ಸಂಪುಟ

ಮೂಲಸೌಕರ್ಯ ಹೂಡಿಕೆ ಟ್ರಸ್ಟ್ ಸ್ಥಾಪನೆ ಮತ್ತು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಂದ ಹಣಗಳಿಕೆಗೆ NHAI ಗೆ ಸಂಪುಟದ ಅನುಮೋದನೆ

Posted On: 11 DEC 2019 6:11PM by PIB Bengaluru

ಮೂಲಸೌಕರ್ಯ ಹೂಡಿಕೆ ಟ್ರಸ್ಟ್ ಸ್ಥಾಪನೆ ಮತ್ತು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಂದ ಹಣಗಳಿಕೆಗೆ NHAI ಗೆ ಸಂಪುಟದ ಅನುಮೋದನೆ

 

ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ವು ಮೂಲಸೌಕರ್ಯ ಹೂಡಿಕೆ ಟ್ರಸ್ಟ್ (ಇನ್ವಿಟ್) ಸ್ಥಾಪಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸಲ್ಲಿಸಿದ್ದ ಪ್ರಸ್ತಾವನೆಗೆ ಸೆಬಿ ಮಾರ್ಗಸೂಚಿಗಳಿಗೆ ಅನುಗುಣವಾಗಿ ಟ್ರಸ್ಟ್ ಸ್ಥಾಪಿಸಲು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ. ಇದು ಪೂರ್ಣಗೊಂಡ ರಾಷ್ಟ್ರೀಯ ಹೆದ್ದಾರಿಗಳಿಂದ ಹಣಗಳಿಸಲು ಎನ್‌ಎಚ್‌ಎಐಗೆ ಅನುವು ಮಾಡಿಕೊಡುತ್ತದೆ. ಇನ್ವಿಟ್ ಕನಿಷ್ಠ ಒಂದು ವರ್ಷದ ಟೋಲ್ ಸಂಗ್ರಹ ದಾಖಲೆಯನ್ನು ಹೊಂದಿರುತ್ತದೆ ಮತ್ತು ಗುರುತಿಸಲಾದ ಹೆದ್ದಾರಿಯಲ್ಲಿ ಟೋಲ್ ವಿಧಿಸುವ ಹಕ್ಕನ್ನು ಎನ್‌ಎಚ್‌ಎಐ ಹೊಂದಿರುತ್ತದೆ.

ಪರಿಣಾಮ:

ಇನ್ವಿಟ್ ಒಂದು ಸಾಧನವಾಗಿ ಹೂಡಿಕೆದಾರರಿಗೆ ಹೆಚ್ಚಿನ ನಮ್ಯತೆಯನ್ನು ಒದಗಿಸುತ್ತದೆ ಮತ್ತು ಈ ಕೆಳಗಿನ ಅವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ:

·         ವಿಶೇಷ ಒ & ಎಂ ರಿಯಾಯಿತಿಗಳ ಉತ್ಪಾದನೆ.

·         ಭಾರತೀಯ ಹೆದ್ದಾರಿ ಮಾರುಕಟ್ಟೆಗೆ ದೀರ್ಘಾವಧಿ ಬಂಡವಾಳವನ್ನು (ಅಂದರೆ 20-30 ವರ್ಷಗಳು) ಆಕರ್ಷಿಸುವುದು, ಏಕೆಂದರೆ ಈ ಹೂಡಿಕೆದಾರರು ನಿರ್ಮಾಣದ ಅಪಾಯಕ್ಕೆ ಹೆದರದೆ, ದೀರ್ಘಾವಧಿಯ ಸ್ಥಿರ ಆದಾಯವನ್ನು ನೀಡುವ ಸ್ವತ್ತುಗಳಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿರುತ್ತಾರೆ.

·         ಚಿಲ್ಲರೆ ದೇಶೀಯ ಉಳಿತಾಯ ಮತ್ತು ವಿಶೇಷ ಸಂಸ್ಥೆಗಳ ಮೂಲಧನ (ಮ್ಯೂಚುವಲ್ ಫಂಡ್, ಪಿಎಫ್‌ಆರ್‌ಡಿಎ, ಇತ್ಯಾದಿ) ವನ್ನು ಇನ್ವಿಟ್ ಮೂಲಕ ಮೂಲಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆ ಮಾಡಲಾಗುವುದು.

ಹಿನ್ನೆಲೆ:

ರಸ್ತೆಗಳು ಮತ್ತು ಹೆದ್ದಾರಿಗಳು ಆರ್ಥಿಕತೆಯ ಜೀವನಾಡಿಯಾಗಿದ್ದು, ದೂರದ ಪ್ರದೇಶಗಳನ್ನು ಸಂಪರ್ಕಿಸುತ್ತವೆ ಮತ್ತು ಪ್ರಾದೇಶಿಕ ಮತ್ತು ಭಾರತದ ಉದ್ದಗಲಕ್ಕೂ ಸಮರ್ಥ ಸಾರಿಗೆಯನ್ನು ಖಾತ್ರಿಪಡಿಸುತ್ತವೆ. ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಯು ವ್ಯಾಪಾರವನ್ನು ಸುಗಮಗೊಳಿಸುವ ಮತ್ತು ಒಂದು ಪ್ರದೇಶದ ಒಟ್ಟಾರೆ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುವ ದೃಷ್ಟಿಯಿಂದ ಗುಣಾತ್ಮಕ ಪರಿಣಾಮವನ್ನು ಬೀರುತ್ತದೆ.

ಅಕ್ಟೋಬರ್ 2017 ರಲ್ಲಿ ಭಾರತ ಸರ್ಕಾರವು ಭಾರತ್ ಮಾಲಾ ಪರಿಯೋಜನೆಯನ್ನು ಪ್ರಾರಂಭಿಸಿತು. ಇದು ಭಾರತ ಸರ್ಕಾರದ ಪ್ರಮುಖ ಹೆದ್ದಾರಿ ಅಭಿವೃದ್ಧಿ ಕಾರ್ಯಕ್ರಮವಾಗಿದ್ದು, ಒಟ್ಟು  5,35,000 ಕೋ.ರೂ. ಗಳ ಹೂಡಿಕೆಯಿಂದ 24,800 ಕಿ.ಮೀ. ರಸ್ತೆ ಅಭಿವೃದ್ಧಿ ಪಡಿಸಲಿದೆ.

ಭಾರತ್ ಮಾಲಾ ಕಾರ್ಯಕ್ರಮದ ಪ್ರಮಾಣವನ್ನು ಗಮನಿಸಿದರೆ, ಯೋಜನೆಗಳನ್ನು ನಿಗದಿತ ಗಡುವಿನೊಳಗೆ ಪೂರ್ಣಗೊಳಿಸಲು ಎನ್‌ಎಚ್‌ಎಐಗೆ ಸಾಕಷ್ಟು ಹಣ ಬೇಕಾಗುತ್ತದೆ. ಇದರ ಭಾಗವಾಗಿ, ಪೂರ್ಣಗೊಂಡ ಮತ್ತು ಕಾರ್ಯನಿರ್ವಹಿಸುವ ರಾಷ್ಟ್ರೀಯ ಹೆದ್ದಾರಿ ಸ್ವತ್ತುಗಳಿಂದ ಹಣಗಳಿಸುವುದು ಮತ್ತು ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದಲ್ಲಿ ಹೂಡಿಕೆ ಮಾಡಲು ಖಾಸಗಿ ಹೂಡಿಕೆದಾರರಿಗೆ ಆಕರ್ಷಕ ಯೋಜನೆಗಳನ್ನು ನೀಡುವುದು ಕಾರ್ಯಸಾಧ್ಯವಾದ ಆಯ್ಕೆಯಾಗಿದೆ.


(Release ID: 1596166) Visitor Counter : 131