ವಾರ್ತಾ ಮತ್ತು ಪ್ರಸಾರ ಸಚಿವಾಲಯ
ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಗುಜರಾತ್‌ನ ಏಕತಾ ನಗರದಲ್ಲಿ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು
ಯುವಜನತೆಗೆ ಮಾದರಿಯಾಗಿರುವ ಚಲನಚಿತ್ರ ರಂಗದವರು ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸಬೇಕು ಮತ್ತು ಹಾನಿಕಾರಕ ವಸ್ತುಗಳ ಪ್ರಚಾರದಿಂದ ದೂರವಿರಬೇಕು ಎಂದು ರಾಷ್ಟ್ರಪತಿಯವರು ಕರೆ ನೀಡಿದರು
ಅಸಂಖ್ಯಾತ ಅಭಿಮಾನಿಗಳು ತೋರಿಸಿದ ಅಪಾರ ಪ್ರೀತಿ - ಅಭಿಮಾನಕ್ಕೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ನಟ ಅನಂತ್ ನಾಗ್ ಕೃತಜ್ಞತೆ ಸಲ್ಲಿಸಿದರು
ದೇಶದ ವಿವಿಧ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸುವ ಮೂಲಕ ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರದರ್ಶಿಸಲಾಗುವುದು: ಶ್ರೀ ಅಶ್ವಿನಿ ವೈಷ್ಣವ್
'ವೇವ್ಸ್' ಜಾಗತಿಕ ಶೃಂಗಸಭೆಯ ಮುಂದಿನ ಆವೃತ್ತಿ 2027ರ ಅಕ್ಟೋಬರ್‌ನಲ್ಲಿ ಆಯೋಜನೆ: ವಾರ್ತಾ ಮತ್ತು ಪ್ರಸಾರ ಸಚಿವರ ಘೋಷಣೆ
ಪ್ರಕಟಣಾ ದಿನಾಂಕ:
22 SEP 2026 8:34PM by PIB Bengaluru
ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು ಮತ್ತು ಪ್ರಶಸ್ತಿ ವಿಜೇತರ ಅಪಾರ ಪ್ರತಿಭೆ, ಶ್ರದ್ಧೆ ಹಾಗೂ ಕಠಿಣ ಪರಿಶ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. "ಸಿನಿಮಾ ನಿರ್ಮಾಣ ಎಂಬುದು ಇಡೀ ತಂಡದ ಸಾಮೂಹಿಕ ಶ್ರಮದ ಫಲ. ಹೀಗಾಗಿ, ಚಿತ್ರದ ಯಶಸ್ಸಿಗೆ ಕಾರಣರಾದ ನಿಮ್ಮ ತಂಡದ ಪ್ರತಿಯೊಬ್ಬ ಸದಸ್ಯರಿಗೂ ನನ್ನ ಅಭಿನಂದನೆಗಳನ್ನು ತಲುಪಿಸಿ" ಎಂದು ಅವರು ಪ್ರಶಸ್ತಿ ಪುರಸ್ಕೃತರಿಗೆ ತಿಳಿಸಿದರು.

ಇದೇ ವೇಳೆ, ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರಕ್ಕೆ ನೀಡಿದ ವಿಶಿಷ್ಟ ಕೊಡುಗೆಗಾಗಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಶ್ರೀ ಅನಂತ್ ನಾಗ್ ಅವರನ್ನು ರಾಷ್ಟ್ರಪತಿಯವರು ಅಭಿನಂದಿಸಿದರು.
ಭಾರತೀಯ ಚಿತ್ರರಂಗವು ದೇಶದ ವೈವಿಧ್ಯಮಯ ಭಾಷೆಗಳು, ಸಂಪ್ರದಾಯಗಳು, ಆಕಾಂಕ್ಷೆಗಳು ಮತ್ತು ಹೋರಾಟಗಳನ್ನು ಪ್ರತಿಬಿಂಬಿಸುತ್ತದೆ ಎಂದು ರಾಷ್ಟ್ರಪತಿಯವರು ಹೇಳಿದರು. ಭಾರತದ ಸಾಂಸ್ಕೃತಿಕ ಮತ್ತು ರಾಷ್ಟ್ರೀಯ ಏಕತೆಯ ಸಂಕೇತವಾಗಿರುವ ಏಕತಾ ನಗರವನ್ನು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಸಮಾರಂಭದ ಸ್ಥಳವಾಗಿ ಆಯ್ಕೆ ಮಾಡಿರುವುದನ್ನು ಅವರು ಶ್ಲಾಘಿಸಿದರು.
ಸೃಜನಶೀಲ ಕ್ಷೇತ್ರದಲ್ಲಿ ಶ್ರಮಿಸುವ ಪ್ರತಿಯೊಬ್ಬರಿಗೂ ಸೂಕ್ತ ಗೌರವ ಹಾಗೂ ಸಾಮಾಜಿಕ ಭದ್ರತೆ ಸಿಗಬೇಕೆಂದು ಪ್ರತಿಪಾದಿಸಿದ ಅವರು, "ಚಿತ್ರರಂಗದ ಕಾರ್ಮಿಕರು, ಸಣ್ಣ ಕಲಾವಿದರು, ಸಹಾಯಕರು ಮತ್ತು ಉದಯೋನ್ಮುಖ ಕಲಾವಿದರಿಗೆ ಸೂಕ್ತ ಮನ್ನಣೆ ಹಾಗೂ ಸಾಮಾಜಿಕ ಭದ್ರತೆ ದೊರೆಯುವುದು ಅಗತ್ಯ" ಎಂದರು. ಚಲನಚಿತ್ರ ಪ್ರಶಸ್ತಿಗಳ ತೀರ್ಪುಗಾರರ ಮಂಡಳಿಯಲ್ಲಿ ಮಹಿಳೆಯರ ಸೂಕ್ತ ಭಾಗವಹಿಸುವಿಕೆ ಇದ್ದಾಗ ಮಾತ್ರ ಪೂರ್ಣಪ್ರಮಾಣದ ಮಾನವೀಯ ದೃಷ್ಟಿಕೋನ ಸಿಗಲು ಸಾಧ್ಯ ಎಂದು ಅವರು ಹೇಳಿದರು.

ಪ್ರಸಿದ್ಧ ಕಲಾವಿದರ ಪ್ರಭಾವವು ವಿಶೇಷವಾಗಿ ಮಕ್ಕಳು ಮತ್ತು ಯುವಜನತೆಯ ಮೇಲೆ ಅಪಾರವಾಗಿರುವುದರಿಂದ, ಯಶಸ್ವಿ ನಟ-ನಟಿಯರು ಉತ್ತಮ ಶಿಸ್ತಿನ ಜೀವನಶೈಲಿಯನ್ನು ಉತ್ತೇಜಿಸಬೇಕು ಮತ್ತು ಆರೋಗ್ಯಕ್ಕೆ ಹಾನಿಕಾರಕವಾದ ವಸ್ತುಗಳ ಜಾಹೀರಾತು/ಪ್ರಚಾರದಿಂದ ದೂರವಿರಬೇಕೆಂದು ರಾಷ್ಟ್ರಪತಿಯವರು ಕರೆ ನೀಡಿದರು.
ಭಾರತೀಯ ಸಿನಿಮಾಗಳು ಜಾಗತಿಕ ಮಟ್ಟದ ಉನ್ನತ ಮಾನದಂಡಗಳನ್ನು ಸ್ಥಾಪಿಸಬಲ್ಲವು ಎಂಬುದಕ್ಕೆ ಪ್ರಸ್ತುತ ನಿರ್ಮಾಣವಾಗುತ್ತಿರುವ ಚಿತ್ರಗಳ ಗುಣಮಟ್ಟವೇ ಸಾಕ್ಷಿ ಎಂದು ಅವರು ಹೇಳಿದರು.

ಜೀವಮಾನದ ಕಥನ, ಬೆಳ್ಳಿಪರದೆಯ ಪರಂಪರೆ: ನಟ ಅನಂತ್ ನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಗೌರವ
ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರಿಂದ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ -2024 ಸ್ವೀಕರಿಸಿದ ಹಿರಿಯ ನಟ ಶ್ರೀ ಅನಂತ್ ನಾಗ್ ಅವರ ಸುದೀರ್ಘ ಅಭಿನಯ ಪಯಣವನ್ನು ಸಮಾರಂಭದಲ್ಲಿ ಗೌರವಿಸಲಾಯಿತು. ರಂಗಭೂಮಿ ಹಾಗೂ ಬೆಳ್ಳಿಪರದೆಯಲ್ಲಿ ಅವರ ಜೀವಮಾನದ ಸಮರ್ಪಿತ ಸೇವೆ ಮತ್ತು ದಶಕಗಳಿಂದ ಭಾರತೀಯ ಚಿತ್ರರಂಗಕ್ಕೆ ಅವರು ನೀಡಿದ ಸ್ಮರಣೀಯ ಅಭಿನಯವನ್ನು ಈ ಪ್ರಶಸ್ತಿ ಸಾಕ್ಷೀಕರಿಸಿತು.

ಅತ್ಯಂತ ವಿನಮ್ರವಾಗಿ ಪ್ರಶಸ್ತಿ ಸ್ವೀಕರಿಸಿದ ಶ್ರೀ ಅನಂತ್ ನಾಗ್ ಅವರು, ತಮ್ಮ ವೃತ್ತಿಜೀವನವನ್ನು ರೂಪಿಸಿದ ವ್ಯಕ್ತಿಗಳಿಗೆ ಮತ್ತು ಅನುಭವಗಳಿಗೆ ಕೃತಜ್ಞತೆ ಸಲ್ಲಿಸಿದರು.

ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಅವರು, "ನಾನು ಬೆಳೆದದ್ದು ಆಶ್ರಮದಲ್ಲಿ. ನಂತರ ಮುಂಬೈಗೆ ತೆರಳಿದಾಗ ನಾಟಕಗಳಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು. ರಂಗಭೂಮಿಯೇ ನನ್ನ ಅಭಿನಯಕ್ಕೆ ಬಲವಾದ ಬುನಾದಿ. ಸಿನಿಮಾಗೆ ಬರುವ ಮೊದಲು ಸುಮಾರು 50 ನಾಟಕಗಳಲ್ಲಿ ಅಭಿನಯಿಸಿದ್ದೆ. ತದನಂತರ ಖ್ಯಾತ ನಿರ್ದೇಶಕ ಶ್ಯಾಮ್ ಬೆನೆಗಲ್ ಅವರ ಚಿತ್ರಗಳು ಸೇರಿದಂತೆ ಹಲವು ಉತ್ತಮ ಸಿನಿಮಾಗಳಲ್ಲಿ ನಟಿಸುವ ಅವಕಾಶ ಒದಗಿಬಂತು" ಎಂದರು.
ತಮ್ಮ ಆಯ್ಕೆಯ ಬಗ್ಗೆ ಮಾತನಾಡುತ್ತಾ, "ನಾನು ಪ್ರಜ್ಞಾಪೂರ್ವಕವಾಗಿಯೇ ಕನ್ನಡ ಚಿತ್ರರಂಗವನ್ನು ಆಯ್ಕೆ ಮಾಡಿಕೊಂಡು, ಬೆಂಗಳೂರನ್ನು ನನ್ನ ಕರ್ಮಭೂಮಿಯನ್ನಾಗಿ ಮಾಡಿಕೊಂಡೆ. ಕಳೆದ ವರ್ಷವಷ್ಟೇ ಮಾನ್ಯ ರಾಷ್ಟ್ರಪತಿಯವರಿಂದ ಪದ್ಮಭೂಷಣ ಗೌರವ ಸ್ವೀಕರಿಸಿದ್ದೆ. ಈ ವರ್ಷ ಅವರ ಕೈಯಿಂದಲೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆಯುತ್ತಿರುವುದು ನನ್ನ ಪಾಲಿಗೆ ಅಪಾರ ಧನ್ಯತೆಯ ಕ್ಷಣ" ಎಂದು ಹರ್ಷ ವ್ಯಕ್ತಪಡಿಸಿದರು.

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭಕ್ಕೆ ಆತ್ಮೀಯ ಆತಿಥ್ಯ ನೀಡಿದ ಗುಜರಾತ್
ಗುಜರಾತ್‌ನಲ್ಲಿ ನಡೆದ ಈ ಬಾರಿಯ ಸಮಾರಂಭವು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಇತಿಹಾಸದಲ್ಲಿ ನೂತನ ಅಧ್ಯಾಯ ಬರೆದಿದೆ.
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದೆಹಲಿಯಿಂದ ಹೊರತಂದು ದೇಶದ ವಿವಿಧ ಭಾಗಗಳಲ್ಲಿ ಆಯೋಜಿಸುವ ಹೊಸ ಪರಂಪರೆಗೆ ಚಾಲನೆ ನೀಡಿದ್ದಕ್ಕಾಗಿ ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ ಧನ್ಯವಾದ ಅರ್ಪಿಸಿದರು. ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಧೀರ ಪರಂಪರೆಗೆ ಹೆಸರುವಾಸಿಯಾದ ಕೆವಾಡಿಯಾದ ಏಕತಾ ನಗರದಲ್ಲಿ ಈ ಪ್ರಶಸ್ತಿ ಸಮಾರಂಭ ನಡೆದದ್ದು ಗುಜರಾತ್‌ಗೆ ಅತ್ಯಂತ ಹೆಮ್ಮೆಯ ವಿಷಯ ಎಂದು ಅವರು ಹೇಳಿದರು.

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರು, ಭಾರತದ ಭಾಷೆಗಳು ಹಾಗೂ ಸಾಂಸ್ಕೃತಿಕ ವೈವಿಧ್ಯತೆಯನ್ನು ಶ್ರೀಮಂತಗೊಳಿಸುವಲ್ಲಿ ಭಾರತೀಯ ಸಿನಿಮಾದ ಪಾತ್ರ ಹಿರಿದು ಎಂದರು.
ನೈಸರ್ಗಿಕ ಕೃಷಿ, ಆರೋಗ್ಯಕರ ಜೀವನಶೈಲಿ ಮತ್ತು ಪರಿಸರ ಜಾಗೃತಿಯನ್ನು ಉತ್ತೇಜಿಸಲು ಹಾಗೂ ಪ್ರೀತಿ, ಸಹೋದರತ್ವ ಮತ್ತು ರಾಷ್ಟ್ರೀಯ ಏಕತೆಯ ಮೌಲ್ಯಗಳನ್ನು ಬಲಪಡಿಸಲು ಚಲನಚಿತ್ರ ಮಾಧ್ಯಮವನ್ನು ಬಳಸುವಂತೆ ಅವರು ಚಲನಚಿತ್ರ ನಿರ್ಮಾಪಕರಿಗೆ ಕರೆ ನೀಡಿದರು.

ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಅವರು 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭಕ್ಕಾಗಿ ಆಗಮಿಸಿದ ಗೌರವಾನ್ವಿತ ರಾಷ್ಟ್ರಪತಿಯವರು ಮತ್ತು ಗಣ್ಯರನ್ನು ಗುಜರಾತ್‌ಗೆ ಸ್ವಾಗತಿಸಿದರು.

"ಏಕತಾ ನಗರದಲ್ಲಿ ಇಂತಹ ಐತಿಹಾಸಿಕ ಕಾರ್ಯಕ್ರಮ ಆಯೋಜನೆಗೊಂಡಿರುವುದು ನಮ್ಮ ರಾಜ್ಯಕ್ಕೆ ಸಂದ ಗೌರವ. ಸಿನಿಮಾ ಎನ್ನುವುದು ಸಮಾಜದ ಪ್ರತಿಬಿಂಬ; ಸಂಸ್ಕೃತಿಯ ವಾಹಕ ಹಾಗೂ ಮಾನವೀಯ ಭಾವನೆಗಳನ್ನು ಬೆಸೆಯುವ ಶಕ್ತಿ. ಜಾಗತಿಕ ಮಟ್ಟದಲ್ಲಿ ಭಾರತದ ಹೆಗ್ಗುರುತನ್ನು ಬಲಪಡಿಸುವ ಸಾಮರ್ಥ್ಯ ಸಿನಿಮಾಗೆ ಇದೆ," ಎಂದು ಅವರು ಹೇಳಿದರು. ಗುಜರಾತ್‌ನ ನೈಸರ್ಗಿಕ ಸೌಂದರ್ಯ ಮತ್ತು ಸಂಸ್ಕೃತಿಯನ್ನು ಉಲ್ಲೇಖಿಸಿದ ಅವರು, ದೇಶ-ವಿದೇಶಗಳ ಚಲನಚಿತ್ರ ನಿರ್ಮಾಪಕರು ಚಿತ್ರೀಕರಣಕ್ಕಾಗಿ ಗುಜರಾತ್‌ಗೆ ಆಗಮಿಸಬೇಕೆಂದು ಆಹ್ವಾನ ನೀಡಿದರು.
ಕೇವಾಡಿಯಾದ ಏಕತಾ ನಗರದಲ್ಲಿ ನಡೆದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದಕ್ಕಾಗಿ ಗೌರವಾನ್ವಿತ ರಾಷ್ಟ್ರಪತಿಯವರಿಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಕೃತಜ್ಞತೆ ಸಲ್ಲಿಸಿದರು ಹಾಗೂ ಭಾರತೀಯ ಚಿತ್ರರಂಗದಲ್ಲಿನ ಅತ್ಯುತ್ತಮ ಸಾಧನೆಗಾಗಿ ಪ್ರಶಸ್ತಿ ವಿಜೇತರೆಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದರು.
ಚಲನಚಿತ್ರ ನಿರ್ಮಾಣವು ಒಂದು ಸಾಮೂಹಿಕ ಪ್ರಯತ್ನವಾಗಿದ್ದು, ಹೀಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಪರದೆಯ ಮೇಲೆ ಕಾಣಿಸುವ ಕಲಾವಿದರನ್ನಷ್ಟೇ ಅಲ್ಲದೆ, ಪರದೆಯ ಹಿಂದೆ ಶ್ರಮಿಸುವ ತಾಂತ್ರಿಕ ವರ್ಗವನ್ನೂ ಗೌರವಿಸುತ್ತವೆ ಎಂದು ಅವರು ಹೇಳಿದರು. ಭಾರತೀಯ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿರುವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಶ್ರೀ ಅನಂತ್ ನಾಗ್ ಅವರನ್ನೂ ಅವರು ಶ್ಲಾಘಿಸಿದರು.

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭವನ್ನು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಮುಖ ಪ್ರವಾಸಿ ತಾಣಗಳಲ್ಲಿ ಆಯೋಜಿಸುವ ಮೂಲಕ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಶ್ರೀ ಅಶ್ವಿನಿ ವೈಷ್ಣವ್ ಹೇಳಿದರು. ಭವಿಷ್ಯದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭಗಳಿಗೆ ತಮ್ಮ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಪ್ರವಾಸಿ ತಾಣಗಳನ್ನು ವೇದಿಕೆಗಳಾಗಿ ಪರಿಗಣಿಸುವಂತೆ ಅವರು ಸಂಬಂಧಪಟ್ಟವರಿಗೆ ಕರೆ ನೀಡಿದರು.
ಹೊಸ ಪ್ರತಿಭೆಗಳ ತಾಣವಾಗಿ ಹೊರಹೊಮ್ಮುತ್ತಿರುವ 'ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜೀಸ್' (ಐಐಸಿಟಿ) ಬಗ್ಗೆ ಪ್ರಸ್ತಾಪಿಸಿದ ಅವರು, ಉದ್ಯಮ ವಲಯವೇ ರೂಪಿಸಿರುವ ಪಠ್ಯಕ್ರಮವನ್ನು ಹೊಂದಿರುವ ಇಲ್ಲಿನ 13 ಕೋರ್ಸ್‌ಗಳಲ್ಲಿ ಈಗಾಗಲೇ ಸುಮಾರು 380 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದರು. ದೇಶಾದ್ಯಂತ 15,000 'ಕ್ರಿಯೇಟಿವ್ ಲ್ಯಾಬ್'ಗಳನ್ನು ಸ್ಥಾಪಿಸಲು ಗೌರವಾನ್ವಿತ ಪ್ರಧಾನ ಮಂತ್ರಿಯವರು ಅನುಮೋದನೆ ನೀಡಿದ್ದು, ಇದು ಯುವಜನರಿಗೆ ಉದಯೋನ್ಮುಖ ತಂತ್ರಜ್ಞಾನಗಳನ್ನು ಕಲಿಯಲು ಮತ್ತು ಭಾರತದ ವೈವಿಧ್ಯಮಯ ಸಂಸ್ಕೃತಿಯನ್ನು ಪ್ರದರ್ಶಿಸಲು ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ ಎಂದು ಅವರು ಸಚಿವರು ಹೇಳಿದರು.
ಸಣ್ಣ ಪಟ್ಟಣಗಳ ಪ್ರತಿಭಾವಂತರನ್ನು ಗುರುತಿಸಲು, ಪೋಷಿಸಲು ಮತ್ತು ಪ್ರೋತ್ಸಾಹಿಸಲು ಸಹಾಯ ಮಾಡುವಂತೆ ಚಲನಚಿತ್ರ ನಿರ್ಮಾಪಕರು ಹಾಗೂ ಸಮಗ್ರ ಚಲನಚಿತ್ರ ರಂಗದವರಿಗೆ ಸಚಿವರು ಕರೆ ನೀಡಿದರು; ಈ ನಿಟ್ಟಿನಲ್ಲಿ ಪ್ರಸಾರ ಭಾರತಿಯ ಅಧ್ಯಕ್ಷರಾದ ಶ್ರೀ ಪ್ರಸೂನ್ ಜೋಶಿ ಅವರ ಸಹಕಾರವನ್ನೂ ಅವರು ಕೋರಿದರು.
ಸರ್ಕಾರ ಮತ್ತು ಸೃಜನಶೀಲ ಸಮುದಾಯದ ಸಂಯುಕ್ತ ಪ್ರಯತ್ನಗಳು ಭಾರತದ ಅಪಾರ ಸೃಜನಶೀಲ ಸಾಮರ್ಥ್ಯವನ್ನು ಅನಾವರಣಗೊಳಿಸಲು ಮತ್ತು ಭಾರತೀಯ ಪ್ರತಿಭೆಗಳು ಜಾಗತಿಕ ಮಟ್ಟದ ಪ್ರೇಕ್ಷಕರನ್ನು ತಲುಪಲು ಸಹಕಾರಿಯಾಗಲಿವೆ ಎಂದು ಅವರು ಪುನರುಚ್ಚರಿಸಿದರು.
ಮುಂದಿನ ವರ್ಷದ ಅಕ್ಟೋಬರ್‌ನಲ್ಲಿ ನಡೆಯಲಿರುವ 'ವೇವ್ಸ್ 2027' ಕಾರ್ಯಕ್ರಮಕ್ಕಾಗಿ ಸಲಹೆಗಳು ಮತ್ತು ಹೊಸ ಆಲೋಚನೆಗಳನ್ನು ನೀಡುವಂತೆಯೂ ಅವರು ಆಹ್ವಾನಿಸಿದರು.
ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಚಂಚಲ್ ಕುಮಾರ್ ಮಾತನಾಡಿ, "ಈ ಬಾರಿಯ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಾಗಿ 34 ಭಾಷೆಗಳ 400 ಫೀಚರ್ ಫಿಲ್ಮ್ಸ್ ಹಾಗೂ 24 ಭಾಷೆಗಳ 161 ನಾನ್ ಫೀಚರ್ ಫಿಲ್ಮ್ಸ್ ಸ್ಪರ್ಧೆಯಲ್ಲಿದ್ದವು. ಅವುಗಳಲ್ಲಿ 22 ಫೀಚರ್ ಫಿಲ್ಮ್ಸ್ ಹಾಗೂ 23 ನಾನ್ ಫೀಚರ್ ಫಿಲ್ಮ್ಸ್ ವಿಭಾಗಗಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಭಾರತೀಯ ಸಿನೆಮಾವು ಸಾಂಸ್ಕೃತಿಕ ಅಭಿವ್ಯಕ್ತಿ ಮತ್ತು ಜಾಗತಿಕ ಮಟ್ಟದ ಕಥನ ಕಲೆಯ ಪ್ರಬಲ ಮಾಧ್ಯಮವಾಗಿ ನಿರಂತರವಾಗಿ ಬೆಳೆಯುತ್ತಿದೆ ಎಂದು ಅವರು ಹೇಳಿದರು.

ದೆಹಲಿಯ ಹೊರತಾಗಿ ಏಕತಾ ನಗರದಲ್ಲಿ ಸಮಾರಂಭ ನಡೆಸಿರುವುದು ಸರ್ದಾರ್ ಪಟೇಲರ ರಾಷ್ಟ್ರೀಯ ಏಕತೆಯ ಕಲ್ಪನೆಗೆ ನೀಡಿದ ಗೌರವ. ಮುಂಬರುವ ದಿನಗಳಲ್ಲಿ ದೇಶದ ಇತರ ಪ್ರಮುಖ ನಗರಗಳಲ್ಲೂ ಈ ಸಮಾರಂಭ ನಡೆಯಲಿದೆ" ಎಂದು ಅವರು ಹೇಳಿದರು.
ಶ್ರೇಷ್ಠತೆಯ ಸಂಭ್ರಮ: ಕಥೆ, ಅಭಿನಯ ಮತ್ತು ಚಿತ್ರರಂಗದ ವಿಭಿನ್ನ ಆಯಾಮಗಳು
'ಭ್ರಮಯುಗಂ' ಚಿತ್ರಕ್ಕಾಗಿ ಮಮ್ಮೂಟ್ಟಿ ಮತ್ತು 'ಚಂದು ಚಾಂಪಿಯನ್' ಚಿತ್ರಕ್ಕಾಗಿ ಕಾರ್ತಿಕ್ ಆರ್ಯನ್ ಅವರು 'ಅತ್ಯುತ್ತಮ ನಟ' ಪ್ರಶಸ್ತಿಯನ್ನು ಹಂಚಿಕೊಂಡರು; ಹಾಗೆಯೇ 'ಆರ್ಟಿಕಲ್ 370' ಚಿತ್ರಕ್ಕಾಗಿ ಯಾಮಿ ಗೌತಮ್ ಅವರು 'ಅತ್ಯುತ್ತಮ ನಟಿ' ಪ್ರಶಸ್ತಿಯನ್ನು ಪಡೆದರು.

ಪೋಷಕ ಪಾತ್ರಗಳ ವಿಭಾಗದಲ್ಲಿ, 'ಭಕ್ಷಕ್' ಚಿತ್ರಕ್ಕಾಗಿ ಸಂಜಯ್ ಮಿಶ್ರಾ ಅವರಿಗೆ 'ಅತ್ಯುತ್ತಮ ಪೋಷಕ ನಟ' ಪ್ರಶಸ್ತಿ ನೀಡಲಾಯಿತು. 'ಮಹಾರಾಜ' ಚಿತ್ರದ ಸಚನಾ ನಮಿದಾಸ್ ಮತ್ತು 'ಮಿಥ್ಯಾ' ಚಿತ್ರದ ರೂಪಶ್ರೀ ವರ್ಕಾಡಿ ಅವರು 'ಅತ್ಯುತ್ತಮ ಪೋಷಕ ನಟಿ' ಪ್ರಶಸ್ತಿಯನ್ನು ಹಂಚಿಕೊಂಡರು.

'ಆರ್ಟಿಕಲ್ 370' ಚಿತ್ರವು 'ಅತ್ಯುತ್ತಮ ಚಲನಚಿತ್ರ' (ಫೀಚರ್ ಫಿಲ್ಮ್) ಗೌರವಕ್ಕೆ ಪಾತ್ರವಾಯಿತು ಮತ್ತು ರಣದೀಪ್ ಹೂಡಾ ಅವರು ತಮ್ಮ ಚೊಚ್ಚಲ ನಿರ್ದೇಶನದ ಚಿತ್ರ 'ಸ್ವಾತಂತ್ರ್ಯವೀರ್ ಸಾವರ್ಕರ್'ಗಾಗಿ ಮನ್ನಣೆ ಪಡೆದರು. 'ಕಲ್ಕಿ 2898 ಎಡಿ' ಚಿತ್ರವು 'ಸಂಪೂರ್ಣ ಮನರಂಜನೆ ನೀಡುವ ಅತ್ಯುತ್ತಮ ಜನಪ್ರಿಯ ಚಲನಚಿತ್ರ'ವೆಂದು ಗುರುತಿಸಲ್ಪಟ್ಟರೆ, 'ಕ್ಯಾಪ್ಟನ್ ಮಿಲ್ಲರ್' ಚಿತ್ರವು 'ರಾಷ್ಟ್ರೀಯ, ಸಾಮಾಜಿಕ ಮತ್ತು ಪರಿಸರ ಮೌಲ್ಯಗಳನ್ನು ಉತ್ತೇಜಿಸುವ ಅತ್ಯುತ್ತಮ ಚಲನಚಿತ್ರ' ಪ್ರಶಸ್ತಿಯನ್ನು ಪಡೆಯಿತು. 'ಅಮರನ್' ಚಿತ್ರಕ್ಕಾಗಿ ರಾಜಕುಮಾರ್ ಪೆರಿಯಸಾಮಿ ಅವರು 'ಅತ್ಯುತ್ತಮ ನಿರ್ದೇಶನ' ಪ್ರಶಸ್ತಿಯನ್ನು ಪಡೆದರು.

ಅನೇಕ ಭಾಷೆಗಳು, ಒಂದು ರಾಷ್ಟ್ರೀಯ ವೇದಿಕೆ
ಈ ಪ್ರಶಸ್ತಿಗಳು ಭಾರತೀಯ ಚಲನಚಿತ್ರರಂಗದ ಭಾಷಾ ವೈವಿಧ್ಯತೆಯನ್ನು ಉಲ್ಲೇಖಿಸಿದವು. ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ನಿರ್ದಿಷ್ಟಪಡಿಸಿದ ಭಾಷೆಗಳ ಹೊರತಾಗಿಯೂ, ಗರ್ವಾಲಿ ಮತ್ತು ತುಳು ಚಲನಚಿತ್ರಗಳು ರಾಷ್ಟ್ರೀಯ ಮನ್ನಣೆಯನ್ನು ಪಡೆದವು.
ಎಸ್.ಸಿ. ಫಾರ್ಮಾಕೆಮ್ ಪ್ರೈವೇಟ್ ಲಿಮಿಟೆಡ್ ನಿರ್ಮಿಸಿದ ಮತ್ತು ದಿನೇಶ್ ಪಿ. ಭೋಂಸ್ಲೆ ನಿರ್ದೇಶಿಸಿದ 'ಧೋಲಿ' ಚಿತ್ರವು 'ಅತ್ಯುತ್ತಮ ಗರ್ವಾಲಿ ಚಲನಚಿತ್ರ' ಪ್ರಶಸ್ತಿಯನ್ನು ಪಡೆಯಿತು; ಹಾಗೆಯೇ ಪಿಚ್ಚರ್ ಸ್ಟುಡಿಯೋ ನಿರ್ಮಿಸಿದ ಮತ್ತು ಶಿವಧ್ವಜ ಶೆಟ್ಟಿ ನಿರ್ದೇಶಿಸಿದ 'ಇಂಬು' ಚಿತ್ರವು 'ಅತ್ಯುತ್ತಮ ತುಳು ಚಲನಚಿತ್ರ' ಗೌರವಕ್ಕೆ ಪಾತ್ರವಾಯಿತು.

ರವಿ ರಾಜ್ ಮುರ್ಮು ನಿರ್ದೇಶಿಸಿದ ಸಂತಾಲಿ ಭಾಷೆಯ ಚಿತ್ರ 'ಅಂಗೇನ್', 'ನಿರ್ದೇಶಕರ ಅತ್ಯುತ್ತಮ ಚೊಚ್ಚಲ ಚಲನಚಿತ್ರ' ಪ್ರಶಸ್ತಿಯನ್ನು ಪಡೆಯಿತು.
ಗರ್ವಾಲಿ ಮತ್ತು ತುಳುವಿನಿಂದ ಹಿಡಿದು ಸಂತಾಲಿಯವರೆಗೆ, ಈ ಸಂಜೆಯು ವೈವಿಧ್ಯಮಯ ಚಲನಚಿತ್ರ ಧ್ವನಿಗಳನ್ನು ಒಂದೇ ರಾಷ್ಟ್ರೀಯ ವೇದಿಕೆಗೆ ತಂದಿತು; ಪ್ರತಿಯೊಂದು ಭಾಷೆಯೂ ಭಾರತದ ಚಲನಚಿತ್ರ ಲೋಕದ ವೈವಿಧ್ಯಮಯ ಚಿತ್ರಣಕ್ಕೆ ಹೊಸ ಕಥೆಯನ್ನು ಸೇರಿಸುತ್ತದೆ ಎಂಬುದನ್ನು ಇದು ಪುನರುಚ್ಚರಿಸಿತು.
ಭಾರತೀಯ ಚಿತ್ರರಂಗದ ವೈಭವದ ಸಂಭ್ರಮ
72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವು ಖ್ಯಾತ ನಟ-ನಟಿಯರು, ಉದಯೋನ್ಮುಖ ಧ್ವನಿಗಳು, ಜನಪ್ರಿಯ ಸಿನಿಮಾಗಳು ಹಾಗೂ ಪ್ರಾದೇಶಿಕ ಕಥನಗಳನ್ನು ಒಂದೇ ರಾಷ್ಟ್ರೀಯ ವೇದಿಕೆಗೆ ತಂದು ನಿಲ್ಲಿಸಿತು. ಏಕತಾ ನಗರದಲ್ಲಿ ಈ ಸಂಜೆಯು ಭಾರತೀಯ ಚಿತ್ರರಂಗದ ಜೀವಂತಿಕೆಯನ್ನು, ಭಾಷೆಗಳ ಗಡಿ ಮೀರಿ ಬೆಸೆಯುವ ಸಿನಿಮಾದ ಜಾಗತಿಕ ಶಕ್ತಿಯನ್ನು ಸಂಭ್ರಮಿಸಿತು.

ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ ಮತ್ತು ಪ್ರಶಸ್ತಿಗಳ ಕುರಿತಾದ ವಿವರವಾದ ಮಾಹಿತಿಗಾಗಿ, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ: Complete List of Awardees
*****
(ಪ್ರಕಟಣೆ ಐ.ಡಿ.: 2313696)
ವಿಸಿಟರ್ ಕೌಂಟರ್ : 8