ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
azadi ka amrit mahotsav

ನಾಳೆ 'ರಾಷ್ಟ್ರವ್ಯಾಪಿ ಡಿಜಿಟಲ್ ಲೈಫ್ ಪ್ರಮಾಣಪತ್ರ ಅಭಿಯಾನ-5' ಅನ್ನು ಅಧಿಕೃತವಾಗಿ  ಉದ್ಘಾಟಿಸಲಿರುವ ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್


ದೇಶಾದ್ಯಂತ 2,000ಕ್ಕೂ ಅಧಿಕ ನಗರಗಳು ಮತ್ತು ಪಟ್ಟಣಗಳನ್ನು ಒಳಗೊಳ್ಳಲಿರುವ ಈ ಅಭಿಯಾನ

ಪ್ರಕಟಣಾ ದಿನಾಂಕ: 05 NOV 2026 3:13PM by PIB Bengaluru

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂ ವಿಜ್ಞಾನ ಸಚಿವಾಲಯದ (ಸ್ವತಂತ್ರ ಹೊಣೆಗಾರಿಕೆ) ಕೇಂದ್ರ ರಾಜ್ಯ ಸಚಿವರು; ಪ್ರಧಾನ ಮಂತ್ರಿ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯ, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಇಲಾಖೆಗಳ ರಾಜ್ಯ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು, 2026ರ ನವೆಂಬರ್ 6ರಂದು ನವದೆಹಲಿಯ ರೈಸಿನಾ ರಸ್ತೆಯಲ್ಲಿರುವ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ 'ರಾಷ್ಟ್ರವ್ಯಾಪಿ ಡಿಜಿಟಲ್ ಲೈಫ್ ಪ್ರಮಾಣಪತ್ರ (ಡಿ.ಎಲ್.ಸಿ) ಅಭಿಯಾನ-5' ಅನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ.

ಈ ಅಭಿಯಾನವನ್ನು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯದ ಅಧೀನದಲ್ಲಿರುವ 'ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ'ಯು (ಡಿಒಪಿಪಿ ಡಬ್ಲೂ) ಆಯೋಜಿಸಿದೆ. ಒಂದು ತಿಂಗಳ ಕಾಲ ನಡೆಯಲಿರುವ ಈ ಅಭಿಯಾನವು 2026ರ ನವೆಂಬರ್ 30ರವರೆಗೆ ಮುಂದುವರಿಯಲಿದ್ದು, ದೇಶಾದ್ಯಂತ 2 ಸಾವಿರಕ್ಕೂ ಅಧಿಕ ನಗರಗಳು ಮತ್ತು ಪಟ್ಟಣಗಳನ್ನು ಒಳಗೊಳ್ಳಲಿದೆ. ಈ ಉಪಕ್ರಮದ ಉದ್ದೇಶ ಡಿಜಿಟಲ್ ತಂತ್ರಜ್ಞಾನದ ಮೂಲಕ, ವಿಶೇಷವಾಗಿ 'ಜೀವನ್ ಪ್ರಮಾಣ' ಆ್ಯಪ್‌ನಲ್ಲಿರುವ 'ಮುಖ ಗುರುತಿಸುವಿಕೆ' ತಂತ್ರಜ್ಞಾನ ಬಳಸಿಕೊಂಡು, ಪಿಂಚಣಿದಾರರು ತಮ್ಮ ಜೀವಂತ ಪ್ರಮಾಣಪತ್ರಗಳನ್ನು ಸಲ್ಲಿಸುವ ಪ್ರಕ್ರಿಯೆ ಹೆಚ್ಚು ಸುಲಭ, ಅನುಕೂಲಕರ ಮತ್ತು ತೊಂದರೆರಹಿತವನ್ನಾಗಿ ಮಾಡುವುದಾಗಿದೆ.

ಈ ಅಭಿಯಾನವನ್ನು ಸಾರ್ವಜನಿಕ ವಲಯದ ಬ್ಯಾಂಕುಗಳು, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ), ಯುಐಡಿಎಐ , ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY), ಪಿಂಚಣಿದಾರರ ಕಲ್ಯಾಣ ಸಂಘಗಳು ಹಾಗೂ ರಕ್ಷಣೆ, ರೈಲ್ವೆ, ಅಂಚೆ, ದೂರಸಂಪರ್ಕ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ ಒ) ಮತ್ತು ರಾಜ್ಯ ಸರ್ಕಾರಗಳಂತಹ ಪ್ರಮುಖ ಸಚಿವಾಲಯಗಳು ಹಾಗೂ ಇಲಾಖೆಗಳ ಸಹಯೋಗದೊಂದಿಗೆ ನಡೆಸಲಾಗುವುದು.

80 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಹಿರಿಯ ಪಿಂಚಣಿದಾರರು, ಮಹಿಳಾ ಪಿಂಚಣಿದಾರರು ಮತ್ತು ಆರೋಗ್ಯ ಸಂಬಂಧಿತ ಸಮಸ್ಯೆ ಎದುರಿಸುತ್ತಿರುವವರಿಗೆ ವಿಶೇಷ ಆದ್ಯತೆ ನೀಡಲಾಗುವುದು. ವಯಸ್ಸು ಅಥವಾ ಅನಾರೋಗ್ಯದ ಕಾರಣದಿಂದಾಗಿ ಅಭಿಯಾನ ನಡೆಯುವ ಸ್ಥಳಗಳಿಗೆ ಭೇಟಿ ನೀಡಲು ಸಾಧ್ಯವಾಗದ ಪಿಂಚಣಿದಾರರಿಗೆ, ಅವರ ಮನೆ ಬಾಗಿಲಲ್ಲೇ ಸೇವೆಗಳನ್ನು ಒದಗಿಸಲಾಗುವುದು.

ಉದ್ಘಾಟನಾ ಸಮಾರಂಭದಲ್ಲಿ, ಡಾ. ಜಿತೇಂದ್ರ ಸಿಂಗ್ ಅವರು 'ರಾಷ್ಟ್ರವ್ಯಾಪಿ ಡಿಜಿಟಲ್ ಜೀವಂತ ಪ್ರಮಾಣಪತ್ರ ಅಭಿಯಾನ-4.0'ರ ಅವಧಿಯಲ್ಲಿ ಸಾಧಿಸಿದ ಪ್ರಗತಿಗಳು ಮತ್ತು ಕೈಗೊಂಡ ಉಪಕ್ರಮಗಳನ್ನು ಒಳಗೊಂಡ 'ಸಂಗ್ರಹ ಕೈಪಿಡಿ' ಹಾಗೂ 'ಕಾಫಿ ಟೇಬಲ್ ಇ-ಪುಸ್ತಕ'ವನ್ನು ಬಿಡುಗಡೆ ಮಾಡಲಿದ್ದಾರೆ.

ಅಭಿಯಾನದಲ್ಲಿ ಭಾಗವಹಿಸುವ ಸಚಿವಾಲಯಗಳು, ಇಲಾಖೆಗಳು, ಬ್ಯಾಂಕುಗಳು ಮತ್ತು ಇತರ ಸಂಬಂಧಿತ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಹಾಗೂ ಪಿಂಚಣಿದಾರರ ಸಂಘಗಳ ಪ್ರತಿನಿಧಿಗಳು ಈ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

 

*****


(ಪ್ರಕಟಣೆ ಐ.ಡಿ.: 2333073) ವಿಸಿಟರ್ ಕೌಂಟರ್ : 30
ಪ್ರಕಟಣೆಯನ್ನು ಇದರಲ್ಲಿ ಓದಿ: English , Khasi , Urdu , Marathi , हिन्दी , Bengali-TR , Assamese , Gujarati , Tamil , Telugu , Malayalam