ಗೃಹ ವ್ಯವಹಾರಗಳ ಸಚಿವಾಲಯ
ಬುಧವಾರ, 21ನೇ ಅಕ್ಟೋಬರ್ 2026 ರಂದು ನವದೆಹಲಿಯ ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ, ಪೊಲೀಸ್ ಸಂಸ್ಮರಣಾ ದಿನದಂದು ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಲಿರುವ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ
'ಮಾದಕದ್ರವ್ಯ ವಿರೋಧಿ ಹೋರಾಟ' ಥೀಮ್ನ ದೇಶವ್ಯಾಪಿ ಮೋಟಾರ್ಸೈಕಲ್ ರ್ಯಾಲಿಗೆ ಚಾಲನೆ ನೀಡಲಿರುವ ಕೇಂದ್ರ ಗೃಹ ಸಚಿವರು
ಈ ರ್ಯಾಲಿಯ ಭಾಗವಾಗಿ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಪಡೆಗಳ ಪೊಲೀಸ್ ರೈಡರ್ಗಳು ಅಕ್ಟೋಬರ್ 31, 2026 ರಂದು ಏಕತಾ ಪೆರೇಡ್ನಲ್ಲಿ ಭಾಗವಹಿಸಲು ಗುಜರಾತ್ನ ಏಕತಾ ನಗರವನ್ನು ತಲುಪಲಿದ್ದಾರೆ
ಅಕ್ಟೋಬರ್ 21, 1959 ರಂದು ಲಡಾಖ್ನ ಹಾಟ್ ಸ್ಪ್ರಿಂಗ್ಸ್ನಲ್ಲಿ ಭಾರೀ ಶಸ್ತ್ರಸಜ್ಜಿತ ಚೀನೀ ಪಡೆಗಳು ನಡೆಸಿದ ಹೊಂಚುದಾಳಿಯಲ್ಲಿ ಹತ್ತು ಮಂದಿ ಧೀರ ಪೋಲಿಸರು ಪ್ರಾಣತ್ಯಾಗ ಮಾಡಿದ್ದರು
ಈ ಹುತಾತ್ಮರ ಮತ್ತು ಕರ್ತವ್ಯದ ಸಾಲಿನಲ್ಲಿ ಅತ್ಯುನ್ನತ ತ್ಯಾಗ ಮಾಡಿದ ಇತರ ಎಲ್ಲಾ ಹುತಾತ್ಮರ ನೆನಪಿಗಾಗಿ ಅಕ್ಟೋಬರ್ 21 ಅನ್ನು ಆಚರಿಸಲಾಗುತ್ತದೆ
ಪೊಲೀಸ್ ಸಿಬ್ಬಂದಿಯ ತ್ಯಾಗ ಮತ್ತು ರಾಷ್ಟ್ರೀಯ ಭದ್ರತೆ ಹಾಗೂ ಸಮಗ್ರತೆಯನ್ನು ಕಾಯ್ದುಕೊಳ್ಳುವಲ್ಲಿ ಅವರ ಪ್ರಮುಖ ಪಾತ್ರವನ್ನು ಗುರುತಿಸಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 'ಪೊಲೀಸ್ ಸಂಸ್ಮರಣಾ ದಿನ-2018' ರಂದು ರಾಷ್ಟ್ರೀಯ ಪೊಲೀಸ್ ಸ್ಮಾರಕವನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದರು
ಪ್ರಕಟಣಾ ದಿನಾಂಕ:
19 OCT 2026 5:50PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು 2026ರ ಅಕ್ಟೋಬರ್ 21, ಬುಧವಾರದಂದು ನವದೆಹಲಿಯ ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ 'ಪೊಲೀಸ್ ಸಂಸ್ಮರಣಾ ದಿನ'ದಂದು ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.
ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು (ಜಮ್ಮು ಮತ್ತು ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ದೆಹಲಿ); ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (ಸಿಆರ್ಪಿಎಫ್, ಸಿಐಎಸ್ಎಫ್, ಬಿಎಸ್ಎಫ್, ಎಸ್ಎಸ್ಬಿ, ಐಟಿಬಿಪಿ ಮತ್ತು ಎನ್ ಎಸ್ ಜಿ) ಮತ್ತು ಕೆಲವು ಕೇಂದ್ರ ಪೊಲೀಸ್ ಸಂಸ್ಥೆಗಳ (ಆರ್ಪಿಎಫ್, ಎನ್ಡಿಆರ್ಎಫ್ ಮತ್ತು ಎನ್ಐಎ) ಸುಮಾರು 90 ಪೊಲೀಸ್ ರೈಡರ್ಗಳ ಮೋಟಾರ್ಸೈಕಲ್ ರ್ಯಾಲಿಗೆ ಗೃಹ ಸಚಿವರು ಚಾಲನೆ ನೀಡಲಿದ್ದಾರೆ. ಇದು 'ಮಾದಕದ್ರವ್ಯ ವಿರೋಧಿ ಹೋರಾಟ' ಥೀಮ್ನ ದೇಶವ್ಯಾಪಿ ರ್ಯಾಲಿಯ ಭಾಗವಾಗಿದ್ದು, ಇದರಲ್ಲಿ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಪಡೆಗಳ ಪೊಲೀಸ್ ರೈಡರ್ಗಳು ಅಕ್ಟೋಬರ್ 31, 2026 ರಂದು ಏಕತಾ ಪೆರೇಡ್ನಲ್ಲಿ (Ekta Parade) ಭಾಗವಹಿಸಲು ಗುಜರಾತ್ನ ಏಕತಾ ನಗರಕ್ಕೆ ತಲುಪಲಿದ್ದಾರೆ.
ಅಕ್ಟೋಬರ್ 21, 1959 ರಂದು ಲಡಾಖ್ನ ಹಾಟ್ ಸ್ಪ್ರಿಂಗ್ಸ್ನಲ್ಲಿ ಭಾರೀ ಶಸ್ತ್ರಸಜ್ಜಿತ ಚೀನೀ ಪಡೆಗಳು ನಡೆಸಿದ ಹೊಂಚುದಾಳಿಯಲ್ಲಿ ಹತ್ತು ಮಂದಿ ಧೀರ ಪೋಲಿಸರು ತಮ್ಮ ಪ್ರಾಣವನ್ನು ಅರ್ಪಿಸಿದರು. ಅಂದಿನಿಂದ, ಪ್ರತಿ ವರ್ಷ ಅಕ್ಟೋಬರ್ 21 ಅನ್ನು ಪೊಲೀಸ್ ಸಂಸ್ಮರಣಾ ದಿನವನ್ನಾಗಿ ಆಚರಿಸಲಾಗುತ್ತದೆ. ಪೊಲೀಸ್ ಸಿಬ್ಬಂದಿಯ ತ್ಯಾಗ ಮತ್ತು ರಾಷ್ಟ್ರೀಯ ಭದ್ರತೆ ಹಾಗೂ ಸಮಗ್ರತೆಯನ್ನು ಕಾಯ್ದುಕೊಳ್ಳುವಲ್ಲಿ ಅವರ ಪ್ರಮುಖ ಪಾತ್ರವನ್ನು ಗುರುತಿಸಿ, ಪ್ರಧಾನಮಂತ್ರಿಯವರು ನವದೆಹಲಿಯ ಚಾಣಕ್ಯಪುರಿಯಲ್ಲಿರುವ ರಾಷ್ಟ್ರೀಯ ಪೊಲೀಸ್ ಸ್ಮಾರಕವನ್ನು 'ಪೊಲೀಸ್ ಸಂಸ್ಮರಣಾ ದಿನ-2018' ರಂದು ರಾಷ್ಟ್ರಕ್ಕೆ ಸಮರ್ಪಿಸಿದರು.
ಈ ಸ್ಮಾರಕವು ತಮ್ಮ ಜೀವ ತೆತ್ತಾದರೂ ರಾಷ್ಟ್ರವನ್ನು ರಕ್ಷಿಸುವ ಅವರ ಬದ್ಧತೆಯನ್ನು ಬಲಪಡಿಸುವುದರ ಜೊತೆಗೆ, ಪೊಲೀಸ್ ಪಡೆಗಳಿಗೆ ರಾಷ್ಟ್ರೀಯ ಗುರುತು, ಹೆಮ್ಮೆ, ಉದ್ದೇಶದ ಏಕತೆ, ಹಂಚಿಕೆಯ ಇತಿಹಾಸ ಮತ್ತು ಭವಿಷ್ಯದ ಭಾವನೆಯನ್ನು ನೀಡುತ್ತದೆ. ಈ ಸ್ಮಾರಕವು 'ಕೇಂದ್ರ ಶಿಲ್ಪ', 'ವೀರತೆಯ ಗೋಡೆ' ಮತ್ತು 'ವಸ್ತುಸಂಗ್ರಹಾಲಯ'ವನ್ನು ಒಳಗೊಂಡಿದೆ. 30 ಅಡಿ ಎತ್ತರದ ಗ್ರಾನೈಟ್ ಶಿಲೆಯ ಸ್ಮಾರಕವಾಗಿರುವ 'ಕೇಂದ್ರ ಶಿಲ್ಪ'ವು ಪೊಲೀಸ್ ಸಿಬ್ಬಂದಿಯ ಶಕ್ತಿ, ಸ್ಥಿರತೆ ಮತ್ತು ನಿಸ್ವಾರ್ಥ ಸೇವೆಯನ್ನು ಪ್ರತಿನಿಧಿಸುತ್ತದೆ. ಹುತಾತ್ಮರ ಹೆಸರುಗಳನ್ನು ಕೆತ್ತಲಾದ 'ವೀರತೆಯ ಗೋಡೆ'ಯು ಸ್ವಾತಂತ್ರ್ಯದ ನಂತರ ಕರ್ತವ್ಯದ ಸಾಲಿನಲ್ಲಿ ಪ್ರಾಣತ್ಯಾಗ ಮಾಡಿದ ಪೊಲೀಸ್ ಸಿಬ್ಬಂದಿಯ ಶೌರ್ಯ ಮತ್ತು ತ್ಯಾಗಕ್ಕೆ ದೃಢವಾದ ಸಾಕ್ಷಿಯಾಗಿ ನಿಂತಿದೆ. ವಸ್ತುಸಂಗ್ರಹಾಲಯವನ್ನು ಭಾರತದಲ್ಲಿ ಪೊಲೀಸ್ ವ್ಯವಸ್ಥೆಯ ಇತಿಹಾಸ ಮತ್ತು ವಿಕಸನದ ಪ್ರದರ್ಶನವಾಗಿ ಪರಿಭಾವಿಸಲಾಗಿದೆ. ಈ ಸ್ಮಾರಕವು ಪುಣ್ಯಕ್ಷೇತ್ರವಾಗಿದ್ದು, ಪೊಲೀಸ್ ಸಿಬ್ಬಂದಿ ಮತ್ತು ನಾಗರಿಕರಿಗೆ ಗೌರವದ ಸ್ಥಳವಾಗಿದೆ. ಎನ್ಪಿಎಂ ಸೋಮವಾರವನ್ನು ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಸಾರ್ವಜನಿಕರಿಗೆ ತೆರೆದಿರುತ್ತದೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ, ಸೂರ್ಯಾಸ್ತಕ್ಕೆ ಒಂದು ಗಂಟೆ ಮುಂಚಿತವಾಗಿ ಎನ್ಪಿಎಂನಲ್ಲಿ ಬ್ಯಾಂಡ್ ಪ್ರದರ್ಶನ, ಪೆರೇಡ್ ಮತ್ತು ರಿಟ್ರೀಟ್ ಸಮಾರಂಭವನ್ನು ಆಯೋಜಿಸುತ್ತವೆ.
ಹಿಂದಿನ ವರ್ಷಗಳಂತೆಯೇ, ಪೊಲೀಸ್ ಹುತಾತ್ಮರಿಗೆ ಗೌರವ ಸಲ್ಲಿಸಲು ದೇಶಾದ್ಯಂತ 'ಪೊಲೀಸ್ ಸಂಸ್ಮರಣಾ ದಿನ' ಅಂದರೆ ಅಕ್ಟೋಬರ್ 21 ಅನ್ನು ಆಚರಿಸಲಾಗುತ್ತದೆ. ಪ್ರಮುಖ ಕಾರ್ಯಕ್ರಮವನ್ನು ನವದೆಹಲಿಯ ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ಆಯೋಜಿಸಲಾಗುವುದು, ಅಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ದೆಹಲಿ ಪೊಲೀಸರ ಜಂಟಿ ಪೆರೇಡ್ ನಡೆಯಲಿದೆ. ಸಂಪ್ರದಾಯದಂತೆ ಕೇಂದ್ರ ಗೃಹ ಸಚಿವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಗೃಹ ರಾಜ್ಯ ಸಚಿವರು, ಪೊಲೀಸ್ ಹಿನ್ನೆಲೆಯ ಸಂಸದರು, ಸಿಎಪಿಎಫ್/ಸಿಪಿಒಗಳ ಮುಖ್ಯಸ್ಥರು ಸೇರಿದಂತೆ ಇತರ ಗಣ್ಯರು ಪುಷ್ಪಗುಚ್ಛ ನಮಿಸಿ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ. ನಿವೃತ್ತ ಡಿಜಿಗಳು, ಪೊಲೀಸ್ ಬಂಧುಗಳ ಅಧಿಕಾರಿಗಳು ಮತ್ತು ಇತರ ಗಣ್ಯರು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಪೊಲೀಸ್ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸುವುದರ ಜೊತೆಗೆ ಕೇಂದ್ರ ಗೃಹ ಸಚಿವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಹಾಟ್ ಸ್ಪ್ರಿಂಗ್ಸ್ನ ಹುತಾತ್ಮರಿಗೆ ಮುಡಿಪಾದ ಪೀಠದಲ್ಲಿ ಕೇಂದ್ರ ಗೃಹ ಸಚಿವರು ಪುಷ್ಪಗುಚ್ಛ ನಮಿಸುವುದರೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ. ಈ ಕಾರ್ಯಕ್ರಮವು ದೂರದರ್ಶನದಲ್ಲಿ ನೇರ ಪ್ರಸಾರವಾಗಲಿದೆ, ಪೊಲೀಸ್ ವೆಬ್ಸೈಟ್ಗಳಲ್ಲಿ ವೆಬ್ಕಾಸ್ಟ್ ಆಗಲಿದೆ ಹಾಗೂ ಆಕಾಶವಾಣಿ ಮತ್ತು ಮಾಧ್ಯಮಗಳಲ್ಲಿ ಪ್ರಸಾರವಾಗಲಿದೆ.
ಸ್ಮರಣಾರ್ಥ ಕಾರ್ಯಕ್ರಮಗಳ ಭಾಗವಾಗಿ, ಸಿಎಪಿಎಫ್/ಸಿಪಿಒಗಳು ಅಕ್ಟೋಬರ್ 22 ರಿಂದ 30 ರವರೆಗೆ ಎನ್ಪಿಎಂನಲ್ಲಿ ವಿವಿಧ ಸಂಸ್ಮರಣಾ ಕಾರ್ಯಕ್ರಮಗಳನ್ನು ಆಯೋಜಿಸಲಿವೆ. ಇವುಗಳಲ್ಲಿ ಹುತಾತ್ಮರ ಕುಟುಂಬ ಸದಸ್ಯರ ಭೇಟಿ, ಪೊಲೀಸ್ ಬ್ಯಾಂಡ್ ಪ್ರದರ್ಶನ, ಮೋಟಾರ್ಸೈಕಲ್ ರ್ಯಾಲಿಗಳು, 'ರನ್ ಫಾರ್ ಮಾರ್ಟೈರ್ಸ್', ರಕ್ತದಾನ ಶಿಬಿರಗಳು, ಮಕ್ಕಳಿಗೆ ಪ್ರಬಂಧ/ಚಿತ್ರಕಲೆ ಸ್ಪರ್ಧೆಗಳು ಮತ್ತು ಪೊಲೀಸ್ ಸಿಬ್ಬಂದಿಯ ತ್ಯಾಗ, ಶೌರ್ಯ ಮತ್ತು ಸೇವೆಗಳನ್ನು ಪ್ರದರ್ಶಿಸುವ ವಿಡಿಯೋ ಚಿತ್ರಗಳ ಪ್ರದರ್ಶನ ಸೇರಿವೆ. ಈ ಅವಧಿಯಲ್ಲಿ ದೇಶಾದ್ಯಂತ ಎಲ್ಲಾ ಪೊಲೀಸ್ ಪಡೆಗಳು ಇದೇ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಿವೆ.

ರಾಷ್ಟ್ರೀಯ ಪೊಲೀಸ್ ಸ್ಮಾರಕ
ಚಾಣಕ್ಯಪುರಿ, ನವದೆಹಲಿ
*****
(ಪ್ರಕಟಣೆ ಐ.ಡಿ.: 2325334)
ವಿಸಿಟರ್ ಕೌಂಟರ್ : 4