ಆಯುಷ್
ಭಾರತ ಮತ್ತು ವಿಶ್ವದಾದ್ಯಂತ 11ನೇ ಆಯುರ್ವೇದ ದಿನಾಚರಣೆ; ನಾಗಪುರದಲ್ಲಿ ಅದ್ಧೂರಿ ರಾಷ್ಟ್ರೀಯ ಸಮಾರಂಭ
ಆಯುರ್ವೇದ ದಿನಾಚರಣೆಯು ಸಾಕ್ಷ್ಯಾಧಾರಿತ ಸಂಶೋಧನೆ, ನಾವೀನ್ಯತೆ ಮತ್ತು ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ತೋರಿಸುತ್ತದೆ
ಸಂಪ್ರದಾಯದಿಂದ ಸಾಕ್ಷ್ಯಾಧಾರಿತ ನಾವೀನ್ಯತೆಯ ಕಡೆಗೆ ಆಯುರ್ವೇದದ ಪಯಣವು ಭವಿಷ್ಯದ ಪೀಳಿಗೆಯ ಆರೋಗ್ಯವನ್ನು ಭದ್ರಪಡಿಸಲಿದೆ: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
ಆರೋಗ್ಯಕರ ಜೀವನಶೈಲಿ ಮತ್ತು ರೋಗ ತಡೆಗಟ್ಟುವ ಆರೋಗ್ಯ ರಕ್ಷಣೆಯನ್ನು ಜನಾಂಧೋಲನವನ್ನಾಗಿ ಮಾಡಲು ಕೇಂದ್ರ ಸಚಿವರಾದ ಶ್ರೀ ಪ್ರತಾಪ್ ರಾವ್ ಜಾದವ್ ಕರೆ
ಜ್ಞಾನ, ಸಾಕ್ಷ್ಯ ಮತ್ತು ನಾವೀನ್ಯತೆಯು ಆಯುರ್ವೇದದ ಭವಿಷ್ಯವನ್ನು ರೂಪಿಸಲಿವೆ: ಆಯುಷ್ ಕಾರ್ಯದರ್ಶಿ, ವೈದ್ಯ ರಾಜೇಶ್ ಕೊಟೇಚ
11ನೇ ಆಯುರ್ವೇದ ದಿನದಂದು ಸುರಕ್ಷತಾ ದಾಖಲೆಪತ್ರಗಳು, ಪ್ರಮಾಣಿತ ಚಿಕಿತ್ಸಾ ಮಾರ್ಗಸೂಚಿಗಳು, ಆಯುಷ್ ಸೇವಾ ಕ್ಷೇತ್ರದ ವರದಿ, ಆಯುಷ್ ವಿಷನ್ 2030 ಮತ್ತು ಸಿ ಸಿ ಆರ್ ಎ ಎಸ್-ಎ ಜಿ ಎನ್ ಐ ಪೋರ್ಟಲ್ ಚಾಲನೆ
ಭವಿಷ್ಯದ ಆರೋಗ್ಯ ರಕ್ಷಣೆ, ಸಾರ್ವಜನಿಕ ಆರೋಗ್ಯ ಮತ್ತು ಸಾಂಕ್ರಾಮಿಕವಲ್ಲದ ರೋಗಗಳ ಹೊರೆಯನ್ನು ಕಡಿಮೆ ಮಾಡುವಲ್ಲಿ ಆಯುರ್ವೇದದ ಪಾತ್ರವನ್ನು ಎತ್ತಿಹಿಡಿದ ವೈಜ್ಞಾನಿಕ ಗೋಷ್ಠಿಗಳು
ಪ್ರಕಟಣಾ ದಿನಾಂಕ:
23 SEP 2026 3:48PM by PIB Bengaluru
11ನೇ ಆಯುರ್ವೇದ ದಿನವನ್ನು ಭಾರತ ಮತ್ತು ವಿಶ್ವದಾದ್ಯಂತ ಅತ್ಯಂತ ಉತ್ಸಾಹದಿಂದ ಆಚರಿಸಲಾಯಿತು. ಇದರ ಅದ್ಧೂರಿ ರಾಷ್ಟ್ರೀಯ ಸಮಾರಂಭವು ಮಹಾರಾಷ್ಟ್ರದ ನಾಗಪುರದಲ್ಲಿ ನಡೆಯಿತು. ಈ ವರ್ಷದ ವಿಷಯ "ಆರೋಗ್ಯಕರ ನಾಳೆಗಾಗಿ ಆಯುರ್ವೇದ" ಎಂಬುದಾಗಿತ್ತು. ಈ ಕಾರ್ಯಕ್ರಮದಲ್ಲಿ ಆಯುಷ್ ಸೇವಾ ಕ್ಷೇತ್ರದ ವರದಿ ಮತ್ತು "ಆಯುಷ್ ವಿಷನ್ 2030" ಸೇರಿದಂತೆ ಪ್ರಮುಖ ವರದಿಗಳು ಮತ್ತು ದಾಖಲೆಗಳನ್ನು ಬಿಡುಗಡೆ ಮಾಡಲಾಯಿತು, ಜೊತೆಗೆ ಸಿ ಸಿ ಆರ್ ಎ ಎಸ್-ಎ ಜಿ ಎನ್ ಐ ವೆಬ್ ಪೋರ್ಟಲ್ ಗೆ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮವು ಆರೋಗ್ಯ ರಕ್ಷಣೆ ಮತ್ತು ಸಾರ್ವಜನಿಕ ಆರೋಗ್ಯದಲ್ಲಿ ಆಯುರ್ವೇದದ ಪಾತ್ರ, ಹಾಗೆಯೇ 2047ರವರೆಗಿನ ಮಾರ್ಗಸೂಚಿಯ ಕುರಿತು ವೈಜ್ಞಾನಿಕ ಗೋಷ್ಠಿಗಳನ್ನು ಒಳಗೊಂಡಿತ್ತು.
ಈ ಸಂದರ್ಭದಲ್ಲಿ ಗೌರವಾನ್ವಿತ ಪ್ರಧಾನಮಂತ್ರಿಯವರ ಸಂದೇಶವನ್ನು ಓದಲಾಯಿತು. ತಮ್ಮ ಸಂದೇಶದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸಂಪ್ರದಾಯದಿಂದ ಜ್ಞಾನ, ಸಾಕ್ಷ್ಯ ಮತ್ತು ನಾವೀನ್ಯತೆಯತ್ತ ಆಯುರ್ವೇದದ ಪಯಣವು ಭವಿಷ್ಯದ ಪೀಳಿಗೆಯ ಆರೋಗ್ಯ ಮತ್ತು ಕ್ಷೇಮವನ್ನು ಭದ್ರಪಡಿಸಲು ಕೊಡುಗೆ ನೀಡುತ್ತದೆ ಎಂದು ಹೇಳಿದರು. ಆಯುರ್ವೇದದ ಗುರುತು ಭಾರತದ ಗಡಿಗಳನ್ನು ಮೀರಿ ವಿಸ್ತರಿಸಿದೆ, ಆಯುಷ್ ವೀಸಾ ಸೌಲಭ್ಯವು ವಿದೇಶಿ ಪ್ರಜೆಗಳಿಗೆ ಭಾರತದಲ್ಲಿ ಆಯುಷ್ ಪದ್ಧತಿಗಳಲ್ಲಿ ಚಿಕಿತ್ಸೆ ಪಡೆಯಲು ಅನುವು ಮಾಡಿಕೊಟ್ಟಿದೆ ಎಂದು ಅವರು ತಿಳಿಸಿದರು. 'ಶಕ್ತಿ ಕಿ ಸಾಧನಾ' ಸಂಕಲ್ಪವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಭಾರತವು ವಿಕಸಿತ ಭಾರತದತ್ತ ಸ್ಥಿರವಾಗಿ ಸಾಗುತ್ತಿದೆ ಮತ್ತು ಆಯುರ್ವೇದಕ್ಕೆ ಸಂಬಂಧಿಸಿದ ಸಂಸ್ಥೆಗಳು, ತಜ್ಞರು ಮತ್ತು ಯುವಕರು ಈ ಶ್ರೀಮಂತ ಸಂಪ್ರದಾಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಾರೆ ಹಾಗೂ ಆರೋಗ್ಯಕರ, ಸಮರ್ಥ ಮತ್ತು ಬಲವಾದ ರಾಷ್ಟ್ರವನ್ನು ನಿರ್ಮಿಸಲು ಕೊಡುಗೆ ನೀಡುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಈ ಆಚರಣೆಯ ಸಮಾರಂಭವನ್ನು ಕೇಂದ್ರ ಆಯುಷ್ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ ನಿರ್ವಹಣೆ) ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವರಾದ ಶ್ರೀ ಪ್ರತಾಪ್ ರಾವ್ ಜಾದವ್ ಅವರು, ಆಯುಷ್ ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೇಚ, ಆಯುರ್ವೇದ ವಿಜ್ಞಾನಗಳ ಸಂಶೋಧನಾ ಕೇಂದ್ರ ಪರಿಷತ್ತಿನ (ಸಿಸಿಆರ್ ಎ ಎಸ್) ಮಹಾನಿರ್ದೇಶಕರಾದ ಪ್ರೊ. (ವೈದ್ಯ) ರಬಿನಾರಾಯಣ್ ಆಚಾರ್ಯ ಮತ್ತು ಇತರ ಗಣ್ಯರ ಉಪಸ್ಥಿತಿಯಲ್ಲಿ ವಾಸ್ತವೋಪಮವಾಗಿ (ವರ್ಚುವಲ್) ಉದ್ಘಾಟಿಸಿದರು.
ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರಾದ ಶ್ರೀ ಪ್ರತಾಪರಾವ್ ಜಾದವ್ ಅವರು, ಆಯುರ್ವೇದವನ್ನು ಭಾರತದ ಆರೋಗ್ಯ ದೃಷ್ಟಿಕೋನದ ಪ್ರಮುಖ ಭಾಗವೆಂದು ಬಣ್ಣಿಸಿದರು: "ಆರೋಗ್ಯದ ಮೊದಲ ಕೇಂದ್ರ ಆಸ್ಪತ್ರೆಯಲ್ಲ, ನಮ್ಮ ಮನೆ. ಆರೋಗ್ಯದ ಮೊದಲ ಆಧಾರ ಔಷಧಿಯಲ್ಲ, ನಮ್ಮ ಜೀವನಶೈಲಿ." "ಸ್ವಸ್ಥಸ್ಯ ಸ್ವಾಸ್ಥ್ಯ ರಕ್ಷಕಂ, ಆತುರಸ್ಯ ವಿಕಾರ ಪ್ರಶಮನಮ್" ಎಂಬ ಸಂಸ್ಕೃತದ ತತ್ವವನ್ನು ಉಲ್ಲೇಖಿಸಿದ ಅವರು, ಆಯುರ್ವೇದವು ಚಿಕಿತ್ಸೆಯ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಆದ್ಯತೆ ನೀಡುತ್ತದೆ, ಹೆಚ್ಚುತ್ತಿರುವ ಜೀವನಶೈಲಿ ಸಂಬಂಧಿತ ಆರೋಗ್ಯ ಸಮಸ್ಯೆಗಳ ನಡುವೆ ಈ ವಿಧಾನವು ಹೆಚ್ಚು ಪ್ರಸ್ತುತವಾಗಿದೆ ಎಂದು ಹೇಳಿದರು.
ಜಾಮ್ ನಗರದಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಸಾಂಪ್ರದಾಯಿಕ ವೈದ್ಯಕೀಯ ಕೇಂದ್ರ, ಐ ಟಿ ಆರ್ ಎ ಜಾಮ್ ನಗರಕ್ಕೆ ರಾಷ್ಟ್ರೀಯ ಮಹತ್ವದ ಸಂಸ್ಥೆ ಎಂಬ ಮಾನ್ಯತೆ ಸಿಕ್ಕಿರುವುದು ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಐಸಿಡಿ-11 ವರ್ಗೀಕರಣದಲ್ಲಿ ಆಯುರ್ವೇದ, ಸಿದ್ಧ ಹಾಗೂ ಯುನಾನಿ ಪದ್ಧತಿಗಳ ಸೇರ್ಪಡೆಯನ್ನು ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ತರಲು ಪ್ರಮುಖ ಹೆಜ್ಜೆಗಳೆಂದು ಶ್ರೀ ಪ್ರತಾಪರಾವ್ ಜಾದವ್ ಉಲ್ಲೇಖಿಸಿದರು. ಸಂಪ್ರದಾಯವನ್ನು ಜ್ಞಾನ, ಸಾಕ್ಷ್ಯ ಮತ್ತು ನಾವೀನ್ಯತೆಯೊಂದಿಗೆ ಜೋಡಿಸಲು ಕರೆ ನೀಡಿದ ಅವರು, ಆರೋಗ್ಯಕರ ಜೀವನದ ಬಗ್ಗೆ ವ್ಯಾಪಕವಾದ ಸಾರ್ವಜನಿಕ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸಲು ಆಯುರ್ವೇದ ದಿನವು ವಾರ್ಷಿಕ ಆಚರಣೆ ದಿನವನ್ನು ಮೀರಿ ವಿಸ್ತರಿಸಬೇಕು ಎಂದು ಹೇಳಿದರು..
ಆಯುಷ್ ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೇಚ ಅವರು ಮಾತನಾಡಿ, ಆಯುರ್ವೇದದ ಭವಿಷ್ಯವು ಅದರ ಜ್ಞಾನ ಸಂಪ್ರದಾಯವನ್ನು ವೈಜ್ಞಾನಿಕ ಸಾಕ್ಷ್ಯ, ನಾವೀನ್ಯತೆ ಮತ್ತು ಸಾರ್ವಜನಿಕ ಆರೋಗ್ಯದ ಫಲಿತಾಂಶಗಳೊಂದಿಗೆ ಜೋಡಿಸುವುದರಲ್ಲಿ ಅಡಗಿದೆ ಎಂದು ಒತ್ತು ನೀಡಿದರು. ಆಯುರ್ವೇದ ಮತ್ತು ಇತರ ಆರೋಗ್ಯ ರಕ್ಷಣಾ ಪದ್ಧತಿಗಳ ನಡುವಿನ ಸಹಯೋಗವನ್ನು ಉತ್ತೇಜಿಸುವ ಜೊತೆಗೆ ಸಂಶೋಧನೆ, ಗುಣಮಟ್ಟ, ಸುರಕ್ಷತೆ ಮತ್ತು ಪ್ರಮಾಣೀಕರಣವನ್ನು ಬಲಪಡಿಸುವ ಅಗತ್ಯವನ್ನು ಅವರು ಪ್ರತಿಪಾದಿಸಿದರು. ಜಾಮ್ ನಗರದಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಸಾಂಪ್ರದಾಯಿಕ ವೈದ್ಯಕೀಯ ಕೇಂದ್ರ, ಆಯುಷ್ ಸಂಶೋಧನಾ ಪೋರ್ಟಲ್ ನಲ್ಲಿ 43,000 ಕ್ಕೂ ಹೆಚ್ಚು ಸಂಶೋಧನಾ ಪ್ರಕಟಣೆಗಳು, 200 ಕ್ಕೂ ಹೆಚ್ಚು ಬಿಐಎಸ್ ಮಾನದಂಡಗಳು ಮತ್ತು 'ಆಯುಷ್ ಕ್ವಾಲಿಟಿ ಮಾರ್ಕ್' ಸೇರಿದಂತೆ ಪ್ರಮುಖ ಬೆಳವಣಿಗೆಗಳನ್ನು ಎತ್ತಿಹಿಡಿದ ಅವರು, ಈ ಪ್ರಯತ್ನಗಳು ಆಯುಷ್ ಪದ್ಧತಿಗಳನ್ನು ಹೆಚ್ಚು ವೈಜ್ಞಾನಿಕ, ಸಾಕ್ಷ್ಯಾಧಾರಿತ ಮತ್ತು ಜಾಗತಿಕವಾಗಿ ಪ್ರಸ್ತುತಪಡಿಸುವ ಗುರಿಯನ್ನು ಹೊಂದಿವೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಗೋಕ್ಷುರ ಮತ್ತು ಚಂದ್ರಶೂರ ಮೇಲಿನ ಸುರಕ್ಷತಾ ದಾಖಲೆಗಳು, ಚರ್ಮದ ಅಸ್ವಸ್ಥತೆಗಳ ಮೇಲಿನ ಪ್ರಮಾಣಿತ ಚಿಕಿತ್ಸಾ ಮಾರ್ಗಸೂಚಿಗಳು , ಮತ್ತು ಅಭಿವೃದ್ಧಿಶೀಲ ದೇಶಗಳ ಸಂಶೋಧನೆ ಮತ್ತು ಮಾಹಿತಿ ವ್ಯವಸ್ಥೆ ಸಿದ್ಧಪಡಿಸಿದ "ಆಯುಷ್ ಸೇವಾ ವಲಯ" ಕುರಿತ ಮೊದಲ ವರದಿಯನ್ನು ಬಿಡುಗಡೆ ಮಾಡಲಾಯಿತು, ಇದು ಆಯುಷ್ ಸೇವಾ ಕ್ಷೇತ್ರದ ಮೌಲ್ಯಮಾಪನವನ್ನು ಒದಗಿಸುತ್ತದೆ.
ಈ ಸಮಾರಂಭದಲ್ಲಿ "ಸಾಂಪ್ರದಾಯಿಕ ಜ್ಞಾನದಿಂದ ಜಾಗತಿಕ ನಾಯಕತ್ವದತ್ತ: ಆಯುಷ್ ವಿಷನ್ 2030", ಭಾರತದಲ್ಲಿ ಆಯುಷ್ ಸಂಬಂಧಿತ ಸಂಶೋಧನೆಗಳ ಸ್ಥಿತಿ ವರದಿ ಮತ್ತು ಸಿ ಸಿ ಆರ್ ಎ ಎಸ್-ಎ ಜಿ ಎನ್ ಐ ಮೌಲ್ಯಮಾಪನ ಮಾಪಕ ವೆಬ್ ಪೋರ್ಟಲ್ ಅನ್ನು ಸಹ ಬಿಡುಗಡೆ ಮಾಡಲಾಯಿತು. ಈ ಉಪಕ್ರಮಗಳು ಸಂಶೋಧನೆ, ದಾಖಲೀಕರಣ, ನಾವೀನ್ಯತೆ, ವೈದ್ಯಕೀಯ ಮಾರ್ಗದರ್ಶನ ಮತ್ತು ಆಯುರ್ವೇದ ಜ್ಞಾನವನ್ನು ಕಾರ್ಯರೂಪಕ್ಕೆ ತರುವುದನ್ನು ಬಲಪಡಿಸುವತ್ತ ಗಮನ ಹರಿಸುತ್ತವೆ.
ಆಯುಷ್ ವಲಯದಲ್ಲಿ ಗುಣಮಟ್ಟ ಮತ್ತು ಪ್ರಮಾಣೀಕರಣಕ್ಕೆ ನೀಡಲಾದ ಪ್ರಾಮುಖ್ಯತೆಗೆ ನಿದರ್ಶನವಾಗಿ, ಆಯುಷ್ ಸಚಿವಾಲಯದ ಕಾರ್ಯದರ್ಶಿಯವರು ನಾಲ್ಕು ಅರ್ಹ ಉದ್ಯಮಗಳಿಗೆ 'ಆಯುಷ್ ಕ್ವಾಲಿಟಿ ಮಾರ್ಕ್' ಪ್ರಮಾಣಪತ್ರವನ್ನು ವಿತರಿಸಿದರು.
ಆಚರಣೆಯ ಭಾಗವಾಗಿ ಆರೋಗ್ಯ ರಕ್ಷಣೆ ಮತ್ತು ಸಾರ್ವಜನಿಕ ಆರೋಗ್ಯದಲ್ಲಿ ಆಯುರ್ವೇದದ ವಿಕಸನಗೊಳ್ಳುತ್ತಿರುವ ಪಾತ್ರದ ಕುರಿತು ಎರಡು ವೈಜ್ಞಾನಿಕ ಗೋಷ್ಠಿಗಳನ್ನು ಆಯೋಜಿಸಲಾಗಿತ್ತು. ಮೊದಲ ಗೋಷ್ಠಿ, "ಶಾಶ್ವತಂ ಟು ವಿಶ್ವವಾಸ್ (ಸನಾತನದಿಂದ ವಿಶ್ವಾಸದೆಡೆಗೆ– ಆರೋಗ್ಯಕರ ನಾಳೆಗಾಗಿ ಆಯುರ್ವೇದ ಮತ್ತು 2047 ರತ್ತ ಪ್ರಯಾಣ", ಜಾಮ್ ನಗರದ ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಸಾಂಪ್ರದಾಯಿಕ ವೈದ್ಯಕೀಯ ಕೇಂದ್ರದ ಘಟಕದ ಮುಖ್ಯಸ್ಥರಾದ ಡಾ. ಜಿ. ಗೀತಕೃಷ್ಣನ್ ಪಿಳ್ಳೈ ಅವರ ಉಪಸ್ಥಿತಿಯಲ್ಲಿ ನಡೆಯಿತು. ಇದು ಆಯುರ್ವೇದದ ಭವಿಷ್ಯದ ಹಾದಿ, ಸಾಕ್ಷ್ಯಾಧಾರಗಳ ಸೃಷ್ಟಿ ಮತ್ತು 2047 ರವರೆಗಿನ ವ್ಯಾಪಕ ಆರೋಗ್ಯ ದೃಷ್ಟಿಕೋನದಲ್ಲಿ ಅದರ ಪಾತ್ರದ ಮೇಲೆ ಬೆಳಕು ಚೆಲ್ಲಿತು. ಎರಡನೇ ಗೋಷ್ಠಿ, "2027ರ ವೇಳೆಗೆ NCD ಹೊರೆಯನ್ನು ಕಡಿಮೆ ಮಾಡಲು ಸಮಗ್ರ ಚಿಕಿತ್ಸೆಗಳ ಅಗತ್ಯವಿದೆ", ನವದೆಹಲಿಯ ಇನ್ಸ್ಟಿಟ್ಯೂಟ್ ಆಫ್ ಲಿವರ್ ಆಂಡ್ ಬಿಲಿಯರಿ ಸೈನ್ಸಸ್ (ILBS) ನ ನಿರ್ದೇಶಕರಾದ ಡಾ. ಶಿವ್ ಕುಮಾರ್ ಸರಿನ್ ಅವರ ಉಪಸ್ಥಿತಿಯಲ್ಲಿ ನಡೆಯಿತು ಮತ್ತು ಸಾಂಕ್ರಾಮಿಕವಲ್ಲದ ರೋಗಗಳ ಹೊರೆಯನ್ನು ಎದುರಿಸುವಲ್ಲಿ ಸಮಗ್ರ ಚಿಕಿತ್ಸಾ ವಿಧಾನಗಳ ಸಾಮರ್ಥ್ಯದ ಕುರಿತು ಚರ್ಚಿಸಲಾಯಿತು.
ವೈಜ್ಞಾನಿಕ ಚರ್ಚೆಗಳ ನಂತರ ಜೈಪುರದ ರಾಷ್ಟ್ರೀಯ ಆಯುರ್ವೇದ ಸಂಸ್ಥೆಯ ಕುಲಪತಿ ಪ್ರೊ. ಸಂಜೀವ್ ಶರ್ಮಾ ಅವರು ಸಾರಾಂಶವನ್ನು ಮಂಡಿಸಿದರು. ಪೇಟೆಂಟ್, ಡಿಸೈನ್ಸ್ ಮತ್ತು ಟ್ರೇಡ್ ಮಾರ್ಕ್ಸ್ ನ ಕಂಟ್ರೋಲರ್ ಜನರಲ್ ಪ್ರೊ. (ಡಾ.) ಉನ್ನತ್ ಪಿ. ಪಂಡಿತ್ ಅವರು ಭಾರತದಲ್ಲಿ ಆಯುಷ್ ಸಂಬಂಧಿತ ಸಂಶೋಧನೆಗಳ ವರದಿಯ ಕುರಿತು ಮಾತನಾಡಿದರು, ಮತ್ತು ಆಯುಷ್ ಸಚಿವಾಲಯದ ಸಲಹೆಗಾರ (ಆಯುರ್ವೇದ) ಡಾ. ಎ. ರಘು ಅವರು ಚರ್ಮದ ಅಸ್ವಸ್ಥತೆಗಳ ಪ್ರಮಾಣಿತ ಚಿಕಿತ್ಸಾ ಮಾರ್ಗಸೂಚಿಗಳ ಬಗ್ಗೆ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಆಯುಷ್ ಸಚಿವಾಲಯದ ಹಿರಿಯ ಸಾಂಖ್ಯಿಕ ಸಲಹೆಗಾರ ಶ್ರೀ ಸತ್ಯಜಿತ್ ಪಾಲ್, ಅಭಿವೃದ್ಧಿಶೀಲ ದೇಶಗಳ ಸಂಶೋಧನೆ ಮತ್ತು ಮಾಹಿತಿ ವ್ಯವಸ್ಥೆಯ (ಆರ್ ಐ ಎಸ್) ಮಹಾನಿರ್ದೇಶಕ ಪ್ರೊ. ಸಚಿನ್ ಕುಮಾರ್ ಶರ್ಮಾ, ಆಯುಷ್ ಸಚಿವಾಲಯದ ಹಿರಿಯ ಅಧಿಕಾರಿಗಳು, ಆಯುಷ್ ಮಂಡಳಿಗಳು ಮತ್ತು ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಆಯುಷ್ ಸಚಿವಾಲಯದ ಅಡಿಯಲ್ಲಿರುವ ರಾಷ್ಟ್ರೀಯ ಸಂಸ್ಥೆಗಳ ಮಳಿಗೆಗಳನ್ನು ಒಳಗೊಂಡ ರಾಷ್ಟ್ರೀಯ ಗಿಡಮೂಲಿಕೆಗಳ ಪ್ರದರ್ಶನವನ್ನು ಸಹ ಕಾರ್ಯಕ್ರಮದ ಸ್ಥಳದಲ್ಲಿ ಆಯೋಜಿಸಲಾಗಿತ್ತು, ಇದು ಸಂದರ್ಶಕರು ಮತ್ತು ಭಾಗವಹಿಸುವವರಲ್ಲಿ ಹೆಚ್ಚಿನ ಆಸಕ್ತಿಯನ್ನು ಕೆರಳಿಸಿತು.
ನಾಗಪುರದಲ್ಲಿ ನಡೆದ ರಾಷ್ಟ್ರೀಯ ಆಚರಣೆಯು ದೇಶದಾದ್ಯಂತದ ವೈದ್ಯರು, ಸಂಶೋಧಕರು, ವಿಜ್ಞಾನಿಗಳು, ತಜ್ಞರು ಮತ್ತು ಇತರ ಪಾಲುದಾರರನ್ನು ಒಂದೆಡೆ ತಂದಿತು, ಇದು ಆಯುರ್ವೇದವನ್ನು ಮುನ್ನಡೆಸುವಲ್ಲಿ ಸಾಕ್ಷ್ಯ, ಸಂಶೋಧನೆ, ನಾವೀನ್ಯತೆ, ಗುಣಮಟ್ಟ ಮತ್ತು ಸಮಗ್ರ ಆರೈಕೆಯ ಮೇಲೆ ಹೆಚ್ಚುತ್ತಿರುವ ಗಮನವನ್ನು ಪ್ರಮುಖವಾಗಿ ತೋರಿಸಿತು.







*****
(ಪ್ರಕಟಣೆ ಐ.ಡಿ.: 2314048)
ವಿಸಿಟರ್ ಕೌಂಟರ್ : 24