ಶಿಕ್ಷಣ ಸಚಿವಾಲಯ
azadi ka amrit mahotsav

ಭಾರತದ ನಾವೀನ್ಯತೆಯ ವೇಗವು ವಿಕಸಿತ ಭಾರತದ ದೃಷ್ಟಿಕೋನವನ್ನು ಮುನ್ನಡೆಸಲಿದೆ: ಶ್ರೀ ಪ್ರಲ್ಹಾದ್ ಜೋಶಿ


ನಾವೀನ್ಯತೆಯು ನೈಜ ಮಾನವ ಅಗತ್ಯದಿಂದ ಆರಂಭವಾಗಿ ಪ್ರಾಯೋಗಿಕ ಪರಿಹಾರಕ್ಕೆ ದಾರಿ ಮಾಡಿಕೊಟ್ಟಾಗ, ಅದು ‘ಸೇವಾ’ ಕಾರ್ಯವಾಗುತ್ತದೆ: ಶ್ರೀ ಪ್ರಲ್ಹಾದ್ ಜೋಶಿ

ಕೇಂದ್ರ ಶಿಕ್ಷಣ ಸಚಿವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ 'ಸೇವಾ ಫಸ್ಟ್ ಇನ್ನೋವೇಶನ್ ಚಾಲೆಂಜ್' ಉದ್ಘಾಟಿಸಿದರು

ಪ್ರಕಟಣಾ ದಿನಾಂಕ: 25 SEP 2026 4:01PM by PIB Bengaluru

ಯುವಜನರು ‘ಸೇವಾ’ ಮನೋಭಾವವನ್ನು ನಾವೀನ್ಯತೆಯೊಂದಿಗೆ ಸಂಯೋಜಿಸಿ ನಿಜಜೀವನದ ಸವಾಲುಗಳನ್ನು ಗುರುತಿಸಿ, ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಬಹುದಾದ ಹಾಗೂ ವ್ಯಾಪಕವಾಗಿ ವಿಸ್ತರಿಸಬಹುದಾದ ಪರಿಹಾರಗಳನ್ನು ಅಭಿವೃದ್ಧಿಪಡಿಸುವಂತೆ ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ಕರೆ ನೀಡಿದರು. ಇದರಿಂದ 2047ರ ವೇಳೆಗೆ ವಿಕಸಿತ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಯುವಜನರು ಪಾಲ್ಗೊಳ್ಳಲು ಮತ್ತು ಕೊಡುಗೆ ನೀಡಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯಲ್ಲಿ ದಕ್ಷಿಣ ವಲಯಕ್ಕಾಗಿ ಆಯೋಜಿಸಲಾದ 'ಸೇವಾ ಫಸ್ಟ್ ಇನ್ನೋವೇಶನ್ ಚಾಲೆಂಜ್' (ಎಸ್‌ಎಫ್‌ಐಸಿ)ಗೆ ಚಾಲನೆ ನೀಡಿ ಸಚಿವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಅವರು ಎಸ್‌ಎಫ್‌ಐಸಿಯ ವೆಬ್‌ಸೈಟ್ ಮತ್ತು ನೋಂದಣಿ ಪೋರ್ಟಲ್‌ಗೂ ಚಾಲನೆ ನೀಡಿದರು.

“ಸೇವೆಯು ಕಾರ್ಯರೂಪದಲ್ಲಿ ವ್ಯಕ್ತವಾಗಬೇಕು” ಎಂದು ಸಚಿವರು ಹೇಳಿದರು. ಸಮಸ್ಯೆಯೊಂದನ್ನು ಅರ್ಥಮಾಡಿಕೊಂಡು, ಅದನ್ನು ದೊಡ್ಡ ಪ್ರಮಾಣದಲ್ಲಿ ಪರಿಹರಿಸಲು ನಾವೀನ್ಯತೆಯ ಮೂಲಕ ಪರಿಹಾರ ಕಂಡುಕೊಳ್ಳುವುದು ಸೇವೆಯ ಪ್ರಮುಖ ಅಭಿವ್ಯಕ್ತಿಯಾಗಿದೆ ಎಂದು ಅವರು ಹೇಳಿದರು. ಭಾರತದ ಜನಸಂಖ್ಯಾ ಲಾಭಾಂಶವನ್ನು ಉಲ್ಲೇಖಿಸಿದ ಶ್ರೀ ಜೋಶಿ ಅವರು, ಭಾರತದ ಜನಸಂಖ್ಯೆಯ ಸುಮಾರು ಶೇ.65ರಷ್ಟು ಮಂದಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಕುತೂಹಲದಿಂದ ಕೂಡಿದ, ಆತ್ಮವಿಶ್ವಾಸ ಹೊಂದಿರುವ ಹಾಗೂ ತಂತ್ರಜ್ಞಾನವನ್ನು ಸುಲಭವಾಗಿ ಬಳಸಿಕೊಳ್ಳುವ ಪೀಳಿಗೆ ಭಾರತದಲ್ಲಿದೆ ಎಂದು ಅವರು ಹೇಳಿದರು. ಯುವಜನರ ಈ ಕುತೂಹಲವನ್ನು ಉಪಯುಕ್ತ ಕ್ರಿಯೆಯಾಗಿ ಪರಿವರ್ತಿಸಲು ಅವರಿಗೆ ಅವಕಾಶಗಳನ್ನು ಕಲ್ಪಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಅವರು ತಿಳಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020ರ ಪಾತ್ರ ಮತ್ತು ಮಹತ್ವವನ್ನು ಉಲ್ಲೇಖಿಸಿದ ಶ್ರೀ ಪ್ರಲ್ಹಾದ್ ಜೋಶಿ, ಶಿಕ್ಷಣದ ಕೇಂದ್ರಬಿಂದುವಿನಲ್ಲಿ ವಿಮರ್ಶಾತ್ಮಕ ಚಿಂತನೆ, ಸೃಜನಶೀಲತೆ, ಅನುಭವ ಆಧಾರಿತ ಕಲಿಕೆ ಮತ್ತು ಸಮಸ್ಯೆ ಪರಿಹಾರಕ್ಕೆ ಎನ್‌ಇಪಿ ಆದ್ಯತೆ ನೀಡಿದೆ ಎಂದು ಹೇಳಿದರು. ಚಿಕ್ಕ ವಯಸ್ಸಿನಿಂದಲೇ ವಿದ್ಯಾರ್ಥಿಗಳಿಗೆ ಪ್ರಯೋಗ ನಡೆಸಲು, ನಿರ್ಮಿಸಲು ಮತ್ತು ನಾವೀನ್ಯತೆಯನ್ನು ಬೆಳೆಸಿಕೊಳ್ಳಲು ಅವಕಾಶಗಳನ್ನು ಕಲ್ಪಿಸುವ ಮೂಲಕ ಈ ದೃಷ್ಟಿಕೋನವನ್ನು ಸಾಕಾರಗೊಳಿಸಲಾಗುತ್ತಿದೆ ಎಂದು ಅವರು ತಿಳಿಸಿದರು. 10,000ಕ್ಕೂ ಹೆಚ್ಚು ಅಟಲ್ ಟಿಂಕರಿಂಗ್ ಲ್ಯಾಬ್‌ಗಳು, ಸುಮಾರು 17,300 ಸಂಸ್ಥೆಗಳ ನಾವೀನ್ಯತಾ ಮಂಡಳಿಗಳು ಹಾಗೂ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‌ನಂತಹ ಉಪಕ್ರಮಗಳ ಮೂಲಕ ಬಲಿಷ್ಠ ನಾವೀನ್ಯತಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಸರ್ಕಾರ ಕೈಗೊಂಡಿರುವ ಪ್ರಯತ್ನಗಳನ್ನೂ ಅವರು ಒತ್ತಿ ಹೇಳಿದರು.

 

‘ಸೇವಾ’ ಮನೋಭಾವದಿಂದ ಮಾರ್ಗದರ್ಶಿಸಲ್ಪಡುವ ನಾವೀನ್ಯತೆಯು 2047ರ ವಿಕಸಿತ ಭಾರತದ ದೃಷ್ಟಿಕೋನಕ್ಕೆ ಅರ್ಥಪೂರ್ಣ ಕೊಡುಗೆ ನೀಡಬಲ್ಲದು ಎಂದು ಸಚಿವರು ಒತ್ತಿ ಹೇಳಿದರು. ಈ ಚಾಲೆಂಜ್ ಮೂಲಕ ಹೊರಹೊಮ್ಮುವ ಯುವ ನಾವೀನ್ಯಕಾರರೊಂದಿಗೆ ನವೋದ್ಯಮಗಳು ಮತ್ತು ಉದ್ಯಮ ಪಾಲುದಾರರು ಸಂಪರ್ಕ ಸಾಧಿಸುವಂತೆ ಅವರು ಕರೆ ನೀಡಿದರು. ಭವಿಷ್ಯದಲ್ಲಿ ಮಾರ್ಗದರ್ಶನ, ಅಳವಡಿಕೆ ಮತ್ತು ಉತ್ತಮ ಪರಿಹಾರಗಳನ್ನು ವಿಸ್ತರಿಸಲು ನೆರವಾಗುವಂತೆ ಎಸ್‌ಎಫ್‌ಐಸಿ ವೆಬ್‌ಸೈಟ್ ಮೂಲಕ ರಾಷ್ಟ್ರೀಯ ರೆಪೊಸಿಟರಿಯನ್ನು ರೂಪಿಸುವಂತೆಯೂ ಅವರು ಸಲಹೆ ನೀಡಿದರು. ಬೆಂಗಳೂರಿನ ಐಐಎಸ್‌ಸಿ, ಭಾಗವಹಿಸುತ್ತಿರುವ ಸಂಸ್ಥೆಗಳು, ಬೋಧಕವರ್ಗ, ನವೋದ್ಯಮಗಳು ಹಾಗೂ ಈ ಉಪಕ್ರಮಕ್ಕೆ ಸಂಬಂಧಿಸಿದ ಎಲ್ಲ ಪಾಲುದಾರರನ್ನು ಅವರು ಅಭಿನಂದಿಸಿದರು. 2026ರ ಡಿಸೆಂಬರ್‌ನಲ್ಲಿ ನವದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಅಂತಿಮ ಹಂತದಲ್ಲಿ ಭಾರತದಾದ್ಯಂತದ ಅತ್ಯುತ್ತಮ ಪರಿಹಾರಗಳನ್ನು ನಿರೀಕ್ಷಿಸುತ್ತಿರುವುದಾಗಿ ಅವರು ಹೇಳಿದರು.

ಐಐಎಸ್‌ಸಿ ಬೆಂಗಳೂರು ದಕ್ಷಿಣ ವಲಯದ ನೋಡಲ್ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದ್ದು, ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಹಾಗೂ ಲಕ್ಷದ್ವೀಪಗಳಲ್ಲಿ ತಾಂತ್ರಿಕ ಮೌಲ್ಯಮಾಪನ ಮತ್ತು ಮಾರ್ಗದರ್ಶನಕ್ಕೆ ಬೆಂಬಲ ನೀಡಲಿದೆ.

ಎಸ್‌ಎಫ್‌ಐಸಿ ದೇಶದಾದ್ಯಂತದ ಶಾಲೆಗಳು, ಐಟಿಐಗಳು, ಪಾಲಿಟೆಕ್ನಿಕ್‌ಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಹಾಗೂ ಯುವ ನಾವೀನ್ಯಕಾರರನ್ನು ಐದು ರಾಷ್ಟ್ರೀಯ ವಿಷಯಗಳ ಅಡಿಯಲ್ಲಿ (1. ಸ್ವಚ್ಛ ಮತ್ತು ಸುಸ್ಥಿರ ಭಾರತ, 2. ಸಮೃದ್ಧ ರೈತರು, ಸಮೃದ್ಧ ಭಾರತ, 3. ಆರೋಗ್ಯಕರ ಮತ್ತು ಎಲ್ಲರನ್ನು ಒಳಗೊಂಡ ಭಾರತ, 4. ಶಿಕ್ಷಿತ ಮತ್ತು ಕೌಶಲ್ಯಯುತ ಭಾರತ ಮತ್ತು 5. ಸುರಕ್ಷಿತ ಭಾರತ) ಹಾಗೂ ಎರಡು ಪರಿಹಾರ ವಿಭಾಗಗಳಲ್ಲಿ (ವಿಭಾಗ ಎ — ಉತ್ಪನ್ನ ಅಥವಾ ತಂತ್ರಜ್ಞಾನ ಪರಿಹಾರ ಮತ್ತು ವಿಭಾಗ ಬಿ — ವ್ಯವಹಾರ ಮಾದರಿ ಅಥವಾ ಆಡಳಿತಾತ್ಮಕ ಪರಿಹಾರ) ಒಗ್ಗೂಡಿಸಲಿದೆ. ಮಾರ್ಗದರ್ಶನ, ಇನ್‌ಕ್ಯುಬೇಷನ್ ಮತ್ತು ನಿಜ ಜೀವನದಲ್ಲಿ ಅಳವಡಿಸಿಕೊಳ್ಳುವ ಅವಕಾಶಗಳ ಮೂಲಕ ಭರವಸೆ ಮೂಡಿಸುವ ಆಲೋಚನೆಗಳನ್ನು ಕೇವಲ ಸಲ್ಲಿಕೆಗೆ ಸೀಮಿತಗೊಳಿಸದೆ ಮುಂದಿನ ಹಂತಕ್ಕೆ ಕೊಂಡೊಯ್ಯುವುದು ಈ ಚಾಲೆಂಜ್‌ನ ಉದ್ದೇಶವಾಗಿದೆ. 2026ರ ಸೆಪ್ಟೆಂಬರ್ 25ರಿಂದ ಅಕ್ಟೋಬರ್ 24ರವರೆಗೆ ನೋಂದಣಿಗೆ ಸವಾಲು ಮುಕ್ತವಾಗಿರಲಿದ್ದು, ರಾಷ್ಟ್ರೀಯ ಅಂತಿಮ ಹಂತವು 2026ರ ಡಿಸೆಂಬರ್‌ನಲ್ಲಿ ನವದೆಹಲಿಯಲ್ಲಿ ನಡೆಯಲಿದೆ.

ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ನಿರ್ದೇಶಕರಾದ ಪ್ರೊ. ಗೋವಿಂದನ್ ರಂಗರಾಜನ್; ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಆನಂದರಾವ್ ವಿ. ಪಾಟೀಲ್; ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಕಾರ್ಯದರ್ಶಿ ಪ್ರೊ. ಶ್ಯಾಮಾ ರಾಥ್; ಎನ್‌ಐಟಿಗಳು ಮತ್ತು ಇತರ ಸಂಸ್ಥೆಗಳ ನಿರ್ದೇಶಕರು ಹಾಗೂ ಪ್ರತಿನಿಧಿಗಳು; ಬೋಧಕವರ್ಗದ ಸದಸ್ಯರು; ಉದ್ಯಮ ಮತ್ತು ನವೋದ್ಯಮ ಪರಿಸರ ವ್ಯವಸ್ಥೆಯ ಪ್ರತಿನಿಧಿಗಳು; ವಿದ್ಯಾರ್ಥಿಗಳು ಹಾಗೂ ಯುವ ನಾವೀನ್ಯಕಾರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ: https://sevafirst.mic.gov.in/

 

*****

 


(ಪ್ರಕಟಣೆ ಐ.ಡಿ.: 2314928) ವಿಸಿಟರ್ ಕೌಂಟರ್ : 24
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Gujarati , Tamil , Telugu , Malayalam