ಉಪರಾಷ್ಟ್ರಪತಿಗಳ ಕಾರ್ಯಾಲಯ
ಕೋವಿಡ್-19 ವಿರುದ್ಧ ಹೋರಾಟದ ಬಗ್ಗೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್ ಗಳ ಜೊತೆ ಉಪರಾಷ್ಟ್ರಪತಿ ಸಂವಾದ
ಪ್ರಕಟಣಾ ದಿನಾಂಕ:
27 MAR 2020 2:33PM by PIB Bengaluru
ಕೋವಿಡ್-19 ವಿರುದ್ಧ ಹೋರಾಟದ ಬಗ್ಗೆ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್ ಗಳ ಜೊತೆ ಉಪರಾಷ್ಟ್ರಪತಿ ಸಂವಾದ
ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಲು, ನಾಗರಿಕ ಸೇವಾ ಸಂಘಟನೆಗಳನ್ನು ಉತ್ತೇಜಿಸಲು ಮತ್ತು ಸರ್ಕಾರದೊಂದಿಗೆ ಕೈಜೋಡಿಸಲು ಖಾಸಗಿ ವಲಯಕ್ಕೆ ಮಾರ್ಗದರ್ಶನ ನೀಡಲು ಕರೆ
ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪ್ರಥಮ ಪ್ರಜೆಗಳಾದ ನೀವು ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಮಹತ್ವದ ನಾಯಕತ್ವ ವಹಿಸಿಕೊಳ್ಳಬೇಕು – ರಾಜ್ಯಪಾಲರು/ಲೆಫ್ಟಿನೆಂಟ್ ಗವರ್ನರ್ ಗಳಿಗೆ ಉಪರಾಷ್ಟ್ರಪತಿ ಕರೆ
ಸೋಂಕು ಹರಡುವುದನ್ನು ತಪ್ಪಿಸಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಗತ್ಯ
ಸರ್ಕಾರ ನಿಗದಿಪಡಿಸಿರುವ ನಿಯಮಗಳನ್ನು ಪಾಲಿಸುವಂತೆ ಎಲ್ಲ ನಾಗರಿಕರಿಗೆ ಉಪರಾಷ್ಟ್ರಪತಿ ಕರೆ
ಪುಸ್ತಕಗಳನ್ನು ಓದಿ, ಧ್ಯಾನ ಮತ್ತು ಯೋಗ ಮಾಡಿ, ಕುಟುಂಬದ ಹಿರಿಯರು ಮತ್ತು ಮಕ್ಕಳೊಂದಿಗೆ ಕಾಲ ಕಳೆಯಿರಿ – ಉಪರಾಷ್ಟ್ರಪತಿ ಜನರಿಗೆ ಸಲಹೆ
ಕೋವಿಡ್-19 ಎದುರಿಸಲು ಜಾಗೃತಿಗೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ನಾಯಕರು ಚಲನಚಿತ್ರ ಮತ್ತು ಕ್ರೀಡಾ ವ್ಯಕ್ತಿಗಳನ್ನು ಸೇರಿಸಿಕೊಳ್ಳಲು ಕರೆ
ಆನ್ ಲೈನ್ ಕ್ಲಾಸ್ ಗಳನ್ನು ನಡೆಸುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸಲು ಉಪರಾಷ್ಟ್ರಪತಿ ರಾಜ್ಯಪಾಲರುಗಳಿಗೆ ಕರೆ
ಭಾರತದ ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯನಾಯ್ಡು ಅವರು, ಕೋವಿಡ್-19 ವಿರುದ್ಧ ಸರ್ಕಾರ ನಡೆಸುತ್ತಿರುವ ಹೋರಾಟದ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು, ನಾಗರಿಕ ಸಮಾಜದ ಸಂಘಟನೆಗಳನ್ನು ಉತ್ತೇಜಿಸಬೇಕು ಮತ್ತು ಸರ್ಕಾರದೊಂದಿಗೆ ಕೈಜೋಡಿಸಲು ಖಾಸಗಿ ವಲಯಕ್ಕೆ ಮಾರ್ಗದರ್ಶನ ನೀಡಬೇಕು ಎಂದು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್ ಗಳು ಹಾಗೂ ಆಡಳಿತಾಧಿಕಾರಿಗಳಿಗೆ ಇಂದು ಕರೆ ನೀಡಿದರು.
ಅವರು ಭಾರತದ ರಾಷ್ಟ್ರಪತಿಗಳಾದ ಶ್ರೀ ರಾಮನಾಥ್ ಕೋವಿಂದ್ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ನಲ್ಲಿ, ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್ ಗಳ ಜೊತೆ ಸಂವಾದ ನಡೆಸುತ್ತಾ, ರಾಜ್ಯದ ಪ್ರಥಮ ಪ್ರಜೆಗಳಾದ ನೀವು ಉತ್ತಮ ಸ್ಥಾನದಲ್ಲಿದ್ದು, ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಷ್ಟ್ರೀಯ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಉತ್ತೇಜನ ಮತ್ತು ಮಾರ್ಗದರ್ಶನ ನೀಡುವ ಮಹತ್ವದ ಪಾತ್ರ ವಹಿಸಬೇಕೆಂದು ಕರೆ ನೀಡಿದರು.
“ನಿಮ್ಮ ನಾಯಕತ್ವ ಅತ್ಯಂತ ಮಹತ್ವದ್ದು, ನಿಮ್ಮ ಮಾರ್ಗದರ್ಶನ, ಉತ್ತೇಜನ ಹಾಗೂ ಪ್ರೇರೇಪಣಾ ಸಾಮರ್ಥ್ಯ ಅತ್ಯಂತ ಮೌಲ್ಯಯುತವಾದುದು” ಎಂದು ಹೇಳಿದರು.
ಶ್ರೀ ನಾಯ್ಡು ಅವರು, ವಿಶ್ವ ವಿದ್ಯಾಲಯಗಳು, ಕೇಂದ್ರೀಯ ವಿಶ್ವ ವಿದ್ಯಾಲಯಗಳೂ ಮತ್ತು ಇತರೆ ಶೈಕ್ಷಣಿಕ ಸಂಸ್ಥೆಗಳು ಹಾಗೂ ಧಾರ್ಮಿಕ ಸಂಸ್ಥೆಗಳಲ್ಲಿ ಕೋವಿಡ್-19 ರೋಗಿಗಳಿಗೆ ಐಸೋಲೇಷನ್ ವಾರ್ಡ್ ಗಳನ್ನು ಸಿದ್ಧಪಡಿಸಲು ಸ್ಥಳಾವಕಾಶವನ್ನು ಮಾಡಿಕೊಡುವ ತುರ್ತು ಅಗತ್ಯವಿದ್ದು, ಅದಕ್ಕೆ ನೆರವು ನೀಡುವಂತೆ ಉತ್ತೇಜನ ನೀಡಬೇಕು ಎಂದು ರಾಜ್ಯಪಹೇಳಿದರ್ತು ಲೆಫ್ಟಿನೆಂಟ್ ಗವರ್ನರ್ ಗಳಿಗೆ ಕರೆ ನೀಡಿದರು.
ನಾನಾ ವಿಶ್ವವಿದ್ಯಾಲಯಗಳ ಕುಲಾಧಿಪತಿಗಳೂ ಆಗಿರುವ ನೀವುಗಳು, ಶೈಕ್ಷಣಿಕ ವೇಳಾಪಟ್ಟಿಗೆ ತೊಂದರೆಯಾಗದಂತೆ ಪಠ್ಯಕ್ರಮಗಳ ಬೋಧನೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಆನ್ ಲೈನ್ ತರಗತಿಗಳನ್ನು ನಡೆಸುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸಬೇಕು ಎಂದು ಶ್ರೀ ನಾಯ್ಡು ಅವರು ಹೇಳಿದರು.
ಕೋವಿಡ್-19 ರೋಗಿಗಳಿಗೆ ಹಾಸಿಗೆಗಳನ್ನು ಕಾಯ್ದಿರಿಸುವಂತೆ ಮನವಿ ಮಾಡಿದ ಅವರು, ರೆಡ್ ಕ್ರಾಸ್ ಸೇರಿದಂತೆ ಇತರೆ ನಾಗರಿಕ ಸೇವಾ ಸಂಘಟನೆಗಳು ನಮ್ಮ ಜನಸಂಖ್ಯೆಯ ಬಡವರು, ವಯೋವೃದ್ಧರು ಮತ್ತು ರೋಗಿಗಳಿಗೆ ಮಾನವೀಯ ನೆಲೆಯಲ್ಲಿ ನೆರವು ನೀಡುವುದನ್ನು ಕೈಗೆತ್ತಿಕೊಳ್ಳಬೇಕು ಎಂದು ಕರೆ ನೀಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಯತ್ನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಉಪರಾಷ್ಟ್ರಪತಿಗಳು, ಈ ಸಂಕಷ್ಟದ ಸಮಯದಲ್ಲಿ ಟೀಮ್ ಇಂಡಿಯಾ ಸ್ಫೂರ್ತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಬಲವಾಗಿ ಪ್ರತಿಪಾದಿಸಿದರು.
ಸೋಂಕು ಹರಡುವುದನ್ನು ತಡೆಯಲು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಅಗತ್ಯತೆಯನ್ನು ಬಲವಾಗಿ ಪ್ರತಿಪಾದಿಸಿದ ಉಪರಾಷ್ಟ್ರಪತಿ ಅವರು, ಪ್ರಧಾನಮಂತ್ರಿಗಳು ಮನೆಯಲ್ಲಿಯೇ ಉಳಿಯಿರಿ, “ನೀವು ಮನೆಯಿಂದ ಹೊರಬಂದರೆ ಕೊರೋನಾ ಒಳಬರುತ್ತದೆ” ಎಂದು ಹೇಳಿದ್ದಾರೆಂದು ಆ ಮಾತನ್ನು ರಾಜ್ಯಪಾಲರುಗಳಿಗೆ ನೆನಪು ಮಾಡಿಕೊಟ್ಟರು.
ಕೋವಿಡ್-19 ವಿರುದ್ಧ ಹೆಚ್ಚಿನ ಜಾಗೃತಿ ಮೂಡಿಸಲು ಎಲ್ಲಾ ಧಾರ್ಮಿಕ ಮತ್ತು ಆಧ್ಯಾತ್ಮಿಕ ನಾಯಕರು, ಚಲನಚಿತ್ರ ಮತ್ತು ಕ್ರೀಡಾ ಕ್ಷೇತ್ರಗಳ ಗಣ್ಯರು ಮತ್ತು ಸಾರ್ವಜನಿಕ ಗಣ್ಯ ವ್ಯಕ್ತಿಗಳನ್ನು ಹಾಗೂ ನಾನಾ ಭಾಷೆಗಳಲ್ಲಿನ ಸಾಹಿತ್ಯ ವಲಯದಲ್ಲಿನ ಗಣ್ಯರು ಹಾಗೂ ಕಲಾವಿದರನ್ನು ಬಳಸಿಕೊಳ್ಳಬೇಕು ಎಂದು ಉಪರಾಷ್ಟ್ರಪತಿಗಳು, ರಾಜ್ಯಪಾಲರುಗಳು ಮತ್ತು ಲೆಫ್ಟಿನೆಂಟ್ ಗವರ್ನರ್ ಗಳಿಗೆ ಕರೆ ನೀಡಿದರು.
ಹೆಚ್ಚಿನ ಮೂಲಸೌಕರ್ಯ ಮತ್ತು ಸಂಪನ್ಮೂಲ ಹೊಂದಿರುವ ಖಾಸಗಿ ವಲಯ ಸರ್ಕಾರದ ಪ್ರಯತ್ನಗಳಿಗೆ ಪೂರಕವಾಗಿ ಕ್ರಿಯಾಶೀಲ ಪಾತ್ರವಹಿಸಬೇಕು ಮತ್ತು ಜನರು ಎದುರಿಸುತ್ತಿರುವ ತೊಂದರೆಗಳನ್ನು ತಪ್ಪಿಸಬೇಕು ಎಂದು ಶ್ರೀ ನಾಯ್ಡು ಅವರು ಕರೆ ನೀಡಿದರು.
ಮಾಧ್ಯಮಗಳು ಮಹತ್ವದ ಆರೋಗ್ಯ ಸಂದೇಶಗಳನ್ನು ಪ್ರಸಾರ ಮಾಡುವುದರಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಉಪರಾಷ್ಟ್ರಪತಿಗಳು, ಜನರಿಗೆ ಖಚಿತ ಮಾಹಿತಿಯನ್ನು ಒದಗಿಸುವುದು ಅತ್ಯಂತ ಪ್ರಮುಖವಾದುದು ಎಂದು ಹೇಳಿದ್ದಾರೆ.
ಲಾಕ್ ಡೌನ್ ನಿಂದಾಗಿ ಸಮಾಜದ ಕೆಳಸ್ತರದಲ್ಲಿನ ವ್ಯಕ್ತಿಗಳ ಮೇಲೆ ಆರ್ಥಿಕ ಪರಿಣಾಮಗಳು ಉಂಟಾಗಿದೆ ಎಂದು ಹೇಳಿದ ಉಪರಾಷ್ಟ್ರಪತಿಗಳು ಜನರು ಮತ್ತು ಆರೋಗ್ಯ ಕಾರ್ಯಕರ್ತರು ಎದುರಿಸುತ್ತಿರುವ ಸಂಕಷ್ಟಗಳನ್ನು ದೂರ ಮಾಡಲು ಭಾರತ ಸರ್ಕಾರ ಪರಿಹಾರ ಕ್ರಮಗಳ ಪ್ಯಾಕೇಜ್ ಪ್ರಕಟಿಸಿರುವುದನ್ನು ಅವರು ಸ್ವಾಗತಿಸಿದರು.
ಎಲ್ಲ ಪ್ರದೇಶಗಳಲ್ಲಿ ಹಾಲು, ಹಣ್ಣು, ತರಕಾರಿ ಮತ್ತು ಕೃಷಿ ಉತ್ಪನ್ನಗಳು ಸೇರಿದಂತೆ ಅಗತ್ಯ ವಸ್ತುಗಳು ಯಾವುದೇ ತೊಂದರೆ ಇಲ್ಲದೆ ಪೂರೈಕೆಯಾಗುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಖಾತ್ರಿಪಡಿಸಬೇಕು ಎಂದು ಅವರು ಕರೆ ನೀಡಿದರು.
ಕೋವಿಡ್-19 ಹರಡದಂತೆ ನಡೆಸುತ್ತಿರುವ ಈ ಮಹತ್ವದ ಸಮರಕ್ಕೆ ಜನರ ಸಹಕಾರ ಅತ್ಯಗತ್ಯ ಎಂದು ವಿಶ್ಲೇಷಿಸಿದ ಉಪರಾಷ್ಟ್ರಪತಿಗಳು, ಸರ್ಕಾರ ನಿಗದಿಪಡಿಸಿರುವ ಮುಂಜಾಗ್ರತಾ ಮಾರ್ಗಸೂಚಿಗಳನ್ನು ಎಲ್ಲ ನಾಗರಿಕರು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಮನವಿ ಮಾಡಿದರು. ಪುಸ್ತಕಗಳನ್ನು ಓದುವುದು, ಯೋಗ ಮತ್ತು ಧ್ಯಾನ ಅಭ್ಯಾಸ ಮಾಡುವುದು, ಕುಟುಂಬದ ಹಿರಿಯರು ಮತ್ತು ಮಕ್ಕಳೊಂದಿಗೆ ಕಾಲ ಕಳೆಯುವ ಮೂಲಕ ಸಮಯವನ್ನು ಉಪಯುಕ್ತ ಚಟುವಟಿಕೆಗಳಿಗೆ ಬಳಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಮಹಾರಾಷ್ಟ್ರ, ಕೇರಳ, ಕರ್ನಾಟಕ, ಹರಿಯಾಣ, ಗುಜರಾತ್, ರಾಜಸ್ತಾನ, ತೆಲಂಗಾಣ, ಪಂಜಾಬ್, ಬಿಹಾರ, ಮಧ್ಯಪ್ರದೇಶ, ತಮಿಳುನಾಡು, ಪಶ್ಚಿಮಬಂಗಾಳ, ಹಿಮಾಚಲಪ್ರದೇಶ, ದೆಹಲಿಯ ಲೆಫ್ಟಿನೆಂಟ್ ಗವರ್ನರ್, ಚಂಡಿಗಢದ ಆಡಳಿತಾಧಿಕಾರಿ ಮತ್ತಿತರರು ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದ್ದರು.
*****
(ಪ್ರಕಟಣೆ ಐ.ಡಿ.: 1608583)
ವಿಸಿಟರ್ ಕೌಂಟರ್ : 163