಡ ಸಭೆಗಳನ್ನು ನಡೆಸಬಾರದು ಎಂದರು. “ಮತ್ತೆ ಅಂತಹ ನಿಗದಿತ ಮಾರ್ಗಸೂಚಿಗಳನ್ನು ಉದ್ದಟತನದಿಂದ ಉಲ್ಲಂಘಿಸಿ, ಯಾವುದೇ ಅಂತಹ ದುರದೃಷ್ಟಕರ ಸಭೆಗಳನ್ನು ನಡೆಸುವುದಿಲ್ಲ ಎಂದು ನಾವು ನಂಬಿದ್ದೇವೆ’’ ಎಂದು ಹೇಳಿದ್ದಾರೆ.

ಸಮುದಾಯಗಳ ಬಗ್ಗೆ ಕಳಂಕವನ್ನು ಬಿತ್ತುವಂತಹ ಕೆಲಸ ಮಾಡಬಾರದು ಮತ್ತು ಯಾವುದೇ ಘಟನೆಗಳನ್ನು ಪೂರ್ವಾಗ್ರಹವಾಗಿ ಹಾಗು ಪಕ್ಷಪಾತದಿಂದ ನೋಡಬಾರದು ಎಂದು ಕರೆ ನೀಡಿದ್ದಾರೆ.

ಎಲ್ಲ ರಾಜ್ಯ ಸರ್ಕಾರಗಳು ಕೈಗೊಂಡಿರುವ ಹಲವು ಕ್ರಮಗಳನ್ನು ಉಲ್ಲೇಖಿಸಿದ ಅವರು, ನಾಗರಿಕ ಸಮಾಜ ಮತ್ತು ಖಾಸಗಿ ವಲಯ ಕೂಡ ಸೋಂಕಿನ ವಿರುದ್ಧ ಸೆಣಸಲು ಸಹಕಾರ ನೀಡುತ್ತಿದೆ. ಅವರು ಮಾಡುತ್ತಿರುವ ಮಾನವೀಯ ಕೆಲಸಗಳಿಂದಾಗಿ ಬಡವರು ಮತ್ತು ವಲಸೆ ಕಾರ್ಮಿಕರ ತೊಂದರೆಗಳು ಸ್ವಲ್ಪಮಟ್ಟಿಗೆ ತಗ್ಗಿವೆ ಎಂದರು. ಕೃಷಿ ವಲಯದಲ್ಲಿ ಸದ್ಯ ಕಟಾವು ಹಂಗಾಮು ಇರುವ ಹಿನ್ನೆಲೆಯಲ್ಲಿ ರೈತರ ಸಮಸ್ಯೆಗಳಿಗೆ ಎಲ್ಲ ಸರ್ಕಾರಗಳು ಸ್ಪಂದಿಸುತ್ತಿವೆ. ಸುಗಮ ರೀತಿಯಲ್ಲಿ ಕಟಾವು ಕೆಲಸ ಪೂರ್ಣಗೊಳಿಸಲು ಮತ್ತು ಧಾನ್ಯಗಳ ಖರೀದಿಗೆ ಸರಣಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಇದು ಆರಾಮಾಗಿರುವಂತಹ ಕಾಲವಲ್ಲ, ಮುಂದಿನ ದಿನಗಳಲ್ಲಿ ಇನ್ನು ಹೋರಾಟ ಕಷ್ಟಕರವಾಗಿರಲಿದೆ ಎಂದ ಶ್ರೀ ನಾಯ್ಡು ಅವರು, “ನಾವು ಈ ಪಿಡುಗಿನ ವಿರುದ್ಧ ಒಟ್ಟಾಗಿ ಹೋರಾಡಲು ಇನ್ನೂ ಹೆಚ್ಚು ಸನ್ನದ್ಧರಾಗಬೇಕು, ನಿಗಾ ಹೊಂದಿರಬೇಕು ಎಂದರು. ಚಿಂತನೆಗಳು ಮತ್ತು ಕ್ರಿಯೆಯ ಒಗ್ಗಟ್ಟು ಮತ್ತು ಎಲ್ಲ ದಿಟ್ಟ ಯೋಧರು ಐಕ್ಯತೆಯಿಂದ ಇರುವುದು ಈಗ ಅತ್ಯವಶ್ಯಕ” ಎಂದು ಹೇಳಿದರು.

ಮುಂಚೂಣಿಯಲ್ಲಿರುವ ಯೋಧರು ವಿಶೇಷವಾಗಿ ವೈದ್ಯಕೀಯ ವೃತ್ತಿಪರರ ಸುರಕ್ಷತೆ ಮತ್ತು ಗೌರವ ಕಾಪಾಡುವುದು ಅತ್ಯಂತ ಅವಶ್ಯಕ ಎಂದು ಬಲವಾಗಿ ಪ್ರತಿಪಾದಿಸಿದ ಅವರು, ನಮ್ಮ ಧ್ಯೇಯ ಈಡೇರಿಕೆಗೆ ಖಂಡಿತ ಈ ಕೆಲಸ ಅತ್ಯವಶ್ಯಕವಾಗಿ ಆಗಬೇಕು ಎಂದು ಹೇಳಿದರು. ನಾವು ಪ್ರಸ್ತುತ ಸಾಗುತ್ತಿರುವ ಕಾರ್ಗತ್ತಲ ಸುರಂಗ ಮಾರ್ಗದಲ್ಲಿ ತುತ್ತ ತುದಿಯನ್ನು ತಲುಪಬೇಕೆಂದರೆ ಉತ್ತಮ ಸ್ವಭಾವ, ನಡವಳಿಕೆ, ಅನುಕಂಪ, ಸಹಾನುಭೂತಿಯನ್ನೂ ಒಳಗೊಂಡಿರಬೇಕು ಮತ್ತು ಮಾನವೀಯ ಸಂಕಷ್ಟಗಳನ್ನು ದೂರ ಮಾಡುವ ನಿಟ್ಟಿನಲ್ಲಿ ಅದು ಮಹತ್ವದ ಹೆಜ್ಜೆಯಾಗಲಿದೆ ಎಂದು ಹೇಳಿದರು.

****

 



(Release ID: 1611598) Visitor Counter : 171