ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19: ನಿಯಂತ್ರಣ ಮತ್ತು ತಡೆಗಟ್ಟುವಿಕೆಗಾಗಿ ಸಲಹೆಗಳು ಮತ್ತು ಮಾರ್ಗಸೂಚಿಗಳ ಕುರಿತ ಮಾಹಿತಿ
Posted On:
17 MAR 2020 8:05PM by PIB Bengaluru
ಕೋವಿಡ್-19: ನಿಯಂತ್ರಣ ಮತ್ತು ತಡೆಗಟ್ಟುವಿಕೆಗಾಗಿ ಸಲಹೆಗಳು ಮತ್ತು ಮಾರ್ಗಸೂಚಿಗಳ ಕುರಿತ ಮಾಹಿತಿ
ಸಂಪುಟ ಕಾರ್ಯದರ್ಶಿಯವರು ವಿವಿಧ ಸಚಿವಾಲಯಗಳು/ ಇಲಾಖೆಗಳ ಸಂಬಂಧಿತ ಅಧಿಕಾರಿಗಳೊಂದಿಗೆ ಪರಿಶೀಲನೆ ಸಭೆ ನಡೆಸಿದರು. ಈ ಸಭೆಯ ವೇಳೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾರ್ಗಸೂಚಿಯಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಅನುಷ್ಠಾನಗೊಳಿಸುವ ಬಗ್ಗೆ ಅವರು ಒತ್ತು ನೀಡಿದರು. ಸಾಮಾಜಿಕ ಅಂತರವು ಈ ಕಾಯಿಲೆ ಹರಡದಂತೆ ತಡೆಯುವಲ್ಲಿ ಮಹತ್ವದ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು. ವಿವಿಧ ರಾಜ್ಯಗಳಲ್ಲಿನ ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡುವ ಸೌಲಭ್ಯಗಳ ಸನ್ನದ್ಧತೆ, ಆಸ್ಪತ್ರೆಗಳ ನಿರ್ವಹಣೆ ಮತ್ತು ಜಾಗೃತಿ ಅಭಿಯಾನಗಳ ಪರಾಮರ್ಶೆಯನ್ನೂ ಅವರು ನಡೆಸಿದರು.
ಕೇಂದ್ರ ಮತ್ತು ರಾಜ್ಯಗಳ ನಡುವೆ ನಿರಂತರ ಮತ್ತು ಸಮರ್ಥ ಸಹಯೋಗದ ಖಾತ್ರಿಯ ನಿಟ್ಟಿನಲ್ಲಿ, ಭಾರತ ಸರ್ಕಾರದಿಂದ ಅಗತ್ಯವಿರುವ ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಗಳೊಂದಿಗೆ ಸಂಪರ್ಕ, ಸಹಯೋಗ ಮತ್ತು ನೆರವು ನೀಡಲು ಜಂಟಿ ಕಾರ್ಯದರ್ಶಿ ಮತ್ತು ಮೇಲ್ಪಟ್ಟ ದರ್ಜೆಯ 30 ನೋಡಲ್ ಅಧಿಕಾರಿಗಳನ್ನು ವಿವಿಧ ಸಚಿವಾಲಯಗಳಿಂದ ಆಯ್ಕೆ ಮಾಡಲಾಗಿದೆ. ಸನ್ನದ್ಧತೆ ಮತ್ತು ಸ್ಪಂದನಾ ಕ್ರಮಗಳ ವಿಚಾರದಲ್ಲಿ ಅವರು ರಾಜ್ಯಗಳ ಪ್ರಾಧಿಕಾರಗಳೊಂದಿಗೆ ಆಪ್ತ ಸಹಯೋಗದೊಂದಿಗೆ ಶ್ರಮಿಸಲು ಅವರುಗಳನ್ನು ರಾಜ್ಯಗಳಿಗೆ ನಿಯುಕ್ತಿಗೊಳಿಸಲಾಗಿದೆ. ಎಲ್ಲ ಅಧಿಕಾರಿಗಳ ಓರಿಯೆಂಟೇಷನ್ ಸಭೆಯನ್ನು ನಾಳೆ ನಡೆಸಲಾಗುತ್ತಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಅವರು ಇಂದು ಭಾರತ ಸರ್ಕಾರದ ಎಲ್ಲ ಸಚಿವಾಲಯಗಳು/ಇಲಾಖೆಗಳ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ಈಗಾಗಲೇ ಹೊರಡಿಸಲಾಗಿರುವ ಮತ್ತು ಅವರಿಗೆ ಅನ್ವಯವಾಗುವ ವಿವಿಧ ಮಾರ್ಗಸೂಚಿಗಳು / ಸಲಹೆಗಳನ್ನು ತಮ್ಮ ಅಡಿಯಲ್ಲಿ ಬರುವ ಸಂಸ್ಥೆಗಳಲ್ಲಿ ಕಾರ್ಯಗತಗೊಳಿಸಲು ಅವರನ್ನು ಕೋರಲಾಗಿದೆ.
ಪ್ರಯಾಣಕ್ಕೆ ಸಂಬಂಧಿಸಿದಂತೆ 2020ರ ಮಾರ್ಚ್ 11 ಮತ್ತು 2020ರ ಮಾರ್ಚ್ 16ರಂದು ಹೊರಡಿಸಲಾಗಿರುವ ಸಲಹೆಗಳ ಮುಂದುವರಿಕೆಯಾಗಿ, ಈ ಕೆಳಕಂಡ ಹೆಚ್ಚುವರಿ ಸಲಹೆಗಳನ್ನು ಇಂದು ಹೊರಡಿಸಲಾಗಿದೆ:
- ತತ್ ಕ್ಷಣದಿಂದ ಜಾರಿಗೆ ಬರುವಂತೆ ಆಫ್ಘಾನಿಸ್ತಾನ, ಫಿಲಿಪೈನ್ಸ್, ಮಲೇಷ್ಯಾದಿಂದ ಭಾರತಕ್ಕೆ ಬರುವ ಪ್ರಯಾಣಿಕರನ್ನು ನಿರ್ಬಂಧಿಸಲಾಗಿದೆ. ಭಾರತೀಯ ಕಾಲಮಾನ (ಐ.ಎಸ್.ಟಿ.) 1500 ಗಂಟೆಗಳ ತರುವಾಯ ಈ ದೇಶಗಳಿಂದ ಭಾರತಕ್ಕೆ ಯಾವುದೇ ವಿಮಾನಗಳು ಪ್ರಯಾಣ ಬೆಳೆಸುವುದಿಲ್ಲ. ವಿಮಾನಯಾನ ಸಂಸ್ಥೆಗಳು ಇದನ್ನು ಪ್ರಾಥಮಿಕ ನಿರ್ಗಮದಿಂದ ಜಾರಿಗೊಳಿಸುತ್ತವೆ.
- ಈ ನಿರ್ದೇಶನಗಳು ತಾತ್ಕಾಲಿಕ ಕ್ರಮಗಳಾಗಿದ್ದು 2020ರ ಮಾರ್ಚ್ 31ರವರೆಗೆ ಜಾರಿಯಲ್ಲಿರುತ್ತವೆ ಮತ್ತು ನಂತರ ಪರಾಮರ್ಶಿಸಲಾಗುತ್ತದೆ.
ಇದರ ಜೊತೆಗೆ ಮೂರು ಮೂರು ಮಾರ್ಗಸೂಚಿಗಳನ್ನೂ ಹೊರಡಿಸಲಾಗಿದೆ. (ಇವು www.mohfw.gov.in ನಲ್ಲಿ ಲಭ್ಯ):
- ಕೋವಿಡ್-19 ಚಿಕಿತ್ಸೆಯ ಸರದಿ ನಿರ್ಧಾರ (ಟ್ರಿಯೇಜ್) ವೈದ್ಯಕೀಯ ನಿರ್ವಹಣೆ ಮಾರ್ಗಸೂಚಿಗಳು (ರೋಗಿಗಳ ಆರಂಭಿಕ ಪತ್ತೆ), ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕ್ರಮಗಳ ಅನುಷ್ಠಾನವನ್ನು ಪರಿಷ್ಕರಿಸಲಾಗಿದೆ ಮತ್ತು ನವೀಕರಿಸಲಾಗಿದೆ.
- ಮೃತ ದೇಹಗಳ ನಿರ್ವಹಣೆ ವಿಚಾರದಲ್ಲಿ ನಿರ್ದಿಷ್ಟ ಮಾನದಂಡ, ಸೋಂಕು ತಡೆ ಮತ್ತು ನಿಯಂತ್ರಣ ಕ್ರಮಗಳು, ಮೃತ ದೇಹದ ನಿರ್ವಹಣೆ ಮತ್ತು ಪರಿಸರಾತ್ಮಕ ಸೋಂಕು ತಡೆಗೆ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ.
- ಕೋವಿಡ್ -19 ಪರೀಕ್ಷೆ ನಡೆಸಲು ಮುಂದಾಗುವ ಖಾಸಗಿ ವಲಯದ ಪ್ರಯೋಗಾಲಯಗಳಿಗೆ ಸಹ ಮಾರ್ಗಸೂಚಿಗಳನ್ನು ನೀಡಲಾಗಿದೆ.
- ಐಸಿಎಂಆರ್ ಮಾರ್ಗದರ್ಶನದ ಪ್ರಕಾರ ಅರ್ಹ ವೈದ್ಯರು ಪರೀಕ್ಷೆಗೆ ಸೂಚಿಸಿದಾಗ ಮಾತ್ರ ಪ್ರಯೋಗಾಲಯ ಪರೀಕ್ಷೆಯನ್ನು ನಡೆಸಬೇಕು. ಮಾರ್ಗದರ್ಶಗಳು ನಿಯಮಿತವಾಗಿ ವಿಕಸನಗೊಳ್ಳುವುದರಿಂದ, ಇತ್ತೀಚಿನ ಪರಿಷ್ಕೃತ ಮಾರ್ಗಸೂಚಿಯನ್ನು ಮಾತ್ರ ಅನುಸರಿಸಬೇಕು.
- ಎಸ್ಒಪಿಗಳ ಪ್ರಕಾರ ಸಂಬಂಧಪಟ್ಟ ಖಾಸಗಿ ಪ್ರಯೋಗಾಲಯವು ಪ್ರೈಮರ್, ಪ್ರೋಬ್ಸ್ ಮತ್ತು ರೀಜೆಂಟ್ಸ್ ಗಳನ್ನು ಸಂಗ್ರಹಿಸಿದ ಕೂಡಲೇ ಪರೀಕ್ಷಾಲಯ ಸ್ಥಾಪಿಸಲು ಸಕಾರಾತ್ಮಕ ನಿಯಂತ್ರಣಗಳನ್ನು ಒದಗಿಸುತ್ತದೆ ಮತ್ತು ಪ್ರಯೋಗಾಲಯ ಪರೀಕ್ಷೆಗಾಗಿ ಎಸ್ಒಪಿಗಳನ್ನು ಹಂಚಿಕೊಳ್ಳಲಾಗುತ್ತದೆ. ಪರೀಕ್ಷೆಗೆ ವಾಣಿಜ್ಯ ಕಿಟ್ಗಳನ್ನು ಅಳವಡಿಸಿಕೊಳ್ಳುವಾಗ ಅದು ಪುಣೆಯ ಎಲ್ಸಿಎಂಆರ್- ವೈರಾಲಜಿ ಕುರಿತ ರಾಷ್ಟ್ರೀಯ ಸಂಸ್ಥೆ (ಎನ್ಐವಿ) ನಡೆಸಿದ ಮೌಲ್ಯಮಾಪನಗಳನ್ನು ಆಧರಿಸಿರಬೇಕು.
- ಶಂಕಿತ ರೋಗಿಯಿಂದ ಪರೀಕ್ಷೆಗೆ ಮಾದರಿಗಳನ್ನು ಸಂಗ್ರಹಿಸುವಾಗ ಸೂಕ್ತ ಜೈವಿಕ ಸುರಕ್ಷತೆ ಮತ್ತು ಜೈವಿಕ ಭದ್ರತೆ ಮುನ್ನೆಚ್ಚರಿಕೆಗಳನ್ನು ಖಾತ್ರಿಪಡಿಸಬೇಕು. ಪರ್ಯಾಯವಾಗಿ ರೋಗ ನಿರ್ದಿಷ್ಟ ಪ್ರತ್ಯೇಕ ಸಂಗ್ರಹಣಾ ತಾಣವನ್ನು ರೂಪಿಸಬೇಕು.
- ಎಲ್ಲ ಖಾಸಗಿ ಪರೀಕ್ಷಾ ಪ್ರಯೋಗಾಲಯಗಳು ಸಂಪರ್ಕ ಪತ್ತೆ ಮತ್ತು ಸಂಶೋಧನಾ ಚಟುವಟಿಕೆಗಳ ಸಕಾಲದ ಕ್ರಮಗಳಿಗಾಗಿ ತತ್ ಕ್ಷಣವೇ/ಸಕಾಲದಲ್ಲಿ ರಾಜ್ಯಗಳ ಅಧಿಕಾರಿಗಳಿಗೆ ಮತ್ತು ಐಸಿಎಂ.ಆರ್. ಕೇಂದ್ರ ಕಚೇರಿಗೆ ಐಡಿಎಸ್.ಪಿ. (ಭಾರತ ಸರ್ಕಾರದ ಸಮಗ್ರ ರೋಗ ನಿಗಾ ಕಾರ್ಯಕ್ರಮ)ಯ ವರದಿ ನೀಡುವುದನ್ನು ಖಾತ್ರಿಪಡಿಸಬೇಕು
- ಖಾಸಗಿ ಪ್ರಯೋಗಾಲಯಗಳು ಕೋವಿಡ್ -19 ಪತ್ತೆಯನ್ನು ಯಾವುದೇ ವೆಚ್ಚವಿಲ್ಲದೆ ಮಾಡಬೇಕು ಎಂದು ಐಸಿಎಂಆರ್ ಬಲವಾಗಿ ಮನವಿ ಮಾಡುತ್ತದೆ.
ಕೋವಿಡ್-19 ಹರಡುವುದನ್ನು ನಿಯಂತ್ರಿಸಲು ಸಚಿವಾಲಯಗಳು / ಇಲಾಖೆಗಳ ಎಲ್ಲಾ ನೌಕರರು ತೆಗೆದುಕೊಳ್ಳಬೇಕಾದ ನಿಯಂತ್ರಣ ಕ್ರಮಗಳನ್ನು ಉಲ್ಲೇಖಿಸಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಸಲಹೆಗಳನ್ನು ನೀಡಿದೆ. ಎಲ್ಲಾ ಸಚಿವಾಲಯಗಳು / ಇಲಾಖೆಗಳಿಗೆ ಈ ಕೆಳಗಿನ ಸಲಹೆಗಳನ್ನು ಸೂಚಿಸಲಾಗಿದೆ:
- ಸರ್ಕಾರಿ ಕಟ್ಟಡಗಳ ಪ್ರವೇಶದಲ್ಲಿ ಕಾರ್ಯಸಾಧ್ಯತೆಗನುಗುಣವಾಗಿ ಥರ್ಮಲ್ ಸ್ಕ್ಯಾನರ್ ಅಳವಡಿಸುವುದು. ಸರ್ಕಾರಿ ಕಟ್ಟಡಗಳ ಪ್ರವೇಶದಲ್ಲಿ ಕೈಶುಚಿಗೊಳಿಸಲು ಸ್ಯಾನಿಟೈಸರ್ ಇಡುವುದು. ಫ್ಲೂನಂತಹ ಲಕ್ಷಣಗಳು ಕಂಡುಬಂದವರಿಗೆ ಸೂಕ್ತ ಚಿಕಿತ್ಸೆ/ಪ್ರತ್ಯೇಕಿಕರಣ ಇತ್ಯಾದಿ ಸಲಹೆ ನೀಡುವುದು.
- ಕಚೇರಿ ಸಮುಚ್ಛಯದೊಳಗೆ ಗರಿಷ್ಠ ಪ್ರಮಾಣದಲ್ಲಿ ಸಂದರ್ಶಕರ ಪ್ರವೇಶಕ್ಕೆ ಪ್ರೋತ್ಸಾಹ ನೀಡದಿರುವುದು. ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಸಂದರ್ಶಕರ/ತಾತ್ಕಾಲಿಕ ಪಾಸ್ ಗಳ ಸ್ಥಗಿತಗೊಳಿಸುವುದು. ಸಂದರ್ಶಕರು ಭೇಟಿ ಮಾಡಲು ಇಚ್ಛಿಸುವ ಅಧಿಕಾರಿಗಳಿಂದ ಸೂಕ್ತ ಅನುಮತಿ ಇರುವವರನ್ನು ಮಾತ್ರ ಸೂಕ್ತ ತಪಾಸಣೆಯ ಬಳಿಕೆ ಒಳಪ್ರವೇಶಿಸಲು ಅವಕಾಶ ನೀಡುವುದು.
- ಕಾರ್ಯಸಾಧ್ಯತೆಗನುಗುಣವಾಗಿ ಸಭೆಗಳನ್ನು ವಿಡಿಯೋ ಸಂವಾದದ ಮೂಲಕ ನಡೆಸುವುದು. ಅತ್ಯಗತ್ಯ ಎನಿಸದ ಹೊರತು ಹೆಚ್ಚು ಜನ ಸೇರುವ ಸಭೆಗಳನ್ನು ಕಡಿಮೆ ಮಾಡುವುದು ಇಲ್ಲವೇ ಮರು ನಿರ್ಧರಣೆ ಮಾಡುವುದು.
- ಅನಿವಾರ್ಯವಲ್ಲದ ಅಧಿಕೃತ ಪ್ರವಾಸಗಳನ್ನು ತಪ್ಪಿಸುವುದು
- ಸಾಧ್ಯವಾದಷ್ಟೂ ಅಧಿಕೃತ ಇಮೇಲ್ ಗಳ ಮೂಲಕ ಅವಶ್ಯ ವ್ಯವಹಾರಿಕ ಪತ್ರವ್ಯವಹಾರ ಕೈಗೊಂಡು ಕಡತಗಳು ಮತ್ತು ಇತರ ದಸ್ತಾವೇಜುಗಳನ್ನು ಮತ್ತೊಂದು ಕಚೇರಿಗೆ ಕಳುಹಿಸುವುದನ್ನು ತಪ್ಪಿಸುವುದು.
- ಸರ್ಕಾರಿ ಕಟ್ಟಡಗಳಲ್ಲಿನ ಎಲ್ಲ ವ್ಯಾಯಾಮಶಾಲೆಗಳು/ ಮನರಂಜನಾ ತಾಣಗಳು/ ಮಕ್ಕಳ ತಾಣಗಳನ್ನು ಮುಚ್ಚುವುದು.
- ಕಾರ್ಯಸ್ಥಳಗಳ ಸೂಕ್ತ ಸ್ವಚ್ಛತೆ ಮತ್ತು ಪದೆ ಪದೇ ನೈರ್ಮಲ್ಯಗೊಳಿಸುವುದು, ಅದರಲ್ಲೂ ಪದೇ ಪದೇ ಮುಟ್ಟುವ ಸ್ಥಳಗಳನ್ನು ಹೆಚ್ಚು ಸ್ವಚ್ಛಗೊಳಿಸುವುದು. ಶೌಚಾಲಯಗಳಲ್ಲಿ ನೀರು, ಕೈತೊಳೆಯಲು ಸೋಪು ಮತ್ತು ಸ್ಯಾನಿಟೈಸರ್ ಗಳ ನಿಯಮಿತ ಪೂರೈಕೆಯ ಖಾತ್ರಿ ಪಡಿಸುವುದು.
- ಎಲ್ಲ ಅಧಿಕಾರಿಗಳೂ ತಮ್ಮ ಆರೋಗ್ಯದ ಕಾಳಜಿ ವಹಿಸುವಂತೆ ಮತ್ತು ಉಸಿರಾಟದ ತೊಂದರೆ/ ಜ್ವರದ ಲಕ್ಷಣ ಇದೆ ಎಂದು ನೋಡಿಕೊಳ್ಳುವಂತೆ, ಅನಾರೋಗ್ಯವಿದೆ ಎನಿಸಿದರೆ, ತಮ್ಮ ಮೇಲಿನ ಅಧಿಕಾರಿಗೆ ಮಾಹಿತಿ ನೀಡಿ ಕಾರ್ಯಸ್ಥಳದಿಂದ ತತ್ ಕ್ಷಣವೇ ಹೊರ ಹೋಗುವಂತೆ ಸಲಹೆ ಮಾಡಲಾಗಿದೆ.
- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಯಂತೆ ಮನೆಯಲ್ಲಿ ಪ್ರತ್ಯೇಕವಾಗಿಟ್ಟು ನಿಗಾ ವಹಿಸಬೇಕು. (ಇದು ಈ ಕೆಳಗಿನ ವೆಬ್ ತಾಣದ ವಿಳಾಸದಲ್ಲಿ ಲಭ್ಯ : www.mohfw.gov.in/DraftGuideIinesforhomequarantine.pdf)
- ಯಾರಾದರೂ ಮುನ್ನೆಚ್ಚರಿಕೆ ಕ್ರಮವಾಗಿ ಸ್ವಯಂ ಪ್ರತ್ಯೇಕವಾಗಿರಲು ಮನವಿ ಸಲ್ಲಿಸಿದರೆ ರಜೆ ಮಂಜೂರು ಮಾಡುವಂತೆ ರಜೆ ಮಂಜೂರಾತಿ ಪ್ರಾಧಿಕಾರಗಳಿಗೆ ಸಲಹೆ ಮಾಡಲಾಗಿದೆ.
- ಅತ್ಯಂತ ಹೆಚ್ಚಿನ ಅಪಾಯದಲ್ಲಿರುವ ಸಿಬ್ಬಂದಿಗೆ ಅಂದರೆ ಹಿರಿಯ ಸಿಬ್ಬಂದಿ, ಗರ್ಭಿಣಿಯಾಗಿರುವ ಸಿಬ್ಬಂದಿ, ವೈದ್ಯಕೀಯ ಉಪಚಾರದಲ್ಲರುವ ಸಿಬ್ಬಂದಿಗಳಿಗೆ ಹೆಚ್ಚಿನ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಎಲ್ಲ ಸಿಬ್ಬಂದಿಗೆ ಸಲಹೆ ಮಾಡಲಾಗಿದೆ. ಸಚಿವಾಲಯ/ಇಲಾಖೆ ಅಂಥ ಸಿಬ್ಬಂದಿಯನ್ನು ಸಾರ್ವಜನಿಕ ಸಂಪರ್ಕಕ್ಕೆ ನೇರವಾಗಿ ಬರುವಂಥ ಮುಂಚೂಣಿಯ ಕಾರ್ಯಕ್ಕೆ ನಿಯೋಜಿಸದಂತೆಯೂ ಸೂಚಿಸಲಾಗಿದೆ.
*****
(Release ID: 1606872)
Visitor Counter : 180