ಪ್ರಧಾನ ಮಂತ್ರಿಯವರ ಕಛೇರಿ

ರಾಷ್ಟ್ರವನ್ನುದ್ದೇಶಿಸಿ ಪ್ರಧಾನ ಮಂತ್ರಿಯವರ ಭಾಷಣ

Posted On: 03 APR 2020 9:22AM by PIB Bengaluru

ರಾಷ್ಟ್ರವನ್ನುದ್ದೇಶಿಸಿ ಪ್ರಧಾನ ಮಂತ್ರಿಯವರ ಭಾಷಣ


ನನ್ನ ಪ್ರೀತಿಯ ನಾಗರಿಕ ಬಂಧುಗಳೇ,
ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧ ರಾಷ್ಟ್ರವ್ಯಾಪಿ ಲಾಕ್‌ಡೌನ್‌ಗೆ ಇಂದು 9 ದಿನಗಳು. ಈ ಅವಧಿಯಲ್ಲಿ ನೀವು ಪ್ರದರ್ಶಿಸಿದ ಶಿಸ್ತು ಮತ್ತು ಸೇವಾ ಮನೋಭಾವ ಅಸಾಧಾರಣವಾದದ್ದು ಮತ್ತು ಇವೆರಡರ ನಿಜವಾದ ಅರ್ಥವನ್ನು ಸಾಕಾರಗೊಳಿಸಿದೆ.
ಪರಿಸ್ಥಿತಿಯನ್ನು ಸಾಧ್ಯವಾದಷ್ಟು ಉತ್ತಮವಾಗಿ ನಿರ್ವಹಿಸಲು ಸರ್ಕಾರ, ಆಡಳಿತ ಮತ್ತು ಸಾರ್ವಜನಿಕರು ಜೊತೆಯಾಗಿ ಹೆಚ್ಚಿನ ಪ್ರಯತ್ನಗಳನ್ನು ಮಾಡಿದ್ದಾರೆ. ಮಾರ್ಚ್ 22 ರ ಭಾನುವಾರದಂದು ಕೊರೊನಾವೈರಸ್ ವಿರುದ್ಧ ಹೋರಾಡುವ ಎಲ್ಲರಿಗೂ ನೀವು ಕೃತಜ್ಞತೆಯನ್ನು ವ್ಯಕ್ತಪಡಿಸಿದ ರೀತಿ ಇಂದು ಎಲ್ಲ ದೇಶಗಳಿಗೂ ಮಾದರಿಯಾಗಿದೆ. ಅನೇಕ ದೇಶಗಳು ಈಗ ಅದನ್ನು ಅನುಸರಿಸುತ್ತಿವೆ.
ಅದು ಜನತಾ ಕರ್ಫ್ಯೂವಾಗಲಿ, ಗಂಟೆ ಬಾರಿಸುವುದಾಗಲಿ, ಚಪ್ಪಾಳೆ ತಟ್ಟುವುದಾಗಲಿ ಅಥವಾ ತಟ್ಟೆಗಳನ್ನು ಬಡಿಯುವುದೇ  ಆಗಿರಲಿ; ಈ ಪರೀಕ್ಷೆಯ ಸಮಯದಲ್ಲಿ ರಾಷ್ಟ್ರವು ತನ್ನ ಸಾಮೂಹಿಕ ಶಕ್ತಿಯನ್ನು ಅರಿತುಕೊಳ್ಳುವಂತೆ ನೀವು ಮಾಡಿದ್ದೀರಿ. ಕೊರೊನಾ ವಿರುದ್ಧದ ಯುದ್ಧದಲ್ಲಿ ರಾಷ್ಟ್ರವು ಒಂದಾಗಬಹುದು ಎಂಬ ನಂಬಿಕೆಯ ಗಾಢವಾಗಲು ಇದು ಕಾರಣವಾಗಿದೆ. ಲಾಕ್‌ಡೌನ್‌ನ ಈ ಸಂದರ್ಭದಲ್ಲಿ ದೇಶದೆಡೆಗಿನ ನಿಮ್ಮ ಈ ಸಾಮೂಹಿಕ ಮನೋಭಾವವು ತಂತಾನೇ ಪ್ರಕಟಗೊಳ್ಳುವುದನ್ನು ಕಾಣಬಹುದು.
ಸ್ನೇಹಿತರೇ, ಇಂದು, ಈ ದೇಶದ ಕೋಟ್ಯಂತರ ಜನರು ತಮ್ಮ ಮನೆಗಳಲ್ಲಿಯೇ ಇರುವಾಗ, ಇದರಿಂದ ಅವರು ತಾವಾಗಿಯೇ ಏನು ಮಾಡಿದಂತಾಯಿತು ಎಂದು ಯಾರಾದರೂ ಪ್ರಶ್ನಿಸುವುದು ಸಹಜ. ಕೆಲವರಿಗೆ ದೊಡ್ಡ ಯುದ್ಧವನ್ನು ಹೇಗೆ ಎದುರಿಸಲಿದ್ದೇವೆ ಎಂಬ ಚಿಂತೆ ಕೂಡ ಇರಬಹುದು. ಇನ್ನೂ ಎಷ್ಟು ದಿನಗಳು ಈ ರೀತಿ ಕಳೆಯಬೇಕಾಗುತ್ತದೆ ಎಂಬ ಬಗ್ಗೆ ಅನೇಕರಿಗೆ ಕಳವಳವೂ ಇದೆ.
ಸ್ನೇಹಿತರೇ, ಇದು ಖಂಡಿತವಾಗಿಯೂ ಲಾಕ್‌ಡೌನ್‌ನ ಸಮಯ, ನಾವು ಖಂಡಿತವಾಗಿಯೂ ನಮ್ಮ ಮನೆಗಳಲ್ಲೇ ಇದ್ದೇವೆ. ಆದರೆ ಯಾರೂ ಒಂಟಿಯಾಗಿಲ್ಲ. 130 ಕೋಟಿ ಭಾರತೀಯರ ಸಾಮೂಹಿಕ ಶಕ್ತಿ ನಮ್ಮೆಲ್ಲರಲ್ಲೂ ಇದೆ. ನಮ್ಮ ದೇಶವಾಸಿಗಳಿಗೆ, ಕಾಲಕಾಲಕ್ಕೆ, ಈ ಸಾಮೂಹಿಕ ಶಕ್ತಿಯ ಹಿರಿಮೆ, ಗಾಂಭೀರ್ಯ ಮತ್ತು ದೈವತ್ವವನ್ನು ಅನುಭವಿಸುವುದು ಅಗತ್ಯವಾಗಿರುತ್ತದೆ.
ಸ್ನೇಹಿತರೇ, ನಮ್ಮ ದೇಶದಲ್ಲಿ ಜನತೆಯನ್ನು ದೇವರ ಪ್ರತಿರೂಪ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ರಾಷ್ಟ್ರವು ಇಷ್ಟು ದೊಡ್ಡ ಯುದ್ಧವನ್ನು ನಡೆಸುತ್ತಿರುವಾಗ, ಕಾಲಕಾಲಕ್ಕೆ ಈ ಸಾಮೂಹಿಕ ಸೂಪರ್ ಪವರ್ ಜನರ ರೂಪದಲ್ಲಿ ಪ್ರಕಟವಾಗುತ್ತಲೇ ಇರಬೇಕು. ಈ ಅನುಭವವು ನಮ್ಮ ಸ್ಥೈರ್ಯವನ್ನು ಹೆಚ್ಚಿಸುತ್ತದೆ, ನಮಗೆ ಸಾಮಾನ್ಯ ಗುರಿ, ಅದನ್ನು ಮುಂದುವರಿಸುವ ಶಕ್ತಿ, ನಿರ್ದೇಶನ ಮತ್ತು ಸ್ಪಷ್ಟತೆಯನ್ನು ನೀಡುತ್ತದೆ, 
ಸ್ನೇಹಿತರೇ, ಕೊರೊನಾ ಸಾಂಕ್ರಾಮಿಕದಿಂದ ಕವಿದಿರುವ ಕತ್ತಲೆಯ ನಡುವೆಯೂ, ನಾವು ನಿರಂತರವಾಗಿ ಬೆಳಕು ಮತ್ತು ಭರವಸೆಯತ್ತ ಸಾಗಬೇಕು. ಹೆಚ್ಚು ತೊಂದರೆಗೊಳಗಾಗಿರುವ ನಮ್ಮ ಬಡ ಸಹೋದರ ಸಹೋದರಿಯರನ್ನು ನಿರಾಶೆಯಿಂದ ಭರವಸೆಯತ್ತ ಕೊಂಡೊಯ್ಯಲು ನಾವು ನಿರಂತರವಾಗಿ ಪ್ರಯತ್ನಿಸಬೇಕು. ಬೆಳಕು ಮತ್ತು ನಿಶ್ಚಿತತೆಯತ್ತ ಸಾಗುವ ಮೂಲಕ ಕತ್ತಲೆ ಮತ್ತು ಅನಿಶ್ಚಿತತೆಯನ್ನು ನಾವು ಕೊನೆಗೊಳಿಸಬೇಕು. ನಾಲ್ಕು ದಿಕ್ಕುಗಳಲ್ಲಿಯೂ ಬೆಳಕಿನ ವೈಭವವನ್ನು ಪಸರಿಸುವ ಮೂಲಕ ನಾವು ಬಿಕ್ಕಟ್ಟಿನ ಗಾಢ ಕತ್ತಲೆಯನ್ನು ಸೋಲಿಸಬೇಕು.
ಅದಕ್ಕಾಗಿಯೇ, ಈ ಭಾನುವಾರ, ಏಪ್ರಿಲ್ 5 ರಂದು, ನಾವೆಲ್ಲರೂ ಒಟ್ಟಾಗಿ, ಕೊರೊನಾ ಬಿಕ್ಕಟ್ಟಿನಿಂದ ಕವಿದಿರುವ ಕತ್ತಲೆಯನ್ನು ಬೆಳಕಿನ ಶಕ್ತಿಯಿಂದ ಓಡಿಸಬೇಕು. ಈ ಏಪ್ರಿಲ್ 5 ರಂದು ನಾವು 130 ಕೋಟಿ ಭಾರತೀಯರ ಮಹಾಶಕ್ತಿಯನ್ನು ಜಾಗೃತಗೊಳಿಸಬೇಕು. 130 ಕೋಟಿ ಭಾರತೀಯರ ಸೂಪರ್ ಸಂಕಲ್ಪವನ್ನು ನಾವು ಇನ್ನೂ ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಬೇಕು.
ಏಪ್ರಿಲ್ 5 ರ ಭಾನುವಾರದಂದು ನಾನು ನಿಮ್ಮೆಲ್ಲರಿಂದ 9 ನಿಮಿಷಗಳನ್ನು ಕೇಳುತ್ತಿದ್ದೇನೆ. ರಾತ್ರಿ 9 ಗಂಟೆಗೆ ಎಚ್ಚರಿಕೆಯಿಂದ ಕೇಳಿಸಿಕೊಳ್ಳಿ, ಏಪ್ರಿಲ್ 5 ರಂದು ರಾತ್ರಿ 9 ಗಂಟೆಗೆ, ನಿಮ್ಮ ಮನೆಗಳ ಎಲ್ಲಾ ಲೈಟ್ ಗಳನ್ನು ಆಫ್ ಮಾಡಿ, ಬಾಗಿಲು ಅಥವಾ ಬಾಲ್ಕನಿಗಳಲ್ಲಿ ನಿಂತು 9 ನಿಮಿಷಗಳ ಕಾಲ ಮೇಣದ ಬತ್ತಿಗಳು ಅಥವಾ ದೀಪಗಳು, ಟಾರ್ಚ್‌ಗಳು ಅಥವಾ ಮೊಬೈಲ್ ದೀಪಗಳನ್ನು ಬೆಳಗಿಸಿ. ನಾನು ಮತ್ತೊಮ್ಮೆ ಹೇಳುತ್ತಿದ್ದೇನೆ, ಏಪ್ರಿಲ್ 5 ರಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಮೇಣದ ಬತ್ತಿಗಳು ಅಥವಾ ದೀಪಗಳು, ಟಾರ್ಚ್‌ಗಳು ಅಥವಾ ಮೊಬೈಲ್ ದೀಪಗಳನ್ನು ಬೆಳಗಿಸಿ. 
ಆ ಸಮಯದಲ್ಲಿ, ನಿಮ್ಮ ಮನೆಗಳ ಎಲ್ಲಾ ಲೈಟ್ ಗಳನ್ನು ನೀವು ಆಫ್ ಮಾಡಿದರೆ, ಪ್ರತಿಯೊಬ್ಬರೂ ಪ್ರತಿಯೊಂದು ದಿಕ್ಕುಗಳಲ್ಲಿಯೂ ದೀಪಗಳನ್ನು ಬೆಳಗಿಸಿದರೆ; ನಾವೆಲ್ಲರೂ ಹೋರಾಡುತ್ತಿರುವ ಸಾಮಾನ್ಯ ಉದ್ದೇಶವನ್ನು ಸ್ಪಷ್ಟವಾಗಿ ಬೆಳಗಿಸುವ ಮೂಲಕ ನಾವು ಬೆಳಕಿನ ಮಹಾಶಕ್ತಿಯನ್ನು ಅನುಭವಿಸುತ್ತೇವೆ. ಆ ಬೆಳಕಿನಲ್ಲಿ, ಆ ಹೊಳಪಿನಲ್ಲಿ, ಆ ಕಾಂತಿಯಲ್ಲಿ, ನಾವು ಒಂಟಿಯಲ್ಲ, ಯಾರೂ ಒಬ್ಬಂಟಿಯಾಗಿಲ್ಲ ಎಂದು ನಮ್ಮ ಮನಸ್ಸಿನಲ್ಲಿ ಸಂಕಲ್ಪ ಮಾಡೋಣ. 130 ಕೋಟಿ ಭಾರತೀಯರು ಈ ಸಾಮಾನ್ಯ ಸಂಕಲ್ಪಕ್ಕೆ ಬದ್ಧರಾಗಿದ್ದಾರೆ ಎಂಬುದನ್ನು ತೋರಿಸೊಣ.
ಸ್ನೇಹಿತರೇ, ಈ ವಿಷಯದಲ್ಲಿ ನನ್ನದು ಇನ್ನೂ ಒಂದು ಕೋರಿಕೆ ಇದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವಾಗ ಯಾರೂ ಎಲ್ಲಿಯೂ ಒಟ್ಟುಗೂಡಬಾರದು. ದಯವಿಟ್ಟು ರಸ್ತೆಗಳು, ಗಲ್ಲಿಗಳಿಗೆ ಇಳಿಯಬೇಡಿ. ನಿಮ್ಮ ಸ್ವಂತ ಮನೆಯಮನೆ ಬಾಗಿಲಲ್ಲಿ ಅಥವಾ ಬಾಲ್ಕನಿಗಳಲ್ಲಿ ಮಾಡಿ. ಸಾಮಾಜಿಕ ಅಂತರದ ‘ಲಕ್ಷ್ಮಣ ರೇಖೆ’ ಯನ್ನು ಎಂದಿಗೂ ದಾಟಬಾರದು. ಸಾಮಾಜಿಕ ಅಂತರವನ್ನು ಯಾವುದೇ ಪರಿಸ್ಥಿತಿಯಲ್ಲೂ ಉಲ್ಲಂಘಿಸಬಾರದು. ಕೊರೊನಾ ವೈರಸ್ ಸರಪಳಿಯನ್ನು ಮುರಿಯುವ ಏಕೈಕ ರಾಮಬಾಣ ಸಾಮಾಜಿಕ ಅಂತರ. 
ಆದ್ದರಿಂದ, ಏಪ್ರಿಲ್ 5 ರಂದು ರಾತ್ರಿ 9 ಗಂಟೆಗೆ. ಸ್ವಲ್ಪ ಸಮಯದವರೆಗೆ ಏಕಾಂತದಲ್ಲಿ ಕುಳಿತು ಭಾರತ ಮಾತೆಯನ್ನು ಸ್ಮರಿಸಿಕೊಳ್ಳಿ. 130 ಕೋಟಿ ಭಾರತೀಯರ ಮುಖಗಳನ್ನು ಚಿತ್ರಿಸಿಕೊಳ್ಳಿ. 130 ಕೋಟಿ ಭಾರತೀಯರ ಸಾಮೂಹಿಕ ಮಹಾಶಕ್ತಿ, ಸಾಮೂಹಿಕ ಸಂಕಲ್ಪವನ್ನು ಅನುಭವಿಸಿ. ಬಿಕ್ಕಟ್ಟಿನ ಈ ಸಂದರ್ಭಲ್ಲಿ ಇದು ನಮಗೆ ಹೋರಾಡುವ ಶಕ್ತಿಯನ್ನು ನೀಡುತ್ತದೆ, ಜೊತೆಗೆ ಗೆಲ್ಲುವ ಆತ್ಮವಿಶ್ವಾಸವನ್ನೂ ನೀಡುತ್ತದೆ.

ಇಲ್ಲಿ ಅದನ್ನೇ ಹೇಳಲಾಗಿದೆ –
ಉತ್ಸಾಹೊ ಬಲ್ವಾನ್ ಆರ್ಯ,
ನಾ ಅಸ್ತಿ ಉತ್ಸಾಹ್ ಪರಂ ಬಲಂ |
ಸಹ ಉತ್ಸಾಹಸಾಯ ಲೋಕೇಶು,
ನಾ ಕಿಂಚಿತ್ ಅಪಿ ದುರ್ಲಭಮ್ || 

ಇದರ ಅರ್ಥ, ನಮ್ಮ ಉತ್ಸಾಹ ಮತ್ತು ನಮ್ಮ ಚೈತನ್ಯಕ್ಕಿಂತ ದೊಡ್ಡ ಶಕ್ತಿ ಜಗತ್ತಿನಲ್ಲಿ ಇಲ್ಲ. ಈ ಶಕ್ತಿಯ ಆಧಾರದ ಮೇಲೆ ನಾವು ಸಾಧಿಸಲು  ಅಸಾಧ್ಯವಾದ್ದು ಜಗತ್ತಿನಲ್ಲಿ ಯಾವುದೂ ಇಲ್ಲ.
ಬನ್ನಿ, ನಾವು ಒಟ್ಟಾಗಿ ಈ ಕೊರೊನಾವೈರಸ್ ಅನ್ನು ಜೊತೆಯಾಗಿ ಸೋಲಿಸೋಣ ಮತ್ತು ಭಾರತವನ್ನು ವಿಜಯಶಾಲಿಯಾಗಿಸೋಣ.
ಧನ್ಯವಾದಗಳು.

***



(Release ID: 1610580) Visitor Counter : 250