ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಗ್ರಾಹಕ ರಕ್ಷಣೆಯನ್ನು ಬಲಪಡಿಸಲು ಮತ್ತು ಪಾರದರ್ಶಕತೆಯನ್ನು ಉತ್ತೇಜಿಸಲು ಇ-ಕಾಮರ್ಸ್ ನಿಯಮಗಳನ್ನು ತಿದ್ದುಪಡಿ ಮಾಡಿದ ಸರ್ಕಾರ


ತಿದ್ದುಪಡಿ ಮಾಡಿದ ನಿಯಮಗಳು ಗ್ರಾಹಕರ ಕುಂದುಕೊರತೆಗಳು, ಶೋಧನೆ ಫಲಿತಾಂಶಗಳು, ಸ್ಪಾನ್ಸರ್ ಮಾಡಿದ ಪಟ್ಟಿಗಳು, ಬೆಲೆ ಕಡಿತ, ಡಾರ್ಕ್ ಪ್ಯಾಟರ್ನ್‌ಗಳು ಮತ್ತು ಮಾರಾಟಗಾರರ ವಿವರಣೆಗಳಿಗೆ ಸಂಬಂಧಿಸಿದ ನಿಬಂಧನೆಗಳನ್ನು ಬಲಪಡಿಸುತ್ತವೆ

ಹೊಸ ನಿಯಮಗಳು 2027 ರ ಜನವರಿ 1 ರಿಂದ ಜಾರಿಗೆ ಬರಲಿವೆ

ಪ್ರಕಟಣಾ ದಿನಾಂಕ: 10 SEP 2026 5:14PM by PIB Bengaluru

ಗ್ರಾಹಕರ ರಕ್ಷಣೆಯನ್ನು ಬಲಪಡಿಸುವ ಮತ್ತು ಇ-ಕಾಮರ್ಸ್ ವಲಯಕ್ಕೆ ಪಾರದರ್ಶಕ ಹಾಗೂ ಸಮತೋಲಿತ ನಿಯಂತ್ರಣ ಚೌಕಟ್ಟನ್ನು ಸುಗಮಗೊಳಿಸುವ ಉದ್ದೇಶದಿಂದ, ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆಯು ಗ್ರಾಹಕ ರಕ್ಷಣೆ (-ಕಾಮರ್ಸ್) (ತಿದ್ದುಪಡಿ) ನಿಯಮಗಳು, 2026 ರ ಮೂಲಕ ಗ್ರಾಹಕ ರಕ್ಷಣೆ (ಇ-ಕಾಮರ್ಸ್) ನಿಯಮಗಳು, 2020 ಅನ್ನು ತಿದ್ದುಪಡಿ ಮಾಡಿದೆ.

ತಿದ್ದುಪಡಿ ಮಾಡಿದ ನಿಯಮಗಳು ಡಿಜಿಟಲ್ ಮಾರುಕಟ್ಟೆಯಲ್ಲಿ ಉದ್ಭವಿಸುತ್ತಿರುವ ಗ್ರಾಹಕರ ಕಳವಳಗಳನ್ನು ಪರಿಹರಿಸಲು ಶ್ರಮಿಸುತ್ತವೆ. ಅದೇ ಸಮಯದಲ್ಲಿ, ಸುಲಭ ವಾಣಿಜ್ಯ ನಿರ್ವಹಣೆ  ಮತ್ತು ಇ-ಕಾಮರ್ಸ್ ಸಂಸ್ಥೆಗಳ ಮೇಲೆ ಅನಗತ್ಯ ನಿಯಂತ್ರಣ ಹೊರೆಗಳನ್ನು ಹೇರದೆ ಗ್ರಾಹಕರ ಹಿತಾಸಕ್ತಿಗಳನ್ನು ಕಾಯುವ ಸಮತೋಲಿತ ವಿಧಾನದ ಅಗತ್ಯವನ್ನು ಪರಿಗಣಿಸುತ್ತವೆ.

ತಿದ್ದುಪಡಿ ಮಾಡಿದ ನಿಯಮಗಳ ಪ್ರಮುಖ ನಿಬಂಧನೆಯು ಪ್ರತಿಯೊಂದು -ಕಾಮರ್ಸ್ ಸಂಸ್ಥೆಯು ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯ (NCH) ಒಗ್ಗೂಡುವಿಕೆ ಪ್ರಕ್ರಿಯೆಯಲ್ಲಿ ಪಾಲುದಾರರಾಗುವುದನ್ನು ಕಡ್ಡಾಯಗೊಳಿಸುತ್ತದೆ. ಇದು ರಾಷ್ಟ್ರೀಯ ಗ್ರಾಹಕ ಕುಂದುಕೊರತೆ ನಿವಾರಣಾ ವ್ಯವಸ್ಥೆಯೊಂದಿಗೆ ಇ-ಕಾಮರ್ಸ್ ವೇದಿಕೆಗಳ ಸಂಯೋಜನೆಯನ್ನು ಬಲಪಡಿಸುತ್ತದೆ.

2025ರ ಅವಧಿಯಲ್ಲಿ, ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯು 17,71,622 ಕುಂದುಕೊರತೆಗಳನ್ನು ಸ್ವೀಕರಿಸಿದ್ದು, ಅವುಗಳಲ್ಲಿ 5,11,196 ಅಥವಾ ಸುಮಾರು ಶೇಕಡಾ 29 ರಷ್ಟು ದೂರುಗಳು -ಕಾಮರ್ಸ್ ವಲಯಕ್ಕೆ ಸಂಬಂಧಿಸಿದ್ದಾಗಿದ್ದವು.

ಪ್ರಮುಖ ತಿದ್ದುಪಡಿಗಳು

ತಿದ್ದುಪಡಿ ಮಾಡಿದ ನಿಯಮಗಳು ಈ ಕೆಳಗಿನ ನಿಬಂಧನೆಗಳನ್ನು ಒಳಗೊಂಡಿವೆ:

  • ಗ್ರಾಹಕರ ದೂರುಗಳು: ಪ್ರತಿಯೊಂದು ಇ-ಕಾಮರ್ಸ್ ಸಂಸ್ಥೆಯು ತನ್ನ ದೂರು ಪರಿಹಾರ ಅಧಿಕಾರಿಯು ದಾಖಲಿಸಿಕೊಂಡ ದೂರಿನ ಪ್ರತಿಯನ್ನು ದೂರುದಾರರಿಗೆ ಒದಗಿಸತಕ್ಕದ್ದು.
  • ಶೋಧನೆ ಫಲಿತಾಂಶಗಳು: ಇ-ಕಾಮರ್ಸ್ ಸಂಸ್ಥೆಗಳು ಬಳಕೆದಾರರನ್ನು ಹಾದಿತಪ್ಪಿಸುವ ರೀತಿಯಲ್ಲಿ ಅಥವಾ ಬಳಕೆದಾರರ ಶೋಧನೆಗೆ (search query) ಸಂಬಂಧಿಸಿದ ಫಲಿತಾಂಶಗಳ ಪ್ರಸ್ತುತತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತೆ ಶೋಧನೆ ಫಲಿತಾಂಶಗಳನ್ನು ಕುಶಲತೆಯಿಂದ ಬದಲಾಯಿಸಬಾರದು.
  • ಸ್ಪಾನ್ಸರ್ ಮಾಡಿದ ಪಟ್ಟಿಗಳು: ಸ್ಪಾನ್ಸರ್ ಮಾಡಿದ ಪಟ್ಟಿಗಳನ್ನು ಸ್ಪಷ್ಟ ಮತ್ತು ಪ್ರಮುಖ ವಿವರಣೆಗಳ ಮೂಲಕ ಗುರುತಿಸತಕ್ಕದ್ದು.
  • ಬೆಲೆ ಕಡಿತ: ಬೆಲೆ ಕಡಿತವನ್ನು ಘೋಷಿಸಿದಾಗ, ಕಡಿತಗೊಳಿಸಿದ ಬೆಲೆ ಮತ್ತು ಹಿಂದಿನ ಬೆಲೆ ಎರಡನ್ನೂ ಪ್ರದರ್ಶಿಸತಕ್ಕದ್ದು. “ಹಿಂದಿನ ಬೆಲೆ” ಎಂದರೆ ಈ ಪ್ರಕಟಣೆಗೆ ಮುಂಚಿನ 30 ದಿನಗಳ ಅವಧಿಯಲ್ಲಿ ಸರಕುಗಳು ಅಥವಾ ಸೇವೆಗಳನ್ನು ಒದಗಿಸಿದ ಅತಿ ಕಡಿಮೆ ಬೆಲೆಯಾಗಿದೆ.
  • ಡಾರ್ಕ್ ಪ್ಯಾಟರ್ನ್‌ಗಳು: ಇ-ಕಾಮರ್ಸ್ ಸಂಸ್ಥೆಗಳು 'ಡಾರ್ಕ್ ಪ್ಯಾಟರ್ನ್‌ಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಮಾರ್ಗಸೂಚಿಗಳು, 2023' ಅನ್ನು ಪಾಲಿಸತಕ್ಕದ್ದು, ವರ್ಷಕ್ಕೊಮ್ಮೆ ಸ್ವಯಂ-ಆಡಿಟ್ ಕೈಗೊಳ್ಳತಕ್ಕದ್ದು ಮತ್ತು ಅನುಸರಣೆ ಪ್ರಮಾಣಪತ್ರವನ್ನು ಪ್ರಮುಖವಾಗಿ ಪ್ರದರ್ಶಿಸತಕ್ಕದ್ದು.
  • ಮಾರಾಟಗಾರ ಮತ್ತು ಉತ್ಪನ್ನದ ಮಾಹಿತಿ: ಗ್ರಾಹಕರು ಸೂಕ್ತ ಮಾಹಿತಿ ಆಧಾರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡಲು ಮಾರ್ಕೆಟ್‌ಪ್ಲೇಸ್ ಇ-ಕಾಮರ್ಸ್ ಸಂಸ್ಥೆಗಳು ಬಳಕೆಯ ಅಂತಿಮ ಅವಧಿ (best before/use before), ವಾಪಸಾತಿ/ಮರುಪಾವತಿ, ಖಾತರಿ (warranty), ತಲುಪಿಸುವಿಕೆ ಮತ್ತು ಪಾವತಿ ವಿವರಗಳು ಸೇರಿದಂತೆ ಪ್ರಮುಖ ಮಾಹಿತಿಯನ್ನು ಒದಗಿಸತಕ್ಕದ್ದು.
  • ಗ್ರಾಹಕರ ಮಾಹಿತಿ: ಮಾರ್ಕೆಟ್‌ಪ್ಲೇಸ್ ಇ-ಕಾಮರ್ಸ್ ಸಂಸ್ಥೆಗಳು ಗ್ರಾಹಕರ ಸ್ಪಷ್ಟ ಮತ್ತು ಧನಾತ್ಮಕ ಸಮ್ಮತಿಯಿಲ್ಲದೆ ಅವರ ಮಾಹಿತಿಯನ್ನು ನಿರ್ದಿಷ್ಟ ಉದ್ದೇಶಗಳಿಗಾಗಿ ಬಳಸಬಾರದು.
  • ಸಂಯೋಜಿತ ಶುಲ್ಕಗಳು: ಲಾಯಲ್ಟಿ ಅಥವಾ ಸದಸ್ಯತ್ವ ಕಾರ್ಯಕ್ರಮಗಳಿಗೆ ನಿರ್ದಿಷ್ಟಪಡಿಸಿದ ವಿನಾಯಿತಿಗೆ ಒಳಪಟ್ಟು, ಮಾರ್ಕೆಟ್‌ಪ್ಲೇಸ್ ಇ-ಕಾಮರ್ಸ್ ಸಂಸ್ಥೆಗಳು ಇ-ಕಾಮರ್ಸ್ ವೇದಿಕೆಗೆ ಸಂಬಂಧಿಸದ ಸೇವೆಗಳಿಗೆ ಸಂಯೋಜಿತ ಶುಲ್ಕಗಳನ್ನು (bundled fees) ಸಂಗ್ರಹಿಸಬಾರದು.
  • ಆಮದು ಮಾಡಿದ ಸರಕುಗಳು: ಆಮದು ಮಾಡಿದ ಸರಕುಗಳಿಗೆ ಆಮದುದಾರರ ವಿವರಗಳು ಮತ್ತು ಮೂಲ ದೇಶವನ್ನು (country of origin) ಬಹಿರಂಗಪಡಿಸತಕ್ಕದ್ದು.

-ಕಾಮರ್ಸ್ ಚೌಕಟ್ಟನ್ನು ಬಲಪಡಿಸುವುದು

ಗ್ರಾಹಕ ರಕ್ಷಣಾ ಕಾಯ್ದೆ, 2019ರ ಅಡಿಯಲ್ಲಿ ಅಧಿಸೂಚಿಸಲಾದ ಗ್ರಾಹಕ ರಕ್ಷಣೆ (-ಕಾಮರ್ಸ್) ನಿಯಮಗಳು, 2020, ಇ-ಕಾಮರ್ಸ್ ವಲಯದಲ್ಲಿನ ಅನುಚಿತ ವ್ಯಾಪಾರ ಪದ್ಧತಿಗಳಿಂದ ಗ್ರಾಹಕರನ್ನು ರಕ್ಷಿಸುವ ಚೌಕಟ್ಟನ್ನು ಒದಗಿಸುತ್ತವೆ. ತಿದ್ದುಪಡಿ ಮಾಡಿದ ನಿಯಮಗಳು ವಿಕಸನಗೊಳ್ಳುತ್ತಿರುವ ಉದ್ಯಮ ಮಾದರಿಗಳು, ಡಿಜಿಟಲ್ ಪದ್ಧತಿಗಳು ಮತ್ತು ಗ್ರಾಹಕರ ನಿರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಈ ಚೌಕಟ್ಟನ್ನು ಮತ್ತಷ್ಟು ಬಲಪಡಿಸುತ್ತವೆ.

ಈ ತಿದ್ದುಪಡಿಗಳು ಹೆಚ್ಚು ಪಾರದರ್ಶಕ, ಹೊಣೆಗಾರಿಕೆಯಿಂದ ಕೂಡಿದ ಮತ್ತು ಗ್ರಾಹಕ-ಕೇಂದ್ರಿತ -ಕಾಮರ್ಸ್ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸಲು ಶ್ರಮಿಸುತ್ತವೆ. ಅದೇ ಸಮಯದಲ್ಲಿ, ಇ-ಕಾಮರ್ಸ್ ಸಂಸ್ಥೆಗಳಿಗೆ ಅವುಗಳ ಜವಾಬ್ದಾರಿಗಳ ಕುರಿತು ಸ್ಪಷ್ಟತೆಯನ್ನು ಒದಗಿಸುತ್ತವೆ ಮತ್ತು ಡಿಜಿಟಲ್ ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುವ ಉದ್ಯಮಗಳಿಗೆ ಸಮಾನ ಅವಕಾಶದ ವಾತಾವರಣವನ್ನು ಸುಗಮಗೊಳಿಸುತ್ತವೆ.

ಗ್ರಾಹಕರು ಮತ್ತು ಇ-ಕಾಮರ್ಸ್ ಸಂಸ್ಥೆಗಳ ಹಿತಾಸಕ್ತಿಗಳ ನಡುವೆ ಸೂಕ್ತ ಸಮತೋಲನವನ್ನು ಕಾಯ್ದುಕೊಳ್ಳುವ ಜೊತೆಗೆ, ಭಾರತದ ಇ-ಕಾಮರ್ಸ್ ವಲಯದ ಬೆಳವಣಿಗೆ ಮತ್ತು ನಾವೀನ್ಯತೆಯು ಪರಿಣಾಮಕಾರಿ ಗ್ರಾಹಕ ರಕ್ಷಣೆ, ಪಾರದರ್ಶಕತೆ, ನ್ಯಾಯಯುತ ವ್ಯಾಪಾರ ಪದ್ಧತಿಗಳು ಮತ್ತು ಸುಲಭ ವಾಣಿಜ್ಯ ನಿರ್ವಹಣೆಯೊಂದಿಗೆ ಸಾಗುವುದನ್ನು ಖಚಿತಪಡಿಸಿಕೊಳ್ಳಲು ಗ್ರಾಹಕ ವ್ಯವಹಾರಗಳ ಇಲಾಖೆಯು ಬದ್ಧವಾಗಿದೆ.

ಗ್ರಾಹಕ ರಕ್ಷಣೆ (ಇ-ಕಾಮರ್ಸ್) (ತಿದ್ದುಪಡಿ) ನಿಯಮಗಳು, 2026 ರ ಜನವರಿ 1, 2027 ರಿಂದ ಜಾರಿಗೆ ಬರಲಿವೆ.

 

*****


(ಪ್ರಕಟಣೆ ಐ.ಡಿ.: 2308818) ವಿಸಿಟರ್ ಕೌಂಟರ್ : 14
ಪ್ರಕಟಣೆಯನ್ನು ಇದರಲ್ಲಿ ಓದಿ: Urdu , English , हिन्दी , Gujarati , Malayalam