ಪ್ರಧಾನ ಮಂತ್ರಿಯವರ ಕಛೇರಿ
2019ರ ಸೆಪ್ಟೆಂಬರ್ 7ರಂದು ಮುಂಬೈನಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಿದ ಸಂದರ್ಭದಲ್ಲಿ ಪ್ರಧಾನಮಂತ್ರಿ ಮಾಡಿದ ಭಾಷಣದ ಪಠ್ಯ
ಪ್ರಕಟಣಾ ದಿನಾಂಕ:
07 SEP 2019 7:13PM by PIB Bengaluru
2019ರ ಸೆಪ್ಟೆಂಬರ್ 7ರಂದು ಮುಂಬೈನಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಿದ ಸಂದರ್ಭದಲ್ಲಿ ಪ್ರಧಾನಮಂತ್ರಿ ಮಾಡಿದ ಭಾಷಣದ ಪಠ್ಯ
ನನ್ನ ಪ್ರೀತಿಯ ಸಹೋದರ ಸಹೋದರಿಯರೇ,
ಮುಂಬೈನ ಜನತೆಗೆ ನನ್ನ ಶುಭಾಶಯಗಳು !
ಗಣಪತಿ ಬಪ್ಪ ಮೋರಿಯಾ
ಗಣಪತಿ ಬಪ್ಪ ಮೋರಿಯಾ
ನಾನು ಇಲ್ಲಿಗೆ ಆಗಮಿಸುವ ಮುನ್ನ ಲೋಕಮಾನ್ಯ ಸೇವಾ ಸಂಘದಲ್ಲಿ ಗಣಪತಿ ಬಪ್ಪನ ಆಶೀರ್ವಾದ ಪಡೆಯುವ ಅವಕಾಶ ನನಗೆ ಲಭಿಸಿತ್ತು. ಲೋಕಮಾನ್ಯ ಸೇವಾ ಸಂಘ ಆಚರಿಸುತ್ತಿರುವ ಗಣೇಶೋತ್ಸವ ಈ ವರ್ಷ ಶತಮಾನೋತ್ಸವ ಆಚರಿಸುತ್ತಿದೆ. ಲೋಕಮಾನ್ಯ ತಿಲಕರು ಸಮಾಜವನ್ನು ಬಲಪಡಿಸುವ ಉದ್ದೇಶದಿಂದ ಇಂತಹ ಸಂಪ್ರದಾಯವನ್ನು ಪ್ರಚುರಪಡಿಸಿದರು, ಅದು ಇದೀಗ ದೇಶ ಮತ್ತು ಜಗತ್ತಿನಲ್ಲಿ ಅತ್ಯಂತ ಜನಪ್ರಿಯವಾಗಿದೆ.
ನಮ್ಮ ಹೊಸ ರಾಜ್ಯಪಾಲರಾದ ಶ್ರೀ ಕೊಶ್ಯಾರಿ ಜಿ ಅವರು ಇಲ್ಲಿ ಉಪಸ್ಥಿತರಿದ್ದಾರೆ, ಬಹುಶಃ ಕೆಲವೇ ಜನರಿಗೆ ತಿಳಿದಿರಬಹುದು ಅವರು ಒಂದು ಕಾಲದಲ್ಲಿ ಉತ್ತರಾಖಂಡದ ಜನಪ್ರಿಯ ಮುಖ್ಯಮಂತ್ರಿಗಳಾಗಿದ್ದರು ಎಂಬುದನ್ನು. ಅದಕ್ಕಿಂತಲೂ ಮುಖ್ಯವಾಗಿ ನಾನು ಇಲ್ಲಿ ಹೆಮ್ಮೆಯಿಂದ ಉಲ್ಲೇಖಿಸಲು ಬಯಸುವುದೆಂದರೆ ನಾನು ಭಾರತೀಯ ಜನತಾ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದಾಗ, ಉತ್ತರಾಖಂಡದಲ್ಲಿ ನನಗೆ ಕೆಲಸ ವಹಿಸಿದ್ದ ಸಂದರ್ಭದಲ್ಲಿ ನಾನು ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡಿದ್ದೇನೆ.
ಗೆಳೆಯರೇ,
ಮುಂಬೈ ಮತ್ತು ಮಹಾರಾಷ್ಟ್ರ ಜನರ ಸರಳತೆ ಮತ್ತು ಮಮತೆ ಸದಾ ಮೀತಿ ಮೀರಿರುತ್ತದೆ. ಚುನಾವಣಾ ಪ್ರಚಾರದ ವೇಳೆ ನಾನು, ಮಹಾರಾಷ್ಟ್ರದ ಹಲವು ನಗರಗಳಿಗೆ ಭೇಟಿ ನೀಡಿದ್ದೇನೆ ಮತ್ತು ನಿಮ್ಮ ಜೊತೆ ಸಮಾಲೋಚಿಸಿದ್ದೇನೆ. ಮುಂಬೈನಲ್ಲಿ ಆ ರಾತ್ರಿ ನಡೆದ Rally ಹಲವು ದಿನಗಳ ಕಾಲ ಸುದ್ದಿಯಲ್ಲಿತ್ತು. ನಿಮ್ಮ ಪ್ರೀತಿ ಮತ್ತು ಆಶೀರ್ವಾದಕ್ಕೆ ನಾನು ಸದಾ ಕೃತಜ್ಞನಾಗಿರುತ್ತೇನೆ.
ಪ್ರತಿಕೂಲ ಹವಾಮಾನದ ನಡುವೆಯೂ ನೀವು ಬಿಡುವು ಮಾಡಿಕೊಂಡು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಇಲ್ಲಿ ಬಂದಿದ್ದೀರಿ, ಅದು ನಿಮ್ಮ ಮನಸ್ಥಿತಿ ಮತ್ತು ನಿಮ್ಮ ಕನಸುಗಳನ್ನು ಪ್ರತಿಬಿಂಬಿಸುತ್ತದೆ.
ಗೆಳೆಯರೇ,
ನಾನು ರಷ್ಯಾದಲ್ಲಿದ್ದಾಗ ಸತತವಾಗಿ ಮುಂಬೈನ ಪರಿಸ್ಥಿತಿಯ ಬಗ್ಗೆ ನಿಗಾವಹಿಸುತ್ತಿದ್ದೆ ಮತ್ತು ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದೆ, ನಾನು ನಿನ್ನೆ ಬೆಳಗ್ಗೆಯಷ್ಟೇ ರಷ್ಯಾದಿಂದ ಆಗಮಿಸಿದೆ ಮತ್ತು ಸಂಜೆ ಬೆಂಗಳೂರಿಗೆ ತೆರಳಿದ್ದೆ, ಇಡೀ ರಾತ್ರಿ ನಾನು ಇಸ್ರೋ ವಿಜ್ಞಾನಿಗಳೊಂದಿಗೆ ಇದ್ದೆ, ಅವರ ಧೈರ್ಯ ನನ್ನನ್ನು ಸಾಕಷ್ಟು ಪ್ರಭಾವಗೊಳಿಸಿತು. ನಮ್ಮ ಇಸ್ರೋ ವಿಜ್ಞಾನಿಗಳು ಮತ್ತು ಇಂಜಿನಿಯರ್ ಗಳು ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ಅವರು ಹೇಗೆ ಹಗಲು ರಾತ್ರಿ ತಮ್ಮ ಗುರಿಯನ್ನು ಸಾಧಿಸಲು ತಾಳ್ಮೆಯಿಂದ ಕಳೆಯುತ್ತಾರೆ ಎಂಬುದನ್ನು ನೋಡಿ ನಾವು ಕಲಿತುಕೊಳ್ಳಬೇಕಿದೆ.
ಸಹೋದರ ಸಹೋದರಿಯರೇ,
ನಮ್ಮ ಪುರಾಣ ಶಾಸ್ತ್ರಗಳಲ್ಲಿ ಜ್ಞಾನದ ಸಂಪತ್ತು ಅಡಗಿದೆ, ಭಾರ್ತ್ರಿಹರಿ ಹೀಗೆ ಹೇಳುತ್ತಾರೆ.
प्रारभ्यते न खलु विघ्नभयेन नीचैः ,
प्रारभ्य विघ्नविहिता विरमन्ति मध्याः ।
विघ्नै: पुनः पुनरपि प्रतिहन्यमानाः ,
प्रारभ्य च उत्तमजनाः न परित्यजन्ति ।।
ಅದರರ್ಥ ಮೂರು ಬಗೆಯ ಜನರು ಯಾವುದೇ ಗುರಿಗಳನ್ನು ಸಾಧಿಸಲು ಪ್ರಯತ್ನಿಸುತ್ತಾರೆ, ಕೆಳಗಿನ ಹಂತದಲ್ಲಿ ಇರುವ ಆ ವರ್ಗದ ಜನ ಅಡತಡೆಗಳ ಭಯದಿಂದ ಕೆಲಸವನ್ನು ಆರಂಭಿಸುವುದೇ ಇಲ್ಲ. ಮತ್ತೆ ಮಧ್ಯವರ್ಗದ ಜನರು ಕೆಲಸವನ್ನು ಆರಂಭಿಸಿರುತ್ತರಾದರೂ ಮೊದಲ ಅಡೆತಡೆ ಎದುರಾದಾಗಲೇ ಅವರು ಫಲಾಯನಗೈಯುತ್ತಾರೆ. ಇವೆರಡು ಅಲ್ಲದೆ, ಉನ್ನತ ಮಟ್ಟ ತಲುಪುವ ಇನ್ನೂ ಕೆಲವು ಜನರು ಇರುತ್ತಾರೆ, ಅವರು ಯಾವುದೇ ಅಡೆತಡೆಗಳು ಮತ್ತು ಸವಾಲುಗಳು ಎದುರಾದರೂ ಅವಿರತವಾಗಿ ತಮ್ಮ ಗುರಿ ಸಾಧನೆವರೆಗೆ ಅವರು ನಿಲ್ಲದೆ ಶ್ರಮವಹಿಸುತ್ತಾರೆ.
ಗೆಳೆಯರೇ,
ಇಸ್ರೋ ಮತ್ತು ಅದರಲ್ಲಿ ಕೆಲಸ ಮಾಡುವ ಜನರು ಈ ಮೂರನೇ ವರ್ಗಕ್ಕೆ ಸೇರಿದವರು, ಗುರಿ ಮುಟ್ಟುವವರೆಗೆ ಅವರು ನಿಲ್ಲುವುದಿಲ್ಲ ಮತ್ತು ಅವರು ಆಯಾಸಗೊಳ್ಳುವುದಿಲ್ಲ ಅಥವಾ ಸುಮ್ಮನೆ ಕೂರುವುದಿಲ್ಲ. ನಾವು ಇಂದು ಇದೀಗ ಚಂದ್ರಯಾನ ಯಾತ್ರೆಯಲ್ಲಿ ಅಡೆತಡೆಗಳನ್ನು ಎದುರಿಸಿದ್ದೇವೆ, ಆದರೆ ಇಸ್ರೋ ವಿಜ್ಞಾನಿಗಳು ತಮ್ಮ ಯೋಜನೆ ಪೂರ್ಣಗೊಳ್ಳುವವರೆಗೆ ಅವರು ತಮ್ಮ ಕೆಲಸ ನಿಲ್ಲಿಸುವುದಿಲ್ಲ. ಚಂದ್ರನನ್ನು ತಲುಪುವ ಕನಸು ಈಡೇರಲಿದೆ.
ಗೆಳೆಯರೇ,
ಚಂದ್ರಯಾನದ ಜೊತೆಗೆ ನಾವು ಕಳುಹಿಸಿರುವ ಆರ್ಬಿಟರ್ ಇನ್ನೂ ಅಲ್ಲೇ ಇದೆ ಮತ್ತು ಚಂದ್ರನ ಸುತ್ತ ಸುತ್ತುತ್ತಿದೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು ಮತ್ತು ಇದು ಐತಿಹಾಸಿಕ ಸಾಧನೆಯಾಗಿದೆ. ನಾನು ಮುಂಬೈನ ಜನರ ಸ್ಫೂರ್ತಿಯ ಬಗ್ಗೆ ಸಾಕಷ್ಟು ಕೇಳಿದ್ದೇನೆ ಮತ್ತು ನೋಡಿದ್ದೇನೆ, ಇಂದು ನಾನು ಇಸ್ರೋದ ಜನರ ಸ್ಫೂರ್ತಿಯನ್ನು ಕಂಡಿದ್ದೇನೆ. ನನಗೆ ಆ ಸಂಗತಿಯನ್ನು ನಿಮ್ಮ ಜೊತೆ ಹಂಚಿಕೊಳ್ಳುವುದು ಅಗತ್ಯ ಎಂದು ಬಯಸಿದ್ದೇನೆ.
ಸಹೋದರ ಮತ್ತು ಸಹೋದರಿಯರೇ,
ಗಣೇಶೋತ್ಸವದ ಸ್ಫೂರ್ತಿಯ ಈ ಸಂದರ್ಭದಲ್ಲಿ ನಿರಂತರ ಪ್ರಯತ್ನಗಳ ಮೂಲಕ ನಿರ್ಣಯಗಳು ಕೈಗೂಡುತ್ತಿರುವ ಇಂತಹ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿಂದು ಸಹಸ್ರಾರು ಕೋಟಿ ರೂಪಾಯಿ ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಲಾಗಿದೆ. ಮುಂಬೈ ನಂತರ ನಾನು ಔರಂಗಾಬಾದ್ ಗೂ ಭೇಟಿ ನೀಡುವ ಯೋಜನೆಯಿದೆ. ಅಲ್ಲೂ ಸಹ ಹಲವು ಯೋಜನೆಗಳನ್ನು ಉದ್ಘಾಟಿಸಲಾಗುವುದು. ಮುಂಬೈ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರಿಗೆ ನಾನು ಶುಭಾಶಯಗಳನ್ನು ತಿಳಿಸಲು ಬಯಸುತ್ತೇನೆ. ಇಂದು ಸುಮಾರು 20 ಸಾವಿರ ಕೋಟಿ ರೂ.ಗೂ ಅಧಿಕ ಮೌಲ್ಯದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಅದು ಹೊಸ ಮೆಟ್ರೋ ಮಾರ್ಗವಾಗಿರಬಹುದು, ಮೆಟ್ರೋ ಕಟ್ಟಡವಾಗಿರಬಹುದು, ಮೆಟ್ರೋ ನಿಲ್ದಾಣ ಸೌಕರ್ಯಗಳ ವಿಸ್ತರಣೆಯಾಗಿರಬಹುದು, ಬಾಂದ್ರ – ಕುರ್ಲಾ ಕಾಂಪ್ಲೆಕ್ಸ್ ಸಂಪರ್ಕ ಕಲ್ಪಿಸುವ ಈಸ್ಟರ್ನ್ ಎಕ್ಸ್ ಪ್ರೆಸ್ ಹೈವೆ ಯೋಜನೆಯಾಗಿರಬಹುದು, ಇವೆಲ್ಲಾ ಯೋಜನೆಯಗಳು ಮುಂಬೈನ ಮೂಲಸೌಕರ್ಯಕ್ಕೆ ಹೊಸ ಆಯಾಮ ನೀಡುವುದಷ್ಟೇ ಅಲ್ಲದೆ, ಇಲ್ಲಿನ ಜನರ ಜೀವನ ಸುಲಭಗೊಳಿಸಲು ನೆರವಾಗುತ್ತದೆ. ಬಾಂದ್ರ – ಕುರ್ಲಾ ನಡುವೆ ಸಂಪರ್ಕ ಕಲ್ಪಿಸುವ ಎಕ್ಸ್ ಪ್ರೆಸ್ ಹೆದ್ದಾರಿ ಯೋಜನೆಯು ಲಕ್ಷಾಂತರ ವೃತ್ತಿಪರರಿಗೆ ಭಾರೀ ನಿರಾಳವನ್ನು ತಂದೊದಗಿಸಲಿದೆ. ಬಿಕೆಸಿ ವ್ಯಾಪಾರ ಚಟುವಟಿಕೆಗಳ ಅತಿದೊಡ್ಡ ಕೇಂದ್ರವಾಗಿದೆ. ಇಲ್ಲಿಗೆ ಕಡಿಮೆ ಅವಧಿಯಲ್ಲಿ ಬಂದು ಹೋಗುವಂತಾಗಬೇಕು, ಇದೀಗ ಮುಂಬೈಅನ್ನು ಕೆಲವೇ ನಿಮಿಷಗಳಲ್ಲಿ ತಲುಪಬಹುದು. ಪ್ರತಿಯೊಬ್ಬರೂ ‘ಮುಂಬೈ ಇನ್ ಮಿನಿಟ್ಸ್’ ಗೆ ಬೇಡಿಕೆ ಇಡುತ್ತಿದ್ದಾರೆ. ಈ ಎಲ್ಲ ಯೋಜನೆಗಳಿಗಾಗಿ ನಾನು ಪ್ರತಿಯೊಬ್ಬ ಮುಂಬೈ ವಾಸಿಗಳಿಗೆ ಹಾಗೂ ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ.
ಗೆಳೆಯರೇ,
ಮುಂಬೈ ನಗರ ಅತ್ಯಂತ ಕ್ರಿಯಾಶೀಲವಾಗಿದ್ದು, ಅದು ಇಡೀ ದೇಶಕ್ಕೆ ವೇಗ ತಂದುಕೊಟ್ಟಿದೆ. ಇಲ್ಲಿ ಕಠಿಣ ಶ್ರಮಪಡುವವರು, ವೃತ್ತಿಪರರೂ ಇದ್ದಾರೆ, ತಾಯಂದಿರು, ಸಹೋದರರು, ಯುವಕರು ಇದ್ದಾರೆ ಮತ್ತು ಎಲ್ಲರೂ ಈ ನಗರವನ್ನು ಪ್ರೀತಿಸುತ್ತೀರಿ ಮತ್ತು ಅತ್ಯಂತ ಹೆಮ್ಮೆಯಿಂದ ‘ನಾನೂ ಮುಂಬೈವಾಸಿ’ ಎಂದು ಹೇಳುತ್ತೀರಿ. ಕಳೆದ ಐದು ವರ್ಷಗಳಿಂದೀಚೆಗೆ ಆಮ್ಚಿ ಮುಂಬೈನ ಮೂಲಸೌಕರ್ಯ ಸುಧಾರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇವೆ, ಮುಂಬೈ ಮತ್ತು ಮಹಾರಾಷ್ಟ್ರದ ಪ್ರತಿಯೊಂದು ಯೋಜನೆಗಳಿಗೂ ಫಡ್ನವೀಸ್ ಸರ್ಕಾರ ಎಷ್ಟು ಕಠಿಣ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂಬುದನ್ನು ನಾನು ಬಲ್ಲೆ. ಇಂದು ಆ ಪ್ರಯತ್ನಗಳ ಪರಿಣಾಮದ ಫಲವಾಗಿ ಮುಂಬೈನಲ್ಲಿ ಕ್ರಮೇಣ ನಾವು ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಇಂದು ನಡೆಯುತ್ತಿರುವ ಕೆಲಸ ಕಾರ್ಯಗಳನ್ನು ಸಕಾರಾತ್ಮಕ ರೀತಿಯಲ್ಲಿ ನಾನು ನೋಡುತ್ತಿದ್ದೇನೆ. ಇಂದಿನ ಪ್ರಸಕ್ತ ಸ್ಥಿತಿಗತಿಗಳ ಅಗತ್ಯಕ್ಕೆ ಅನುಗುಣವಾಗಿ ಮತ್ತು ಮುಂದಿನ ದಶಕಗಳ ಅಗತ್ಯಗಳನ್ನು ಗಮನದಲ್ಲಿರಿಸಿಕೊಂಡು ಯೋಜನೆಗಳನ್ನು ರೂಪಿಸಲಾಗುತ್ತಿದೆ.
ಸಹೋದರ ಮತ್ತು ಸಹೋದರಿಯರೇ,
ಇಂದು ದೇಶ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿಯತ್ತ ಸಾಗುತ್ತಿದೆ, 21ನೇ ಶತಮಾನಕ್ಕೆ ಅನುಗುಣವಾಗಿ ನಾವು ನಮ್ಮ ನಗರಗಳನ್ನು ಆಧುನೀಕರಣಗೊಳಿಸಬೇಕಿದೆ, ಅದು ಸಂಚಾರದಲ್ಲಿ ಆಗಿರಬಹುದು, ಸಂಪರ್ಕ, ಉತ್ಪಾದನೆ, ಸುಸ್ಥಿರತೆ ಅಥವಾ ಸುರಕ್ಷತೆ ಸೇರಿ ಪ್ರತಿಯೊಂದು ವಿಭಾಗದಲ್ಲೂ ಉತ್ತಮ ವ್ಯವಸ್ಥೆಗಳನ್ನು ಸಿದ್ಧಪಡಿಸಬೇಕು, ಅದೇ ಆಲೋಚನೆಯಲ್ಲಿ ನಮ್ಮ ಸರ್ಕಾರ ಮುಂದಿನ ಐದು ವರ್ಷಗಳ ಕಾಲ ಆಧುನಿಕ ಮೂಲಸೌಕರ್ಯಕ್ಕಾಗಿ ನೂರು ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಿದೆ. ಮುಂಬೈ ಮಾತ್ರವಲ್ಲದೆ, ಮಹಾರಾಷ್ಟ್ರದ ಎಲ್ಲ ನಗರಗಳಿಗೂ ಈ ವೆಚ್ಚದಿಂದ ಪ್ರಯೋಜನವಾಗಲಿದೆ.
ಗೆಳೆಯರೇ,
ದೇಶಾದ್ಯಂತ ಎಲ್ಲ ನಗರಗಳಲ್ಲಿ ಸಂಚಾರ ಮತ್ತು ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಲು ಏಕೀಕೃತ ವ್ಯವಸ್ಥೆಗೆ ನಾವು ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ರೈಲು, ರಸ್ತೆ ಮತ್ತು ಮೆಟ್ರೋ ಸೇರಿದಂತೆ ಎಲ್ಲ ಬಗೆಯ ಸಾರಿಗೆಯನ್ನು ಒಂದರ ಜೊತೆ ಒಂದು ಬೆಸೆಯಲಾಗುತ್ತಿದೆ. ಮುಂಬೈ ಮೆಟ್ರೋ ಪಾಲಿಟನ್ ಪ್ರದೇಶದಲ್ಲಿ ಉತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆ ರೂಪಿಸುವ ಕುರಿತ ಮುನ್ನೋಟವನ್ನು ಇಂದು ಬಿಡುಗಡೆ ಮಾಡಲಾಯಿತು. ಇಲ್ಲಿ ನಾನಾ ಬಗೆಯ ಸಾರಿಗೆ ಪದ್ಧತಿಗಳಿವೆ. ಮುಂಬೈ ಲೋಕಲ್, ಬಸ್ ವ್ಯವಸ್ಥೆ ಮತ್ತು ಮೆಟ್ರೋ ಅದರಲ್ಲಿ ಯಾವುದನ್ನು ಹೇಗೆ ಬಳಸಬೇಕು ಎಂಬುದರ ವಿವರವನ್ನು ನೀಡಲಾಗಿದೆ. ವಿಶೇಷವಾಗಿ ಮುಂಬೈ ಮೆಟ್ರೋಗೆ ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆ.
ಸಹೋದರ ಮತ್ತು ಸಹೋದರಿಯರೇ,
ಕಳೆದ ಐದು ವರ್ಷಗಳಿಂದೀಚೆಗೆ ಮುಂಬೈ ಮೆಟ್ರೋ ವಿಸ್ತರಣೆ ಕಾರ್ಯದ ಜೊತೆಗೆ ಸಂಪರ್ಕ ಹೊಂದುವ ನಿರಂತರ ಅವಕಾಶ ನನಗೆ ದೊರಕುತ್ತಿದೆ. ಇಲ್ಲಿ ಮೆಟ್ರೋ ಸಂಪರ್ಕ ಜಾಲವನ್ನು 1.5 ಲಕ್ಷ ಕೋಟಿ ರೂ. ವೆಚ್ಚದೊಂದಿಗೆ ವಿಸ್ತರಿಸಲಾಗುತ್ತಿದೆ. ಪ್ರಸ್ತುತ ಮುಂಬೈ ಮೆಟ್ರೋ ನೆಟ್ ವರ್ಕ್ ಕೇವಲ 11 ಕಿ.ಮೀ. ಇದ್ದು, 2020, 2023 ಮತ್ತು 2024 ವೇಳೆಗೆ ಅದನ್ನು 325 ಕಿ.ಮೀಗೂ ಅಧಿಕಗೊಳಿಸುವ ಗುರಿ ಇದೆ. ಇದರ ಅತಿದೊಡ್ಡ ಲಾಭ ಎಂದರೆ ಪ್ರಸ್ತುತ ಮುಂಬೈನ ಸ್ಥಳೀಯ ರೈಲುಗಳಲ್ಲಿ ಎಷ್ಟು ಜನ ಪ್ರತಿ ದಿನ ಸಂಚರಿಸುತ್ತಾರೋ, ಮೆಟ್ರೋ ಕೂಡ ಅಷ್ಟೇ ಸಂಖ್ಯೆಯ ಜನರಿಗೆ ಸೇವೆಯನ್ನು ಒದಗಿಸಲಿದೆ. ಸ್ಥಳೀಯ ರೈಲುಗಳ ಆಧುನೀಕರಣದ ಜೊತೆ, ಈ ಮೆಟ್ರೋ ವಿಸ್ತರಣೆ ಕಾರ್ಯದಿಂದ ಮುಂಬೈನ ಪ್ರಸ್ತುತ ಅಗತ್ಯತೆಗಳನ್ನು ಪೂರೈಸುವುದರ ಜೊತೆಗೆ ಮುಂಬರುವ ವರ್ಷಗಳಲ್ಲಿನ ಸಂಚಾರ ದಟ್ಟಣೆ ನಿವರಾಣೆಗೂ ಸಜ್ಜುಗೊಳಿಸಲಿದೆ.
ಗೆಳೆಯರೇ,
ನಾವು ಕೇವಲ ಮೆಟ್ರೋ ಮಾರ್ಗಗಳಿಗೆ ಶಂಕುಸ್ಥಾಪನೆ ನೆರವೇರಿಸುತ್ತಿಲ್ಲ, ಆ ಮಾರ್ಗಗಳಲ್ಲಿ ಭಾರತದಲ್ಲೇ ತಯಾರಾದ ಮೆಟ್ರೋ ರೈಲು ಬೋಗಿಗಳ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು. ಈಗ್ಗೆ ಕೆಲವು ಕ್ಷಣಗಳ ಹಿಂದೆ ನಾನು ಬೋಗಿಯ ಮಾದರಿಯನ್ನು ವೀಕ್ಷಿಸಿದೆ. ಮೇಕ್ ಇನ್ ಇಂಡಿಯಾ ಯೋಜನೆಯಡಿ ತಯಾರಾಗುತ್ತಿರುವ ಈ ಆಧುನಿಕ ಮೆಟ್ರೋ ಬೋಗಿಗಳು ಮುಂಬೈ ಮೆಟ್ರೋವನ್ನು ಸುರಕ್ಷಿತ, ಸುಗಮ ಮತ್ತು ಆರ್ಥಿಕ ರೀತಿಯಲ್ಲೂ ಸಹಾಯಕವಾಗಲಿದೆ.
ಸಹೋದರ ಮತ್ತು ಸಹೋದರಿಯರೇ,
ಮೂಲಸೌಕರ್ಯ ಉದ್ಯೋಗಕ್ಕೆ ಸಮಾನವಾಗಿ ಸಂಬಂಧಿಸಿದ್ದಾಗ್ಯೂ ಮತ್ತು ಅದು ಆರ್ಥಿಕತೆ ಮತ್ತು ಜೀವನ ಸುಗಮಗೊಳಿಸುವುದರ ಜೊತೆ ಬೆಸೆದುಕೊಂಡಿದೆ. ಮೂಲಸೌಕರ್ಯದಲ್ಲಿ ಬಂಡವಾಳ ಹೂಡುವುದು ಎಂಬುದರ ಅರ್ಥ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಎಂದು. ಮುಂಬೈನಲ್ಲಿ ಮೆಟ್ರೋ ಸಂಬಂಧಿತ ಕಾಮಗಾರಿಗಳೊಂದರಿಂದಲೇ ಹತ್ತು ಸಾವಿರ ಇಂಜಿನಿಯರ್ಗ ಳಿಗೆ ಮತ್ತು 40 ಸಾವಿರ ಕೌಶಲ್ಯ ಹೊಂದಿದ ಹಾಗೂ ಕೌಶಲ್ಯ ಹೊಂದಿಲ್ಲದ ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸಿದೆ.
ಸಹೋದರ ಮತ್ತು ಸಹೋದರಿಯರೇ,
ಗ್ರಾಮಗಳಲ್ಲಿ ಮತ್ತು ನಗರಗಳಲ್ಲಿ ಕೈಗೊಳ್ಳುವ ಮೂಲಸೌಕರ್ಯ ಕಾಮಗಾರಿಗಳಿಂದಾಗಿ ಸ್ಥಳೀಯ ಮಟ್ಟದಲ್ಲಿ ಉದ್ಯೋಗಸೃಷ್ಟಿ ಮಾತ್ರವಲ್ಲದೆ, ಸಣ್ಣ ವ್ಯಾಪಾರಿಗಳಿಗೆ ವಾಣಿಜ್ಯ ಅವಕಾಶಗಳನ್ನೂ ಸೃಷ್ಟಿಸುತ್ತದೆ. ಆದರೆ ಆ ಬಗ್ಗೆ ಜನರು ಹೆಚ್ಚು ಮಾತನಾಡುವುದಿಲ್ಲ, ಇದಕ್ಕೆ ಕಾರಣ ಬಹುಶಃ ಹಿಂದೆಂದೂ ಆಗದ ರೀತಿಯಲ್ಲಿ ಇಂದು ಅತ್ಯಂತ ವೇಗದಲ್ಲಿ ಕಾಮಗಾರಿಗಳು ನಡೆಯುತ್ತಿರುವುದು ಕಾರಣವಿರಬಹುದು. ಆದ್ದರಿಂದಾಗಿ ಸಹಜವಾಗಿಯೇ ಜನರಿಗೆ ಆ ಬಗ್ಗೆ ಗಮನವಿಲ್ಲದೇ ಇರಬಹುದು. ಇದೀಗ ಪರಿಸ್ಥಿತಿ ಬದಲಾಗುತ್ತಿದೆ. ಆ ವಿಷಯ ಕೂಡ ಚರ್ಚೆಯ ಭಾಗವಾಗುತ್ತಿರುವುದು ಇತ್ತೀಚೆಗೆ ಆರಂಭವಾಗಿದೆ. ಸುಮ್ಮನೆ ಊಹಿಸಿಕೊಳ್ಳಿ ಹಲವು ವರ್ಷಗಳ ಕಾಲ ಸ್ಥಗಿತಗೊಂಡಿದ್ದ ನವ ಮುಂಬೈ ವಿಮಾನ ನಿಲ್ದಾಣದ ಕಾಮಗಾರಿ ಅಥವಾ ಮುಂಬೈ ಟ್ರಾನ್ಸ್ ಆರ್ಬರ್ ಲಿಂಕ್ ಕಾಮಗಾರಿ ಅಥವಾ ಮುಂಬೈ – ಅಹಮದಾಬಾದ್ ಬುಲೆಟ್ ರೈಲು ಕಾಮಗಾರಿಗಳು ಅಷ್ಟು ದೊಡ್ಡ ಪ್ರಮಾಣದಲ್ಲಿ ಮತ್ತು ಅಷ್ಟು ವೇಗದಲ್ಲಿ ಯೋಜನೆಗಳು ಆರಂಭವಾಗುತ್ತವೆ ಎಂಬುದು. ಈ ಎಲ್ಲ ಯೋಜನೆಗಳು ಮುಂಬೈ ಮತ್ತು ಅದರ ಸುತ್ತಮುತ್ತಲಿನ ಜನರಿಗೆ ಹೊಸ ಉದ್ಯೋಗಾವಕಾಶಗಳನ್ನು ಒದಗಿಸುತ್ತಿದೆ.
ಸಹೋದರ ಮತ್ತು ಸಹೋದರಿಯರೇ,
ನಾನು ವೇಗ ಮತ್ತು ಆ ಪ್ರಮಾಣದ ಬಗ್ಗೆ ಮಾತನಾಡುವಾಗ ಹಲವು ಉದಾಹರಣೆಗಳನ್ನು ನೀಡಬಹುದು. ಅವುಗಳನ್ನು ಉದಾಹರಿಸಲು ಹೋದರೆ ಸಂಜೆಯಾಗುತ್ತದೆ. ಇಂದು ಮೆಟ್ರೋ ಯೋಜನೆಗಳ ಹಲವು ಕಾಮಗಾರಿಗಳು ಆರಂಭವಾಗಿದೆ. ಹಾಗಾಗಿ ನಾನು ಅದರ ಒಂದು ಉದಾಹರಣೆಯನ್ನೇ ನೀಡಲು ಬಯಸುತ್ತೇನೆ.
ಗೆಳೆಯರೇ,
ನಮ್ಮ ದೇಶದಲ್ಲಿ ಮೊದಲ ಮೆಟ್ರೋ ಆರಂಭವಾಗಿದ್ದು, 30-35 ವರ್ಷಗಳ ಹಿಂದೆ ಆನಂತರ 2014ರಲ್ಲಿ ಕೆಲವು ದೊಡ್ಡ ನಗರಗಳಲ್ಲಿ ಮಾತ್ರ ಮೆಟ್ರೋ ಆರಂಭವಾಯಿತು. ಇಂದು ದೇಶದ 27 ನಗರಗಳಲ್ಲಿ ಮೆಟ್ರೋ ಆರಂಭವಾಗಿದೆ ಅಥವಾ ಮುಂದಿನ ಕೆಲವೇ ತಿಂಗಳಲ್ಲಿ ಆರಂಭವಾಗಲಿವೆ. ಇಂದು ದೇಶಾದ್ಯಂತ 675 ಕಿಲೋ ಮೀಟರ್ ಮೆಟ್ರೋ ಮಾರ್ಗ ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಕಳೆದ ಐದು ವರ್ಷಗಳಿಂದೀಚೆಗೆ 400 ಕಿ.ಮೀ. ಮೆಟ್ರೋ ಸಂಚಾರ ಸೇವೆ ಆರಂಭವಾಗಿದೆ. ಸುಮ್ಮನೆ ಊಹಿಸಿಕೊಳ್ಳಿ, ಕಳೆದ ಐದು ವರ್ಷಗಳಿಂದೀಚೆಗೆ ಅರ್ಧಕ್ಕೂ ಅಧಿಕ ಮೆಟ್ರೋ ಯೋಜನೆಗಳ ಸಂಪರ್ಕ ಸಾಧ್ಯವಾಗಿದೆ. ಪ್ರಸ್ತುತ 850 ಕಿ.ಮೀ.ಗೂ ಅಧಿಕ ಮೆಟ್ರೋ ರೈಲು ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ.
ಸಹೋದರ ಮತ್ತು ಸಹೋದರಿಯರೇ,
ಕಳೆದ ಐದುವರ್ಷಗಳಿಂದೀಚೆಗೆ ಸುಮಾರು 600 ಕಿ.ಮೀ.ಗೂ ಅಧಿಕ ಹೊಸ ಮೆಟ್ರೋ ರೈಲು ಮಾರ್ಗಕ್ಕೆ ಅನುಮೋದನೆ ನೀಡಲಾಗಿದೆ. ಅದು ಮುಂಬೈನಲ್ಲಿರಬಹುದು, ಪುಣೆ ಅಥವಾ ನಾಗ್ಪುರದಲ್ಲಿರಬಹುದು. ಈ ಅವಧಿಯಲ್ಲಿ ಆರಂಭವಾದ ಮೆಟ್ರೋ ಯೋಜನೆಗಳು ಅತ್ಯಂತ ತ್ವರಿತಗತಿಯಲ್ಲಿ ಸಾಗಿರುವುದಕ್ಕಾಗಿ ನಾನು ಫಡ್ನವೀಸ್ ಜಿ ಅವರನ್ನು ಅಭಿನಂದಿಸುತ್ತೇನೆ.
ಸಹೋದರ ಮತ್ತು ಸಹೋದರಿಯರೇ,
ದೇಶದ ಅಭಿವೃದ್ಧಿಯನ್ನು ಅತ್ಯಂತ ತ್ವರಿತಗತಿಯಲ್ಲಿ ಕೊಂಡೊಯ್ಯಲು 21ನೇ ಶತಮಾನದಲ್ಲಿ ಆಧುನಿಕ ಮೂಲಸೌಕರ್ಯ ಕಲ್ಪಿಸುವುದು ದೇಶಕ್ಕೆ ಅತ್ಯಂತ ಅವಶ್ಯಕತೆ ಇದೆ. ಇಂದು ದೇಶದ ಮೂಲಸೌಕರ್ಯವನ್ನು ಸಮಗ್ರ ರೀತಿಯಲ್ಲಿ ಅಭಿವೃದ್ಧಿಗೊಳಿಸುವ ಕೆಲಸ ಸಾಗಿದೆ. ನಾವು ಎಲ್ಲೂ ಮೂಲೆಗುಂಪಾಗದೆ ‘ಏಕ ಭಾರತ ಶ್ರೇಷ್ಠ ಭಾರತ’ ದೂರದೃಷ್ಟಿಯೊಂದಿಗೆ ಮುನ್ನಡೆಯುತ್ತಿದ್ದೇವೆ. ಅಂತೆಯೇ ‘ಒಂದು ದೇಶ – ಒಂದು ಪವರ್ ಗ್ರಿಡ್’ನಿಂದ ‘ಒಂದು ದೇಶ-ಒಂದು ಸಂಚಾರ ಕಾರ್ಡ್’, ‘ಒಂದು ರಾಷ್ಟ್ರ- ಒಂದು ತೆರಿಗೆ’ಯಿಂದ ‘ಒಂದು ರಾಷ್ಟ್ರ- ಒಂದು ಆಪ್ಟಿಕಲ್ ಫೈಬರ್ ಸಂಪರ್ಕ ಜಾಲ’ದ ಮೂಲಕ ದೇಶಾದ್ಯಂತ ಆಧುನಿಕ ಮೂಲಸೌಕರ್ಯವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ.
ಸಹೋದರ ಮತ್ತು ಸಹೋದರಿಯರೇ,
ನಾವು ಇಷ್ಟೊಂದು ವರ್ಷಗಳ ಕಾಲ ಎದುರಿಸಿದ ಸಮಸ್ಯೆಗಳು ನಮ್ಮ ಮಕ್ಕಳು ಮತ್ತು ನಮ್ಮ ಮುಂದಿನ ಜನಾಂಗ ಎದುರಿಸದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ. ನಾವು ಸಮಸ್ಯೆಗಳನ್ನು ನಮ್ಮ ಮಕ್ಕಳಿಗೆ ಬಿಟ್ಟು ಹೋಗುವುದು ಬೇಡ. ಪ್ರತಿಯೊಬ್ಬ ವ್ಯಕ್ತಿಯ ಜೀವನಮಟ್ಟ ಸುಧಾರಣೆಯಾದರೆ, ದೇಶದ ಸ್ಥಿತಿಗತಿಯೂ ಸುಧಾರಣೆ ಆಗುತ್ತದೆ. ಹಿಂದಿನ ಮತ್ತು ಸದ್ಯದ ಕನಸುಗಳನ್ನು ನನಸು ಮಾಡುವುದು ಭವಿಷ್ಯಕ್ಕಾಗಿ ಸಜ್ಜುಗೊಳಿಸುವ ಕೆಲಸ ಆಗಬೇಕಿದೆ. ಇಂದು ಭವಿಷ್ಯಕ್ಕಾಗಿ ನಮ್ಮ ದೇಶವನ್ನು ಸಜ್ಜುಗೊಳಿಸಿದರೆ ಮಾತ್ರ ನಾಳೆ ನಿಮ್ಮ ಮಕ್ಕಳು ಸಂತೋಷಕರ ಜೀವನ ನಡೆಸಲು ಸಾಧ್ಯ.
ನಮ್ಮ ಹೊಸ ಸರ್ಕಾರ ರಚನೆಯಾದ ನಂತರ ನಿಮ್ಮಗಳ ಆಶೀರ್ವಾದದಿಂದ ಭಾರತದ ಭವಿಷ್ಯವನ್ನು ಸದೃಢ ಮತ್ತು ಸುರಕ್ಷಗೊಳಿಸುವ ನಿಟ್ಟಿನಲ್ಲಿ ಹಲವು ನಿರ್ಧಾರಗಳನ್ನು ಕೈಗೊಂಡಿದೆ.
ಗೆಳೆಯರೇ,
ದೇಶದ ಜನರು ನೀಡಿರುವ ಜನಾದೇಶವನ್ನು ಗೌರವಿಸುತ್ತಾ ಸೂಕ್ತ ದಿಕ್ಕಿನಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಈ ಸರ್ಕಾರ ನೂರು ದಿನಗಳನ್ನು ಪೂರೈಸುತ್ತಿದೆ. ಈ ನೂರು ದಿನಗಳಲ್ಲಿ ಕೈಗೊಂಡಿರುವ ಕೆಲಸ ಕಾರ್ಯಗಳು ಅನಿರೀಕ್ಷಿತ ಮತ್ತು ಐತಿಹಾಸಿಕವಾಗಿದೆ. ಅದು ಜಲಜೀವನ್ ಮಿಷನ್ ಆರಂಭಿಸಿದ್ದಾಗಿರಬಹುದು ಅಥವಾ ದೇಶದ ಪ್ರತಿಯೊಬ್ಬ ರೈತನನ್ನು ಕಿಸಾನ್ ಸಮ್ಮಾನ್ ನಿಧಿ ವ್ಯಾಪ್ತಿಗೆ ತಂದಿದ್ದಾಗಿರಬಹುದು, ನಮ್ಮ ಮುಸ್ಲಿಂ ಸಹೋದರಿಯರು ಮತ್ತು ಅವರ ಹೆಣ್ಣು ಮಕ್ಕಳನ್ನು ತ್ರಿವಳಿ ತಲಾಖ್ ಸಂಕಷ್ಟದ ಕಾನೂನಿನಿಂದ ಮುಕ್ತಗೊಳಿಸಿದ್ದಾಗಿರಬಹುದು ಅಥವಾ ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಕಾನೂನುಗಳನ್ನು ಜಾರಿಗೊಳಿಸಿದ್ದಾಗಿರಬಹುದು… ಹೀಗೆ ಪ್ರತಿ ವಲಯದಲ್ಲೂ ಅತ್ಯಂತ ವೇಗವಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ.
ಸರ್ಕಾರದ ಈ ನಿರ್ಧಾರಗಳು ಮತ್ತು ಕೆಲಸ ಕಾರ್ಯಗಳನ್ನು ಬಿಟ್ಟು ಹೇಳುವುದಾದರೆ ನಾನು ಮತ್ತೊಂದು ನಿರ್ಣಯವನ್ನು ಕೈಗೊಂಡಿದ್ದೇನೆ, ಈ ನಿರ್ಣಯ ಜನರಲ್ಲಿ ಅವರ ಜವಾಬ್ದಾರಿಯ ಬಗ್ಗೆ ಹೆಚ್ಚು ಹೆಚ್ಚು ಸಂದರ್ಭಗಳಲ್ಲಿ ಜಾಗೃತಿ ಮೂಡಿಸುವುದು ಅದೆಂದರೆ ‘ಒಂದು ಭಾರತ – ಒಂದು ನಿರ್ಣಯ’. ಲೋಕಮಾನ್ಯ ತಿಲಕ್ ಜಿ ಹೀಗೆ ಹೇಳಿದ್ದರು ‘ಸ್ವರಾಜ್ಯ ನನ್ನ ಆಜನ್ಮ ಸಿದ್ಧ ಹಕ್ಕು’ 75ನೇ ಸ್ವಾತಂತ್ರ್ಯ ದಿನ ಆಚರಿಸುತ್ತಿರುವ ಈ ಹೊತ್ತಿನಲ್ಲಿ ನಾವು ಹೊಸ ಮಂತ್ರ ‘ಸುರಾಜ್ಯ ದೇಶವಾಸಿಗಳೆಲ್ಲರ ಕರ್ತವ್ಯ’ ಎಂಬುದು. ನಾನು ದೇಶದ ಪ್ರತಿಯೊಬ್ಬರಲ್ಲೂ ಕೋರುವುದೆಂದರೆ ನೀವು ‘ಒಂದು ಭಾರತ – ಒಂದು ನಿರ್ಣಯ’ ಕೈಗೊಳ್ಳಿ ಎಂದು. ನೀವು ಕನಿಷ್ಠ ಒಂದು ನಿರ್ಣಯವನ್ನಾದರು ಕೈಗೊಳ್ಳಿ ಮತ್ತು ಆ ನಿರ್ಣಯವನ್ನು ದೇಶದ ಹಿತದೃಷ್ಟಿಯಿಂದ ಪಾಲಿಸಿ ಮತ್ತು ಆ ನಿರ್ಧಾರ ಕೈಗೂಡುವುದರಿಂದ ಹಿಂದೆ ಸರಿಯಬೇಡಿ. ಮುಂಬೈ ಮತ್ತು ಮಹಾರಾಷ್ಟ್ರದ ಹಿತದೃಷ್ಟಿಯಿಂದ ನೀವು ಯಾವುದೇ ಬಗೆಯ ನಿರ್ಣಯವನ್ನಾದರೂ ಕೈಗೊಳ್ಳಿ.
ಅದೇ ರೀತಿ ನಾನು ಇದೀಗ ನಿಮಗೆ ಒಂದು ಸಲಹೆಯನ್ನು ನೀಡಲೇ ? ನೀವು ಒಪ್ಪುತ್ತೀರ ? ನಿಮ್ಮ ಧ್ವನಿ ಕೇಳಿಸುತ್ತಿಲ್ಲ, ನೀವು ಒಪ್ಪುತ್ತೀರ ? ನೀವು ಒಪ್ಪುತ್ತೀರ ? ನೀವು ಅದನ್ನು ಪಾಲಿಸುತ್ತೀರ ? ನೀವು ಅದನ್ನು ವೈಯಕ್ತಿಕವಾಗಿ ಹಾಗೂ ಪ್ರತಿಯೊಬ್ಬರು ಸಾಮೂಹಿಕವಾಗಿ ಪಾಲಿಸುತ್ತೀರ ?
ಗೆಳೆಯರೇ,
ಗಣಪತಿ ಬಪ್ಪನ ವಿಸರ್ಜನೆ ವೇಳೆ ಸಾಕಷ್ಟು ಪ್ಲಾಸ್ಟಿಕ್ ಮತ್ತು ಇನ್ನಿತರೆ ತ್ಯಾಜ್ಯ ನಮ್ಮ ಸಮುದ್ರವನ್ನು ಸೇರುತ್ತಿದೆ. ಈ ಭಾರಿ ನೀವು ಜಲಮಾಲಿನ್ಯವನ್ನು ಹೆಚ್ಚಳ ಮಾಡುವಂತಹ ಯಾವುದೇ ವಸ್ತುಗಳನ್ನು ನೀರಿನಲ್ಲಿ ಎಸೆಯಬಾರದೆಂದು ಪ್ರಯತ್ನಿಸಿ, ಜೊತೆಗೆ ನಾವು ಸಿಹಿಯಾದ ನದಿ ನೀರನ್ನು ಮತ್ತು ಇತರೆ ಜಲ ಮೂಲಗಳನ್ನು ಮಲಿನ ಮಾಡುತ್ತೇವೆ, ಅದನ್ನು ವೈಯಕ್ತಿಕವಾಗಿ ನಾವು ಪ್ಲಾಸ್ಟಿಕ್ ಮುಕ್ತಗೊಳಿಸುತ್ತೇವೆ ಎಂದು ಪಣತೊಡಿ, ನೀವು ಈ ಕೆಲಸ ಮಾಡಬಹುದೇ ? ಹಿಂದಿನವರಿಂದ ನಾನು ಕೇಳ ಬಯಸುತ್ತೇನೆ, ನೀವು ಪಾಲಿಸುತ್ತೀರ ? ಖಂಡಿತ ಪಾಲಿಸುತ್ತೀರ ? ನಿಮ್ಮ ಉತ್ಸಾಹವನ್ನು ಗಮನಿಸಿದರೆ ನೀವು ಖಂಡಿತ ಇಡೀ ದೇಶವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವಲ್ಲಿ ಮಹತ್ವದ ಪಾತ್ರವಹಿಸುತ್ತೀರೆಂದು ನಾನು ನಂಬಿದ್ದೇನೆ.
ಮತ್ತೊಮ್ಮೆ ನಿಮಗೆಲ್ಲ ಶುಭಾಶಯಗಳು ಮತ್ತು ಎಲ್ಲ ಅಭಿವೃದ್ಧಿ ಯೋಜನೆಗಳಿಗಾಗಿ ನಿಮ್ಮನ್ನೆಲ್ಲ ಅಭಿನಂದಿಸುತ್ತೇನೆ. ಹಬ್ಬಕ್ಕೆ ಎಲ್ಲ ವ್ಯವಸ್ಥೆ ಮಾಡಿಕೊಂಡು ಅಣಿಯಾಗುವುದು ಮತ್ತು ನಿಮ್ಮೆಲ್ಲ ಒತ್ತಡದ ವೇಳಾಪಟ್ಟಿಯ ನಡುವೆಯೂ ಬಿಡುವು ಮಾಡಿಕೊಂಡು ಇಲ್ಲಿಗೆ ಬಂದಿದ್ದಕ್ಕಾಗಿ ನಾನು ಹೃದಯಾಂತರಾಳದಿಂದ ಕೃತಜ್ಞತೆಗಳನ್ನು ತಿಳಿಸುತ್ತಿದ್ದೇನೆ.
ಜೈ ಮುಂಬೈ, ಜೈ ಮಹಾರಾಷ್ಟ್ರ
ಭಾರತ್ ಮಾತಾ ಕಿ ಜೈ
ಭಾರತ್ ಮಾತಾ ಕಿ ಜೈ
ಭಾರತ್ ಮಾತಾ ಕಿ ಜೈ
ತುಂಬಾ ಧನ್ಯವಾದಗಳು
****************
(ಪ್ರಕಟಣೆ ಐ.ಡಿ.: 1588794)
ವಿಸಿಟರ್ ಕೌಂಟರ್ : 121