ಸಂಪುಟ

ಜೈವಿಕ ಇಂಧನ ಸಹಕಾರ ಕುರಿತು ಭಾರತ ಮತ್ತು ಬ್ರೆಜಿಲ್ ನಡುವೆ ಒಪ್ಪಂದಕ್ಕೆ ಸಹಿ ಹಾಕಲು ಸಂಪುಟ ಅನುಮೋದನೆ

Posted On: 24 DEC 2019 4:36PM by PIB Bengaluru

ಜೈವಿಕ ಇಂಧನ ಸಹಕಾರ ಕುರಿತು ಭಾರತ ಮತ್ತು ಬ್ರೆಜಿಲ್ ನಡುವೆ ಒಪ್ಪಂದಕ್ಕೆ ಸಹಿ ಹಾಕಲು ಸಂಪುಟ ಅನುಮೋದನೆ
 

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಜೈವಿಕ ಇಂಧನ ಸಹಕಾರ ಕುರಿತು ಭಾರತ ಮತ್ತು ಬ್ರೆಜಿಲ್ ನಡುವೆ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಲು ಅನುಮೋದನೆ ನೀಡಿದೆ.

ಭಾರತ ಮತ್ತು ಬ್ರೆಜಿಲ್ ವಿಶ್ವದ ಇಂಧನದ ಪ್ರಮುಖ ಗ್ರಾಹಕರಾಗಿದ್ದು, ಇಡೀ ಎಲ್‌ಎಸಿ (ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್) ಪ್ರದೇಶದಲ್ಲಿ ಬ್ರೆಜಿಲ್ ಭಾರತದ ಪ್ರಮುಖ ವ್ಯಾಪಾರ ಪಾಲುದಾರರಲ್ಲಿ ಒಂದಾಗಿದೆ. ಬ್ರೆಜಿಲ್ ಪ್ರಸ್ತುತ ವಿಶ್ವದ ಎರಡನೇ ಅತಿದೊಡ್ಡ ಜೈವಿಕ ಇಂಧನಗಳ ಉತ್ಪಾದಕ ಮತ್ತು ಬಳಕೆದಾರ ರಾಷ್ಟ್ರವಾಗಿದೆ. ಬ್ರೆಜಿಲ್ ನ ಇಂಧನದಲ್ಲಿ ಜೈವಿಕ ವಿದ್ಯುತ್ ಶೇ.18 ರಷ್ಟಿದೆ. ಭಾರತವು ಜೈವಿಕ ಇಂಧನಗಳ ಕ್ಷೇತ್ರದಲ್ಲಿ ಬಲವಾದ ದೃಷ್ಟಿಯನ್ನು ಹೊಂದಿದೆ ಮತ್ತು 2018 ರಲ್ಲಿ ಜೈವಿಕ ಇಂಧನಗಳ ಕುರಿತು ಹೊಸ ನೀತಿಯನ್ನು ಪ್ರಕಟಿಸುವುದರೊಂದಿಗೆ 2030 ರ ವೇಳೆಗೆ ಪೆಟ್ರೋಲ್‌ನಲ್ಲಿ ಶೇ.20 ಮತ್ತು ಡೀಸೆಲ್‌ನಲ್ಲಿ ಶೇ.5 ಎಥೆನಾಲ್ ಮಿಶ್ರಣವನ್ನು ಸಾಧಿಸುವ ಗುರಿಯನ್ನು ಹೊಂದಿದೆ.

ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಬ್ರೆಜಿಲ್ ಅಧ್ಯಕ್ಷರು ಭಾರತದಲ್ಲಿ 2016 ರಲ್ಲಿ ನಡೆಸಿದ ಸಭೆಯಲ್ಲಿ, ನವೀಕರಿಸಬಹುದಾದ ಇಂಧನಗಳ ಸಂಶೋಧನೆ ಮತ್ತು ಅಭಿವೃದ್ಧಿಗೆ ಸಹಕಾರಿಯಾಗಲು ಮತ್ತು ಎರಡನೇ ತಲೆಮಾರಿನ ಜೈವಿಕ ಇಂಧನ ಕ್ಷೇತ್ರದಲ್ಲಿ ಸಹಕರಿಸಲು ಉಭಯ ರಾಷ್ಟ್ರಗಳು ಒಪ್ಪಿಕೊಂಡಿವೆ.

ಈ ನಿಟ್ಟಿನಲ್ಲಿ, ಫೀಡ್ ಸ್ಟಾಕ್, ಕೈಗಾರಿಕಾ ಪರಿವರ್ತನೆ, ವಿತರಣೆ ಮತ್ತು ಅಂತಿಮ ಬಳಕೆಯ ಕ್ಷೇತ್ರಗಳು ಸೇರಿದಂತೆ ಜೈವಿಕ ಇಂಧನ, ಜೈವಿಕ ವಿದ್ಯುತ್ ಮತ್ತು ಜೈವಿಕ ಅನಿಲ ಪೂರೈಕೆ ಸರಪಳಿಗಳಲ್ಲಿನ ಹೂಡಿಕೆಯನ್ನು ಸಹಕರಿಸಲು ಮತ್ತು ಉತ್ತೇಜಿಸಲು ತಿಳುವಳಿಕೆ ಒಪ್ಪಂದ ಒಂದು ಚೌಕಟ್ಟನ್ನು ಒದಗಿಸುತ್ತದೆ. ಒಪ್ಪಂದದ ಇತರ ಕೆಲವು ಪ್ರಮುಖ ಲಕ್ಷಣಗಳೆಂದರೆ, ಕಬ್ಬು, ಜೋಳ, ಭತ್ತ, ಎಣ್ಣೆ-ಬೆಳೆಗಳು ಮತ್ತು ಲಿಗ್ನೋಸೆಲ್ಯುಲೋಸಿಕ್ ಬೆಳೆಗಳು ಸೇರಿದಂತೆ ಜೈವಿಕ ಇಂಧನಕ್ಕಾಗಿ ಜೈವಿಕ ರಾಸಾಯನಿಕಗಳಿಗೆ ಸಂಬಂಧಿಸಿದ ಕೃಷಿ ಪದ್ಧತಿಗಳು ಮತ್ತು ನೀತಿಗಳ ಮಾಹಿತಿ ವಿನಿಮಯ; ಜೈವಿಕ ಇಂಧನಗಳ ಬಳಕೆಯ ಆಧಾರದ ಮೇಲೆ ಹಸಿರುಮನೆ ಅನಿಲ ಹೊರಸೂಸುವಿಕೆಯ ಮಟ್ಟವನ್ನು ಕಡಿಮೆ ಮಾಡುವ ನೀತಿಗಳು, ಆವರ್ತಗಳ ವಿಶ್ಲೇಷಣೆ ಮತ್ತು ಸಂಘಟಿತ ಮಾರುಕಟ್ಟೆಯಲ್ಲಿ ಹೊರಸೂಸುವಿಕೆ ಕಡಿತ ಪ್ರಮಾಣಪತ್ರಗಳ ವಿತರಣೆ; ವ್ಯಾಪಾರದ ಅಂಶಗಳು ಮತ್ತು ಸುಧಾರಿತ ಜೈವಿಕ ಇಂಧನಗಳು ಸೇರಿದಂತೆ ಜೈವಿಕ ಇಂಧನಗಳ ಮಾರುಕಟ್ಟೆ ಪ್ರವೇಶ ಮತ್ತು ಸುಸ್ಥಿರತೆಯನ್ನು ಪರಿಹರಿಸಲು ಜಂಟಿ ಸ್ಥಾನದ ಪ್ರಚಾರ; ಪಳೆಯುಳಿಕೆ ಇಂಧನಗಳೊಂದಿಗೆ ಬೆರೆಸಲಾದ ವಿವಿಧ ಶೇಕಡಾ ಜೈವಿಕ ಇಂಧನಗಳಿಗೆ ಅಗತ್ಯವಿರುವ ಎಂಜಿನ್ ಮತ್ತು ಇಂಧನ ಮಾರ್ಪಾಡುಗಳು / ಹೊಂದಾಣಿಕೆಗಳು.



(Release ID: 1597513) Visitor Counter : 102