ಪ್ರಧಾನ ಮಂತ್ರಿಯವರ ಕಛೇರಿ
ಯುಪಿಎಸ್‌ಸಿ ಶತಮಾನೋತ್ಸವ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
ಪ್ರಕಟಣಾ ದಿನಾಂಕ:
01 OCT 2026 1:51PM by PIB Bengaluru
ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಡಾ. ಜಿತೇಂದ್ರ ಸಿಂಗ್ ಜಿ, ಪಿ.ಕೆ. ಮಿಶ್ರಾ ಜಿ, ಟಿ.ವಿ. ಸೋಮನಾಥನ್ ಜಿ, ಅಜಯ್ ಕುಮಾರ್ ಜಿ, ಯುಪಿಎಸ್‌ಸಿಯ ಎಲ್ಲಾ ಗೌರವಾನ್ವಿತ ಸದಸ್ಯರೆ, ವಿವಿಧ ರಾಜ್ಯಗಳಿಂದ ಬಂದಿರುವ ವಿವಿಧ ರಾಜ್ಯ ಸಾರ್ವಜನಿಕ ಸೇವಾ ಆಯೋಗಗಳ ಅಧ್ಯಕ್ಷರು, ಇತರೆ ಗೌರವಾನ್ವಿತ ಅತಿಥಿಗಳೆ, ಮಹಿಳೆಯರೆ ಮತ್ತು ಮಹನೀಯರೆ.
ಇಂದಿನ ಭಾಷಣ ಆರಂಭಿಸುವ ಮೊದಲು, ನಿನ್ನೆ ನಡೆದ ಒಂದು ಘಟನೆಯನ್ನು ಉಲ್ಲೇಖಿಸಲು ಬಯಸುತ್ತೇನೆ. ಭಾರತದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರು ತಾಳ್ಮೆ, ವಿವೇಕ ಮತ್ತು ಧೈರ್ಯವನ್ನು ಪ್ರದರ್ಶಿಸಿದ ರೀತಿ, ಇಸ್ರೇಲ್ ಪ್ರಧಾನಿ ಅವರು ಹೇಳಿದಂತೆ, ಈ ಭಾರತೀಯ ಮತ್ತೊಂದು 9/11 ಘಟನೆ ನಡೆಯದಂತೆ ತಡೆದರು. ಸ್ಮಿತ್ ಅವರ ಈ ಶೌರ್ಯವು ದೇಶದ ಪ್ರತಿಯೊಬ್ಬ ನಾಗರಿಕನನ್ನೂ ಹೆಮ್ಮೆಯಿಂದ ತುಂಬುತ್ತದೆ. ಇಂದು ನಾನು ಅವರ ತಂದೆ ಭೂಪೇಂದ್ರ ಭಾಯ್, ಅವರ ತಾಯಿ ಗೀತಾ ಬೆನ್ ಮತ್ತು ಅವರ ಪತ್ನಿ ಸೋನಾಲ್ ಅವರೊಂದಿಗೆ ಮಾತನಾಡಿದೆ. ಅವರ ಚಿಕಿತ್ಸೆ ಮುಂದುವರೆದಿದೆ. ಇಂದು ಇಡೀ ಜಗತ್ತು ಅವರ ಬಗ್ಗೆ ಹೆಮ್ಮೆಪಡುತ್ತದೆ. ಸ್ಮಿತ್ ಅವರ ದೀರ್ಘಾಯುಷ್ಯ ಮತ್ತು ಅತ್ಯುತ್ತಮ ಆರೋಗ್ಯಕ್ಕಾಗಿ ನಾವೆಲ್ಲರೂ ಪ್ರಾರ್ಥಿಸಬೇಕು. ಭಾರತದ ಕೀರ್ತಿಯನ್ನು ಹೆಚ್ಚಿಸಿದ ನಮ್ಮ ಸಹೋದರ ಸ್ಮಿತ್ ಅವರಿಗೆ ನಮಸ್ಕರಿಸಬೇಕೆಂದು ನಾನು ದೇಶದ ಜನರಿಗೆ ಮನವಿ ಮಾಡುತ್ತೇನೆ.
ಸ್ನೇಹಿತರೆ,
ಇಂದು ಯುಪಿಎಸ್‌ಸಿಯ 100 ವರ್ಷಗಳ ಆಚರಣೆ ಮಾತ್ರವಾಗದೆ, ಇದು ನಿಜವಾದ ಪರಂಪರೆಯ ಆಚರಣೆಯೂ ಆಗಿದೆ. ಇದು ಪ್ರತಿ ವರ್ಷ ಲಕ್ಷಾಂತರ ಯುವಕರು ಪಾಲಿಸುವ ಮತ್ತು ಅನುಸರಿಸುವ ಆಕಾಂಕ್ಷೆಗಳ ಆಚರಣೆಯಾಗಿದೆ. ಪ್ರತಿಯೊಬ್ಬ ಭಾರತೀಯರು ಈ ಸಂಸ್ಥೆಯ ಮೇಲೆ ಇಟ್ಟಿರುವ ನಂಬಿಕೆಯ ಆಚರಣೆಯಾಗಿದೆ. ಈ ಶತಮಾನದ ಪ್ರಯಾಣದಲ್ಲಿ ತಲೆಮಾರುಗಳು ಬದಲಾದವು, ಸರ್ಕಾರಗಳು ಬದಲಾದವು, ತಂತ್ರಜ್ಞಾನ ಬದಲಾಯಿತು ಮತ್ತು ಪಠ್ಯಕ್ರಮಗಳು ಬದಲಾದವು, ಆದರೆ ಯುಪಿಎಸ್‌ಸಿ ಮೇಲಿನ ನಂಬಿಕೆ ಇಂದಿಗೂ ಅಷ್ಟೇ ಅಚಲವಾಗಿ ಉಳಿದಿದೆ, ಅದು ನಿಮ್ಮ ದೊಡ್ಡ ಆಸ್ತಿಗಳಲ್ಲಿ ಒಂದಾಗಿದೆ. ಈ 100 ವರ್ಷಗಳ ಪ್ರಯಾಣವನ್ನು ಗುರುತಿಸುವ ಸ್ಮರಣಾರ್ಥ ಅಂಚೆ ಚೀಟಿ ಮತ್ತು ನಾಣ್ಯವನ್ನು ಇದೀಗ ಬಿಡುಗಡೆ ಮಾಡಲಾಗಿದೆ. 100 ಪ್ರಮುಖ ಪ್ರಕರಣಗಳ ಕಾನೂನು ಸಂಕಲನವನ್ನು ಸಹ ಲೋಕಾರ್ಪಣೆ ಮಾಡಲಾಗಿದೆ. ಈ ಶತಮಾನದ ಪ್ರಯಾಣದೊಂದಿಗೆ ಸಂಬಂಧ ಹೊಂದಿರುವ ಎಲ್ಲಾ ಗಣ್ಯ ವ್ಯಕ್ತಿಗಳಿಗೆ ನಾನು ನನ್ನ ಗೌರವ ಸಲ್ಲಿಸುತ್ತೇನೆ. ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಲ್ಲಿಸುತ್ತೇನೆ. ಸ್ವಲ್ಪ ಸಮಯದ ಹಿಂದೆ, ನಾನು ಇಲ್ಲಿ ಸ್ಥಾಪಿಸಲಾದ ಗ್ಯಾಲರಿಗೆ ಭೇಟಿ ನೀಡಿದೆ, ಅದನ್ನು ಅನ್ವೇಷಿಸುವಂತೆ 10ರಿಂದ 15 ನಿಮಿಷಗಳನ್ನು ಕಳೆಯಲು ನಿಮ್ಮೆಲ್ಲರನ್ನು ಪ್ರೋತ್ಸಾಹಿಸುತ್ತೇನೆ. 75ನೇ ವಾರ್ಷಿಕೋತ್ಸವ ಆಚರಣೆಯ ಒಂದು ಛಾಯಾಚಿತ್ರವನ್ನು ನಾನು ಗಮನಿಸಿದೆ, ಅದರಲ್ಲಿ ಲೆಫ್ಟಿನೆಂಟ್ ಜನರಲ್ ಸುರೇಂದ್ರ ನಾಥ್ ಅವರನ್ನು ಕಾಣಬಹುದು. ಇಂದು ಅವರು ತಮ್ಮ 90ನೇ ವಯಸ್ಸಿನಲ್ಲಿ ನಮ್ಮ ನಡುವೆ ಇದ್ದಾರೆ.
ಸ್ನೇಹಿತರೆ,
ಈ ಪ್ರಯಾಣವನ್ನು ನಂಬಿಕೆಯ ಪರಂಪರೆಯಾಗಿ ಪರಿವರ್ತಿಸಿದ, ಕಾಲಕ್ಕೆ ತಕ್ಕಂತೆ ಬದಲಾವಣೆಗಳನ್ನು ತಂದ ಮತ್ತು ಸಂಸ್ಥೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಅನೇಕ ವ್ಯಕ್ತಿಗಳಿದ್ದಾರೆ. ಅವರಲ್ಲಿ ಪ್ರತಿಯೊಬ್ಬರೂ ಮೆಚ್ಚುಗೆ ಮತ್ತು ಮನ್ನಣೆಗೆ ಅರ್ಹರು. ಗ್ಯಾಲರಿಯ ಮೂಲಕ ನೋಡುವಾಗ, 1920ರಲ್ಲಿ ಸುಭಾಸ್ ಚಂದ್ರ ಬೋಸ್ ಈ ಪ್ರಕ್ರಿಯೆಯ ಮೂಲಕ ಹೇಗೆ ಹೋದರು ಎಂಬುದರ ಬಗ್ಗೆಯೂ ಇದು ಮಾಹಿತಿಯನ್ನು ಒಳಗೊಂಡಿದೆ ಎಂಬುದನ್ನು ನಾನು ಗಮನಿಸಿದೆ. ಆ ಸಮಯದಲ್ಲಿ ಭಾರತ ಬ್ರಿಟಿಷ್ ಆಳ್ವಿಕೆಯಲ್ಲಿದ್ದರೂ, ಪರೀಕ್ಷೆಯಲ್ಲಿ ಸಂಸ್ಕೃತ ಪತ್ರಿಕೆ ಇರುತ್ತಿತ್ತು, ಸುಭಾಸ್ ಬಾಬು ತಮ್ಮ ಪ್ರಬಂಧವನ್ನು ಸಂಸ್ಕೃತದಲ್ಲಿ ಬರೆದರು ಎಂಬುದು ನನ್ನ ಗಮನ ಸೆಳೆಯಿತು.
ಸ್ನೇಹಿತರೆ,
ಈ ಐತಿಹಾಸಿಕ ಸಂದರ್ಭದಲ್ಲಿ, ನಾನು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಗೌರವ ಸಲ್ಲಿಸಲು ಬಯಸುತ್ತೇನೆ. ಸ್ವಾತಂತ್ರ್ಯದ ನಂತರ, ಅವರ ಮುಂದಿದ್ದ ಸವಾಲು ಕೇವಲ ರಾಷ್ಟ್ರವನ್ನು ಮುಕ್ತವಾಗಿಡುವುದು ಮಾತ್ರವಲ್ಲ. ಅವರ ಮುಂದಿದ್ದ ಸವಾಲು ಆಡಳಿತ ಮತ್ತು ರಾಷ್ಟ್ರವನ್ನು ನಿರ್ಮಿಸುವುದಾಗಿತ್ತು. ರಾಷ್ಟ್ರದ ಪುನರ್ನಿರ್ಮಾಣಕ್ಕೆ ಅಗತ್ಯವಾದ ಉಕ್ಕಿನಷ್ಟು ಸದೃಢವಾದ ಮಾರ್ಗಸೂಚಿಗಳನ್ನು ಸರ್ದಾರ್ ವಲ್ಲಭಭಾಯಿ ಪಟೇಲ್ ಒದಗಿಸಿದರು. ಅವರು ಈ ಸಂಸ್ಥೆಯನ್ನು ಸ್ವತಂತ್ರ ಭಾರತದ ಪ್ರಮುಖ ಆಧಾರಸ್ತಂಭಗಳಲ್ಲಿ ಒಂದನ್ನಾಗಿ ಮಾಡಿ, ಅದನ್ನು ಬಲಪಡಿಸಿದರು.
ಸ್ನೇಹಿತರೆ,
1926ರಲ್ಲಿ ಈ ಸಂಸ್ಥೆಗೆ ಅಡಿಪಾಯ ಹಾಕಿದಾಗ ಆ ಯುಗದ ಆದ್ಯತೆಗಳು ವಿಭಿನ್ನವಾಗಿದ್ದವು. ಆ ಸಮಯದಲ್ಲಿ ವ್ಯವಸ್ಥೆಯ ಗಮನ ಮತ್ತು ಅದರ ಬದ್ಧತೆ ಎರಡೂ ಬ್ರಿಟಿಷ್ ರಾಜ್ ಕಡೆಗೆ ನಿರ್ದೇಶಿಸಲ್ಪಟ್ಟವು. ಭಾರತ ಸ್ವಾತಂತ್ರ್ಯ ಪಡೆದ ನಂತರ, ಮುಕ್ತ ಭಾರತದ ಕನಸುಗಳು ಮತ್ತು ಮುಕ್ತ ಭಾರತದ ಆಡಳಿತದ ಅಗತ್ಯತೆಗಳೇ ಕೇಂದ್ರಬಿಂದುವಾದವು. ಕಳೆದ ದಶಕಗಳಲ್ಲಿ, ಯುಪಿಎಸ್‌ಸಿ ತನ್ನ ಜವಾಬ್ದಾರಿಗಳನ್ನು ಅನುಕರಣೀಯ ರೀತಿಯಲ್ಲಿ ನಿರ್ವಹಿಸಿದೆ. ಈ ಹಂತದಿಂದ ಅದರ ಸಾಧನೆಗಳು ಮತ್ತು ಕೊಡುಗೆಗಳ ಬಗ್ಗೆ ಈಗಾಗಲೇ ಬಹಳಷ್ಟು ಹೇಳಲಾಗಿದೆ. ಆದ್ದರಿಂದ, ನಾನು ಆ ಅಂಶಗಳನ್ನು ಪುನರಾವರ್ತಿಸಲು ಅಥವಾ ಅವುಗಳ ಬಗ್ಗೆ ವಿವರವಾಗಿ ಹೇಳಲು ಬಯಸುವುದಿಲ್ಲ. ಇತಿಹಾಸವನ್ನು ಮೀರಿ, ಈಗ ಭಾರತದ ಭವಿಷ್ಯವು ನಮ್ಮ ಮುಂದೆ ಕಾಯುತ್ತಿದೆ. 21ನೇ ಶತಮಾನದ ಕಾಲು ಭಾಗ, ಅಂದರೆ 25 ವರ್ಷಗಳು ಈಗಾಗಲೇ ಕಳೆದಿವೆ. ಮುಂದಿನ 20ರಿಂದ 25 ವರ್ಷಗಳು ಭಾರತಕ್ಕೆ, ಭಾರತದ ಪ್ರತಿಯೊಬ್ಬ ನಾಗರಿಕನಿಗೆ ಮತ್ತು ಭಾರತದ ಪ್ರತಿಯೊಂದು ಸಂಸ್ಥೆಗೆ ಅತ್ಯಂತ ಮುಖ್ಯವಾಗಿರುತ್ತವೆ. ಆದ್ದರಿಂದ, ನಾನು ಇಂದು ನನ್ನ ಭಾಷಣವನ್ನು ಆ ದಿಕ್ಕಿನತ್ತ ಕೇಂದ್ರೀಕರಿಸಲು ಬಯಸುತ್ತೇನೆ.
ಸ್ನೇಹಿತರೆ,
ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ, ದೇಶಕ್ಕೆ ಈಗ ಅಗತ್ಯವಿರುವ ಆಡಳಿತವು ಯುಪಿಎಸ್‌ಸಿ ಮತ್ತು ರಾಜ್ಯಗಳ ಸಾರ್ವಜನಿಕ ಸೇವಾ ಆಯೋಗಗಳ ಮೇಲೆ ಗಮನಾರ್ಹವಾಗಿ ಅವಲಂಬಿತವಾಗಿದೆ. ನೀವು ಇಂದು ನೇಮಕ ಮಾಡಿಕೊಳ್ಳುತ್ತಿರುವ ಯುವಕರು ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಅವರು ಸ್ವತಃ ಅಭಿವೃದ್ಧಿ ಹೊಂದಿದ ಭಾರತದ ಶ್ರೇಷ್ಠ ಫಲಾನುಭವಿಗಳಲ್ಲಿ ಒಬ್ಬರಾಗುತ್ತಾರೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡು, ನಾವು ಯಾವಾಗಲೂ 2 ಮಾನದಂಡಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಮೊದಲ ಮಾನದಂಡವೆಂದರೆ: ರಾಷ್ಟ್ರ ಮೊದಲು. 2ನೇ ಮಾನದಂಡವೆಂದರೆ: ನಾಗರಿಕ ಮೊದಲು. ಪ್ರತಿ ಆಯ್ಕೆಯನ್ನು ಅಳೆಯಬೇಕಾದ 2 ಮಾನದಂಡಗಳು ಇವು. ಅಭ್ಯರ್ಥಿಗಳನ್ನು ಈ ಮನೋಭಾವದಿಂದ ಮೌಲ್ಯಮಾಪನ ಮಾಡಿದಾಗ ಮತ್ತು ಈ ಮನೋಭಾವದಿಂದ ತುಂಬಿದ ವ್ಯಕ್ತಿಗಳನ್ನು ಆಯ್ಕೆ ಮಾಡಿದಾಗ, ರಾಷ್ಟ್ರೀಯ ಗುರಿಗಳ ಸಾಧನೆ ಹೆಚ್ಚು ಸ್ವಾಭಾವಿಕ ಮತ್ತು ಸುಲಭವಾಗುತ್ತದೆ.
ಸ್ನೇಹಿತರೆ,
2047ರಲ್ಲಿ ಭಾರತವು ಇಂದಿನ ಭಾರತಕ್ಕಿಂತ ಬಹಳ ಭಿನ್ನವಾಗಿರುತ್ತದೆ. ಭಾರತವು ಇಂದಿಗಿಂತ ಹೆಚ್ಚು ನಗರೀಕರಣಗೊಳ್ಳುತ್ತದೆ. ಹಳ್ಳಿಗಳು ಮತ್ತು ನಗರಗಳ ನಡುವಿನ ಅಂತರವು ಕಿರಿದಾಗುತ್ತದೆ. ನಮ್ಮ ನಾಗರಿಕರ ವಿಶೇಷವಾಗಿ ನಮ್ಮ ಯುವಕರ ಆಕಾಂಕ್ಷೆಗಳು ಮತ್ತು ನಿರೀಕ್ಷೆಗಳು ಗಮನಾರ್ಹವಾಗಿ ಹೆಚ್ಚಾಗಿರುತ್ತವೆ. ಈ ರೂಪಾಂತರದ ಚಿಹ್ನೆಗಳು ಈಗಾಗಲೇ ಗೋಚರಿಸುತ್ತಿವೆ. ಆದ್ದರಿಂದ, ಇಂದಿನ ಪ್ರಶ್ನೆಯು ಕೇವಲ ಸೇವಾ ವಿತರಣೆಯ ಪ್ರಶ್ನೆಯಲ್ಲ. ಪ್ರಶ್ನೆಯೆಂದರೆ, ಸಾರ್ವಜನಿಕ ಸೇವೆಗಳು ಇಂದಿನ ತ್ವರಿತ ವಿತರಣೆಯ ಜಗತ್ತಿನ ವೇಗಕ್ಕೆ ಅನುಗುಣವಾಗಿರಲು ಸಮರ್ಥವಾಗಿವೆಯೇ ಎಂಬುದಾಗಿದೆ. ಅವರು ಆ ವೇಗದಲ್ಲಿ ಚಲಿಸಲು ಸಮರ್ಥರಾಗಿದ್ದಾರೆಯೇ? ಇಂದು ನಾಗರಿಕರು ಸೇವೆಗಾಗಿ ವಾರಗಳು ಅಥವಾ ತಿಂಗಳುಗಳ ಕಾಲ ಕಾಯಲು ಬಯಸುವುದಿಲ್ಲ. ಎಐ ತಂತ್ರಜ್ಞಾನ ಸಾವಿರಾರು ದಾಖಲೆಗಳನ್ನು ಕ್ಷಣಗಳಲ್ಲಿ ಸಂಸ್ಕರಣೆಗೊಳಿಸಬಹುದಾದಾಗ ಮತ್ತು ಸರ್ಕಾರಗಳು ನೈಜ-ಸಮಯದ ದತ್ತಾಂಶವನ್ನು ಪ್ರವೇಶಿಸುತ್ತಿರುವಾಗ, ನಾಗರಿಕರು ತ್ವರಿತ ಪರಿಹಾರಗಳನ್ನು ನಿರೀಕ್ಷಿಸುತ್ತಾರೆ. ಈ ಬದಲಾಗುತ್ತಿರುವ ಮನಸ್ಥಿತಿಯು ನಮ್ಮ ನಾಗರಿಕ ಸೇವೆಗಳಿಂದ ಹೊಸ ಬದಲಾವಣೆಗಳನ್ನು ಸಹ ಬಯಸುತ್ತದೆ. ಆದ್ದರಿಂದ, ನಾವು ನಮ್ಮ ಆಯ್ಕೆ ನಿಯತಾಂಕಗಳು ಮತ್ತು ನೇಮಕಾತಿ ಪ್ರಕ್ರಿಯೆಗಳನ್ನು ಭವಿಷ್ಯದ ಅಗತ್ಯತೆಗಳೊಂದಿಗೆ ಹೊಂದಿಸಬೇಕು. ಸಾರ್ವಜನಿಕ ಕಚೇರಿಯಿಂದಲ್ಲ, ಆದರೆ ಸಾರ್ವಜನಿಕ ಸೇವೆಯಿಂದ ಆಕರ್ಷಿತರಾದ ಯುವಕರನ್ನು ನಾವು ಸಾರ್ವಜನಿಕ ಸೇವೆಗೆ ತರಬೇಕಾಗಿದೆ. ಆದ್ದರಿಂದ, ನೇಮಕಾತಿ ಪರೀಕ್ಷೆಗಳು ಅಭ್ಯರ್ಥಿಗೆ ಎಷ್ಟು ತಿಳಿದಿದೆ ಎಂಬುದನ್ನು ನಿರ್ಣಯಿಸುವುದು ಮುಖ್ಯ. ಆ ಯುವಕ ನಾಗರಿಕ ಸೇವೆಗಳಿಗೆ ಸೇರಲು ಏಕೆ ಬಯಸುತ್ತಾನೆ ಎಂಬುದನ್ನು ಸಹ ಅವರು ನಿರ್ಣಯಿಸಬೇಕು. ಏಕೆಂದರೆ ಪ್ರೇರಣೆ ಸರಿಯಾಗಿದ್ದಾಗ, ಬದಲಾಗುತ್ತಿರುವ ಸಾರ್ವಜನಿಕ ಆಕಾಂಕ್ಷೆಗಳೊಂದಿಗೆ ವೇಗವನ್ನು ಕಾಯ್ದುಕೊಳ್ಳುವುದು ಮತ್ತು ಅವುಗಳಿಗೆ ಹೊಂದಿಕೊಳ್ಳುವುದು ಸುಲಭವಾಗುತ್ತದೆ.
ಸ್ನೇಹಿತರೆ,
ನಾನು ತರಬೇತಿ ಅಧಿಕಾರಿಗಳನ್ನು ಭೇಟಿಯಾದಾಗಲೆಲ್ಲಾ, ಅವರು ನಾಗರಿಕ ಸೇವೆಗೆ ಏಕೆ ಸೇರಿದ್ದಾರೆ ಎಂಬುದನ್ನು ಆರಂಭದಲ್ಲಿಯೇ ಮತ್ತು ಅವರ ಸ್ವಂತ ಕೈಬರಹದಲ್ಲಿ ಬರೆಯಲು ನಾನು ಕೇಳುತ್ತೇನೆ ಎಂಬ ಅಂಶವು ನಿಮ್ಮಲ್ಲಿ ಹಲವರಿಗೆ ತಿಳಿದಿದೆ. ಏಕೆಂದರೆ ಕಾಲಾನಂತರದಲ್ಲಿ ಜವಾಬ್ದಾರಿಗಳು ಹೆಚ್ಚಾಗುತ್ತವೆ, ಹೊಸ ಸವಾಲುಗಳು ಹೊರಹೊಮ್ಮುತ್ತವೆ. ಅಂತಹ ಕ್ಷಣಗಳಲ್ಲಿ, ಆ ಸಣ್ಣ ಟಿಪ್ಪಣಿ ಅವರಿಗೆ ಅವರ ಮೂಲ ಉದ್ದೇಶವನ್ನು ನೆನಪಿಸುತ್ತದೆ. ಇದು ಅವರಿಗೆ ಸ್ವಯಂ ಮೌಲ್ಯಮಾಪನ ಸಾಧನವೂ ಆಗುತ್ತದೆ. ಯುಪಿಎಸ್‌ಸಿ ಮತ್ತು ರಾಜ್ಯ ಆಯೋಗಗಳು ಸಹ ಇದೇ ರೀತಿಯ ಕಾರ್ಯವಿಧಾನ ಅಭಿವೃದ್ಧಿಪಡಿಸುವುದನ್ನು ಪರಿಗಣಿಸಬೇಕು.
ಸ್ನೇಹಿತರೆ,
ಹಿಂದೆ ಸರ್ಕಾರವೇ ಅಂತಿಮ ರಕ್ಷಕ ಮತ್ತು ಪೂರೈಕೆದಾರ ಎಂದು ನಂಬಲಾಗಿದ್ದ ಆ ಅವಧಿಯನ್ನು ಸಹ ನಾವು ನೋಡಿದ್ದೇವೆ. ಆದರೆ ಇಂದು ನಮ್ಮ ಮಂತ್ರವೆಂದರೆ, "ನಾಗರಿಕ ದೇವೋ ಭವ" (ನಾಗರಿಕನೇ ದೈವ). ಬೇರೆ ರೀತಿಯಲ್ಲಿ ಹೇಳುವುದಾದರೆ, ಈ ದೇಶದ ನಾಗರಿಕನು ನಮಗೆ ದೇವತೆಗಿಂತ ಕಡಿಮೆಯಿಲ್ಲ. ನಾಗರಿಕ ಸೇವೆಯೇ ನಮ್ಮ ಅತ್ಯುನ್ನತ ಆದ್ಯತೆ.
ಆದ್ದರಿಂದ, ಸ್ನೇಹಿತರೆ,
21ನೇ ಶತಮಾನದ ಭಾರತವು ಹೊಸ ಕೆಲಸದ ಸಂಸ್ಕೃತಿಯೊಂದಿಗೆ ಮುಂದುವರಿಯುತ್ತಿದೆ. ಇದರ ಮೂಲ ತತ್ವವೆಂದರೆ: ಜನಪರ, ಕ್ರಿಯಾಶೀಲ ಮತ್ತು ಉತ್ತಮ ಆಡಳಿತ! ಜನಪರ ಎಂದರೆ ಸರ್ಕಾರದ ಅನುಕೂಲಕ್ಕೆ ಅನುಗುಣವಾಗಿ ಕೆಲಸ ಮಾಡುವುದಲ್ಲ, ಬದಲಾಗಿ ನಾಗರಿಕರ ಹಿತಾಸಕ್ತಿಗಳನ್ನು ಎಲ್ಲಕ್ಕಿಂತ ಹೆಚ್ಚಾಗಿ ಇರಿಸುವಂತಾಗಬೇಕು. ಸಮಸ್ಯೆಗಳು ಕಾಣಿಸಿಕೊಂಡ ನಂತರ ಮಾತ್ರ ಕಾರ್ಯ ನಿರ್ವಹಿಸುವ ಬದಲು, ಸಮಸ್ಯೆಗಳು ಉದ್ಭವಿಸುವ ಮೊದಲು ಅವುಗಳನ್ನು ನಿರೀಕ್ಷಿಸುವ ಮೂಲಕ ಪರಿಹಾರಗಳನ್ನು ಸಿದ್ಧಪಡಿಸುವುದು ಎಂದರೆ ಸಕ್ರಿಯ ಅಥವಾ ಕ್ರಿಯಾಶೀಲವಾಗಿಸುವುದು. ಉತ್ತಮ ಆಡಳಿತ ಎಂದರೆ ಸರ್ಕಾರದ ಅನುಪಸ್ಥಿತಿ, ಸರ್ಕಾರದಿಂದ ಒತ್ತಡ ಅಥವಾ ಅನಗತ್ಯ ಪ್ರಭಾವ ಇರಬಾರದು. ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ನಾವು ಈ ಮನೋಭಾವಕ್ಕೆ ಅನುಗುಣವಾಗಿ ನಮ್ಮ ಆಯ್ಕೆ ಪ್ರಕ್ರಿಯೆಗಳನ್ನು ವಿನ್ಯಾಸಗೊಳಿಸಬೇಕು. ಬಡವರ ನೋವನ್ನು ಅರ್ಥ ಮಾಡಿಕೊಳ್ಳುವ ಸೂಕ್ಷ್ಮತೆಯನ್ನು ಹೊಂದಿರುವ, ಯುವ ಶಕ್ತಿಯೊಂದಿಗೆ ಸ್ವಇಚ್ಛೆಯಿಂದ ಮುಂದೆ ಹೆಜ್ಜೆ ಹಾಕುವ ವೃತ್ತಿಪರರನ್ನು ನಾವು ರಾಷ್ಟ್ರಕ್ಕೆ ಒದಗಿಸಬೇಕು; ಕಠಿಣ ಸವಾಲುಗಳಿಗೆ ನವೀನ ಪರಿಹಾರಗಳನ್ನು ಕಂಡುಕೊಳ್ಳುವವರು, ರಾಷ್ಟ್ರದ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳುವವರು, ಕಾನೂನಿನ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವವರು ಮತ್ತು ಕಾನೂನು ಜನರ ಜೀವನವನ್ನು ಸುಲಭಗೊಳಿಸುತ್ತಿದೆಯೇ ಅಥವಾ ಅದು ಅಡಚಣೆ ಮಾಡುತ್ತಿದೆಯೇ ಎಂದು ಯಾರಾದರೂ ನಿರ್ಣಯಿಸಬೇಕು.
ಸ್ನೇಹಿತರೆ,
ಕಾಲ ಬದಲಾಗುತ್ತಿರುವ ಮತ್ತು ತಂತ್ರಜ್ಞಾನವು ವಿಕಸನಗೊಳ್ಳುತ್ತಿರುವ ವೇಗವನ್ನು ನಾವೆಲ್ಲರೂ ನೋಡುತ್ತಿದ್ದೇವೆ. ಮುಂದೆ ಬರುವ ಅವಧಿಯು ಸಮಾಜಕ್ಕೆ ಹೊಸ ರೀತಿಯ ಸವಾಲುಗಳನ್ನು ಪ್ರಸ್ತುತಪಡಿಸಲಿದೆ. ಪ್ರಸ್ತುತ ಎಐ ತಂತ್ರಜ್ಞಾನದ ಸುತ್ತ ನಡೆಯುತ್ತಿರುವ ಜಾಗತಿಕ ಚರ್ಚೆಯೊಂದಿಗೆ ನಾವೆಲ್ಲರೂ ಪರಿಚಿತರಾಗಿದ್ದೇವೆ. ಅಂತಹ ಸನ್ನಿವೇಶದಲ್ಲಿ, ನಮ್ಮ ನಾಗರಿಕ ಸೇವಕರು ಸಹ ವಿಭಿನ್ನ ಸಂದರ್ಭಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. ಮಾಹಿತಿ ಸಮರ, ಡೀಪ್‌ಫೇಕ್‌ಗಳ ಸವಾಲು, ಅಲ್ಗಾರಿದಮಿಕ್ ಪಕ್ಷಪಾತದ ಬಗ್ಗೆ ಕಾಳಜಿಗಳು ಮತ್ತು ಹವಾಮಾನ ನ್ಯಾಯದಂತಹ ಸಂಕೀರ್ಣ ಪ್ರಶ್ನೆಗಳನ್ನು ಒಳಗೊಂಡಿರುವ ಸಂದರ್ಭಗಳು ಇರುತ್ತವೆ. ಆದ್ದರಿಂದ, ನಮ್ಮ ಆಯ್ಕೆ ಪ್ರಕ್ರಿಯೆಗಳಲ್ಲಿ, ಸಂಕೀರ್ಣ ಸಮಸ್ಯೆ ಪರಿಹರಿಸುವ ಸಾಮರ್ಥ್ಯಗಳು ಮತ್ತು ದೀರ್ಘಾವಧಿಯ ದೃಷ್ಟಿಕೋನವನ್ನು ನಿರ್ಣಯಿಸಲು ಮತ್ತು ಆ ದಿಕ್ಕಿನಲ್ಲಿ ಉದ್ದೇಶಪೂರ್ವಕ ಪ್ರಯತ್ನಗಳನ್ನು ಮಾಡಲು ನಾವು ಆದ್ಯತೆ ನೀಡಬೇಕು.
ಸ್ನೇಹಿತರೆ,
ಇಂದು ನಮ್ಮ ರಾಷ್ಟ್ರವು ಸುಧಾರಣೆಗಳ ವೇಗದಲ್ಲಿ ಸಾಗುತ್ತಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಅಂತಹ ಸಮಯದಲ್ಲಿ ನಮ್ಮ ಪರೀಕ್ಷಾ ಸಂಸ್ಥೆಗಳು ಈಗಿನ ಅಗತ್ಯವಾಗಿರುವ ಸುಧಾರಣೆಗಳ ಮೇಲೆ ತ್ವರಿತವಾಗಿ ಕಾರ್ಯ ನಿರ್ವಹಿಸಬೇಕು. ಪರೀಕ್ಷೆಗಳನ್ನು ನಡೆಸಲು ತೆಗೆದುಕೊಳ್ಳುವ ಸಮಯವು ಒಂದು ಪ್ರಮುಖ ವಿಷಯವಾಗಿದೆ. ನಾವು ಪರೀಕ್ಷೆಯನ್ನು ಕೇವಲ ಒಂದು ಘಟನೆಯಾಗಿ ನೋಡಬಾರದು. ಇದು ಒಂದು ಘಟನೆಗೆ ಮಾತ್ರವಲ್ಲದೆ, ಯುವಜನರ ಭವಿಷ್ಯ ಮತ್ತು ಜೀವನಕ್ಕೆ ಸಂಬಂಧಿಸಿದೆ. ಪರೀಕ್ಷೆಗಳಲ್ಲಿ ಕೆಲವು ತಿಂಗಳುಗಳ ವಿಳಂಬವು ಅವರಿಗೆ ಗಂಭೀರ ಸವಾಲಾಗಿ ಪರಿಣಮಿಸಬಹುದು. ತರಬೇತಿ ಶುಲ್ಕಗಳು, ಬಾಡಿಗೆ, ಸಾರಿಗೆ ವೆಚ್ಚಗಳು, ಇವೆಲ್ಲವೂ ಕುಟುಂಬಗಳ ಮೇಲೆ ಭಾರಿ ಹೊರೆ ಹಾಕುತ್ತವೆ. ಆದ್ದರಿಂದ, ನಮ್ಮ ಪರೀಕ್ಷಾ ವ್ಯವಸ್ಥೆಯು ಸಮಯದ ಖಚಿತತೆಯ ತತ್ವವನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ. ಯುಪಿಎಸ್‌ಸಿ ಮತ್ತು ದೇಶಾದ್ಯಂತದ ಎಲ್ಲಾ ಆಯ್ಕೆ ಆಯೋಗಗಳು ಮಾನದಂಡಗಳನ್ನು ಕಡಿಮೆ ಮಾಡದೆ, ನಮ್ಮ ಪರೀಕ್ಷಾ ಚಕ್ರವನ್ನು ಕಡಿಮೆ ಮಾಡಲು ನಾವು ಮಾರ್ಗಗಳನ್ನು ಕಂಡುಕೊಳ್ಳುತ್ತೇವೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ವಾಸ್ತವವಾಗಿ, ನಾನು ಗ್ಯಾಲರಿಯನ್ನು ನೋಡುತ್ತಿರುವಾಗ, ಸುಮಾರು 100 ದಿನಗಳನ್ನು ಈಗಾಗಲೇ ಕಡಿಮೆ ಮಾಡಲಾಗಿದೆ ಎಂದು ನಾನು ಗಮನಿಸಿದೆ. ಈ ಸಾಧನೆಯು ಖಂಡಿತವಾಗಿಯೂ ಮೆಚ್ಚುಗೆಗೆ ಅರ್ಹವಾಗಿದೆ, ಅದಕ್ಕಾಗಿ ನಿಮ್ಮೆಲ್ಲರನ್ನು ನಾನು ಅಭಿನಂದಿಸುತ್ತೇನೆ.
ಆದರೆ ಸ್ನೇಹಿತರೆ,
ಇದು ಕೇವಲ ಆಡಳಿತಾತ್ಮಕ ಸುಧಾರಣೆಯಲ್ಲ. ಇದು ಸಮಾನತೆಯನ್ನು ಉತ್ತೇಜಿಸುವ ಸುಧಾರಣೆಯೂ ಆಗಿದೆ.
ಸ್ನೇಹಿತರೆ,
ನಿಮಗೆಲ್ಲರಿಗೂ ಮುಖ್ಯ ಕಾರ್ಯದರ್ಶಿಗಳ ಸಮ್ಮೇಳನ ಮತ್ತು ಡಿಜಿಪಿ ಸಮ್ಮೇಳನದ ಬಗ್ಗೆ ತಿಳಿದಿದೆ. ಕಳೆದ 10 ವರ್ಷಗಳಲ್ಲಿ ಇವು ಪ್ರಮುಖ ಸಾಂಸ್ಥಿಕ ಕಾರ್ಯವಿಧಾನಗಳಾಗಿ ವಿಕಸನಗೊಂಡಿವೆ. ಈ ವೇದಿಕೆಗಳ ಅಡಿ, ದೇಶದ ಎಲ್ಲಾ ಮುಖ್ಯ ಕಾರ್ಯದರ್ಶಿಗಳು 3 ದಿನಗಳ ಕಾಲ ಒಟ್ಟಾಗಿ ಚರ್ಚಿಸಿ ವಿಚಾರ ವಿನಿಮಯ ಮಾಡಿಕೊಳ್ಳುತ್ತಾರೆ. ಅದೇ ರೀತಿ, ಡಿಜಿಪಿ ಸಮ್ಮೇಳನ ಸಮಯದಲ್ಲಿ, ಎಲ್ಲಾ ಪೊಲೀಸ್ ಮಹಾನಿರ್ದೇಶಕರು 3 ದಿನಗಳ ಕಾಲ ಒಟ್ಟುಗೂಡಿ ಸಮಸ್ಯೆಗಳನ್ನು ಚರ್ಚಿಸಲು ಮತ್ತು ಅನುಭವಗಳನ್ನು ಹಂಚಿಕೊಳ್ಳಲು ಸೇರುತ್ತಾರೆ. ಈ ಸಮ್ಮೇಳನಗಳ ಒಂದು ಉದ್ದೇಶವೆಂದರೆ ಒಂದು ರಾಜ್ಯವು ಮತ್ತೊಂದು ರಾಜ್ಯದ ಅತ್ಯುತ್ತಮ ಅಭ್ಯಾಸಗಳ ಬಗ್ಗೆ ಕಲಿಯಲು, ಅರ್ಥ ಮಾಡಿಕೊಳ್ಳಲು ಮತ್ತು ಸೂಕ್ತವಾದಲ್ಲಿ ಅಳವಡಿಸಿಕೊಳ್ಳಲು ಸಹಾಯ ಮಾಡುವುದಾಗಿದೆ. ಪ್ರತಿ ವರ್ಷ ಯುಪಿಎಸ್‌ಸಿ ರಾಜ್ಯ ಸಾರ್ವಜನಿಕ ಸೇವಾ ಆಯೋಗಗಳ ಸಹಭಾಗಿತ್ವದಲ್ಲಿ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸುತ್ತದೆ ಎಂಬುದು ನನಗೆ ತಿಳಿದಿದೆ. ಈ ಸಮ್ಮೇಳನವನ್ನು ವಿಶಾಲ, ಹೆಚ್ಚು ಉತ್ಪಾದಕ ಮತ್ತು ಹೊಸ ವಿಚಾರಗಳನ್ನು ಶ್ರೀಮಂತಗೊಳಿಸಲು, ನೀವು ಅದಕ್ಕೆ ಹೊಸ ರೂಪು ಮತ್ತು ಹೊಸ ಆಯಾಮ ನೀಡುವ ಬಗ್ಗೆ ನಿರಂತರವಾಗಿ ಯೋಚಿಸುತ್ತಿದ್ದೀರಿ ಎಂಬುದು ನನಗೆ ಖಚಿತವಾಗಿದೆ. ಅಂತಹ ಪ್ರಯತ್ನಗಳು ಸಂಸ್ಥೆಗಳು ತಮ್ಮ ಅತ್ಯುತ್ತಮ ಅಭ್ಯಾಸಗಳನ್ನು ಪರಸ್ಪರ ಹಂಚಿಕೊಳ್ಳಲು ಸಹಾಯ ಮಾಡುತ್ತದೆ. ಅದೇ ಸಮಯದಲ್ಲಿ, ಈ ಸಮ್ಮೇಳನವು ಅಂತಾರಾಷ್ಟ್ರೀಯ ಅತ್ಯುತ್ತಮ ಅಭ್ಯಾಸಗಳನ್ನು ಸಹ ಅಧ್ಯಯನ ಮಾಡಬೇಕು. ನಮ್ಮ ಪ್ರಕ್ರಿಯೆಗಳು ಮತ್ತು ಕಾರ್ಯವಿಧಾನಗಳ ದಕ್ಷತೆ ಸುಧಾರಿಸಲು ತಂತ್ರಜ್ಞಾನವನ್ನು ಹೇಗೆ ಬಳಸಬಹುದು ಎಂಬುದರ ಕುರಿತು ಕೇಂದ್ರೀಕೃತ ಚರ್ಚೆಗಳನ್ನು ಸಹ ನಡೆಸಬೇಕು. ಅಡ್ಡ ಕಲಿಕೆ(ಕ್ರಾಸ್-ಲರ್ನಿಂಗ್)ಯಲ್ಲಿನ ಅಂತಹ ಪ್ರಯತ್ನಗಳು ಯುಪಿಎಸ್‌ಸಿಗೆ ಮತ್ತು ಪ್ರತಿ ರಾಜ್ಯ ಆಯ್ಕೆ ಆಯೋಗಕ್ಕೆ ಪ್ರಯೋಜನ ನೀಡುತ್ತದೆ. ನಾವು ಕಾರ್ಯವಿಧಾನದ ಮಾನದಂಡಗಳು ಮತ್ತು ಪ್ರಕ್ರಿಯೆಗಳನ್ನು ಪ್ರಮಾಣೀಕರಿಸುವುದನ್ನು ಸಹ ಪರಿಗಣಿಸಬೇಕು. ಇದು ಯುವಜನರಿಗೆ ಗಮನಾರ್ಹ ಸಹಾಯ ಒದಗಿಸುತ್ತದೆ.
ಸ್ನೇಹಿತರೆ,
ಮತ್ತೊಂದು ಪ್ರಮುಖ ವಿಷಯವೆಂದರೆ, ಯುಪಿಎಸ್‌ಸಿ ಮತ್ತು ರಾಜ್ಯ ಆಯ್ಕೆ ಆಯೋಗಗಳಲ್ಲಿ ಸಾಮರ್ಥ್ಯ ವೃದ್ಧಿ. ಈ ಪ್ರಯತ್ನವು ನಿರಂತರ ಆಧಾರದ ಮೇಲೆ ಮುಂದುವರಿಯಬೇಕು. ಮಿಷನ್ ಕರ್ಮಯೋಗಿ ಅಡಿ ಅಭಿವೃದ್ಧಿಪಡಿಸಲಾದ ಐ-ಜಿಒಟಿ ವೇದಿಕೆಯನ್ನು ನಮ್ಮ ಆಂತರಿಕ ವ್ಯವಸ್ಥೆಗಳಿಗೆ, ನಮ್ಮ ತಂಡಗಳ ಸಾಮರ್ಥ್ಯಗಳನ್ನು ಬಲಪಡಿಸಲು ಮತ್ತು ಈ ವಿವಿಧ ವೇದಿಕೆಗಳ ಮೂಲಕ ನಮ್ಮ ಸಂಸ್ಥೆಗಳ ದಕ್ಷತೆ ಹೆಚ್ಚಿಸಲು ಸಹ ಬಳಸಬಹುದು.
ಸ್ನೇಹಿತರೆ,
ನಿಮ್ಮ ಕೆಲಸವು ಭಾರತದ ಯುವಕರ ಭವಿಷ್ಯಕ್ಕೆ ನೇರವಾಗಿ ಸಂಬಂಧಿಸಿದೆ ಎಂಬುದನ್ನು ನೀವು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು. ಬೇರೆ ರೀತಿಯಲ್ಲಿ ಹೇಳುವುದಾದರೆ, ಯುವ ಶಕ್ತಿಯನ್ನು ರಾಷ್ಟ್ರೀಯ ಶಕ್ತಿಯಾಗಿ ಪರಿವರ್ತಿಸುವ ಧ್ಯೇಯದಲ್ಲಿ ನೀವು ಪ್ರಮುಖ ಆಧಾರಸ್ತಂಭವಾಗಿದ್ದೀರಿ. ಅನೇಕ ವರ್ಷಗಳಲ್ಲಿ ಈ ಧ್ಯೇಯವನ್ನು ಮುನ್ನಡೆಸುವಲ್ಲಿ ನೀವು ಪ್ರಮುಖ ಪಾತ್ರ ವಹಿಸಿದ್ದೀರಿ. ಯುಪಿಎಸ್‌ಸಿ ಸ್ಥಾಪನೆಯಾದಾಗ ದೊಡ್ಡ ನಗರಗಳು, ಆರ್ಥಿಕವಾಗಿ ಸವಲತ್ತು ಪಡೆದ ಕುಟುಂಬಗಳು ಮತ್ತು ಪ್ರತಿಷ್ಠಿತ ಸಂಸ್ಥೆಗಳ ಯುವಜನರಿಗೆ ಅವಕಾಶಗಳು ಹೆಚ್ಚು ಸುಲಭವಾಗಿ ಲಭ್ಯವಿದ್ದವು. ಆದಾಗ್ಯೂ, ಇಂದು ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳ ಯುವಕರು ಸಾರ್ವಜನಿಕ ಸೇವೆಗೆ ಪ್ರವೇಶಿಸುತ್ತಿದ್ದಾರೆ. ನಮ್ಮ ಹೆಣ್ಣು ಮಕ್ಕಳ ಭಾಗವಹಿಸುವಿಕೆಯೂ ಸ್ಥಿರವಾಗಿ ಹೆಚ್ಚುತ್ತಿದೆ. 1952ರಲ್ಲಿ ನಾಗರಿಕ ಸೇವೆಗಳಲ್ಲಿ ಮಹಿಳೆಯರು ಕೇವಲ 3 ಪ್ರತಿಶತದಷ್ಟು ಅಭ್ಯರ್ಥಿಗಳಾಗಿದ್ದರು, ಕೇವಲ 3 ಪ್ರತಿಶತ. ಇಂದು ಆ ಸಂಖ್ಯೆ 30 ಪ್ರತಿಶತಕ್ಕಿಂತ ಹೆಚ್ಚಾಗಿದೆ. ಯುಪಿಎಸ್‌ಸಿಯ ಸಂಪೂರ್ಣ ಇತಿಹಾಸದಲ್ಲಿ 4 ಮಹಿಳಾ ಅಧ್ಯಕ್ಷರಿದ್ದಾರೆ. ಚಪ್ಪಾಳೆ ತಟ್ಟುವ ಸಮಯ ಈಗ ಬಂದಿದೆ. ಯುಪಿಎಸ್‌ಸಿಯ ಸಂಪೂರ್ಣ ಇತಿಹಾಸದಲ್ಲಿ ಆ 4 ಮಹಿಳಾ ಅಧ್ಯಕ್ಷರಲ್ಲಿ ಮೂವರನ್ನು 2014ರ ನಂತರ ನೇಮಿಸಲಾಗಿದೆ. ಈ ಬದಲಾವಣೆಗಳು ಕೇವಲ ಅಂಕಿಅಂಶಗಳಾಗದೆ, ನಮ್ಮ ದೇಶದಲ್ಲಿ ಅವಕಾಶದ ವ್ಯಾಪ್ತಿ ಎಷ್ಟು ವಿಸ್ತರಿಸಿದೆ ಎಂಬುದನ್ನು ಅವು ಪ್ರದರ್ಶಿಸುತ್ತಿವೆ.
ಸ್ನೇಹಿತರೆ,
1976ರಲ್ಲಿ ಯುಪಿಎಸ್‌ಸಿ 50 ವರ್ಷಗಳನ್ನು ಪೂರೈಸಿದಾಗ, ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳ ಸಂಖ್ಯೆ ಇಂದಿನಕ್ಕಿಂತ ತೀರಾ ಕಡಿಮೆಯಾಗಿತ್ತು. ಆ ಅವಧಿಗೆ ಹೋಲಿಸಿದರೆ, ಪರೀಕ್ಷಾ ಆಕಾಂಕ್ಷಿಗಳ ಸಂಖ್ಯೆ 45 ಪಟ್ಟು ಹೆಚ್ಚಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಇಂದು ನಮ್ಮ ಮುಂದೆ ಅಪಾರ ಪ್ರತಿಭೆಗಳ ಸಮೂಹವಿದೆ. ಇದು ರಾಷ್ಟ್ರಕ್ಕೆ ಅಪಾರ ಹೆಮ್ಮೆಯ ವಿಷಯ. ಅದೇ ಸಮಯದಲ್ಲಿ, ನಮ್ಮ ಜವಾಬ್ದಾರಿ ಪ್ರಮಾಣಾನುಗುಣವಾಗಿ ಬೆಳೆದಿದೆ. ನಾವು ಅಂತಹ ವಿಶಾಲವಾದ ಪ್ರತಿಭಾ ಸಮೂಹ ಹೊಂದಿರುವಾಗ, ಜಗತ್ತೇ ಅಸೂಯೆ ಪಡುವಂತಹ ಅಭ್ಯರ್ಥಿಯನ್ನು ನೀವು ಆಯ್ಕೆ ಮಾಡುತ್ತಿಲ್ಲ. ನೀವು ನಂತರ ಸರ್ಕಾರದ ಪ್ರತಿನಿಧಿಯಾಗುವ ವ್ಯಕ್ತಿಗಳನ್ನು ಆಯ್ಕೆ ಮಾಡುತ್ತಿದ್ದೀರಿ. ತಳಮಟ್ಟದಲ್ಲಿ, ಜನರು ಆ ವ್ಯಕ್ತಿಯನ್ನು ಸರ್ಕಾರವೆಂದು ಪರಿಗಣಿಸುತ್ತಾರೆ. ಆದ್ದರಿಂದ, ಸರಿಯಾದ ವ್ಯಕ್ತಿಯನ್ನು ಆಯ್ಕೆ ಮಾಡುವ ಅಗಾಧ ಜವಾಬ್ದಾರಿಯನ್ನು ನೀವೆಲ್ಲರೂ ಹೊರುತ್ತೀರಿ.
ಸ್ನೇಹಿತರೆ,
ತನ್ನ ಮೊದಲ ಶತಮಾನೋತ್ಸವದಲ್ಲಿ ಯುಪಿಎಸ್‌ಸಿ ತನ್ನ ವಿಶ್ವಾಸಾರ್ಹತೆಯನ್ನು ನಿರಂತರವಾಗಿ ಬಲಪಡಿಸಿದೆ, ರಾಷ್ಟ್ರದ ವಿಶ್ವಾಸವನ್ನು ಗಳಿಸಿದೆ. ಈಗ, ಈ ಸಂಸ್ಥೆಯು ತನ್ನ 2ನೇ ಶತಮಾನೋತ್ಸವಕ್ಕೆ ಕಾಲಿಡುತ್ತಿದ್ದಂತೆ, ಹೊಸ ಸಾಧ್ಯತೆಗಳು ಮತ್ತು ಹೊಸ ಸವಾಲುಗಳಿಗೆ ಅನುಗುಣವಾಗಿ ಆ ವಿಶ್ವಾಸಾರ್ಹತೆಯನ್ನು ಉತ್ಕೃಷ್ಟಗೊಳಿಸಬೇಕು, ಆಳಗೊಳಿಸಬೇಕು. ಇಲ್ಲಿಯವರೆಗೆ ನಮ್ಮ ಶಕ್ತಿಯಾಗಿರುವ ಮೌಲ್ಯಗಳನ್ನು ಸಂರಕ್ಷಿಸುವಾಗ, ಭವಿಷ್ಯದ ಬೇಡಿಕೆಗಳನ್ನು ಪೂರೈಸಲು ನಾವು ನಮ್ಮನ್ನು ನವೀಕರಿಸಿಕೊಳ್ಳಬೇಕು. ಯುಪಿಎಸ್‌ಸಿಯ ಸ್ವಾತಂತ್ರ್ಯ, ನಿಷ್ಪಕ್ಷಪಾತ, ಅರ್ಹತೆಗೆ ಬದ್ಧತೆ, ಗೌಪ್ಯತೆ ಮತ್ತು ನ್ಯಾಯಯುತ ಕಾರ್ಯವಿಧಾನಗಳು ಅದರ ನಿರ್ಣಾಯಕ ಗುರುತನ್ನು ರೂಪಿಸುತ್ತವೆ. ಈ ಮೌಲ್ಯಗಳನ್ನು ಯಾವಾಗಲೂ ಸಂರಕ್ಷಿಸಬೇಕು. ಈ ಮನವಿಯೊಂದಿಗೆ, ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಲ್ಲಿಸುತ್ತೇನೆ.
ತುಂಬು ಧನ್ಯವಾದಗಳು.
ಹಕ್ಕು ನಿರಾಕರಣೆ: ಇದು ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ರೂಪಾಂತರವಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
*****
(ಪ್ರಕಟಣೆ ಐ.ಡಿ.: 2318845)
ವಿಸಿಟರ್ ಕೌಂಟರ್ : 5