57th International Film Festival of India 2026
20 – 28 Nov 2026

ಸೃಜನಶೀಲ ಆಲೋಚನೆಗಳಿಂದ ಜಾಗತಿಕ ಅವಕಾಶಗಳವರೆಗೆ: ಗೋವಾದಲ್ಲಿ ವೇವ್ಸ್ ಫಿಲ್ಮ್ ಬಜಾರ್ 2026 ಆರಂಭ


ಚಲನಚಿತ್ರ ನಿರ್ಮಾಪಕರನ್ನು ಬೆಸೆಯುವ, ಕಥೆಗಳನ್ನು ಪೋಷಿಸುವ ಮತ್ತು ಅಂತಾರಾಷ್ಟ್ರೀಯ ಪಾಲುದಾರಿಕೆಗಳನ್ನು ಉತ್ತೇಜಿಸುವ ಎರಡು ದಶಕಗಳ ಪಯಣ

ಪ್ರಕಟಣಾ ದಿನಾಂಕ: 20 NOV 2026 2:03PMby PIB Bengaluruಪ್ರಕಟಣೆ ಐ.ಡಿ.: 2339054Views: 18

ಭಾರತೀಯ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರೋದ್ಯಮಗಳ ನಡುವೆ ಸಂಪರ್ಕವನ್ನು ಬೆಸೆಯುವ ಎರಡು ದಶಕಗಳ ಸಂಭ್ರಮದೊಂದಿಗೆ, ವೇವ್ಸ್ ಫಿಲ್ಮ್ ಬಜಾರ್ ನ 20ನೇ ಆವೃತ್ತಿಯು ಇಂದು ಗೋವಾದ 'ತಾಜ್ ಸಿಡಾಡೆ ಡಿ ಗೋವಾ ಹೊರೈಜನ್'ನಲ್ಲಿ ಉದ್ಘಾಟನೆಗೊಂಡಿತು. ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್ ಎಫ್ ಡಿ ಸಿ) ಆಯೋಜಿಸಿರುವ ಈ ಐದು ದಿನಗಳ ಮಾರುಕಟ್ಟೆ ವೇದಿಕೆಯು ಸಹಯೋಗಗಳನ್ನು ಅನ್ವೇಷಿಸಲು ಮತ್ತು ಸೃಜನಶೀಲ ಯೋಜನೆಗಳನ್ನು ಜಾಗತಿಕ ಮಾರುಕಟ್ಟೆಗಳೊಂದಿಗೆ ಸಂಪರ್ಕಿಸಲು ಚಲನಚಿತ್ರ ತಯಾರಕರು, ನಿರ್ಮಾಪಕರು, ಬರಹಗಾರರು, ಹೂಡಿಕೆದಾರರು, ವಿತರಕರು ಮತ್ತು ಇತರ ಉದ್ಯಮ ವೃತ್ತಿಪರರನ್ನು ಒಟ್ಟುಗೂಡಿಸುತ್ತದೆ.

ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಚಂಚಲ್ ಕುಮಾರ್ ಅವರು, 'ಫಿಲ್ಮ್ ಬಜಾರ್'  ಸಾಧಿಸಿರುವ ಗಮನಾರ್ಹ ಬೆಳವಣಿಗೆಯನ್ನು ಉಲ್ಲೇಖಿಸಿದರು. 2007ರಲ್ಲಿ 18 ದೇಶಗಳನ್ನು ಪ್ರತಿನಿಧಿಸುವ 204 ಪ್ರತಿನಿಧಿಗಳೊಂದಿಗೆ ಆರಂಭವಾದ ಈ ವೇದಿಕೆಯು, ಇತ್ತೀಚಿನ ಆವೃತ್ತಿಗಳಲ್ಲಿ 2,500ಕ್ಕೂ ಹೆಚ್ಚು ಪ್ರತಿನಿಧಿಗಳನ್ನು ಒಳಗೊಳ್ಳುವ ಮಟ್ಟಕ್ಕೆ ಬೆಳೆದಿದೆ. 'ವೇವ್ಸ್ ಫಿಲ್ಮ್ ಬಜಾರ್'   ಸೃಜನಶೀಲ ಪರಿಕಲ್ಪನೆಗಳನ್ನು ವಾಣಿಜ್ಯ ಅವಕಾಶಗಳನ್ನಾಗಿ ಪರಿವರ್ತಿಸುವ ವೇದಿಕೆಯಾಗಿದೆ ಎಂದು ಅವರು ವರ್ಣಿಸಿದರು.

ವೇವ್ಸ್ 2025ರಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರತಿಪಾದಿಸಿದ ʻಜಗತ್ತಿಗಾಗಿ ಭಾರತದಲ್ಲಿ ಸೃಷ್ಟಿಸಿʼ ಎಂಬ ದೃಷ್ಟಿಕೋನವನ್ನು ಉಲ್ಲೇಖಿಸಿದ ಅವರು, ಭಾರತದ ಸೃಜನಶೀಲ ಪ್ರತಿಭೆಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗಳೊಂದಿಗೆ ಸಂಪರ್ಕಿಸುವ ಮತ್ತು ಜಾಗತಿಕ ಸಹಯೋಗದ ಅವಕಾಶಗಳನ್ನು ವಿಸ್ತರಿಸುವ ಮಹತ್ವವನ್ನು ಒತ್ತಿಹೇಳಿದರು. ಫಿಲ್ಮ್ ಬಜಾರ್ ಅನ್ನು ಸಹಯೋಗ ಮತ್ತು ಅನ್ವೇಷಣೆಯ ವೇದಿಕೆ ಎಂದು ಕರೆದ ಅವರು, ಕಥೆಗಳು ಸಹಭಾಗಿತ್ವವಾಗಿ ವಿಕಸನಗೊಳ್ಳುವ ಮತ್ತು ಸೃಜನಶೀಲತೆಯು ಶಾಶ್ವತ ಆರ್ಥಿಕ ಹಾಗೂ ಸಾಂಸ್ಕೃತಿಕ ಮೌಲ್ಯವಾಗಿ ಪರಿವರ್ತನೆಗೊಳ್ಳುವ ಈ ಮಾರುಕಟ್ಟೆಯ ಸದುಪಯೋಗ ಪಡೆದುಕೊಳ್ಳುವಂತೆ ವಿಶ್ವದಾದ್ಯಂತದ ಚಲನಚಿತ್ರ ನಿರ್ಮಾಪಕರನ್ನು ಆಹ್ವಾನಿಸಿದರು.


ಶ್ರೀ ಚಂಚಲ್ ಕುಮಾರ್, ಕಾರ್ಯದರ್ಶಿ, ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಗೌರವ ಅತಿಥಿಗಳಾಗಿ ಸಭೆಯನ್ನುದ್ದೇಶಿಸಿ ಮಾತನಾಡಿದ 57ನೇ ಐಎಫ್ಎಫ್ಐ ಉತ್ಸವದ ನಿರ್ದೇಶಕರಾದ ಶ್ರೀ ಅಶುತೋಷ್ ಗೋವಾರಿಕರ್ ಅವರು, ಭಾರತೀಯ ಚಲನಚಿತ್ರ ನಿರ್ಮಾಪಕರು ಮತ್ತು ಅಂತಾರಾಷ್ಟ್ರೀಯ ಉದ್ಯಮ ವೃತ್ತಿಪರರನ್ನು ಒಟ್ಟಿಗೆ ತರುವಲ್ಲಿ ಫಿಲ್ಮ್ ಬಜಾರ್ನ ವಿಶಿಷ್ಟ ಪಾತ್ರವನ್ನು ಒತ್ತಿಹೇಳಿದರು.

ಚಲನಚಿತ್ರವೊಂದು ಪೂರ್ಣಗೊಳ್ಳುವವರೆಗೆ ಕಾಯದೆ, ಈ ಮಾರುಕಟ್ಟೆಯು ನಿರ್ಮಾಪಕರ ಸೃಜನಶೀಲ ಪಯಣದ ಪ್ರತಿಯೊಂದು ಹಂತದಲ್ಲೂ ಅವರೊಂದಿಗೆ ತೊಡಗಿಸಿಕೊಳ್ಳುತ್ತದೆ ಎಂದು ಅವರು ತಿಳಿಸಿದರು. ನಿರ್ಮಾಪಕರ ಬಳಿ ಅಪೂರ್ಣ ಚಿತ್ರಕಥೆಯಿರಲಿ ಅಥವಾ ಪ್ರೇಕ್ಷಕರನ್ನು ಹುಡುಕುತ್ತಿರುವ  ಪೂರ್ಣಗೊಂಡ ಚಿತ್ರವಿರಲಿ, ಯೋಜನೆಯನ್ನು ಮುಂದಕ್ಕೆ ಕೊಂಡೊಯ್ಯಲು ಸಹಾಯ ಮಾಡುವ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಲು ವೇವ್ಸ್ ಫಿಲ್ಮ್ ಬಜಾರ್ ಅವಕಾಶಗಳನ್ನು ಒದಗಿಸುತ್ತದೆ. ಕಾಫಿಗೆ ಆಹ್ವಾನಿಸುವ ಮೂಲಕ ಆರಂಭವಾಗುವ ಒಂದು ಸರಳ ಸಂಭಾಷಣೆಯೂ ಸಹ ಅರ್ಥಪೂರ್ಣ ಸಹಯೋಗಗಳಿಗೆ ಹೇಗೆ ಬಾಗಿಲು ತೆರೆಯಬಲ್ಲದು ಎಂಬುದನ್ನು ಅವರು ವಿವರಿಸಿದರು.

ಶ್ರೀ ಅಶುತೋಷ್ ಗೋವಾರಿಕರ್, ಉತ್ಸವದ ನಿರ್ದೇಶಕರು

ಸಿನಿಮಾದ ಪರಿವರ್ತನಾಶೀಲ ಶಕ್ತಿಯನ್ನು ಒತ್ತಿಹೇಳಿದ ಶ್ರೀ ಗೋವಾರಿಕರ್, ಜಗತ್ತನ್ನು ವಿಭಿನ್ನವಾಗಿ ನೋಡುವಂತೆ ಜನರನ್ನು ಪ್ರೇರೇಪಿಸುವುದು ಒಂದು ವರವಾಗಿದೆ ಎಂದು ಅಭಿಪ್ರಾಯಪಟ್ಟರು. ಹೊಸ ಜನರೊಂದಿಗೆ ಬೆರೆಯುವ ಮೂಲಕ, ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳುವ ಮೂಲಕ ಮತ್ತು ವಿಶೇಷವಾಗಿ ಅಪೂರ್ಣ ಯೋಜನೆಗಳನ್ನು ಚರ್ಚೆಗೆ ತರುವ ಮೂಲಕ ಈ ನಾಲ್ಕು ದಿನಗಳ ಮಾರುಕಟ್ಟೆಯ ಸಂಪೂರ್ಣ ಪ್ರಯೋಜನ ಪಡೆಯುವಂತೆ ಅವರು ಪ್ರತಿನಿಧಿಗಳನ್ನು ಪ್ರೋತ್ಸಾಹಿಸಿದರು. ಅವಕಾಶಗಳನ್ನು ಸಕ್ರಿಯವಾಗಿ ಅನ್ವೇಷಿಸಲು ಮತ್ತು ಸಾಧ್ಯತೆಗಳಿಗೆ ಮುಕ್ತವಾಗಿರಲು ಕರೆ ನೀಡಿದ ಅವರು, ʻಹೌದುʼ ಎನ್ನುವ  ಉತ್ತರ ಸಿಗುವ ಭರವಸೆಯೊಂದಿಗೆ ಪ್ರತಿಯೊಂದು ಸಂವಾದವನ್ನೂ ಎದುರಿಸುವಂತೆ ಭಾಗವಹಿಸುವವರಿಗೆ ಉತ್ತೇಜನ ನೀಡಿದರು.

ಸಭಿಕರನ್ನು ಸ್ವಾಗತಿಸಿದ ಎನ್ ಎಫ್ ಡಿ ಸಿ  ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಧೀರಜ್ ಸಿಂಗ್ ಅವರು, ಫಿಲ್ಮ್ ಬಜಾರ್ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅವಿಭಾಜ್ಯ ಅಂಗವಾಗಿದೆ ಎಂದು ವರ್ಣಿಸಿದರು ಮತ್ತು ಕಳೆದ ಎರಡು ದಶಕಗಳಿಂದ ಚಲನಚಿತ್ರೋತ್ಸವದೊಂದಿಗಿನ ಅದರ ನಿರಂತರ ಸಂಬಂಧವನ್ನು ಸ್ಮರಿಸಿದರು. ಫಿಲ್ಮ್ ಬಜಾರ್ ಇಂದು ಅತ್ಯಂತ ದೊಡ್ಡ ಮತ್ತು ವಿಸ್ತಾರವಾದ ವೇದಿಕೆಯಾಗಿ ವಿಕಸನಗೊಂಡಿದ್ದು, ಚಲನಚಿತ್ರೋದ್ಯಮಕ್ಕೆ ಹೆಚ್ಚಿನ ಅವಕಾಶಗಳು ಮತ್ತು ವ್ಯಾಪಕ ಶ್ರೇಣಿಯ ತೊಡಗಿಸಿಕೊಳ್ಳುವಿಕೆಯನ್ನು ನೀಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಬಲದಿಂದ: ಶ್ರೀ ಪ್ರಭಾತ್, ಹೆಚ್ಚುವರಿ ಕಾರ್ಯದರ್ಶಿ, ವಾರ್ತಾ ಮತ್ತು ಪ್ರಸಾರ ಸಚಿವಾಲಯ; ಜಿ. ಕೃಷ್ಣಕುಮಾರ್, ಅಧ್ಯಕ್ಷರು, ಎನ್ಎಫ್ಡಿಸಿ; ಶ್ರೀ ಚಂಚಲ್ ಕುಮಾರ್, ಕಾರ್ಯದರ್ಶಿ, ವಾರ್ತಾ ಮತ್ತು ಪ್ರಸಾರ ಸಚಿವಾಲಯ; ಶ್ರೀ ಅಶುತೋಷ್ ಗೋವಾರಿಕರ್, ಉತ್ಸವದ ನಿರ್ದೇಶಕರು; ಶ್ರೀ ಧೀರಜ್ ಸಿಂಗ್, ವ್ಯವಸ್ಥಾಪಕ ನಿರ್ದೇಶಕರು, ಎನ್ ಎಫ್ ಡಿ ಸಿ

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಪ್ರಭಾತ್ ಅವರು ವಂದನಾರ್ಪಣೆ ಸಲ್ಲಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಎನ್ ಎಫ್ ಡಿಸಿ ಅಧ್ಯಕ್ಷ ಶ್ರೀ ಜಿ. ಕೃಷ್ಣಕುಮಾರ್ ಕೂಡ ಉಪಸ್ಥಿತರಿದ್ದರು.

ವೇವ್ಸ್ ಫಿಲ್ಮ್ ಬಜಾರ್ ಎರಡು ದಶಕಗಳನ್ನು ಪೂರೈಸುತ್ತಿರುವ ಈ ಸಂದರ್ಭದಲ್ಲಿ, ಅದರ ಪಾತ್ರವು ಚಲನಚಿತ್ರೋದ್ಯಮದ ಪಾಲುದಾರರನ್ನು ಒಟ್ಟುಗೂಡಿಸುವುದಕ್ಕಷ್ಟೇ ಸೀಮಿತವಾಗದೆ, ಸಹಯೋಗ ಮತ್ತು ಜಾಗತಿಕ ಸಂಪರ್ಕಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸುವವರೆಗೆ ವಿಸ್ತರಿಸಿದೆ. ವಿಶ್ವದಾದ್ಯಂತದ ನಿರ್ಮಾಪಕರು, ಬರಹಗಾರರು, ಹೂಡಿಕೆದಾರರು ಮತ್ತು ವಿತರಕರೊಂದಿಗೆ ಚಲನಚಿತ್ರ ನಿರ್ಮಾಪಕರನ್ನು ಸಂಪರ್ಕಿಸುವ ಮೂಲಕ, ಭರವಸೆಯ ಯೋಜನೆಗಳಿಗೆ ಸೂಕ್ತ ಸಹಯೋಗಿಗಳನ್ನು ಹುಡುಕಿಕೊಡಲು ಮತ್ತು ವೈವಿಧ್ಯಮಯ ಭಾರತದ ಕಥೆಗಳು ಅಂತಾರಾಷ್ಟ್ರೀಯ ಪ್ರೇಕ್ಷಕರನ್ನು ತಲುಪಲು ಈ ಮಾರುಕಟ್ಟೆ ಮಾರ್ಗಗಳನ್ನು ರಚಿಸುತ್ತಿದೆ. ಸೃಜನಶೀಲ ಆಲೋಚನೆಗಳು ಅರ್ಥಪೂರ್ಣ ಸಹಭಾಗಿತ್ವವಾಗಿ ವಿಕಸನಗೊಂಡು ಪರದೆಯ ಮೇಲೆ ಅಭಿವ್ಯಕ್ತಿ ಪಡೆಯುವ ವೇದಿಕೆಯನ್ನು ಇದು ನಿರಂತರವಾಗಿ ಒದಗಿಸುತ್ತಿದೆ.

IFFILOID ಅನ್ನು ಇಲ್ಲಿ ಓದಿರಿ: https://www.pib.gov.in/iffi/57/iffiLoid.aspx?yr=2026&lang=1&reg=48

 

*****


Great films resonate through passionate voices. Share your love for cinema with #IFFI2026 and #StoriesWithoutBorders. Tag us @pibindia on Instagram and @PIB_India on X, and we will help amplify your festival moments!

For accredited journalists, critics, bloggers, and vloggers seeking 1-on-1 interviews with filmmakers and festival juries, write to us at:
iffi.mediadesk@pib.gov.in with the subject line: Take One with PIB.


Official Release ID: 2339054
•
Media Centre: Goa
•
Festival Dates: Nov 20 – 28, 2026