ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
azadi ka amrit mahotsav

ಭಾರತ-ನ್ಯೂಜಿಲ್ಯಾಂಡ್ ಮುಕ್ತ ವ್ಯಾಪಾರ ಒಪ್ಪಂದವು ವಿಜಯದಶಮಿಯ ದಿನವಾದ ಅಕ್ಟೋಬರ್ 20, 2026 ರಿಂದ ಜಾರಿಗೆ; ಭಾರತೀಯ ರಫ್ತುದಾರರಿಗೆ ಹೊಸ ಅವಕಾಶಗಳ ಬಾಗಿಲು ತೆರೆಯುತ್ತಿವೆ


ನ್ಯೂಜಿಲ್ಯಾಂಡ್ ಮಾರುಕಟ್ಟೆಗೆ 100% ಸುಂಕ-ರಹಿತ ಪ್ರವೇಶ: ಭಾರತದ ಎಂಎಸ್‌ಎಂಇಗಳು, ಕುಶಲಕರ್ಮಿಗಳು, ರೈತರು ಮತ್ತು ಮಹಿಳಾ ಉದ್ಯಮಿಗಳಿಗೆ ಹೊಸ ಅವಕಾಶ ಸೃಷ್ಟಿ: ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್

ಭಾರತದಿಂದ ನ್ಯೂಜಿಲ್ಯಾಂಡಿಗೆ ಮೊದಲ 'ಜೆಸಿಬಿ ಯಂತ್ರ' ರಫ್ತಿಗೆ ಚಾಲನೆ ನೀಡಿದ ಭಾರತ

ಭಾರತ-ನ್ಯೂಜಿಲ್ಯಾಂಡ್ ಎಫ್ ಟಿ ಎ ಒಪ್ಪಂದದಡಿ ಭಾರತದಲ್ಲಿ 20 ಶತಕೋಟಿ ಯುಎಸ್ ಡಾಲರ್ ಹೂಡಿಕೆಗೆ ನ್ಯೂಜಿಲ್ಯಾಂಡ್ ಬದ್ಧತೆ

ಪ್ರಕಟಣಾ ದಿನಾಂಕ: 19 OCT 2026 7:27PM by PIB Bengaluru

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಮತ್ತು ನ್ಯೂಜಿಲ್ಯಾಂಡ್ ನ ವ್ಯಾಪಾರ ಮತ್ತು ಹೂಡಿಕೆ ಸಚಿವ ಗೌರವಾನ್ವಿತ ಟಾಡ್ ಮೆಕ್ಲೇ ಅವರು ಇಂದು ಜಂಟಿಯಾಗಿ ವರ್ಚುವಲ್ ಸಮಾವೇಶದ ಮೂಲಕ, ಭಾರತ-ನ್ಯೂಜಿಲ್ಯಾಂಡ್ ಮುಕ್ತ ವ್ಯಾಪಾರ ಒಪ್ಪಂದವು (ಎಫ್ ಟಿ ಎ) ವಿಜಯದಶಮಿಯ ದಿನವಾದ, ಅಕ್ಟೋಬರ್ 20, 2026 ರಿಂದ ಜಾರಿಗೆ ಬರಲಿದೆ ಎಂದು ಘೋಷಿಸಿದರು. ಈ ದಿನವು ವಿಜಯ ಮತ್ತು ಹೊಸ ಆರಂಭಗಳನ್ನು ಪ್ರತಿಬಿಂಬಿಸುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್, "ನಮ್ಮದು ಮೈದಾನದ ಒಳಗೂ ಮತ್ತು ಹೊರಗೂ ಗೆಲುವಿನ ಪಾಲುದಾರಿಕೆಯಾಗಿದೆ. ಈ ಒಪ್ಪಂದದ ಯಶಸ್ಸು ಸೃಷ್ಟಿಸುವ ಅವಕಾಶಗಳು ಮತ್ತು ಭಾರತ ಹಾಗೂ ನ್ಯೂಜಿಲ್ಯಾಂಡ್ ನ ಜನರ ಜೀವನದಲ್ಲಿ ತರುವ ಬದಲಾವಣೆಯ ಆಧಾರದ ಮೇಲೆ ಅಳೆಯಲ್ಪಡುತ್ತದೆ. ಭಾರತಕ್ಕೆ, ನ್ಯೂಜಿಲ್ಯಾಂಡ್ ಮಾರುಕಟ್ಟೆಗೆ ದೊರೆತಿರುವ 100% ಸುಂಕ-ರಹಿತ ಪ್ರವೇಶವು ನಮ್ಮ ರಫ್ತುದಾರರಿಗೆ, ವಿಶೇಷವಾಗಿ ಎಂಎಸ್ಎಂ ಇ ಉದ್ಯಮಗಳು, ಕುಶಲಕರ್ಮಿಗಳು, ರೈತರು ಮತ್ತು ಮಹಿಳಾ ಉದ್ಯಮಿಗಳಿಗೆ ಹೊಸ ಅವಕಾಶಗಳನ್ನು ನೀಡುತ್ತದೆ. ನಮ್ಮ ರೈತರಿಗೆ ಈ ಒಪ್ಪಂದವು ಸೂಕ್ತ ಸುರಕ್ಷತಾ ಕ್ರಮಗಳೊಂದಿಗೆ ಹೊಸ ಅವಕಾಶಗಳನ್ನು ತರುತ್ತದೆ. ಸೇಬು, ಕಿವಿ ಹಣ್ಣು ಮತ್ತು ಜೇನುತುಪ್ಪಕ್ಕಾಗಿ ಕಾರ್ಯಾಚರಣೆ ಯೋಜನೆಗಳು, ಶ್ರೇಷ್ಠತಾ  ಕೇಂದ್ರಗಳ ಸ್ಥಾಪನೆ, ತೋಟಗಳ ಉತ್ತಮ ನಿರ್ವಹಣೆ, ಕೊಯ್ಲಿನ ನಂತರದ ನಷ್ಟ ತಡೆಯುವುದು ಮತ್ತು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವ 'ಕೃಷಿ ಉತ್ಪಾದಕತೆ ಪಾಲುದಾರಿಕೆ' ದೇಶಾದ್ಯಂತ ರೈತರ ಆದಾಯವನ್ನು ಹೆಚ್ಚಿಸಲು ಬೆಂಬಲಿಸುತ್ತದೆ. ಭಾರತವು ತನ್ನ 100 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುವ ವೇಳೆಗೆ ಸ್ಪರ್ಧಾತ್ಮಕತೆ, ನಾವೀನ್ಯತೆ, ಉತ್ಪಾದನಾ ಸಾಮರ್ಥ್ಯ ಮತ್ತು ಸಮಗ್ರ ಸಮೃದ್ಧಿಯ ಮೇಲೆ ನಿರ್ಮಿಸಲಾದ 'ವಿಕಸಿತ ಭಾರತ 2047' ಎಂಬ ಗೌರವಾನ್ವಿತ ಪ್ರಧಾನಮಂತ್ರಿಯವರ ದೃಷ್ಟಿಕೋನಕ್ಕೆ ಈ ಒಪ್ಪಂದವು ಪೂರಕವಾಗಿದೆ" ಎಂದು ಹೇಳಿದರು.

ನ್ಯೂಜಿಲ್ಯಾಂಡ್ ನ ವ್ಯಾಪಾರ ಮತ್ತು ಹೂಡಿಕೆ ಸಚಿವ ಗೌರವಾನ್ವಿತ ಟಾಡ್ ಮೆಕ್ಲೇ ಮಾತನಾಡಿ, "ಭಾರತ ಮತ್ತುಜ ನ್ಯೂಜಿಲ್ಯಾಂಡ್ ಮುಕ್ತ ವ್ಯಾಪಾರ ಒಪ್ಪಂದದ ಜಾರಿಯು ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಒಂದು ಐತಿಹಾಸಿಕ ಕ್ಷಣವಾಗಿದೆ. ನ್ಯೂಜಿಲ್ಯಾಂಡ್ ರಫ್ತುದಾರರಿಗೆ, ಈ ಎಫ್ಟಿಎ 1.4 ಶತಕೋಟಿ ಗ್ರಾಹಕರನ್ನು ಹೊಂದಿರುವ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯ ಬಾಗಿಲನ್ನು ತೆರೆಯುತ್ತದೆ. ನ್ಯೂಜಿಲ್ಯಾಂಡಿನ ಪ್ರಸ್ತುತ ಭಾರತಕ್ಕೆ ಮಾಡುವ ರಫ್ತುಗಳು ಸುಂಕ ರದ್ದತಿ ಅಥವಾ ಗಮನಾರ್ಹ ಸುಂಕ ಕಡಿತದ ಪ್ರಯೋಜನವನ್ನು ಪಡೆಯುತ್ತವೆ. ಅದೇ ಸಮಯದಲ್ಲಿ, ಎಲ್ಲಾ ಭಾರತೀಯ ಸರಕುಗಳು ನ್ಯೂಜಿಲ್ಯಾಂಡ್ ಗೆ ಸುಂಕ ರಹಿತವಾಗಿ ಪ್ರವೇಶಿಸಲು ಸಾಧ್ಯವಾಗುತ್ತದೆ. ಇದು ಭಾರತೀಯ ರಫ್ತುದಾರರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ನ್ಯೂಜಿಲ್ಯಾಂಡ್ನ ಇತರ ಎಫ್ ಟಿಎ ಪಾಲುದಾರರೊಂದಿಗೆ ಸಮಾನ ಅವಕಾಶವನ್ನು ನೀಡುತ್ತದೆ. ಈ ಒಪ್ಪಂದದ ಯಶಸ್ಸು ಅಂತಿಮವಾಗಿ ಇದು ಸೃಷ್ಟಿಸುವ ಅವಕಾಶಗಳು ಮತ್ತು ನಮ್ಮ ಉದ್ಯಮಗಳು ಇದನ್ನು ಎಷ್ಟರ ಮಟ್ಟಿಗೆ ಬಳಸಿಕೊಳ್ಳುತ್ತವೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ." ಎಂದರು.

ವಾಣಿಜ್ಯ ಇಲಾಖೆಯ ಕಾರ್ಯದರ್ಶಿ ಶ್ರೀ ರಾಜೇಶ್ ಅಗರ್ವಾಲ್ ಮಾತನಾಡಿ, "ಎಫ್ ಟಿಎ ಎನ್ನುವುದು ದೇಶಗಳ ನಡುವೆ ಆಳವಾದ ಆರ್ಥಿಕ ಪಾಲುದಾರಿಕೆಯನ್ನು ಸೃಷ್ಟಿಸುವುದಾಗಿದೆ. ಈ ಒಪ್ಪಂದದ ಭಾಗವಾಗಿ, ನ್ಯೂಜಿಲ್ಯಾಂಡ್ ಭಾರತದಲ್ಲಿ ಹೆಚ್ಚಿನ ಹೂಡಿಕೆ ಮಾಡುವುದನ್ನು ನಾವು ಕಾಣಬಹುದು. ಪೆಸಿಫಿಕ್ ಸುತ್ತಮುತ್ತಲಿನ ಇತರ ಎಲ್ಲಾ ದೊಡ್ಡ ಆರ್ಥಿಕತೆಗಳು ನ್ಯೂಜಿಲ್ಯಾಂಡ್ನೊಂದಿಗೆ ಆಳವಾದ ವ್ಯಾಪಾರವನ್ನು ಹೊಂದಿವೆ. ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ದ್ವಿಪಕ್ಷೀಯ ವ್ಯಾಪಾರಕ್ಕೆ ನಾವು ಸಹ ಪ್ರಮುಖ ಕೊಡುಗೆ ನೀಡಬಹುದು ಎಂಬ ಅವಕಾಶವನ್ನು ಈ ಎಫ್ಟಿಎ ತೆರೆಯುತ್ತದೆ. ಈ ಅವಕಾಶವನ್ನು ನಮ್ಮ ಜನರಿಗೆ ನಿಜವಾದ ಪ್ರಯೋಜನಗಳಾಗಿ ಪರಿವರ್ತಿಸುವುದು ಈಗಿನ ಕೆಲಸವಾಗಿದೆ. ದೇಶಾದ್ಯಂತದ ಪ್ರತಿಯೊಂದು ಜಿಲ್ಲೆಗೆ ಈ ಸಂದೇಶವನ್ನು ತಲುಪಿಸಲು ನಾವು ಎಲ್ಲಾ ಉದ್ಯಮಗಳು ಮತ್ತು ಸಂಘಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ" ಎಂದು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಭಾರತ ಮತ್ತು ನ್ಯೂಜಿಲ್ಯಾಂಡ್ ತಮ್ಮ ತೊಡಗಿಸಿಕೊಳ್ಳುವಿಕೆಯನ್ನು ಇನ್ನಷ್ಟು ಆಳವಾಗಿಸಲು ಮತ್ತು ವಿಸ್ತರಿಸಲು ಮುಂದುವರಿದಿವೆ. ಈ ಎಫ್ ಟಿ ಎ, ಮಾರುಕಟ್ಟೆ ಪ್ರವೇಶವನ್ನು ಒದಗಿಸುವ, ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮತ್ತು ಯುವಕರು, ಮಹಿಳೆಯರು ಹಾಗೂ ಎಂಎಸ್ ಎಂಇಗಳನ್ನು ಸಬಲೀಕರಣಗೊಳಿಸುವ ಅಭಿವೃದ್ಧಿ ಹೊಂದಿದ ಆರ್ಥಿಕತೆಗಳೊಂದಿಗೆ ಪಾಲುದಾರಿಕೆಯನ್ನು ರೂಪಿಸುವ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಈ ಸಮಾರಂಭದಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ನ ಉದ್ಯಮ ಪ್ರತಿನಿಧಿಗಳು ಪಾಲ್ಗೊಂಡು ಸೇವೆಗಳು, ಪಾದರಕ್ಷೆಗಳು, ಎಂಜಿನಿಯರಿಂಗ್ ಮತ್ತು ಕೃಷಿ ಸೇರಿದಂತೆ ತಮ್ಮ ಕ್ಷೇತ್ರಗಳಿಗೆ ಈ ಒಪ್ಪಂದದಿಂದ ಲಭ್ಯವಾಗುವ ಅವಕಾಶಗಳ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ, ಭಾರತದಿಂದ ನ್ಯೂಜಿಲ್ಯಾಂಡ್ಗೆ ಮೊದಲ ಬಾರಿಗೆ 'ಜೆಸಿಬಿ ಯಂತ್ರ' ರಫ್ತಿಗೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು ಚಾಲನೆ ನೀಡಿದರು. ಜಾರಿಗೆ ಬರುವ ದಿನದಂದು ಕೃಷಿ, ರತ್ನಗಳು ಮತ್ತು ಆಭರಣಗಳು, ಎಂಜಿನಿಯರಿಂಗ್, ಕ್ರೀಡಾ ಸಾಮಗ್ರಿಗಳು, ಪಾದರಕ್ಷೆಗಳು ಮತ್ತು ಚರ್ಮದ ಕ್ಷೇತ್ರಗಳ ವಿವಿಧ ಉತ್ಪನ್ನಗಳ ರಫ್ತಿಗೂ ಚಾಲನೆ ನೀಡಲು ಯೋಜಿಸಲಾಗಿದೆ. ಈ ಉಪಕ್ರಮಗಳು ಭಾರತದ ತಯಾರಕರ ಆತ್ಮವಿಶ್ವಾಸವನ್ನು ಮತ್ತು ಒಪ್ಪಂದವು ದೇಶಾದ್ಯಂತ ರಫ್ತುದಾರರಿಗೆ ತೆರೆಯುವ ಅವಕಾಶಗಳನ್ನು ಪ್ರತಿಬಿಂಬಿಸುತ್ತವೆ.

ಭಾರತದ ರಫ್ತುಗಳ ಮೇಲಿನ ಎಲ್ಲಾ ಕಸ್ಟಮ್ಸ್ ಸುಂಕಗಳನ್ನು ನ್ಯೂಜಿಲ್ಯಾಂಡ್ ರದ್ದುಗೊಳಿಸಿದ್ದು, ಗರಿಷ್ಠ ಶೇಕಡಾ 10 ರಷ್ಟಿದ್ದ ಸುಂಕಗಳನ್ನು ತೆಗೆದುಹಾಕಿದೆ. ಜವಳಿ, ಉಡುಪುಗಳು, ಚರ್ಮ, ಪಾದರಕ್ಷೆಗಳು, ರತ್ನಗಳು ಮತ್ತು ಆಭರಣಗಳು, ಎಂಜಿನಿಯರಿಂಗ್ ಸರಕುಗಳು, ವಾಹನಗಳು ಮತ್ತು ವಾಹನ  ಬಿಡಿಭಾಗಗಳು, ರಾಸಾಯನಿಕಗಳು, ಔಷಧಗಳು, ಕೃಷಿ ಉತ್ಪನ್ನಗಳು ಮತ್ತು ಸಂಸ್ಕರಿಸಿದ ಆಹಾರಗಳು ಇದರಿಂದ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ. ಮರದ ದಿಮ್ಮಿಗಳು, ಕೇಕಿಂಗ್ ಕಲ್ಲಿದ್ದಲು ಮತ್ತು ಲೋಹದ ತ್ಯಾಜ್ಯಗಳಿಗೆ ಸುಂಕ ರಹಿತ ಪ್ರವೇಶವು ಉತ್ಪಾದನೆ ಮತ್ತು ಎಂಎಸ್ಎಂಇ ಪೂರೈಕೆ ಸರಪಳಿಗಳನ್ನು ಮತ್ತಷ್ಟು ಬಲಪಡಿಸುತ್ತದೆ. ಔಷಧ ಮತ್ತು ವೈದ್ಯಕೀಯ ಉಪಕರಣಗಳ ಉದ್ಯಮಗಳು ಸುವ್ಯವಸ್ಥಿತ ನಿಯಂತ್ರಣ ಪ್ರಕ್ರಿಯೆಗಳಿಂದ ಪ್ರಯೋಜನ ಪಡೆಯಲಿವೆ.

ನ್ಯೂಜಿಲ್ಯಾಂಡ್ ಇಲ್ಲಿಯವರೆಗಿನ ತನ್ನ ವ್ಯಾಪಾರ ಒಪ್ಪಂದಗಳಲ್ಲೇ ಅತ್ಯುತ್ತಮ ಸೇವಾ ಕೊಡುಗೆಯನ್ನು ನೀಡಿದ್ದು, ಸುಮಾರು 118 ಕ್ಷೇತ್ರಗಳಲ್ಲಿ ಮಾರುಕಟ್ಟೆ ಪ್ರವೇಶ ಮತ್ತು ಸುಮಾರು 139 ಉಪ-ಕ್ಷೇತ್ರಗಳಲ್ಲಿ `ಅತ್ಯಂತ ಆದ್ಯತೆಯ ರಾಷ್ಟ್ರʼ ದ ಬದ್ಧತೆಗಳನ್ನು ನೀಡಿದೆ. ಮೊದಲ ಬಾರಿಗೆ, ಇದು ಆಯುರ್ವೇದ, ಯೋಗ ಮತ್ತು ಇತರ ಆಯುಷ್   ವ್ಯವಸ್ಥೆಗಳನ್ನು ಒಳಗೊಂಡಂತೆ ಆರೋಗ್ಯ ಮತ್ತು ಸಾಂಪ್ರದಾಯಿಕ ವೈದ್ಯಕೀಯ ಸೇವೆಗಳಲ್ಲಿ ವಿಶೇಷ ಸುಲಭಲಭ್ಯತೆಯನ್ನು ನೀಡಿದೆ.

ಭಾರತೀಯ ಯುವಕರು ಮತ್ತು ವೃತ್ತಿಪರರು ಪ್ರತಿ ವರ್ಷ 5,000 'ತಾತ್ಕಾಲಿಕ ಉದ್ಯೋಗ ಪ್ರವೇಶ ವೀಸಾ' ಮತ್ತು 1,000 'ವರ್ಕಿಂಗ್ ಹಾಲಿಡೇ ವೀಸಾ' ಕೋಟಾವನ್ನು ಪಡೆಯುತ್ತಾರೆ. ಭಾರತೀಯ ವಿದ್ಯಾರ್ಥಿಗಳಿಗೆ ಯಾವುದೇ ಸಂಖ್ಯೆಯ ಮಿತಿ ಇರುವುದಿಲ್ಲ; ಎಸ್ ಟಿಇಎಮ್ ಪದವಿ ಮತ್ತು ಸ್ನಾತಕೋತ್ತರ ಪದವೀಧರರಿಗೆ 3 ವರ್ಷಗಳವರೆಗೆ ಮತ್ತು ಡಾಕ್ಟರಲ್ ಸಂಶೋಧಕರಿಗೆ 4 ವರ್ಷಗಳವರೆಗೆ ಶಿಕ್ಷಣದ ನಂತರದ ಉದ್ಯೋಗ ಹಕ್ಕುಗಳು ದೊರೆಯಲಿವೆ.

ಕೃಷಿ ಉತ್ಪಾದಕತೆ ಪಾಲುದಾರಿಕೆಯು ಈ ಒಪ್ಪಂದದ ಪ್ರಮುಖ ಅಂಶವಾಗಿದ್ದು, ಸುಂಕ ವಿನಾಯಿತಿಗಳನ್ನೂ ಮೀರಿ ಇದು ಭಾರತೀಯ ರೈತರಿಗೆ ಜಾಗತಿಕ ತಂತ್ರಜ್ಞಾನ, ತರಬೇತಿ ಮತ್ತು ಅತ್ಯುತ್ತಮ ವಿಧಾನಗಳನ್ನು ಒದಗಿಸುತ್ತದೆ. ಇದು ಕಿವಿ ಹಣ್ಣು, ಸೇಬು ಮತ್ತು ಜೇನುತುಪ್ಪಕ್ಕಾಗಿ ವಿಶೇಷ ಕ್ರಿಯಾ ಯೋಜನೆಗಳನ್ನು ಒಳಗೊಂಡಿದೆ. ಜೊತೆಗೆ ತೋಟಗಾರಿಕೆ, ಅರಣ್ಯ, ಪಶುಸಂಗೋಪನೆ ಮತ್ತು ಮೀನುಗಾರಿಕೆಗೂ ಸಹಕಾರವನ್ನು ವಿಸ್ತರಿಸುತ್ತದೆ.

ಕಿವಿ ಹಣ್ಣು, ಸೇಬು ಮತ್ತು ಜೇನುತುಪ್ಪಕ್ಕಾಗಿ ʻಉತ್ಕೃಷ್ಟತಾ ಕೇಂದ್ರಗಳನ್ನು' ಸ್ಥಾಪಿಸಲು ನ್ಯೂಜಿಲ್ಯಾಂಡ್ ತಾಂತ್ರಿಕ ನೆರವು ನೀಡುತ್ತಿದೆ. 'ಕಿವಿ ಹಣ್ಣಿನ ಕ್ರಿಯಾ ಯೋಜನೆ'ಯಡಿ, ನಾಗಾಲ್ಯಾಂಡ್ ನ ಫುಟ್ಸೆರೊ ಮತ್ತು ಉತ್ತರಾಖಂಡದ ಮಾಗ್ರಾದಲ್ಲಿ ಹಂತ-Iರ ಸ್ಥಳಗಳನ್ನು ಗುರುತಿಸಲಾಗಿದೆ. ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಸೇಬಿಗಾಗಿ ಇನ್ನೂ ಎರಡು ಉತ್ಕೃಷ್ಟತಾ ಕೇಂದ್ರಗಳನ್ನು ಪ್ರಸ್ತಾಪಿಸಲಾಗಿದ್ದು, 'ಜೇನುತುಪ್ಪ ಕ್ರಿಯಾ ಯೋಜನೆ'ಯಡಿ ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಅತ್ಯುತ್ತಮ ಕೇಂದ್ರಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಉಪಕ್ರಮಗಳು ತಂತ್ರಜ್ಞಾನ ವರ್ಗಾವಣೆ, ಸುಧಾರಿತ ಬೇಸಾಯ ಪದ್ಧತಿಗಳು ಮತ್ತು ಹೆಚ್ಚಿದ ಉತ್ಪಾದಕತೆಯ ಮೂಲಕ ರೈತರಿಗೆ ಬೆಂಬಲ ನೀಡುವ ಗುರಿಯನ್ನು ಹೊಂದಿವೆ.

ಒಪ್ಪಂದ ಜಾರಿಗೆ ಬರುವ ಕಾರ್ಯಕ್ರಮದಲ್ಲಿ ಹಿಮಾಚಲ ಪ್ರದೇಶ, ನಾಗಾಲ್ಯಾಂಡ್, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಅರುಣಾಚಲ ಪ್ರದೇಶದ ಪ್ರತಿನಿಧಿಗಳು ಹಾಗೂ ನ್ಯೂಜಿಲ್ಯಾಂಡ್ ದೇಶದ ಸಹಯೋಗಿ ಸಂಸ್ಥೆಗಳು ಭಾಗವಹಿಸಿದ್ದವು.

ಸೇಬು, ಕಿವಿ ಹಣ್ಣು ಮತ್ತು ಮಾನುಕಾ ಜೇನುತುಪ್ಪದ 'ಟ್ಯಾರಿಫ್ ರೇಟ್ ಕೋಟಾ'ಗಳನ್ನು (TRQ) ಜಂಟಿ ಕೃಷಿ ಉತ್ಪಾದಕತೆ ಮಂಡಳಿಯ ಮೇಲ್ವಿಚಾರಣೆಯಲ್ಲಿ ಈ ಕಾರ್ಯಾಚರಣೆ ಯೋಜನೆಗಳ ಅನುಷ್ಠಾನಕ್ಕೆ ಅಧಿಕೃತವಾಗಿ ಜೋಡಿಸಲಾಗಿದೆ. ಇದು ಮಾರುಕಟ್ಟೆ ಪ್ರವೇಶವನ್ನು ರೈತರ ಕಲ್ಯಾಣದೊಂದಿಗೆ ಜೋಡಿಸುತ್ತದೆ.

ಭಾರತದಲ್ಲಿ 20 ಶತಕೋಟಿ ಯುಎಸ್ ಡಾಲರ್ ಹೂಡಿಕೆಗೆ ನ್ಯೂಜಿಲ್ಯಾಂಡ್ ಬದ್ಧವಾಗಿದೆ. ಈ ಹೂಡಿಕೆಯು ಕೃಷಿ, ಉತ್ಪಾದನೆ, ಮೂಲಸೌಕರ್ಯ ಮತ್ತು ನವೋದ್ಯಮಗಳಿಗೆ ಪ್ರಯೋಜನವನ್ನು ನೀಡುವ ನಿರೀಕ್ಷೆಯಿದೆ ಮತ್ತು 'ಮೇಕ್ ಇನ್ ಇಂಡಿಯಾ' ದೃಷ್ಟಿಕೋನದಡಿ ನಾವೀನ್ಯತೆ, ಉದ್ಯಮಶೀಲತೆ ಮತ್ತು ಉದ್ಯೋಗ ಸೃಷ್ಟಿಗೆ ಬೆಂಬಲ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ

ರೈತರು, ಹಾಲಿನ ಉತ್ಪನ್ನಗಳ ಉತ್ಪಾದಕರು, ಮೀನುಗಾರರು ಮತ್ತು ಗ್ರಾಮೀಣ ಸಮುದಾಯಗಳನ್ನು ರಕ್ಷಿಸಲು, ಡೈರಿ ಉತ್ಪನ್ನಗಳು, ಸಕ್ಕರೆ, ಖಾದ್ಯ ತೈಲಗಳು ಮತ್ತು ಪ್ರಮುಖ ಕೃಷಿ ಉತ್ಪನ್ನಗಳಂತಹ ಸೂಕ್ಷ್ಮ ವಸ್ತುಗಳನ್ನು ವಿನಾಯಿತಿಗಳಿಂದ ಹೊರಗಿಡಲಾಗಿದೆ. ಕಟ್ಟುನಿಟ್ಟಾದ 'ರೂಲ್ಸ್ ಆಫ್ ಒರಿಜಿನ್', ದ್ವಿಪಕ್ಷೀಯ ಭದ್ರತಾ ವ್ಯವಸ್ಥೆ ಮತ್ತು ಅಕ್ರಮ ತಡೆ ನಿಯಮಗಳು ಒಪ್ಪಂದದ ಪ್ರಯೋಜನಗಳು ಕೇವಲ ಭಾರತದ ನೈಜ ರಫ್ತುದಾರರಿಗೆ ಮಾತ್ರ ತಲುಪುವುದನ್ನು ಖಚಿತಪಡಿಸುತ್ತವೆ.

ಈ ಒಪ್ಪಂದವು ಭಾರತದ ಎಂಎಸ್ ಎಂಇಗಳು, ಮಹಿಳಾ ನೇತೃತ್ವದ ಉದ್ಯಮಗಳು, ನವೋದ್ಯಮಗಳು, ಕುಶಲಕರ್ಮಿಗಳು ಮತ್ತು ಮೊದಲ ತಲೆಮಾರಿನ ಉದ್ಯಮಿಗಳಿಗೆ ಅತ್ಯಾಧುನಿಕ ವಿದೇಶಿ ಮಾರುಕಟ್ಟೆಯನ್ನು ತೆರೆಯುತ್ತದೆ. ಶೂನ್ಯ ಸುಂಕ ಮತ್ತು ವೇಗದ ಕಸ್ಟಮ್ಸ್ ಪ್ರಕ್ರಿಯೆಗಳು ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಗ್ರಾಹಕರ ನೆಲೆಯನ್ನು ವಿಸ್ತರಿಸುತ್ತದೆ. ರಚನಾತ್ಮಕ ಸಹಕಾರವು ವ್ಯಾಪಾರ ಸಂಬಂಧಿತ ಮಾಹಿತಿ ಮತ್ತು ನ್ಯೂಜಿಲ್ಯಾಂಡಿನ ಎಸ್ಎಂಇ ಪರಿಸರ ವ್ಯವಸ್ಥೆಯೊಂದಿಗೆ ಉತ್ತಮ ಸಂಪರ್ಕವನ್ನು ನೀಡುತ್ತದೆ; ವಿಶೇಷವಾಗಿ ಮಹಿಳೆಯರು ಮತ್ತು ಯುವಕರ ಒಡೆತನದ ಉದ್ಯಮಗಳ ಮೇಲೆ ಗಮನ ಹರಿಸಲಾಗುತ್ತದೆ.

ನ್ಯೂಜಿಲ್ಯಾಂಡ್ ಭಾರತೀಯ 'ಭೌಗೋಳಿಕ ಸೂಚಕಗಳ' ನೋಂದಣಿಯನ್ನು ಸುಲಭಗೊಳಿಸಲು ಬದ್ಧವಾಗಿದೆ. ಇದು ಗ್ರಾಮೀಣ ಕುಶಲಕರ್ಮಿಗಳು ಮತ್ತು ಸಾಂಪ್ರದಾಯಿಕ ಉದ್ಯಮಗಳಿಗೆ ಸೇರಿದ ಉತ್ಪನ್ನಗಳ ರಕ್ಷಣೆಗೆ ಹೊಸ ಮಾರ್ಗಗಳನ್ನು ತೆರೆಯುತ್ತದೆ.

ಭಾರತ ಮತ್ತು ನ್ಯೂಜಿಲ್ಯಾಂಡ್ ಎಫ್ ಟಿ ಎ ಎನ್ನುವುದು ಜನರ ಕೇಂದ್ರಿತ ಮತ್ತು ಎಲ್ಲರ ಒಳಗೊಳ್ಳುವಿಕೆಯ ಪಾಲುದಾರಿಕೆಯಾಗಿದ್ದು, ವಿಕಸಿತ ಭಾರತ 2047ರ ದೃಷ್ಟಿಕೋನ ಮತ್ತು ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನೆಲೆಗೊಂಡಿದೆ. ಇದು ರೈತರು, ಎಂ ಎಸ್ ಎಂ ಇಗಳು, ಮಹಿಳಾ ನೇತೃತ್ವದ ಉದ್ಯಮಗಳು, ಉದ್ಯಮಿಗಳು, ಕುಶಲಕರ್ಮಿಗಳು, ಯುವಕರು ಮತ್ತು ವೃತ್ತಿಪರರನ್ನು ಸಬಲೀಕರಣಗೊಳಿಸಲು ಶ್ರಮಿಸುತ್ತದೆ.

ಮಾತುಕತೆಗಳನ್ನು ಮಾರ್ಚ್ 16, 2025 ರಂದು ಪ್ರಾರಂಭಿಸಲಾಯಿತು ಮತ್ತು ಒಂಬತ್ತು ತಿಂಗಳೊಳಗೆ ಡಿಸೆಂಬರ್ 22, 2025 ರಂದು ಪೂರ್ಣಗೊಳಿಸಲಾಯಿತು. ಈ ಒಪ್ಪಂದಕ್ಕೆ ಏಪ್ರಿಲ್ 27, 2026 ರಂದು ಸಹಿ ಹಾಕಲಾಯಿತು. ಇದು 'ಭಾರತ-ನ್ಯೂಜಿಲ್ಯಾಂಡ್ ಕಾರ್ಯತಂತ್ರದ ಪಾಲುದಾರಿಕೆ: 2030 ರವರೆಗಿನ ಮಾರ್ಗಸೂಚಿ'ಗೆ ಬೆಂಬಲ ನೀಡುತ್ತದೆ; ಇದು 2030 ರ ವೇಳೆಗೆ ಸರಕು ಮತ್ತು ಸೇವೆಗಳ ದ್ವಿಪಕ್ಷೀಯ ವ್ಯಾಪಾರವನ್ನು   7 ಶತಕೋಟಿ ನ್ಯೂಜಿಲ್ಯಾಂಡ್ ಡಾಲರ್ ಗೆ (₹35,000 ಕೋಟಿ) ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದೆ.

Link for India-New Zealand Factsheet- https://www.commerce.gov.in/files/2026-04/final_0.pdf

Link for FAQs - https://www.commerce.gov.in/files/2026-04/FAQs%20-%20India-New%20Zealand%20FTA.pdf

Link for India New Zealand FTA Signing- https://www.pib.gov.in/PressReleasePage.aspx?PRID=2255914&reg=3&lang=1

Link for Announcement of date of Entry into force- https://www.pib.gov.in/PressReleaseDetail.aspx?PRID=2313143&reg=48&lang=1

 

*****


(ಪ್ರಕಟಣೆ ಐ.ಡಿ.: 2325401) ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ: Urdu , English , हिन्दी , Marathi , Gujarati , Telugu , Malayalam