ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್ -19ರಿಂದ ಹೊರಬರಲು ಮಾಡಿಕೊಂಡಿರುವ ಸಿದ್ಧತೆಯನ್ನು ಖುದ್ದು ಪರಿಶೀಲಿಸಲು ಡಾ. ಆರ್.ಎಂ.ಎಲ್. ಮತ್ತು ಸಫ್ದರ್ ಜಂಗ್ ಆಸ್ಪತ್ರೆಗೆ ಭೇಟಿ ನೀಡಿದ ಡಾ. ಹರ್ಷವರ್ಧನ್
Posted On:
03 APR 2020 4:51PM by PIB Bengaluru
ಕೋವಿಡ್ -19ರಿಂದ ಹೊರಬರಲು ಮಾಡಿಕೊಂಡಿರುವ ಸಿದ್ಧತೆಯನ್ನು ಖುದ್ದು ಪರಿಶೀಲಿಸಲು ಡಾ. ಆರ್.ಎಂ.ಎಲ್. ಮತ್ತು ಸಫ್ದರ್ ಜಂಗ್ ಆಸ್ಪತ್ರೆಗೆ ಭೇಟಿ ನೀಡಿದ ಡಾ. ಹರ್ಷವರ್ಧನ್; ರೋಗಿಗಳೊಂದಿಗೂ ಸಂವಾದ
ಕೋವಿಡ್ -19 ಸಮರ್ಪಿತ ಪ್ರತ್ಯೇಕೀಕರಣ ವಾರ್ಡ್ ಆಗಿ ಕಾರ್ಯ ನಿರ್ವಹಿಸಲಿರುವ ಆರ್.ಎಂ.ಎಲ್. ನ ಅಪಘಾತ (ಕೇಂದ್ರ) ವಿಭಾಗ
ಕೋವಿಡ್ -19 ನಿರ್ವಹಣಾ ಕೇಂದ್ರವಾಗಿ ಪರಿವರ್ತಿತವಾದ ಸಫ್ದರ್ ಜಂಗ್ ಆಸ್ಪತ್ರೆಯ ಸೂಪರ್ ಸ್ಪೆಷಾಲಿಟಿ ವಿಭಾಗ
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಅವರಿಂದು ದೆಹಲಿಯ ಡಾ. ಆರ್.ಎಂ.ಎಲ್. ಮತ್ತು ಸಫ್ದರ್ ಜಂಗ್ ಆಸ್ಪತ್ರೆಗಳಿಗೆ ಭೇಟಿ ನೀಡಿ ಕೋವಿಡ್ -19ರಿಂದ ಹೊರಬರಲು ಮಾಡಿಕೊಂಡಿರುವ ಸಿದ್ಧತೆಗಳ ಖುದ್ದು ಪರಿಶೀಲನೆ ನಡೆಸಿದರು.
ಡಾ. ಆರ್.ಎಂ.ಎಲ್. ಆಸ್ಪತ್ರೆಯಲ್ಲಿ ಕೇಂದ್ರ ಸಚಿವರು ಫ್ಲ್ಯೂ ಕಾರ್ನರ್, ತುರ್ತು ಚಿಕಿತ್ಸಾ ಕೇಂದ್ರ, ಟ್ರಾಮಾ ಕೇಂದ್ರ ವಿಭಾಗ ಮತ್ತು ಕೊರೋನಾ ತಪಾಸಣಾ ಕೇಂದ್ರಗಳಿಗೆ ಭೇಟಿ ನೀಡಿದರು. ಈ ಕೇಂದ್ರಗಳ ಕಾರ್ಯಾಚರಣೆ ವೀಕ್ಷಿಸಿದ ತರುವಾಯ ಆರೋಗ್ಯ ಸಚಿವರು ತಪಾಸಣೆಯ ಪ್ರಕ್ರಿಯೆಯ ವೇಗದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ದೊಡ್ಡ ಸಂಖ್ಯೆಯ ಮಾದರಿಗಳನ್ನು ಪ್ರತಿನಿತ್ಯ ನಿರ್ವಹಣೆ ಮಾಡುತ್ತಿರುವ ಮೈಕ್ರೋ ಬಯಾಲಜಿ ವಿಭಾಗಕ್ಕೂ ಭೇಟಿ ನೀಡಿದ ಅವರು, ಅಲ್ಲಿ ಮಾದರಿಗಳನ್ನು ಪಡೆಯುವ ಪ್ರಕ್ರಿಯೆ ಮತ್ತು ವೈಜ್ಞಾನಿಕವಾಗಿ ಪರಿಶೀಲಿಸುವ ಕ್ರಮವನ್ನು ವೀಕ್ಷಿಸಿದರು. ಸರಿಯಾದ ಸೋಂಕು ನಿಯಂತ್ರಣ ಶಿಷ್ಟಾಚಾರವನ್ನು ಅನುಸರಿಸುತ್ತಿರುವುದಕ್ಕಾಗಿ ಮತ್ತು ಆ ಮೂಲಕ ಪರೀಕ್ಷೆಯ ಫಲಿತಾಂಶಗಳಲ್ಲಿ ನಿಖರತೆ ಮತ್ತು ಸತ್ಯಾಸತ್ಯತೆಯನ್ನು ಖಾತ್ರಿಪಡಿಸಿಕೊಳ್ಳುತ್ತಿರುವುದಕ್ಕಾಗಿ ಅವರು ಇಲಾಖೆಯನ್ನು ಶ್ಲಾಘಿಸಿದರು. ಹೆಚ್ಚುತ್ತಿರುವ ಪ್ರತ್ಯೇಕ ಹಾಸಿಗೆಗಳ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, ಅಪಘಾತ ಕೇಂದ್ರವು ಸಮರ್ಪಿತ ಕೋವಿಡ್ -19 ಪ್ರತ್ಯೇಕೀಕರಣ ವಾರ್ಡ್ ಆಗಿ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದರು.
ತದನಂತರ ಕೇಂದ್ರ ಸಚಿವರು, ಸಫ್ದರ್ ಜಂಗ್ ಆಸ್ಪತ್ರೆಗೆ ಭೇಟಿ ನೀಡಿ, ಕೋವಿಡ್ -19 ಸುಸಜ್ಜಿತ ಪ್ರತ್ಯೇಕೀಕರಣ ಕೇಂದ್ರವಾಗಿ ಮಾರ್ಪಟ್ಟಿರುವ 400 ಪ್ರತ್ಯೇಕ ಹಾಸಿಗೆಗಳು ಮತ್ತು 100 ಐಸಿಯು ಹಾಸಿಗೆಗಳನ್ನು ಒಳಗೊಂಡ ಅಲ್ಲಿನ ಸೂಪರ್ ಸ್ಪೆಷಾಲಿಟಿ ವಿಭಾಗದಲ್ಲಿ ಲಭ್ಯವಿರುವ ಸೌಲಭ್ಯಗಳ ಪರಾಮರ್ಶೆ ನಡೆಸಿದರು.
ಎರಡೂ ಆಸ್ಪತ್ರೆಗಳಲ್ಲಿ ರೋಗಿಗಳ ಚಿಕಿತ್ಸೆ ಮತ್ತು ನಿರ್ವಹಣೆಯ ಪರಾಮರ್ಶೆಯ ವೇಳೆ ಡಾ. ಹರ್ಷವರ್ಧನ್ ಅವರು ಕೋವಿಡ್-19 ರೋಗಿಗಳೊಂದಿಗೆ ವ್ಯವಹರಿಸುತ್ತಿರುವ ವೈದ್ಯರು, ಶುಶ್ರೂಷಕರು, ಆಸ್ಪತ್ರೆ ಮತ್ತು ನೈರ್ಮಲ್ಯ ಸಿಬ್ಬಂದಿಯನ್ನುದ್ದೇಶಿಸಿ ಮಾತನಾಡಿ, ನೀವೆಲ್ಲರೂ ರೋಗಿಗಳಿಗೆ ತುರ್ತು ಪರಿಹಾರವನ್ನು ಒದಗಿಸಲು ಮತ್ತು ಫಲಿತಾಂಶ ಆಧಾರಿತ ಆರೋಗ್ಯ ಮೂಲಸೌಕರ್ಯದಲ್ಲಿ ಒಂದು ಸ್ಥಾನವನ್ನು ಸೃಷ್ಟಿಸಲು ದಣಿವರಿಯದೆ ಶ್ರಮಿಸುತ್ತಿದ್ದೀರಿ ಎಂದು ಹೇಳಿದರು. ದೇಶದಲ್ಲಿ ಕೋವಿಡ್ 19 ನಿಗ್ರಹದ ಪ್ರಯತ್ನಗಳಲ್ಲಿ ಆರೋಗ್ಯ ವಲಯ ಎದುರಿಸುತ್ತಿರುವ ಸವಾಲುಗಳ ಕುರಿತಂತೆಯೂ ಅವರು ಚರ್ಚಿಸಿದರು. ಮಾನವತೆಯ ಸೇವೆ ಇದಾಗಿದ್ದು, ತಮ್ಮ ಕಠಿಣ ಪರಿಶ್ರಮ ಮುಂದುವರಿಸುವಂತೆ ಅವರು ಪ್ರತಿಪಾದಿಸಿದರು. ದೇಶದ ವೈದ್ಯರು ಮತ್ತು ಇತರ ಆರೋಗ್ಯ ಆರೈಕೆ ವೃತ್ತಿಪರರ ಗಮನಾರ್ಹ ಕಠಿಣ ಪರಿಶ್ರಮ ಮತ್ತು ಬದ್ಧತೆಗೆ ನಮಿಸಿದ ಅವರು, ನಮ್ಮ ದೇಶ ಸಮರ್ಪಿತ ಆರೋಗ್ಯ ವೃತ್ತಿಪರರ ಬಗ್ಗೆ ಹೆಮ್ಮೆಪಡುತ್ತದೆ ಎಂದರು. ಕೋವಿಡ್ -19 ಮಹಾಮಾರಿ ಈಡೀ ವಿಶ್ವವನ್ನೇ ಆವರಿಸಿದೆ. ನಾವು ಭಾರತದಲ್ಲಿ ಇದನ್ನು ನಿರಂತರ ನಿಗಾ, ಪ್ರಧಾನಮಂತ್ರಿಯವರ ಮಾರ್ಗದರ್ಶನ, ತ್ವರಿತ ಕ್ರಮ ಹಾಗೂ ಆರೋಗ್ಯ ಯೋಧರ ಬೆಂಬಲದಿಂದ ನಿಯಂತ್ರಿಸಿದ್ದೇವೆ ಎಂದರು.
ಕೋವಿಡ್ -19ರ ವಿರುದ್ಧದ ಹೋರಾಟವನ್ನು ನೈರ್ಮಲ್ಯ ಅಂದರೆ ನಿರಂತರ ಮತ್ತು ಸೂಕ್ತ ಕೈ ತೊಳೆಯುವಿಕೆ, ಮುಖ ಮತ್ತು ಕಣ್ಣು ಮುಟ್ಟಿಕೊಳ್ಳದೇ ಇರುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಅನುಸರಿಸುವುದರಿಂದ ಮಾಡಬಹುದಾಗಿದೆ ಎಂದರು. ಮಾನ್ಯ ಪ್ರಧಾನಮಂತ್ರಿಯವರು, ಈ ಅಗತ್ಯ ವಿಧಾನಗಳನ್ನು ಇಂದು ದೇಶವನ್ನುದ್ದೇಶಿಸಿ ಮಾಡಿದ ಪ್ರಸಾರ ಭಾಷಣದಲ್ಲಿ ಪುನರುಚ್ಚರಿಸಿದ್ದಾರೆ ಎಂದರು.
ಕೋವಿಡ್ -19 ಪ್ರಭಾವವನ್ನು ನಿಯಂತ್ರಿಸಲು ಲಾಕ್ ಡೌನ್ ಸೂಕ್ತ ಅವಕಾಶ ಎಂದು ಹೇಳಿದ ಡಾ. ಹರ್ಷವರ್ಧನ್, ಇದು ರೋಗದ ಹರಡುವಿಕೆ ತಡೆಯುವ ಮಹತ್ವದ ಅಸ್ತ್ರವಾಗಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಸಂಘಟಿತರಾಗಿ ಈ ಅವಧಿಯಲ್ಲಿ ಮನೆಯಲ್ಲೇ ಉಳಿಯುವ ಮೂಲಕ ಯೋಗದಾನ ನೀಡಬೇಕು ಎಂದರು.
*****
(Release ID: 1610942)
Visitor Counter : 216