ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
azadi ka amrit mahotsav

ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ರಾಜ್ಯಗಳಾದ್ಯಂತ 14 ಜಿಲ್ಲೆಗಳನ್ನೊಳಗೊಂಡ ಮೂರು ಮಲ್ಟಿಟ್ರ್ಯಾಕಿಂಗ್ ಯೋಜನೆಗಳಿಗೆ ಕೇಂದ್ರ ಸಂಪುಟ ಅನುಮೋದನೆ: ಇದರಿಂದ ಭಾರತೀಯ ರೈಲ್ವೆಯ ಅಸ್ತಿತ್ವದಲ್ಲಿರುವ ಜಾಲ ಸುಮಾರು 656 ಕಿ.ಮೀ.ಗಳಷ್ಟು ಹೆಚ್ಚಳ


ಯೋಜನೆಗಳ ಒಟ್ಟು ಅಂದಾಜು ವೆಚ್ಚ 10,783 ಕೋಟಿ ರೂ.ಗಳಾಗಿದ್ದು, 2029-30 ರವರೆಗೆ ಪೂರ್ಣಗೊಳಿಸುವ ಉದ್ದೇಶ

ಪ್ರಕಟಣಾ ದಿನಾಂಕ: 09 SEP 2026 3:25PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತಾದ ಸಚಿವ ಸಂಪುಟ ಸಮಿತಿಯು ಇಂದು ರೈಲ್ವೆ ಸಚಿವಾಲಯದ ಒಟ್ಟು 10,783 ಕೋಟಿ ರೂ.ಗಳ 03 (ಮೂರು) ಯೋಜನೆಗಳನ್ನು ಅನುಮೋದಿಸಿದೆ. ಆ ಯೋಜನೆಗಳು ಈ ಕೆಳಗಿನಂತಿವೆ:

ಎ. ಖರಗ್‌ಪುರ - ಜಾರ್ಸುಗುಡ (ಬಾಗ್ದೇಹಿ) 4ನೇ ಮಾರ್ಗ

ಬಿ. ಕಟ್ನಿ - ಪೆಂದ್ರ ರಸ್ತೆ 4ನೇ ಮಾರ್ಗ

ಸಿ. ಬಿಲಾಸ್‌ಪುರ (ಉಸ್ಲಾಪುರ) - ಪೆಂದ್ರ ರಸ್ತೆ 3ನೇ ಮಾರ್ಗ

ಮಾರ್ಗ ಸಾಮರ್ಥ್ಯ ಹೆಚ್ಚಳದಿಂದಾಗಿ ಸಂಚಾರ ಗಮನಾರ್ಹವಾಗಿ ವೃದ್ಧಿಯಾಗಲಿದ್ದು, ಇದರ ಪರಿಣಾಮವಾಗಿ ಭಾರತೀಯ ರೈಲ್ವೆಗೆ ಸುಧಾರಿತ ಕಾರ್ಯಾಚರಣೆಯ ದಕ್ಷತೆ ಮತ್ತು ಸೇವಾ ವಿಶ್ವಾಸಾರ್ಹತೆ ಉಂಟಾಗುತ್ತದೆ. ಈ ಬಹು-ಟ್ರ್ಯಾಕಿಂಗ್ ಪ್ರಸ್ತಾವನೆಗಳು ಕಾರ್ಯಾಚರಣೆಗಳನ್ನು ಸುಗಮಗೊಳಿಸಲು ಮತ್ತು ದಟ್ಟಣೆಯನ್ನು ನಿವಾರಿಸಲು ಸಿದ್ಧವಾಗಿವೆ. ಈ ಯೋಜನೆಗಳು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ನವ ಭಾರತದ ದೂರದೃಷ್ಟಿಗೆ ಅನುಗುಣವಾಗಿವೆ, ಇದು ಈ ಪ್ರದೇಶದ ಜನರನ್ನು ಸಮಗ್ರ ಅಭಿವೃದ್ಧಿಯ ಮೂಲಕ "ಆತ್ಮನಿರ್ಭರ"ರನ್ನಾಗಿ ಮಾಡುತ್ತದೆ, ಇದು ಅವರ ಉದ್ಯೋಗ/ಸ್ವ-ಉದ್ಯೋಗ ಅವಕಾಶಗಳನ್ನು ವೃದ್ಧಿಸುತ್ತದೆ.

ಈ ಯೋಜನೆಗಳನ್ನು ಪ್ರಧಾನ ಮಂತ್ರಿ-ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿಯಲ್ಲಿ ಕೈಗೊಳ್ಳಲು ಯೋಜಿಸಲಾಗಿದೆ, ಇದು ಸಮಗ್ರ ಯೋಜನೆ ಮತ್ತು ಪಾಲುದಾರರ ಸಮಾಲೋಚನೆಗಳ ಮೂಲಕ ಬಹು-ಮಾದರಿ ಸಂಪರ್ಕ ಮತ್ತು ಲಾಜಿಸ್ಟಿಕ್ ದಕ್ಷತೆಯನ್ನು ಹೆಚ್ಚಿಸುವತ್ತ ಗಮನಹರಿಸುತ್ತದೆ. ಈ ಯೋಜನೆಗಳು ಜನರು, ಸರಕುಗಳು ಮತ್ತು ಸೇವೆಗಳ ಸಂಚಾರ ಹಾಗೂ ಅಡೆತಡೆರಹಿತ ಸಂಪರ್ಕವನ್ನು ಒದಗಿಸುತ್ತದೆ.

ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ರಾಜ್ಯಗಳಾದ್ಯಂತ 14 ಜಿಲ್ಲೆಗಳನ್ನು ಒಳಗೊಂಡ ಈ ಮೂರು ಯೋಜನೆಗಳು ಭಾರತೀಯ ರೈಲ್ವೆಯ ಅಸ್ತಿತ್ವದಲ್ಲಿರುವ ಜಾಲವನ್ನು ಸುಮಾರು 656 ಕಿ.ಮೀ.ಗಳಷ್ಟು ವೃದ್ಧಿಸುತ್ತವೆ. ಉದ್ದೇಶಿತ ಬಹು-ಟ್ರ್ಯಾಕಿಂಗ್ ಯೋಜನೆಗಳು ಸುಮಾರು 56 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಸುಮಾರು 4,790 ಹಳ್ಳಿಗಳಿಗೆ ಸಂಪರ್ಕವನ್ನು ಹೆಚ್ಚಿಸುತ್ತವೆ.

ತಾರಾತಾರಿಣಿ ದೇವಸ್ಥಾನ, ಶ್ರೀ ಖೇತ್ರ ಜಗನ್ನಾಥ ದೇವಸ್ಥಾನ (ಜಾರ್ಸುಗುಡ ಬಳಿಯ ಪ್ರಾಚೀನ ದೇವಾಲಯ), ಬಾಂಧವಗಢ ಹುಲಿ ಮೀಸಲು ಪ್ರದೇಶ, ವಿರಾಟೇಶ್ವರ ದೇವಸ್ಥಾನ, ಅಮರಕಾಂತಕ್ ದೇವಸ್ಥಾನ, ಜ್ವಾಲೇಶ್ವರ ಧಾಮ್, ಅಚಾನಕ್ಮಾರ್ ಹುಲಿ ಮೀಸಲು ಪ್ರದೇಶ, ಖುತಾಘಾಟ್ ಅಣೆಕಟ್ಟು, ಮಲ್ಹಾರ್ ಪುರಾತತ್ವ ತಾಣ, ರತನ್‌ಪುರ ಮಹಾಮಾಯ ದೇವಸ್ಥಾನ, ಇತ್ಯಾದಿ ಸೇರಿದಂತೆ ದೇಶಾದ್ಯಂತ ಹಲವು ಪ್ರಮುಖ ಪ್ರವಾಸಿ ತಾಣಗಳಿಗೆ ರೈಲು ಸಂಪರ್ಕವನ್ನು ಸುಧಾರಿಸುತ್ತದೆ.

ಉದ್ದೇಶಿತ ಯೋಜನೆಗಳು ಕಲ್ಲಿದ್ದಲು, ಸಿಮೆಂಟ್, ಕಬ್ಬಿಣ ಮತ್ತು ಉಕ್ಕಿನಂತಹ ಸರಕುಗಳ ಸಾಗಣೆಗೆ ಅಗತ್ಯವಾದ ಮಾರ್ಗಗಳಾಗಿವೆ. ಸಾಮರ್ಥ್ಯ ವೃದ್ಧಿ ಕಾರ್ಯಗಳು 27 ಎಂಟಿಪಿಎ (ವರ್ಷಕ್ಕೆ ಮಿಲಿಯನ್ ಟನ್) ಪ್ರಮಾಣದ ಹೆಚ್ಚುವರಿ ಸರಕು ಸಂಚಾರಕ್ಕೆ ಕಾರಣವಾಗುತ್ತವೆ. ರೈಲ್ವೆಗಳು ಪರಿಸರ ಸ್ನೇಹಿ ಮತ್ತು ಇಂಧನ ದಕ್ಷತೆಯ ಸಾರಿಗೆ ವಿಧಾನವಾಗಿರುವುದರಿಂದ, ಹವಾಮಾನ ಗುರಿಗಳನ್ನು ಸಾಧಿಸಲು ಮತ್ತು ದೇಶದ ಲಾಜಿಸ್ಟಿಕ್ಸ್ ವೆಚ್ಚವನ್ನು ತಗ್ಗಿಸಲು, ತೈಲ ಆಮದು (~12 ಕೋಟಿ ಲೀಟರ್) ಕಡಿಮೆ ಮಾಡಲು ಮತ್ತು CO2 ಇಂಗಾಲ ಹೊರಸೂಸುವಿಕೆಯನ್ನು (~62 ಕೋಟಿ ಕೆಜಿ) ತಗ್ಗಿಸಲು ಸಹಾಯ ಮಾಡುತ್ತದೆ, ಇದು 2.48 ಕೋಟಿ ಮರಗಳನ್ನು ನೆಡುವುದಕ್ಕೆ ಸಮಾನವಾಗಿರುತ್ತದೆ.

 

*****


(ಪ್ರಕಟಣೆ ಐ.ಡಿ.: 2308283) ವಿಸಿಟರ್ ಕೌಂಟರ್ : 16
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Assamese , Bengali , Punjabi , Gujarati , Odia , Tamil , Telugu , Malayalam