ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ
azadi ka amrit mahotsav

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ‘ಸ್ವಚ್ಛತಾ ಹಿ ಸೇವಾ 2026ʼರ ಸಿದ್ಧತೆಗಳ ಕುರಿತು ಕೇಂದ್ರ ಸಚಿವರಾದ ಶ್ರೀ ಮನೋಹರ್ ಲಾಲ್ ಪರಿಶೀಲನೆ


2026ರ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 17ರವರೆಗೆ ಅಭಿಯಾನ ಆಚರಣೆ

‘ಸ್ವಚ್ಛತಾ ಹಿ ಸೇವಾ 2026ʼರ ಘೋಷವಾಕ್ಯವಾಗಿ ‘ಸ್ವಚ್ಛತೆಯಲ್ಲಿ ಸಹಭಾಗಿತ್ವ, ಸ್ವಚ್ಛ ಭಾರತ, ವಿಕಸಿತ ಭಾರತ’

ಜನರ ವ್ಯಾಪಕ ಭಾಗವಹಿಸುವಿಕೆ ಮತ್ತು ಗೋಚರಿಸುವ ಸ್ವಚ್ಛತಾ ಫಲಿತಾಂಶಗಳನ್ನು ಖಚಿತಪಡಿಸಿಕೊಳ್ಳುವಂತೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಕರೆ

ಪ್ರಕಟಣಾ ದಿನಾಂಕ: 10 SEP 2026 6:00PM by PIB Bengaluru

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳು ಹಾಗೂ ಇಂಧನ ಸಚಿವರಾದ ಶ್ರೀ ಮನೋಹರ್ ಲಾಲ್ ಅವರು ಇಂದು ರಾಜ್ಯಗಳ ನಗರಾಭಿವೃದ್ಧಿ ಸಚಿವರು, ಪ್ರಧಾನ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಮತ್ತು ರಾಜ್ಯ ಮಿಷನ್ ನಿರ್ದೇಶಕರೊಂದಿಗೆ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ, ಸ್ವಚ್ಛತಾ ಹಿ ಸೇವಾ (ಎಸ್‌ ಎಚ್‌ ಎಸ್) 2026ರ ಹಿನ್ನೆಲೆಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಿದ್ಧತೆಗಳನ್ನು ಪರಿಶೀಲಿಸಿದರು.

ಸೆಪ್ಟೆಂಬರ್ 17ರಿಂದ ಅಕ್ಟೋಬರ್ 17, 2026ರವರೆಗೆ ಆಚರಿಸಲಾಗುವ ರಾಷ್ಟ್ರವ್ಯಾಪಿ ಅಭಿಯಾನದ ಸಿದ್ಧತೆಗಳನ್ನು ಸಭೆಯಲ್ಲಿ ಪರಿಶೀಲಿಸಲಾಯಿತು. ಈ ವರ್ಷದ ಘೋಷವಾಕ್ಯವಾದ ‘ಸ್ವಚ್ಛತೆಯಲ್ಲಿ ಸಹಭಾಗಿತ್ವ, ಸ್ವಚ್ಛ ಭಾರತ, ವಿಕಸಿತ ಭಾರತ’, ಸ್ವಚ್ಛ ಮತ್ತು ವಿಕಸಿತ ಭಾರತದ ದೃಷ್ಟಿಕೋನವನ್ನು ಮುನ್ನಡೆಸುವಲ್ಲಿ ಜನರ ಸಹಭಾಗಿತ್ವ ಮತ್ತು ಹಂಚಿಕೆಯ ಜವಾಬ್ದಾರಿಯ ಪಾತ್ರವನ್ನು ಒತ್ತಿಹೇಳುತ್ತದೆ.

ಎಸ್‌ ಎಚ್‌ ಎಸ್ 2026ರ ಪ್ರಮುಖ ಗಮನಹರಿಸುವ ಕ್ಷೇತ್ರಗಳಲ್ಲಿ ಸ್ವಚ್ಛತಾ ಗುರಿ ಘಟಕಗಳ ಮತ್ತು ಹೆಚ್ಚಿನ ಜನಸಂಚಾರವಿರುವ ಸಾರ್ವಜನಿಕ ಸ್ಥಳಗಳ ಪರಿವರ್ತನೆ; ಸ್ವಚ್ಛ ಪಾಠಶಾಲಾ-ಸ್ವಚ್ಛತೆಗಾಗಿ ಯುವಜನರು; ಸಫಾಯಿ ಮಿತ್ರ ಸುರಕ್ಷಾ ಮತ್ತು ಸಮ್ಮಾನ್ ಶಿಬಿರಗಳು; ಸ್ವಚ್ಛತೆಗಾಗಿ ಜನಭಾಗಿದಾರಿ; ಹಾಗೂ ಸ್ವಚ್ಛತೆಯಿಂದ ಸಮೃದ್ಧಿ ಸೇರಿವೆ. ಇದರಲ್ಲಿ ಮರುಬಳಕೆ ಆರ್ಥಿಕ ವ್ಯವಸ್ಥೆ ಮತ್ತು ತ್ಯಾಜ್ಯದಿಂದ ಸಂಪತ್ತು ಸೃಷ್ಟಿಸುವ ಉಪಕ್ರಮಗಳಿಗೆ ವಿಶೇಷ ಗಮನ ನೀಡಲಾಗುತ್ತದೆ.

ಸಭೆಯಲ್ಲಿ, ಅಭಿಯಾನದ ಪ್ರಮುಖ ಗಮನಹರಿಸುವ ಕ್ಷೇತ್ರಗಳು ಮತ್ತು ದೇಶಾದ್ಯಂತ ಸಮನ್ವಯದೊಂದಿಗೆ ಕ್ರಮ ಕೈಗೊಳ್ಳುವ ಅಗತ್ಯದ ಕುರಿತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಮಾಹಿತಿ ನೀಡಲಾಯಿತು. ಅಭಿಯಾನದ ಅವಧಿಯಲ್ಲಿ ನಾಗರಿಕರ ವ್ಯಾಪಕ ಪಾಲ್ಗೊಳ್ಳುವಿಕೆ, ಸ್ಥಳೀಯ ಮಟ್ಟದಲ್ಲಿ ಪರಿಣಾಮಕಾರಿ ಅನುಷ್ಠಾನ ಮತ್ತು ಗೋಚರಿಸುವ ಸ್ವಚ್ಛತಾ ಫಲಿತಾಂಶಗಳನ್ನು ಖಚಿತಪಡಿಸಿಕೊಳ್ಳುವ ಅಗತ್ಯಕ್ಕೆ ಒತ್ತು ನೀಡಲಾಯಿತು. ಪ್ರತಿಯೊಂದು ಕಚೇರಿ ಆವರಣ, ಪ್ರವಾಸಿ ತಾಣಗಳು ಮತ್ತು ಜಲಮೂಲಗಳಲ್ಲಿ ಸ್ವಚ್ಛತಾ ಅಭಿಯಾನಗಳನ್ನು ಕೈಗೊಳ್ಳುವುದನ್ನು ಖಚಿತಪಡಿಸಿಕೊಳ್ಳುವಲ್ಲಿ ರಾಜ್ಯಗಳ ಇಲಾಖೆಗಳು ಮುಂಚೂಣಿಯಲ್ಲಿರಬೇಕು ಎಂದು ತಿಳಿಸಲಾಯಿತು.

ಸಭೆಯಲ್ಲಿ ಮಾತನಾಡಿದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಶ್ರೀ ಮನೋಹರ್ ಲಾಲ್ ಅವರು, ಸೆಪ್ಟೆಂಬರ್ 17ರಂದು ನಾಗರಿಕರು ತಮ್ಮ ಸ್ವಂತ ಮನೆಗಳಿಂದಲೇ ಸ್ವಚ್ಛತಾ ಹಿ ಸೇವಾ ಅಭಿಯಾನವನ್ನು ಆರಂಭಿಸುವಂತೆ ಕರೆ ನೀಡಿದರು. ನಾಗರಿಕರು ತಮ್ಮ ಮನೆಗಳನ್ನು ತಾವೇ ಸ್ವಚ್ಛಗೊಳಿಸಿ, ನಂತರ ಸಂಜೆ ತಮ್ಮ ಮನೆಗಳಲ್ಲಿ ದೀಪ ಬೆಳಗಿಸುವಂತೆ ಅವರು ಮನವಿ ಮಾಡಿದರು. ಇದು ಸ್ವಚ್ಛ ಮನೆ, ಆರೋಗ್ಯಕರ ಕುಟುಂಬ ಮತ್ತು ಸಕಾರಾತ್ಮಕ ಶಕ್ತಿಯ ಸಂಕೇತವಾಗಿದ್ದು, ಸಾಧಿಸಿದ ಸ್ವಚ್ಛತೆಯನ್ನು ನಿರಂತರವಾಗಿ ಕಾಪಾಡಿಕೊಳ್ಳುವ ಬದ್ಧತೆಯನ್ನೂ ಪ್ರತಿನಿಧಿಸುತ್ತದೆ. ಸ್ವಚ್ಛತೆಯನ್ನು ಒಂದು ತಿಂಗಳ ಚಟುವಟಿಕೆಯನ್ನಾಗಿ ಮಾಡುವ ಬದಲಿಗೆ, ನಿರಂತರವಾಗಿ ಜನರ ನೇತೃತ್ವದ ಬದ್ಧತೆಯನ್ನಾಗಿ ಮಾಡುವ ಉದ್ದೇಶದಿಂದ 'ಸೇವಾ ಸಂಕಲ್ಪ' ಮನೋಭಾವದೊಂದಿಗೆ ಅಭಿಯಾನವನ್ನು ಮುನ್ನಡೆಸಬೇಕು ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ಕುರಿತು ಪ್ರಸ್ತಾಪಿಸಿದ ಕೇಂದ್ರ ಸಚಿವರು, ಪ್ರಧಾನಮಂತ್ರಿಯವರ ಜನ್ಮದಿನವಾದ ಸೆಪ್ಟೆಂಬರ್ 17ರಂದು ಅಭಿಯಾನ ಆರಂಭವಾಗಲಿದ್ದು, ಅವರ ಸೇವಾ ಮನೋಭಾವ ಮತ್ತು ಸಂಕಲ್ಪವನ್ನು ಸ್ವಚ್ಛತೆಯ ಉದ್ದೇಶದೊಂದಿಗೆ ಜೋಡಿಸುವುದು ಇದರ ಆಶಯವಾಗಿದೆ ಎಂದು ಹೇಳಿದರು.

‘ಮನ್ ಕಿ ಬಾತ್’ನಲ್ಲಿ ಪ್ರಧಾನಮಂತ್ರಿಯವರು ನೀಡಿದ್ದ ಸಂದೇಶವನ್ನು ಸ್ಮರಿಸಿದ ಶ್ರೀ ಮನೋಹರ್ ಲಾಲ್ ಅವರು, ಒಂದು ಸ್ಥಳವನ್ನು ಸ್ವಚ್ಛವಾಗಿಡುವುದು ಅಲ್ಲಿನ ಜನರ ಸಂಕಲ್ಪವಾದಾಗ, ಆ ಬದಲಾವಣೆಯು ಕೇವಲ ಸ್ವಚ್ಛತೆಗೆ ಸೀಮಿತವಾಗದೆ, ಆ ಸ್ಥಳದ ಸ್ವರೂಪವನ್ನೇ ಪರಿವರ್ತಿಸುತ್ತದೆ ಎಂದು ಹೇಳಿದರು. ಆದ್ದರಿಂದ, ಸ್ವಚ್ಛತೆಯನ್ನು ನಾಗರಿಕರ ಸಾಮೂಹಿಕ ಸಂಕಲ್ಪವನ್ನಾಗಿ ಮಾಡುವುದು ನಮ್ಮ ಪ್ರಯತ್ನವಾಗಬೇಕು ಎಂದು ಅವರು ಒತ್ತಿಹೇಳಿದರು.

ಸೆಪ್ಟೆಂಬರ್ 25ರಂದು, ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮದಿನದ ಅಂಗವಾಗಿ, ಸಮಾಜದ ಎಲ್ಲ ವರ್ಗಗಳಲ್ಲೂ ಸ್ವಚ್ಛತಾ ಅಭಿಯಾನಗಳನ್ನು ನಡೆಸಬೇಕು ಎಂದು ಸಚಿವರು ಒತ್ತಿಹೇಳಿದರು. ಇದರಲ್ಲಿ ಒಳಗೊಳ್ಳುವಿಕೆ ಮತ್ತು ಸಾಮಾಜಿಕ ಕಲ್ಯಾಣಕ್ಕೆ ವಿಶೇಷ ಗಮನ ನೀಡಬೇಕು ಎಂದು ಅವರು ಹೇಳಿದರು.

ವಿಶೇಷವಾಗಿ, ಅಕ್ಟೋಬರ್ 1ರಂದು ದೇಶವ್ಯಾಪಿ ‘ಏಕ್ ದಿನ್, ಏಕ್ ಘಂಟಾ, ಏಕ್ ಸಾಥ್’ ಶ್ರಮದಾನ ಕೈಗೊಳ್ಳುವ ಹಿನ್ನೆಲೆಯಲ್ಲಿ, ಅದಕ್ಕೂ ಮುನ್ನ ವ್ಯಾಪಕ ಯೋಜನೆ ಮತ್ತು ಜಾಗೃತಿ ಚಟುವಟಿಕೆಗಳನ್ನು ಕೈಗೊಳ್ಳುವಂತೆ ರಾಜ್ಯಗಳಿಗೆ ಕರೆ ನೀಡಲಾಯಿತು. ರಾಜ್ಯಗಳ ಶಿಕ್ಷಣ ಮತ್ತು ಕ್ರೀಡಾ ಇಲಾಖೆಗಳು ಯುವಜನರು ಹಾಗೂ ಕ್ರೀಡಾಪಟುಗಳನ್ನು ದೊಡ್ಡ ಪ್ರಮಾಣದಲ್ಲಿ ಸ್ವಚ್ಛತಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಲಾಯಿತು. ಎಲ್ಲಾ ಸಚಿವರು, ಸಂಸದರು/ಶಾಸಕರು, ಮೇಯರ್‌ಗಳು, ಉಪ ಮೇಯರ್‌ಗಳು, ವಾರ್ಡ್ ಕೌನ್ಸಿಲರ್‌ಗಳು, ಆಯುಕ್ತರು ಹಾಗೂ ಆಯಾ ರಾಜ್ಯಗಳ ಗಣ್ಯರು ತಮ್ಮ ತಮ್ಮ ಪ್ರದೇಶಗಳು/ಕ್ಷೇತ್ರಗಳಿಂದ ಈ ದೇಶವ್ಯಾಪಿ ಶ್ರಮದಾನದ ನೇತೃತ್ವ ವಹಿಸಿ, ಇದಕ್ಕಾಗಿ ಸಾಮೂಹಿಕ ಜನಸಜ್ಜುಗೊಳಿಸುವಿಕೆಯನ್ನು ಖಚಿತಪಡಿಸಿಕೊಳ್ಳುವಂತೆ ಸಚಿವರು ಮನವಿ ಮಾಡಿದರು.

ತಮ್ಮ ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸಲು, ಎಲ್ಲಾ ನಗರಸಭೆಗಳು ವಸತಿ ಸಮುಚ್ಚಯಗಳು ಮತ್ತು ಆರ್‌ಡಬ್ಲ್ಯುಎಗಳನ್ನು ತೊಡಗಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಇದಕ್ಕಾಗಿ ವಾರ್ಡ್‌ಗಳ ನಡುವೆ ಮತ್ತು ಆರ್‌ಡಬ್ಲ್ಯುಎಗಳ ನಡುವೆ ಸ್ವಚ್ಛತಾ ಸ್ಪರ್ಧೆಗಳನ್ನು ಆಯೋಜಿಸುವುದರ ಜೊತೆಗೆ, ಪ್ರಮುಖ ಆರ್‌ಡಬ್ಲ್ಯುಎ ಸ್ಥಳಗಳಲ್ಲಿ ಸ್ವಚ್ಛತೆಗೆ ಸಂಬಂಧಿಸಿದ ಪ್ರಮುಖ ಸಂದೇಶಗಳನ್ನು ಪ್ರಚಾರ ಮಾಡಬೇಕು ಎಂದು ಅವರು ಸೂಚಿಸಿದರು.

ಅಕ್ಟೋಬರ್ 2ರಂದು, ಅಂದರೆ ಸ್ವಚ್ಛ ಭಾರತ ದಿನದಂದು, ಮಹಾತ್ಮ ಗಾಂಧಿಯವರ ಸಂದೇಶವನ್ನು ಹಂಚಿಕೊಳ್ಳಲು ಮತ್ತು ಘನತ್ಯಾಜ್ಯ ನಿರ್ವಹಣಾ ನಿಯಮಗಳ ಕುರಿತು ಜಾಗೃತಿ ಅಭಿಯಾನಗಳನ್ನು ನಡೆಸಲು ನಗರ ಸ್ಥಳೀಯ ಸಂಸ್ಥೆಗಳು ಸಾರ್ವಜನಿಕ ಸ್ಥಳಗಳಲ್ಲಿ ವಿಶೇಷ ಮಂಡಳಿ ಸಭೆಗಳು ಹಾಗೂ ವಿಶೇಷ ಸ್ವಚ್ಛತಾ ಅಭಿಯಾನಗಳನ್ನು ಆಯೋಜಿಸಲಿವೆ. ಇದರ ಜೊತೆಗೆ, ‘ಏಕ್ ಪೇಡ್ ಮಾ ಕೆ ನಾಮ್’ ಅಡಿಯಲ್ಲಿ ಗಿಡ ನೆಡುವ ಚಟುವಟಿಕೆಗಳನ್ನು ಕೈಗೊಳ್ಳಲಾಗುವುದು.

ಸಫಾಯಿ ಮಿತ್ರ ಸುರಕ್ಷಾ ಮತ್ತು ಸಮ್ಮಾನ್ ಶಿಬಿರಗಳ ಮೂಲಕ ನೈರ್ಮಲ್ಯ ಕಾರ್ಮಿಕರ ಕಲ್ಯಾಣ, ಸುರಕ್ಷತೆ ಮತ್ತು ಗುರುತಿಸುವಿಕೆಯನ್ನು ಖಚಿತಪಡಿಸಿಕೊಳ್ಳುವ ಮಹತ್ವವನ್ನೂ ಸಭೆಯಲ್ಲಿ ಒತ್ತಿ ಹೇಳಲಾಯಿತು. ಇದರಲ್ಲಿ ಅರ್ಹ ಕಲ್ಯಾಣ ಯೋಜನೆಗಳೊಂದಿಗೆ ಸಂಪರ್ಕ ಕಲ್ಪಿಸುವುದು, ತಡೆಗಟ್ಟುವ ಆರೋಗ್ಯ ತಪಾಸಣೆಗಳನ್ನು ನಡೆಸುವುದು ಮತ್ತು ಸುರಕ್ಷತಾ ಸಾಧನಗಳನ್ನು ಒದಗಿಸುವುದು ಸೇರಿವೆ. ಗರಿಷ್ಠ ಪರಿಣಾಮವನ್ನು ಸಾಧಿಸಲು ಈ ಶಿಬಿರಗಳನ್ನು ವರ್ಷವಿಡೀ ಪುನರಾವರ್ತಿತವಾಗಿ ಆಯೋಜಿಸಬೇಕು ಎಂದು ಒತ್ತಿಹೇಳಲಾಯಿತು.

ಗೌರವಾನ್ವಿತ ಪ್ರಧಾನಮಂತ್ರಿಯವರ 25 ವರ್ಷಗಳ ಸಾರ್ವಜನಿಕ ಸೇವೆಯು ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಕ್ಟೋಬರ್ 7ರಂದು ವಿಶೇಷ ಸ್ವಚ್ಛತಾ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸಚಿವರು ರಾಜ್ಯಗಳಿಗೆ ಕರೆ ನೀಡಿದರು.

ಎಸ್‌ ಎಚ್‌ ಎಸ್ 2026ರ ಸುತ್ತಮುತ್ತ ಜನಭಾಗಿದಾರಿ, ಕ್ರೀಡಾಕೂಟಗಳು, ಆಧ್ಯಾತ್ಮಿಕ/ಭಾವ ಗೀತೆಗಳು ಮತ್ತು ಸ್ವಚ್ಛತಾ ಗೀತೆಗಳನ್ನು ಹಾಡುವ ಮೂಲಕ ಪರಿಣಾಮಕಾರಿ ಹಾಗೂ ನವೀನ ಜಾಗೃತಿ ಮತ್ತು ಸಂಪರ್ಕ ಚಟುವಟಿಕೆಗಳನ್ನು ಕೈಗೊಳ್ಳುವಂತೆ ಹಾಗೂ ಅಭಿಯಾನದ ಸಂದರ್ಭದಲ್ಲಿ ಕೈಗೊಳ್ಳಲಾದ ಚಟುವಟಿಕೆಗಳ ನಿಯಮಿತ ವರದಿಯನ್ನು ಖಚಿತಪಡಿಸಿಕೊಳ್ಳುವಂತೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಲಾಯಿತು. ಅಭಿಯಾನವು ತಳಮಟ್ಟದಲ್ಲಿ ಫಲಿತಾಂಶಗಳಿಗೆ ಹಾಗೂ ದೇಶದ ಪ್ರತಿಯೊಬ್ಬ ನಾಗರಿಕನಲ್ಲೂ ಬಲವಾದ ನಡವಳಿಕೆ ಬದಲಾವಣೆಗೆ ಕಾರಣವಾಗುವಂತೆ ಸಕ್ರಿಯ ಕ್ರಮಗಳನ್ನು ಕೈಗೊಳ್ಳುವಂತೆಯೂ ಸೂಚಿಸಲಾಯಿತು. ಅಭಿಯಾನವು ಅಧಿಕೃತವಾಗಿ ಅಕ್ಟೋಬರ್ 17ರಂದು ಮುಕ್ತಾಯಗೊಳ್ಳಲಿದ್ದರೂ, ವರ್ಷವಿಡೀ ಸ್ವಚ್ಛತೆಯ ವೇಗವನ್ನು ಮುಂದುವರಿಸಿಕೊಂಡು ಹೋಗುವಂತೆ ರಾಜ್ಯಗಳಿಗೆ ಕರೆ ನೀಡಲಾಯಿತು.

 

*****

 

 


(ಪ್ರಕಟಣೆ ಐ.ಡಿ.: 2308942) ವಿಸಿಟರ್ ಕೌಂಟರ್ : 12
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Assamese , Punjabi , Gujarati , Odia , Malayalam