ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನವೆಂಬರ್ 20 ರಂದು ಮೊದಲ ಎಸ್‌ಸಿಒ ನಾಗರಿಕತಾ ಸಂವಾದ ವೇದಿಕೆಯನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿ


ಎಸ್‌ಸಿಒ ದೇಶಗಳ ಹಂಚಿಕೆಯ ನಾಗರಿಕತಾ ಪರಂಪರೆಯನ್ನು ಅನ್ವೇಷಿಸಲು ವಿದ್ವಾಂಸರು, ಶಿಕ್ಷಣ ತಜ್ಞರು, ಪರಿಣತರು ಮತ್ತು ಸಾಂಸ್ಕೃತಿಕ ಪ್ರತಿನಿಧಿಗಳನ್ನು ಒಂದೆಡೆ ಸೇರಿಸಲಿರುವ ಮೂರು ದಿನಗಳ ವೇದಿಕೆ

ಪ್ರಕಟಣಾ ದಿನಾಂಕ: 19 NOV 2026 4:24PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2026 ರ ನವೆಂಬರ್ 20 ರಂದು ಸಂಜೆ ಸುಮಾರು 5:30 ಕ್ಕೆ ನವದೆಹಲಿಯ ಪುರಾಣ ಕಿಲಾದಲ್ಲಿ ಮೊದಲ ಶಾಂಘೈ ಸಹಕಾರ ಸಂಘಟನೆ (SCO) ನಾಗರಿಕತಾ ಸಂವಾದ ವೇದಿಕೆಯನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

2026 ರ ನವೆಂಬರ್ 20 ರಿಂದ 22 ರವರೆಗೆ ನಡೆಯಲಿರುವ ಈ ವೇದಿಕೆಯು, ಈ ಪ್ರದೇಶದ ಶ್ರೀಮಂತ ಮತ್ತು ಪರಸ್ಪರ ಬೆಸೆದುಕೊಂಡಿರುವ ನಾಗರಿಕತಾ ಪರಂಪರೆಯನ್ನು ಸಂಭ್ರಮಿಸುವ, ಜನರ ನಡುವಿನ ಬಾಂಧವ್ಯವನ್ನು ಬಲಪಡಿಸುವ ಹಾಗೂ ಅಂತರ್-ಸಾಂಸ್ಕೃತಿಕ ಸಂವಾದ ಮತ್ತು ಸಹಕಾರವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಎಸ್‌ಸಿಒ ಚೌಕಟ್ಟಿನ ಅಡಿಯಲ್ಲಿ ನಾಗರಿಕತಾ ಸಂವಾದಕ್ಕಾಗಿ ಮೀಸಲಾದ ವೇದಿಕೆಯನ್ನು ಸ್ಥಾಪಿಸಲು 2025 ರಲ್ಲಿ ಚೀನಾದ ಟಿಯಾಂಜಿನ್‌ನಲ್ಲಿ ನಡೆದ ಎಸ್‌ಸಿಒ ಶೃಂಗಸಭೆಯಲ್ಲಿ ಪ್ರಧಾನಮಂತ್ರಿಯವರು ಮಾಡಿದ ಪ್ರಸ್ತಾವನೆಯ ಆಧಾರದ ಮೇಲೆ ಈ ಉಪಕ್ರಮವನ್ನು ರೂಪಿಸಲಾಗಿದೆ. ತರುವಾಯ ಎಸ್‌ಸಿಒದ ಬಿಷ್ಕೆಕ್ ಘೋಷಣೆಯಲ್ಲಿ ಈ ಪ್ರಸ್ತಾವನೆಯನ್ನು ಸ್ವಾಗತಿಸಲಾಯಿತು.

ಉದ್ಘಾಟನಾ ಸಮಾರಂಭದಲ್ಲಿ ಸಂಗೀತ, ನೃತ್ಯ, ದೃಶ್ಯ ಕಥೆ ಹೇಳುವಿಕೆ ಮತ್ತು ನಿರೂಪಣೆಯನ್ನು ಸಂಯೋಜಿಸುವ "ಸಿವಿಲೈಸೇಶನ್ಸ್ ಇನ್ ಕಾನ್ವರ್ಸೇಶನ್ - ಸಾಂಸ್ಕೃತಿಕ ಪ್ರದರ್ಶನ" ನಡೆಯಲಿದೆ. "ವಸುಧೈವ ಕುಟುಂಬಕಂ - ಜಗತ್ತೇ ಒಂದು ಕುಟುಂಬ" ಎಂಬ ಧ್ಯೇಯವಾಕ್ಯವನ್ನು ಆಧರಿಸಿದ ಈ ಪ್ರದರ್ಶನವು ಭಾರತ ಮತ್ತು ಯುರೇಷಿಯಾದಾದ್ಯಂತ ಇರುವ ಸಾಂಸ್ಕೃತಿಕ ಸಂಪರ್ಕಗಳ ಕುರಿತು ಬೆಳಕು ಚೆಲ್ಲಲಿದೆ.

ಈ ವೇದಿಕೆಯು, ಭಾರತದ ಪುರಾತತ್ವ, ಕಲಾತ್ಮಕ ಮತ್ತು ಸಾಹಿತ್ಯಿಕ ಪರಂಪರೆಯನ್ನು ಪ್ರದರ್ಶಿಸುವ "ಅಸ್ತಿತ್ವ – ನಮ್ಮ ಅಸ್ತಿತ್ವದ ಸಾರ" ಎಂಬ ಪ್ರದರ್ಶನಗಳನ್ನೂ ಒಳಗೊಂಡಿರುತ್ತದೆ. ಉತ್ಖನನದ ಅವಶೇಷಗಳು, ಕಲಾಕೃತಿಗಳು, ವಾಸ್ತುಶಿಲ್ಪದ ತುಣುಕುಗಳು ಮತ್ತು ಇತರ ಮಹತ್ವದ ಆವಿಷ್ಕಾರಗಳು ಸೇರಿದಂತೆ ಕ್ರಿ.ಪೂ. 1200 ರಿಂದ ಕ್ರಿ.ಶ. 1200 ರವರೆಗಿನ ಪುರಾತತ್ವ ಪುರಾವೆಗಳ ಮೂಲಕ ಇದು ದೆಹಲಿಯ ಇತಿಹಾಸದ ಸಮಗ್ರ ಚಿತ್ರಣವನ್ನು ನೀಡಲಿದೆ. "ಮಹಾಭಾರತ ಸ್ಕ್ರಾಲ್ ಪೆವಿಲಿಯನ್ - ಅನಂತ್: 18ನೇ ಶತಮಾನದ ಅಪರೂಪದ ಮಹಾಭಾರತ ಸುರುಳಿ" ಭಾರತದ ಶ್ರೀಮಂತ ಮಹಾಕಾವ್ಯ ಮತ್ತು ಕಲಾತ್ಮಕ ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ಸಚಿತ್ರ ಸುರುಳಿಯನ್ನು ಪ್ರದರ್ಶಿಸಲಿದೆ.

ನವೆಂಬರ್ 21 ಮತ್ತು 22 ರಂದು, ನಾಲ್ಕು ವಿಷಯಾಧಾರಿತ ಗೋಷ್ಠಿಗಳು ನಡೆಯಲಿದ್ದು, ವಿದ್ವಾಂಸರು, ಶಿಕ್ಷಣ ತಜ್ಞರು, ವಿಷಯ ಪರಿಣತರು ಮತ್ತು ಸಾಂಸ್ಕೃತಿಕ ಪ್ರತಿನಿಧಿಗಳನ್ನು ಒಂದೆಡೆ ಸೇರಿಸಲಿವೆ. ಸಂಗೀತ ಮತ್ತು ಪ್ರದರ್ಶನ ಕಲೆಗಳು, ಜವಳಿ, ಪಾಕಪದ್ಧತಿ, ಸಾಂಪ್ರದಾಯಿಕ ಆಟಗಳಂತಹ ಸಾಂಸ್ಕೃತಿಕ ಅಭಿವ್ಯಕ್ತಿಗಳು; ಕಲೆ ಮತ್ತು ವಾಸ್ತುಶಿಲ್ಪದಲ್ಲಿನ ಹಂಚಿಕೆಯ ಸಂಪ್ರದಾಯಗಳು; ಲಿಪಿಗಳು ಮತ್ತು ಹಸ್ತಪ್ರತಿಗಳು ಸೇರಿದಂತೆ ಭಾಷೆ ಹಾಗೂ ಸಾಹಿತ್ಯಿಕ ಸಂಪ್ರದಾಯಗಳು; ಮತ್ತು ಮಠಗಳ ಪರಂಪರೆ ಹಾಗೂ ತಾತ್ವಿಕ ಸಂಪ್ರದಾಯಗಳ ಕುರಿತು ಚರ್ಚೆಗಳು ನಡೆಯಲಿವೆ.

 

*****


(ಪ್ರಕಟಣೆ ಐ.ಡಿ.: 2338642) ವಿಸಿಟರ್ ಕೌಂಟರ್ : 18