57th International Film Festival of India 2026
20 – 28 Nov 2026

ಪಾವೆಲ್ ಪಾವ್ಲಿಕೋವ್ಸ್ಕಿ ನಿರ್ದೇಶನದ ‘ಫಾದರ್‌ಲ್ಯಾಂಡ್’ ಚಿತ್ರದ ಭಾರತದಲ್ಲಿನ ಮೊದಲ ಪ್ರದರ್ಶನದೊಂದಿಗೆ 57ನೇ ಐಎಫ್‌ಎಫ್‌ಐಗೆ ಚಾಲನೆ; ಯುದ್ಧೋತ್ತರ ವಿಭಜಿತ ಜರ್ಮನಿಯ ಇತಿಹಾಸವನ್ನು ಪ್ರೇಕ್ಷಕರ ಮುಂದಿಟ್ಟ ಚಿತ್ರ


ಐಎಫ್‌ಎಫ್‌ಐನ ‘ಗಡಿಗಳಿಲ್ಲದ ಕಥೆಗಳು’ ಎಂಬ ಘೋಷವಾಕ್ಯದ ಆಶಯವನ್ನು ‘ಫಾದರ್‌ಲ್ಯಾಂಡ್’ ಚಿತ್ರ ಪ್ರತಿಬಿಂಬಿಸುತ್ತದೆ: ನಿರ್ಮಾಪಕಿ ಇವಾ ಪುಶ್ಚಿನ್ಸ್ಕಾ

ಭಾರತ-ಪೋಲೆಂಡ್ ಸ್ನೇಹಕ್ಕೆ ಸಂಸ್ಕೃತಿಯೇ ಅತ್ಯಂತ ಬಲಿಷ್ಠ ಅಡಿಪಾಯ: ಪಿಯೋಟರ್ ಆಂಟೋನಿ ಸ್ವಿಟಾಲ್ಸ್ಕಿ

ಪ್ರಕಟಣಾ ದಿನಾಂಕ: 20 NOV 2026 4:44PMby PIB Bengaluruಪ್ರಕಟಣೆ ಐ.ಡಿ.: 2339361Views: 11

ಯುದ್ಧದಿಂದ ಜರ್ಜರಿತಗೊಂಡ, ರಾಜಕೀಯ ಸಿದ್ಧಾಂತಗಳ ಆಧಾರದಲ್ಲಿ ವಿಭಜನೆಗೊಂಡು, ತನ್ನ ಗತಕಾಲದ ಭಾರವನ್ನು ಹೊತ್ತು ಸಾಗುತ್ತಿದ್ದ ಒಂದು ದೇಶದ ಪಯಣದೊಂದಿಗೆ 57ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್‌ಎಫ್‌ಐ) ಇಂದು ಗೋವಾದಲ್ಲಿ ಆರಂಭಗೊಂಡಿತು. ಖ್ಯಾತ ಚಲನಚಿತ್ರ ನಿರ್ದೇಶಕ ಪಾವೆಲ್ ಪಾವ್ಲಿಕೋವ್ಸ್ಕಿ ಅವರ ‘ಫಾದರ್‌ಲ್ಯಾಂಡ್’ (Ojczyzna) ಚಿತ್ರದ ಭಾರತದಲ್ಲಿನ ಮೊದಲ ಪ್ರದರ್ಶನದೊಂದಿಗೆ ಒಂಬತ್ತು ದಿನಗಳ ಈ ಚಿತ್ರೋತ್ಸವಕ್ಕೆ ಚಾಲನೆ ದೊರೆಯಿತು. ಶೀತಲ ಸಮರದ ಆರಂಭಿಕ ದಿನಗಳಲ್ಲಿನ ಯುದ್ಧೋತ್ತರ ಜರ್ಮನಿಯ ಚಿತ್ರಣವನ್ನು ಈ ಸಿನಿಮಾ ಪ್ರೇಕ್ಷಕರ ಮುಂದಿಟ್ಟಿತು.

ಆಸ್ಕರ್ ಪ್ರಶಸ್ತಿ ವಿಜೇತ ನಿರ್ದೇಶಕರು ನಿರ್ದೇಶಿಸಿರುವ ಈ ಕಪ್ಪು-ಬಿಳುಪು ಚಿತ್ರವು ನೊಬೆಲ್ ಪ್ರಶಸ್ತಿ ವಿಜೇತ ಜರ್ಮನ್ ಲೇಖಕ ಥಾಮಸ್ ಮನ್ ಮತ್ತು ಅವರ ಪುತ್ರಿ ಎರಿಕಾ ಅವರ ಕಥೆಯ ಮೂಲಕ ಇತಿಹಾಸ, ಕೌಟುಂಬಿಕ ಸಂಬಂಧಗಳು ಹಾಗೂ ವಿಭಜಿತ ತಾಯ್ನಾಡಿನ ಸಂಕೀರ್ಣತೆಯನ್ನು ಕಟ್ಟಿಕೊಡುತ್ತದೆ. ಐನಾಕ್ಸ್‌ನ ಎಲ್ಲ ಪ್ರದರ್ಶನ ಸಭಾಂಗಣಗಳಲ್ಲೂ ಚಿತ್ರ ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿದ್ದರು. ಈ ಮೂಲಕ ಒಂಬತ್ತು ದಿನಗಳ ಚಿತ್ರೋತ್ಸವದ ಉದ್ಘಾಟನೆಗೆ ಉತ್ತಮ ಆರಂಭ ದೊರೆಯಿತು.

ಚಿತ್ರ ಪ್ರದರ್ಶನಕ್ಕೂ ಮುನ್ನ ‘ಫಾದರ್‌ಲ್ಯಾಂಡ್’ ಚಿತ್ರದ ನಿರ್ಮಾಪಕರಾದ ಶ್ರೀಮತಿ ಇವಾ ಪುಶ್ಚಿನ್ಸ್ಕಾ, ನವದೆಹಲಿಯಲ್ಲಿರುವ ಪೋಲೆಂಡ್ ರಾಯಭಾರ ಕಚೇರಿಯ ಮುಖ್ಯಸ್ಥ ಶ್ರೀ ಪಿಯೋಟರ್ ಆಂಟೋನಿ ಸ್ವಿಟಾಲ್ಸ್ಕಿ ಹಾಗೂ ನವದೆಹಲಿಯ ಪೋಲಿಷ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕಿ ಶ್ರೀಮತಿ ಮಲ್ಗೊರ್ಜಾಟಾ ವೇಯ್ಸಿಸ್-ಗೊಲೆಂಬಿಯಾಕ್ ಅವರು ಪಣಜಿಯ ಐನಾಕ್ಸ್‌ನಲ್ಲಿ ನಡೆದ ರೆಡ್ ಕಾರ್ಪೆಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಚಿತ್ರದ ಕುರಿತು ಮಾತನಾಡಿದ ನಿರ್ಮಾಪಕರಾದ ಶ್ರೀಮತಿ ಇವಾ ಪುಶ್ಚಿನ್ಸ್ಕಾ, ‘ಫಾದರ್‌ಲ್ಯಾಂಡ್’ ಚಿತ್ರದ ನಿರ್ಮಾಣದ ಪ್ರಕ್ರಿಯೆಯೇ ಐಎಫ್‌ಎಫ್‌ಐನ ಆಶಯವನ್ನು ಪ್ರತಿಬಿಂಬಿಸುತ್ತದೆ ಎಂದು  ಹೇಳಿದರು. ಈ ಚಿತ್ರವು ಜರ್ಮನ್ ಲೇಖಕ ಮತ್ತು ಜರ್ಮನ್ ಜನರ ಕಥೆಯನ್ನು ಜರ್ಮನ್ ಭಾಷೆಯಲ್ಲಿ ಹೇಳುತ್ತದೆಯಾದರೂ, ಇದರ ನಿರ್ಮಾಣದಲ್ಲಿ ಸಂಪೂರ್ಣವಾಗಿ ಪೋಲಿಷ್ ಮನಸ್ಸುಗಳು ಮತ್ತು ಕೈಗಳು ತೊಡಗಿಸಿಕೊಂಡಿವೆ. ಇದು ಗಡಿಗಳಿಲ್ಲದ ಕಥೆಗಳು ಎಂಬ ಚಿತ್ರೋತ್ಸವದ ಘೋಷವಾಕ್ಯದ ಆಶಯವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ತಿಳಿಸಿದರು.

ಭಾರತ ಮತ್ತು ಪೋಲೆಂಡ್ ನಡುವಿನ ಸ್ನೇಹ ಸಂಬಂಧವು ಹಲವು ಆಯಾಮಗಳಲ್ಲಿ ವಿಸ್ತರಿಸುತ್ತಿದ್ದರೂ, ಸಂಸ್ಕೃತಿಯೇ ಈ ಸ್ನೇಹದ ಅತ್ಯಂತ ಬಲವಾದ ಅಡಿಪಾಯವಾಗಿದೆ ಎಂದು ಶ್ರೀ ಪಿಯೋಟರ್ ಆಂಟೋನಿ ಸ್ವಿಟಾಲ್ಸ್ಕಿ ಹೇಳಿದರು. ಪಾವೆಲ್ ಪಾವ್ಲಿಕೋವ್ಸ್ಕಿ ಅವರು ಸಾಂಪ್ರದಾಯಿಕ ಪೋಲಿಷ್ ಚಲನಚಿತ್ರ ನಿರ್ಮಾಣ ಪರಂಪರೆಗೆ ಹೊಸ ಗಮನ ಮತ್ತು ದೃಷ್ಟಿಕೋನವನ್ನು ನೀಡಿದ್ದಾರೆ ಎಂದು ಅವರು ಹೇಳಿದರು.

ಅತಿಥಿಗಳನ್ನು ಸನ್ಮಾನಿಸಿ ಮಾತನಾಡಿದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಚಂಚಲ್ ಕುಮಾರ್, ‘ಫಾದರ್‌ಲ್ಯಾಂಡ್’ ಚಿತ್ರವು ಭಾರತ ಮತ್ತು ಪೋಲೆಂಡ್ ನಡುವಿನ ಸೃಜನಶೀಲ ಬಾಂಧವ್ಯವನ್ನು ಸಂಭ್ರಮಿಸಲು ವಿಶೇಷ ಅವಕಾಶ ಒದಗಿಸಿದೆ ಎಂದರು. ಐಎಫ್‌ಎಫ್‌ಐ ಉತ್ಸವ ನಿರ್ದೇಶಕ ಶ್ರೀ ಅಶುತೋಷ್ ಗೋವಾರಿಕರ್, ಭಾರತೀಯ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ ಅಧ್ಯಕ್ಷ ಶ್ರೀ ಜಿ. ಕೃಷ್ಣಕುಮಾರ್ ಹಾಗೂ ಐಎಫ್‌ಎಫ್‌ಐ ಕಲಾತ್ಮಕ ನಿರ್ದೇಶಕ ಶ್ರೀ ಪಂಕಜ್ ಸಕ್ಸೇನಾ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವಿಭಜಿತ ಜರ್ಮನಿಯ ಹಿನ್ನೆಲೆಯಲ್ಲಿನ ತಂದೆ-ಮಗಳ ಪಯಣ

1949ರ ಬೇಸಿಗೆಯಲ್ಲಿ, ಶೀತಲ ಸಮರ ಆರಂಭವಾಗುತ್ತಿದ್ದ ಸಂದರ್ಭದ ಹಿನ್ನೆಲೆಯಲ್ಲಿ ರೂಪುಗೊಂಡಿರುವ ‘ಫಾದರ್‌ಲ್ಯಾಂಡ್’ ಚಿತ್ರವು ಅಮೆರಿಕದಲ್ಲಿ 16 ವರ್ಷಗಳ ಗಡಿಪಾರು ಜೀವನ ಕಳೆದ ಬಳಿಕ ಜರ್ಮನಿಗೆ ಮರಳುವ ಥಾಮಸ್ ಮನ್ ಮತ್ತು ಅವರ ಪುತ್ರಿ ಎರಿಕಾ ಅವರ ಕಥೆಯನ್ನು ಹೇಳುತ್ತದೆ. ಎರಡನೇ ಮಹಾಯುದ್ಧದ ವಿನಾಶದ ಗುರುತುಗಳನ್ನು ಇನ್ನೂ ಹೊತ್ತಿದ್ದ ದೇಶದ ಮೂಲಕ ಕಪ್ಪು ಬಣ್ಣದ ಬ್ಯೂಕ್ ಕಾರಿನಲ್ಲಿ ಪ್ರಯಾಣಿಸುವ ತಂದೆ-ಮಗಳು, ಅಮೆರಿಕದ ಆಡಳಿತದಲ್ಲಿದ್ದ ಫ್ರಾಂಕ್‌ಫರ್ಟ್‌ನಿಂದ ಸೋವಿಯತ್ ನಿಯಂತ್ರಣದಲ್ಲಿದ್ದ ವೈಮರ್‌ವರೆಗೆ ಸಾಗುತ್ತಾರೆ.

ಮನ್ ಅವರ ಪಾಲಿಗೆ ಈ ವಾಪಸಾತಿ ಕೇವಲ ತಾಯ್ನಾಡಿಗೆ ಮರಳುವುದಷ್ಟೇ ಆಗಿರುವುದಿಲ್ಲ. ಯುದ್ಧದಿಂದ ರೂಪಾಂತರಗೊಂಡು, ಪರಸ್ಪರ ಭಿನ್ನವಾದ ರಾಜಕೀಯ ಸಿದ್ಧಾಂತಗಳ ಕಾರಣದಿಂದ ವಿಭಜನೆಗೊಂಡ ತಾಯ್ನಾಡಿನೊಂದಿಗಿನ ಮುಖಾಮುಖಿಯೂ ಆಗಿರುತ್ತದೆ. ಅವರ ಪಯಣ ಮುಂದುವರಿದಂತೆ, ದೇಶದ ವಿಭಜನೆಯ ಪ್ರತಿಫಲನ ಮನ್ ಕುಟುಂಬದ ಸಂಕೀರ್ಣ ಸಂಬಂಧಗಳಲ್ಲಿಯೂ ಕಾಣಿಸಿಕೊಳ್ಳುತ್ತದೆ. ಇದರಿಂದ ಸೇರಿದ ಆತ್ಮೀಯತೆ, ಅಸ್ಮಿತೆ, ನೆನಪುಗಳು ಮತ್ತು ಸಮನ್ವಯದಂತಹ ಪ್ರಶ್ನೆಗಳು ಪ್ರಮುಖವಾಗಿ ಮುನ್ನೆಲೆಗೆ ಬರುತ್ತವೆ.

ಸ್ಯಾಂಡ್ರಾ ಹುಲ್ಲರ್ ಮತ್ತು ಹಾನ್ಸ್ ಜಿಷ್ಲರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ 82 ನಿಮಿಷಗಳ ಚಿತ್ರವು ಪೋಲೆಂಡ್, ಜರ್ಮನಿ, ಇಟಲಿ ಮತ್ತು ಫ್ರಾನ್ಸ್ ದೇಶಗಳ ಜಂಟಿ ನಿರ್ಮಾಣವಾಗಿದೆ. ಈ ವರ್ಷ ಕಾನ್, ಸ್ಯಾನ್ ಸೆಬಾಸ್ಟಿಯನ್ ಮತ್ತು ಟೆಲ್ಲುರೈಡ್ ಸೇರಿದಂತೆ ಹಲವು ಪ್ರಮುಖ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಈ ಚಿತ್ರ ಪ್ರದರ್ಶನಗೊಂಡಿದೆ. ಈ ಚಿತ್ರಕ್ಕಾಗಿ ಪಾವೆಲ್ ಪಾವ್ಲಿಕೋವ್ಸ್ಕಿ ಅವರು ಕಾನ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದಿದ್ದಾರೆ.

ಐಎಫ್‌ಎಫ್‌ಐ ಲೋಯ್ಡ್ (IFFILOID) ಅನ್ನು ಇಲ್ಲಿ ಓದಿ: https://www.pib.gov.in/iffi/57/iffiLoid.aspx?yr=2026&lang=1&reg=48

 

*****

 


Great films resonate through passionate voices. Share your love for cinema with #IFFI2026 and #StoriesWithoutBorders. Tag us @pibindia on Instagram and @PIB_India on X, and we will help amplify your festival moments!

For accredited journalists, critics, bloggers, and vloggers seeking 1-on-1 interviews with filmmakers and festival juries, write to us at:
iffi.mediadesk@pib.gov.in with the subject line: Take One with PIB.


Official Release ID: 2339361
•
Media Centre: Goa
•
Festival Dates: Nov 20 – 28, 2026