ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸೆಪ್ಟೆಂಬರ್ 8ರಂದು ಗುಜರಾತ್ ಮತ್ತು ಮಹಾರಾಷ್ಟ್ರಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿ


ವಡೋದರಾದಲ್ಲಿ 35,000 ಕೋಟಿ ರೂ.ಗೂ ಅಧಿಕ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಲೋಕಾರ್ಪಣೆ ನೆರವೇರಿಸಲಿರುವ ಪ್ರಧಾನಮಂತ್ರಿ

ಯೋಜನೆಯ ಪೂರ್ಣಗೊಳಿಸುವಿಕೆಯ ಅಂಗವಾಗಿ ಪಶ್ಚಿಮ ವಿಶೇಷ ಸರಕು ಸಾಗಣೆ ಕಾರಿಡಾರ್‌ನ ಮೂರು ಪ್ರಮುಖ ವಿಭಾಗಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿರುವ ಪ್ರಧಾನಮಂತ್ರಿ

ಮೂರು ರೈಲ್ವೆ ಯೋಜನೆಗಳು ಮತ್ತು ಮೂರು ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ

ಮುಂಬೈನಲ್ಲಿ ‘ಗ್ಲೋಬಲ್ ಫಿನ್‌ಟೆಕ್ ಫೆಸ್ಟ್-2026’(ಜಿಎಫ್ಎಫ್ 2026) ಉದ್ಘಾಟಿಸಲಿರುವ ಪ್ರಧಾನಮಂತ್ರಿ

‘ಜಿಎಫ್ಎಫ್ 2026’ರ ಧ್ಯೇಯವಾಕ್ಯ - "ಪರಿಣಾಮ ಬೀರುವ ಸಾಮರ್ಥ್ಯ: ಏಜೆಂಟಿಕ್ ಕೃತಕ ಬುದ್ಧಿಮತ್ತೆ, ಟೋಕನೈಸೇಶನ್, ಕ್ವಾಂಟಮ್ - ವಿಶ್ವಾಸಾರ್ಹ, ಸಂಪರ್ಕಿತ, ಎಲ್ಲರನ್ನೂ ಒಳಗೊಂಡ ಹಣಕಾಸಿಗಾಗಿ ಜಾಗತಿಕ ವ್ಯವಸ್ಥೆಗಳು"

ಪ್ರಕಟಣಾ ದಿನಾಂಕ: 07 SEP 2026 11:51AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಸೆಪ್ಟೆಂಬರ್ 8ರಂದು ಗುಜರಾತ್ ಮತ್ತು ಮಹಾರಾಷ್ಟ್ರಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಪ್ರಧಾನಮಂತ್ರಿಯವರು ವಡೋದರಾದಲ್ಲಿ 35,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ರಾಷ್ಟ್ರಾರ್ಪಣೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಸಂಜೆ 5:45 ರ ಸುಮಾರಿಗೆ, ಪ್ರಧಾನಮಂತ್ರಿಯವರು ಮುಂಬೈನಲ್ಲಿ ಗ್ಲೋಬಲ್ ಫಿನ್ಟೆಕ್ ಫೆಸ್ಟ್ (ಜಿಎಫ್ಎಫ್ 2026) ಅನ್ನು ಉದ್ಘಾಟಿಸಲಿದ್ದಾರೆ ಮತ್ತು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ವಡೋದರಾದಲ್ಲಿ ಪ್ರಧಾನಮಂತ್ರಿ

ಜವಾಹರಲಾಲ್ ನೆಹರು ಬಂದರು ಪ್ರಾಧಿಕಾರದ (ಜೆಎನ್‌ಪಿಎ) ನೇರ ಸಂಪರ್ಕವು ‘ಎಕ್ಸಿಮ್’ (ಇಎಕ್ಸ್‌ಐಎಂ) ಸರಕುಗಳ ತ್ವರಿತ ಚಲನೆಗೆ ಅನುಕೂಲ ಮಾಡಿಕೊಡುತ್ತದೆ, ಕೈಗಾರಿಕಾ ಕೇಂದ್ರಗಳು ಮತ್ತು ಬಂದರುಗಳ ನಡುವಿನ ಸಂಪರ್ಕವನ್ನು ಬಲಪಡಿಸುತ್ತದೆ, ಸರಕು-ಸಾಗಣೆ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಮುಂಬೈನ ರೈಲ್ವೆ ಜಾಲದ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಈ ವಿಭಾಗಗಳ ಕಾರ್ಯಾರಂಭದೊಂದಿಗೆ, ಡೆಡಿಕೇಟೆಡ್ ಸರಕು ಸಾಗಣೆ ಕಾರಿಡಾರ್ (ಡಿಎಫ್‌ಸಿ) ಜಾಲವು ಅದರ ಸಂಪೂರ್ಣ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲಿದೆ. ವಿಶೇಷ ಸರಕು ಸಾಗಣೆ ಮೂಲಸೌಕರ್ಯವು ಬಹುಮಾದರಿ ಸಂಪರ್ಕವನ್ನು ಸುಧಾರಿಸುವ ಮೂಲಕ, ಸಾಗಣೆ ಸಮಯವನ್ನು ಕಡಿಮೆ ಮಾಡುವ ಮೂಲಕ ಮತ್ತು ವಿವಿಧ ಪ್ರದೇಶಗಳಾದ್ಯಂತ ಸರಕುಗಳ ತಡೆರಹಿತ ಚಲನೆಯನ್ನು ಸುಗಮಗೊಳಿಸುವ ಮೂಲಕ ದೇಶದ ಸರಕು-ಸಾಗಣೆ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುತ್ತದೆ.

ಪ್ರಧಾನಮಂತ್ರಿಯವರು ನ್ಯೂ ಸಾನಂದ್ (ಉತ್ತರ), ನ್ಯೂ ಮಕರ್‌ಪುರ, ನ್ಯೂ ಉಂಬರ್‌ಗಾಂವ್ ಮತ್ತು ಮುಂಬೈನ ನ್ಯೂ ಜೆಎನ್‌ಪಿಟಿಯಿಂದ ಸರಕು ಸಾಗಣೆ ರೈಲು ಸೇವೆಗಳಿಗೂ ಹಸಿರು ನಿಶಾನೆ ತೋರಲಿದ್ದಾರೆ. ಜೊತೆಗೆ, ತಾಂಡಾ ರಸ್ತೆ ಮತ್ತು ವಡೋದರಾ (ಪ್ರತಾಪ್‌ನಗರ) ನಡುವಿನ ಹೊಸ ಪ್ರಯಾಣಿಕ ರೈಲು ಸೇವೆಗೂ ಅವರು ಚಾಲನೆ ನೀಡಲಿದ್ದಾರೆ.

ಛೋಟಾ ಉದೇಪುರ್-ಧಾರ್ ಯೋಜನೆಯ ಭಾಗವಾಗಿ ಅಭಿವೃದ್ಧಿಪಡಿಸಲಾದ ಜೋಬಾಟ್-ತಾಂಡಾ ರಸ್ತೆ ಹೊಸ ರೈಲು ಮಾರ್ಗವನ್ನು ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಹೊಸ ರೈಲು ಮಾರ್ಗವು ಅಲಿರಾಜ್‌ಪುರದ ದೂರದ ಮತ್ತು ಬುಡಕಟ್ಟು ಪ್ರದೇಶಗಳನ್ನು ರಾಷ್ಟ್ರೀಯ ರೈಲ್ವೆ ಜಾಲದೊಂದಿಗೆ ಸಂಪರ್ಕಿಸುತ್ತದೆ.

ಪ್ರಧಾನಮಂತ್ರಿಯವರು 9,700 ಕೋಟಿ ರೂ.ಗೂ ಅಧಿಕ ವೆಚ್ಚದ ಮತ್ತು 329 ಕಿಲೋಮೀಟರ್ ವ್ಯಾಪ್ತಿಯ ಮೂರು ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇವುಗಳಲ್ಲಿ ವಡೋದರಾ-ರತ್ಲಾಮ್ ಮೂರನೇ ಮತ್ತು ನಾಲ್ಕನೇ ಮಾರ್ಗಗಳು, ಮಿಯಾಗಮ್ ಕರ್ಜನ್-ಚೋರಂಡ-ಮಲ್ಸರ್ ಗೇಜ್ ಪರಿವರ್ತನೆ ಮತ್ತು ವಿಶ್ವಾಮಿತ್ರಿ-ದಭೋಯಿ ಜೋಡಿ ಮಾರ್ಗ ಯೋಜನೆ ಸೇರಿವೆ. ಈ ಯೋಜನೆಗಳು ಪ್ರಯಾಣಿಕರ ಮತ್ತು ಸರಕು ಸಾಗಣೆ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ, ದಟ್ಟಣೆಯನ್ನು ಕಡಿಮೆ ಮಾಡುತ್ತವೆ ಮತ್ತು ಗುಜರಾತ್ ಹಾಗೂ ಮಧ್ಯಪ್ರದೇಶದ ನಡುವಿನ ಸಂಪರ್ಕವನ್ನು ಬಲಪಡಿಸುತ್ತವೆ.

ಸುಮಾರು 1,780 ಕೋಟಿ ರೂ. ವೆಚ್ಚದ ಮೂರು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೂ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇವುಗಳಲ್ಲಿ ರಾ.ಹೆ.-48 ರ ಕಾಮ್ರೇಜ್-ಚಲ್ಥಾನ್ ವಿಭಾಗದ ಆರು-ಪಥದ ಕಾಮಗಾರಿ; ರಾ.ಹೆ.-48 ರ ವಡೋದರಾ-ಸೂರತ್ ವಿಭಾಗದಲ್ಲಿ ತಾಪಿ ಮತ್ತು ನರ್ಮದಾ ನದಿಗಳ ಮೇಲಿನ ಪ್ರಮುಖ ಸೇತುವೆಗಳು ಸೇರಿದಂತೆ ಹೆಚ್ಚುವರಿ ರಚನೆಗಳ ನಿರ್ಮಾಣ; ಮತ್ತು ರಾ.ಹೆ.-53 ರ ಅಭವಾ, ಮಿಂಧೋಲಾ ಮತ್ತು ಖಜೋಡ್ ಜಂಕ್ಷನ್‌ಗಳಲ್ಲಿ ಗ್ರೇಡ್-ಸೆಪರೇಟೆಡ್ ರಚನೆಗಳು ಸೇರಿವೆ. ಇವುಗಳಲ್ಲಿ ನ್ಯೂ ಸಾನಂದ್ (ಉತ್ತರ)- ನ್ಯೂ ಮಕರ್‌ಪುರ, ನ್ಯೂ ಉಂಬರ್‌ಗಾಂವ್-ನ್ಯೂ ಸಫಾಲೆ ಮತ್ತು ನ್ಯೂ ಸಫಾಲೆ- ನ್ಯೂ ‘ಜೆಎನ್‌ಪಿಟಿ’ ವಿಭಾಗಗಳು ಸೇರಿವೆ.

ಗುಜರಾತ್ ಸರ್ಕಾರದ ಸುಮಾರು 2,600 ಕೋಟಿ ರೂ.ಮೌಲ್ಯದ ವಿವಿಧ ಯೋಜನೆಗಳನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ವಡೋದರಾ ನಗರಾಭಿವೃದ್ಧಿ ಪ್ರಾಧಿಕಾರದ ರಿಂಗ್ ರೋಡ್ ಹಂತ II ಮತ್ತು ಕಡಾನಾ ಅಣೆಕಟ್ಟಿನಲ್ಲಿ 110 ಮೆಗಾವ್ಯಾಟ್ ತೇಲುವ ಸೌರ ಯೋಜನೆ, ವಡೋದರಾ ಮಹಾನಗರ ಪಾಲಿಕೆಯ ಹೊಸ ಕಚೇರಿ ನಿರ್ಮಾಣ ಸೇರಿದಂತೆ ಪ್ರಮುಖ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಅಡಿಯ ವಸತಿ ಯೋಜನೆಗಳು ಮತ್ತು ಪೂರ್ವ ವಡೋದರಾದ 11 ಹಳ್ಳಿಗಳಿಗೆ ನೀರು ಸರಬರಾಜು ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಉದ್ಘಾಟಿಸಲಾಗುವುದು.

ಮುಂಬೈನಲ್ಲಿ ಪ್ರಧಾನಮಂತ್ರಿ

ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಪ್ರಭಾವಶಾಲಿ ವಾರ್ಷಿಕ ಫಿನ್ಟೆಕ್ ಸಮ್ಮೇಳನಗಳಲ್ಲಿ ಒಂದಾದ ‘ಗ್ಲೋಬಲ್ ಫಿನ್‌ಟೆಕ್‌ ಫೆಸ್ಟ್-2026 (ಜಿಎಫ್ಎಫ್-2026) ಅನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ.

ಗ್ಲೋಬಲ್ ಫಿನ್‌ಟೆಕ್ ಫೆಸ್ಟ್‌ನ ಏಳನೇ ಆವೃತ್ತಿಯು 2026 ರ ಸೆಪ್ಟೆಂಬರ್ 8 ರಿಂದ 11 ರವರೆಗೆ ಮುಂಬೈನಲ್ಲಿ ನಡೆಯಲಿದೆ. 2020ರಿಂದ, ಹಣಕಾಸಿನ ಭವಿಷ್ಯವನ್ನು ರೂಪಿಸುವ ಕುರಿತು ಚರ್ಚಿಸಲು ನೀತಿ ನಿರೂಪಕರು, ನಿಯಂತ್ರಕರು, ಕೇಂದ್ರೀಯ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು, ಫಿನ್‌ಟೆಕ್‌ಗಳು, ತಂತ್ರಜ್ಞಾನ ಕಂಪನಿಗಳು, ಹೂಡಿಕೆದಾರರು, ಶಿಕ್ಷಣ ತಜ್ಞರು ಮತ್ತು ಇತರ ಜಾಗತಿಕ ಪಾಲುದಾರರನ್ನು ಒಟ್ಟುಗೂಡಿಸುವ ಅಂತರರಾಷ್ಟ್ರೀಯ ಚಿಂತನಾ ನಾಯಕತ್ವದ ವೇದಿಕೆಯಾಗಿ ‘ಜಿಎಫ್‌ಎಫ್’ ಹೊರಹೊಮ್ಮಿದೆ.

ಜಿಎಫ್ಎಫ್ 2026 ರ ಧ್ಯೇಯವಾಕ್ಯವು "ಪರಿಣಾಮ ಬೀರುವ ಸಾಮರ್ಥ್ಯ: ಏಜೆಂಟಿಕ್ ಕೃತಕ ಬುದ್ಧಿಮತ್ತೆ, ಟೋಕನೈಸೇಶನ್, ಕ್ವಾಂಟಮ್ - ವಿಶ್ವಾಸಾರ್ಹ, ಸಂಪರ್ಕಿತ, ಎಲ್ಲರನ್ನೂ ಒಳಗೊಂಡ ಹಣಕಾಸಿನ ಜಾಗತಿಕ ವ್ಯವಸ್ಥೆಗಳು" ಎಂಬುದಾಗಿದೆ.

‘ಜಿಎಫ್‌ಎಫ್-2026’ ಅನ್ನು ಒಂದೇ ವೇದಿಕೆಯಲ್ಲಿ ನೀತಿ, ನಿಯಂತ್ರಣ, ತಂತ್ರಜ್ಞಾನ, ಬಂಡವಾಳ ಮತ್ತು ಉದ್ಯಮದ ಸಂಗಮ ಬಿಂದುವಾಗಿ ವಿನ್ಯಾಸಗೊಳಿಸಲಾಗಿದೆ. ಡಿಜಿಟಲ್ ಪಾವತಿಗಳು ಮತ್ತು ಆರ್ಥಿಕ ಸೇರ್ಪಡೆಯಲ್ಲಿ ಭಾರತದ ನಾಯಕತ್ವವನ್ನು ನಿರ್ಮಿಸಲು ಮತ್ತು ಸಾಮರ್ಥ್ಯದಿಂದ ಪ್ರಭಾವದತ್ತ ಸಾಗಲು ಇದು ಪ್ರಯತ್ನಿಸುತ್ತದೆ. ಜಾಗತಿಕವಾಗಿ ನಾಗರಿಕರು, ಉದ್ಯಮಗಳು ಮತ್ತು ಆರ್ಥಿಕತೆಗಳಿಗೆ ಏಜೆಂಟಿಕ್ ಎಐ, ಪ್ರೊಗ್ರಾಮೆಬಲ್ ಫೈನಾನ್ಸ್, ಕ್ವಾಂಟಮ್ ತಂತ್ರಜ್ಞಾನಗಳು ಮತ್ತು ಇತರ ನಿರ್ಣಾಯಕ ಹಾಗೂ ಉದಯೋನ್ಮುಖ ತಂತ್ರಜ್ಞಾನಗಳು ಹೇಗೆ ವಿಶ್ವಾಸಾರ್ಹ, ಎಲ್ಲರನ್ನೂ ಒಳಗೊಂಡ  ಮತ್ತು ಅಳೆಯಬಹುದಾದ ಫಲಿತಾಂಶಗಳನ್ನು ಸೃಷ್ಟಿಸಬಹುದು ಎಂಬುದರ ಕುರಿತು ಚರ್ಚೆಗಳು ಗಮನ ಹರಿಸಲಿವೆ.

 

*****


(ಪ್ರಕಟಣೆ ಐ.ಡಿ.: 2307383) ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ: Assamese , English , Urdu , Marathi , हिन्दी , Manipuri , Gujarati , Tamil , Malayalam