ಪ್ರಧಾನ ಮಂತ್ರಿಯವರ ಕಛೇರಿ

ಕೊರೊನ ವೈರಾಣು – ರಾಷ್ಟ್ರವನ್ನು ಉದ್ದೇಶಿಸಿ ಸನ್ಮಾನ್ಯ ಪ್ರಧಾನಿ ಭಾಷಣ

Posted On: 19 MAR 2020 9:15PM by PIB Bengaluru

ಕೊರೊನ ವೈರಾಣು – ರಾಷ್ಟ್ರವನ್ನು ಉದ್ದೇಶಿಸಿ ಸನ್ಮಾನ್ಯ ಪ್ರಧಾನಿ ಭಾಷಣ

 

ನನ್ನ ಪ್ರೀತಿಯ ದೇಶವಾಸಿಗಳೇ,

ವಿಶ್ವ ಇಂದು ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿ ಸಾಗುತ್ತಿದೆ. ಸಾಮಾನ್ಯವಾಗಿ ಯಾವುದೇ ರೀತಿಯ ಪ್ರಕೃತಿ ವಿಕೋಪ ಎದುರಾದಾಗ, ಅದು ಕೆಲವು ದೇಶ ಅಥವಾ ರಾಜ್ಯಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಆದರೆ ಈ ಬಾರಿ ಸಂಕಷ್ಟ, ಇಡೀ ವಿಶ್ವದಲ್ಲಿನ ಮಾನವ ಕುಲವನ್ನೇ ಸಂಕಷ್ಟಕ್ಕೆ ಸಿಲುಕಿಸಿದೆ.

ಕೊರೊನಾದಿಂದ ಉಂಟಾಗಿರುವ ಪರಿಣಾಮ, ಮೊದಲನೇ ಹಾಗು ಎರಡನೇ ಜಾಗತಿಕ ಯುದ್ಧಗಳ ಸಂದರ್ಭದಲ್ಲು ಯಾವುದೇ ರಾಷ್ಟ್ರಗಳು ಭಾಧಿತರಾಗಿರಲಿಲ್ಲ. ಕಳೆದ ಎರಡು ತಿಂಗಳುಗಳಿಂದ ನಾವು ವಿಶ್ವಾದ್ಯಂತ ಕೊರೊನಾ ಸಂಬಂಧಿತ ಚಿಂತಾಜನಕವಾದ ಸುದ್ದಿಗಳನ್ನು ಕೇಳುತ್ತಿದ್ದೇವೆ, ನೋಡುತ್ತಿದ್ದೇವೆ. ಈ ಎರಡು ತಿಂಗಳುಗಳಲ್ಲಿ, ಭಾರತದ 130 ಕೋಟಿ ಜನರು ಕೊರೊನಾದಂಥ ಜಾಗತಿಕ ಪಿಡುಗಿನ ವಿರುದ್ಧ ದಿಟ್ಟ ಹೋರಾಟ ನಡೆಸಿದ್ದಾರೆ.

ಅಗತ್ಯವಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಆದರೆ, ಕಳೆದ ಕೆಲವು ದಿನಗಳಿಂದ ನಿರ್ಮಾಣವಾಗುತ್ತಿರುವ ಪರಿಸ್ಥಿತಿ ನೋಡಿದರೆ, ನಾವು ಸಂಕಷ್ಟದಿಂದ ಪಾರಾಗುತ್ತಿದ್ದೇವೆ ಎಂಬ ಭಾವನೆ ಮೂಡುತ್ತಿದೆ. ಎಲ್ಲ ಸರಿಯಾಗಿದೆ ಎಂದು ಅನಿಸುತ್ತಿದೆ. ಆದರೆ, ಜಾಗತಿಕ ಮಹಾಮಾರಿ ಕೊರೊನಾದಿಂದ ನಾವು ಸಂಪೂರ್ಣ ಪಾರಾಗಿದ್ದೇವೆ ಎಂದು ನಿಶ್ಚಿಂತೆಯಿಂದ ಇರುವುದು ಸರಿಯಲ್ಲ. ಹೀಗಾಗಿ ಪ್ರತಿಯೊಬ್ಬ ಭಾರತೀಯರೂ ಎಚ್ಚರಿಕೆಯಿಂದ ಮತ್ತು ಜಾಗರೂಕತೆಯಿಂದ ಇರುವುದು ಅತ್ಯಾವಶ್ಯಕವಾಗಿದೆ.

ಸ್ನೇಹಿತರೇ,

ನಾನು ನಿಮ್ಮಿಂದ ಯಾವಾಗ ಏನೇ ಕೇಳಿದರೂ, ದೇಶದ ಜನತೆ ನನಗೆ ನಿರಾಶೆ ಉಂಟು ಮಾಡಿಲ್ಲ. ನಿಮ್ಮ ಆಶೀರ್ವಾದ ಶಕ್ತಿಯಿಂದ ನಮ್ಮ ಪ್ರಯತ್ನಗಳು ಫಲಕಾಣುತ್ತವೆ.

ಇಂದು ನಾನು ಎಲ್ಲ ದೇಶವಾಸಿಗಳಲ್ಲಿ ಕೆಲವು ಬೇಡಿಕೆ ಸಲ್ಲಿಸುತ್ತೇನೆ.  ನನಗೆ ನಿಮ್ಮ ಮುಂದಿನ ಕೆಲವು ವಾರಗಳು ಬೇಕು, ನಿಮ್ಮ ಮುಂದಿನ ಸಮಯವೂ ನನಗೆ ಬೇಕು.

ಸ್ನೇಹಿತರೆ,

ಇಲ್ಲಿಯವರೆಗೆ ಕೊರೊನಾ ಮಹಾಮಾರಿಯಿಂದ ಪಾರಾಗಲು ವಿಜ್ಞಾನಕ್ಕೆ ನಿಶ್ಚಿತವಾದ ಪರಿಹಾರವನ್ನು ಹುಡುಕಲು ಸಾಧ್ಯವಾಗಿಲ್ಲ. ಇದನ್ನು ನಿಗ್ರಹಿಸುವ ಯಾವುದೇ ಲಸಿಕೆಯನ್ನೂ ಕಂಡು ಹಿಡಿಯಲಾಗಿಲ್ಲ. ಇಂಥ ಪರಿಸ್ಥಿತಿಯಲ್ಲಿ ಚಿಂತೆ ಹೆಚ್ಚಾಗುವುದು ಸಹಜ. ವಿಶ್ವದ ಯಾವ ದೇಶಗಳು ಕೊರೊನಾ  ವೈರಾಣು ಮತ್ತು ಅದರ ಪ್ರಭಾವದಿಂದ ಹೆಚ್ಚು ಪೀಡಿತವಾಗಿವೆಯೋ ಅಲ್ಲಿನ ಅಧ್ಯಯನದಿಂದ ನಮಗೆ ಮತ್ತೊಂದು ಅಂಶ ತಿಳಿದುಬಂದಿದೆ. ಅದೇನೆಂದರೆ ಈ ದೇಶಗಳಲ್ಲಿ ಸೋಂಕು ಕಾಣಿಸಿಕೊಂಡ ಕೆಲವೇ ದಿನಗಳಲ್ಲಿ ಅದು ಸ್ಫೋಟವಾಗಿದೆ. ಈ ದೇಶಗಳಲ್ಲಿ ಕೊರೊನಾ  ಸೋಂಕಿತರ ಸಂಖ್ಯೆ ಬಹು ವೇಗವಾಗಿ ಹೆಚ್ಚಾಗಿದೆ. ಭಾರತ ಸರ್ಕಾರ ಈ ಸ್ಥಿತಿಯ ಬಗ್ಗೆ, ಈ ಜಾಗತಿಕ ಮಹಾಮಾರಿ ಹರಡುವುದರ ಬಗ್ಗೆ ಸಂಪೂರ್ಣವಾಗಿ ನಿಗಾ ಇಟ್ಟಿದೆ.

ಕೆಲವು ದೇಶಗಳು ಅಗತ್ಯವಾದ ನಿರ್ಧಾರಗಳನ್ನು ಕೈಗೊಂಡು ತಮ್ಮ ಜನರನ್ನು ಸಾಧ್ಯವಾದಷ್ಟೂ ಪ್ರತ್ಯೇಕವಾಗಿಟ್ಟು, ಪರಿಸ್ಥಿತಿಯನ್ನು ನಿಭಾಯಿಸಿವೆ. ಇದರಲ್ಲಿ ನಾಗರಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ.

ಭಾರತದಂಥ 130 ಕೋಟಿ ಜನರಿರುವ, ಅಭಿವೃದ್ಧಿಶೀಲ ರಾಷ್ಟ್ರದ ಮುಂದೆ ಕೊರೊನಾ ದಂಥ ರೋಗ ಪಸರಿಸುವುದು ಸಾಮಾನ್ಯವಾದ ವಿಷಯವಲ್ಲ.

ಇಂದು ಪ್ರಗತಿಹೊಂದಿದ ಪ್ರಮುಖ ರಾಷ್ಟ್ರಗಳಲ್ಲೂ ನಾವು ಕೊರೊನಾ ಮಹಾಮಾರಿಯ ಪ್ರಭಾವವನ್ನು ನೋಡಿದಾಗ, ಭಾರತದ ಮೇಲೆ ಇದು ಪರಿಣಾಮ ಬೀರುವುದಿಲ್ಲ ಎಂದು ತಿಳಿಯುವುದು ತಪ್ಪಾಗುತ್ತದೆ. ಹೀಗಾಗಿ, ಈ ಜಾಗತಿಕ ಮಹಾಮಾರಿಯ ವಿರುದ್ಧ ಹೋರಾಟ ನಡೆಸಲು, ಎರಡು ಮುಖ್ಯ ವಿಷಯಗಳ ಅವಶ್ಯಕತೆ ಇದೆ. ಮೊದಲನೆಯದು ಸಂಕಲ್ಪ ಮತ್ತು ಎರಡನೆಯದು ಸಂಯಮ.

ಈ ಜಾಗತಿಕ ಮಹಾಮಾರಿಯನ್ನು ತಡೆಯಲು ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ, ನಮ್ಮ ಕರ್ತವ್ಯ ಪಾಲಿಸಬೇಕಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವ ಸಲಹೆ ಸೂಚನೆಗಳನ್ನು ಪಾಲಿಸುತ್ತೇವೆ ಎಂದು ಇಂದು ದೇಶದ 130 ಕೋಟಿ ಜನರು ತಮ್ಮ ಸಂಕಲ್ಪವನ್ನು ಮತ್ತಷ್ಟು ದೃಢಪಡಿಸುವ ಅಗತ್ಯವಿದೆ.

ನಾವು ಸ್ವಯಂ ಸೋಂಕಿಗೆ ತುತ್ತಾಗುವುದಿಲ್ಲ ಮತ್ತು ಇತರರನ್ನು ಸೋಂಕಿತರಾಗದಂತೆ ತಡೆಯುತ್ತೇವೆ ಎಂದು ನಾವು ಇಂದು ಈ ಸಂಕಲ್ಪ ಮಾಡಬೇಕಾಗಿದೆ.

ಸ್ನೇಹಿತರೇ,

ಈ ಜಾಗತಿಕ ಮಹಾಮಾರಿಗೆ ಒಂದೇ ಒಂದು ಮಂತ್ರ ಕೆಲಸ ಮಾಡುತ್ತದೆ. ಅದೇನೆಂದರೆ... ನಾವು ಆರೋಗ್ಯವಾಗಿದ್ದರೆ, ಜಗತ್ತೇ ಆರೋಗ್ಯವಾಗಿರುತ್ತದೆ’. ಪ್ರಸಕ್ತ ಸ್ಥಿತಿಯಲ್ಲಿ  ಇದಕ್ಕೆ ಯಾವುದೇ ಔಷಧ ಇಲ್ಲ. ಹೀಗಾಗಿ ನಾವು ಸ್ವಯಂ ಆರೋಗ್ಯವಾಗಿರುವುದು ಅತ್ಯಗತ್ಯವಾಗಿದೆ.

ಈ ಕಾಯಿಲೆಯಿಂದ ಪಾರಾಗಲು ಮತ್ತು ನಾವು ಸ್ವಯಂ ಆರೋಗ್ಯವಂತರಾಗಲು ಸಂಯಮ ಅತ್ಯಗತ್ಯವಾಗಿದೆ.

ಈ ಸಂಯಮದ ರೀತಿ ಯಾವುದು ಎಂದರೆ, ಹೆಚ್ಚು ಜನರು ಸೇರುವ ಕಡೆ ಹೋಗದೇ ಇರುವುದು ಮತ್ತು ಮನೆಯಿಂದ ಹೊರಗೆ ಬಾರದೇ ಇರುವುದು. ಜಾಗತಿಕ ಕೊರೊನಾ ಈ ಸ್ಥಿತಿಯಲ್ಲಿ ಇಂದು ಸಾಮಾಜಿಕ ಅಂತರ ಸೊಷಿಯಲ್ ಡಿಸ್ಟೆನ್ಸಿಂಗ್ ಅತ್ಯಂತ ಅಗತ್ಯವಾಗಿದೆ.

ನಮ್ಮ ಸಂಕಲ್ಪ ಮತ್ತು ಸಂಯಮ ಈ ಜಾಗತಿಕ ಮಹಾಮಾರಿಯ ಪ್ರಭಾವನ್ನು ಕಡಿಮೆ ಮಾಡುವಲ್ಲಿ ಬಹಳ ಮಹತ್ವದ ಪಾತ್ರ ನಿರ್ವಹಿಸುತ್ತದೆ.

ಹೀಗಾಗಿಯೇ ನಿಮಗೆ ನೀವು ಆರೋಗ್ಯವಾಗಿದ್ದೀರಿ ಎಂದು ಅನಿಸಿದರೆ, ನಿಮಗೆ ಏನೂ ಆಗುವುದಿಲ್ಲ ಎಂದು ನೀವು ಮಾರುಕಟ್ಟೆಯಲ್ಲಿ ಹಾಗೇ ಓಡಾಡುತ್ತಿದ್ದರೆ, ರಸ್ತೆಗಳಲ್ಲಿ ಓಡಾಡುತ್ತಿದ್ದರೂ, ಕೊರೊನಾ ದಿಂದ ನಮಗೆ ಏನೂ ಆಗುವುದಿಲ್ಲ ಎಂದುಕೊಂಡಿದ್ದರೆ ಅದು ಸರಿಯಾದ ಚಿಂತನೆಯಲ್ಲ. ಹೀಗೆ ಮಾಡುವುದರಿಂದ ನೀವು ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಅನ್ಯಾಯ ಮಾಡುತ್ತೀರಿ.

ಹೀಗಾಗಿಯೇ ನಾನು ದೇಶವಾಸಿಗಳೆಲ್ಲರಿಗೂ ಮನವಿ ಮಾಡುವುದೇನೆಂದರೆ, ಮುಂದಿನ ಕೆಲವು ವಾರಗಳವರೆಗೆ ಅತ್ಯಗತ್ಯ ಎನಿಸಿದಾಗ ಮಾತ್ರವೇ ಮನೆಯಿಂದ ಹೊರಗೆ ತೆರಳಿ. ಎಷ್ಟು ಸಾಧ್ಯವೋ ಅಷ್ಟು ನಿಮ್ಮ ಕೆಲಸವನ್ನು, ಅದು ವಾಣಿಜ್ಯಕ್ಕೆ ಸಂಬಂಧಿಸಿದ್ದರಲಿ, ಕಚೇರಿಗೆ ಸಂಬಂಧಿಸಿದ್ದಿರಲಿ, ನಿಮ್ಮ ಮನೆಗಳಿಂದಲೇ ಮಾಡಿ.

ಯಾರು ಸರ್ಕಾರಿ ಸೇವೆ, ರೋಗ್ಯ ಸೇವೆ, ಜನಪ್ರತಿನಿಧಿಗಳು, ಮಾಧ್ಯಮದವರಾಗಿದ್ದಾರೋ ಅವರು ಸಕ್ರಿಯರಾಗಿರುವುದು ಅತ್ಯವಶ್ಯಕ. ಸಮಾಜದ ಇತರ ಎಲ್ಲ ಜನರೂ ಸಮಾಜದಿಂದ ತಮ್ಮನ್ನು ಪ್ರತ್ಯೇಕವಾಗಿಟ್ಟುಕೊಳ್ಳುವುದು ಅವಶ್ಯವಾಗಿದೆ.

ನನ್ನ ಇನ್ನೊಂದು ಮನವಿ ಏನೆಂದರೆ, ನಮ್ಮ ಕುಟುಂಬದಲ್ಲಿ ಯಾರೇ ಹಿರಿಯ ನಾಗರಿಕರಿದ್ದರೂ, 65 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಿದ್ದರೆ, ಅವರು ಮುಂದಿನ ಕೆಲವು ವಾರಗಳವರೆಗೆ ಮನೆಯಿಂದ ಹೊರಗೆ ಬರಬಾರದು.

ಇಂದಿನ ಪೀಳಿಗೆ ಇದಕ್ಕೆ ಹೆಚ್ಚು ಪರಿಚಿತರಾಗಿರುವುದಿಲ್ಲ, ಆದರೆ ಹಿಂದಿನ ಕಾಲದಲ್ಲಿ, ಯುದ್ಧದ ಸಮಯದಲ್ಲಿ ರಾತ್ರಿಯ ವೇಳೆ ದೀಪಗಳನ್ನೆಲ್ಲಾ ಆರಿಸಿ ಕತ್ತಲೆ ಮಾಡಲಾಗುತ್ತಿತ್ತು. ಇದು ಕೆಲವೊಮ್ಮೆ ದೀರ್ಘಕಾಲದವರೆಗೂ ಜಾರಿಯಾಗುತ್ತಿತ್ತು. ಬಹಳಷ್ಟು ಬಾರಿ ಬ್ಲಾಕೌಟ್ ಡ್ರಿಲ್ ಸಹ ನಡೆಸಲಾಗುತ್ತಿತ್ತು.

ಸ್ನೇಹಿತರೆ,

ನಾನು ಇಂದು ಪ್ರತಿಯೊಬ್ಬ ದೇಶವಾಸಿಗಳಿಂದ ಮತ್ತೊಂದು ಬೆಂಬಲವನ್ನು ಬಯಸುತ್ತೇನೆ. ಅದೇನೆಂದರೆ, ಜನತಾ ಕರ್ಫ್ಯೂ.

 

ಜನತಾ ಕರ್ಫ್ಯೂ ಎಂದರೆ, ಜನರಿಂದಲೇ ಜನರು ತಮ್ಮ ಮೇಲೆ ಹೇರಿಕೊಳ್ಳುವ ಕರ್ಫ್ಯೂ ಆಗಿದೆ. ಈ ಭಾನುವಾರ, ಅಂದರೆ 22ರ ಮಾರ್ಚ್ ನಲ್ಲಿ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9ಗಂಟೆಯವರೆಗೆ ಪ್ರತಿಯೊಬ್ಬರೂ ಜನತಾ ಕರ್ಫ್ಯೂ ಪಾಲಿಸಬೇಕಾಗುತ್ತದೆ.

ಈ ಅವಧಿಯಲ್ಲಿ ನಾವು ಮನೆಗಳಿಂದ ಹೊರಗೆ ಬರಬಾರದುರಸ್ತೆಗಳಲ್ಲಿ ಓಡಾಡಬಾರದು, ಬಡಾವಣೆಯಲ್ಲೂ ಅಡ್ಡಾಡಬಾರದು. ಕೇವಲ ಅವಶ್ಯಕ ಸೇವೆಯಲ್ಲಿ ತೊಡಗಿರುವವರು ಮಾತ್ರವೇ ಮಾರ್ಚ್ 22ರಂದು ತಮ್ಮ ಮನೆಗಳಿಂದ ಹೊರಗೆ ಬರಬೇಕು.

ಸ್ನೇಹಿತರೆ, ಮಾರ್ಚ್ 22ರ ನಮ್ಮ ಪ್ರಯತ್ನ ನಮ್ಮ ಆತ್ಮ ಸಂಯಮ, ದೇಶದ ಹಿತದೃಷ್ಟಿಯಿಂದ ಕರ್ತವ್ಯ ಪಾಲನೆಯ ಸಂಕಲ್ಪದ ಪ್ರತೀಕವಾಗಿರುತ್ತದೆ. ಮಾರ್ಚ್ 22ರ ಜನತಾ ಕರ್ಫ್ಯೂವಿನ ಯಶಸ್ಸು ಮತ್ತು ಇದರ ಅನುಭವ ನಮಗೆ ಮುಂಬರುವ ಸವಾಲುಗಳನ್ನು ಎದುರಿಸಲೂ ಸಜ್ಜುಗೊಳಿಸುತ್ತದೆ.

ನಾನು, ದೇಶದ ಎಲ್ಲ ರಾಜ್ಯ ಸರ್ಕಾರಗಳಿಗೆ ಜನತಾ ಕರ್ಫ್ಯೂ ಪಾಲನೆಯ ನೇತೃತ್ವ ವಹಿಸಬೇಕು ಎಂದು ಆಗ್ರಹಿಸುತ್ತೇನೆ. ನಾನು, ಈಗಿನಿಂದ ಹಿಡಿದು, ಮುಂದಿನ ಎರಡು ದಿನಗಳ ಕಾಲ ಎಲ್ಲರಲ್ಲೂ ಜನತಾ ಕರ್ಫ್ಯೂ ಬಗ್ಗೆ ಜಾಗೃತಿ ಮೂಡಿಸಲು ಎನ್.ಎಸ್.ಎಸ್.(ರಾಷ್ಟ್ರೀಯ ಸೇವಾ ಯೋಜನೆ), ಎನ್.ಸಿ.ಸಿ.(NCC), ಜೊತೆ ಸಂಪರ್ಕ ಹೊಂದಿರುವ ಯುವಜನರಿಗೆ, ದೇಶದ ಎಲ್ಲ ಯುವಜನರು, ನಾಗರಿಕ ಸಮಾಜ ಮತ್ತು ಎಲ್ಲ ರೀತಿಯ ಸಂಘಟನೆಯಲ್ಲಿ ತೊಡಗಿರುವವವರಿಗೂ ಮನವಿ ಮಾಡುತ್ತೇನೆ.

ಸಾಧ್ಯವಾದರೆ, ಪ್ರತಿಯೊಬ್ಬರೂ ಪ್ರತಿದಿನ ಕನಿಷ್ಠ 10 ಜನರಿಗೆ ಫೋನ್ ಮಾಡಿ, ಕೊರೊನಾ ವೈರಾಣುವಿನಿಂದ ಪಾರಾಗುವ ವಿಚಾರದ ಜೊತೆಗೆ ಜನತಾ ಕರ್ಫ್ಯೂ  ಬಗ್ಗೆಯೂ ತಿಳಿಸಬೇಕು.

ಸ್ನೇಹಿತರೆ,

ಈ ಜನತಾ ಕರ್ಫ್ಯೂ, ಒಂದು ರೀತಿಯಲ್ಲಿ ನಮಗೆ, ಭಾರತಕ್ಕೆ ಒಂದು ಒರೆ ಹಚ್ಚುವ ಕಾರ್ಯವೇ ಸರಿ. ಇದು ಜಾಗತಿಕ ಮಹಾಮಾರಿ ಕೊರೊನಾ ದ ವಿರುದ್ಧ ಹೋರಾಡಲು ಭಾರತ ಎಷ್ಟು ಸಿದ್ಧವಿದೆ ಎಂದು ತಿಳಿಯುವ ಪರೀಕ್ಷೆಗೆ ಒಡ್ಡಿಕೊಳ್ಳುವ ಸಮಯವೂ ಆಗಿದೆ.

ನಿಮ್ಮೆಲ್ಲರ ಪ್ರಯತ್ನದ ನಡುವೆ, ಜನತಾಕರ್ಫ್ಯೂ ದಿನ ಅಂದರೆ ಮಾರ್ಚ್ 22ರಂದು ನಾನು ಮತ್ತೊಂದು ಸಹಾಯವನ್ನೂ ಕೋರುತ್ತೇನೆ.

ಸ್ನೇಹಿತರೆ,

ಕಳೆದ ಎರಡು ತಿಂಗಳಿನಿಂದ ಲಕ್ಷಾಂತರ ಜನರು, ಆಸ್ಪತ್ರೆಗಳಲ್ಲಿ, ವಿಮಾನ ನಿಲ್ದಾಣಗಳಲ್ಲಿ, ಹಗಲಿರುಳು ಕರ್ತವ್ಯದಲ್ಲಿ ತೊಡಗಿದ್ದಾರೆ. ವೈದ್ಯರು, ಶುಶ್ರೂಷಕಿಯರು, ಆಸ್ಪತ್ರೆಯ ಸಿಬ್ಬಂದಿ, ನೈರ್ಮಲ್ಯ ಕೆಲಸ ಮಾಡುವ ಸೋದರ ಸೋದರಿಯರು, ವಿಮಾನ ಯಾನ ಸಂಸ್ಥೆಗಳ ಕೆಲಸಗಾರರು, ಸರ್ಕಾರಿ ಉದ್ಯೋಗಿಗಳು, ಪೊಲೀಸರು, ಮಾಧ್ಯಮದವರು, ರೈಲು, ಬಸ್, ಆಟೋರಿಕ್ಷಾ ಸೇವೆಯೊಂದಿಗೆ ಸಂಪರ್ಕಿತರಾಗಿರುವವರು, ಮನೆ ಬಾಗಲಿಗೆ ಸಾಮಗ್ರಿ ಸೇವೆ ನೀಡುವವರು, ತಮ್ಮ ಕಾಳಜಿ ವಹಿಸದೆ, ಇನ್ನೊಬ್ಬರ ಸೇವೆಯಲ್ಲಿ ತೊಡಗಿದ್ದಾರೆ.

ಇಂದಿನ ಪರಿಸ್ಥಿತಿ ನೋಡಿದರೆ, ಈ ಸೇವೆ ಸಾಮಾನ್ಯವಾದುವುಗಳಲ್ಲ. ಇಂದು ಅವರೂ ಕೂಡ ಸೋಂಕು ರೋಗಕ್ಕೆ ತುತ್ತಾಗುವ ಭಯ ಇದೆ.  ಆದರೂ ಅವರು, ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಮತ್ತು ಮತ್ತೊಬ್ಬರ ಸೇವೆ ಮಾಡುತ್ತಿದ್ದಾರೆ.

ಇವರು ರಾಷ್ಟ್ರ ರಕ್ಷಕರ ರೀತಿ ಕೊರೊನಾ  ಮಹಾಮಾರಿ ಮತ್ತು ನಮ್ಮ ನಡುವೆ ನಿಂತಿದ್ದಾರೆ. ದೇಶ ಇವರಿಗೆ ಆಭಾರಿಯಾಗಿದೆ.

ಮಾರ್ಚ್ 22ರಂದು ನಾವು ಈ ಎಲ್ಲ ಜನರಿಗೂ ಧನ್ಯವಾದ ಅರ್ಪಿಸೋಣ ಎಂದು ನಾನು ಬಯಸುತ್ತೇನೆ. ಭಾನುವಾರ 5 ಗಂಟೆಗೆ ನಾವು ನಮ್ಮ ಮನೆಯ ಬಾಗಿಲಲ್ಲಿ ನಿಂತು, ಛಾವಣಿಯ ಕಿಟಕಿಗಳ ಬಳಿ ನಿಂತು, 5 ನಿಮಿಷಗಳ ಕಾಲ ಇಂಥ ಜನರಿಗೆ ಕೃತಜ್ಞತೆ ವ್ಯಕ್ತಪಡಿಸೋಣ. ಚಪ್ಪಾಳೆ ತಟ್ಟುವ ಮೂಲಕ, ಜಾಗಟೆ ಬಾರಿಸುವ, ಇಲ್ಲವೇ ಗಂಟೆ ಭಾರಿಸುವ ಮೂಲಕ ನಾವು ಈ ಜನರಿಗೆ ನಮಿಸೋಣ ಮತ್ತು ಅವರ ಆತ್ಮ ವಿಶ್ವಾಸ ಹೆಚ್ಚಿಸೋಣ.

ಇಡೀ ದೇಶದ ಸ್ಥಳೀಯ ಆಡಳಿತಗಳಿಗೆ ನನ್ನ ಮನವಿ ಏನೆಂದರೆ, ಮಾರ್ಚ್ 22ರಂದು ಭಾನುವಾರ 5 ಗಂಟೆಗೆ ಸೈರನ್ ಮೊಳಗಿಸುವ ಮೂಲಕ ಎಲ್ಲ ಜನರಿಗೂ ಇದರ ಸೂಚನೆಯನ್ನು ತಲುಪಿಸಬೇಕು.

ಸೇವಾ ಪರಮೋಧರ್ಮಃ ಎನ್ನುವುದು ನಮ್ಮ ಸಂಸ್ಕಾರ ಎಂದು ತಿಳಿಯುವ ಇಂಥ ದೇಶವಾಸಿಗಳ ಬಗ್ಗೆ, ನಾವು ಸಂಪೂರ್ಣ ಶ್ರದ್ಧೆಯಿಂದ ನಮ್ಮ ಭಾವನೆಗಳನ್ನು ವ್ಯಕ್ತಪಡಿಸೋಣ. 

ಸ್ನೇಹಿತರೆ,

ಸಂಕಷ್ಟದ ಕಾಲದಲ್ಲಿ ನಮ್ಮ ಆಸ್ಪತ್ರೆಗಳ ಮೇಲೆ ಮತ್ತು ಅತ್ಯವಶ್ಯಕ ಸೇವೆಗಳ ಮೇಲೆ ಒತ್ತಡ ನಿರಂತರವಾಗಿ ಹೆಚ್ಚುತ್ತಿದೆ ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು, ಹೀಗಾಗಿ ನಾನು ನಿಮ್ಮಲ್ಲಿ ಮನವಿ ಮಾಡುವುದೇನೆಂದರೆ, ನಿಯಮಿತ ತಪಾಸಣೆಗಾಗಿ ಆಸ್ಪತ್ರೆಗಳಿಗೆ ಹೋಗುವುದನ್ನು ಎಷ್ಟು ಕಡಿಮೆ ಮಾಡಲು ಸಾಧ್ಯವೋ ಅಷ್ಟು ಕಡಿಮೆ ಮಾಡಿ.

ನಿಮಗೆ ತೀರ ಅತ್ಯಗತ್ಯ ಎನಿಸಿದರೆ, ನಿಮಗೆ ಪರಿಚಿತರಿರುವ ವೈದ್ಯರು ಅಥವಾ ಕುಟುಂಬ ವೈದ್ಯರು ಅಥವಾ ನಿಮ್ಮ ಸಂಬಂಧಿಕರಲ್ಲಿ ಯಾರಾದರೂ ವೈದ್ಯರಿದ್ದರೆ, ಅವರಿಂದ ಅಗತ್ಯವಾದ ಸಲಹೆಗಳನ್ನು ಪಡೆಯಿರಿ.

ಒಂದೊಮ್ಮೆ ನೀವು ಈಗಾಗಲೇ ಅತ್ಯಗತ್ಯ ಎನಿಸದ ಯಾವುದೇ ಶಸ್ತ್ರಚಿಕಿತ್ಸೆಗೆ ಸಮಯ ಪಡೆದಿದ್ದರೆ, ಅದನ್ನೂ ಕೂಡ ಒಂದು ತಿಂಗಳ ನಂತರ ಮಾಡಿಸಿಕೊಳ್ಳಲು ಮತ್ತೊಂದು ದಿನಾಂಕ ಪಡೆಯಿರಿ.

ಸ್ನೇಹಿತರೆ,

ಈ ಜಾಗತಿಕ ಮಹಾಮಾರಿ ಆರ್ಥಿಕತೆಯ ಮೇಲೂ ವ್ಯಾಪಕ ಶ್ರೇಣಿಯ ಪರಿಣಾಮ ಬೀರಲಿದೆ. ಕೊರೊನಾ  ವೈರಾಣುವಿನಿಂದ ತಲೆದೋರಿರುವ ಆರ್ಥಿಕ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರ, ಹಣಕಾಸು ಸಚಿವರ ನೇತೃತ್ವದಲ್ಲಿ ಕೋವಿಡ್ -19 ಆರ್ಥಿಕ ಸ್ಪಂದನಾ ಕಾರ್ಯ ಪಡೆಯನ್ನು ಸ್ಥಾಪಿಸಲು ನಿರ್ಧರಿಸಿದೆ.  ಈ ಕಾರ್ಯಪಡೆಯು ನಿರಂತರ ಸಂವಾದ ಮತ್ತು ಬಾಧ್ಯಸ್ಥರಿಂದ ಬರುವ ಪ್ರತಿಕ್ರಿಯೆ ಮತ್ತು ಎಲ್ಲ ಪರಿಸ್ಥಿತಿಯ ಮತ್ತು ಎಲ್ಲ ಆಯಾಮಗಳ ವಿಶ್ಲೇಷಣೆಯೊಂದಿಗೆ ಹತ್ತಿರದ ಭವಿಷ್ಯದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ.

ಈ ಮಹಾಮಾರಿ ನಮ್ಮ ದೇಶದ ಮಧ್ಯಮವರ್ಗದವರ, ಕೆಳ ಮಧ್ಯಮ ವರ್ಗದವರ ಮತ್ತು ಬಡಜನರ ಕ್ಷೇಮ ಮತ್ತು ಆರ್ಥಿಕ ಹಿತಾಸಕ್ತಿಗೆ ತೀವ್ರ ಘಾಸಿ ಉಂಟು ಮಾಡಿದೆ ಎಂಬುದು ಸ್ಪಷ್ಟ. ಇಂಥ ಸಂಕಷ್ಟದ ಪರಿಸ್ಥಿತಿಯಲ್ಲಿ, ಅವರಿಗೆ ಸೇವೆಗಳನ್ನು ಒದಗಿಸುವ ಎಲ್ಲ ಜನರ ಆರ್ಥಿಕ ಸ್ಥಿತಿಯ ಬಗ್ಗೆ ಎಷ್ಟು ಸಾಧ್ಯವೋ ಅಷ್ಟು ಗಮನ ಹರಿಸುವಂತೆ ನಾನು ವಾಣಿಜ್ಯ ಸಮುದಾಯ ಮತ್ತು ಸಮಾಜದಲ್ಲಿ ಅತಿ ಹೆಚ್ಚು ಆದಾಯ ಪಡೆಯುತ್ತಿರುವ ವರ್ಗಗಳಿಗೆ ಮನವಿ ಮಾಡುತ್ತೇನೆ. ಮುಂದಿನ ಕೆಲವು ದಿನಗಳಲ್ಲಿ ಇವರಿಗೆ ನಿಮ್ಮ ಮನೆಗಳಿಗೆ ಅಥವಾ ಕಚೇರಿಗೆ ಬರಲು ಸಾಧ್ಯವಾಗದೇ ಇರಬಹುದು. ಇಂಥ ಸನ್ನಿವೇಶದಲ್ಲಿ, ಅವರನ್ನು ಸಹಾನುಭೂತಿ ಮತ್ತು ಮಾನವೀಯತೆಯಿಂದ ನೋಡಿ ಹಾಗೂ ಅವರ ಸಂಬಳ ಕಡಿತ ಮಾಡಬೇಡಿ. ಅವರೂ ಕೂಡ ತಮ್ಮ ಮನೆ ನಡೆಸಬೇಕು, ತಮ್ಮ ಕುಟುಂಬವನ್ನು ರೋಗದಿಂದ ರಕ್ಷಿಸಬೇಕು ಎಂಬುದನ್ನು ಸದಾ ಗಮನದಲ್ಲಿಟ್ಟುಕೊಳ್ಳಿ.

ಅತ್ಯಾವಶ್ಯಕ ವಸ್ತುಗಳಾದ ಹಾಲು, ದಿನಸಿ ಮತ್ತು ಔಷಧಗಳ ಕೊರತೆ ಬಾರದ ರೀತಿಯಲ್ಲಿ ಖಾತ್ರಿಪಡಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ನಾನು ಎಲ್ಲ ಭಾರತೀಯರಿಗೆ ಮರು ಆಶ್ವಾಸನೆ ನೀಡಲು ಬಯಸುತ್ತೇನೆ.  ಹೀಗಾಗಿ, ನನ್ನ ದೇಶವಾಸಿಗಳಲ್ಲಿ ಮನವಿ ಮಾಡುವುದೇನೆಂದರೆ, ನಿಮಗೆ ಎಷ್ಟು ಅಗತ್ಯವೋ ಅಷ್ಟು ಮಾತ್ರ ಖರೀದಿ ಮಾಡಿ, ಆತಂಕಕ್ಕೆ ಒಳಗಾಗಿ ಹೆಚ್ಚಿನ ಅವಶ್ಯಕ ವಸ್ತುಗಳನ್ನು ಖರೀದಿಸಿ ಇಟ್ಟುಕೊಳ್ಳಬೇಡಿ.

ಸ್ನೇಹಿತರೆ,

ಕಳೆದ ಎರಡು ತಿಂಗಳುಗಳಿಂದ 130 ಕೋಟಿ ಭಾರತೀಯರು, ಪ್ರತಿಯೊಬ್ಬ ನಾಗರಿಕರು, ಈ ರಾಷ್ಟ್ರೀಯ ಬಿಕ್ಕಟ್ಟನ್ನು ತಮ್ಮ ಸ್ವಂತದ್ದೆಂದು ಪರಿಗಣಿಸಿ, ಸಮಾಜಕ್ಕೆ ಮತ್ತು ದೇಶಕ್ಕೆ ಏನು ಸಾಧ್ಯವೋ ಅದನ್ನು ಮಾಡಿದ್ದಾರೆ. ನೀವು ಮುಂದಿನ ದಿನಗಳಲ್ಲೂ ಇದೇ ರೀತಿಯಲ್ಲಿ ನಿಮ್ಮ ಜವಾಬ್ದಾರಿಗಳನ್ನು ಮತ್ತು ಕರ್ತವ್ಯಗಳನ್ನು ನಿಭಾಯಿಸುತ್ತೀರಿ ಎಂಬ ಸಂಪೂರ್ಣ ವಿಶ್ವಾಸ ನನಗಿದೆ.

ಹೌದು ನಾನು ಒಪ್ಪುತ್ತೇನೆ. ಇಂಥ ಸಂಕಷ್ಟದ ಸಮಯದಲ್ಲಿ, ಕೆಲವು ಕಠಿಣ ಪರಿಸ್ಥಿತಿಗಳೂ ತಲೆದೋರುತ್ತವೆ ಮತ್ತು ಆತಂಕವೂ ಇರುತ್ತದೆ. ವದಂತಿಗಳೂ ಹಬ್ಬುತ್ತವೆ. ಹಲವಾರು ಬಾರಿ, ನಾಗರಿಕರಾಗಿ ನಮ್ಮ ನಿರೀಕ್ಷೆಗಳು ಈಡೇರುವುದಿಲ್ಲ. ಆದಾಗ್ಯೂ, ಈ ಬಿಕ್ಕಟ್ಟು ತೀರಾ ಬೃಹತ್ತಾಗಿದ್ದು, ನಮ್ಮ ಎಲ್ಲ ದೇಶವಾಸಿಗಳೂ ಸಂಕಷ್ಟದ ನಡುವೆಯೂ ಈ ಸವಾಲುಗಳನ್ನು ದಿಟ್ಟವಾಗಿ ಮತ್ತು ದೃಢ ಸಂಕಲ್ಪದಿಂದ  ಎದುರಿಸಲೇಬೇಕಾಗಿದೆ.

ಸ್ನೇಹಿತರೆ,

ನಾವು ಕೊರೊನಾ  ವೈರಾಣುವಿನಿಂದ ರಕ್ಷಿಸಿಕೊಳ್ಳಲು ನಮ್ಮ ಎಲ್ಲ ಸಾಮರ್ಥ್ಯ ಮತ್ತು ದಕ್ಷತೆಯನ್ನು ವಿನಿಯೋಗಿಸುವ ಅಗತ್ಯವಿದೆ. ಅದು ಕೇಂದ್ರ ಸರ್ಕಾರವೇ ಆಗಿರಲಿ, ರಾಜ್ಯ ಸರ್ಕಾರವೇ ಆಗಿರಲಿ, ಸ್ಥಳೀಯ ಪ್ರಾಧಿಕಾರವೇ ಆಗಿರಲಿ, ಪಂಚಾಯ್ತಿಯೇ ಆಗಿರಲಿ, ಜನ ಪ್ರತಿನಿಧಿಗಳೇ ಆಗಿರಲಿ ಅಥವಾ ನಾಗರಿಕ ಸಮಾಜದವರೇ ಆಗಿರಲಿ, ಅವರೆಲ್ಲರೂ ತಮ್ಮದೇ ಆದ ರೀತಿಯಲ್ಲಿ ಈ ಜಾಗತಿಕ ಮಹಾಮಾರಿಯ ವಿರುದ್ಧದ ಹೊರಾಟಕ್ಕೆ ಶಕ್ತಿ ತುಂಬುತ್ತಿದ್ದಾರೆ. ನೀವೂ ನಿಮ್ಮ ಕೈಲಾದ ಪ್ರಯತ್ನ ಮಾಡಿ!

ಜಾಗತಿಕ ಮಹಾಮಾರಿಯ ಈ ಸನ್ನಿವೇಶದಲ್ಲಿ, ಮಾನವತೆ ವಿಜಯ ಸಾಧಿಸಲಿ, ಭಾರತ ಜಯ ಸಾಧಿಸಲಿ!

ನವರಾತ್ರಿಯ ಹಬ್ಬ ಇನ್ನು ಕೆಲವೇ ದಿನಗಳಲ್ಲಿ ಬರಲಿದೆ. ಇದು ಶಕ್ತಿ ದೇವತೆಯನ್ನು ಪೂಜಿಸುವ ಪರ್ವಕಾಲವಾಗಿದೆ. ಭಾರತ ಪೂರ್ಣ ಶಕ್ತಿ, ಚೈತನ್ಯದೊಂದಿಗೆ ಮುಂದೆ ಸಾಗಲಿ ಎಂಬುದೇ ನನ್ನ ಹೃದಯಾಂತರಾಳದ ಶುಭಕಾಮನೆಗಳಾಗಿವೆ. ಎಲ್ಲರಿಗೂ ಶುಭವಾಗಲಿ.

ತುಂಬ ಧನ್ಯವಾದಗಳು.

*****


(Release ID: 1607262) Visitor Counter : 815