ಪ್ರಕಟಣಾ ದಿನಾಂಕ:
17 NOV 2026 2:46PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸರ್ಕಾರದ ಮುಖ್ಯಸ್ಥರಾಗಿ ಇಪ್ಪತ್ತೈದು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ, ಅವರ ನಾಯಕತ್ವದ ಅನುಭವಗಳಿಂದ ಕಲಿಯುವ ಉದ್ದೇಶದಿಂದ ನೀತಿ ಆಯೋಗವು ಇಂದು ನವದೆಹಲಿಯ ಭಾರತ್ ಮಂಟಪಂನಲ್ಲಿ “ಒಂದು ಧ್ಯೇಯವಾಗಿ ನಾಯಕತ್ವ” (ಲೀಡರ್ಶಿಪ್ ಆಸ್ ಎ ಮಿಷನ್) ಕುರಿತ ರಾಷ್ಟ್ರೀಯ ಕಾರ್ಯಾಗಾರವನ್ನು ಆಯೋಜಿಸಿತ್ತು. ಪ್ರಧಾನಮಂತ್ರಿಯವರು 2001ರ ಅಕ್ಟೋಬರ್ನಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಹಾಗೂ 2014ರ ಮೇ ತಿಂಗಳಲ್ಲಿ ಭಾರತದ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಅಂದಿನಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮುಖ್ಯಸ್ಥರಾಗಿ ಸತತವಾಗಿ ಆಡಳಿತದ ನೇತೃತ್ವ ವಹಿಸಿಕೊಂಡು ಬಂದಿದ್ದಾರೆ. ಈ ಅವಧಿಯುದ್ದಕ್ಕೂ ಅವರು ಸಾರ್ವಜನಿಕ ಹುದ್ದೆಯನ್ನು ಸೇವೆಯ ಧ್ಯೇಯವಾಗಿ ಪರಿಗಣಿಸಿ ಕಾರ್ಯನಿರ್ವಹಿಸಿದ್ದಾರೆ. ತಮ್ಮನ್ನು ‘ಪ್ರಧಾನ ಸೇವಕ’ ಎಂದು ಕರೆದುಕೊಳ್ಳುವ ಮೂಲಕ ಅವರು ಸರ್ಕಾರದ ಪ್ರತಿಯೊಂದು ಹುದ್ದೆಯ ಕಾರ್ಯನಿರ್ವಹಣೆಯ ಕೇಂದ್ರಬಿಂದುವಿನಲ್ಲಿ ನಾಗರಿಕರಿರಬೇಕು ಎಂಬುದನ್ನು ಪ್ರತಿಪಾದಿಸಿದ್ದಾರೆ. ಅಂತ್ಯೋದಯ, ಜನಭಾಗೀದಾರಿ ಹಾಗೂ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್’ ಎಂಬ ತತ್ವಗಳು ಕೇಂದ್ರ ಮತ್ತು ರಾಜ್ಯ ಮಟ್ಟಗಳಲ್ಲಿನ ಆಡಳಿತದ ದಿಕ್ಕನ್ನು ನಿರ್ಧರಿಸಿವೆ.
ಈ ಕಾರ್ಯಾಗಾರವು ಐದು ರಾಷ್ಟ್ರೀಯ ಕಾರ್ಯಾಗಾರಗಳ ಸರಣಿಯಲ್ಲಿ ಮೊದಲನೆಯದಾಗಿದೆ. ಈ ಸರಣಿಯಲ್ಲಿನ ಚರ್ಚೆಗಳು ಹಾಗೂ ಭಾಗವಹಿಸುವವರು ಹಂಚಿಕೊಳ್ಳುವ ನೇರ ಅನುಭವಗಳನ್ನು ಪ್ರಕರಣ ಅಧ್ಯಯನಗಳು ಮತ್ತು ಕಲಿಕಾ ಸಾಮಗ್ರಿಗಳ ರೂಪದಲ್ಲಿ ಸಿದ್ಧಪಡಿಸಿ, ನಾಗರಿಕ ಸೇವಾ ತರಬೇತಿ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳಿಗೆ ಒದಗಿಸಲಾಗುವುದು. ಈ ಸರಣಿಯ ಮೂಲಕ, ಈ ಇಪ್ಪತ್ತೈದು ವರ್ಷಗಳ ಕಲಿಕೆಯನ್ನು ಸಂಶೋಧನೆ ಮತ್ತು ಬೋಧನಾ ಸಾಮಗ್ರಿಗಳ ಮೂಲಕ ಮುಂದಕ್ಕೆ ಕೊಂಡೊಯ್ಯಲಾಗುವುದು, ಇದು 'ವಿಕಸಿತ ಭಾರತ @2047'ರತ್ತ ಸಾಗುವ ಮುಂಬರುವ ವರ್ಷಗಳಲ್ಲಿ ನೀತಿ ಮತ್ತು ಆಡಳಿತಕ್ಕೆ ದಿಕ್ಕನ್ನು ನಿರ್ಧರಿಸುತ್ತದೆ.
ಕಾರ್ಯಾಗಾರದಲ್ಲಿ 900ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದು, ಅವರಲ್ಲಿ 250 ಮಂದಿ ನೇರವಾಗಿ ಚರ್ಚೆಗಳಲ್ಲಿ ಭಾಗವಹಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಯದರ್ಶಿಗಳು ಹಾಗೂ ಹಿರಿಯ ಅಧಿಕಾರಿಗಳು, ಮಹತ್ವಾಕಾಂಕ್ಷಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು, ಸಮುದಾಯದ ಪಾಲುದಾರರು ಹಾಗೂ ರಾಷ್ಟ್ರೀಯ ಪ್ರಮುಖ ಯೋಜನೆಗಳ ಫಲಾನುಭವಿಗಳು ಇದರಲ್ಲಿ ಭಾಗವಹಿಸಿದ್ದರು. ದೇಶದಾದ್ಯಂತದ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ, ಕಾರ್ಯಾಗಾರದ ಕಲಾಪಗಳನ್ನು ಐಗಾಟ್ ಕರ್ಮಯೋಗಿ (iGOT Karmayogi) ವೇದಿಕೆ ಹಾಗೂ ಕೇಂದ್ರ ಮತ್ತು ರಾಜ್ಯ ಆಡಳಿತ ತರಬೇತಿ ಸಂಸ್ಥೆಗಳಲ್ಲಿಯೂ ನೇರ ಪ್ರಸಾರ ಮಾಡಲಾಗುತ್ತಿದೆ.
ಕಾರ್ಯಾಗಾರವು ರಾಷ್ಟ್ರಗಾನ ಮತ್ತು ರಾಷ್ಟ್ರಗೀತೆಯೊಂದಿಗೆ ಪ್ರಾರಂಭವಾಯಿತು. ಬಳಿಕ ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಅನುರಾಗ್ ಜೈನ್ ಸ್ವಾಗತ ಭಾಷಣ ಮಾಡಿದರು. ಪ್ರಧಾನಮಂತ್ರಿಯವರ 25 ವರ್ಷಗಳ ನಾಯಕತ್ವದಿಂದ ದೊರೆತ ಪಾಠಗಳನ್ನು ದಾಖಲಿಸಿ, ಭವಿಷ್ಯಕ್ಕಾಗಿ ಅವುಗಳನ್ನು ಸಾಂಸ್ಥಿಕ ಜ್ಞಾನವಾಗಿ ರೂಪಿಸುವುದು ಈ ಕಾರ್ಯಾಗಾರದ ಉದ್ದೇಶವಾಗಿದೆ ಎಂದು ಅವರು ಒತ್ತಿಹೇಳಿದರು.
ನಾಯಕತ್ವದ ಈ ಪಯಣದಿಂದ ದೊರೆತ ನಾಲ್ಕು ಪ್ರಮುಖ ಪಾಠಗಳನ್ನು ಅವರು ವಿವರಿಸಿದರು. ಮೊದಲನೆಯದಾಗಿ, ಶ್ರೇಣೀಕೃತ ಹುದ್ದೆಗಿಂತ ಧ್ಯೇಯಕ್ಕೆ ಆದ್ಯತೆ ನೀಡಬೇಕು. ಇದರಿಂದ ಗಮನವು ವ್ಯಕ್ತಿಗತ ನಾಯಕತ್ವದಿಂದ ಸಾಮೂಹಿಕ ಧ್ಯೇಯದತ್ತ ಹೊರಳುತ್ತದೆ. ಎರಡನೆಯದಾಗಿ, ಆಜ್ಞಾಪಿಸುವ ಮನೋಭಾವದ ಬದಲಿಗೆ ಸೇವಾಭಾವ ಇರಬೇಕು. ಸರತಿ ಸಾಲಿನ ಕೊನೆಯ ವ್ಯಕ್ತಿಗೂ ಆಡಳಿತದ ಸೌಲಭ್ಯಗಳು ತಲುಪುವಂತೆ ಮಾಡುವುದು ಇದರ ಮೂಲ ಆಶಯವಾಗಿರಬೇಕು. ಮೂರನೆಯದಾಗಿ, ಆಂತರಿಕ ದೃಢನಂಬಿಕೆಯು ಪ್ರತಿಕೂಲ ಪರಿಸ್ಥಿತಿಗಳಲ್ಲಿಯೂ ಸ್ಥೈರ್ಯ ತುಂಬುತ್ತದೆ ಮತ್ತು ಅವುಗಳನ್ನು ಸಮಾಜ ಪರಿವರ್ತನೆಯ ಅವಕಾಶಗಳಾಗಿ ಬದಲಿಸಲು ನೆರವಾಗುತ್ತದೆ. ನಾಲ್ಕನೆಯದಾಗಿ, ಬಲವಾದ ಸಂಸ್ಥೆಗಳು, ಸಮರ್ಥ ತಂಡಗಳು ಮತ್ತು ಸುಸ್ಥಿರ ವ್ಯವಸ್ಥೆಗಳ ಮೂಲಕ ನಿಜವಾದ ಸಬಲೀಕರಣವು ವೈಯಕ್ತಿಕ ನಾಯಕತ್ವವನ್ನೂ ಮೀರಿ ಉಳಿಯಬೇಕು.
ನೀತಿ ಆಯೋಗದ ಉಪಾಧ್ಯಕ್ಷ ಶ್ರೀ ಅಶೋಕ್ ಕುಮಾರ್ ಲಾಹಿರಿ ಅವರು ಆರಂಭಿಕ ಮಾತುಗಳನ್ನಾಡಿದರು. ಅವರು, “ಭಾರತದ ಅಭಿವೃದ್ಧಿಯ ಪಯಣಕ್ಕೆ ವೇಗ ನೀಡುವಲ್ಲಿ ಬಲಿಷ್ಠ ರಾಜಕೀಯ ಮತ್ತು ಆಡಳಿತಾತ್ಮಕ ನಾಯಕತ್ವದ ಪಾತ್ರ ನಿರ್ಣಾಯಕವಾಗಿದೆ. ನಮ್ಮ ಗೌರವಾನ್ವಿತ ಪ್ರಧಾನಮಂತ್ರಿಯವರ ಪರಿವರ್ತನಾತ್ಮಕ ದೂರದೃಷ್ಟಿಯು 2047ರ ವೇಳೆಗೆ ವಿಕಸಿತ ರಾಷ್ಟ್ರವಾಗುವ ಭಾರತದ ರಾಷ್ಟ್ರೀಯ ಆಶಯದಲ್ಲಿ ಮಹತ್ವದ ಬದಲಾವಣೆಗೆ ನಾಂದಿ ಹಾಡಿದೆ. ಅಭಿವೃದ್ಧಿ ಹೊಂದಿದ, ಸಮೃದ್ಧ ಹಾಗೂ ಜಾಗತಿಕವಾಗಿ ಸ್ಪರ್ಧಾತ್ಮಕ ರಾಷ್ಟ್ರವಾಗಿ ಭಾರತದ ಪರಿವರ್ತನೆಯನ್ನು ಇದು ಪ್ರತಿಬಿಂಬಿಸುತ್ತದೆ” ಎಂದು ಹೇಳಿದರು.
ವಾರ್ಷಿಕ ವಾಸ್ತವಿಕ ಜಿಡಿಪಿ ಬೆಳವಣಿಗೆಯನ್ನು ಶೇ. 7ರಿಂದ 10ರ ಮಟ್ಟದಲ್ಲಿ ನಿರಂತರವಾಗಿ ಕಾಯ್ದುಕೊಳ್ಳುವ ಗುರಿಯೊಂದಿಗೆ 2047ರ ವೇಳೆಗೆ 30ರಿಂದ 40 ಟ್ರಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಆರ್ಥಿಕತೆಯನ್ನು ನಿರ್ಮಿಸುವ ಹಾಗೂ ಪ್ರತಿ ವ್ಯಕ್ತಿಯ ಆದಾಯವನ್ನು 15,000ರಿಂದ 18,000 ಅಮೆರಿಕನ್ ಡಾಲರ್ಗಳಿಗೆ ಹೆಚ್ಚಿಸುವ ಮಹತ್ವಾಕಾಂಕ್ಷೆಯನ್ನು ಸಾಕಾರಗೊಳಿಸಲು ನೀತಿ ಆಯೋಗವು ಸಮಗ್ರ ಮಾರ್ಗಸೂಚಿಯನ್ನು ರೂಪಿಸಿದೆ ಎಂದು ಅವರು ತಿಳಿಸಿದರು.
ಉದ್ಘಾಟನಾ ಮುಖ್ಯ ಭಾಷಣ ಮಾಡಿದ ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಡಾ. ಪಿ. ಕೆ. ಮಿಶ್ರಾ ಅವರು, “ಭಾರತದ ಆಡಳಿತದ ಪಯಣವು ನಿರ್ಣಾಯಕ ನಾಯಕತ್ವದ ಶಕ್ತಿ ಮತ್ತು ದೃಷ್ಟಿಕೋನವನ್ನು ಕಾರ್ಯರೂಪಕ್ಕೆ ತರುವ ಸಾಮರ್ಥ್ಯವನ್ನು ಪ್ರದರ್ಶಿಸುವ ಮಹತ್ವದ ಮೈಲಿಗಲ್ಲುಗಳಿಂದ ಗುರುತಿಸಲ್ಪಟ್ಟಿದೆ. 2001 ರ ಕಚ್ ಭೂಕಂಪಕ್ಕೆ ತಕ್ಷಣದ ಸ್ಪಂದನೆಯಿಂದ ಹಿಡಿದು ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ದೇಶದ ಸಂಘಟಿತ ಪ್ರತಿಕ್ರಿಯೆಯವರೆಗೆ, ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯಲ್ಲಿ ಭಾರತದ ಹೆಜ್ಜೆಗುರುತನ್ನು ವಿಸ್ತರಿಸುವುದರಿಂದ ಹಿಡಿದು 'ಲಖ್ಪತಿ ದೀದಿ' ಉಪಕ್ರಮದ ಪರಿವರ್ತನಾಶೀಲ ಪ್ರಭಾವದವರೆಗೆ, ಬಲವಾದ ರಾಜಕೀಯ ಇಚ್ಛಾಶಕ್ತಿ, ಸ್ಪಂದನಾಶೀಲ ಆಡಳಿತ ಮತ್ತು ಧ್ಯೇಯ-ಆಧಾರಿತ ಆಡಳಿತವು ಜನರ ಜೀವನದಲ್ಲಿ ಹೇಗೆ ಅರ್ಥಪೂರ್ಣ ಬದಲಾವಣೆಯನ್ನು ತರಬಹುದು ಎಂಬುದನ್ನು ಈ ಕ್ರಮಗಳು ಪ್ರತಿಬಿಂಬಿಸುತ್ತವೆ” ಎಂದು ಹೇಳಿದರು.
ಕೋಟಕ್ ಮಹೀಂದ್ರಾ ಬ್ಯಾಂಕ್ನ ಸಂಸ್ಥಾಪಕ ಶ್ರೀ ಉದಯ್ ಕೋಟಕ್ ಅವರು, “ಗುಜರಾತ್ ಮುಖ್ಯಮಂತ್ರಿಯಾಗಿ ಹಾಗೂ ಬಳಿಕ ಭಾರತದ ಪ್ರಧಾನಮಂತ್ರಿಯಾಗಿ ಕಾರ್ಯನಿರ್ವಹಿಸಿದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆರ್ಥಿಕ ಬೆಳವಣಿಗೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಉದ್ಯಮಶೀಲತೆಯೇ ಪ್ರಮುಖ ಚಾಲಕಶಕ್ತಿ ಎಂಬುದನ್ನು ನಿರಂತರವಾಗಿ ಗುರುತಿಸಿದ್ದಾರೆ. ಉದ್ಯಮಶೀಲತೆಗೆ ಬೆಂಬಲ ನೀಡುವ ವ್ಯವಸ್ಥೆಗಳಿಗೆ ಸಾಂಸ್ಥಿಕ ಸ್ವರೂಪ ನೀಡಿರುವುದು, ಹಣಕಾಸು ಮತ್ತು ಉದ್ಯಮಶೀಲತೆಯ ಪರಿಸರ ವ್ಯವಸ್ಥೆಗಳನ್ನು ಬಲಪಡಿಸಿರುವುದು ಹಾಗೂ ಚೈತನ್ಯಶೀಲ ನವೋದ್ಯಮ (ಸ್ಟಾರ್ಟ್ಅಪ್) ವಲಯದ ಬೆಳವಣಿಗೆ - ಇವೆಲ್ಲವೂ ಈ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ” ಎಂದು ಹೇಳಿದರು.
ನೀತಿ ಆಯೋಗದ ಸದಸ್ಯರಾದ ಡಾ. ಆರ್. ಬಾಲಸುಬ್ರಮಣಿಯಂ ಅವರು ಕಾರ್ಯಾಗಾರದ ವಿನ್ಯಾಸ ಮತ್ತು ಸ್ವರೂಪವನ್ನು ವಿವರಿಸಿದರು. ನಿರ್ಧಾರಗಳು ಮತ್ತು ಕ್ರಮಗಳ ಮೂಲಕ ನಾಯಕತ್ವ ಹೇಗೆ ಅಭಿವ್ಯಕ್ತವಾಗುತ್ತದೆ ಎಂಬುದನ್ನು ಆಧರಿಸಿ ಈ ಕಾರ್ಯಾಗಾರವನ್ನು ರೂಪಿಸಲಾಗಿದೆ. ಅನುಭವದಿಂದ ವಿಶ್ಲೇಷಣೆಯತ್ತ ಮತ್ತು ವಿಶ್ಲೇಷಣೆಯಿಂದ ಕಾರ್ಯರೂಪಕ್ಕೆ ಕೊಂಡೊಯ್ಯುವ ರೀತಿಯಲ್ಲಿ ದಿನದ ಕಲಾಪಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಅವರು ತಿಳಿಸಿದರು. ಕಲಾಪಗಳು 'ಕಲಿ, ವಿಶ್ಲೇಷಿಸು, ಅವಲೋಕಿಸು, ಅನ್ವಯಿಸು ಮತ್ತು ಬದ್ಧನಾಗು' (Learn, Analyse, Reflect, Apply and Commit) ಎಂಬ ಐದು ಹಂತಗಳನ್ನು ಅನುಸರಿಸಿದವು. ಇದರ ಅಡಿಯಲ್ಲಿ ಪ್ರತಿನಿಧಿಗಳು ಮಹತ್ವದ ನಿರ್ಧಾರಗಳ ನೇರ ಅನುಭವಗಳಿಂದ ಕಲಿತರು, ಸರ್ಕಾರ, ಶಿಕ್ಷಣ ತಜ್ಞರು ಮತ್ತು ನಾಗರಿಕರನ್ನು ಒಳಗೊಂಡ ಚರ್ಚೆಗಳ ಮೂಲಕ ಅವುಗಳನ್ನು ವಿಶ್ಲೇಷಿಸಿದರು, ಸಾರ್ವಜನಿಕ ನಾಯಕತ್ವದ ಶಾಶ್ವತ ಪದ್ಧತಿಗಳ ಕುರಿತು ಅವಲೋಕಿಸಿದರು, ತಮ್ಮದೇ ಕೆಲಸದ ಸವಾಲುಗಳಿಗೆ ಈ ಕಲಿಕೆಯನ್ನು ಅನ್ವಯಿಸಿದರು ಮತ್ತು ತಮ್ಮ ನಾಯಕತ್ವದ ಅಭ್ಯಾಸಗಳಲ್ಲಿ ನಿರ್ದಿಷ್ಟ ಬದಲಾವಣೆಗಳಿಗೆ ಬದ್ಧರಾದರು. ಭಾರತೀಯ ನಿರ್ಧಾರಗಳು ಮತ್ತು ಸಂಸ್ಥೆಗಳನ್ನು ಆಧರಿಸಿ ಸಾರ್ವಜನಿಕ ನಾಯಕತ್ವದ ಕುರಿತು ಭಾರತೀಯ ಜ್ಞಾನ ಭಂಡಾರವನ್ನು ನಿರ್ಮಿಸಲು ಈ ಕಾರ್ಯಾಗಾರವು ಪ್ರಯತ್ನಿಸುತ್ತದೆ, ಇದು ನಾಗರಿಕ ಸೇವಕರಿಗೆ ತರಬೇತಿ ನೀಡುವ ವಿಧಾನವನ್ನು ಮತ್ತು 'ವಿಕಸಿತ ಭಾರತ 2047'ರತ್ತ ಸಾಗುವ ವರ್ಷಗಳಲ್ಲಿ ಅವರು ಮುನ್ನಡೆಸುವ ರೀತಿಯನ್ನು ರೂಪಿಸುತ್ತದೆ ಎಂದು ಅವರು ಹೇಳಿದರು.
‘ನಾಯಕತ್ವದ ಕ್ಷಣಗಳು’ (ಲೀಡರ್ಶಿಪ್ ಮೊಮೆಂಟ್ಸ್) ಅಧಿವೇಶನದಲ್ಲಿ ನಾಲ್ವರು ಭಾಷಣಕಾರರು ತಮ್ಮ ಅನುಭವಗಳನ್ನು ಹಂಚಿಕೊಂಡರು. ನಾಯಕತ್ವದ ಪ್ರಮುಖ ಕ್ಷಣಗಳು ಹಾಗೂ ಅವುಗಳಿಂದ ದೊರೆತ ಪಾಠಗಳ ಕುರಿತು ಅವರು ನೇರ ಅನುಭವಗಳನ್ನು ವಿವರಿಸಿದರು.
ಗುಜರಾತ್ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಪ್ರಧಾನ ಕಾರ್ಯದರ್ಶಿ ಶ್ರೀ ರಾಜೀವ್ ಟೋಪ್ನೋ ಅವರು 2001ರ ಭೂಕಂಪದ ಬಳಿಕ ಕಚ್ನ ಪುನರ್ನಿರ್ಮಾಣದ ಕುರಿತು ಮಾತನಾಡಿದರು. 2001ರ ಕಚ್ ಪುನರ್ನಿರ್ಮಾಣವು ಕೇವಲ ಸಹಜ ಸ್ಥಿತಿಯನ್ನು ಮರುಸ್ಥಾಪಿಸಿದ ಕಥೆಯಲ್ಲ; ಜನಭಾಗೀದಾರಿ, ಸಾಂಸ್ಥಿಕ ಬಲ ಮತ್ತು ಸಾಮೂಹಿಕ ಸಂಕಲ್ಪದ ಮೂಲಕ ಹೊಸ ಸಹಜ ಸ್ಥಿತಿಯನ್ನು (ನ್ಯೂ ನಾರ್ಮಲ್) ರೂಪಿಸಿದ ಕಥೆಯಾಗಿದೆ ಎಂದು ಅವರು ಹೇಳಿದರು. ಪರಿಣಾಮಕಾರಿ ಆಡಳಿತಕ್ಕೆ ಅಗತ್ಯವಾದ ನಾಲ್ಕು ಪ್ರಮುಖ ಆಧಾರಸ್ತಂಭಗಳನ್ನು ಈ ಅನುಭವವು ಎತ್ತಿ ತೋರಿಸಿತು. ಅವುಗಳೆಂದರೆ, ದೃಷ್ಟಿಕೋನದಲ್ಲಿ ಸ್ಪಷ್ಟತೆ ಮತ್ತು ನಿರ್ಧಾರ ಕೈಗೊಳ್ಳುವ ದೃಢತೆ, ಒಗ್ಗಟ್ಟು ಮತ್ತು ಬದ್ಧತೆ, ರಾಜ್ಯದ ಬೆಂಬಲದೊಂದಿಗೆ ಜನರ ಪಾಲ್ಗೊಳ್ಳುವಿಕೆ ಹಾಗೂ ಬಲಿಷ್ಠ ಸಂಸ್ಥೆಗಳ ನಿರ್ಮಾಣ.
ಮಾಜಿ ಕೇಂದ್ರ ಆರೋಗ್ಯ ಕಾರ್ಯದರ್ಶಿ, ಯುಪಿಎಸ್ಸಿಯ ಮಾಜಿ ಅಧ್ಯಕ್ಷೆ ಹಾಗೂ ಸಾಂಕ್ರಾಮಿಕ ಸಿದ್ಧತೆ ಮತ್ತು ಪ್ರತಿಕ್ರಿಯೆ ಕುರಿತ ಸ್ವತಂತ್ರ ಸಮಿತಿಯ ಮಾಜಿ ಸದಸ್ಯೆ ಶ್ರೀಮತಿ ಪ್ರೀತಿ ಸುದನ್ ಅವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕೋವಿಡ್-19 ಸಾಂಕ್ರಾಮಿಕಕ್ಕೆ ಭಾರತದ ಪ್ರತಿಕ್ರಿಯೆಯು ಸರ್ಕಾರದ ಎಲ್ಲ ಅಂಗಗಳ ಸಮಗ್ರ ಪ್ರಯತ್ನದಿಂದ ಇಡೀ ಸಮಾಜದ ಪಾಲ್ಗೊಳ್ಳುವಿಕೆಯ ಜನಾಂದೋಲನವಾಗಿ ರೂಪುಗೊಂಡಿತು ಎಂದು ಹೇಳಿದರು. ವೈದ್ಯರು, ದಾದಿಯರು ಮತ್ತು ಮುಂಚೂಣಿ ಕಾರ್ಯಕರ್ತರ ಸುರಕ್ಷತೆಗೆ ಆದ್ಯತೆ ನೀಡಲಾಯಿತು. ತಂತ್ರಜ್ಞಾನವನ್ನು ಈ ಪ್ರಯತ್ನದ ಬೆನ್ನೆಲುಬಾಗಿಸಿಕೊಂಡು, ಜನಾಂದೋಲನದ ಮೂಲಕ ಸಾರ್ವಜನಿಕರ ಪಾಲ್ಗೊಳ್ಳುವಿಕೆಗೆ ಉತ್ತೇಜನ ನೀಡಲಾಯಿತು. ಈ ಮೂಲಕ ಭಾರತವು ಸಂಘಟಿತವಾಗಿ ಸಾಂಕ್ರಾಮಿಕವನ್ನು ಎದುರಿಸಿತು. ‘ಲಸಿಕೆ ಮೈತ್ರಿ’ ಉಪಕ್ರಮದ ಮೂಲಕ ಜಾಗತಿಕ ಒಗ್ಗಟ್ಟಿನ ಬದ್ಧತೆಯನ್ನು ಮತ್ತಷ್ಟು ವಿಸ್ತರಿಸಿದ ಭಾರತವು, 100ಕ್ಕೂ ಹೆಚ್ಚು ದೇಶಗಳಿಗೆ ಸುಮಾರು 30 ಕೋಟಿ ಲಸಿಕೆ ಡೋಸ್ಗಳನ್ನು ಪೂರೈಸಿತು ಎಂದು ಅವರು ಹೇಳಿದರು.
ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಮಾಜಿ ಕಾರ್ಯದರ್ಶಿ ಶ್ರೀ ಶೈಲೇಶ್ ಕುಮಾರ್ ಸಿಂಗ್ ಅವರು, “ಒಂದು ದೂರದೃಷ್ಟಿಯನ್ನು ಹಿಂದೆಂದೂ ಕಾಣದ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ತರಲು ಸಾಧ್ಯ ಎಂಬುದಕ್ಕೆ ‘ಲಖ್ಪತಿ ದೀದಿ’ ಉಪಕ್ರಮವು ಉತ್ತಮ ಉದಾಹರಣೆಯಾಗಿದೆ ಎಂದರು. ಪ್ರಧಾನಮಂತ್ರಿಯವರು ಗ್ರಾಮೀಣ ಮಹಿಳೆಯರನ್ನು ಉದ್ಯಮಿಗಳಾಗಿ, ಉತ್ಪಾದಕರಾಗಿ ಮತ್ತು ಸೇವಾ ಪೂರೈಕೆದಾರರಾಗಿ ಗುರುತಿಸಿ, ಈ ಉಪಕ್ರಮಕ್ಕೆ ಸ್ಪಷ್ಟವಾದ ಹಾಗೂ ಮಹತ್ವಾಕಾಂಕ್ಷೆಯ ಗುರಿಯನ್ನು ನೀಡಿದ್ದಾರೆ. ‘ಲಖ್ಪತಿ ದೀದಿ’ ಉಪಕ್ರಮವು ಆದಾಯ ಗಳಿಕೆಗೆ ಮಾತ್ರ ಸೀಮಿತವಾಗಿಲ್ಲ. ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ, ಘನತೆ ಹಾಗೂ ಕುಟುಂಬ ಮತ್ತು ಸಮಾಜದಲ್ಲಿ ಮನ್ನಣೆ ದೊರಕಿಸಿಕೊಡುವುದೂ ಇದರ ಉದ್ದೇಶವಾಗಿದೆ. ನನ್ನ ದೃಷ್ಟಿಯಲ್ಲಿ, ಅದುವೇ ಈ ಉಪಕ್ರಮದ ದೊಡ್ಡ ಉದ್ದೇಶವಾಗಿದೆ” ಎಂದು ಹೇಳಿದರು.
ಇಸ್ರೋದ ಮಾಜಿ ಅಧ್ಯಕ್ಷರು ಹಾಗೂ ಭಾರತ ಸರ್ಕಾರದ ಬಾಹ್ಯಾಕಾಶ ಇಲಾಖೆಯ ಮಾಜಿ ಕಾರ್ಯದರ್ಶಿ ಡಾ. ಎಸ್. ಸೋಮನಾಥ್ ಅವರು, ಉದಾರೀಕೃತ ವಿದೇಶಿ ನೇರ ಹೂಡಿಕೆ (ಎಫ್ಡಿಐ) ನಿಯಮಗಳು ಖಾಸಗಿ ವಲಯದ ಪಾಲ್ಗೊಳ್ಳುವಿಕೆಗೆ ಹೊಸ ಅವಕಾಶಗಳನ್ನು ತೆರೆದಿದ್ದು, ಬಾಹ್ಯಾಕಾಶ ಕ್ಷೇತ್ರವು ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುವ ವಲಯವಾಗಿ ಹೊರಹೊಮ್ಮಲು ಅನುವು ಮಾಡಿಕೊಟ್ಟಿವೆ ಎಂದು ಹೇಳಿದರು. ಖಾಸಗಿ ವಲಯದ ಸಂಸ್ಥೆಗಳಿಗೆ ತನ್ನ ಪರಿಣತಿ, ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ಒದಗಿಸುವ ಮೂಲಕ ಈ ಪರಿವರ್ತನೆಯನ್ನು ಸುಗಮಗೊಳಿಸುವಲ್ಲಿ ಇಸ್ರೋ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಅವರು ತಿಳಿಸಿದರು. ಮುಂದಿನ ದಿನಗಳಲ್ಲಿ ಭಾರತದ ಬಾಹ್ಯಾಕಾಶ ದೃಷ್ಟಿಕೋನ 2047 ದೇಶದ ವೈಜ್ಞಾನಿಕ ಸಾಮರ್ಥ್ಯಗಳನ್ನು ಮತ್ತಷ್ಟು ಹೆಚ್ಚಿಸುವುದರ ಜೊತೆಗೆ, ಜಾಗತಿಕ ಬಾಹ್ಯಾಕಾಶ ಶಕ್ತಿಯಾಗಿ ಭಾರತದ ಸ್ಥಾನವನ್ನು ಬಲಪಡಿಸಲಿದೆ ಎಂದು ಅವರು ಹೇಳಿದರು.
ಅಧಿವೇಶನದ ನಂತರ, ಪ್ರತಿನಿಧಿಗಳು 'ಕೇಸ್ ಕ್ಲಿನಿಕ್'ನಲ್ಲಿ ಭಾಗವಹಿಸಿದರು, ಅಲ್ಲಿ ಪ್ರತಿಯೊಂದು ಗುಂಪು ತನಗೆ ನಿಯೋಜಿಸಲಾದ ಘಟನೆಯ ನಿರ್ದಿಷ್ಟ ನಿರ್ಧಾರವನ್ನು ಪರಿಶೀಲಿಸಿತು. ಪ್ರತಿಯೊಂದು ಗುಂಪು ಸರ್ಕಾರಿ ಅಧಿಕಾರಿಗಳು, ಸಮುದಾಯ ಪಾಲುದಾರರು ಮತ್ತು ವಿದ್ಯಾರ್ಥಿಗಳನ್ನು ಒಳಗೊಂಡಿತ್ತು, ಮತ್ತು ಸಾಮರ್ಥ್ಯ ವರ್ಧನೆ ಆಯೋಗದ (ಕೆಪಾಸಿಟಿ ಬಿಲ್ಡಿಂಗ್ ಕಮಿಷನ್) 'ಅಮೃತ್ ಜ್ಞಾನ ಕೋಶ' ಉಪಕ್ರಮದ ಅಡಿಯಲ್ಲಿ ತರಬೇತಿ ಪಡೆದ ಕೇಸ್ ರೈಟರ್ಗಳು ಅವರಿಗೆ ಮಾರ್ಗದರ್ಶನ ನೀಡಿದರು. ಗುಂಪು ಚರ್ಚೆಗಳು ಮತ್ತು ಭಾಷಣಕಾರರು ಹಂಚಿಕೊಂಡ ನೇರ ಅನುಭವಗಳನ್ನು ಒಟ್ಟುಗೂಡಿಸಿ ಸಾಮರ್ಥ್ಯ ವರ್ಧನೆ ಆಯೋಗವು ಕೇಸ್ ಸ್ಟಡಿಗಳಾಗಿ ಅಭಿವೃದ್ಧಿಪಡಿಸಲಿದೆ ಮತ್ತು ನಾಗರಿಕ ಸೇವಕರು, ತರಬೇತಿ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳ ಬಳಕೆಗಾಗಿ 'ಐಗಾಟ್ ಕರ್ಮಯೋಗಿ' ವೇದಿಕೆಯಲ್ಲಿ ಲಭ್ಯವಾಗುವಂತೆ ಮಾಡಲಿದೆ.
ದಿನದ ಮುಂದಿನ ಭಾಗದಲ್ಲಿ ‘ವಿಕಸಿತ ಭಾರತಕ್ಕಾಗಿ ನಾಯಕತ್ವ’ ಎಂಬ ವಿಷಯದ ಕುರಿತು ಚರ್ಚಾಗೋಷ್ಠಿ ನಡೆಯಲಿದ್ದು, ಸರ್ಕಾರಿ ಅಧಿಕಾರಿಗಳು 'ಅಪ್ಲಿಕೇಶನ್ ಕ್ಲಿನಿಕ್'ನಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಪುಟ ಕಾರ್ಯದರ್ಶಿ ಡಾ. ಟಿ.ವಿ. ಸೋಮನಾಥನ್ ಅವರು ‘ಕರ್ಮಯೋಗಿ ಸಂಕಲ್ಪ’ವನ್ನು ಬಿಡುಗಡೆ ಮಾಡಿ ಸಮಾರೋಪ ಭಾಷಣ ಮಾಡಲಿದ್ದಾರೆ.
*****