ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಗ್ರಾಹಕರನ್ನು ದಾರಿ ತಪ್ಪಿಸುವ ಸಾಫ್ಟ್ ವೇರ್ ಚಾಲಿತ ಪಾವತಿ ಸ್ಕ್ರೀನ್ ಗಳು(ಟಿಪ್ಪಿಂಗ್  ಪ್ರಾಂಪ್ಟ್‌ಗಳು) ಮತ್ತು ಮೋಸಗೊಳಿಸಲು ರಚಿಸಲಾದ ಅನೈತಿಕ ಬಳಕೆದಾರ ಇಂಟರ್ಫೇಸ್ ವಿನ್ಯಾಸ(ಡಾರ್ಕ್ ಪ್ಯಾಟರ್ನ್‌) ಬಳಸಿದ ರಾಪಿಡೊಗೆ 10 ಲಕ್ಷ ರೂ. ದಂಡ ವಿಧಿಸಿದ ಸಿಸಿಪಿಎ


ರಾಪಿಡೊದ ರೈಡ್-ಬುಕಿಂಗ್ ಇಂಟರ್ಫೇಸ್‌ನಲ್ಲಿ "ಮೋಸಗೊಳಿಸುವ ತಂತ್ರಜ್ಞಾನ ವಿನ್ಯಾಸ" ಮತ್ತು "ಇಂಟರ್‌ಫೇಸ್ ಹಸ್ತಕ್ಷೇಪ"ವನ್ನು ಸಿಸಿಪಿಎ ಪತ್ತೆ ಮಾಡಿದೆ

ಗ್ರಾಹಕರನ್ನು ನಿಗದಿತ ದರಕ್ಕಿಂತ ಹೆಚ್ಚಿನ ಹಣ ಪಾವತಿಸುವಂತೆ ಮಾಡುವ ದಾರಿ ತಪ್ಪಿಸುವ ಪ್ರಾಂಪ್ಟ್‌ಗಳು ಮತ್ತು ಅಭ್ಯಾಸಗಳನ್ನು ನಿಲ್ಲಿಸುವಂತೆ ರಾಪಿಡೊಗೆ ಸಿಸಿಪಿಎ ನಿರ್ದೇಶನ

ರೈಡ್-ಹೇಲಿಂಗ್ (ಡಿಜಿಟಲ್ ಸಾರಿಗೆ ಸೇವೆ) ವೇದಿಕೆಗಳ ಮುಂಗಡ-ಟಿಪ್ಪಿಂಗ್ (ಪಾವತಿ ಸ್ಕ್ರೀನ್ ಗಳು) ಮತ್ತು ಕ್ರಿಯಾತ್ಮಕ ಬೆಲೆ ನಿಗದಿ ಅಭ್ಯಾಸಗಳ ವಲಯ-ವ್ಯಾಪಿ ಪರಿಶೀಲನೆಯ ನಂತರ ಸಿಸಿಪಿಎ ಕ್ರಮ ಕೈಗೊಂಡಿದೆ

ಪ್ರಕಟಣಾ ದಿನಾಂಕ: 15 SEP 2026 5:24PM by PIB Bengaluru

ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ(ಸಿಸಿಪಿಎ)ದ ಮುಖ್ಯ ಆಯುಕ್ತೆ ಶ್ರೀಮತಿ ನಿಧಿ ಖಾರೆ ಮತ್ತು ಆಯುಕ್ತೆ ಶ್ರೀ ಅನುಪಮ್ ಮಿಶ್ರಾ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿ, ರೈಡ್-ಹೇಲಿಂಗ್ ವೇದಿಕೆಯಾದ ರಾಪಿಡೊವನ್ನು ನಿರ್ವಹಿಸುವ ರೊಪ್ಪೆನ್ ಟ್ರಾನ್ಸ್‌ಪೋರ್ಟೇಶನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್‌ಗೆ 10 ಲಕ್ಷ ರೂ. ದಂಡ ವಿಧಿಸಿದೆ. ದಾರಿ ತಪ್ಪಿಸುವ ಜಾಹೀರಾತುಗಳು, ಅನ್ಯಾಯದ ವ್ಯಾಪಾರ ಪದ್ಧತಿಗಳು, ಅಸಮಂಜಸ ಒಪ್ಪಂದ ಮತ್ತು ಸವಾರರು ತಮ್ಮ ಸವಾರಿಗಳನ್ನು ದೃಢೀಕರಿಸುವ ಮೊದಲೇ ಹೆಚ್ಚಿನ ಹಣ ಪಾವತಿಸುವಂತೆ ಪ್ರೇರೇಪಿಸಿದ ಕರಾಳ ಮಾದರಿಗಳನ್ನು ಪತ್ತೆ ಮಾಡಿದ ತಂಡವು, ಈ ದಂಡ ವಿಧಿಸಿದೆ.

ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕ್ಯಾಬ್ ಮತ್ತು ಬೈಕ್-ಟ್ಯಾಕ್ಸಿ ಅಗ್ರಿಗೇಟರ್ ವೇದಿಕೆಗಳ ವಲಯ-ವ್ಯಾಪಿ ಪರಿಶೀಲನೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಿ-ರೈಡ್ ಟಿಪ್ಪಿಂಗ್ ಮತ್ತು ಕ್ರಿಯಾತ್ಮಕ ಬೆಲೆ ನಿಗದಿಗೆ ಸಂಬಂಧಿಸಿದ ವಿವಿಧ ವೇದಿಕೆಗಳ ಅಭ್ಯಾಸಗಳನ್ನು ಸಿಸಿಪಿಎ ಪರಿಶೀಲಿಸುವಾಗ, ರಾಪಿಡೊ ಅಪ್ಲಿಕೇಶನ್ ನಲ್ಲಿ "ಬೆಲೆ ಹೆಚ್ಚಾದರೆ, ಸವಾರಿ ಪಡೆಯುವ ಅವಕಾಶ ಹೆಚ್ಚಾಗುತ್ತದೆ" ಮತ್ತು "ಕ್ಯಾಪ್ಟನ್‌ಗಳು 60 ರೂ. ಸ್ವೀಕರಿಸುತ್ತಿಲ್ಲ. ರೈಡರ್‌ನ ಬುಕಿಂಗ್ ಇನ್ನೂ ಸಂಸ್ಕರಣೆಗೊಳ್ಳುತ್ತಿರುವಾಗಲೇ +10, +20, +30" ಪಾವತಿಸಬೇಕು ಎಂಬ ಪ್ರಾಂಪ್ಟ್‌(ಅಧಿಸೂಚನೆ ಅಥವಾ ನೋಟಿಫಿಕೇಷನ್)ಗಳನ್ನು ಪತ್ತೆ ಮಾಡಿದೆ.

ರಾಪಿಡೊ ಪ್ರಾಂಪ್ಟ್ ಗಳು "ಮೋಸಗೊಳಿಸುವ ತಂತ್ರಜ್ಞಾನ ವಿನ್ಯಾಸ"ಗಳು: ಸಿಸಿಪಿಎ ಪತ್ತೆ

ಸಿಸಿಪಿಎ ನಡೆಸಿದ ಶೋಧದ ಪ್ರಕಾರ, ರಾಪಿಡೊದ ಕ್ರಮಾವಳಿಯಂತೆ ಮೊದಲು ಸವಾರನಿಗೆ ದರ ಉಲ್ಲೇಖಿಸುತ್ತದೆ, ಸವಾರ ಆ ದರದಲ್ಲಿ ಬುಕ್ ಮಾಡಿದ ನಂತರ, ಕ್ಯಾಪ್ಟನ್‌ಗಳು ಮೂಲ ಬೆಲೆ ಸ್ವೀಕರಿಸುತ್ತಿಲ್ಲ ಎಂಬ ಕಾರಣಕ್ಕೆ ಸವಾರನಿಗೆ ಹೆಚ್ಚಿನ ಹಣ ಪಾವತಿಸುವಂತೆ ಪ್ರೇರೇಪಿಸುತ್ತದೆ. ಈ ಅಭ್ಯಾಸವು ಸವಾರನು ಬುಕಿಂಗ್‌ಗೆ ಈಗಾಗಲೇ ಬದ್ಧನಾಗಿರುವ ಮತ್ತು ಮಾತುಕತೆಗೆ ಸೀಮಿತ ವ್ಯಾಪ್ತಿ ಹೊಂದಿರುವ ನಿಖರವಾದ ಹಂತದಲ್ಲಿ, ಹೆಚ್ಚುವರಿ ಮೊತ್ತ ಪಾವತಿಸುವುದರ ಮೇಲೆ ಸವಾರನು ತ್ವರಿತವಾಗಿ ಸವಾರಿ ಪಡೆಯುವ ಸಾಧ್ಯತೆಗಳು ಅವಲಂಬಿತವಾಗಿವೆ ಎಂಬ ತಪ್ಪು ಅಭಿಪ್ರಾಯ ಸೃಷ್ಟಿಸುತ್ತದೆ. ಈ ಅಭ್ಯಾಸವು "ಕನ್ಫರ್ಮ್ ಶೇಮಿಂಗ್" ರೂಪಿಸಲು ನಡೆಸಲಾಗಿದೆ ಎಂದು ಸಿಸಿಪಿಎ ಅಭಿಪ್ರಾಯಪಟ್ಟಿದೆ. ಗ್ರಾಹಕರನ್ನು ಮೋಸಗೊಳಿಸಲು ರಚಿಸಲಾದ ಅನೈತಿಕ ಬಳಕೆದಾರ ಇಂಟರ್ಫೇಸ್ ವಿನ್ಯಾಸ (ಡಾರ್ಕ್ ಪ್ಯಾಟರ್ನ್‌)ಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಮಾರ್ಗಸೂಚಿಗಳು, 2023ರ ಅಡಿ ಗುರುತಿಸಲಾದ ಅನೈತಿಕ ಬಳಕೆದಾರ ಇಂಟರ್ಫೇಸ್ ವಿನ್ಯಾಸ (ಡಾರ್ಕ್ ಪ್ಯಾಟರ್ನ್) ಇದಾಗಿದೆ. ಏಕೆಂದರೆ ಗ್ರಾಹಕರು ಹೆಚ್ಚಿನ ಹಣ ಪಾವತಿಸಲು ಒಪ್ಪದಿದ್ದರೆ ತುರ್ತು ಪ್ರಜ್ಞೆ ಮತ್ತು ಸವಾರಿ ಕಳೆದುಕೊಳ್ಳುವ ಭಯವನ್ನು ಸೃಷ್ಟಿಸುತ್ತದೆ ಎಂದು ಅದು ತಿಳಿಸಿದೆ.

ಕಲರ್-ಕೋಡೆಡ್ ಬೆಲೆ ನಿಗದಿ ಸ್ಲೈಡರ್ 2ನೇ ಡಾರ್ಕ್ ಪ್ಯಾಟರ್ನ್ ಆಗಿ ಪತ್ತೆಯಾಗಿದೆ

ರಾಪಿಡೊದ "ನಿಮ್ಮ ಬೆಲೆ ನಿಗದಿಪಡಿಸಿ" ಸ್ಲೈಡರ್ ಅನ್ನು ಸಹ ಸಿಸಿಪಿಎ ಪರಿಶೀಲಿಸಿದೆ, ಅದು ಸವಾರನ ಬೆಲೆ ನಿರ್ಧಾರದ ಮೇಲೆ ಪ್ರಭಾವ ಬೀರಲು ಕಲರ್-ಕೋಡ್ ಮಾಡಲ್ಪಟ್ಟಿದೆ ಎಂದು ಪತ್ತೆ ಮಾಡಿದೆ.

  • ಬೆಲೆ ಹೆಚ್ಚಿಸುವುದರಿಂದ "ಸವಾರಿ ಪಡೆಯುವ ಹೆಚ್ಚಿನ ಅವಕಾಶ" ಎಂಬುದನ್ನು ಹಸಿರು ಬಣ್ಣದಲ್ಲಿ ಪ್ರದರ್ಶಿಸಲಾಗುತ್ತಿದೆ.
  • ಬೆಲೆ ಕಡಿಮೆ ಮಾಡುವುದರಿಂದ... ಎಂಬುದನ್ನು ಕೆಂಪು ಅಥವಾ ಕಿತ್ತಳೆ ಬಣ್ಣದಿಂದ ಎಚ್ಚರಿಕೆ ನೀಡಲಾಗಿದೆ.
  • ಸ್ಲೈಡರ್ ಬೆಲೆ ಕಡಿಮೆ ಮಾಡುವುದಕ್ಕಿಂತ ಹೆಚ್ಚಿಸಲು ಹೆಚ್ಚಿನ ಅವಕಾಶ ಒದಗಿಸಿದೆ.

ಇಂಟರ್ಫೇಸ್‌ನ ವಿನ್ಯಾಸವು ಗ್ರಾಹಕರನ್ನು ಹೆಚ್ಚಿನ ಮೊತ್ತ ಪಾವತಿಸುವಂತೆ ಪ್ರೇರೇಪಿಸುತ್ತಿರುವುದರಿಂದ, ಇದು 2ನೇ ಡಾರ್ಕ್ ಪ್ಯಾಟರ್ನ್ "ಇಂಟರ್‌ಫೇಸ್ ಹಸ್ತಕ್ಷೇಪ"ಕ್ಕೆ ಸಮನಾಗಿದೆ ಎಂದು ಸಿಸಿಪಿಎ ಅಭಿಪ್ರಾಯಪಟ್ಟಿದೆ.

ಮುಂಗಡ ಪಾವತಿಯನ್ನು ನಿಜವಾದ "ಭಕ್ಷೀಸು(ಟಿಪ್)" ಎಂದು ಪ್ರಸ್ತುತಪಡಿಸಲಾಗದು

ಬುಕಿಂಗ್ ಸಮಯದಲ್ಲಿ ಸವಾರನಿಗೆ ಪ್ರದರ್ಶಿಸಲಾದ ದರವು ದೂರ, ಸಮಯ, ಟ್ರಾಫಿಕ್, ಟೋಲ್‌ಗಳು ಮತ್ತು ಕ್ಯಾಪ್ಟನ್‌ಗೆ ಪಾವತಿಸಬೇಕಾದ ಮೊತ್ತ ಸೇರಿದಂತೆ ಎಲ್ಲಾ ಅಂಶಗಳನ್ನು ಈಗಾಗಲೇ ಗಣನೆಗೆ ತೆಗೆದುಕೊಳ್ಳುತ್ತದೆ ಎಂದು ಸಿಸಿಪಿಎ ಗಮನಿಸಿದೆ. ಈ ಸಂದರ್ಭದಲ್ಲಿ, ಸವಾರಿ ಪ್ರಾರಂಭವಾಗುವ ಮೊದಲು ಸವಾರನು ಅದೇ ಸವಾರಿಗೆ ಹೆಚ್ಚುವರಿ ಮೊತ್ತ ಪಾವತಿಸಬೇಕೆಂದು ಸೂಚಿಸುವುದಕ್ಕೆ ಯಾವುದೇ ಸಮರ್ಥನೆ ಇರಬಾರದು ಸಿಸಿಪಿಎ ತಿಳಿಸಿದೆ. ಭಕ್ಷೀಸು(ಟಿಪ್) ಸಾಮಾನ್ಯವಾಗಿ ಸೇವೆ ಒದಗಿಸಿದ ನಂತರ ಸವಾರನ ಸ್ವಯಂಪ್ರೇರಿತ ಪಾವತಿಯಾಗಿದೆ, ಆದರೆ ಸೇವೆ ಒದಗಿಸಲು ಷರತ್ತಾಗಿ ಅದನ್ನು ಪ್ರಸ್ತುತಪಡಿಸಬಾರದು ಎಂದು ಸಿಸಿಪಿಎ ತಿಳಿಸಿದೆ.

ಮೋಟಾರ್ ವೆಹಿಕಲ್ ಅಗ್ರಿಗೇಟರ್ ಮಾರ್ಗಸೂಚಿಗಳು-2025 ಅನ್ನು ಸಹ ಸಿಸಿಪಿಎ ಉಲ್ಲೇಖಿಸಿದೆ, ಇದು ಯಾವುದೇ ಟಿಪ್ಪಿಂಗ್ ವೈಶಿಷ್ಟ್ಯವನ್ನು ಸವಾರಿ ಪೂರ್ಣಗೊಂಡ ನಂತರವೇ ಲಭ್ಯವಾಗುವಂತೆ ಮಾಡುತ್ತದೆ, ಬುಕಿಂಗ್ ಸಮಯದಲ್ಲಿ ಅಥವಾ ಸವಾರಿ ಸಮಯದಲ್ಲಿ ಅಲ್ಲ. ಟಿಪ್ಪಿಂಗ್ ಸ್ವಯಂಪ್ರೇರಿತವಾಗಿದೆ, ಸವಾರ ಹೆಚ್ಚುವರಿ ಮೊತ್ತವನ್ನು ಪಾವತಿಸುತ್ತಾರೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ ಅದರ ಹೊಂದಾಣಿಕೆಯ ಕ್ರಮಾವಳಿ ಕಾರ್ಯ ನಿರ್ವಹಿಸುತ್ತಲೇ ಇರುತ್ತದೆ. ಪ್ರಾಂಪ್ಟ್‌ಗಳು ಸವಾರ ಮತ್ತು ಚಾಲಕನ ನಡುವಿನ ಆಫ್‌ಲೈನ್ ಸಂಭಾಷಣೆಯಂತೆಯೇ ನೈಜ-ಸಮಯದ ಮಾತುಕತೆಯನ್ನು ಪ್ರತಿಬಿಂಬಿಸುತ್ತದೆ ಎಂದು ರಾಪಿಡೊ ವಾದಿಸಿತ್ತು.

ಸಿಸಿಪಿಎ ರಾಪಿಡೊದ ಈ ಎಲ್ಲಾ ವಾದಗಳನ್ನು ತಿರಸ್ಕರಿಸಿದ್ದು, ಪ್ರಾಂಪ್ಟ್‌ಗಳ ಸಮಯ ಮತ್ತು ವಿನ್ಯಾಸವು ಸವಾರನು ಪ್ಲಾಟ್‌ಫಾರ್ಮ್‌ನ ಮೇಲೆ ಹೆಚ್ಚು ಅವಲಂಬಿತನಾಗಿದ್ದ ಕ್ಷಣದಲ್ಲೇ ಸವಾರನ ಮೇಲೆ ಒತ್ತಡ ಉಂಟುಮಾಡುತ್ತದೆ ಎಂದು ಹೇಳಿದೆ. ಹೆಚ್ಚುವರಿ ಮೊತ್ತ ಪಾವತಿಸುವುದರಿಂದ ಸವಾರನಿಗೆ ಸವಾರಿ ಸಿಗುವ ಸಾಧ್ಯತೆ ಹೆಚ್ಚಾಗುತ್ತದೆ ಎಂದು ತೋರಿಸುವ ಯಾವುದೇ ದತ್ತಾಂಶವನ್ನು ರಾಪಿಡೊ ದಾಖಲೆಯಲ್ಲಿ ಇರಿಸಿಲ್ಲ. ಆದ್ದರಿಂದ ಈ ಹಕ್ಕನ್ನು ಆಧಾರರಹಿತ ಮತ್ತು ದಾರಿ ತಪ್ಪಿಸುವಂತಿದೆ ಎಂದು ಪರಿಗಣಿಸಲಾಗಿದೆ ಎಂದು ಸಿಸಿಪಿಎ ಸ್ಪಷ್ಟಪಡಿಸಿದೆ.

ರೈಡ್-ಹೇಲಿಂಗ್ ಪ್ಲಾಟ್‌ಫಾರ್ಮ್‌ಗಳ ವಲಯ-ವ್ಯಾಪಿ ಪರಿಶೀಲನೆ

ರಾಪಿಡೊ ವಿರುದ್ಧದ ಕ್ರಮವು ರೈಡ್-ಹೇಲಿಂಗ್ ಮತ್ತು ಬೈಕ್-ಟ್ಯಾಕ್ಸಿ ವೇದಿಕೆಗಳಲ್ಲಿ ಸಿಸಿಪಿಎಯ ಅಡ್ವಾನ್ಸ್-ಟಿಪ್ ಮತ್ತು ಡಾರ್ಕ್-ಪ್ಯಾಟರ್ನ್ ಅಭ್ಯಾಸಗಳ ವ್ಯಾಪಕ ಪರಿಶೀಲನೆಯ ಭಾಗವಾಗಿದೆ. ಸಿಸಿಪಿಎ ಈ ಹಿಂದೆ ಉಬರ್, ಓಲಾ, ರಾಪಿಡೊ ಮತ್ತು ನಮ್ಮ ಯಾತ್ರಿ ಸೇರಿದಂತೆ ನಾನಾ ವೇದಿಕೆಗಳಿಗೆ ನೋಟಿಸ್‌ ನೀಡಿತ್ತು, ವಂಚನೆಯ ಮಾದರಿ(ಡಾರ್ಕ್ ಪ್ಯಾಟರ್ನ್‌)ಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಮಾರ್ಗಸೂಚಿಗಳು-2023 ಅನ್ನು ಅನುಸರಿಸಲು ಮತ್ತು ಅನುಸರಣೆಯ ಕುರಿತು ಸ್ವಯಂ-ಘೋಷಣೆಗಳನ್ನು ಸಲ್ಲಿಸಲು ನಿರ್ದೇಶಿಸಿದೆ. ಈ ನಿಟ್ಟಿನಲ್ಲಿ ಸಿಸಿಪಿಎಯ ಉಬರ್ ಮತ್ತು ಓಲಾದ ಪರಿಶೀಲನೆಯು ಪ್ರಸ್ತುತ ನಡೆಯುತ್ತಿದೆ.

ಗ್ರಾಹಕ ರಕ್ಷಣೆಯ ಬದ್ಧತೆ ಪುನರುಚ್ಚರಿಸಿದ ಸಿಸಿಪಿಎ

ಗ್ರಾಹಕ ಸಂರಕ್ಷಣಾ ಕಾಯ್ದೆ-2019ರ ಅಡಿ ತನ್ನ ಶಾಸನಬದ್ಧ ಆದೇಶ ಚಲಾಯಿಸುವಲ್ಲಿ, ಗ್ರಾಹಕರನ್ನು ಒಂದು ವರ್ಗವಾಗಿ ರಕ್ಷಿಸಲು, ಅನ್ಯಾಯದ ವ್ಯಾಪಾರ ಪದ್ಧತಿಗಳನ್ನು ತಡೆಗಟ್ಟಲು, ಸರಕು ಅಥವಾ ಸೇವೆಗಳಿಗೆ ಸಂಬಂಧಿಸಿದಂತೆ ಯಾವುದೇ ಸುಳ್ಳು ಅಥವಾ ದಾರಿ ತಪ್ಪಿಸುವ ಜಾಹೀರಾತುಗಳನ್ನು ಮಾಡದಂತೆ ಸಿಸಿಪಿಎ ಪೂರ್ವಭಾವಿ ಕ್ರಮಗಳನ್ನು ಜರುಗಿಸುವುದನ್ನು ಮುಂದುವರೆಸಿದೆ. ದಾರಿ ತಪ್ಪಿಸುವ ಜಾಹೀರಾತುಗಳು, ಅನ್ಯಾಯದ ವ್ಯಾಪಾರ ಪದ್ಧತಿಗಳು ಅಥವಾ ಕರಾಳ ಮಾದರಿಗಳಿಗೆ ಸಂಬಂಧಿಸಿದಂತೆ ದೂರುಗಳು ಅಥವಾ ಕುಂದುಕೊರತೆಗಳನ್ನು ಹೊಂದಿರುವ ಗ್ರಾಹಕರು ರಾಷ್ಟ್ರೀಯ ಗ್ರಾಹಕ ಸಹಾಯವಾಣಿ(ಎನ್‌ಸಿಎಚ್) 1915ರಲ್ಲಿ ತಮ್ಮ ಕುಂದುಕೊರತೆಗಳನ್ನು ನೋಂದಾಯಿಸಬಹುದು ಅಥವಾ com-ccpa[at]gov[dot]in ನಲ್ಲಿ ಸಿಸಿಪಿಎಗೆ ಬರೆಯಬಹುದು.

ಅಂತಿಮ ಆದೇಶವು ಸಿಸಿಪಿಎ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

 

*****


(ಪ್ರಕಟಣೆ ಐ.ಡಿ.: 2310687) ವಿಸಿಟರ್ ಕೌಂಟರ್ : 15
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Gujarati