ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಅಪ್ ಡೇಟ್ಸ್

Posted On: 03 APR 2020 6:43PM by PIB Bengaluru

ಕೋವಿಡ್-19 ಅಪ್ ಡೇಟ್ಸ್
 

ದೇಶದಲ್ಲಿ ಕೋವಿಡ್-19 ನಿಯಂತ್ರಣ ಮತ್ತು ನಿರ್ವಹಣೆ ಹಾಗೂ ಮುಂಜಾಗ್ರತೆಯಾಗಿ ಭಾರತ ಸರ್ಕಾರ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಜೊತೆಗೂಡಿ ಹಲವು ಕ್ರಮಗಳನ್ನು ಕೈಗೊಂಡಿದೆ. ಈ ಕ್ರಮಗಳನ್ನು ನಿರಂತರವಾಗಿ ಉನ್ನತ ಮಟ್ಟದಲ್ಲಿ ಮೇಲ್ವಿಚಾರಣೆ ನಡೆಸಲಾಗುತ್ತಿದೆ.

ಗೌರವಾನ್ವಿತ ಭಾರತದ ರಾಷ್ಟ್ರಪತಿಗಳಾದ ಶ್ರೀ ರಾಮನಾಥ್ ಕೋವಿಂದ್ ಅವರು, ಇಂದು ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ರಾಜ್ಯಪಾಲರು ಮತ್ತು ಲೆಫ್ಟಿನೆಂಟರ್ ಗೌರ್ನರ್ ಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋವಿಡ್-19 ಸೋಂಕು ದುರ್ಬಲ ವರ್ಗಕ್ಕೆ ಹರಡದಂತೆ ಕೈಗೊಂಡಿರುವ ಕ್ರಮಗಳು, ಮಾಡಿಕೊಂಡಿರುವ ಪೂರ್ವಭಾವಿ ಸಿದ್ಧತೆಗಳು ಹಾಗೂ ಈ ವಿಚಾರದಲ್ಲಿ ನಾಗರಿಕ ಸಮಾಜ/ಸ್ವಯಂ ಸೇವಾ ಸಂಘಟನೆಗಳು/ಖಾಸಗಿ ವಲಯ ಮತ್ತು ರೆಡ್ ಕ್ರಾಸ್ ಸಂಸ್ಥೆಗಳ ಪಾತ್ರಗಳ ಬಗ್ಗೆ ಚರ್ಚಿಸಿದರು.

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು ಬೆಳಗ್ಗೆ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುತ್ತಾ, ಈ ಸಂಕಷ್ಟದ ಅನಿಶ್ಚಿತತೆ ಕಾಲದಲ್ಲಿ ದೇಶ ಹಿಂದೆಂದೂ ಕಾಣದಂತಹ ಶಿಸ್ತು ಮತ್ತು ಸಾಮೂಹಿಕ ಒಗ್ಗಟ್ಟನ್ನು ಪ್ರದರ್ಶಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅವರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅಗತ್ಯತೆಯನ್ನು ಪುನರುಚ್ಚರಿಸಿದರು ಮತ್ತು ಲಾಕ್ ಡೌನ್ ಜಾರಿಗೊಳಿಸಲು ಪ್ರತಿಯೊಬ್ಬ ಪ್ರಜೆಯೂ ಸಹಕಾರ ನೀಡಬೇಕು ಎಂದು ಕರೆ ನೀಡಿದರು.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಅವರು, ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರ ಕೆಲಸಗಳಿಗೆ ರೋಗಿಗಳು ಹಾಗು ಅವರ ಕುಟುಂಬದವರು ತೊಂದರೆ ನೀಡಬಾರದು ಎಂದು ಮನವಿ ಮಾಡಿದರು. ಅಲ್ಲದೆ ಅವರು, ದೇಶಾದ್ಯಂತ ಕೆಲವು ಮುಂಚೂಣಿ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಅಥವಾ ದುರ್ನಡತೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಅಲ್ಲದೆ, ಕೋವಿಡ್-19 ಸಾಂಕ್ರಾಮಿಕ ನಿಯಂತ್ರಣಕ್ಕಾಗಿ ನಿರಂತರವಾಗಿ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ಕರೋನಾ ಯೋಧರು ಅವರಾಗಿದ್ದಾರೆ ಮತ್ತು ಅವರ ಕೊಡುಗೆಗೆ ಗೌರವಾನ್ವಿತ ಪ್ರಧಾನಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಕಾರ್ಯದಿಂದಾಗಿ ದೇಶದಲ್ಲಿ ಈವರೆಗೆ 156 ಕೋವಿಡ್ ರೋಗಿಗಳು ಚೇತರಿಸಿಕೊಂಡಿದ್ದಾರೆ ಎಂದು ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, 2020ರ ಏಪ್ರಿಲ್ 2ರಂದು ಕೋವಿಡ್-19 ವಿರುದ್ಧದ ತರಬೇತಿ ಸಾಮಗ್ರಿಗಳ ಕುರಿತು ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಮಾರ್ಗಸೂಚಿಯನ್ನು ಹೊರಡಿಸಿದೆ. ಈ ಲಿಂಕ್ ನಲ್ಲಿ ಲಭ್ಯವಿದೆ. 
 https://www.mohfw.gov.in/pdf/AdvisoryforHRmanagement.pdf . ಕ್ಷೇತ್ರ ಮಟ್ಟದಲ್ಲಿ  ತರಬೇತಿ ಸಾಮರ್ಥ್ಯವೃದ್ಧಿ ಮತ್ತು ಬಲವರ್ಧನೆ ಕ್ರಮಗಳು, ಐಸೋಲೇಶನ್ ಸೌಕರ್ಯಗಳನ್ನೊಳಗೊಂಡ ಚಿಕಿತ್ಸಾ ನಿರ್ವಹಣೆ, ಕ್ವಾರಂಟೈನ್, ಮಾನಸಿಕ-ಸಾಮಾಜಿಕ ಆರೈಕೆ, ಸಾರಿಗೆ ಮತ್ತು ಸರಣಿ ಪೂರೈಕೆ ನಿರ್ವಹಣೆ ಮತ್ತಿತರ ಅಂಶಗಳನ್ನು ತಿಳಿಸಿಕೊಡಲಾಗಿದೆ.

ಹೆಚ್ಚುವರಿಯಾಗಿ ಐಸಿಯು ಕೇರ್ ಮತ್ತು ವೆಂಟಿಲೇಶನ್ ಕಾರ್ಯತಂತ್ರ ಕುರಿತಂತೆ ವೈದ್ಯರಿಗಾಗಿ ಆನ್ ಲೈನ್ ತರಬೇತಿ ನೀಡಲಾಗುತ್ತಿದೆ ಮತ್ತು ಏಮ್ಸ್ ನಿಂದ ಕೋವಿಡ್-19 ರೋಗಿಗಳಿಗೆ ಯಾವ ರೀತಿಯ ಆರೈಕೆ ಮಾಡುವ ಕುರಿತು ನರ್ಸ್ ಗಳಿಗಾಗಿ ಮತ್ತೊಂದು ಆನ್ ಲೈನ್ ತರಬೇತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಕುರಿತ ವೇಳಾಪಟ್ಟಿ ಹಾಗೂ ವಿವರಗಳು ಆರೋಗ್ಯ ಸಚಿವಾಲಯದ ವೆಬ್ ಸೈಟ್  https://www.mohfw.gov.in ನಲ್ಲಿ ಲಭ್ಯವಿದೆ.

ದೇಶದಲ್ಲಿ ಈವರೆಗೆ, 2301 ಸೋಂಕಿತ ಪ್ರಕರಣಗಳು ದೃಢಪಟ್ಟಿವೆ ಮತ್ತು 56 ಮಂದಿ ಸಾವನ್ನಪ್ಪಿದ್ದಾರೆ. 156 ಮಂದಿ ಚೇತರಿಕೆ ನಂತರ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.

ಕೋವಿಡ್-19ಗೆ ಸಂಬಂಧಿಸಿದ ಎಲ್ಲ ತಾಂತ್ರಿಕ ವಿಷಯಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳಿಗೆ ಹಾಗೂ ಎಲ್ಲ ಖಚಿತ ಮತ್ತು ಅಪ್ ಡೇಟೆಡ್ ಮಾಹಿತಿಗೆ ನಿರಂತರವಾಗಿ ಈ ವೆಬ್ ಸೈಟ್ ಗೆ ಭೇಟಿ ನೀಡಬಹುದುhttps://www.mohfw.gov.in/.

ಕೋವಿಡ್-19 ಕುರಿತ ತಾಂತ್ರಿಕ ಪ್ರಶ್ನೆಗಳನ್ನು technicalquery.covid19[at]gov[dot]in ಮತ್ತು  ncov2019[at]gov[dot]in .ಇ-ಮೇಲ್ ವಿಳಾಸಕ್ಕೆ ಬರೆದು ಉತ್ತರ ಪಡೆಯಬಹುದು.

ಕೋವಿಡ್-19 ಕುರಿತ ಯಾವುದೇ ಪ್ರಶ್ನೆಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಾಯವಾಣಿ ಸಂಖ್ಯೆಗೆ: +91-11-23978046 ಅಥವಾ 1075 (ಟೋಲ್ ಫ್ರೀಕರೆ ಮಾಡಬಹುದು. ಕೋವಿಡ್-19 ಕುರಿತಂತೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸಹಾಯವಾಣಿ ಸಂಖ್ಯೆಗಳು ಈ ವೆಬ್ ಸೈಟ್ ನಲ್ಲಿ  ಲಭ್ಯ. https://www.mohfw.gov.in/pdf/coronvavirushelplinenumber.pdf .

 

*****


(Release ID: 1610842) Visitor Counter : 208