ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಭಾರತದಲ್ಲಿ 80 ಲಕ್ಷ ಡೋಸ್ ಎಚ್‌ಪಿವಿ ಲಸಿಕೆ ನೀಡಿಕೆ, ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಲ್ಲಿ ಮಹತ್ವದ ಮೈಲಿಗಲ್ಲು
ರಾಷ್ಟ್ರೀಯ ಎಚ್‌ಪಿವಿ ಲಸಿಕಾ ಅಭಿಯಾನದಡಿ 80 ಲಕ್ಷಕ್ಕೂ ಹೆಚ್ಚು ಎಚ್‌ಪಿವಿ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ
ಗುಜರಾತ್, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಮಿಜೋರಾಂ ಶೇ.100ರಷ್ಟು ಪ್ರಗತಿ ಸಾಧಿಸಿವೆ; ಬಿಹಾರ, ಆಂಧ್ರಪ್ರದೇಶ ಮತ್ತು ಅಸ್ಸಾಂ ಶೇ.90 ರ ಗಡಿ ದಾಟಿವೆ
22 ಲಕ್ಷಕ್ಕೂ ಹೆಚ್ಚು ಹದಿಹರೆಯದ ಹೆಣ್ಣುಮಕ್ಕಳಿಗೆ ಲಸಿಕೆ ನೀಡುವ ಮೂಲಕ ಉತ್ತರ ಪ್ರದೇಶ ಮುಂಚೂಣಿಯಲ್ಲಿದೆ
ಎಲ್ಲಾ ಲಸಿಕಾ ಕಾರ್ಯಕ್ರಮಗಳನ್ನು ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ನಡೆಸಲಾಗುತ್ತಿದ್ದು, ಅಪರೂಪದ ಎಇಎಫ್‌ಐ ಪ್ರಕರಣಗಳ ನಿರ್ವಹಣೆಗೆ 24×7 ವ್ಯವಸ್ಥೆ ಮಾಡಲಾಗಿದೆ
14 ವರ್ಷದ ಬಾಲಕಿಯರಿಗೆ ಉಚಿತ, ಐಚ್ಛಿಕ ಏಕ-ಡೋಸ್ ಲಸಿಕೆ ನೀಡುವ ರಾಷ್ಟ್ರೀಯ ಎಚ್‌ಪಿವಿ ಲಸಿಕಾ ಅಭಿಯಾನಕ್ಕೆ 2026ರ ಫೆಬ್ರವರಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರುರು
ಪ್ರಕಟಣಾ ದಿನಾಂಕ:
11 SEP 2026 2:12PM by PIB Bengaluru
ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಭಾರತದ ಪ್ರಯತ್ನಗಳಲ್ಲಿ ಮಹತ್ವದ ಮೈಲಿಗಲ್ಲೊಂದನ್ನು ದೇಶ ಸಾಧಿಸಿದೆ. 2026ರ ಫೆಬ್ರವರಿಯಲ್ಲಿ ರಾಷ್ಟ್ರೀಯ ಎಚ್‌ಪಿವಿ ಲಸಿಕಾ ಅಭಿಯಾನ ಆರಂಭವಾದಾಗಿನಿಂದ, ಹ್ಯೂಮನ್ ಪ್ಯಾಪಿಲೋಮಾವೈರಸ್ (ಎಚ್‌ಪಿವಿ) ಲಸಿಕೆಯ 80 ಲಕ್ಷಕ್ಕೂ ಹೆಚ್ಚು ಡೋಸ್‌ಗಳನ್ನು ನೀಡಲಾಗಿದೆ. ಈ ಮೈಲಿಗಲ್ಲು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಎಚ್‌ಪಿವಿ ಲಸಿಕೆಯ ವ್ಯಾಪ್ತಿ ಹೆಚ್ಚುತ್ತಿರುವುದನ್ನು ತೋರಿಸುತ್ತದೆ. ಜೊತೆಗೆ, ಹದಿಹರೆಯದ ಹೆಣ್ಣುಮಕ್ಕಳಿಗೆ ತಡೆಗಟ್ಟುವ ಆರೋಗ್ಯ ಸೇವೆಗಳನ್ನು ಇನ್ನಷ್ಟು ಬಲಪಡಿಸುವ ಭಾರತದ ಬದ್ಧತೆಯನ್ನೂ ಇದು ದೃಢಪಡಿಸುತ್ತದೆ.
ರಾಷ್ಟ್ರೀಯ ಎಚ್‌ಪಿವಿ ಲಸಿಕಾ ಅಭಿಯಾನಕ್ಕೆ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಫೆಬ್ರವರಿಯಲ್ಲಿ ಚಾಲನೆ ನೀಡಿದರು. ಈ ಅಭಿಯಾನದಡಿ, 14 ವರ್ಷದ ಬಾಲಕಿಯರಿಗೆ ಪೋಷಕರ ಒಪ್ಪಿಗೆಯೊಂದಿಗೆ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಸ್ವಯಂಪ್ರೇರಿತವಾಗಿ ಮತ್ತು ಉಚಿತವಾಗಿ ಒಂದೇ ಡೋಸ್ ಎಚ್‌ಪಿವಿ ಲಸಿಕೆಯನ್ನು ನೀಡಲಾಗುತ್ತಿದೆ.
ಭಾರತದ ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ (ಆರ್‌ಜಿಐ) ಅವರ 2021ರ ಅಂದಾಜಿನ ಪ್ರಕಾರ, ಪ್ರತಿ ವರ್ಷ ಸುಮಾರು 1.2 ಕೋಟಿ ಹೆಣ್ಣುಮಕ್ಕಳು 14 ವರ್ಷದ ವಯೋಮಾನದ ಗುಂಪಿಗೆ ಸೇರುತ್ತಿದ್ದು, ಈ ಉಪಕ್ರಮದಿಂದ ಪ್ರಯೋಜನ ಪಡೆಯಲಿದ್ದಾರೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಎಚ್‌ಪಿವಿ ಲಸಿಕೆಯ ವ್ಯಾಪ್ತಿಯನ್ನು ಹೆಚ್ಚಿಸುವಲ್ಲಿ ಮಹತ್ವದ ಪ್ರಗತಿ ಸಾಧಿಸಿವೆ. ಹಲವು ರಾಜ್ಯಗಳು ತಮ್ಮ ಗುರುತಿಸಲಾದ ಗುರಿ ಸಮೂಹಗಳಿಗೆ ಶೇ.100ರಷ್ಟು ವ್ಯಾಪ್ತಿಯನ್ನು ಸಾಧಿಸಿವೆ.
ಗುಜರಾತ್, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಮಿಜೋರಾಂ ತಮ್ಮ ಗುರುತಿಸಲಾದ ಗುರಿ ಜನಸಂಖ್ಯೆಯಲ್ಲಿ ಶೇ.100ರಷ್ಟು ವ್ಯಾಪ್ತಿಯನ್ನು ಸಾಧಿಸಿವೆ. ಬಿಹಾರ, ಆಂಧ್ರಪ್ರದೇಶ ಮತ್ತು ಅಸ್ಸಾಂ ಶೇ.90ಕ್ಕಿಂತ ಹೆಚ್ಚಿನ ವ್ಯಾಪ್ತಿಯನ್ನು ಸಾಧಿಸಿವೆ. ಕರ್ನಾಟಕವು ಶೇ.85ಕ್ಕಿಂತ ಹೆಚ್ಚಿನ ವ್ಯಾಪ್ತಿಯನ್ನು ಸಾಧಿಸಿದೆ. ಛತ್ತೀಸಗಢ, ಸಿಕ್ಕಿಂ, ಕೇರಳ, ತೆಲಂಗಾಣ ಮತ್ತು ಒಡಿಶಾ ಶೇ.60ಕ್ಕಿಂತ ಹೆಚ್ಚಿನ ವ್ಯಾಪ್ತಿಯನ್ನು ಸಾಧಿಸಿವೆ.
ರಾಜ್ಯಗಳ ಪೈಕಿ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಲಸಿಕೆಗಳನ್ನು ನೀಡಲಾಗಿದ್ದು, 22 ಲಕ್ಷಕ್ಕೂ ಹೆಚ್ಚು ಹೆಣ್ಣುಮಕ್ಕಳಿಗೆ ಈ ಅಭಿಯಾನದಡಿ ಲಸಿಕೆ ನೀಡಲಾಗಿದೆ.

ಈ ಪ್ರಗತಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಮನ್ವಯದೊಂದಿಗೆ ನಡೆದ ಅನುಷ್ಠಾನ, ನಿರಂತರ ಸಮುದಾಯದ ಭಾಗವಹಿಸುವಿಕೆ ಮತ್ತು ಜಿಲ್ಲಾ ಮಟ್ಟದ ಆರೋಗ್ಯ ತಂಡಗಳ ಸಕ್ರಿಯ ತೊಡಗಿಸಿಕೊಳ್ಳುವಿಕೆ ಪ್ರಮುಖ ಕಾರಣಗಳಾಗಿವೆ. ಗ್ರಾಮೀಣ, ನಗರ, ದೂರದ ಮತ್ತು ಭೌಗೋಳಿಕವಾಗಿ ಸವಾಲಿನ ಪ್ರದೇಶಗಳಲ್ಲಿರುವ ಅರ್ಹ ಹೆಣ್ಣುಮಕ್ಕಳನ್ನು ಸಾರ್ವಜನಿಕ ಆರೋಗ್ಯ ಸೇವಾ ಜಾಲದ ಮೂಲಕ ತಲುಪಲು ರಾಜ್ಯಗಳು ತಮ್ಮ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾದ ವಿಧಾನಗಳನ್ನು ಅಳವಡಿಸಿಕೊಂಡಿವೆ.
ಮಧ್ಯಪ್ರದೇಶ ಮತ್ತು ಗುಜರಾತ್ ತಮ್ಮ ಗುರುತಿಸಲಾದ ಗುರಿ ಸಮೂಹಗಳಲ್ಲಿ ಶೇ.100ರಷ್ಟು ವ್ಯಾಪ್ತಿಯನ್ನು ಸಾಧಿಸಿವೆ. ನಿರಂತರ ಸಮುದಾಯದ ಭಾಗವಹಿಸುವಿಕೆ, ಸಮನ್ವಯದ ಅನುಷ್ಠಾನ ಮತ್ತು ಸ್ಥಳೀಯ ಮಟ್ಟದಲ್ಲಿ ಕೇಂದ್ರೀಕೃತ ಪ್ರಯತ್ನಗಳು ಇದಕ್ಕೆ ನೆರವಾಗಿವೆ. ಅಸ್ಸಾಂ ಮತ್ತು ಇತರ ಈಶಾನ್ಯ ರಾಜ್ಯಗಳಲ್ಲಿನ ಪ್ರಗತಿಯೂ ಸಹ, ವಿವಿಧ ಭೌಗೋಳಿಕ ಪರಿಸ್ಥಿತಿಗಳಿರುವ ಪ್ರದೇಶಗಳಲ್ಲಿ ಲಸಿಕೆ ಸೇವೆಗಳನ್ನು ತಲುಪಿಸಲು ಸಮಗ್ರ ಸಮುದಾಯ ಆರೋಗ್ಯ ಜಾಲಗಳು ಮತ್ತು ಸಮನ್ವಯದ ಸ್ಥಳೀಯ ಕ್ರಮಗಳು ಎಷ್ಟು ಪ್ರಮುಖವೆಂಬುದನ್ನು ತೋರಿಸುತ್ತದೆ.
ಈ ಅಭಿಯಾನದಲ್ಲಿ ಸಮುದಾಯದ ಭಾಗವಹಿಸುವಿಕೆ ಮತ್ತು ವಿಶ್ವಾಸಾರ್ಹ ಮಾಹಿತಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಎಚ್‌ಪಿವಿ ಲಸಿಕೆಗೆ ಸಂಬಂಧಿಸಿದ ಆತಂಕಗಳು ಮತ್ತು ತಪ್ಪು ಮಾಹಿತಿಗಳನ್ನು ನಿವಾರಿಸಲು ಪೋಷಕರು, ಆರೋಗ್ಯ ಸೇವೆ ಒದಗಿಸುವವರು, ಶಿಕ್ಷಕರು ಮತ್ತು ಮುಂಚೂಣಿ ಆರೋಗ್ಯ ಕಾರ್ಯಕರ್ತರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲಾಗಿದೆ.
ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞರು ಮತ್ತು ಏಮ್ಸ್ ನಂತಹ ಸಂಸ್ಥೆಗಳ ತಜ್ಞರು ಸೇರಿದಂತೆ ಆರೋಗ್ಯ ಸೇವೆ ಒದಗಿಸುವವರು, ಶಿಕ್ಷಕರು ಮತ್ತು ಆಶಾ ಹಾಗೂ ಎಎನ್‌ಎಂ ಸೇರಿದಂತೆ ಮುಂಚೂಣಿ ಆರೋಗ್ಯ ಕಾರ್ಯಕರ್ತರು ರಾಜ್ಯಗಳು ಮತ್ತು ಜಿಲ್ಲೆಗಳಲ್ಲಿ ಜಾಗೃತಿ ಮೂಡಿಸುವ ಮತ್ತು ಜನರನ್ನು ಲಸಿಕೆ ಪಡೆಯಲು ಪ್ರೇರೇಪಿಸುವ ಪ್ರಯತ್ನಗಳಿಗೆ ಬೆಂಬಲ ನೀಡಿದ್ದಾರೆ.
ಈ ಅಭಿಯಾನವು ಯು-ವಿನ್ ವೇದಿಕೆಯ ಮೂಲಕ ಭಾರತದ ಡಿಜಿಟಲ್ ಆರೋಗ್ಯ ಮೂಲಸೌಕರ್ಯವನ್ನೂ ಬಳಸಿಕೊಂಡಿದೆ. ಇದರಿಂದ ಕಾರ್ಯಕ್ರಮ ನಿರ್ವಾಹಕರು ಜಿಲ್ಲಾ ಮಟ್ಟದಲ್ಲಿ ಲಸಿಕಾ ವ್ಯಾಪ್ತಿಯನ್ನು ಮೇಲ್ವಿಚಾರಣೆ ಮಾಡಲು, ಲಸಿಕೆ ಪಡೆಯದೆ ಉಳಿದಿರುವ ಅರ್ಹ ಫಲಾನುಭವಿಗಳನ್ನು ಮತ್ತು ವ್ಯಾಪ್ತಿಯಲ್ಲಿರುವ ಕೊರತೆಗಳನ್ನು ಗುರುತಿಸಲು ಹಾಗೂ ಕಾರ್ಯಕ್ರಮದ ಯೋಜನೆ ಮತ್ತು ಸಂಪನ್ಮೂಲ ಹಂಚಿಕೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಸಾಧ್ಯವಾಗುತ್ತಿದೆ.
ಈ ರಾಷ್ಟ್ರೀಯ ಅಭಿಯಾನವು ಎಚ್‌ಪಿವಿ ಲಸಿಕೆ ಕುರಿತು ಜಾಗತಿಕ ಮಟ್ಟದಲ್ಲಿ ದೊರೆತಿರುವ ವ್ಯಾಪಕ ಅನುಭವವನ್ನು ಆಧರಿಸಿದೆ. ಜಾಗತಿಕವಾಗಿ 800 ದಶಲಕ್ಷಕ್ಕೂ ಹೆಚ್ಚು ಎಚ್‌ಪಿವಿ ಲಸಿಕೆ ಡೋಸ್‌ಗಳನ್ನು ವಿತರಿಸಲಾಗಿದೆ. ಇದರಿಂದ ಲಸಿಕೆಯ ಬಳಕೆ ಮತ್ತು ಸುರಕ್ಷತೆಯ ಕುರಿತು ಸಾಕಷ್ಟು ನೈಜ ಅನುಭವ ದೊರೆತಿದೆ.
ಆರಂಭದಲ್ಲಿ ಮುಖ್ಯವಾಗಿ ಹೆಚ್ಚಿನ ಆದಾಯದ ದೇಶಗಳು ಎಚ್‌ಪಿವಿ ಲಸಿಕೆಯನ್ನು ಅಳವಡಿಸಿಕೊಂಡಿದ್ದವು. ನಂತರ ವಿವಿಧ ಆದಾಯ ಮಟ್ಟದ ದೇಶಗಳ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮಗಳಲ್ಲೂ ಇದರ ಬಳಕೆ ಕ್ರಮೇಣ ವಿಸ್ತರಿಸಿತು. ಪ್ರಸ್ತುತ, ಮೇಲ್ಮಧ್ಯಮ ಆದಾಯದ ದೇಶಗಳಲ್ಲಿ ಶೇ.87, ಕೆಳಮಧ್ಯಮ ಆದಾಯದ ದೇಶಗಳಲ್ಲಿ ಶೇ.78 ಮತ್ತು ಕಡಿಮೆ ಆದಾಯದ ದೇಶಗಳಲ್ಲಿ ಶೇ.54 ದೇಶಗಳು ತಮ್ಮ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮಗಳಲ್ಲಿ ಎಚ್‌ಪಿವಿ ಲಸಿಕೆಯನ್ನು ಅಳವಡಿಸಿಕೊಂಡಿವೆ.
ವಿವಿಧ ಆದಾಯದ ದೇಶಗಳಲ್ಲಿ ಎಚ್‌ಪಿವಿ ಲಸಿಕೆಯನ್ನು ಹೆಚ್ಚಾಗಿ ಅಳವಡಿಸಿಕೊಳ್ಳುತ್ತಿರುವುದು, ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ರಾಷ್ಟ್ರೀಯ ಕಾರ್ಯತಂತ್ರಗಳಲ್ಲಿ ಇದು ಪ್ರಮುಖ ಅಂಶವಾಗಿ ಬೆಳೆಯುತ್ತಿರುವುದನ್ನು ತೋರಿಸುತ್ತದೆ.
ಅಭಿಯಾನದಡಿ ನಡೆಯುವ ಎಲ್ಲಾ ಲಸಿಕಾ ಕಾರ್ಯಕ್ರಮಗಳನ್ನು ತರಬೇತಿ ಪಡೆದ ವೈದ್ಯಕೀಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ನಡೆಸಲಾಗುತ್ತದೆ.
ಸರ್ಕಾರಿ ಆರೋಗ್ಯ ಕೇಂದ್ರಗಳನ್ನು ಅಪರೂಪವಾಗಿ ಸಂಭವಿಸಬಹುದಾದ ಲಸಿಕೆ ನಂತರದ ಅಡ್ಡಪರಿಣಾಮಗಳ (ಎಇಎಫ್‌ಐ) ಸೂಕ್ತ ನಿರ್ವಹಣೆಗಾಗಿ 24×7 ಆರೋಗ್ಯ ಸೇವಾ ವ್ಯವಸ್ಥೆಗಳೊಂದಿಗೆ ಸಂಪರ್ಕಿಸಲಾಗಿದೆ. ಈ ವ್ಯವಸ್ಥೆಯು ಲಸಿಕೆಗೆ ಸಂಬಂಧಿಸಿದ ಯಾವುದೇ ಅಡ್ಡಪರಿಣಾಮ ಸಂಭವಿಸಿದರೆ, ಅದನ್ನು ತಕ್ಷಣವೇ ಪರಿಶೀಲಿಸಲು, ಮೇಲ್ವಿಚಾರಣೆ ಮಾಡಲು ಮತ್ತು ಸೂಕ್ತವಾಗಿ ನಿರ್ವಹಿಸಲು ನೆರವಾಗುತ್ತದೆ.
ಅಭಿಯಾನವು ತನ್ನ ಅಂತಿಮ ಹಂತದತ್ತ ಸಾಗುತ್ತಿರುವ ಸಂದರ್ಭದಲ್ಲಿ, ಉಳಿದಿರುವ ಎಲ್ಲ ಅರ್ಹ ಫಲಾನುಭವಿಗಳನ್ನು ತಲುಪಲು ಮತ್ತು ಯಾವುದೇ ಅರ್ಹ ಬಾಲಕಿ ಈ ಅವಕಾಶದಿಂದ ವಂಚಿತಳಾಗದಂತೆ ನೋಡಿಕೊಳ್ಳುವತ್ತ ಗಮನ ಹರಿಸಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ಆರೋಗ್ಯ ಸೇವಾ ವೃತ್ತಿಪರರು, ಮುಂಚೂಣಿ ಆರೋಗ್ಯ ಕಾರ್ಯಕರ್ತರು ಮತ್ತು ಸಮುದಾಯಗಳೊಂದಿಗೆ ನಿರಂತರವಾಗಿ ಕೆಲಸ ಮಾಡುತ್ತಿದೆ. ಜಾಗೃತಿಯನ್ನು ಹೆಚ್ಚಿಸುವುದು, ಲಸಿಕೆ ಪಡೆಯಲು ಸುಲಭವಾದ ಅವಕಾಶ ಕಲ್ಪಿಸುವುದು ಮತ್ತು ಎಚ್‌ಪಿವಿ ಲಸಿಕಾ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಬೆಂಬಲ ನೀಡುವುದು ಇದರ ಉದ್ದೇಶವಾಗಿದೆ.
80 ಲಕ್ಷ ಎಚ್‌ಪಿವಿ ಲಸಿಕೆ ಡೋಸ್‌ಗಳ ಸಾಧನೆ ತಡೆಗಟ್ಟುವ ಆರೋಗ್ಯ ಸೇವೆಯನ್ನು ಬಲಪಡಿಸುವ ಮತ್ತು ಮುಂದಿನ ಪೀಳಿಗೆಗೆ ಗರ್ಭಕಂಠದ ಕ್ಯಾನ್ಸರ್ ವಿರುದ್ಧ ದೀರ್ಘಕಾಲೀನ ರಕ್ಷಣೆ ಒದಗಿಸುವ ಭಾರತದ ಪ್ರಯತ್ನಗಳಲ್ಲಿ ಮಹತ್ವದ ಹೆಜ್ಜೆಯಾಗಿದೆ.
*****
(ಪ್ರಕಟಣೆ ಐ.ಡಿ.: 2309164)
ವಿಸಿಟರ್ ಕೌಂಟರ್ : 14