ಆಯುಷ್

ಕೋವಿಡ್ –19 ಸಂದಿಗ್ಧ ಪರಿಸ್ಥಿತಿಯಲ್ಲಿ ಸ್ವಯಂ ಸಂರಕ್ಷಣೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಕ್ರಮಗಳು 

Posted On: 31 MAR 2020 2:31PM by PIB Bengaluru

ಕೋವಿಡ್ –19 ಸಂದಿಗ್ಧ ಪರಿಸ್ಥಿತಿಯಲ್ಲಿ ಸ್ವಯಂ ಸಂರಕ್ಷಣೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಕ್ರಮಗಳು 

 

ಕೋವಿಡ್ – 19 ಸ್ಫೋಟದ ಹಿನ್ನೆಲೆಯಲ್ಲಿ ವಿಶ್ವದ ಸಂಪೂರ್ಣ ಮಾನವ ಕುಲವೇ ಬಳಲುತ್ತಿದೆ. ದೇಹದ ನೈಸರ್ಗಿಕ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳುವಲ್ಲಿ ಬಹು ಮುಖ್ಯ ಪಾತ್ರವಹಿಸುತ್ತದೆ. ರೋಗ ಗುಣಪಡಿಸುವುದಕ್ಕಿಂತ ಅದನ್ನು ತಡೆಗಟ್ಟುವುದು ಮೇಲು ಎಂದು ನಮಗೆಲ್ಲರಿಗೂ ತಿಳಿದಿದೆ. ಸದ್ಯಕ್ಕೆ  
ಕೋವಿಡ್ – 19 ಗೆ ಯಾವುದೇ ಔಷಧಿ ಇಲ್ಲ, ಇಂಥ ಸಮಯದಲ್ಲಿ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವಂಥ ನಿರೋಧಕ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ. 
ಆಯುರ್ವೇದವು ಜೀವನ ವಿಜ್ಞಾನವಾಗಿರುವುದರಿಂದ ಆರೋಗ್ಯಕರ ಮತ್ತು ಸಂತಸದ ಜೀವನ ನಿರ್ವಹಣೆಗೆ ಪ್ರಕೃತಿಯ ಕೊಡುಗೆಯನ್ನು ತಿಳಿಸುತ್ತದೆ. ಆಯುರ್ವೇದದ ವ್ಯಾಪಕ ಜ್ಞಾನದಿಂದಾಯ್ದ “ದಿನಚರ್ಯ” - ದೈನಂದಿನ ಪಾಲನೆಗಳು ಮತ್ತು “ಋತುಚರ್ಯ” – ಋತುಕಾಲಿಕ ಪಾಲನೆಗಳ ಪರಿಕಲ್ಪನೆಗಳಿಂದ ಉತ್ತಮ ಆರೋಗ್ಯ ನಿರ್ವಹಣೆಗೆ ರೋಗ ತಡೆಯ ಕುರಿತಾದ ಮಾಹಿತಿಯಿದೆ. ಇದೊಂದು ಸಸ್ಯಾಧಾರಿತ ವಿಜ್ಞಾನವಾಗಿದೆ. ತನ್ನ ಬಗ್ಗೆ ಸರಳ ರೀತಿಯಲ್ಲಿ ಜಾಗೃತಿವಹಿಸಿಕೊಳ್ಳುವ ಕುರಿತು ಮತ್ತು ಪ್ರತಿಯೊಬ್ಬ ವ್ಯಕ್ತಿಯೂ ಅವಳ ಅಥವಾ ಅವನ ಪ್ರತಿರಕ್ಷೆಯನ್ನು ವೃದ್ಧಿಸಿಕೊಳ್ಳುವ ಮೂಲಕ ಹಾಗೂ ಅದನ್ನು ಕಾಪಾಡಿಕೊಳ್ಳುವ ಮೂಲಕ ಸಾಮರಸ್ಯವನ್ನು ಸಾಧಿಸಬಹುದು ಎಂದು ಆಯುರ್ವೇದದ ಶಾಸ್ತ್ರೀಯ ಗ್ರಂಥಗಳಲ್ಲಿ ಒತ್ತಿ ಹೇಳಲಾಗಿದೆ.         

ಆಯುಷ್ ಸಚಿವಾಲಯವು ವಿಶೇಷವಾಗಿ ಶ್ವಾಸ ಸಂಬಂಧಿ ಆರೋಗ್ಯಕ್ಕೆ ಸಂಬಂಧಿಸಿದಂತೆ ರೋಗ ನಿರೋಧಕ ಕ್ರಮಗಳು ಮತ್ತು  ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳುವ ಕುರಿತು ಸ್ವಯಂ ರಕ್ಷಣೆಯ ಈ ಕೆಳಗಿನ ನಿರ್ದೇಶನಗಳನ್ನು ಶಿಫಾರಸ್ಸು ಮಾಡಿದೆ. ಆಯುರ್ವೇದದ ಶಾಸ್ತ್ರೀಯ ಗ್ರಂಥ ಮತ್ತು ವೈಜ್ಞಾನಿಕ ಪ್ರಕಟಣೆಗಳ ಮೂಲಕ ಸಮರ್ಥಿಸಲಾಗಿದೆ. 
ಸಾಮಾನ್ಯ ಕ್ರಮಗಳು 
ದಿನಪೂರ್ತಿ ಬಿಸಿ ನೀರನ್ನು ಕುಡಿಯಿರಿ.
ಆಯುಷ್ ಸಚಿವಾಲಯ (#YOGAatHome #StayHome #StaySafe) ನಿರ್ದೇಶನದಂತೆ ಪ್ರತಿದಿನ ಕನಿಷ್ಠ 30 ನಿಮಿಷಗಳವರೆಗೆ  ಯೋಗಾಸನ, ಪ್ರಾಣಾಯಾಮ ಮತ್ತು ಧ್ಯಾನ ಅಭ್ಯಸಿಸಬೇಕು. 
ಅರಿಶಿಣ, ಜೀರಿಗೆ, ಹವೀಜು ಮತ್ತು ಬೆಳ್ಳುಳ್ಳಿಯಂಥ ಸಾಂಬಾರ್ ಪದಾರ್ಥಗಳನ್ನು ಅಡುಗೆ ಮಾಡುವಾಗ ಬಳಸುವುದಕ್ಕೆ ಶಿಫಾರಸ್ಸು.
ರೋಗ ನಿರೋಧಕತೆ ಹೆಚ್ಚಿಸಲು ಆಯುರ್ವೇದೀಯ ಕ್ರಮಗಳು

ಬೆಳಿಗ್ಗೆ 10 ಗ್ರಾಂ ಗಳಷ್ಟು ಚ್ಯವನ್ ಪ್ರಾಶ್ (ಲೇಹ್ಯ) ಸೇವಿಸಿ. ಮಧುಮೇಹವಿರುವವರು ಸಕ್ಕರೆರಹಿತ ಚ್ಯವನ್ ಪ್ರಾಶ್ ಸೇವಿಸಬೇಕು.
ತುಳಸಿ, ಚಕ್ಕೆ, ಮೆಣಸು, ಶುಂಠಿ ಮತ್ತು ಒಣ ದ್ರಾಕ್ಷಿ ಹಾಕಿ ಮಾಡಿದ ಗಿಡಮೂಲಿಕೆಗಳ ಚಹಾ / ಕಷಾಯವನ್ನು ದಿನಕ್ಕೆ ಒಮ್ಮೆ ಅಥವಾ 2 ಬಾರಿ ಕುಡಿಯಬೇಕು. ಅವಶ್ಯವೆನಿಸಿದಲ್ಲಿ ರುಚಿಗಾಗಿ ಬೆಲ್ಲ ಮತ್ತು/ ಅಥವಾ ನಿಂಬೆರಸವನ್ನು ಸೇರಿಸಬಹುದು.     
ಚಿನ್ನದ ಕ್ಷೀರ – 150 ಎಂ ಎಲ್ ಬಿಸಿ ಹಾಲಿಗೆ ಅರ್ಧ ಚಮಚದಷ್ಟು ಅರಿಶಿಣ ಪುಡಿ ಬೆರೆಸಿ ದಿನಕ್ಕೆ ಒಮ್ಮೆ ಅಥವಾ 2 ಬಾರಿ ಕುಡಿಯಬೇಕು.
ಸರಳ ಆಯುರ್ವೇದೀಯ ಪ್ರಕ್ರಿಯೆಗಳು

ನಾಸಿಕ ಅನುಲೇಪನ – ಮೂಗಿನ ಎರಡೂ ಹೊಳ್ಳೆಗಳಿಗೆ  ಪ್ರತಿದಿನ ಬೆಳಿಗ್ಗೆ ಮತ್ತು ಸಾಯಂಕಾಲ ಎಳ್ಳೆಣ್ಣೆ / ತೆಂಗಿನ ಎಣ್ಣೆ ಅಥವಾ ತುಪ್ಪವನ್ನು ಲೇಪಿಸಿ. 
ಆಯಿಲ್ ಪುಲ್ಲಿಂಗ್ ಚಿಕಿತ್ಸೆ : ಒಂದು ಚಮಚ ಎಳ್ಳೆಣ್ಣೆ / ತೆಂಗಿನ ಎಣ್ಣೆಯನ್ನು ಬಾಯಲ್ಲಿಟ್ಟುಕೊಂಡು 2-3 ನಿಮಿಷಗಳವರೆಗೆ ಬಾಯಿ ಮುಕ್ಕಳಿಸಬೇಕು ನಂತರ ಉಗಿಯಬೇಕು ತದನಂತರ ಬಿಸಿ ನೀರಿನಿಂದ ಬಾಯಿ ತೊಳೆಯಬೇಕು. ಎಣ್ಣೆಯನ್ನು ಕುಡಿಯಬಾರದು.ಈ ಕ್ರಮವನ್ನು ದಿನಕ್ಕೆ ಒಮ್ಮೆ ಅಥವಾ 2 ಬಾರಿ ಮಾಡಬಹುದು. 
ಒಣ ಕೆಮ್ಮು/ ಗಂಟಲು ಕೆರೆತವಿದ್ದಲ್ಲಿ

ದಿನಕ್ಕೆ ಒಮ್ಮೆ ಅಥವಾ 2 ಬಾರಿ ತಾಜಾ ಪುದೀನಾ ಎಲೆಗಳು ಅಥವಾ ಓಂ ಕಾಳು ಬೆರೆಸಿದ ನೀರಿನ ಹಬೆಯ ಇನ್ ಹೆಲೇಶನ್ ತೆಗೆದುಕೊಳ್ಳಿ    
ಕೆಮ್ಮು ಅಥವಾ ಗಂಟಲು ಕೆರೆತವಿದ್ದಲ್ಲಿ ದಿನಕ್ಕೆ 2-3 ಬಾರಿ ಸಕ್ಕರೆ/ ಜೇನಿನೊಂದಿಗೆ ಲವಂಗದ ಪುಡಿ ಬೆರೆಸಿ ಸೇವಿಸಿ. 
ಈ ಕ್ರಮಗಳು ಸಾಮಾನ್ಯವಾಗಿ ಒಣ ಕೆಮ್ಮು ಮತ್ತು ಗಂಟಲು ಕೆರೆತಕ್ಕೆ ಉಪಶಮನವಾಗಿವೆ. ಆದರೆ ಈ ಲಕ್ಷಣಗಳು ಮುಂದುವರಿದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. 
ಅವರವರ ಅನುಕೂಲಕ್ಕೆ ತಕ್ಕಂತೆ ಈ ಮೇಲಿನ ಕ್ರಮಗಳನ್ನು ಸಾಧ್ಯವಾದಷ್ಟು ಅನುಸರಿಸಬಹುದಾಗಿದೆ. ಸೋಂಕಿನ ವಿರುದ್ಧ ವೈಯಕ್ತಿಕ ರೋಗ ನಿರೋಧಕ ಶಕ್ತಿ ವೃದ್ಧಿಸಬಹುದಾದಂತಹ ಈ ಕ್ರಮಗಳನ್ನು ದೇಶಾದ್ಯಂತದಿಂದ ಪರಿಣಿತ ವೈದ್ಯರು ಶಿಫಾರಸ್ಸು ಮಾಡಿದ್ದಾರೆ.  ಅವರು ಕೋಯಂಬತ್ತೂರಿನ ಪದ್ಮಶ್ರೀ ವೈದ್ಯ ಪಿ ಆರ್ ಕೃಷ್ಣಕುಮಾರ್, ಪದ್ಮಭೂಷಣ ಪುರಸ್ಕೃತ ದೆಹಲಿಯ ವೈದ್ಯ ದೇವೇಂದ್ರ ತ್ರಿಗುಣ, ಕೋಟಕ್ಕಲ್ ನ ವೈದ್ಯ ಪಿ ಎಂ ವಾರಿಯರ್, ನಾಗ್ಪುರದ ವೈದ್ಯ ಜಯಂತ್ ದೇವ್ ಪೂಜಾರಿ, ಠಾಣೆಯ ವೈದ್ಯ ವಿನಯ್ ವೇಲಾಂಕರ್, ಬೆಳಗಾವಿಯ ವೈದ್ಯ ಬಿ ಎಸ್ ಪ್ರಸಾದ್, ಜಾಂ ನಗರದ ಪದ್ಮಶ್ರೀ ಪುರಸ್ಕೃತರು ವೈದ್ಯ ಗುರುದೀಪ್ ಸಿಂಗ್, ಹರಿದ್ವಾರದ ಆಚಾರ್ಯ ಬಾಲಕೃಷ್ಣಾ ಜಿ, ಜೈಪುರ್ ನ ವೈದ್ಯ ಎಂ ಎಸ್ ಬಘೇಲ್, ಹರ್ದೋಯಿ, ಉತ್ತರ ಪ್ರದೇಶದ ವೈದ್ಯ ಆರ್ ಬಿ ದ್ವಿವೇದಿ, ವಾರಣಾಸಿಯ ವೈದ್ಯ ಕೆ ಎನ್ ದ್ವಿವೇದಿ, ಚಂಡೀಗಢದ ವೈದ್ಯ ರಾಕೇಶ್ ಶರ್ಮಾ, ಕೋಲ್ಕತ್ತಾದ ವೈದ್ಯ ಅಭಿಚಲ್ ಚಟ್ಟೋಪಾಧ್ಯಾಯ, ದೆಹಲಿಯ ವೈದ್ಯ ತನುಜಾ ನೇಸರಿ, ಜೈಪುರ್ ನ ವೈದ್ಯ ಸಂಜೀವ್ ಶರ್ಮಾ, ಜಾಂ ನಗರದ ವೈದ್ಯ ಅನೂಪ್ ಠಾಕರ್.

ಡಿಸ್ಕ್ಲೇಮರ್ : ಈ ಮೇಲಿನ ಸಲಹೆಗಳು ಕೋವಿಡ್ – 19 ಗೆ ಚಿಕಿತ್ಸೆ ಎಂದು ಹೇಳಲಾಗದು. 

 

***(Release ID: 1609650) Visitor Counter : 435