ಪರಿಸರ ಮತ್ತು ಅರಣ್ಯ ಸಚಿವಾಲಯ
azadi ka amrit mahotsav

'ಪ್ರಾಜೆಕ್ಟ್ ಚೀತಾ' ಯಶಸ್ಸಿಗೆ ತಜ್ಞರು ಮತ್ತು ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿಯ ಸಮರ್ಪಣಾ ಮನೋಭಾವ, ಬದ್ಧತೆ ಮತ್ತು ಕಠಿಣ ಪರಿಶ್ರಮವನ್ನು ಶ್ಲಾಘಿಸಿದ ಶ್ರೀ ಭೂಪೇಂದರ್ ಯಾದವ್

ಪ್ರಕಟಣಾ ದಿನಾಂಕ: 20 NOV 2026 10:45AM by PIB Bengaluru

ಬೋಟ್ಸ್ವಾನಾ ದೇಶದಿಂದ ತರಲಾಗಿದ್ದ ಎರಡೂವರೆ ವರ್ಷದ ಹೆಣ್ಣು ಚೀತಾ 'KOMG 3', ಇಂದು ಕಾಡಿನಲ್ಲಿ ನಾಲ್ಕು ಆರೋಗ್ಯವಂತ ಮರಿಗಳಿಗೆ ಜನ್ಮ ನೀಡಿದೆ. ಇದು 'ಪ್ರಾಜೆಕ್ಟ್ ಚೀತಾ' ಮತ್ತು ಭಾರತದಲ್ಲಿ ಸುಸ್ಥಿರ ಚೀತಾ ಸಂತತಿಯನ್ನು ಪುನಃಸ್ಥಾಪಿಸುವ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ  ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಅವರು, ಬೋಟ್ಸ್ವಾನಾದಿಂದ ತರಲಾದ ಚೀತಾಗಳ ಪೈಕಿ ಮರಿಗಳಿಗೆ ಜನ್ಮ ನೀಡಿದ ಮೊದಲ ಹೆಣ್ಣು ಚೀತಾ ಇದಾಗಿದೆ ಎಂದು ತಿಳಿಸಿದ್ದಾರೆ. ನೈಸರ್ಗಿಕ ಪರಿಸರದಲ್ಲಿ ಮರಿಗಳಿಗೆ ಜನ್ಮ ನೀಡುವ ಮುನ್ನ ಅದು ನಾಲ್ಕು ತಿಂಗಳಿಗೂ ಹೆಚ್ಚು ಕಾಲ ಕಾಡಿನಲ್ಲಿ ಕಳೆದಿದೆ ಎಂದು ಅವರು ಒತ್ತಿ ಹೇಳಿದ್ದಾರೆ. 2022ರಲ್ಲಿ ಚೀತಾ ಮರುಪರಿಚಯ ಕಾರ್ಯಕ್ರಮ ಪ್ರಾರಂಭವಾದಾಗಿನಿಂದ ಕಾಡಿನಲ್ಲಿ ದಾಖಲಾದ ಎರಡನೇ ಜನನ ಇದಾಗಿದೆ.

ಈ ನಾಲ್ಕು ಮರಿಗಳ ಜನನದೊಂದಿಗೆ ಭಾರತದ ಒಟ್ಟು ಚೀತಾಗಳ ಸಂಖ್ಯೆ 62ಕ್ಕೆ ಏರಿಕೆಯಾಗಿದ್ದು, ಇದರಲ್ಲಿ ಭಾರತದಲ್ಲೇ ಜನಿಸಿದ 43 ಚೀತಾಗಳು ಸೇರಿವೆ ಎಂದು ಶ್ರೀ ಯಾದವ್ ಅವರು ಮಾಹಿತಿ ನೀಡಿದ್ದಾರೆ. ಈ ಬೆಳವಣಿಗೆಯನ್ನು 'ಪ್ರಾಜೆಕ್ಟ್ ಚೀತಾ'ದ ಐತಿಹಾಸಿಕ ಕ್ಷಣ ಮತ್ತು ಭಾರತದಲ್ಲಿ ಸುಸ್ಥಿರ ಚೀತಾ ಸಂತತಿಯನ್ನು ಪುನಃಸ್ಥಾಪಿಸುವ ಪಯಣದ ಹೆಮ್ಮೆಯ ಮೈಲಿಗಲ್ಲು ಎಂದು ಅವರು ಬಣ್ಣಿಸಿದ್ದಾರೆ.

ಇಂತಹ ಪ್ರತಿಯೊಂದು ಜನನವೂ ಸಂರಕ್ಷಣೆಯ ಬಗೆಗಿನ ಭರವಸೆಯನ್ನು ಮತ್ತು ಬದ್ಧತೆಯನ್ನು ಮತ್ತಷ್ಟು ಗಾಢವಾಗಿಸುತ್ತದೆ ಎಂದು ಅಭಿಪ್ರಾಯಪಟ್ಟಿರುವ ಸಚಿವರು, ಸಂರಕ್ಷಣೆಗೆ ತಾಳ್ಮೆ, ಪರಿಶ್ರಮ ಮತ್ತು ಸಾಮೂಹಿಕ ಪ್ರಯತ್ನದ ಅಗತ್ಯವಿದೆ ಎಂದು ಪುನರುಚ್ಚರಿಸಿದ್ದಾರೆ. 'ಪ್ರಾಜೆಕ್ಟ್ ಚೀತಾ'ದ ಯಶಸ್ಸಿಗಾಗಿ ಅವಿರತವಾಗಿ ಶ್ರಮಿಸುತ್ತಿರುವ ಯೋಜನಾ ವ್ಯವಸ್ಥಾಪಕರು, ಪಶುವೈದ್ಯರು, ಮುಂಚೂಣಿ ಅರಣ್ಯ ಸಿಬ್ಬಂದಿ ಮತ್ತು ಪ್ರತಿಯೊಬ್ಬರ ಸಮರ್ಪಣಾ ಮನೋಭಾವ, ಬದ್ಧತೆ ಮತ್ತು ಕಠಿಣ ಪರಿಶ್ರಮವನ್ನು ಅವರು ಇದೇ ಸಂದರ್ಭದಲ್ಲಿ ಶ್ಲಾಘಿಸಿದ್ದಾರೆ.

 

*****


(ಪ್ರಕಟಣೆ ಐ.ಡಿ.: 2339209) ವಿಸಿಟರ್ ಕೌಂಟರ್ : 10
ಪ್ರಕಟಣೆಯನ್ನು ಇದರಲ್ಲಿ ಓದಿ: Bengali , English , Urdu , Marathi , हिन्दी , Nepali , Bengali-TR , Punjabi , Gujarati , Tamil , Telugu