ಪ್ರಧಾನ ಮಂತ್ರಿಯವರ ಕಛೇರಿ

ಕೋವಿಡ್-19 ವಿರುದ್ಧದ ಭಾರತದ ಹೋರಾಟದ ಚುಕ್ಕಾಣಿ ಹಿಡಿದ ಪ್ರಧಾನಿ

Posted On: 29 MAR 2020 11:29AM by PIB Bengaluru

ಕೋವಿಡ್-19 ವಿರುದ್ಧದ ಭಾರತದ ಹೋರಾಟದ ಚುಕ್ಕಾಣಿ ಹಿಡಿದ ಪ್ರಧಾನಿ

ವಿವಿಧ ಪಾಲುದಾರರೊಂದಿಗೆ ಮುಂದುವರೆದ ಪ್ರಧಾನಮಂತ್ರಿಯವರ ಸಂವಾದಪ್ರತಿದಿನ 200 ಕ್ಕೂ ಹೆಚ್ಚು ಜನರೊಂದಿಗೆ ಸಂವಾದ

 

ಕೋವಿಡ್-19 ವಿರುದ್ಧದ ಭಾರತದ ಹೋರಾಟದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ವಿವಿಧ ಪಾಲುದಾರರೊಂದಿಗೆ ತಮ್ಮ ಸಂವಾದವನ್ನು ಮುಂದುವರೆಸಿದ್ದಾರೆ.

ಕೋವಿಡ್-19 ವಿರುದ್ಧ ಭಾರತದ ಹೋರಾಟದ ಬಗ್ಗೆ ಫೀಡ್ ಬ್ಯಾಕ್ ಪಡೆಯಲು ವಿವಿಧ ರಾಜ್ಯಪಾಲರು, ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರಿಗೆ ದೂರವಾಣಿ ಕರೆಗಳೂ ಸೇರಿದಂತೆ, ಪ್ರಧಾನಿಯವರು ಪ್ರತಿದಿನ 200 ಕ್ಕೂ ಹೆಚ್ಚು ಜನರೊಂದಿಗೆ ಸಂವಾದ ನಡೆಸುತ್ತಿದ್ದಾರೆ.

ದೇಶದ ವಿವಿಧ ಮೂಲೆಗಳ ಹಲವಾರು ವೈದ್ಯರು, ದಾದಿಯರು, ಆರೋಗ್ಯ ಕಾರ್ಯಕರ್ತರು ಮತ್ತು ನೈರ್ಮಲ್ಯ ಸಿಬ್ಬಂದಿಯನ್ನು ಪ್ರಧಾನಿಯವರು ದೂರವಾಣಿ ಮೂಲಕ ತಲುಪುತ್ತಿದ್ದಾರೆ.

ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ಶ್ರೀ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿವಿಧ ವರ್ಗದ ಜನರೊಂದಿಗೆ ಸಂವಾದ ನಡೆಸುತ್ತಿದ್ದಾರೆ.

ಶ್ರೀ ಮೋದಿಯವರು, ವಿವಿಧ ಎಲೆಕ್ಟ್ರಾನಿಕ್ ಮಾಧ್ಯಮಗಳ ಮುಖ್ಯಸ್ಥರೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚರ್ಚೆ ನಡೆಸಿದ್ದಾರೆ. ಅವರು ಮಾರ್ಚ್ 24 ರಂದು ವಿವಿಧ ಮುದ್ರಣ ಮಾಧ್ಯಮ ಗುಂಪುಗಳ ಮುಖ್ಯಸ್ಥರೊಂದಿಗೂ ಸಂವಾದ ನಡೆಸಿದರು.

ಮಾಧ್ಯಮಗಳು ಸಕಾರಾತ್ಮಕ ಸಂವಹನದ ಮೂಲಕ ನಿರಾಶಾವಾದ ಮತ್ತು ಭಯವನ್ನು ಎದುರಿಸಬೇಕೆಂದು ಎರಡೂ ಸಭೆಗಳಲ್ಲಿ ಪ್ರಧಾನಿ ಮನವಿ ಮಾಡಿದರು.

ಮಾರ್ಚ್ 27 ರಂದು ಪ್ರಧಾನಿಯವರು ವಿವಿಧ ರೇಡಿಯೋ ಜಾಕಿಗಳು ಮತ್ತು ಆಕಾಶವಾಣಿ ಉದ್ಘೋಷಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು.

"ರಾಷ್ಟ್ರೀಯ ಮಟ್ಟದಲ್ಲಿ ಸ್ಥಳೀಯ ಹೋರಾಟಗಾರರ ಕೊಡುಗೆಯನ್ನು ನಿರಂತರವಾಗಿ ಬಿತ್ತರಿಸಬೇಕು ಮತ್ತು ಅವರ ಆತ್ಮಸ್ಥೈರ್ಯವನ್ನು ಹೆಚ್ಚಿಸಬೇಕು" ಎಂದು ಅವರು ಹೇಳಿದರು.

ಕೊರೊನಾ ವೈರಸ್‌ನಿಂದ ಬಳಲುತ್ತಿರುವ ಕೆಲವರಿಗೆ ಮತ್ತು ಅದರಿಂದ ಚೇತರಿಸಿಕೊಂಡಿರುವ ಕೆಲವರಿಗೆ ಅವರ ಇತ್ತೀಚಿನ ಸ್ಥಿತಿಯ ಬಗ್ಗೆ ತಿಳಿಯಲು ಪ್ರಧಾನಿಯವರು ದೂರವಾಣಿ ಕರೆ ಮಾಡಿದ್ದರು.

ಶ್ರೀ ನರೇಂದ್ರ ಮೋದಿಯವರು 2020 ರ ಮಾರ್ಚ್ 25 ರಂದು ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ವಿಶೇಷ ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದರು, ಸಂಯಮ ಮತ್ತು ಸೂಕ್ಷ್ಮತೆಯಿಂದ ವೈರಸ್ ವಿರುದ್ಧ ಹೋರಾಡುವ ಅತ್ಯುತ್ತಮ ಅಭ್ಯಾಸಗಳಿಗೆ ಹೊಂದಿಕೊಳ್ಳುವಂತೆ ಅವರು ಜನರಿಗೆ ಸೂಚಿಸಿದರು.

ಆಗಿಂದಾಗ್ಗೆ ಸಂವಾದ ಮತ್ತು ಸಭೆಗಳು

ಕೋವಿಡ್-19 ರ ವಿರುದ್ಧ ಹೋರಾಟದ ಮಾರ್ಗಗಳನ್ನು ಕಂಡುಕೊಳ್ಳುವ ಸಲುವಾಗಿ ಜನವರಿಯಿಂದ ಪ್ರಧಾನಿ ಶ್ರೀ ಮೋದಿ ಅವರು ವಿವಿಧ ಹಂತದ ಜನರು ಮತ್ತು ಅಧಿಕಾರಿಗಳೊಂದಿಗೆ ಹಲವಾರು ಸುತ್ತಿನ ಸಭೆ ಮತ್ತು ಚರ್ಚೆಗಳನ್ನು ನಡೆಸಿದ್ದಾರೆ.

ಪ್ರಧಾನ ಮಂತ್ರಿಯವರು ಪ್ರತಿದಿನವೂ ಸಭೆಗಳನ್ನು ನಡೆಸುತ್ತಿದ್ದಾರೆ, ಸಂಪುಟ ಕಾರ್ಯದರ್ಶಿ ಮತ್ತು ಪ್ರಧಾನ ಮಂತ್ರಿ ಕಚೇರಿಯ ಪ್ರಧಾನ ಕಾರ್ಯದರ್ಶಿಯವರು ನಿಯಮಿತವಾಗಿ ಪ್ರಧಾನಿಯವರಿಗೆ ಇತ್ತೀಚಿನ ವಿವರಗಳನ್ನು ನೀಡುತ್ತಾರೆ.

ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಅವರ ಅಧ್ಯಕ್ಷತೆಯಲ್ಲಿ ಸ್ಥಾಪಿಸಲಾಗಿರುವ ಸಚಿವರ ತಂಡ ಸಹ ಪ್ರಧಾನಿಯವರಿಗೆ ಮಾಹಿತಿ ನೀಡುತ್ತಿದೆ.

ಸ್ವಯಂ ಮಾದರಿ

ಜನರಿಗೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ಮಹತ್ವವನ್ನು ತಿಳಿಸುವ ಸಲುವಾಗಿ ತಾವು ಹೋಳಿ ಹಬ್ಬದಲ್ಲಿ ಭಾಗವಹಿಸುವುದಿಲ್ಲ ಎಂದು ಪ್ರಧಾನಿ ಘೋಷಿಸಿದರು.

ರಾಷ್ಟ್ರವನ್ನುದ್ದೇಶಿಸಿ ಭಾಷಣ - ಜನತಾ ಕರ್ಫ್ಯೂ ಮತ್ತು 3 ವಾರಗಳ ಲಾಕ್‌ಡೌನ್

ಕೋವಿಡ್-19ನ್ನು ಎದುರಿಸಲು ದೇಶವನ್ನು ಸಿದ್ಧಗೊಳಿಸುವ ಸಲುವಾಗಿ, ಪ್ರಧಾನಿಯವರು 2020 ರ ಮಾರ್ಚ್ 19 ರಂದು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ, ಮಾರ್ಚ್ 22ರ ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ 14 ಗಂಟೆಗಳ ಕಾಲ ಜನತಾ ಕರ್ಫ್ಯೂನಲ್ಲಿ ಸ್ವಯಂಪ್ರೇರಣೆಯಿಂದ ಭಾಗವಹಿಸಬೇಕೆಂದು ಜನರನ್ನು ಕೋರಿದರು.

ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ಪ್ರಯತ್ನದಲ್ಲಿ ರಾಷ್ಟ್ರವನ್ನು ಸಿದ್ಧಗೊಳಿಸಲು ಪ್ರಧಾನಿಯವರು 2020 ರ ಮಾರ್ಚ್ 24 ರಂದು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ, ವೈರಸ್ ಹರಡುವುದನ್ನು ನಿಯಂತ್ರಿಸಲು ಏಕೈಕ ಪರಿಣಾಮಕಾರಿ ಕ್ರಮವಾಗಿ ಮೂರು ವಾರಗಳ ಲಾಕ್‌ಡೌನ್‌ಗೆ ಮನವಿ ಮಾಡಿದರು,

ಕೊರೊನಾ ವೈರಸ್ ವಿರುದ್ಧ ಹೋರಾಟದಲ್ಲಿ ನಿರ್ಧಾರ ಮತ್ತು ಸಂಯಮಎಂಬ ಮಂತ್ರವನ್ನು ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರಕ್ಕೆ ನೀಡಿದರು.

ತಮ್ಮ ಭಾಷಣದಲ್ಲಿ ಪ್ರಧಾನಮಂತ್ರಿಯವರು, ಜನರು ಖರೀದಿಯ ಭೀತಿಗೊಳಗಾಗಬೇಡಿ ಎಂದು ಮನವಿ ಮಾಡಿದರು, ಅಗತ್ಯ ವಸ್ತುಗಳನ್ನು ನಿರಂತರವಾಗಿ ಪೂರೈಸುವ ಭರವಸೆ ನೀಡಿದರು.

ಕೋವಿಡ್ -19 ಆರ್ಥಿಕ ಪ್ರತಿಕ್ರಿಯೆ ಕಾರ್ಯಪಡೆ

ಸಾಂಕ್ರಾಮಿಕ ರೋಗದಿಂದ ಉಂಟಾಗುವ ಆರ್ಥಿಕ ಸವಾಲುಗಳನ್ನು ಎದುರಿಸಲು, ಕೇಂದ್ರ ಹಣಕಾಸು ಸಚಿವರ ನೇತೃತ್ವದಲ್ಲಿ ಕೋವಿಡ್-19 ಆರ್ಥಿಕ ಪ್ರತಿಕ್ರಿಯೆ ಕಾರ್ಯಪಡೆರಚಿಸುವುದಾಗಿ ಪ್ರಧಾನಿ ಘೋಷಿಸಿದರು. ಕಾರ್ಯಪಡೆಯು ಪಾಲುದಾರರೊಂದಿಗೆ ಸಮಾಲೋಚಿಸಿ ಅವರಿಂದ ಪಡೆದ ಪ್ರತಿಕ್ರಿಯೆಗಳ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಈ ಸವಾಲುಗಳನ್ನು ಎದುರಿಸಲು ತೆಗೆದುಕೊಳ್ಳುವ ನಿರ್ಧಾರಗಳ ಅನುಷ್ಠಾನವನ್ನು ಕಾರ್ಯಪಡೆಯು ಖಚಿತಪಡಿಸುತ್ತದೆ.

ವ್ಯಾಪಾರ ಸಮುದಾಯ ಮತ್ತು ಹೆಚ್ಚಿನ ಆದಾಯವಿರುವವರು, ವಿವಿಧ ಸೇವೆಗಳನ್ನು ಪಡೆಯುವ ಕಡಿಮೆ ಆದಾಯದ ಜನರ ಆರ್ಥಿಕ ಅಗತ್ಯತೆಗಳನ್ನು ನೋಡಿಕೊಳ್ಳಬೇಕೆಂದು ಪ್ರಧಾನಮಂತ್ರಿಯವರು ಒತ್ತಾಯಿಸಿದರು, ತಮ್ಮ ಸೇವೆಗಳನ್ನು ಸಲ್ಲಿಸಲು ಸಾಧ್ಯವಾಗದ ದಿನಗಳಲ್ಲಿ ಅವರ ವೇತನವನ್ನು ಕಡಿತಗೊಳಿಸಬಾರದು ಎಂದು ಒತ್ತಾಯಿಸಿದರು ಇಂತಹ ಸಮಯದಲ್ಲಿ ಮಾನವೀಯತೆಯ ಮಹತ್ವದ ಬಗ್ಗೆ ಅವರು ಒತ್ತಿ ಹೇಳಿದರು.

PM CARES ಫಂಡ್

ಕೋವಿಡ್-19 ಸಾಂಕ್ರಾಮಿಕ ರೋಗವು ಒಡ್ಡುವ ಯಾವುದೇ ರೀತಿಯ ತುರ್ತು ಅಥವಾ ಕಷ್ಟದ ಪರಿಸ್ಥಿತಿಯನ್ನು ನಿಭಾಯಿಸುವ ಪ್ರಾಥಮಿಕ ಉದ್ದೇಶದೊಂದಿಗೆ ಮತ್ತು ಸಂತ್ರಸ್ತರಿಗೆ ಪರಿಹಾರವನ್ನು ಒದಗಿಸಲು, ರಾಷ್ಟ್ರೀಯ ನಿಧಿಯೊಂದನ್ನು ಹೊಂದುವ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, 'ಪ್ರಧಾನ ಮಂತ್ರಿಯವರ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ನಿಧಿ' (PM CARES ಫಂಡ್) ಯನ್ನು ಸ್ಥಾಪಿಸಲಾಗಿದೆ. ಪ್ರಧಾನ ಮಂತ್ರಿಯವರು ಈ ಟ್ರಸ್ಟ್‌ನ ಅಧ್ಯಕ್ಷರಾಗಿದ್ದಾರೆ. ರಕ್ಷಣಾ ಸಚಿವರು, ಗೃಹ ಸಚಿವರು ಮತ್ತು ಹಣಕಾಸು ಸಚಿವರು ಸದಸ್ಯರಾಗಿದ್ದಾರೆ.

ಯಾವುದೇ ಸಮಸ್ಯೆಯನ್ನು ಪರಿಹರಿಸಲು ಸಾರ್ವಜನಿಕರ ಭಾಗವಹಿಸುವಿಕೆಯು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಯಾವಾಗಲೂ ನಂಬಿದ್ದಾರೆ. ಇದು ಅದಕ್ಕೆ ಮತ್ತೊಂದು ಉದಾಹರಣೆಯಾಗಿದೆ. ಈ ನಿಧಿಯು ಸಣ್ಣ ದೇಣಿಗೆಗಳನ್ನು ಪಡೆಯುತ್ತದೆ, ಇದರ ಪರಿಣಾಮವಾಗಿ ಹೆಚ್ಚಿನ ಸಂಖ್ಯೆಯ ಜನರು ಸಣ್ಣ ಪ್ರಮಾಣದಲ್ಲೂ ಕೊಡುಗೆ ನೀಡಲು ಸಾಧ್ಯವಾಗುತ್ತದೆ.

1.7 ಲಕ್ಷ ಕೋಟಿ ರೂ. ಹಣಕಾಸು ಪ್ಯಾಕೇಜ್ ಘೋಷಣೆ

ನರೇಂದ್ರ ಮೋದಿಯವರ ಸರ್ಕಾರವು ಮಾರ್ಚ್ 26 ರಂದು 1.7 ಲಕ್ಷ ಕೋಟಿ ರೂ.ಗಳ ಹಣಕಾಸು ಪ್ಯಾಕೇಜ್ ಘೋಷಿಸಿತು, ಇದು ಬಡವರ ತುರ್ತು ನಗದು ವರ್ಗಾವಣೆಯ ಬಗ್ಗೆ ಗಮನ ಕೇಂದ್ರೀಕರಿಸಿದೆ. ಕೊರೊನಾ ವೈರಸ್ ಪ್ರಭಾವದಿಂದ ಉಂಟಾಗುವ ಆರ್ಥಿಕ ವ್ಯತ್ಯಯಗಳಿಂದ ಅವರನ್ನು ರಕ್ಷಿಸುವ ಸಲುವಾಗಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ 3 ತಿಂಗಳ ಉಚಿತ ಆಹಾರ ಧಾನ್ಯಗಳು, ಬೇಳೆಕಾಳುಗಳು ಮತ್ತು ಅನಿಲ ಪೂರೈಕೆಯನ್ನೂ ಸಹ ಈ ಪ್ಯಾಕೇಜ್ ಒಳಗೊಂಡಿದೆ.

ವೈದ್ಯರು, ದಾದಿಯರು ಮತ್ತು ಆರೋಗ್ಯ ಕಾರ್ಯಕರ್ತರೊಂದಿಗೆ ಸಭೆ

ಮಾರ್ಚ್ 24 ರಂದು ಪ್ರಧಾನಿಯವರು ವೈದ್ಯಕೀಯ ಸಮುದಾಯದ - ವೈದ್ಯರು, ದಾದಿಯರು ಮತ್ತು ಪ್ರಯೋಗಾಲಯ ತಂತ್ರಜ್ಞರೊಂದಿಗೆ ಸಂವಾದ ನಡೆಸಿದರು. ಕೋವಿಡ್-19ನ್ನು ನಿಭಾಯಿಸುವಲ್ಲಿ ರಾಷ್ಟ್ರಕ್ಕೆ ಮಾಡುತ್ತಿರುವ ನಿಸ್ವಾರ್ಥ ಸೇವೆಗಾಗಿ ವೈದ್ಯಕೀಯ ಸಮುದಾಯಕ್ಕೆ ಅವರು ಧನ್ಯವಾದ ತಿಳಿಸಿದರು.

ಪ್ರಧಾನಮಂತ್ರಿಯವರು ತಮ್ಮ ಸಂವಾದದಲ್ಲಿ, “ನಿಮ್ಮ ಆಶಾವಾದವು ರಾಷ್ಟ್ರವು ಜಯಶಾಲಿಯಾಗಿ ಹೊರಹೊಮ್ಮುತ್ತದೆ ಎಂಬ ವಿಶ್ವಾಸವನ್ನು ನನ್ನಲ್ಲಿ ಮೂಡಿಸಿದೆಎಂದು ಹೇಳಿದರು.

ಔಷಧ ಕ್ಷೇತ್ರದಲ್ಲಿ ಹೆಚ್ಚಿನ ಮಟ್ಟದ ದೂರ ಸಲಹೆಯ ಪ್ರಸ್ತಾಪವನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದು ಅವರು ಹೇಳಿದರು.

ವೈದ್ಯಕೀಯ ಸಮುದಾಯಕ್ಕೆ ಅವರ ಭದ್ರತೆ ಅತ್ಯಂತ ಮಹತ್ವದ್ದಾಗಿದೆ ಮತ್ತು ಅವರನ್ನು ರಕ್ಷಿಸಲು ಸರ್ಕಾರ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಪ್ರಧಾನಿ ಭರವಸೆ ನೀಡಿದರು.

ಫಾರ್ಮಾ ವಲಯದೊಂದಿಗೆ ಸಭೆ

ಔಷಧಿಗಳು ಮತ್ತು ವೈದ್ಯಕೀಯ ಸಲಕರಣೆಗಳ ನಿಯಮಿತ ಪೂರೈಕೆಯನ್ನು ಕಾಯ್ದುಕೊಳ್ಳುವ ಪ್ರಯತ್ನದಲ್ಲಿ, ಪ್ರಧಾನಿಯವರು 2020 ರ ಮಾರ್ಚ್ 21 ರಂದು ಫಾರ್ಮಾ ವಲಯಸ ಪ್ರತಿನಿಧಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು. ತಮ್ಮ ಸಂವಾದದಲ್ಲಿ ಪ್ರಧಾನ ಮಂತ್ರಿ ಫಾರ್ಮಾ ಉದ್ಯಮವನ್ನು ಕೋವಿಡ್-19 ಪರೀಕ್ಷಾ ಕಿಟ್‌ಗಳ ತಯಾರಿಕೆಯಲ್ಲಿ ಕೆಲಸ ಮಾಡುವಂತೆ ಕೇಳಿಕೊಂಡರು. ದೇಶದೊಳಗೆ ಎಪಿಐಗಳ ಪೂರೈಕೆ ಮತ್ತು ಉತ್ಪಾದನೆಯನ್ನು ನಿರ್ವಹಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ಭರವಸೆ ನೀಡಿದರು.

ಅಗತ್ಯ ಔಷಧಿಗಳ ಪೂರೈಕೆಯನ್ನು ಕಾಪಾಡಿಕೊಳ್ಳುವುದು ಮತ್ತು ಕಾಳ ಮಾರುಕಟ್ಟೆ ಮತ್ತು ಸಂಗ್ರಹಣೆಯನ್ನು ತಡೆಯುವುದು ಮುಖ್ಯವಾಗಿದೆ ಎಂದು ಅವರು ತಿಳಿಸಿದರು.

ಆಯುಷ್ ಸಾಧಕರೊಂದಿಗೆ ಸಭೆ

ಪ್ರಧಾನಿಯವರು 2020 ರ ಮಾರ್ಚ್ 28 ರಂದು ವಿವಿಧ ಆಯುಷ್ ಸಾಧಕರೊಂದಿಗೆ ಸಂವಾದ ನಡೆಸಿದರು. ಕೋವಿಡ್-19ನ್ನು ನಿಭಾಯಿಸಲು ನಡೆಯುತ್ತಿರುವ ಪ್ರಯತ್ನಗಳಲ್ಲಿ ಆಯುಷ್ ವಲಯದ ಪ್ರಾಮುಖ್ಯತೆಯು ಅನೇಕ ಪಟ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು.

ವೈರಸ್ ಹರಡುವುದನ್ನು ನಿಯಂತ್ರಿಸಲು ಅಳವಡಿಸಿಕೊಳ್ಳಬೇಕಾದ ಉತ್ತಮ ಅಭ್ಯಾಸಗಳ ಸಂದೇಶವನ್ನು ಹರಡಲು ಡಬ್ಲ್ಯುಎಚ್‌ಒ ಮಾರ್ಗಸೂಚಿಗಳ ಪ್ರಕಾರ ಕೆಲಸ ಮಾಡುವಾಗ ಆಯುಷ್ ವಲಯದ ನೆಟ್‌ವರ್ಕ್ ಅನ್ನು ಬಳಸಿಕೊಳ್ಳುವಂತೆ ಪ್ರಧಾನಿ ಮನವಿ ಮಾಡಿದರು.

ಈ ಸಂಕಷ್ಟದ ಸಮಯದಲ್ಲಿ ಮನಸ್ಸಿನ ಒತ್ತಡ ಕಡಿಮೆ ಮಾಡಲು ಮತ್ತು ದೇಹವನ್ನು ಸದೃಢವಾಗಿಟ್ಟುಕೊಳ್ಳಲು ಮನೆಯಲ್ಲಿಯೇ ಯೋಗವನ್ನು ಉತ್ತೇಜಿಸಿದ್ದಕ್ಕಾಗಿ ಅವರು ಆಯುಷ್ ಸಚಿವಾಲಯವನ್ನು ಶ್ಲಾಘಿಸಿದರು.

ರಾಜ್ಯಗಳೊಂದಿಗೆ ಜೊತೆಯಾಗಿ ಕೆಲಸ

ಮಾರ್ಚ್ 20 ಮತ್ತು ಏಪ್ರಿಲ್ 11 ನಡುವೆ ಪ್ರಧಾನ ಮಂತ್ರಿಯವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು.

ಪ್ರಧಾನಿಯವರು ಮಾರ್ಚ್ 20 ರಂದು, ವೈರಸ್ ಹರಡುವಿಕೆಯ ಬಗ್ಗೆ ನಿರಂತರ ಜಾಗರೂಕತೆ ಮತ್ತು ಮೇಲ್ವಿಚಾರಣೆ ನಡೆಸಬೇಕೆಂದು ಕರೆ ನೀಡಿದರು ಮತ್ತು ಸಾಂಕ್ರಾಮಿಕ ರೋಗವನ್ನು ಎದುರಿಸಲು ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದರು.

ದೇಶವು ವೈರಸ್ ಹರಡುವುದನ್ನು ನಿಭಾಯಿಸುವ ನಿರ್ಣಾಯಕ ಹಂತದಲ್ಲಿದೆ ಎಂದು ರಾಜ್ಯಗಳ ನಾಯಕರಿಗೆ ನೆನಪಿಸಿದ ಪ್ರಧಾನಿಯವರು, ಆದರೆ ಭಯಪಡುವ ಅಗತ್ಯವಿಲ್ಲ ಎಂದು ಅವರಿಗೆ ಭರವಸೆ ನೀಡಿದರು.

ಕೇಂದ್ರ ಸರ್ಕಾರವು ಈವರೆಗೆ ಕೈಗೊಂಡಿರುವ ಕ್ರಮಗಳು ಮತ್ತು ದೇಶದ ಒಟ್ಟಾರೆ ಪರಿಸ್ಥಿತಿಯನ್ನು ಪ್ರಧಾನಿಯವರು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿರುವ ಬಗ್ಗೆ ಮುಖ್ಯಮಂತ್ರಿಗಳಿಗೆ ವಿವರಿಸಲಾಯಿತು.

ವೈರಸ್ ವಿರುದ್ಧ ದೇಶದ ಹೋರಾಟವನ್ನು ಹೆಚ್ಚಿಸಲು ಪ್ರಧಾನಿ ಏಪ್ರಿಲ್ 2 ರಂದು ಮತ್ತೆ ಮುಖ್ಯಮಂತ್ರಿಗಳೊಂದಿಗೆ ಸಂವಾದ ನಡೆಸಿದರು. ನಿಟ್ಟಿನಲ್ಲಿ ರಾಜ್ಯಗಳ ಪ್ರಯತ್ನಗಳನ್ನು ಶ್ಲಾಘಿಸಿದ ಅವರು, ಲಾಕ್ಡೌನ್ ಮುಗಿದ ನಂತರ ಜನರು ಹಂತ ಹಂತವಾಗಿ ಹೊರಬರುವಂತಹ ಸಾಮಾನ್ಯ ನಿರ್ಗಮನ ತಂತ್ರವನ್ನು ರೂಪಿಸುವಂತೆ ರಾಜ್ಯಗಳನ್ನು ಕೇಳಿದರು.

ಏಪ್ರಿಲ್ 11 ರಂದು ಪ್ರಧಾನಮಂತ್ರಿ ಮತ್ತೆ ಮುಖ್ಯಮಂತ್ರಿಗಳ ಸಭೆ ನಡೆಸಿದರು. ಅಂದಿನ ಸಭೆಯಲ್ಲಿ ಹೆಚ್ಚಿನ ರಾಜ್ಯಗಳು ಲಾಕ್ಡೌನ್ ಅನ್ನು ಮತ್ತೆ ಹದಿನೈದು ದಿನಗಳವರೆಗೆ ಅಂದರೆ 2020 ಏಪ್ರಿಲ್ 30 ರವರೆಗೆ ವಿಸ್ತರಿಸಲು ಕೋರಿದವು.

ಮುಖ್ಯಮಂತ್ರಿಗಳಿಗೆ ಕಾರ್ಯತಂತ್ರವನ್ನು ವಿವರಿಸಿದ ಪ್ರಧಾನಿ,  ಇದುವರೆಗೆ ನಮ್ಮ ಮಂತ್ರವುಜಾನ್ ಹೈ ತೊ ಜಹಾನ್ ಹೈಆಗಿತ್ತು. ಆದರೆ ಈಗ ಅದುಜಾನ್ ಭಿ ಜಹಾನ್ ಭಿಆಗಿದೆ ಎಂದು ಹೇಳಿದರು.

ವೈರಸ್ ಹರಡುವಿಕೆ ತಡೆಗೆ ಇದುವರೆಗೆ ತೆಗೆದುಕೊಂಡ ಕ್ರಮಗಳ ಪರಿಣಾಮವನ್ನು ನಿರ್ಧರಿಸಲು ಮುಂದಿನ 3-4 ವಾರಗಳು ನಿರ್ಣಾಯಕವಾಗಿವೆ ಎಂದು ಅವರು ಮುಖ್ಯಮಂತ್ರಿಗಳಿಗೆ ತಿಳಿಸಿದರು. ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅನುಕೂಲವಾಗುವಂತೆ ಕೃಷಿ ಮತ್ತು ಅದರ ಸಂಬಂಧಿತ ಚಟುವಟಿಕೆಗಳಿಗೆ ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು. ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಆರೋಗ್ಯ ಸೇತು ಅಪ್ಲಿಕೇಶನ್ ಮಹತ್ವವನ್ನು ತಿಳಿಸಿದ ಅವರು,  ಇದು ನಂತರ ಪ್ರಯಾಣಕ್ಕೆ ಅನುಕೂಲವಾಗುವ -ಪಾಸ್ ಆಗಿ ಕಾರ್ಯನಿರ್ವಹಿಸುತ್ತದೆ ಎಂದರು.

ಆರೋಗ್ಯ ವೃತ್ತಿಪರರ ಮೇಲಿನ ದಾಳಿ ಮತ್ತು ಈಶಾನ್ಯ ಮತ್ತು ಕಾಶ್ಮೀರದ ವಿದ್ಯಾರ್ಥಿಗಳೊಂದಿಗೆ ಅಸಭ್ಯ ವರ್ತನೆಯ ಘಟನೆಗಳನ್ನು ಅವರು ಖಂಡಿಸಿದರು ಮತ್ತು ದೇಶಕ್ಕೆ ಅಗತ್ಯವಾದ ಔಷಧಿಗಳ ಸಮರ್ಪಕ ಸರಬರಾಜು ಇದೆ ಎಂದು ಭರವಸೆ ನೀಡಿದರು.

ಒಟ್ಟಾದ ಸಾರ್ಕ್ ರಾಷ್ಟ್ರಗಳು

ವಿಶ್ವದ ಜನಸಂಖ್ಯೆಯ ಗಮನಾರ್ಹ ಭಾಗದ ನೆಲೆಯಾದ ಸಾರ್ಕ್ ರಾಷ್ಟ್ರಗಳ ಮುಖಂಡರೊಂದಿಗೆ ವೀಡಿಯೊ ಸಮಾವೇಶವನ್ನು ಪ್ರಸ್ತಾಪಿಸಿ ಪ್ರಾದೇಶಿಕ ಸಮಾಲೋಚನೆ ಮತ್ತು ಚರ್ಚೆಗೆ ಸೂಚಿಸಿದ ಮೊದಲ ನಾಯಕ ಪ್ರಧಾನಿಯವರು. ಭಾರತದ ನಾಯಕತ್ವದಲ್ಲಿ ಸಾರ್ಕ್ ನಾಯಕರ ಸಭೆ 2020 ರ ಮಾರ್ಚ್ 15 ರಂದು ನಡೆಯಿತು.

ಎಲ್ಲಾ ದೇಶಗಳ ಸ್ವಯಂಪ್ರೇರಿತ ಕೊಡುಗೆಗಳ ಆಧಾರದ ಮೇಲೆ ಕೋವಿಡ್-19 ತುರ್ತು ನಿಧಿಯನ್ನು ರಚಿಸುವ ಉದ್ದೇಶದಿಂದ ಶ್ರೀ ಮೋದಿ ಮುಂದಡಿ ಇಟ್ಟರು. ಭಾರತವು ಈ ನಿಧಿಗೆ 10 ಮಿಲಿಯನ್ ಅಮೆರಿಕಾ ಡಾಲರ್ ಆರಂಭಿಕ ಕೊಡುಗೆಯನ್ನು ನೀಡಿತು. ತಕ್ಷಣದ ಕ್ರಮಗಳ ವೆಚ್ಚವನ್ನು ಪೂರೈಸಲು ಯಾವುದೇ ಪಾಲುದಾರ ರಾಷ್ಟ್ರ ಈ ನಿಧಿಯನ್ನು ಬಳಸಬಹುದು.

ಇತರ ಸಾರ್ಕ್ ರಾಷ್ಟ್ರಗಳಾದ ನೇಪಾಳ, ಭೂತಾನ್ ಮತ್ತು ಮಾಲ್ಡೀವ್ಸ್ ಸಹ ತುರ್ತು ನಿಧಿಗೆ ಕೊಡುಗೆ ನೀಡಿವೆ.

ವಿಶೇಷ ವರ್ಚುವಲ್ ಜಿ -20 ಶೃಂಗಸಭೆ

ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಏಕಾಏಕಿ ಎದುರಾದ ಸವಾಲುಗಳನ್ನು ಚರ್ಚಿಸಲು ಮತ್ತು ಜಾಗತಿಕ ಸಮನ್ವಯದ ಪ್ರತಿಕ್ರಿಯೆಯನ್ನು ರೂಪಿಸಲು 2020 ರ ಮಾರ್ಚ್ 26 ರಂದು ವಿಶೇಷ ವರ್ಚುವಲ್ ಜಿ 20 ನಾಯಕರ ಶೃಂಗಸಭೆಯನ್ನು ಕರೆಯಲಾಯಿತು. ಇದಕ್ಕೂ ಮೊದಲು ಈ ಕುರಿತು ಸೌದಿ ಅರೇಬಿಯಾದ ರಾಜಕುಮಾರರೊಂದಿಗೆ ಪ್ರಧಾನಿಯವರು ದೂರವಾಣಿ ಮಾತುಕತೆ ನಡೆಸಿದರು.

ಜಾಗತಿಕ ಸಮೃದ್ಧಿ ಮತ್ತು ಸಹಕಾರದ ನಮ್ಮ ದೃಷ್ಟಿಯಲ್ಲಿ ಮನುಷ್ಯರನ್ನು ಕೇಂದ್ರಸ್ಥಾನದಲ್ಲಿರಿಸುವ ಅಗತ್ಯವನ್ನು ಪ್ರಧಾನಿ ಒತ್ತಿಹೇಳಿದರು, ವೈದ್ಯಕೀಯ ಸಂಶೋಧನೆ ಮತ್ತು ಅಭಿವೃದ್ಧಿಯ ಪ್ರಯೋಜನಗಳನ್ನು ಮುಕ್ತವಾಗಿ ಮತ್ತು ಬಹಿರಂಗವಾಗಿ ಹಂಚಿಕೊಳ್ಳಬೇಕು ಎಂದರು.

ಮಾನವಕುಲದ ಸಾಮೂಹಿಕ ಯೋಗಕ್ಷೇಮಕ್ಕಾಗಿ ಮತ್ತು ಮಾನವೀಯತೆಯ ಹಿತಾಸಕ್ತಿಗಳನ್ನು ಉತ್ತೇಜಿಸುವಲ್ಲಿ ಬಹುಪಕ್ಷೀಯ ವೇದಿಕೆಗಳನ್ನು ಹೊಂದಿರುವ ಹೊಸ ಜಾಗತೀಕರಣಕ್ಕೆ ಸಹಾಯ ಮಾಡಲು ಪ್ರಧಾನಿಯವರು ನಾಯಕರಿಗೆ ಕರೆಕೊಟ್ಟರು.

ಅಂತರರಾಷ್ಟ್ರೀಯ ಪ್ರಯತ್ನ

ಪ್ರಧಾನ ಮಂತ್ರಿಯವರು ಬ್ರಿಟನ್ ಪ್ರಧಾನಿ ಶ್ರೀ ಬೋರಿಸ್ ಜಾನ್ಸನ್, ಇಸ್ರೇಲ್ ಪ್ರಧಾನಿ ಶ್ರೀ .ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಾರ್ಚ್ 12, 2020 ರಂದು ಮತ್ತು ಸೌದಿ ಅರೇಬಿಯಾದ ರಾಜಕುಮಾರ ಶ್ರೀ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ಮಾರ್ಚ್ 17, 2020 ರಂದು ದೂರವಾಣಿ ಚರ್ಚೆ ನಡೆಸಿದರು.

ಮಾರ್ಚ್ 25 ರಂದು ಪ್ರಧಾನಿಯವರು, ರಷ್ಯಾ ಅಧ್ಯಕ್ಷ ಶ್ರೀ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಚರ್ಚೆ ನಡೆಸಿದರು. ಮಾರ್ಚ್ 26 ರಂದು ಶ್ರೀ ಮೋದಿ ಅವರು ಅಬುಧಾಬಿಯ ರಾಜಕುಮಾರ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಮತ್ತು ಕತಾರ್ ನ ಅಮೀರ್ ಶ್ರೀ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರೊಂದಿಗೆ ಪ್ರತ್ಯೇಕ ದೂರವಾಣಿ ಚರ್ಚೆ ನಡೆಸಿದರು.

ಯುರೋಪಿಯನ್ ಆಯೋಗದ ಅಧ್ಯಕ್ಷ ಶ್ರೀ ಉರ್ಸುಲಾ ವಾನ್ ಡೆರ್ ಲೇಯೆನ್ ಅವರೊಂದಿಗೆ ಮಾರ್ಚ್ 24, 2020 ರಂದು ಪ್ರಧಾನಿ ದೂರವಾಣಿ ಸಂಭಾಷಣೆ ನಡೆಸಿದರು.

ಅತಂತ್ರ ನಾಗರಿಕರಿಗೆ ಬೆಂಬಲ

ಕೊರೊನಾ ವೈರಸ್‌ ತೀವ್ರವಾಗಿರುವ ಚೀನಾ, ಇಟಲಿ, ಇರಾನ್ ಮತ್ತು ವಿಶ್ವದ ಇತರ ಭಾಗಗಳಲ್ಲಿ ಸಿಲುಕಿದ್ದ 2000 ಕ್ಕೂ ಹೆಚ್ಚು ನಾಗರಿಕರನ್ನು ಪ್ರಧಾನ ಮಂತ್ರಿಯವರ ನೇತೃತ್ವದಲ್ಲಿ ಭಾರತವು ಸ್ಥಳಾಂತರಿಸಿತು.

HCQ ಪೂರೈಕೆ

ಪ್ರಧಾನಿಯವರು ಏಪ್ರಿಲ್ 4, 2020 ರಂದು ಅಮೆರಿಕಾ ಯುಎಸ್ಎ ಅಧ್ಯಕ್ಷರು ಮತ್ತು ಬ್ರೆಜಿಲ್ ಅಧ್ಯಕ್ಷರೊಂದಿಗೆ ಪ್ರತ್ಯೇಕ ದೂರವಾಣಿ ಸಂವಾದಗಳನ್ನು ನಡೆಸಿದರು, ಈ ಸಂದರ್ಭದಲ್ಲಿ ಪ್ರಧಾನಿಯವರು, ಈ ಜಾಗತಿಕ ಬಿಕ್ಕಟ್ಟನ್ನು ಒಟ್ಟಾಗಿ ನಿವಾರಿಸುವಲ್ಲಿ ಅಮೆರಿಕಾ ಮತ್ತು ಬ್ರೆಜಿಲ್ ಜೊತೆ ಭಾರತದ ಒಗ್ಗಟ್ಟನ್ನು ಪುನರುಚ್ಚರಿಸಿದರು.

ಕೋವಿಡ್-19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಭಾರತವು ಅಮೆರಿಕಾ ಮತ್ತು ಬ್ರೆಜಿಲ್ ಗೆ ಹೈಡ್ರಾಕ್ಸಿಕ್ಲೋರೋಕ್ವಿನೈನ್ ಅನ್ನು ಪೂರೈಸಲು ಒಪ್ಪಿಕೊಂಡಿತು.

***

 



(Release ID: 1609166) Visitor Counter : 718