ಪ್ರಧಾನ ಮಂತ್ರಿಯವರ ಕಛೇರಿ

ಸಾಮಾಜಿಕ ಕಲ್ಯಾಣ ಸಂಸ್ಥೆಗಳೊಂದಿಗೆ ಪ್ರಧಾನಿ ಸಂವಾದ

Posted On: 30 MAR 2020 3:15PM by PIB Bengaluru

ಸಾಮಾಜಿಕ ಕಲ್ಯಾಣ ಸಂಸ್ಥೆಗಳೊಂದಿಗೆ ಪ್ರಧಾನಿ ಸಂವಾದ

ಮಾನವೀಯತೆಗೆ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳ ಸಮರ್ಪಣಾ ಮನೋಭಾವ ಮತ್ತು ಬದ್ಧತೆಯನ್ನು ಪ್ರಧಾನಿಯವರು ಶ್ಲಾಘಿಸಿದ್ದಾರೆ
ಬಡವರಿಗೆ ಮತ್ತು ನಿರ್ಗತಿಕರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುವುದನ್ನು ಮುಂದುವರಿಸುವಂತೆ ಸಂಸ್ಥೆಗಳಿಗೆ ಸಲಹೆ ನೀಡಿದ್ದಾರೆ
COVID-19 ಸವಾಲನ್ನು ಜಯಿಸಲು ಅಲ್ಪಾವಧಿಯ ಕ್ರಮಗಳು ಮತ್ತು ದೀರ್ಘಕಾಲೀನ ದೃಷ್ಟಿ ಎರಡೂ ಅಗತ್ಯವಿದೆ
ಇಡೀ ರಾಷ್ಟ್ರವು ಸವಾಲನ್ನು ಎದುರಿಸುವಲ್ಲಿ ಅಪಾರ ದಿಟ್ಟತನ ಮತ್ತು ತಾಳ್ಮೆಯನ್ನು ಪ್ರದರ್ಶಿಸುತ್ತಿದೆ: ಪ್ರಧಾನಿ


ದಕ್ಷತೆಯೊಂದಿಗೆ ಸಂಕೀರ್ಣ ಪರಿಸ್ಥಿತಿಯನ್ನು ನಿಭಾಯಿಸುತ್ತಿರುವ  ಪ್ರಧಾನ ಮಂತ್ರಿಯವರ ನಾಯಕತ್ವವನ್ನು ಸಾಮಾಜಿಕ ಕಲ್ಯಾಣ ಸಂಸ್ಥೆಗಳ ಪ್ರತಿನಿಧಿಗಳು ಶ್ಲಾಘಿಸಿದ್ದಾರೆ

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಾಮಾಜಿಕ ಕಲ್ಯಾಣ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು.

COVID-19 ರ ಸವಾಲನ್ನು ಎದುರಿಸುವಲ್ಲಿ ಇಡೀ ರಾಷ್ಟ್ರವು ಅಪಾರ ದಿಟ್ಟತನ ಮತ್ತು ತಾಳ್ಮೆಯನ್ನು ಪ್ರದರ್ಶಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ಮಹಾತ್ಮ ಗಾಂಧಿಯವರು ಬಡವರಿಗೆ ಮತ್ತು ದೀನ ದಲಿತರಿಗೆ ಸೇವೆ ಸಲ್ಲಿಸುವುದು ರಾಷ್ಟ್ರ ಸೇವೆಗೆ ಉತ್ತಮ ಮಾರ್ಗವಾಗಿದೆ ಎಂದು ಹೇಳಿದ್ದನ್ನು ನೆನಪಿಸಿಕೊಂಡ ಅವರು, ಮಾನವೀಯತೆಯ ಸೇವೆ ಮಾಡುತ್ತಿರುವ ಸಂಘಟನೆಗಳ ಸಮರ್ಪಣೆ ಮತ್ತು ಬದ್ಧತೆಯನ್ನು ಶ್ಲಾಘಿಸಿದರು.
ಈ ಸಂಸ್ಥೆಗಳು ಮಾನವೀಯ ವಿಧಾನ, ಜನರೊಂದಿಗೆ ದೊಡ್ಡ ಪ್ರಮಾಣದ ವ್ಯಾಪ್ತಿ ಮತ್ತು ಸಂಪರ್ಕ ಹಾಗೂ ಸೇವಾ ಮನೋಭಾವದ ಮೂರು ವಿಭಿನ್ನ ವಿಶೇಷತೆಗಳನ್ನು ಹೊಂದಿವೆ ಎಂದು ಪ್ರಧಾನ ಮಂತ್ರಿಯವರು ಹೇಳಿದರು. ಈ ಕಾರಣದಿಂದಾಗಿಯೇ ಅವುಗಳ ಮೇಲೆ ಅಪಾರ ನಂಬಿಕೆಯಿದೆ. ರಾಷ್ಟ್ರವು ಕೇಳರಿಯದ ಬಿಕ್ಕಟ್ಟನ್ನು ಎದುರಿಸುತ್ತಿದೆ ಮತ್ತು ಈ ಸಂಸ್ಥೆಗಳ ಸೇವೆ ಮತ್ತು ಅವರ ಸಂಪನ್ಮೂಲಗಳು ಹಿಂದೆಂದಿಗಿಂತಲೂ ಈಗ ಹೆಚ್ಚು ಅಗತ್ಯವಾಗಿದೆ ಎಂದು ಅವರು ಹೇಳಿದರು. ಬಡವರಿಗೆ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವಲ್ಲಿ ಸಂಸ್ಥೆಗಳು ದೊಡ್ಡ ಪಾತ್ರವನ್ನು ವಹಿಸಬಲ್ಲವು ಮತ್ತು ತಮ್ಮ ವೈದ್ಯಕೀಯ ಸೌಲಭ್ಯಗಳನ್ನು ಮತ್ತು ಸ್ವಯಂಸೇವಕರನ್ನು ರೋಗಿಗಳಿಗೆ ಮತ್ತು ನಿರ್ಗತಿಕರಿಗೆ ಸೇವೆ ಸಲ್ಲಿಸಲು ಅರ್ಪಿಸಬಹುದು ಎಂದು ಅವರು ಸಲಹೆ ನೀಡಿದರು. ಸವಾಲನ್ನು ಜಯಿಸಲು ರಾಷ್ಟ್ರಕ್ಕೆ ಅಲ್ಪಾವಧಿಯ ಕ್ರಮಗಳು ಮತ್ತು ದೀರ್ಘಕಾಲೀನ ದೃಷ್ಟಿ ಎರಡೂ ಅಗತ್ಯವಿದೆ ಎಂದು ಪ್ರಧಾನಿ ತಿಳಿಸಿದರು.
ಮೂಢನಂಬಿಕೆಗಳು, ನಂಬಿಕೆಗಳು ಮತ್ತು ತಪ್ಪು ಮಾಹಿತಿ ಹರಡುವುದನ್ನು ಎದುರಿಸುವಲ್ಲಿ ಈ ಸಂಸ್ಥೆಗಳಿಗೆ ದೊಡ್ಡ ಪಾತ್ರವಿದೆ ಎಂದು ಪ್ರಧಾನಿ ಹೇಳಿದರು. ನಂಬಿಕೆಗಳ ಹೆಸರಿನಲ್ಲಿ ಜನರು ಸ್ಥಳಗಳಲ್ಲಿ ಒಟ್ಟುಗೂಡುತ್ತಾರೆ ಮತ್ತು ಸಾಮಾಜಿಕ ಅಂತರದ ನಿಯಮಗಳನ್ನು ಮೀರುತ್ತಿದ್ದಾರೆ ಎಂದು ಅವರು ಹೇಳಿದರು. ವೈರಸ್ ಹರಡುವುದನ್ನು ತಡೆಯಲು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕಾದ ಮಹತ್ವವನ್ನು ಮತ್ತಷ್ಟು ತಿಳಿಸುವುದು ಅವಶ್ಯಕವಾಗಿದೆ ಎಂದರು.
ದಕ್ಷತೆಯೊಂದಿಗೆ ಸಂಕೀರ್ಣ ಪರಿಸ್ಥಿತಿಯನ್ನು ನಿಭಾಯಿಸುತ್ತಿರುವ ಪ್ರಧಾನ ಮಂತ್ರಿಯವರ ನಾಯಕತ್ವವನ್ನು ಸಾಮಾಜಿಕ ಕಲ್ಯಾಣ ಸಂಸ್ಥೆಗಳ ಪ್ರತಿನಿಧಿಗಳು ಶ್ಲಾಘಿಸಿದರು. ವೈರಸ್ ಹರಡುವುದನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾದ ಸರ್ಕಾರದ ಸಕ್ರಿಯ ಕ್ರಮಗಳನ್ನು ಅವರು ಶ್ಲಾಘಿಸಿದರು. ಅವರು PM-CARES ನಿಧಿಗೆ ಬೆಂಬಲವನ್ನು ಘೋಷಿಸಿದರು. ಈ ಬಿಕ್ಕಟ್ಟಿನ ಸಮಯದಲ್ಲಿ ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಉದ್ದೇಶಕ್ಕಾಗಿ ತಮ್ಮ ಕಾರ್ಯಪಡೆಯು ಸಂಪೂರ್ಣವಾಗಿ ಸಮರ್ಪಿಸಲ್ಪಡುತ್ತದೆ ಎಂದು ಹೇಳಿದರು. ಡಿಜಿಟಲ್ ವಿಧಾನಗಳು, ಅಗತ್ಯ ವಸ್ತುಗಳ ವಿತರಣೆ, ಆಹಾರ ಪ್ಯಾಕೆಟ್‌ಗಳು, ಸ್ಯಾನಿಟೈಜರ್‌ಗಳು, ಔಷಧಿಗಳು ಮತ್ತು ಅಗತ್ಯವಿರುವವರಿಗೆ ವೈದ್ಯಕೀಯ ಸಹಾಯವನ್ನು ಒದಗಿಸುವ ಮೂಲಕ ಜಾಗೃತಿ ಅಭಿಯಾನದ ಮೂಲಕ ಸವಾಲನ್ನು ಎದುರಿಸಲು ತಾವು ಪ್ರಸ್ತುತ ಮಾಡುತ್ತಿರುವ ಕಾರ್ಯಗಳ ಬಗ್ಗೆಯೂ ಅವರು ಮಾತನಾಡಿದರು.
ಜಾಗೃತಿ ಮೂಡಿಸುವುದು, ಬಡವರಿಗೆ ಮತ್ತು ನಿರ್ಗತಿಕರಿಗೆ ಮೂಲಭೂತ ಅವಶ್ಯಕತೆಗಳನ್ನು ವ್ಯವಸ್ಥೆ ಮಾಡುವುದು, ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದು ಮತ್ತು COVID-19ರ ಸೋಂಕಿಗೆ ಒಳಗಾದವರಿಗೆ ಸೇವೆ ಸಲ್ಲಿಸುವ ಉದ್ದೇಶದಿಂದ ಸ್ವಯಂಸೇವಕರನ್ನು ಅರ್ಪಿಸುವ ಮಹತ್ವವನ್ನು ಪ್ರಧಾನಿ ಪುನರುಚ್ಚರಿಸಿದರು. ವೈದ್ಯಕೀಯ ಮತ್ತು ವೈಜ್ಞಾನಿಕ ಸಲಹೆಗಳನ್ನು ನೀಡುವ ಮತ್ತು ತಪ್ಪು ಮಾಹಿತಿಯನ್ನು ಎದುರಿಸುವ ಮಹತ್ವವನ್ನು ಹಾಗೂ ಸಾಂಕ್ರಾಮಿಕ ರೋಗದ ಸವಾಲನ್ನು ಎದುರಿಸಲು ಒಟ್ಟಾಗಿ ಕೆಲಸ ಮಾಡುವ ಅಗತ್ಯವನ್ನು ಪ್ರಧಾನಿ ಒತ್ತಿಹೇಳಿದರು.

ಪ್ರಧಾನ ಮಂತ್ರಿಯವರ ಸಲಹೆಗಾರರು ಮತ್ತು ನೀತಿ ಆಯೋಗದ ಸಿಇಒ ಸಂವಾದದಲ್ಲಿ ಭಾಗವಹಿಸಿದ್ದರು.


(Release ID: 1609296) Visitor Counter : 225