ಪ್ರಧಾನ ಮಂತ್ರಿಯವರ ಕಛೇರಿ

ಕೋವಿಡ್-19 ವಿರುದ್ಧ ಹೋರಾಟ: ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಿ ಭಾಷಣ

Posted On: 19 MAR 2020 8:41PM by PIB Bengaluru

ಕೋವಿಡ್-19 ವಿರುದ್ಧ ಹೋರಾಟ: ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಿ ಭಾಷಣ

ಮಾರ್ಚ್ 22 ರಂದು ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ನತಾ ಕರ್ಫ್ಯೂ

ಮಾರ್ಚ್ 22 ರಂದು ಸಂಜೆ 5 ಗಂಟೆಗೆ ರಾಷ್ಟ್ರದ ನಿಸ್ವಾರ್ಥ ಸೇವರಿಗೆ ನಾಗರಿಕರಿಂದ ಧನ್ಯವಾದ ಅರ್ಪಣೆ

ಸಾಂಕ್ರಾಮಿಕ ರೋಗದ ಆರ್ಥಿಕ ಸವಾಲು ಎದುರಿಸಲು ಕೋವಿಡ್-19 ಆರ್ಥಿಕ ಪ್ರತಿಕ್ರಿಯಾ ಕಾರ್ಯಪಡೆಸ್ಥಾಪನೆ

ನಾಗರಿಕರು ಭಯ ಭೀತರಾಗದಂತೆಸಲಹೆ; ಅಗತ್ಯ ವಸ್ತುಗಳು ಲಭ್ಯ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೋವಿಡ್-19 ನಿಯಂತ್ರಣ ಕುರಿತಂತೆ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದರು. ನವರಾತ್ರಿಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಯವರು ಜನತೆಗೆ ಒಂಬತ್ತು ಮನವಿಗಳನ್ನು ಮಾಡಿದರು.

ಜಗತ್ತಿನಾದ್ಯಂತ ಆತಂಕ ಸೃಷ್ಟಿಸಿರುವ ಜಾಗತಿಕ ಮಹಾಮಾರಿಯ ವಿರುದ್ಧ ಹೋರಾಡಲು ಎಲ್ಲ ಭಾರತೀಯರ ಸಂಕಲ್ಪ ಮತ್ತು ಸಂಯಮ ಮಹತ್ವದ್ದು ಎಂದು ಪ್ರಧಾನಮಂತ್ರಿ ಹೇಳಿದರು. ತ್ವರಿತವಾಗಿ ಹಬ್ಬುತ್ತಿರುವ ವೈರಾಣುವನ್ನು ತಡೆಯಲು ಕೆಲವೊಂದು ಕ್ರಮಗಳನ್ನು ಅನುಸರಿಸುವಂತೆ ಜನತೆಗೆ ಮನವಿ ಮಾಡಿದರು.  ಈ ಮಹಾಮಾರಿಯನ್ನು ಹಗುರವಾಗಿ ಪರಿಗಣಿಸದೆ, ಜಾಗೃತರಾಗಿರುವಂತೆ ಮತ್ತು ಕೋವಿಡ್ 19 ತಡೆಯುವ ನಿಟ್ಟಿನಲ್ಲಿ ಸಕ್ರಿಯರಾಗಿರುವಂತೆ ತಿಳಿಸಿದರು.

ನಾವು ಯಾವಾಗ ಆರೋಗ್ಯವಾಗಿರುತ್ತೀವೋ, ಆಗ ಜಗತ್ತೂ ಆರೋಗ್ಯವಾಗಿರುತ್ತದೆ ಎಂಬ ಮಂತ್ರವನ್ನು ಅನುಸರಿಸುವಂತೆ ಪ್ರಧಾನಮಂತ್ರಿ ಮನವಿ ಮಾಡಿದರು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತಹ ಕೆಲವೊಂದು ಸ್ವಯಂ ನಿರ್ಬಂಧಗಳನ್ನು ವಿಧಿಸಿಕೊಳ್ಳುವ ಮಹತ್ವವನ್ನು ಅವರು ಒತ್ತಿ ಹೇಳಿದರು.  ತಾಳ್ಮೆಯಿಂದ ನಿಯಮಗಳನ್ನು ಪಾಲಿಸುವಂತೆ ನಾಗರಿಕರಿಗೆ ಮನವಿ ಮಾಡಿದ ಅವರು, ಅಗತ್ಯ ಎನಿಸಿದಾಗ ಮಾತ್ರ ಮನೆಯಿಂದ ಹೊರಬರುವಂತೆ ಇಲ್ಲವೇ ಪ್ರತ್ಯೇಕವಾಗಿ ಉಳಿಯುವ ಅಗತ್ಯವನ್ನು ಪ್ರತಿಪಾದಿಸಿದ ಅವರು, ಮನೆಯಿಂದ ಕರ್ತವ್ಯ ನಿರ್ವಹಿಸುವಂತೆ ಮತ್ತು ಅನಗತ್ಯ ಪ್ರಯಾಣ ತಡೆಯುವಂತೆ ಮನವಿ ಮಾಡಿದರು. ಮುಂದಿನ ಕೆಲವು ವಾರಗಳ ಕಾಲ ಮನೆಯಿಂದ ಹೊರಗೆ ಬಾರದಂತೆ 60 ವರ್ಷ ಮೀರಿದ ಹಿರಿಯ ನಾಗರಿಕರಿಗೆ ಅವರು ಮನವಿ ಮಾಡಿದರು. ಆಸ್ಪತ್ರೆಗಳ ಮೇಲಿನ ಒತ್ತಡವನ್ನು ಒತ್ತಿ ಹೇಳಿದ ಅವರು, ಈ ಸಮಯದಲ್ಲಿ ನಿಯಮಿತವಾದ ತಪಾಸಣೆಯನ್ನು ಸದ್ಯಕ್ಕೆ ಮುಂದೂಡುವಂತೆ ಸಾಧ್ಯವಾದ ಕಡೆಗಳಲ್ಲಿ ಶಸ್ತ್ರಚಿಕಿತ್ಸೆಯ ದಿನಾಂಕವನ್ನು ಮುಂದಕ್ಕೆ ಹಾಕಿಸಲು ಮನವಿ ಮಾಡಿದರು.

ಜನತಾ ಕರ್ಪ್ಯೂ

2020ರ ಮಾರ್ಚ್ 22ರಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9ಗಂಟೆಯವರೆಗೆ ಜನತಾ ಕರ್ಪ್ಯೂ ವಿಧಿಸಿಕೊಳ್ಳುವಂತೆ ಮನವಿ ಮಾಡಿದ ಪ್ರಧಾನಮಂತ್ರಿ, ಅವಶ್ಯಕ ಸೇವೆಗಳೊಂದಿಗೆ ಸಂಪರ್ಕಿತರಾದವರ ಹೊರತು ಪಡಿಸಿ ಉಳಿದವರು ಮನೆಯಲ್ಲಿ ಉಳಿಯುವಂತೆ ಮನವಿ ಮಾಡಿದರು. ಇದರಿಂದ ಪಡೆಯುವ ಇಂಥ ಜನಾಂದೋಲನ ಮತ್ತು ಅನುಭವ ಮುಂದಿನ ಸವಾಲುಗಳನ್ನು ಎದುರಿಸಲು ನಮ್ಮನ್ನು ಸಜ್ಜುಗೊಳಿಸುತ್ತವೆ ಎಂದರು. ಮಾರ್ಚ್ 22ರ ನಮ್ಮ ಪ್ರಯತ್ನಗಳು ರಾಷ್ಟ್ರದ ಹಿತದ ದೃಷ್ಟಿಯಿಂದ ಕರ್ತವ್ಯ ನಿರ್ವಹಣೆಯಲ್ಲಿ ನಮ್ಮ ಸ್ವಯಂ ನಿಗ್ರಹ ಮತ್ತು ದೃಢ ಸಂಕಲ್ಪದ ಸಂಕೇತಗಳು ಎಂದು ಹೇಳಿದರು.

ರಾಜ್ಯ ಸರ್ಕಾರಗಳಿಗೆ ಇದರ ನೇತೃತ್ವ ವಹಿಸಿಕೊಳ್ಳುವಂತೆ ಮನವಿ ಮಾಡಿದ ಪ್ರಧಾನಮಂತ್ರಿ, ಎನ್.ಸಿ.ಸಿ. ಮತ್ತು ಎನ್.ಎಸ್.ಎಸ್. ನಾಗರಿಕ ಸಮಾಜ, ಎಲ್ಲ ಯುವ ಸಂಘಟನೆಗಳಿಗೆ ಜನತಾ ಕರ್ಪ್ಯೂ ಕುರಿತಂತೆ ಜಾಗೃತಿ ಮೂಡಿಸಲು ಮನವಿ ಮಾಡಿದರು. ಜನತಾ ಕರ್ಪ್ಯೂ ಕುರಿತಂತೆ ಕನಿಷ್ಠ 10 ಜನರಿಗೆ ಪೋನ್ ಮೂಲಕ ಮಾಹಿತಿ ನೀಡುವಂತೆ ಅವರು ಎಲ್ಲರಿಗೂ ಮನವಿ ಮಾಡಿದರು.

ನಿಸ್ವಾರ್ಥ ಸೇವೆ ಸಲ್ಲಿಸುವವರಿಗೆ ಧನ್ಯವಾದ ಸಮರ್ಪಣೆ

ಕೋವಿಡ್ 19 ಮಹಾಮಾರಿಯ ವಿರುದ್ಧ ಹಲವು ಜನರು ದೈರ್ಯವಾಗಿ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿದ್ದಾರೆ, ಅವರಲ್ಲಿ ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಸರ್ಕಾರಿ ನೌಕರರು, ವಿಮಾನಯಾನ ಸಿಬ್ಬಂದಿ, ಮಾಧ್ಯಮ ಸಿಬ್ಬಂದಿ, ಬಸ್, ರೈಲು, ಆಟೋ ಚಾಲಕರು, ಮತ್ತು ಮನೆಗಳಿಗೆ ಸರಕು ಸರಬರಾಜುಮಾಡುವವರು ಸೇರಿದ್ದಾರೆ ಎಂದರು.

ಅವರೆಲ್ಲರಿಗೂ ಸಂಕಷ್ಟದ ಕಾಲದಲ್ಲಿ ಅವರು ಮಾಡುತ್ತಿರುವ ಸೇವೆಗೆ ಗೌರವ ಸಲ್ಲಿಸಲು ಮತ್ತು ಮೆಚ್ಚುಗೆ ವ್ಯಕ್ತಪಡಿಸಲು ಮಾರ್ಚ್ 22ರಂದು 5 ಗಂಟೆಗೆ ಎಲ್ಲ ನಾಗರಿಕರೂ ಸಂಜೆ 5 ಗಂಟೆಗೆ ಮನೆಯ ಬಾಗಿಲಲ್ಲಿ ಅಥವಾ ಛಾವಣಿಯ ಕಿಟಕಿಯ ಬಳಿ ನಿಂತು 5 ನಿಮಿಷಗಳ ಕಾಲ ಚಪ್ಪಾಳೆ ತಟ್ಟಿ, ಗಂಟೆ ಅಥವಾ ಜಾಗಟೆ ಬಾರಿಸಿ ಅವರಿಗೆ ನಮಿಸಲು ಪ್ರಧಾನಮಂತ್ರಿ ತಿಳಿಸಿದರು.

ದೇಶದಾದ್ಯಂತ ಇರುವ ಸ್ಥಳೀಯ ಸರ್ಕಾರಗಳು ಸಂಜೆ 5 ಗಂಟೆಗೆ ಸೈರನ್ ಮೊಳಗಿಸಿ ಇದರ ಸೂಚನೆ ನೀಡುವಂತೆ ಮನವಿ ಮಾಡಿದರು.

ಆರ್ಥಿಕ ಸವಾಲುಗಳನ್ನು ಸರಿದೂಗಿಸಲು

ಮಹಾಮಾರಿಯಿಂದ ಎದುರಾಗಿರುವ ಆರ್ಥಿಕ ಸವಾಲುಗಳನ್ನು ನಿಭಾಯಿಸಲು, ವಿತ್ತ ಸಚಿವರ ನೇತೃತ್ವದಲ್ಲಿ ಕೋವಿಡ್ ಆರ್ಥಿಕ ಸ್ಪಂದನಾ ಕಾರ್ಯ ಪಡೆ ರಚಿಸುವುದಾಗಿ ಪ್ರಧಾನಮಂತ್ರಿ ಪ್ರಕಟಿಸಿದರು. ಈ ಕಾರ್ಯಪಡೆ ಬಾಧ್ಯಸ್ಥರೊಂದಿಗೆ ಸಮಾಲೋಚಿಸಿ, ಅವರ ಪ್ರತಿಕ್ರಿಯೆ ಪಡೆದು, ಅದರ ಆಧಾರದ ಮೇಲೆ ಸವಾಲು ಎದುರಿಸಲು ನಿರ್ಧಾರ ಕೈಗೊಳ್ಳಲಿದೆ.ಈ ಕಾರ್ಯಪಡೆಯು ಈ ಸವಾಲುಗಳನ್ನು ನಿಭಾಯಿಸಲು ಕೈಗೊಳ್ಳುವ ನಿರ್ಧಾರಗಳನ್ನು ಜಾರಿ ಮಾಡುತ್ತದೆ.

ಪ್ರಧಾನಮಂತ್ರಿಯವರು ವಾಣಿಜ್ಯ ಸಮುದಾಯ ಮತ್ತು ಹೆಚ್ಚಿನ ಆದಾಯ ಇರುವ ಗುಂಪುಗಳು ಆರ್ಥಿಕವಾಗಿ ಅಗತ್ಯ ಇರುವವರ ಬಗ್ಗೆ ಅದರಲ್ಲೂ ಕಡಿಮೆ ಆದಾಯದ ಗುಂಪುಗಳ ಅಂದರೆ ವಿವಿಧ ಸೇವೆ ಮಾಡುವವರ ಬಗ್ಗೆ ಮಾನವತೆಯಿಂದ ನೋಡುವಂತೆ, ಅವರು ಕೆಲಸಕ್ಕೆ ಬರಲು ಸಾಧ್ಯವಾಗದ ದಿನಗಳ ಸಂಬಳ ಕಡಿತ ಮಾಡದಂತೆ ಮನವಿ ಮಾಡಿದರು. ಇಂಥ ಸನ್ನಿವೇಶದಲ್ಲಿ ಮಾನವೀಯತೆಯ ಮಹತ್ವವನ್ನು ಪ್ರತಿಪಾದಿಸಿದರು.

ಆಹಾರ, ಹಾಲು, ಔಷಧ ಇತ್ಯಾದಿಯ ಯಾವುದೇ ಕೊರತೆ ಇಲ್ಲ ಎಂದು ದೇಶವಾಸಿಗಳಿಗೆ ಅವರು ಭರವಸೆ ನೀಡಿದರು. ಜನರು ಆತಂಕದಲ್ಲಿ ಖರೀದಿ ಮಾಡದಂತೆ ಅವರು ಮನವಿ ಮಾಡಿದರು.

ಪ್ರತಿಯೊಬ್ಬರೂ ಒಗ್ಗೂಡಿ ಕೋವಿಡ್-19 ಬಿಕ್ಕಟ್ಟಿನಿಂದ ಹೊರಬರಲು ಪ್ರಧಾನಮಂತ್ರಿ ಪ್ರತಿಯೊಬ್ಬರಿಗೂ ಮನವಿ ಮಾಡಿದರು. ತಪ್ಪು ಮಾಹಿತಿಗಳಿಗೆ ಕಿವಿಗೊಡದಂತೆ ಮನವಿ ಮಾಡಿದ ಪ್ರಧಾನಮಂತ್ರಿಯವರು, ಇಂಥ ಜಾಗತಿಕ ಮಹಾಮಾರಿಯ ಸಂದರ್ಭದಲ್ಲಿ ಮಾನವೀಯತೆ ಹಾಗು ಭಾರತ ಗೆಲ್ಲುವು ಮಹತ್ವ ಎಂದು ಹೇಳಿದರು.

***(Release ID: 1607263) Visitor Counter : 149