ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಿ ಮನದ ಮಾತು 8 ನೇ ಆವೃತ್ತಿ
Posted On:
26 JAN 2020 6:35PM by PIB Bengaluru
ಪ್ರಧಾನಿ ಮನದ ಮಾತು 8 ನೇ ಆವೃತ್ತಿ
ನನ್ನ ಪ್ರೀತಿಯ ದೇಶವಾಸಿಗಳೇ, ನಮಸ್ಕಾರ. ಇಂದು ಜನವರಿ 26. ಗಣರಾಜ್ಯೋತ್ಸವ ದಿನದ ಅನಂತಾನಂತ ಶುಭಾಶಯಗಳು. ಇಂದು 2020 ರ ಮೊದಲ ಮನದ ಮಾತಿನಲ್ಲಿ ನಮ್ಮ ಭೇಟಿ. ಇದು ಈ ವರ್ಷದಲ್ಲಿ ಮೊದಲ ಕಾರ್ಯಕ್ರಮ ಕೂಡ, ಹಾಗೆಯೇ ಈ ದಶಕದ ಮೊದಲ ಕಾರ್ಯಕ್ರಮ ಸಹ ಆಗಿದೆ. ಗೆಳೆಯರೇ, ಈ ಬಾರಿ ಗಣರಾಜ್ಯೋತ್ಸವದ ಸಮಾರಂಭದ ಕಾರಣದಿಂದ ನಿಮ್ಮೊಂದಿಗಿನ ಮನದ ಮಾತಿನ ಸಮಯವನ್ನು ಬದಲಿಸುವುದು ಒಳ್ಳೆಯದು ಅನ್ನಿಸಿತು. ಆದ್ದರಿಂದ ಒಂದು ಬೇರೆ ಸಮಯವನ್ನು ನಿಗದಿಗೊಳಿಸಿ ಇಂದು ನಿಮ್ಮೊಂದಿಗೆ ಮನದ ಮಾತನ್ನು ಆಡುತ್ತಿದ್ದೇನೆ. ಗೆಳೆಯರೇ, ದಿನ ಬದಲಾಗುತ್ತದೆ, ವಾರಗಳು ಬದಲಾಗುತ್ತವೆ, ತಿಂಗಳುಗಳು ಸಹ ಉರುಳುತ್ತವೆ, ವರ್ಷಗಳೂ ಬದಲಾಗುತ್ತವೆ, ಆದರೆ ಭಾರತೀಯರ ಉತ್ಸಾಹ ಮತ್ತು “ನಾವು ಕೂಡ ಯಾರಿಗೂ ಕಡಿಮೆಯಿಲ್ಲ, ಏನಾದರೂ ಮಾಡಿಯೇ ಮಾಡುತ್ತೇವೆ” ಎನ್ನುವ ಈ ‘can do’ ಮನೋಭಾವ, ಸಂಕಲ್ಪದೊಂದಿಗೆ ಹೊರಹೊಮ್ಮುತ್ತಿದೆ. ದೇಶ ಮತ್ತು ಸಮಾಜಕ್ಕಾಗಿ ಏನನ್ನಾದರೂ ಮಾಡಬೇಕೆಂಬ ಭಾವನೆ, ಪ್ರತಿದಿನ, ಮೊದಲಿಗಿಂತಲೂ ಹೆಚ್ಚು ಬಲಿಷ್ಠವಾಗುತ್ತಾ ಹೋಗುತ್ತಿದೆ. ಗೆಳೆಯರೇ, ಮನದ ಮಾತು ವೇದಿಕೆಯಲ್ಲಿ ಹೊಸ ಹೊಸ ವಿಷಯಗಳ ಬಗ್ಗೆ ಚರ್ಚೆ ಮಾಡಲು ಮತ್ತು ಭಾರತವನ್ನು ವಿಜೃಂಭಿಸಲು ಮತ್ತೊಮ್ಮೆ ನಾವೆಲ್ಲರೂ ಒಟ್ಟಿಗೆ ಸೇರಿದ್ದೇವೆ. ಮನದ ಮಾತು – sharing, caring and growing together ಎನ್ನುವುದಕ್ಕೆ ಒಂದು ಒಳ್ಳೆಯ ಹಾಗೂ ಸಾಮಾನ್ಯ ವೇದಿಕೆ ಆಗಿಬಿಟ್ಟಿದೆ. ಪ್ರತೀ ತಿಂಗಳೂ ಸಾವಿರಾರು ಸಂಖ್ಯೆಯಲ್ಲಿ ಜನರು, ತಮ್ಮ ಸಲಹೆಗಳು, ಪ್ರಯತ್ನಗಳು ಮತ್ತು ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಅವುಗಳಲ್ಲಿ ಸಮಾಜಕ್ಕೆ ಪ್ರೇರಣೆ ನೀಡುವಂತಹ ಕೆಲವು ಮಾತುಗಳು, ಜನರ ಅಸಾಧಾರಣ ಪ್ರಯತ್ನಗಳು ಇವುಗಳ ಬಗ್ಗೆ ನಮಗೆ ಚರ್ಚೆ ಮಾಡುವ ಅವಕಾಶ ಸಿಗುತ್ತದೆ.
ಯಾರೋ ಮಾಡಿ ತೋರಿಸಿದ್ದಾರೆ ಅಂದರೆ ನಾವೂ ಕೂಡ ಮಾಡಬಹುದೇ? ಆ ಪ್ರಯೋಗವನ್ನು ಇಡೀ ದೇಶದಲ್ಲಿ ಪುನರಾವರ್ತಿಸಿ ಒಂದು ದೊಡ್ಡ ಪರಿವರ್ತನೆಯನ್ನು ತರಬಹುದೇ? ಅದನ್ನು ಸಮಾಜದಲ್ಲಿ ಒಂದು ಸಹಜ ಅಭ್ಯಾಸದ ರೂಪದಲ್ಲಿ ವಿಕಸನಗೊಳಿಸಿ ಆ ಪರಿಪರ್ತನೆಗೆ ಒಂದು ಮಾನ್ಯತೆ ದೊರಕಿಸಿಕೊಡಬಹುದೇ? ಇಂತಹ ಕೆಲವು ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹುಡುಕುತ್ತಾ ಪ್ರತಿ ತಿಂಗಳು ಮನದ ಮಾತಿನಲ್ಲಿ ಕೆಲವು ಮನವಿಗಳು, ಆಹ್ವಾನಗಳು, ಏನನ್ನಾದರೂ ಮಾಡಿ ತೋರಿಸುವ ಸಂಕಲ್ಪಗಳು -ಇವುಗಳ ಸರಮಾಲೆಯೇ ಸೃಷ್ಟಿಯಾಗುತ್ತದೆ. ಕಳೆದ ಎμÉ್ಟೂೀ ವರ್ಷಗಳಲ್ಲಿ ನಾವು ‘No to single use plastic’, ‘ಖಾದಿ’, ಮತ್ತು ‘ಸ್ಥಳೀಯ ಖರೀದಿ’ ಇವುಗಳ ಬಗ್ಗೆ, ಸ್ವಚ್ಚತೆಯ ವಿಷಯವಾಗಿ, ಹೆಣ್ಣುಮಕ್ಕಳ ಮಾನ-ಸಮ್ಮಾನದ ಚರ್ಚೆಗಳು, less cash Economy ಯಂತಹ ಹೊಸ ವಿಚಾರಗಳು ಮತ್ತು ಅವುಗಳನ್ನು ಬಲಪಡಿಸುವುದು – ಇಂತಹ ಹಲವಾರು ಸಣ್ಣ ಸಣ್ಣ ಸಂಕಲ್ಪಗಳನ್ನು ಮಾಡಿರಬಹುದು. ಇಂತಹ ಹಲವಾರು ಸಂಕಲ್ಪಗಳ ಹುಟ್ಟು ನಮ್ಮ ಈ ಸಣ್ಣ ಪುಟ್ಟ ಮನದ ಮಾತುಗಳಲ್ಲೇ ಆಗಿದೆ. ಮತ್ತು ಅದಕ್ಕೆ ನೀವೇ ಬಲವನ್ನೂ ನೀಡಿದ್ದೀರಿ.
ಬಿಹಾರದ ಶ್ರೀಮಾನ್ ಶೈಲೇಶ್ ಅವರು ಬರೆದಿರುವ ಬಹಳ ಪ್ರೀತಿಯ ಒಂದು ಪತ್ರ ನನಗೆ ಸಿಕ್ಕಿದೆ. ಅಂದಹಾಗೆ, ಅವರು ಈಗ ಬಿಹಾರದಲ್ಲಿ ವಾಸಿಸುತ್ತಿಲ್ಲ. ಅವರು ದೆಹಲಿಯಲ್ಲಿ ಇದ್ದು ಯಾವುದೋ ಒಂದು ಸರ್ಕಾರೇತರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಅವರು – “ಮೋದಿಯವರೇ, ನೀವು ಪ್ರತಿ ಮನದ ಮಾತು ಕಾರ್ಯಕ್ರಮದಲ್ಲಿ ಏನಾದರೂ ಅಪೀಲು ಮಾಡುತ್ತೀರಿ. ನಾನು ಅವುಗಳಲ್ಲಿ ಬಹಳಷ್ಟು ಕೆಲಸಗಳನ್ನು ಮಾಡಿದ್ದೇನೆ. ಈ ಛಳಿಗಾಲದಲ್ಲಿ ನಾನು ಜನರ ಮನೆಗಳಿಂದ ಬಟ್ಟೆಗಳನ್ನು ಒಟ್ಟು ಸೇರಿಸಿ ಅವಶ್ಯಕತೆ ಇದ್ದವರಿಗೆ ಹಂಚಿದ್ದೇನೆ. ಮನದ ಮಾತಿನಿಂದ ನಾನು ಬಹಳಷ್ಟು ಕೆಲಸಗಳನ್ನು ಮಾಡಲು ಪ್ರಾರಂಭಿಸಿದ್ದೇನೆ. ಆದರೆ ನಿಧಾನವಾಗಿ ಕೆಲವನ್ನು ನಾನು ಮರೆತುಬಿಟ್ಟೆ ಮತ್ತೆ ಕೆಲವು ವಿಷಯಗಳು ಬಿಟ್ಟು ಹೋದವು. ನಾನು ಈ ಹೊಸವರ್ಷದಲ್ಲಿ ಮನದ ಮಾತಿನ ಬಗ್ಗೆ ಒಂದು ಚಾರ್ಟರ್ ಮಾಡಿದ್ದೇನೆ. ಅದರಲ್ಲಿ ಈ ಎಲ್ಲಾ ವಿಷಯಗಳ ಒಂದು ಪಟ್ಟಿ ಮಾಡಿದ್ದೇನೆ. ಹೇಗೆ ಜನರು ಹೊಸವರ್ಷದ ಸಂಕಲ್ಪ ಮಾಡುತ್ತಾರೋ ಅದೇ ರೀತಿ ಇದು ನನ್ನ ಹೊಸವರ್ಷದ ಸಾಮಾಜಿಕ ಸಂಕಲ್ಪ. ಇವೆಲ್ಲಾ ಸಣ್ಣ ಸಣ್ಣ ವಿಷಯಗಳು, ಆದರೆ ದೊಡ್ಡ ಬದಲಾವಣೆಯನ್ನು ತರಬಲ್ಲದು ಎಂದು ನನಗೆ ಅನ್ನಿಸುತ್ತದೆ. ನೀವು ನನ್ನ ಈ ಚಾರ್ಟರ್ಗೆ ಆಟೋಗ್ರಾಫ್ ನೀಡಿ ನನಗೆ ಹಿಂತಿರುಗಿ ಕಳುಹಿಸುವುದಕ್ಕಾಗುತ್ತದೆಯೇ?” ಎಂದು ಬರೆದಿದ್ದಾರೆ. ಶೈಲೇಶ್ ಅವರೇ, ನಿಮಗೆ ಅನಂತಾನಂತ ಅಭಿನಂದನೆಗಳು ಮತ್ತು ಶುಭಾಶಯಗಳು. ನಿಮ್ಮ ಹೊಸವರ್ಷದ ಸಂಕಲ್ಪಕ್ಕೆ ಮನದ ಮಾತಿನ ಚಾರ್ಟರ್ ತುಂಬಾ ಹೊಸತನದಿಂದ ಕೂಡಿದೆ. ನಾನು ನನ್ನ ಕಡೆಯಿಂದ ಶುಭಕಾಮನೆಗಳನ್ನು ಬರೆದು ಇದನ್ನು ಖಂಡಿತವಾಗಿ ನಿಮಗೆ ಹಿಂತಿರುಗಿಸಿ ಕಳುಹಿಸುತ್ತೇನೆ. ಸ್ನೇಹಿತರೇ, ಈ ಮನದ ಮಾತಿನ ಚಾರ್ಟರ್ನ್ನು ನಾನು ಓದುತ್ತಿರುವಾಗ ಇಷ್ಟೊಂದು ಮಾತುಗಳಿವೆಯೇ ಎಂದು ನನಗೆ ಕೂಡ ಆಶ್ಚರ್ಯವಾಯಿತು. ಎಷ್ಟೊಂದು ಹ್ಯಾಶ್ ಟ್ಯಾಗ್ ಗಳಿವೆ,, ಮತ್ತು ನಾವೆಲ್ಲಾ ಸೇರಿ ಬಹಳಷ್ಟು ಪ್ರಯತ್ನವನ್ನೂ ಪಟ್ಟಿದ್ದೇವೆ. ಒಮ್ಮೆ ನಾವು ‘ಸಂದೇಶ್ ಟು ಸೋಲ್ಜರ್ಸ್’ ನ ಜೊತೆಗೆ ನಮ್ಮ ಸೈನಿಕರ ಜೊತೆ ಭಾವನಾತ್ಮಕವಾಗಿ ಮತ್ತು ಸಧೃಢವಾಗಿ ಬೆಸೆದುಕೊಳ್ಳುವ ಅಭಿಯಾನವನ್ನು ನಡೆಸಿದೆವು, ‘Khadi for Nation - Khadi for Fashion’ ನ ಜೊತೆಗೆ ಖಾದಿಯ ವ್ಯಾಪಾರವನ್ನು ಹೊಸ ಗುರಿಯತ್ತ ತಲುಪಿಸಿದೆವು, ‘buy local’ ಎನ್ನುವ ಮಂತ್ರವನ್ನು ನಮ್ಮದಾಗಿಸಿಕೊಂಡೆವು, ‘ನಾವು ಸಧೃಢರಾಗಿದ್ದರೆ ಭಾರತ ಸಧೃಢ’ ಎನ್ನುತ್ತಾ ಫಿಟ್ನೆಸ್ನ ವಿಷಯವಾಗಿ ಜಾಗೃತಿಯನ್ನು ಹೆಚ್ಚಿಸಿದೆವು, ‘My Clean India’ ಅಥವಾ ‘Statue Cleaning’ ನ ಪ್ರಯತ್ನದಿಂದ ಸ್ವಚ್ಚತೆಯನ್ನು ಒಂದು mಚಿss movemeಟಿಣ ಮಾಡಿದೆವು, #ಓoಖಿoಆಡಿugs, #NoToDrugs, #BharatKiLakshami, #Self4Society, #StressFreeExams, #SurakshaBandhan, #DigitalEconomy, #RoadSafety,,,,,, ಅಬ್ಬಬ್ಬಾ,,, ಎಣಿಸುವುದಕ್ಕೆ ಆಗುತ್ತಿಲ್ಲ..
ಶೈಲೇಶ್ ಅವರೇ, ನಿಮ್ಮ ಈ ಮನದ ಮಾತಿನ ಚಾರ್ಟರ್ ನೋಡಿ ಈ ಪಟ್ಟಿ ತುಂಬಾ ದೊಡ್ಡದಿದೆ ಎಂದು ನನಗೆ ಅರಿವಾಯಿತು. ಬನ್ನಿ, ಈ ಯಾತ್ರೆಯನ್ನು ಮುಂದುವರೆಸೋಣ. ಮನದ ಮಾತಿನ ಚಾರ್ಟರ್ನಿಂದ ನಿಮ್ಮ ಇಷ್ಟದ ಯಾವುದೇ ರೀತಿಯ ವಿಷಯಗಳಿಗೆ ಕೈಜೋಡಿಸಿ. ಹ್ಯಾಷ್ ಟ್ಯಾಗ್ ಉಪಯೋಗಿಸಿ ಎಲ್ಲರೊಂದಿಗೆ ಹೆಮ್ಮೆಯಿಂದ ನಿಮ್ಮ ಕೊಡುಗೆಯನ್ನು ಹಂಚಿಕೊಳ್ಳಿ. ಸ್ನೇಹಿತರು, ಸಂಬಂಧಿಕರು ಮತ್ತು ಎಲ್ಲರನ್ನೂ ಪ್ರೇರೇಪಿಸಿ. ಪ್ರತಿಯೊಬ್ಬ ಭಾರತೀಯನೂ ಒಂದು ಹೆಜ್ಜೆ ನಡೆದರೆ ನಮ್ಮ ದೇಶವು 130 ಕೋಟಿ ಹೆಜ್ಜೆಗಳಷ್ಟು ಮುನ್ನುಗ್ಗುತ್ತದೆ. ಚರೈವೇತಿ – ಚರೈವೇತಿ – ಚರೈವೇತಿ – ಮುಂದೆ ಸಾಗುತ್ತಿರು – ಸಾಗುತ್ತಿರು – ಮುಂದೆ ಸಾಗುತ್ತಿರು ಎನ್ನುವ ಮಂತ್ರವನ್ನು ಮನಗಂಡು ನಮ್ಮ ಪ್ರಯತ್ನ ಮಾಡುತ್ತಲೇ ಇರೋಣ.
ನನ್ನ ಪ್ರೀತಿಯ ದೇಶವಾಸಿಗಳೇ, ನಾವು ಮನದ ಮಾತು ಚಾರ್ಟರ್ನ ಬಗ್ಗೆ ಮಾತನಾಡಿದೆವು. ಸ್ವಚ್ಚತೆಯ ನಂತರ ಜನರ ಪಾಲ್ಗೊಳ್ಳುವಿಕೆಯ ಭಾವನೆ ಅಂದರೆ participative spirit ಇಂದು ಮತ್ತೊಂದು ಕ್ಷೇತ್ರದಲ್ಲಿ ಬಹಳ ವೇಗವನ್ನು ಪಡೆದುಕೊಳ್ಳುತ್ತಿದೆ - ಅದು ... “ಜಲ ಸಂರಕ್ಷಣೆ”. ನೀರಿನ ಸಂರಕ್ಷಣೆಗಾಗಿ ಬಹಳಷ್ಟು ಹೊಸ ಕಲ್ಪನೆಯ ಪ್ರಯತ್ನಗಳು ದೇಶದ ಮೂಲೆ ಮೂಲೆಯಲ್ಲೂ ವ್ಯಾಪಕವಾಗಿ ನಡೆಯುತ್ತಿವೆ. ಕಳೆದ ಮಾನ್ಸೂನ್ ಸಮಯದಲ್ಲಿ ಪ್ರಾರಂಭವಾದ ಈ ‘ಜಲ-ಶಕ್ತಿ ಅಭಿಯಾನ’, ಜನರ ಪಾಲ್ಗೊಳ್ಳುವಿಕೆಯಿಚಿದ, ಸಫಲತೆಯ ಕಡೆಗೆ ಮುಂದುವರೆಯುತ್ತಿದೆ ಎಂದು ಹೇಳುವುದಕ್ಕೆ ನನಗೆ ಬಹಳ ಸಂತೋಷವಾಗುತ್ತದೆ. ಹೆಚ್ಚಿನ ಸಂಖ್ಯೆಯ ಕೆರೆ -ಕುಂಟೆಗಳ ನಿರ್ಮಾಣವಾಗಿದೆ. ಈ ಅಭಿಯಾನದಲ್ಲಿ ಸಮಾಜದ ಪ್ರತಿಯೊಂದು ವರ್ಗದ ಜನರೂ ತಮ್ಮ ಕೊಡುಗೆ ನೀಡಿದ್ದಾರೆ ಎನ್ನುವುದು ಎಲ್ಲಕ್ಕಿಂತ ದೊಡ್ಡ ವಿಷಯ. ಈಗ ರಾಜಾಸ್ಥಾನದ ಝಾಲೋರ್ ಜಿಲ್ಲೆಯನ್ನೇ ನೋಡಿ, ಇಲ್ಲಿಯ ಎರಡು ಐತಿಹಾಸಿಕ ನೀರಿನ ಕೊಳಗಳು, ಕೊಳಚೆ ಮತ್ತು ದುರ್ನಾತ ಬೀರುವ ನೀರಿನ ಆಗರವಾಗಿದ್ದವು. ಆಮೇಲೇನು.. ಭದ್ರಾಯು ಮತ್ತು ಥಾನ್ವಾಲಾ ಪಂಚಾಯ್ತಿಯ ನೂರಾರು ಜನರು ಜಲಶಕ್ತಿ ಅಭಿಯಾನದ ಅಡಿಯಲ್ಲಿ ಇವುಗಳನ್ನು ಪುನರುಜ್ಜೀವನಗೊಳಿಸುವ ಪ್ರತಿಜ್ಞೆ ಮಾಡಿದರು. ಆ ಜನರು ಮಳೆಗಾಲಕ್ಕೆ ಮುಂಚೆಯೇ ಈ ಕೊಳಗಳಲ್ಲಿ ಸೇರಿಕೊಂಡಿದ್ದ ಕೊಳಚೆ ನೀರು, ಕಸ, ಕೆಸರು ಇವನ್ನೆಲ್ಲ ಸ್ವಚ್ಚಗೊಳಿಸುವುದಕ್ಕೆ ಸೇರಿಕೊಂಡರು. ಈ ಅಭಿಯಾನಕ್ಕಾಗಿ ಕೆಲವರು ಶ್ರಮದಾನ ಮಾಡಿದರೆ ಕೆಲವರು ಧನಸಹಾಯ ಮಾಡಿದರು. ಇದರ ಪರಿಣಾಮ . . ಇಂದು ಆ ಕೊಳಗಳು ಅಲ್ಲಿಯ ಜನರ ಜೀವನಾಡಿಯಾಗಿವೆ. ಉತ್ತರ ಪ್ರದೇಶದ ಬಾರಾಬಂಕಿಯ ಕಥೆ ಕೂಡ ಇದೇ ರೀತಿಯದ್ದಾಗಿದೆ. ಇಲ್ಲಿ 43 ಹೆಕ್ಟೇರ್ ಪ್ರದೇಶದಲ್ಲಿ ಹರಡಿರುವ ಸರಾಹಿ ಸರೋವರ ತನ್ನ ಕೊನೆಯುಸಿರನ್ನು ಎಳೆಯುತ್ತಿತ್ತು. ಆದರೆ ಗ್ರಾಮೀಣ ಜನರು ತಮ್ಮ ಸಂಕಲ್ಪ ಶಕ್ತಿಯಿಂದ ಇದಕ್ಕೆ ಹೊಸ ಜೀವ ತುಂಬಿದರು. ಇಷ್ಟು ದೊಡ್ಡ ಕೆಲಸದ ದಾರಿಯಲ್ಲಿ ಇವರು ಯಾವುದೇ ರೀತಿಯ ಕೊರತೆಯೂ ಬಾರದಂತೆ ನೋಡಿಕೊಂಡರು. ಒಂದರ ಹಿಂದೆ ಒಂದರಂತೆ ಎμÉ್ಟೂೀ ಹಳ್ಳಿಗಳು ಇದರಲ್ಲಿ ಬೆಸೆದುಕೊಂಡವು. ಇವರೆಲ್ಲ ಸರೋವರದ ನಾಲ್ಕೂ ಕಡೆ ಒಂದು ಮೀಟರ್ ಎತ್ತರದ ಕಟ್ಟೆಯನ್ನು ನಿರ್ಮಿಸಿದರು. ಇಂದು ಸರೋವರದಲ್ಲಿ ನೀರು ತುಂಬಿ ಕಂಗೊಳಿಸುತ್ತಿದೆ ಮತ್ತು ಸುತ್ತಮುತ್ತಲ ವಾತಾವರಣದಲ್ಲಿ ಪಕ್ಷಿಗಳ ಕಲರವ ಕೇಳಿಬರುತ್ತಿದೆ.
ಉತ್ತರಾಖಂಡದ ಅಲ್ಮೋರಾ – ಹಲ್ದ್ವಾನಿ ಹೈವೇಗೆ ತಾಕಿಕೊಂಡಿರುವ ಸುನಿಯಾಕೊಟ್ ಹಳ್ಳಿಯಿಂದ ಕೂಡ ಜನರ ಪಾಲ್ಗೊಳ್ಳುವಿಕೆಯ ಇಂತಹದೇ ಒಂದು ಉದಾಹರಣೆ ನಮ್ಮ ಮುಂದಿದೆ. ಜಲಕ್ಷಾಮದಿಂದ ಪಾರಾಗಲು ಹಳ್ಳಿಯ ಜನರು ತಾವೇ ಸ್ವತಃ ಹಳ್ಳಿಯವರೆಗೆ ನೀರನ್ನು ತರುವ ಸಂಕಲ್ಪ ಮಾಡಿದರು. ಆಮೇಲೇನು? ಜನರು ತಮ್ಮಲ್ಲೇ ದುಡ್ಡು ಹೊಂದಿಸಿದರು, ಯೋಜನೆ ತಯಾರಾಯಿತು, ಶ್ರಮದಾನ ನಡೆಯಿತು ಮತ್ತು ಒಂದು ಕಿಲೋಮೀಟರ್ ದೂರದಿಂದ ಹಳ್ಳಿಯವರೆಗೆ ಕೊಳವೆಗಳನ್ನು ಅಳವಡಿಸಲಾಯಿತು, ಪಂಪಿಂಗ್ ಸ್ಟೇಷನ್ ಹಾಕಲಾಯಿತು, ಎರಡು ದಶಕಗಳಿಗೂ ಹೆಚ್ಚಿನ ಕಾಲದ ಸಮಸ್ಯೆ ನೋಡುನೋಡುತ್ತಿದ್ದಂತೆ ನಿವಾರಣೆಯಾಯಿತು.
ಅದೇ ರೀತಿ ತಮಿಳುನಾಡಿನಿಂದ ಬೋರ್ ವೆಲ್ ಗೆ ಮಳೆನೀರು ಸಂಗ್ರಹಿಸಿಕೊಡುವ ಬಹಳ ಒಳ್ಳೆಯ ಬಹಳ ಒಳ್ಳೆಯ ನವೀನ ಮಾದರಿಯ ಉಪಾಯ ತಿಳಿದು ಬಂದಿದೆ. ದೇಶದೆಲ್ಲೆಡೆ ಜಲ ಸಂರಕ್ಷಣೆಗೆ ಸಂಬಂಧಿಸಿದಂತೆ ಇಂತಹ ಬಹಳಷ್ಟು ಕಥೆಗಳಿವೆ. ಮತ್ತು ಇವು ನವ ಭಾರತದ ಸಂಕಲ್ಪಕ್ಕೆ ಬಲ ನೀಡುತ್ತಿವೆ. ಇಂದು ನಮ್ಮ ಜಲಶಕ್ತಿ ಚಾಂಪಿಯನ್ಗಳ ಕಥೆಗಳನ್ನು ಕೇಳುವುದಕ್ಕೆ ಇಡೀ ದೇಶ ಉತ್ಸುಕತೆ ತೋರುತ್ತಿದೆ. ನೀರಿನ ಉಳಿತಾಯ ಮತ್ತು ನೀರಿನ ಸಂರಕ್ಷಣೆಗಾಗಿ ಆಗುತ್ತಿರುವ ನಿಮ್ಮ ಅಥವಾ ನಿಮ್ಮ ಸುತ್ತಮುತ್ತಲ ಜನರ ಪ್ರಯತ್ನಗಳ ಕಥೆಗಳನ್ನು, ಭಾವಚಿತ್ರಗಳು ಮತ್ತು ವೀಡಿಯೊಗಳನ್ನು #jalshakti4India ಇದರಲ್ಲಿ ಖಂಡಿತವಾಗಿ ಹಂಚಿಕೊಳ್ಳಿ ಎನ್ನುವುದು ನಿಮ್ಮಲ್ಲಿ ನನ್ನ ಮನವಿ.
ನನ್ನ ಪ್ರೀತಿಯ ದೇಶವಾಸಿಗಳೇ ಮತ್ತು ವಿಶೇಷವಾಗಿ ನನ್ನ ಯುವ ಮಿತ್ರರೇ, ಇಂದು ಮನದ ಮಾತಿನ ಮುಖಾಂತರ ನಾನು ಅಸ್ಸಾಂ ಸರ್ಕಾರಕ್ಕೂ ಮತ್ತು ಅಸ್ಸಾಂ ಜನತೆಗೂ ‘ಖೇಲೋ ಇಂಡಿಯಾ’ ದ ಅತ್ಯುತ್ತಮ ಆತಿಥ್ಯಕ್ಕ್ಕೆ ಅನಂತಾನಂತ ಅಭಿನಂದನೆಗಳನ್ನು ಹೇಳುತ್ತಿದ್ದೇನೆ. ಗೆಳೆಯರೇ, ಇದೇ ಜನವರಿ 22 ರಂದು ಗುವಹಾಟಿಯಲ್ಲಿ ಮೂರನೇ ‘ಖೇಲೋ ಇಂಡಿಯಾ ಗೇಮ್ಸ್’ ಇದರ ಮುಕ್ತಾಯ ಸಮಾರಂಭ ಆಗಿದೆ. ಇದರಲ್ಲಿ ವಿಭಿನ್ನ ರಾಜ್ಯಗಳ ಸುಮಾರು 6 ಸಾವಿರ ಆಟಗಾರರು ಭಾಗವಹಿಸಿದ್ದರು. ಆಟಗಳ ಈ ಮಹೋತ್ಸವದಲ್ಲಿ 80 ರೆಕಾರ್ಡ್ಗಳು ಮುರಿಯಲ್ಪಟ್ಟವು ಎಂದು ತಿಳಿದು ನಿಮಗೆ ಆಶ್ಚರ್ಯವಾಗಬಹುದು ಮತ್ತು ಅವುಗಳಲ್ಲಿ 56 ರೆಕಾರ್ಡ್ಗಳನ್ನು ಮುರಿಯುವ ಕೆಲಸವನ್ನು ನಮ್ಮ ಹೆಣ್ಣುಮಕ್ಕಳು ಮಾಡಿದ್ದಾರೆ ಎಂದು ಹೇಳಲು ನನಗೆ ಹೆಮ್ಮೆ ಎನಿಸುತ್ತದೆ. ಈ ಸಾಧನೆಯ ಶ್ರೇಯಸ್ಸು ಹೆಣ್ಣುಮಕ್ಕಳಿಗೆ ಸಲ್ಲುತ್ತದೆ. ವಿಜೇತರೂ ಸೇರಿದಂತೆ ಭಾಗವಹಿಸಿದ ಎಲ್ಲಾ ಆಟಗಾರರಿಗೂ ನಾನು ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ. ಜೊತೆಗೆ ಖೇಲೋ ಇಂಡಿಯಾ ಗೇಮ್ಸ್ನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕೆ ಇದರೊಂದಿಗೆ ಕಾರ್ಯ ನಿರ್ವಹಿಸಿದ ಎಲ್ಲಾ ಜನರಿಗೂ, ತರಬೇತುದಾರರಿಗೂ ಮತ್ತು ತಾಂತ್ರಿಕ ಅಧಿಕಾರಿಗಳಿಗೂ ನನ್ನ ಕೃತಜ್ಞತೆಗಳನ್ನು ತಿಳಿಸುತ್ತಿದ್ದೇನೆ. ಪ್ರತಿ ವರ್ಷವೂ ಖೇಲೋ ಇಂಡಿಯಾ ಗೇಮ್ಸ್ನಲ್ಲಿ ಆಟಗಾರರ ಭಾಗವಹಿಸುವಿಕೆ ಹೆಚ್ಚಾಗುತ್ತಿದೆ ಎನ್ನುವುದು ನಮಗೆಲ್ಲರಿಗೂ ಬಹಳ ಸಂತಸದ ವಿಚಾರ. ಇದು, ಶಾಲಾ ಮಟ್ಟದಲ್ಲಿ ಮಕ್ಕಳಲ್ಲಿ ಆಟಗಳ ಬಗ್ಗೆ ಒಲವು ಎಷ್ಟು ಹೆಚ್ಚಾಗುತ್ತಿದೆ ಎನ್ನುವುದನ್ನು ತಿಳಿಸುತ್ತದೆ. 2018 ರಲ್ಲಿ ಖೇಲೋ ಇಂಡಿಯಾ ಗೇಮ್ಸ್ ಪ್ರಾರಂಭವಾದಾಗ ಇದರಲ್ಲಿ 3500 ಆಟಗಾರರು ಭಾಗವಹಿಸಿದ್ದರು. ಆದರೆ ಕಳೆದ ಮೂರು ವರ್ಷಗಳಲ್ಲಿ ಆಟಗಾರರ ಸಂಖ್ಯೆ 6 ಸಾವಿರಕ್ಕೂ ಅಧಿಕವಾಗಿದೆ ಅಂದರೆ ಸುಮಾರು ಎರಡರಷ್ಡಾಗಿದೆ ಎಂದು ನಿಮಗೆ ಹೇಳಲು ಬಯಸುತ್ತೇನೆ. ಇದಿಷ್ಟೆ ಅಲ್ಲ, ಬರೀ ಮೂರು ವರ್ಷಗಳಲ್ಲಿ ಖೇಲೋ ಇಂಡಿಯಾ ಗೇಮ್ಸ್ನ ಮೂಲಕ 3200 ಪ್ರತಿಭಾವಂತ ಮಕ್ಕಳು ಹೊರಹೊಮ್ಮಿದ್ದಾರೆ. ಇವರಲ್ಲಿ ಬಹಳಷ್ಟು ಮಕ್ಕಳು ಅಭಾವ ಮತ್ತು ಬಡತನದ ಮಧ್ಯೆ ಅರಳಿ ದೊಡ್ಡವರಾಗಿದ್ದಾರೆ. ಖೇಲೋ ಇಂಡಿಯಾ ಗೇಮ್ಸ್ನಲ್ಲಿ ಭಾಗವಹಿಸಿದ ಮಕ್ಕಳು ಮತ್ತು ಅವರ ತಂದೆ ತಾಯಿಯರ ಧೈರ್ಯ ಮತ್ತು ಧೃಢ ಸಂಕಲ್ಪದ ಕಥೆಗಳು ಹೇಗಿವೆ ಎಂದರೆ ಅವು ಪ್ರತಿಯೊಬ್ಬ ಭಾರತೀಯನಿಗೂ ಪ್ರೇರಣೆ ನೀಡುತ್ತವೆ. ಗುವಹಾಟಿಯ ಪೂರ್ಣಿಮಾ ಮಂಡಲ್ ಅವರನ್ನೇ ನೋಡಿ, ಅವರು ಗುವಹಾಟಿ ನಗರಸಭೆಯಲ್ಲಿ ಕಸಗುಡಿಸುವ ಕೆಲಸ ಮಾಡುತ್ತಾರೆ, ಆದರೆ ಅವರ ಮಗಳು ಮಾಳವಿಕಾ ಅಲ್ಲಿ ಫುಟ್ಬಾಲ್ನಲ್ಲಿ ತನ್ನ ಶಕ್ತಿ ಪ್ರದರ್ಶಿಸಿದಳು, ಅವರ ಒಬ್ಬ ಮಗ ಸುಜಿತ್ ಖೋಖೋನಲ್ಲಿ ಮತ್ತು ಎರಡನೇ ಮಗ ಪ್ರದೀಪ್ ಹಾಕಿಯಲ್ಲಿ ಅಸ್ಸಾಂ ರಾಜ್ಯವನ್ನು ಪ್ರತಿನಿಧಿಸಿದ್ದರು.
ಸ್ವಲ್ಪ ಇದೇ ರೀತಿಯ ಹೆಮ್ಮೆ ನೀಡುವ ಕಥೆ ತಮಿಳುನಾಡಿನ ಯೋಗಾನಾಥನ್ ಅವರದ್ದು. ಅವರು ತಮಿಳುನಾಡಿನಲ್ಲಿ ಬೀಡಿ ಕಟ್ಟುವ ಕೆಲಸ ಮಾಡುತ್ತಾರೆ. ಆದರೆ ಇವರ ಮಗಳು ಪೂರ್ಣಶ್ರೀ ವೆಯಿಟ್ಲಿಫ್ಟಿಂಗ್ನಲ್ಲಿ ಚಿನ್ನದ ಪದಕ ಪಡೆದುಕೊಂಡು ಪ್ರತಿಯೊಬ್ಬರ ಮನ ಗೆದ್ದಳು. ನಾನು ಡೇವಿಡ್ ಬೆಕ್ಹ್ಯಾಮ್ ಅವರ ಹೆಸರನ್ನು ಹೇಳಿದರೆ ಅವರು ಪ್ರಸಿದ್ಧ ಅಂತರರಾಷ್ಟ್ರೀಯ ಫುಟ್ ಬಾಲ್ ಆಟಗಾರ ಎಂದು ನೀವು ಹೇಳುತ್ತೀರಿ. ಆದರೆ ಈಗ ನಮ್ಮ ಬಳಿಯಲ್ಲಿಯೂ ಒಬ್ಬ ಡೇವಿಡ್ ಬೆಕ್ಹ್ಯಾಮ್ ಇದ್ದಾನೆ. ಅವನು ಗುವಹಾಟಿಯ ಯೂಥ್ ಗೇಮ್ಸ್ನಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾನೆ. ಅದೂ ಸಹ 200 ಮೀಟರ್ನ ಸೈಕ್ಲಿಂಗ್ ಸ್ಪರ್ಧೆಯ ಸ್ಪ್ರಿಂಟ್ ಇವೆಂಟ್ನಲ್ಲಿ!! ಕಾರ್ ನಿಕೊಬಾರ್ ದ್ವೀಪದಲ್ಲಿ ವಾಸಿಸೋ ಡೇವಿಡ್ಗೆ ತಂದೆ ತಾಯಿಯ ನೆರಳು ಬಾಲ್ಯದಲ್ಲೇ ಅಳಿಸಿಹೋಗಿತ್ತು. ಚಿಕ್ಕಪ್ಪ ಇವನನ್ನು ಫುಟ್ಬಾಲ್ ಆಟಗಾರನನ್ನಾಗಿ ಮಾಡಬೇಕು ಎಂದು ಆಶಿಸಿದ್ದರು ಅದಕ್ಕಾಗಿ ಪ್ರಖ್ಯಾತ ಫುಟ್ಬಾಲ್ ಆಟಗಾರನ ಹೆಸರನ್ನು ಇವನಿಗೆ ಇಟ್ಟಿದ್ದರು. ಆದರೆ ಇವನ ಮನಸ್ಸು ಸೈಕ್ಲಿಂಗ್ನಲ್ಲಿ ನೆಟ್ಟಿತ್ತು. ಖೇಲೋ ಇಂಡಿಯಾ ಸ್ಕೀಮ್ನ ಮುಖಾಂತರ ಇವನ ಆಸೆಯೂ ಪೂರೈಸಿತು ಮತ್ತು ನೋಡಿ, ಇಂದು ಇವನು ಸೈಕ್ಲಿಂಗ್ನಲ್ಲಿ ಒಂದು ಹೊಸ ರೆಕಾರ್ಡ್ ಮಾಡಿದ್ದಾನೆ.
ಭಿವಾನಿಯ ಪ್ರಶಾಂತ್ ಸಿಂಗ್ ಕನ್ಹಯ್ಯ ಪೋಲ್ವಾಲ್ಟ್ನಲ್ಲಿ ತನ್ನದೇ ಆದ ರಾಷ್ಟ್ರಮಟ್ಟದ ರೆಕಾರ್ಡ್ ಮುರಿದ. 19 ವರ್ಷದ ಪ್ರಶಾಂತ್ ಒಬ್ಬ ರೈತ ಕುಟುಂಬದವನು. ಪ್ರಶಾಂತ್ ಮಣ್ಣಿನಲ್ಲಿ ಪೋಲ್ವಾಲ್ಟ್ ಅಭ್ಯಾಸ ಮಾಡುತ್ತಿದ್ದ ಎಂದು ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಇದನ್ನು ತಿಳಿದ ಮೇಲೆ ಕ್ರೀಡಾ ಇಲಾಖೆ ಅವನ ಕೋಚ್ಗೆ ದೆಹಲಿಯ ಜವಾಹರಲಾಲ್ ನೆಹರು ಸ್ಟೇಡಿಯಂನಲ್ಲಿ ಅಕಾಡೆಮಿ ನಡೆಸಲು ಸಹಾಯ ಮಾಡಿತು ಮತ್ತು ಇಂದು ಪ್ರಶಾಂತ್ ಅಲ್ಲಿಯೇ ತರಬೇತಿ ಪಡೆಯುತ್ತಿದ್ದಾನೆ.
ಮುಂಬೈನ ಕರೀನಾ ಶಾಂಕ್ತಾ ಅವರ ಕಥೆಯಲ್ಲಿ, ಯಾವುದೇ ಪರಿಸ್ಥಿತಿಯಲ್ಲೂ ಸೋಲನ್ನು ಒಪ್ಪಿಕೊಳ್ಳಬಾರದು ಎನ್ನುವ ಉತ್ಕಟ ಇಚ್ಛೆ, ಪ್ರತಿಯೊಬ್ಬರಿಗೂ ಪ್ರೇರಣೆ ನೀಡುತ್ತದೆ. ಕರೀನಾ 100 ಮೀಟರ್ ಸ್ವಿಮ್ಮಿಂಗ್ನ ಅಂಡರ್ -17 ವಿಭಾಗದಲ್ಲಿ ಬ್ರೆಸ್ಟ್ ಸ್ಟ್ರೋಕ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಳು ಮತ್ತು ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದಳು. 10 ನೇ ತರಗತಿಯಲ್ಲಿ ಓದುತ್ತಿರುವ ಕರೀನಾ, ಮಂಡಿ ನೋವಿನಿಂದ, ನಡೆಯುತ್ತಿದ್ದ ಟ್ರೈನಿಂಗ್ನಿಂದ ಹೊರಬರಬೇಕಾದಂತಹ ಪರಿಸ್ಥಿತಿ ಒದಗಿತ್ತು. ಆದರೆ ಕರೀನಾ ಮತ್ತು ಆಕೆಯ ಅಮ್ಮ ಧೈರ್ಯಗೆಡಲಿಲ್ಲ. ಇದರ ಪರಿಣಾಮ ನಮ್ಮ ಎದುರಿಗಿದೆ. ಎಲ್ಲಾ ಆಟಗಾರರಿಗೂ ಉಜ್ವಲ ಭವಿಷ್ಯ ಹಾರೈಸುತ್ತಿದ್ದೇನೆ. ಇದರೊಂದಿಗೆ, ಬಡತನ, ಮಕ್ಕಳ ಭವಿಷ್ಯಕ್ಕೆ ಅಡ್ಡಿಯಾಗಲು ಬಿಡದ ಈ ಎಲ್ಲಾ ಮಕ್ಕಳ ಪೋಷಕರಿಗೂ ನಾನು ಎಲ್ಲಾ ದೇಶವಾಸಿಗಳ ಪರವಾಗಿ ನಮಸ್ಕರಿಸುತ್ತೇನೆ. ರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳ ಮೂಲಕ ಆಟಗಾರರಿಗೆ ಹೇಗೆ ತಮ್ಮ ಕ್ರೀಡಾ ಉತ್ಕಟೇಚ್ಛೆ ಮೆರೆಯಲು ಅವಕಾಶ ಸಿಗುತ್ತದೆಯೋ ಹಾಗೆಯೇ ಅದೇ ಸಂದರ್ಭದಲ್ಲಿ ಅವರು ಬೇರೆ ರಾಜ್ಯಗಳ ಸಂಸ್ಕøತಿಯ ಪರಿಚಯವನ್ನು ಸಹ ಮಾಡಿಕೊಳ್ಳುತ್ತಾರೆ ಎನ್ನುವುದು ನಮಗೆಲ್ಲರಿಗೂ ಗೊತ್ತಿದೆ. ಆದ್ದರಿಂದ ಖೇಲೋ ಇಂಡಿಯಾ ಯೂಥ್ ಗೇಮ್ಸ್ ಮಾದರಿಯಲ್ಲಿಯೇ ಪ್ರತಿವರ್ಷ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ ಆಯೋಜಿಸಲು ನಿಶ್ಚಯಿಸಿದ್ದೇವೆ.
ಗೆಳೆಯರೇ, ಮುಂದಿನ ತಿಂಗಳು ಫೆಬ್ರವರಿ 22 ರಿಂದ ಮಾರ್ಚ್ 1 ನೆ ತಾರೀಖಿನವರೆಗೆ ಒಡಿಶಾದ ಕಟಕ್ ಮತ್ತು ಭುವನೇಶ್ವರದಲ್ಲಿ ಮೊದಲ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ ಆಯೋಜಿಸಲಾಗುತ್ತಿದೆ. ಇದರಲ್ಲಿ ಭಾಗವಹಿಸಲು 3000 ಕ್ಕೂ ಹೆಚ್ಚು ಆಟಗಾರರು ಅರ್ಹತೆ ಪಡೆದುಕೊಂಡಿದ್ದಾರೆ.
ನನ್ನ ಪ್ರೀತಿಯ ದೇಶವಾಸಿಗಳೇ, ಪರೀಕ್ಷೆಯ ಸಮಯ ಬಂದಿದೆ. ಹೀಗಾಗಿ, ಎಲ್ಲ ವಿದ್ಯಾರ್ಥಿಗಳು ತಮ್ಮ ತಮ್ಮ ಪರೀಕ್ಷಾ ಸಿದ್ಧತೆಗೆ ಅಂತಿಮ ಸ್ಪರ್ಶ ನೀಡುವುದರಲ್ಲಿ ನಿರತರಾಗಿರುವುದು ನಿಶ್ಚಿತ. ದೇಶದ ಯುವಕರು ಆತ್ಮವಿಶ್ವಾಸದಿಂದ ಕೂಡಿದ್ದಾರೆ ಹಾಗೂ ಪ್ರತಿಯೊಂದು ಸವಾಲಿಗೂ ಸಿದ್ಧರಿದ್ದಾರೆ ಎಂದು ದೇಶದ ಕೋಟ್ಯಂತರ ವಿದ್ಯಾರ್ಥಿ ಸ್ನೇಹಿತರ ಜತೆ “ಪರೀಕ್ಷಾ ಪೆ ಚರ್ಚಾ’ ನಡೆಸಿದ ಅನುಭವದ ಆಧಾರದ ಮೇಲೆ ವಿಶ್ವಾಸದಿಂದ ಹೇಳುತ್ತೇನೆ.
ಸ್ನೇಹಿತರೇ, ಒಂದು ಕಡೆ ಪರೀಕ್ಷೆಗಳು ಇನ್ನೊಂದು ಕಡೆ ಈಗ ಚಳಿಯ ಕಾಲ. ಈ ಎರಡರ ಮಧ್ಯೆ ನನ್ನ ಒತ್ತಾಯ . . . ಈ ಸಮಯದಲ್ಲಿ ನಿಮ್ಮನ್ನು ನೀವು ಫಿಟ್ ಆಗಿ ಇಟ್ಟುಕೊಳ್ಳಿ. ಸ್ವಲ್ಪ ವ್ಯಾಯಾಮ ಮಾಡಿ, ಸ್ವಲ್ಪ ಆಟವಾಡಿ, ಕುಣಿದಾಡಿ. ಆಟೋಟಗಳು ಸದೃಢವಾಗಿರಲು ಮೂಲ ಮಂತ್ರಗಳಾಗಿವೆ. ಅಂದ ಹಾಗೆ ಈ ದಿನಗಳಲ್ಲಿ ಫಿಟ್ ಇಂಡಿಯಾ ಜತೆಗೆ ಅನೇಕ ಕಾರ್ಯಕ್ರಮಗಳು ನಡೆಯುತ್ತಿರುವುದನ್ನು ನೋಡುತ್ತಿದ್ದೇನೆ. ಜನವರಿ 18ರಂದು ಯುವಕರು ದೇಶಾದ್ಯಂತ ಸೈಕ್ಲೊಥಾನ್ ಆಯೋಜಿಸಿದ್ದರು. ಇದರಲ್ಲಿ ಲಕ್ಷಾಂತರ ದೇಶವಾಸಿಗಳು ಪಾಲ್ಗೊಂಡು ಶಾರೀರಿಕ ಸದೃಢತೆಯ ಬಗ್ಗೆ ಸಂದೇಶ ನೀಡಿದರು. ನಮ್ಮ ಹೊಸ ಭಾರತ ಎಲ್ಲ ರೀತಿಯಲ್ಲೂ ಸದೃಢವಾಗಿದೆ. ಹೀಗಾಗಿ, ಎಲ್ಲ ಸ್ತರಗಳಲ್ಲಿಯೂ ಅವರು ಪ್ರಯತ್ನ ಪಡುತ್ತಿರುವುದನ್ನು ಕಾಣಲು ಸಾಧ್ಯವಾಗುತ್ತಿದೆ. ಹಾಗೂ ಅವರು ಉತ್ಸಾಹವನ್ನು ಎಲ್ಲೆಡೆ ತುಂಬುವಂಥವರಾಗಿದ್ದಾರೆ. ಹಿಂದಿನ ವರ್ಷದ ನವೆಂಬರ್ನಲ್ಲಿ ಶುರುವಾದ ಫಿಟ್ ಇಂಡಿಯಾ ಸ್ಕೂಲ್ ಅಭಿಯಾನವೂ ಈಗ ಹೊಸ ರಂಗನ್ನು ತರುತ್ತಿದೆ. ದೇಶದಲ್ಲಿ ಇದುವರೆಗೆ 65 ಸಾವಿರಕ್ಕೂ ಹೆಚ್ಚು ಶಾಲೆಗಳು ಆನ್ಲೈನ್ ನೋಂದಣಿ ಮೂಲಕ ಫಿಟ್ ಇಂಡಿಯಾ ಸ್ಕೂಲ್ ಸರ್ಟಿಫಿಕೇಟ್ ಪಡೆದುಕೊಂಡಿವೆ ಎಂದು ನನಗೆ ತಿಳಿಸಲಾಗಿದೆ. ದೇಶದ ಇತರ ಎಲ್ಲ ಶಾಲೆಗಳೂ ಅಧ್ಯಯನದ ಜತೆಗೆ ದೈಹಿಕ ಚಟುವಟಿಕೆ ಹಾಗೂ ಆಟೋಟಗಳನ್ನು ಅಳವಡಿಸಿಕೊಂಡು ಫಿಟ್ ಸ್ಕೂಲ್ ಆಗಬೇಕೆಂದು ನಾನು ಆಗ್ರಹಿಸುತ್ತಿದ್ದೇನೆ. ಇದರೊಂದಿಗೆ, ದೇಶದ ಎಲ್ಲ ನಾಗರಿಕರು ತಮ್ಮ ದಿನಚರಿಯಲ್ಲಿ ಹೆಚ್ಚು ದೈಹಿಕ ಚಟುವಟಿಕೆಯನ್ನು ಅಳವಡಿಸಿಕೊಳ್ಳುವಂತೆ ನಾನು ಮನವಿ ಮಾಡುತ್ತೇನೆ. ನಾವು ಫಿಟ್ ಆದರೆ ಭಾರತವೂ ಫಿಟ್ ಆಗಿರುತ್ತದೆ ಎನ್ನುವುದನ್ನು ದಿನವೂ ನೆನಪಿಸಿಕೊಳ್ಳಿ.
ನನ್ನ ಪ್ರೀತಿಯ ಜನರೇ, ಎರಡು ವಾರಗಳ ಮೊದಲು ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಹಬ್ಬಗಳ ಸಂಭ್ರಮವಿತ್ತು. ಪಂಜಾಬ್ ರಾಜ್ಯದಲ್ಲಿ ಲೋಹ್ರಿ ಹಬ್ಬದ ಉತ್ಸಾಹ, ಹುಮ್ಮಸ್ಸಿನ ವಾತಾವರಣ ಹರಡಿತ್ತು. ತಮಿಳುನಾಡಿನ ಸಹೋದರ, ಸಹೋದರಿಯರು ಪೊಂಗಲ್ ಹಬ್ಬ ಹಾಗೂ ತಿರುವಳ್ಳುವರ್ ಜಯಂತಿಯನ್ನು ಆಚರಿಸುತ್ತಿದ್ದರು. ಅಸ್ಸಾಂನಲ್ಲಿ ಬಿಹು ಹಬ್ಬದ ಮನೋಹರ ಸಂಭ್ರಮ ಕಾಣಸಿಗುತ್ತಿತ್ತು, ಗುಜರಾತ್ನಲ್ಲಿ ಎಲ್ಲೆಡೆಯೂ ಉತ್ತರಾಯಣದ ಸಂಭ್ರಮ ಮತ್ತು ಗಾಳಿಪಟಗಳಿಂದ ತುಂಬಿದ ಆಕಾಶವಿತ್ತು. ಈ ಸಮಯದಲ್ಲಿ ದೆಹಲಿ ಒಂದು ಐತಿಹಾಸಿಕ ಘಟನೆಗೆ ಸಾಕ್ಷಿಯಾಯಿತು. ದೆಹಲಿಯಲ್ಲಿ ಮಹತ್ವಪೂರ್ಣ ಒಪ್ಪಂದವೊಂದಕ್ಕೆ ಸಹಿ ಹಾಕಲಾಯಿತು. ಅದರೊಂದಿಗೆ, ಸರಿಸುಮಾರು 25 ವರ್ಷಗಳ ಹಳೆಯದಾದ ಬ್ರೂ-ರಿಯಾಂಗ್ ವಲಸಿಗರ ಬಿಕ್ಕಟ್ಟು ಅಂತ್ಯವಾಯಿತು. ಒಂದು ನೋವಿನ ಅಧ್ಯಾಯಕ್ಕೆ ಶಾಶ್ವತವಾಗಿ ಕೊನೆ ಹಾಡಲಾಯಿತು. ನಿಮ್ಮದೇ ದೈನಂದಿನ ಒತ್ತಡ ಹಾಗೂ ಹಬ್ಬದ ಆಚರಣೆಗಳಲ್ಲಿದ್ದ ನಿಮಗೆ ಈ ಐತಿಹಾಸಿಕ ಒಪ್ಪಂದದ ಬಗ್ಗೆ ವಿಸ್ತಾರವಾಗಿ ತಿಳಿಯಲು ಸಾಧ್ಯವಾಗಿರಲಿಕ್ಕಿಲ್ಲ. ಇದರಿಂದ ಈ ಐತಿಹಾಸಿಕ ಒಪ್ಪಂದದ ಬಗ್ಗೆ ಮನ್ ಕಿ ಬಾತ್ನಲ್ಲಿಯೇ ಅಗತ್ಯವಾಗಿ ಚರ್ಚೆ ಮಾಡಬೇಕೆಂದು ನನಗೆ ಅನಿಸಿದೆ.
ಈ ಸಮಸ್ಯೆ 90ರ ದಶಕದ್ದಾಗಿದೆ. 1997ರಲ್ಲಿ ಜಾತೀಯ ಸಂಘರ್ಷದ ಕಾರಣದಿಂದ ಬ್ರೂ-ರಿಯಾಂಗ್ ಸಮುದಾಯದ ಜನರು ಮಿಜೋರಾಂನಿಂದ ಹೊರಬಂದು ತ್ರಿಪುರಾದಲ್ಲಿ ಆಶ್ರಯ ಪಡೆದರು. ಈ ನಿರಾಶ್ರಿತರನ್ನು ಉತ್ತರ ತ್ರಿಪುರಾದ ಕಂಚನಪುರದಲ್ಲಿರುವ ತಾತ್ಕಾಲಿಕ ಕ್ಯಾಂಪ್ಗಳಲ್ಲಿ ಇರಿಸಲಾಗಿತ್ತು. ಖೇದವೆಂದರೆ, ಬ್ರೂ-ರಿಯಾಂಗ್ ಸಮುದಾಯದವರು ಅಂದಿನಿಂದ ತಮ್ಮ ಜೀವನದ ಮಹತ್ವಪೂರ್ಣ ಅಂಶವೊಂದನ್ನು ಕಳೆದುಕೊಂಡಿದ್ದರು. ಕ್ಯಾಂಪುಗಳಲ್ಲಿ ಜೀವನ ಸಾಗಿಸುವುದೆಂದರೆ, ಸಮಸ್ತ ಮೂಲಸೌಕರ್ಯದಿಂದ ವಂಚಿತರಾಗುವುದು. ಹೀಗೆ, 23 ವರ್ಷಗಳವರೆಗೆ ಮನೆಯಿಲ್ಲದೆ, ಭೂಮಿಯಿಲ್ಲದೆ, ಪರಿವಾರವಿಲ್ಲದೆ ಅವರು ಬದುಕಿದ್ದರು. ಮನೆಗಾಗಿ, ಅನಾರೋಗ್ಯಕ್ಕಾಗಿ, ಔಷಧಕ್ಕಾಗಿ ಹಾಗೂ ಮಕ್ಕಳ ಶಿಕ್ಷಣಕ್ಕಾಗಿ, ತಮ್ಮದೇ ಹಿತಕ್ಕಾಗಿ ಇವರು ಏನೂ ಮಾಡುವಂತಿರಲಿಲ್ಲ. 23 ವರ್ಷಗಳ ಕಾಲ ಕ್ಯಾಂಪುಗಳಲ್ಲಿ ಕಠಿಣ ಪರಿಸ್ಥಿತಿಯಲ್ಲಿ ಜೀವನ ಕಳೆಯುವುದು ಅವರಿಗೆ ಎಷ್ಟು ಕಷ್ಟವಾಗಿರಬಹುದೆಂದು ಸ್ವಲ್ಪ ಯೋಚಿಸಿ. ಬದುಕಿನ ಪ್ರತಿ ಕ್ಷಣ, ಪ್ರತಿ ದಿನವೂ ಅನಿಶ್ಚಿತ ಭವಿಷ್ಯದೊಂದಿಗೆ ಸಾಗುವುದು ಎಷ್ಟು ಕಷ್ಟದಾಯಕ ಆಗಿದ್ದಿರಬಹುದು. ಸರ್ಕಾರಗಳು ಬಂದವು, ಹೋದವು. ಆದರೆ, ಅವರ ಕಷ್ಟ ಕಾರ್ಪಣ್ಯಗಳಿಗೆ ಯಾವುದೇ ಸರ್ಕಾರಗಳು ಪರಿಹಾರ ಕಂಡುಹಿಡಿಯಲಿಲ್ಲ. ಇಷ್ಟೆಲ್ಲ ಕಷ್ಟಗಳ ನಡುವೆಯೂ ಭಾರತೀಯ ಸಂವಿಧಾನದ ಮತ್ತು ಸಂಸ್ಕøತಿಯ ಮೇಲಿನ ಅವರ ವಿಶ್ವಾಸ ಅಚಲವಾಗಿತ್ತು. ಇದೇ ವಿಶ್ವಾಸದ ಫಲವಾಗಿ ಅವರ ಜೀವನದಲ್ಲಿಂದು ಹೊಸ ಬೆಳಗು ಮೂಡಿದೆ. ಒಪ್ಪಂದದ ಮೂಲಕ ಅವರು ಗೌರವಪೂರ್ಣವಾಗಿ ಬದುಕಲು ಬೇಕಾದ ಹಾದಿಯನ್ನು ತೆರೆಯಲಾಗಿದೆ. 2020ರ ಹೊಸ ದಶಕ, ಬ್ರೂ-ರಿಯಾಂಗ್ ಸಮುದಾಯದ ಜನರ ಜೀವನದಲ್ಲಿ ಒಂದು ಹೊಸ ಆಸೆ ಹಾಗೂ ಭರವಸೆಯ ಕಿರಣಗಳನ್ನು ತಂದಿದೆ. ಸುಮಾರು 34 ಸಾವಿರ ಬ್ರೂ-ರಿಯಾಂಗ್ ಜನರು ಇನ್ನು ತ್ರಿಪುರಾದಲ್ಲಿಯೇ ಬದುಕು ಕಟ್ಟಿಕೊಳ್ಳಲಿದ್ದಾರೆ. ಇಷ್ಟೇ ಅಲ್ಲ, ಅವರ ಪುನರ್ವಸತಿ ಹಾಗೂ ಸರ್ವಾಂಗೀಣ ವಿಕಾಸಕ್ಕೆಂದು ಕೇಂದ್ರ ಸರ್ಕಾರ ಸುಮಾರು 600 ಕೋಟಿ ರೂಪಾಯಿ ಪ್ಯಾಕೇಜ್ನ ಸಹಾಯವನ್ನೂ ನೀಡಲಿದೆ. ಪ್ರತಿ ಕುಟುಂಬಕ್ಕೆ ಸೈಟ್ ನೀಡಲಾಗುವುದು. ಮನೆ ಕಟ್ಟಿಕೊಳ್ಳಲು ನೆರವು ನೀಡಲಾಗುವುದು. ಇದರೊಂದಿಗೆ, ಅವರ ರೇಷನ್ಗೂ ವ್ಯವಸ್ಥೆ ಮಾಡಲಾಗುವುದು. ಇನ್ನು ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಜನಕಲ್ಯಾಣ ಯೋಜನೆಗಳ ಲಾಭವನ್ನೂ ಪಡೆಯಲಿದ್ದಾರೆ. ಈ ಒಪ್ಪಂದ ಅನೇಕ ಕಾರಣಗಳಿಂದ ವಿಶೇಷವಾಗಿದೆ. ಸಹಕಾರಿ ಒಕ್ಕೂಟ ತತ್ವದ ದರ್ಶನ ಇದಾಗಿದೆ. ಈ ಒಪ್ಪಂದಕ್ಕಾಗಿ ಮಿಜೋರಾಂ ಹಾಗೂ ತ್ರಿಪುರಾ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಹಾಜರಿದ್ದರು. ಈ ಒಪ್ಪಂದ ಎರಡೂ ರಾಜ್ಯಗಳ ಜನರ ಒಪ್ಪಿಗೆ ಹಾಗೂ ಶುಭಕಾಮನೆಗಳಿಂದಲೇ ಸಾಧ್ಯವಾಗಿದೆ. ಇದಕ್ಕಾಗಿ, ಎರಡೂ ರಾಜ್ಯಗಳ ಜನತೆ ಹಾಗೂ ಅಲ್ಲಿನ ಮುಖ್ಯಮಂತ್ರಿಗಳಿಗೆ ವಿಶೇಷವಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ಈ ಒಪ್ಪಂದ ಭಾರತೀಯ ಸಂಸ್ಕøತಿಯಲ್ಲಿ ಸಮ್ಮಿಳಿತವಾಗಿರುವ ಕರುಣಾಭಾವ ಹಾಗೂ ಸಹೃದಯತೆಯನ್ನೂ ಪ್ರಕಟಿಸುತ್ತದೆ. ಎಲ್ಲರನ್ನೂ ನಮ್ಮವರೆಂದು ಭಾವಿಸಿ ನಡೆಯುವುದು, ಎಲ್ಲರೊಂದಿಗೆ ಒಂದಾಗಿ ಸಾಗುವುದು ಈ ಪವಿತ್ರ ಭೂಮಿಯ ಸಂಸ್ಕಾರದಲ್ಲೇ ಅಡಗಿದೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಈ ರಾಜ್ಯಗಳ ನಿವಾಸಿಗಳು ಹಾಗೂ ಬ್ರೂ-ರಿಯಾಂಗ್ ಸಮುದಾಯದ ಜನರಿಗೆ ಅಭಿನಂದನೆ ಸಲ್ಲಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಬೃಹತ್ ಖೇಲೋ ಇಂಡಿಯಾ ಪಂದ್ಯಾವಳಿಯನ್ನು ಯಶಸ್ಸುಗೊಳಿಸಿರುವ ಅಸ್ಸಾಂನಲ್ಲಿ ಈ ನಡುವೆ ಇನ್ನೊಂದು ದೊಡ್ಡ ಕಾರ್ಯವಾಗಿದೆ. ತಾವೂ ಮಾಧ್ಯಮಗಳಲ್ಲಿ ನೋಡಿರಬಹುದು, ಕೆಲವು ದಿನಗಳ ಹಿಂದೆ ಅಸ್ಸಾಂನಲ್ಲಿ ಎಂಟು ಬೇರೆ ಬೇರೆ ಉಗ್ರ ಗುಂಪುಗಳ 644 ಜನರು ತಮ್ಮ ಶಸ್ತ್ರಾಸ್ತ್ರಗಳೊಂದಿಗೆ ಶರಣಾದರು. ಮೊದಲು ಹಿಂಸಾತ್ಮಕ ದಾರಿಯಲ್ಲಿ ಯಾರು ಸಾಗಿದ್ದರೋ, ಅವರು ಶಾಂತಿಯಲ್ಲಿ ನಂಬಿಕೆಯಿಟ್ಟು ದೇಶದ ಅಭಿವೃದ್ಧಿಯಲ್ಲಿ ಭಾಗಿದಾರರಾಗಲು ನಿರ್ಣಯಿಸಿದ್ದಾರೆ, ಮುಖ್ಯವಾಹಿನಿಗೆ ಮರಳಿದ್ದಾರೆ. ಹಿಂದಿನ ವರ್ಷ ತ್ರಿಪುರಾದಲ್ಲಿಯೂ 80ಕ್ಕೂ ಹೆಚ್ಚು ಜನರು ಹಿಂಸೆಯ ಮಾರ್ಗ ಬಿಟ್ಟು ಮುಖ್ಯವಾಹಿನಿಗೆ ಮರಳಿದ್ದರು. ಹಿಂಸೆಯಿಂದ ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ಯೋಚಿಸಿ ಶಸ್ತ್ರ ಹಿಡಿದಿದ್ದ ಅವರೆಲ್ಲರಿಗೂ ಈಗ ಶಾಂತಿ ಹಾಗೂ ಒಗ್ಗಟ್ಟು, ವಿವಾದಗಳಿಗೆ ಪರಿಹಾರ ನೀಡಬಲ್ಲ ದಾರಿ ಎನ್ನುವ ವಿಶ್ವಾಸ ಗಟ್ಟಿಯಾಗಿದೆ. ಈಗ ಈಶಾನ್ಯ ವಲಯದಲ್ಲಿ ಒಳನುಸುಳುವಿಕೆ, ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ ಎನ್ನುವ ಸುದ್ದಿ ತಿಳಿದರೆ ನಿಮಗೆಲ್ಲ ತುಂಬ ಸಂತಸವಾಗಬಹುದು. ಇದಕ್ಕೆ ಮುಖ್ಯವಾದ ಕಾರಣವೆಂದರೆ, ಈ ಭಾಗದ ಪ್ರತಿಯೊಂದು ಸಮಸ್ಯೆಯನ್ನೂ ಶಾಂತಿಯುತವಾಗಿ, ಪ್ರಾಮಾಣಿಕತೆಯಿಂದ ಚರ್ಚೆ ನಡೆಸಿ ಇತ್ಯರ್ಥ ಮಾಡಲಾಗುತ್ತಿದೆ. ಹೀಗಾಗಿ, ದೇಶದ ಯಾವುದೇ ಮೂಲೆಯಲ್ಲಿ, ಹಿಂಸೆ ಹಾಗೂ ಶಸ್ತ್ರದ ಬಲದಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕುರಿತು ವಿಚಾರ ಮಾಡುವ ಜನರೆಲ್ಲ ಮುಖ್ಯವಾಹಿನಿಗೆ ಬನ್ನಿ ಎಂದು ಈ ಪವಿತ್ರ ಗಣತಂತ್ರ ದಿನದ ಸಂದರ್ಭದಲ್ಲಿ ನಾನು ಮನವಿ ಮಾಡುತ್ತೇನೆ. ಶಾಂತಿಯುತ ಮಾರ್ಗದ ಮೂಲಕ ಯಾವುದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಈ ದೇಶ ಹಾಗೂ ನಮ್ಮ ಸಾಮಥ್ರ್ಯದ ಬಗ್ಗೆ ಭರವಸೆ ಇಡಿ. ನಾವು 21ನೇ ಶತಮಾನದಲ್ಲಿದ್ದೇವೆ. ಇದು ಜ್ಞಾನ-ವಿಜ್ಞಾನ ಹಾಗೂ ಪ್ರಜಾಪ್ರಭುತ್ವದ ಯುಗವಾಗಿದೆ. ಹಿಂಸೆಯಿಂದ ಜೀವನಕ್ಕೆ ಒಳ್ಳೆಯದಾಗಿದೆ ಎನ್ನುವ ಯಾವುದಾದರೂ ಸ್ಥಳದ ಬಗ್ಗೆ ನೀವು ಕೇಳಿದ್ದೀರಾ? ಶಾಂತಿ ಹಾಗೂ ಸಾಮರಸ್ಯದಿಂದ ಜೀವನದಲ್ಲಿ ಸಮಸ್ಯೆ ಸೃಷ್ಟಿಯಾಗಿರುವ ಯಾವುದಾದರೂ ಪ್ರದೇಶದ ಬಗ್ಗೆ ಕೇಳಿರುವಿರಾ? ಯಾವುದೇ ಸಮಸ್ಯೆಗೆ ಹಿಂಸೆ ಸಮಾಧಾನ ನೀಡದು. ಇನ್ನೊಂದು ಸಮಸ್ಯೆಯನ್ನು ಹುಟ್ಟುಹಾಕುವುದರಿಂದ ಜಗತ್ತಿನಲ್ಲಿ ಯಾವುದೇ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ, ಬದಲಿಗೆ ಹೆಚ್ಚು ಹೆಚ್ಚು ಸಮಾಧಾನದಿಂದಲೇ ಪರಿಹಾರ ಕಂಡುಕೊಳ್ಳಬಹುದು. ಬನ್ನಿ, ನಾವೆಲ್ಲ ಸೇರಿ ಎಂಥ ಹೊಸ ಭಾರತವನ್ನು ನಿರ್ಮಾಣ ಮಾಡೋಣವೆಂದರೆ, ಅಲ್ಲಿ ಎಲ್ಲ ಸವಾಲುಗಳಿಗೆ ಶಾಂತಿಯ ಮೂಲ ಆಧಾರದಿಂದಲೇ ಉತ್ತರ ಲಭಿಸಲಿ. ಒಗ್ಗಟ್ಟೇ ಪ್ರತಿ ಸಮಸ್ಯೆಗೆ ಪರಿಹಾರ ನೀಡಲಿ ಹಾಗೂ ಭ್ರಾತೃತ್ವ ವಿಭಜಿಸುವ, ಒಡೆಯುವ ಪ್ರಯತ್ನಗಳನ್ನು ವಿಫಲಗೊಳಿಸಲಿ.
ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ಗಣತಂತ್ರ ದಿನದ ಪವಿತ್ರ ಸಮಯದಲ್ಲಿ ಗಗನಯಾನದ ಬಗ್ಗೆ ಹೇಳಲು ನನಗೆ ಅಪಾರ ಹರ್ಷವಾಗುತ್ತಿದೆ. ದೇಶವು ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ. 2022ಕ್ಕೆ ನಾವು ಸ್ವತಂತ್ರರಾಗಿ 75 ವರ್ಷಗಳಾಗುತ್ತಿವೆ. ಈ ಸಂದರ್ಭದಲ್ಲಿ ಗಗನಯಾನ ಮಿಷನ್ ಮೂಲಕ ಮಾನವನನ್ನು ಅಂತರಿಕ್ಷಕ್ಕೆ ಕಳುಹಿಸುವ ಸಂಕಲ್ಪವನ್ನು ನಾವು ಸಾಧಿಸಬೇಕಿದೆ. 21ನೇ ಶತಮಾನದಲ್ಲಿ ಗಗನಯಾನ ಮಿಷನ್, ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರಕ್ಕೆ ಭಾರತದ ಐತಿಹಾಸಿಕ ಕೊಡುಗೆಯಾಗಲಿದೆ. ನೂತನ ಭಾರತಕ್ಕಾಗಿ ಇದೊಂದು ಮೈಲಿಗಲ್ಲಾಗಲಿದೆ.
ಬಾಂಧವರೇ, ಈ ಗಗನಯಾನದಲ್ಲಿ astronaut ಅಥವಾ ಅಂತರಿಕ್ಷಯಾನಿಯಾಗಿ ಹೋಗುವ ಆಸಕ್ತಿಯುಳ್ಳ ನಾಲ್ವರನ್ನು ಈಗಾಗಲೇ ಆಯ್ಕೆ ಮಾಡಿರುವ ಸಂಗತಿ ನಿಮಗೆ ತಿಳಿದೇ ಇರಬಹುದು. ಈ ನಾಲ್ವರೂ ಭಾರತೀಯ ವಾಯುಸೇನೆಯ ಪೈಲಟ್ಗಳಾಗಿದ್ದಾರೆ. ಈ ಪ್ರತಿಭಾವಂತ ಅಂತರಿಕ್ಷಯಾನಿಗಳು ಭಾರತದ ಕೌಶಲ, ಪ್ರತಿಭೆ, ದಕ್ಷತೆ, ಸಾಹಸ ಹಾಗೂ ಕನಸುಗಳ ಪ್ರತೀಕವಾಗಿದ್ದಾರೆ. ನಮ್ಮ ಈ ನಾಲ್ಕೂ ಮಿತ್ರರು ಇನ್ನು ಕೆಲವೇ ದಿನಗಳಲ್ಲಿ ಗಗನಯಾನದ ತರಬೇತಿಗೆ, ರಷ್ಯಾಗೆ ತೆರಳಲಿದ್ದಾರೆ. ಈ ತರಬೇತಿ, ಭಾರತ ಹಾಗೂ ರಷ್ಯಾ ನಡುವಿನ ಮೈತ್ರಿಯನ್ನು ಇನ್ನಷ್ಟು ಗಾಢವಾಗಿಸುವ ಬಗ್ಗೆ ಹಾಗೂ ಇನ್ನೊಂದು ಮಧುರ ಅಧ್ಯಾಯವನ್ನು ಆರಂಭಿಸುವ ಬಗ್ಗೆ ನನಗೆ ವಿಶ್ವಾಸವಿದೆ. ಈ ಪೈಲಟ್ಗಳಿಗೆ ಒಂದು ವರ್ಷಕ್ಕೂ ಹೆಚ್ಚು ಸಮಯ ತರಬೇತಿ ನೀಡಲಾಗುವುದು. ಆ ಬಳಿಕ, ಇವರಲ್ಲಿಯೇ ಯಾರಾದರೂ ಒಬ್ಬರು ದೇಶದ ಆಶೋತ್ತರ ಹಾಗೂ ಆಕಾಂಕ್ಷೆಗಳನ್ನು ಹೊತ್ತು ಅಂತರಿಕ್ಷಕ್ಕೆ ಹಾರುವ ಬೃಹತ್ ಹೊಣೆಗಾರಿಕೆಯನ್ನು ಹೊಂದಲಿದ್ದಾರೆ. ಗಣತಂತ್ರ ದಿನದ ಈ ಶುಭ ಸಂದರ್ಭದಲ್ಲ್ಲಿ ಈ ನಾಲ್ಕೂ ಯುವ ಪೈಲಟ್ಗಳು ಹಾಗೂ ಈ ಮಿಷನ್ನಲ್ಲಿ ಭಾಗಿಯಾಗಿರುವ ಭಾರತ ಮತ್ತು ರಷ್ಯಾದ ವಿಜ್ಞಾನಿಗಳು, ಇಂಜಿನಿಯರುಗಳಿಗೆ ನಾನು ಶುಭ ಕಾಮನೆಗಳನ್ನು ಕೋರುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಕಳೆದ ಮಾರ್ಚ್ನಲ್ಲಿ ವಿಡಿಯೋವೊಂದು ಮಾಧ್ಯಮ ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆಯ ವಿಷಯವಾಗಿತ್ತು. ಅಂದು, 107 ವರ್ಷದ ಒಬ್ಬ ಹಿರಿಯ ತಾಯಿ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ, ಪ್ರೊಟೊಕಾಲ್ ಲೆಕ್ಕಿಸದೆ ಮುಂದೆ ಬಂದು ರಾಷ್ಟ್ರಪತಿಗಳಿಗೆ ಆಶೀರ್ವಾದ ಮಾಡಿದ್ದರು. ಆ ಮಹಿಳೆ ಕರ್ನಾಟಕದ ಸಾಲುಮರದ ತಿಮ್ಮಕ್ಕ. ಕರ್ನಾಟಕದಲ್ಲಿ ಅವರು ವೃಕ್ಷಗಳ ತಾಯಿ ಎಂದೇ ಖ್ಯಾತರಾಗಿದ್ದಾರೆ. ಪದ್ಮ ಪುರಸ್ಕಾರದ ಸಮಾರಂಭ ಅದಾಗಿತ್ತು. ಅತ್ಯಂತ ಸಾಧಾರಣ ಹಿನ್ನೆಲೆಯಿಂದ ಬಂದ ತಿಮ್ಮಕ್ಕ ದೇಶಕ್ಕೆ ಸಲ್ಲಿಸಿದ ಅಸಾಧಾರಣ ಸೇವೆಯನ್ನು ಅಂದು ಎಲ್ಲರೂ ಅರಿತು, ಅರ್ಥೈಸಿಕೊಂಡು, ಸನ್ಮಾನಿಸಿದ್ದರು. ಅಂದು ಅವರಿಗೆ ಪದ್ಮಶ್ರೀ ಪುರಸ್ಕಾರ ನೀಡಲಾಗಿತ್ತು.
ಗೆಳೆಯರೇ, ಇಂದು, ಭಾರತ ಇಂತಹ ಮಹಾನ್ ಚೇತನಗಳನ್ನು ಪಡೆದಿರುವ ಬಗ್ಗೆ ಹೆಮ್ಮೆ ಪಡುತ್ತದೆ. ನೆಲದ ಮಣ್ಣಿನೊಂದಿಗೆ ಬಾಂಧವ್ಯ ಹೊಂದಿದ ಜನರನ್ನು ಸನ್ಮಾನಿಸುವುದು ಧನ್ಯತಾ ಭಾವ ಮೂಡಿಸುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ನಿನ್ನೆ ಸಂಜೆಯಷ್ಟೇ ಪದ್ಮ ಪುರಸ್ಕøತರ ಹೆಸರುಗಳನ್ನು ಪ್ರಕಟಿಸಲಾಗಿದೆ. ಈ ಎಲ್ಲ ಪುರಸ್ಕೃತರ ಬಗ್ಗೆ ಅಗತ್ಯವಾಗಿ ತಿಳಿದುಕೊಳ್ಳಿ ಎನ್ನುವುದು ನನ್ನ ಆಗ್ರಹ. ಇವರ ಸೇವೆಯ ಬಗ್ಗೆ ಕುಟುಂಬದಲ್ಲಿ ಚರ್ಚೆ ಮಾಡಿ. 2020ರ ಪದ್ಮ ಪುರಸ್ಕಾರಕ್ಕೆ ಈ ಬಾರಿ 46 ಸಾವಿರಕ್ಕೂ ಅಧಿಕ ಜನರ ನಾಮ ನಿರ್ದೇಶನಗಳು ಬಂದಿದ್ದವು. 2014ಕ್ಕೆ ಹೋಲಿಸಿದರೆ ಈ ಸಂಖ್ಯೆ 20 ಪಟ್ಟು ಹೆಚ್ಚು. ಈ ಅಂಕಿ ಸಂಖ್ಯೆಗಳು ಪದ್ಮ ಪುರಸ್ಕಾರ ಈಗ ಜನರ ಪುರಸ್ಕಾರ ಆಗಿರುವ ಬಗ್ಗೆ ಎಲ್ಲರಲ್ಲೂ ವಿಶ್ವಾಸ ಮೂಡಿಸಿವೆ. ಇಂದು ಪದ್ಮ ಪುರಸ್ಕಾರದ ಎಲ್ಲ ಪ್ರಕ್ರಿಯೆಗಳೂ ಆನ್ಲೈನ್ ಆಗಿವೆ. ಮೊದಲು, ಕೆಲವೇ ಜನರ ಮಧ್ಯೆ ನಡೆಯುತ್ತಿದ್ದ ನಿರ್ಣಯ ಇಂದು ಜನಸಾಮಾನ್ಯರ ನಡುವೆ ಆಗುತ್ತಿದೆ. ಪದ್ಮ ಪುರಸ್ಕಾರದ ವಿಚಾರದಲ್ಲಿ ದೇಶದಲ್ಲಿ ಒಂದು ರೀತಿಯ ಹೊಸ ವಿಶ್ವಾಸ ಹಾಗೂ ಗೌರವ ಮೂಡಿದೆ. ಈಗ ಪದ್ಮ ಪುರಸ್ಕಾರಕ್ಕೆ ಪಾತ್ರರಾಗುವವರು ತಮ್ಮ ಪರಿಶ್ರಮದಿಂದ ಔನ್ನತ್ಯ ಸಾಧಿಸಿದವರು ಹಾಗೂ ತಳಹಂತದಿಂದ ಸಾಧನೆ ಮಾಡಿದವರು ಎನ್ನುವ ನಂಬಿಕೆ ಬಂದಿದೆ. ಸೀಮಿತ ಸಂಪನ್ಮೂಲಗಳು, ಸಾಕಷ್ಟು ಅಡೆತಡೆ ಹಾಗೂ ತಮ್ಮ ಸುತ್ತಮುತ್ತಲಿನ ಘನಘೋರ ನಿರಾಶೆಗಳನ್ನು ಹತ್ತಿಕ್ಕಿ ಮುಂದೆ ಸಾಗಿದವರನ್ನು ಗುರುತಿಸಲಾಗುತ್ತಿದೆ. ಅಸಲಿಗೆ, ಅವರ ದೃಢವಾದ ಇಚ್ಛಾಶಕ್ತಿ, ಸೇವೆ ಹಾಗೂ ನಿಸ್ವಾರ್ಥ ಭಾವ ನಮ್ಮೆಲ್ಲರಿಗೂ ಪ್ರೇರಣೆಯಾಗಿವೆ. ಪದ್ಮ ಪುರಸ್ಕಾರಕ್ಕೆ ಪಾತ್ರರಾದ ಎಲ್ಲರಿಗೂ ನಾನು ಮತ್ತೊಮ್ಮೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಹಾಗೂ ತಾವೆಲ್ಲರೂ ಅವರ ಬಗ್ಗೆ ಓದಲು, ಹೆಚ್ಚಿನ ಮಾಹಿತಿ ಪಡೆಯಲು ಮತ್ತೊಮ್ಮೆ ಒತ್ತಾಯಿಸುತ್ತೇನೆ. ಅವರ ಜೀವನದ ಅಸಾಧಾರಣ ಕತೆಗಳು, ಸಾಧನೆಗಳು ಸಮಾಜಕ್ಕೆ ಸರಿದಿಕ್ಕಿನಲ್ಲಿ ಸಾಗಲು ಪ್ರೇರಣೆ ನೀಡುತ್ತವೆ.
ನನ್ನ ಪ್ರೀತಿಯ ನಾಗರಿಕರೇ, ಮತ್ತೊಮ್ಮೆ ಗಣತಂತ್ರ ದಿನದ ಅನೇಕ ಶುಭ ಹಾರೈಕೆಗಳು. ಈ ಇಡೀ ದಶಕ ತಮ್ಮೆಲ್ಲರ ಬದುಕು ಹಾಗೂ ಭಾರತದ ಭವಿಷ್ಯಕ್ಕೆ ಹೊಸ ಸಂಕಲ್ಪ ಮೂಡಿಸಲಿ, ಹೊಸ ಸಿದ್ಧಿಯಾಗಲಿ. ಹಾಗೂ ಭಾರತದಿಂದ ಈ ವಿಶ್ವ ಏನನ್ನು ಅಪೇಕ್ಷಿಸುತ್ತದೆಯೋ ಅವನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಭಾರತದ ಸಾಮಥ್ರ್ಯ ವೃದ್ಧಿಸಲಿ. ಈ ಒಂದು ವಿಶ್ವಾಸದೊಂದಿಗೆ ಬನ್ನಿ, ಹೊಸ ದಶಕವನ್ನು ಆರಂಭಿಸೋಣ. ಹೊಸ ಸಂಕಲ್ಪಗಳೊಂದಿಗೆ ತಾಯಿ ಭಾರತಿಗಾಗಿ ಒಂದಾಗೋಣ, ಧನ್ಯವಾದಗಳು, ನಮಸ್ಕಾರ.
****************
(Release ID: 1600640)
Visitor Counter : 286
Read this release in:
Punjabi
,
Assamese
,
Telugu
,
Gujarati
,
English
,
Urdu
,
Marathi
,
Hindi
,
Bengali
,
Tamil
,
Malayalam