ಗ್ರಾಮೀಣಾಭಿವೃದ್ಧಿ ಸಚಿವಾಲಯ
ಅಕ್ಟೋಬರ್ 2026 ರಿಂದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಡಿಡಿಯು-ಜಿಕೆವೈ 2.0 ಅಡಿಯಲ್ಲಿ 70,000 ಗ್ರಾಮೀಣ ಯುವಕರಿಗೆ ಕೌಶಲ್ಯ ತರಬೇತಿ ಪ್ರಾರಂಭ
ಗ್ರಾಮೀಣ ಅಭಿವೃದ್ಧಿ ಸಚಿವಾಲಯದಿಂದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಡಿಡಿಯು-ಜಿಕೆವೈ 2.0 ಚುರುಕಾದ ಅನುಷ್ಠಾನ
ಪ್ರಕಟಣಾ ದಿನಾಂಕ:
25 SEP 2026 9:31AM by PIB Bengaluru
ಗ್ರಾಮೀಣ ಅಭಿವೃದ್ಧಿ ಸಚಿವಾಲಯವು ಅಕ್ಟೋಬರ್ 2026 ರಿಂದ ಹೆಚ್ಚಿನ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ದೀನ್ ದಯಾಳ್ ಉಪಾಧ್ಯಾಯ - ಗ್ರಾಮೀಣ ಕೌಶಲ್ಯ ಯೋಜನೆ (ಡಿಡಿಯು-ಜಿಕೆವೈ) 2.0 ತರಬೇತಿ ಬ್ಯಾಚ್ ಗಳನ್ನು ಪ್ರಾರಂಭಿಸಲು ಸಜ್ಜಾಗಿದೆ.
ಡಿಡಿಯು-ಜಿಕೆವೈ 2.0 ಪೋರ್ಟಲ್ (https://kaushal.rural.gov.in) ಪ್ರಕಾರ, 24 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಯೋಜನೆ ಅನುಷ್ಠಾನ ಸಂಸ್ಥೆಗಳಿಗೆ (ಪಿಐಎ) 1,200ಕ್ಕೂ ಹೆಚ್ಚು ಯೋಜನೆಗಳಲ್ಲಿ 5.6 ಲಕ್ಷ ಗುರಿಗಳನ್ನು ಹಂಚಿಕೆ ಮಾಡಿವೆ. ಇತರ ರಾಜ್ಯಗಳು ಅಭ್ಯರ್ಥಿಗಳ ಗುರಿ ಹಂಚಿಕೆಯ ಅಂತಿಮ ಹಂತದಲ್ಲಿವೆ. ದೇಶಾದ್ಯಂತ 24 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ, ಸುಮಾರು 70,000 ಗ್ರಾಮೀಣ ಯುವಕರನ್ನು ಒಳಗೊಂಡ 2,015 ಬ್ಯಾಚ್ ಗಳು ಅಕ್ಟೋಬರ್ 2026 ರಲ್ಲಿ ತರಬೇತಿಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.
ಡಿಡಿಯು-ಜಿಕೆವೈ ಎಂಬುದು ಬಡ ಗ್ರಾಮೀಣ ಯುವಕರಿಗೆ ಉದ್ಯೋಗದ ಅವಕಾಶದೊಂದಿಗೆ ಕೌಶಲ್ಯ ತರಬೇತಿಯನ್ನು ನೀಡುವ ಕೇಂದ್ರದ ಪ್ರಾಯೋಜಿತ ಯೋಜನೆಯಾಗಿದೆ. ತರಬೇತಿಯ ಅವಧಿಯು 3 ತಿಂಗಳಿನಿಂದ 12 ತಿಂಗಳವರೆಗೆ ಇರುತ್ತದೆ. ಭಾಗವಹಿಸುವ ಎಲ್ಲಾ 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 2026-28 ರ ಎರಡು ವರ್ಷಗಳ ಅವಧಿಗೆ ಡಿಡಿಯು-ಜಿಕೆವೈ 2.0 ಅಡಿಯಲ್ಲಿ 9 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳ ಗುರಿಗಳನ್ನು ಹಂಚಿಕೆ ಮಾಡಲಾಗಿದೆ. ಫಲಾನುಭವಿಗಳಿಗೆ ನಿರಂತರ ಉದ್ಯೋಗಾವಕಾಶವನ್ನು ಒದಗಿಸುವ ನಿಟ್ಟಿನಲ್ಲಿ, ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿ.ಪಿ.ಪಿ.) ಮಾದರಿಯಲ್ಲಿ, ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟು (ಎನ್ ಎಸ್ ಕ್ಯೂ ಎಫ್)ಗೆ ಸಂಬಂಧಿಸಿದ ಕೋರ್ಸ್ ಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಗ್ರಾಮೀಣ ಯುವಕರನ್ನು ಸಂಘಟಿಸುವುದು ಮತ್ತು ಉದ್ಯೋಗ ಆಧಾರಿತ ಕೌಶಲ್ಯ ತರಬೇತಿಯನ್ನು ಆಯೋಜಿಸುವುದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜವಾಬ್ದಾರಿಯಾಗಿದೆ.
ಇದು ರಾಜ್ಯಗಳು ಕೇಂದ್ರಾಡಳಿತ ಪ್ರದೇಶಗಳ ಕ್ರಮಕ್ಕೆ ನಿರ್ಣಾಯಕ ಹಂತವಾಗಿದೆ ಎಂದು ಸಚಿವಾಲಯವು ಒತ್ತು ನೀಡಿದೆ. ಯೋಜನೆ ಅನುಷ್ಠಾನಗೊಳಿಸುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಯೋಜನೆ ಅನುಷ್ಠಾನ ಸಂಸ್ಥೆಗಳಿಗೆ (ಪಿಐಎ) ಅಭ್ಯರ್ಥಿ ಗುರಿಗಳ ಹಂಚಿಕೆಯನ್ನು ಚುರುಕುಗೊಳಿಸಲು ಮತ್ತು ನಿಗದಿಪಡಿಸಿದ ಕಾಲಮಿತಿಯೊಳಗೆ ಬ್ಯಾಚ್ ಗಳನ್ನು ಪ್ರಾರಂಭಿಸಲು ಕರೆ ನೀಡಿದೆ. ತರಬೇತಿಯನ್ನು ಪ್ರಾರಂಭಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕಡ್ಡಾಯವಾಗಿ 31 ಅಕ್ಟೋಬರ್ 2026 ರೊಳಗೆ ಪಿಐಎ ಗಳಿಗೆ ಗುರಿಗಳ ಹಂಚಿಕೆಯನ್ನು ಖಚಿತಪಡಿಸಿಕೊಳ್ಳಬೇಕಾಗಿದೆ.
ತರಬೇತಿ ಬ್ಯಾಚ್ ಗಳ ಪ್ರಾರಂಭದ ಪ್ರಕ್ರಿಯೆಗಳಿಗೆ ವೇಗವನ್ನು ನೀಡಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಹಂತ ಹಂತವಾಗಿ ಪರಿಶೀಲನಾ ಸಭೆಗಳನ್ನು ನಡೆಸಲಾಗುತ್ತಿದೆ.
*****
(ಪ್ರಕಟಣೆ ಐ.ಡಿ.: 2314739)
ವಿಸಿಟರ್ ಕೌಂಟರ್ : 8