ಬಾಹ್ಯಾಕಾಶ ವಿಭಾಗ
ಡಾ. ಜಿತೇಂದ್ರ ಸಿಂಗ್ ಮತ್ತು ಫ್ರೆಂಚ್ ಸಚಿವರಾದ ಫಿಲಿಪ್ ಬಾಪ್ಟಿಸ್ಟ್ ನಡುವೆ ವರ್ಚುವಲ್ ಸಭೆ; ಮುಂಬರುವ 'ಅಂತಾರಾಷ್ಟ್ರೀಯ ಬಾಹ್ಯಾಕಾಶ ಶೃಂಗಸಭೆ' ಮತ್ತು 'ಬೆಂಗಳೂರು ಸ್ಪೇಸ್ ಎಕ್ಸ್‌ಪೋ'ದಲ್ಲಿ ಫ್ರಾನ್ಸ್ ಭಾಗವಹಿಸುವಿಕೆಯ ಕುರಿತು ಚರ್ಚೆ
ಮಾನವ ಬಾಹ್ಯಾಕಾಶ ಯಾನ, ಮುಂದುವರಿದ ತಂತ್ರಜ್ಞಾನಗಳು ಮತ್ತು ಉದ್ಯಮ ಸಹಕಾರಕ್ಕೆ ನೀಡುವ ಗಮನದೊಂದಿಗೆ ಮತ್ತಷ್ಟು ವೇಗ ಪಡೆಯಲಿರುವ ಭಾರತ-ಫ್ರಾನ್ಸ್ ಬಾಹ್ಯಾಕಾಶ ಪಾಲುದಾರಿಕೆ
ಕೆಳ ಭೂ ಕಕ್ಷೆಯಲ್ಲಿ, ಭಾರತದ ಭವಿಷ್ಯದ ಮಾನವ ಬಾಹ್ಯಾಕಾಶ ಯಾನದ ಕುರಿತು, ಪ್ಯಾರಿಸ್ ಶೃಂಗಸಭೆಯಲ್ಲಿ ಮುಖ್ಯ ಭಾಷಣ ಮಾಡಲು ಇಸ್ರೋ ಅಧ್ಯಕ್ಷರಿಗೆ ಆಹ್ವಾನ
ಈ ತಿಂಗಳ ಕೊನೆಯಲ್ಲಿ ಬೆಂಗಳೂರಿನ ಇಸ್ರೋ ಸೌಲಭ್ಯಗಳಿಗೆ ಭೇಟಿ ನೀಡಲಿರುವ ಫ್ರೆಂಚ್ ಸಚಿವ ಫಿಲಿಪ್ ಬಾಪ್ಟಿಸ್ಟ್
ಪ್ರಕಟಣಾ ದಿನಾಂಕ:
04 SEP 2026 4:33PM by PIB Bengaluru
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನ ಸಚಿವಾಲಯಗಳ ಸಹಾಯಕ ಸಚಿವರು (ಸ್ವತಂತ್ರ ಉಸ್ತುವಾರಿ) ಹಾಗೂ ಪ್ರಧಾನಮಂತ್ರಿಗಳ ಕಚೇರಿ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿ, ಅಣುಶಕ್ತಿ ಮತ್ತು ಬಾಹ್ಯಾಕಾಶ ಸಚಿವಾಲಯಗಳ ಸಹಾಯಕ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು ಫ್ರಾನ್ಸ್‌ನ ಉನ್ನತ ಶಿಕ್ಷಣ, ಸಂಶೋಧನೆ ಮತ್ತು ಬಾಹ್ಯಾಕಾಶ ಸಚಿವರಾದ ಪ್ರೊ. ಫಿಲಿಪ್ ಬಾಪ್ಟಿಸ್ಟ್ ಅವರೊಂದಿಗೆ ವರ್ಚುವಲ್ ದ್ವಿಪಕ್ಷೀಯ ಸಭೆ ನಡೆಸಿದರು. ಈ ವೇಳೆ ಉಭಯ ಪಕ್ಷಗಳು ಮಾನವ ಬಾಹ್ಯಾಕಾಶ ಯಾನ, ಮುಂದುವರಿದ ಬಾಹ್ಯಾಕಾಶ ತಂತ್ರಜ್ಞಾನಗಳು ಹಾಗೂ ತಮ್ಮ ಬಾಹ್ಯಾಕಾಶ ಸಂಸ್ಥೆಗಳು ಮತ್ತು ಉದ್ಯಮಗಳ ನಡುವಿನ ಹೆಚ್ಚಿನ ತೊಡಗಿಸಿಕೊಳ್ಳುವಿಕೆ ಸೇರಿದಂತೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ-ಫ್ರಾನ್ಸ್ ಸಹಯೋಗವನ್ನು ಇನ್ನಷ್ಟು ಗಟ್ಟಿಗೊಳಿಸಲು ಸಮ್ಮತಿಸಿದವು.
2026 ರ ಸೆಪ್ಟೆಂಬರ್ 9-10 ರಂದು ಪ್ಯಾರಿಸ್‌ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ಶೃಂಗಸಭೆ ಮತ್ತು 2026 ರ ಸೆಪ್ಟೆಂಬರ್ 7-9 ರಂದು ನಡೆಯಲಿರುವ ಬೆಂಗಳೂರು ಸ್ಪೇಸ್ ಎಕ್ಸ್‌ಪೋಗೂ ಮುನ್ನ ಈ ಚರ್ಚೆಗಳು ನಡೆದವು. ಉಭಯ ನಾಯಕರು ಪ್ಯಾರಿಸ್ ಶೃಂಗಸಭೆಯಲ್ಲಿ ಭಾರತದ ಭಾಗವಹಿಸುವಿಕೆ ಮತ್ತು ಬೆಂಗಳೂರು ಸ್ಪೇಸ್ ಎಕ್ಸ್‌ಪೋದಲ್ಲಿ ಫ್ರಾನ್ಸ್ ಭಾಗವಹಿಸುವಿಕೆಯ ಜೊತೆಗೆ ಈ ತಿಂಗಳ ಕೊನೆಯಲ್ಲಿ ಪ್ರೊ. ಬಾಪ್ಟಿಸ್ಟ್ ಅವರು ಭಾರತಕ್ಕೆ ನೀಡಲಿರುವ ಭೇಟಿಯ ಕುರಿತು ಚರ್ಚಿಸಿದರು.
ಅಂತಾರಾಷ್ಟ್ರೀಯ ಬಾಹ್ಯಾಕಾಶ ಶೃಂಗಸಭೆಯಲ್ಲಿ ಭಾಗವಹಿಸಲು ಮತ್ತು ಫ್ರಾನ್ಸ್‌ನೊಂದಿಗಿನ ತನ್ನ ದೀರ್ಘಕಾಲದ ಬಾಹ್ಯಾಕಾಶ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸಲು ಭಾರತವು ಎದುರು ನೋಡುತ್ತಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು. ಬಾಹ್ಯಾಕಾಶ ವಿಜ್ಞಾನ, ತಂತ್ರಜ್ಞಾನ ಮತ್ತು ಅನ್ವಯಿಕೆಗಳು, ಬಾಹ್ಯಾಕಾಶ ಅರ್ಥವ್ಯವಸ್ಥೆ ಮತ್ತು ಸುರಕ್ಷಿತ ಬಾಹ್ಯಾಕಾಶದ ಮೇಲಿನ ಶೃಂಗಸಭೆಯ ಗಮನವು ಬಾಹ್ಯಾಕಾಶ ವಲಯದ ಭವಿಷ್ಯದ ಕುರಿತ ಅಂತರರಾಷ್ಟ್ರೀಯ ಸಂವಾದ ಮತ್ತು ಸಹಕಾರಕ್ಕೆ ಒಂದು ಪ್ರಮುಖ ವೇದಿಕೆಯನ್ನು ಒದಗಿಸುತ್ತದೆ ಎಂದು ಅವರು ಹೇಳಿದರು.
ಬಾಹ್ಯಾಕಾಶದ ಸುಸ್ಥಿರ ಬಳಕೆ, ಬಾಹ್ಯಾಕಾಶ ಆಧಾರಿತ ವೈಜ್ಞಾನಿಕ ದತ್ತಾಂಶದ ಪ್ರವೇಶಿಸುವಿಕೆ, ಮುಕ್ತತೆ ಮತ್ತು ಸಮಗ್ರತೆ ಹಾಗೂ ತರಂಗಾಂತರ ನಿರ್ವಹಣೆಗಾಗಿ ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟದ ನಿಯಂತ್ರಕ ಚೌಕಟ್ಟಿಗೆ ಬೆಂಬಲ ನೀಡುವ ಕುರಿತು ಶೃಂಗಸಭೆಯಲ್ಲಿ ಪ್ರಸ್ತಾಪಿಸಲಾದ ಅಂಶಗಳನ್ನು ಭಾರತವು ಸ್ವಾಗತಿಸಿತು. ಈ ಉಪಕ್ರಮಗಳನ್ನು ಅಂತಿಮಗೊಳಿಸುವ ಸಮಯದಲ್ಲಿ ಫ್ರೆಂಚ್ ಕಡೆಯವರೊಂದಿಗೆ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಭಾರತದ ಸನ್ನದ್ಧತೆಯನ್ನು ಡಾ. ಜಿತೇಂದ್ರ ಸಿಂಗ್ ತಿಳಿಸಿದರು.
ಪ್ಯಾರಿಸ್ ಶೃಂಗಸಭೆಗೆ ಭಾರತದ ಕೊಡುಗೆಯು ಚರ್ಚೆಯ ಪ್ರಮುಖ ಗಮನವಾಗಿತ್ತು. ಕೆಳ ಭೂ ಕಕ್ಷೆಯಲ್ಲಿ (Low Earth Orbit) ಭಾರತದ ಭವಿಷ್ಯದ ಮಾನವ ಬಾಹ್ಯಾಕಾಶ ಯಾನದ ಕುರಿತು ಉದ್ಘಾಟನಾ ಮುಖ್ಯ ಭಾಷಣ ಮಾಡಲು ಇಸ್ರೋ ಅಧ್ಯಕ್ಷರು / ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯವರನ್ನು ಆಹ್ವಾನಿಸಲಾಗಿದೆ. ಫ್ರೆಂಚ್ ಕಡೆಯವರು ಉಪಯುಕ್ತವೆಂದು ಪರಿಗಣಿಸಿದರೆ, ಬಾಹ್ಯಾಕಾಶದಲ್ಲಿ ವಿನ್ಯಾಸ ಮತ್ತು ಉತ್ಪಾದನಾ ತಂತ್ರಜ್ಞಾನಗಳು, ಬಾಹ್ಯಾಕಾಶದಿಂದ ಸಂಪರ್ಕ ಮತ್ತು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಾಚೆಗಿನ ಪರಿಶೋಧನೆ ಸೇರಿದಂತೆ ಹೆಚ್ಚುವರಿ ಕ್ಷೇತ್ರಗಳ ಕುರಿತು ಭಾರತೀಯ ನಿಯೋಗದ ಸದಸ್ಯರು ಪ್ರಸ್ತುತಿಗಳನ್ನು ನೀಡಬಹುದು ಎಂದೂ ಡಾ. ಜಿತೇಂದ್ರ ಸಿಂಗ್ ತಿಳಿಸಿದರು.
ಪ್ರೊ. ಫಿಲಿಪ್ ಬಾಪ್ಟಿಸ್ಟ್ ಅವರು ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮತ್ತು ಫ್ರಾನ್ಸ್ ನಡುವೆ ಪ್ರಸ್ತುತ ಇರುವ ಸಹಯೋಗವನ್ನು ಇನ್ನಷ್ಟು ಬಲಪಡಿಸಲು ಮತ್ತು ವೇಗಗೊಳಿಸಲು ಫ್ರಾನ್ಸ್‌ನ ಇಚ್ಛೆಯನ್ನು ವ್ಯಕ್ತಪಡಿಸಿದರು. ಶೃಂಗಸಭೆಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರಸ್ತಾವಿತ ವೀಡಿಯೊ ಸಂದೇಶಕ್ಕಾಗಿ ಭಾರತಕ್ಕೆ ಧನ್ಯವಾದ ಅರ್ಪಿಸಿದ ಅವರು, ಈ ಕಾರ್ಯಕ್ರಮದಲ್ಲಿ ಅಂಗೀಕರಿಸಲು ಪ್ರಸ್ತಾಪಿಸಲಾದ ಘೋಷಣೆಗಳ ಕುರಿತು ಭಾರತದೊಂದಿಗೆ ನಿರಂತರ ಸಮಾಲೋಚನೆಗಳನ್ನು ಸ್ವಾಗತಿಸಿದರು.
ಉಭಯ ಕಡೆಯವರು ಬೆಂಗಳೂರು ಸ್ಪೇಸ್ ಎಕ್ಸ್‌ಪೋದಲ್ಲಿ ಫ್ರಾನ್ಸ್ ಭಾಗವಹಿಸುವಿಕೆ ಮತ್ತು ಉಭಯ ದೇಶಗಳ ಬಾಹ್ಯಾಕಾಶ ಸಂಸ್ಥೆಗಳು, ಉದ್ಯಮಗಳು ಹಾಗೂ ಉದಯೋನ್ಮುಖ ಬಾಹ್ಯಾಕಾಶ ಪರಿಸರ ವ್ಯವಸ್ಥೆಗಳ ನಡುವೆ ವರ್ಧಿತ ಸಂವಾದದ ಅವಕಾಶಗಳ ಕುರಿತು ಚರ್ಚಿಸಿದರು.
ಪ್ರೊ. ಬಾಪ್ಟಿಸ್ಟ್ ಅವರು 2026ರ ಸೆಪ್ಟೆಂಬರ್ 28-30 ರವರೆಗೆ ಭಾರತಕ್ಕೆ ಭೇಟಿ ನೀಡಲು ನಿಗದಿಪಡಿಸಲಾಗಿದ್ದು, ಬೆಂಗಳೂರಿನ ಇಸ್ರೋ ಸೌಲಭ್ಯಗಳಿಗೆ ಭೇಟಿ ನೀಡಲು ಮತ್ತು ಡಾ. ಜಿತೇಂದ್ರ ಸಿಂಗ್ ಅವರನ್ನು ಭೇಟಿಯಾಗಲು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಸಹಕಾರದ ಸಂಭಾವ್ಯ ಕ್ಷೇತ್ರಗಳು ಮತ್ತು ಪ್ಯಾರಿಸ್ ಶೃಂಗಸಭೆಗೆ ಪ್ರಸ್ತಾಪಿಸಲಾದ ಹೆಚ್ಚುವರಿ ಪ್ರಸ್ತುತಿಗಳ ಕುರಿತು ತಮ್ಮ ತಮ್ಮ ತಂಡಗಳು ಸಮಾಲೋಚನೆಗಳನ್ನು ಮುಂದುವರಿಸುತ್ತವೆ ಎಂದು ಉಭಯ ಕಡೆಯವರು ಒಪ್ಪಿಕೊಂಡರು.
ಭಾರತ ಮತ್ತು ಫ್ರಾನ್ಸ್ ಸುಮಾರು ಆರು ದಶಕಗಳಿಂದ, ನಿಕಟ ಬಾಹ್ಯಾಕಾಶ ಪಾಲುದಾರಿಕೆಯನ್ನು ಹಂಚಿಕೊಂಡಿವೆ. ಇಸ್ರೋ ಮತ್ತು ಫ್ರಾನ್ಸ್‌ನ ಸಿಎನ್‌ಇಎಸ್ (CNES) ನಡುವಿನ ಸಹಕಾರವು ಮೇಘ-ಟ್ರೋಪಿಕ್ಸ್ (Megha-Tropiques) ಮತ್ತು ಸರಳ್ (SARAL) ಜಂಟಿ ಉಪಗ್ರಹ ಯೋಜನೆಗಳನ್ನು ಒಳಗೊಂಡಿದೆ, ಹಾಗೆಯೇ ಉಭಯ ಕಡೆಯವರು ಭೂ ಪರಿವೀಕ್ಷಣೆ ಮತ್ತು ಹವಾಮಾನ ಸಂಬಂಧಿತ ಅನ್ವಯಿಕೆಗಳಲ್ಲಿ ಹೆಚ್ಚಿನ ಸಹಕಾರವನ್ನು ಮುಂದುವರಿಸುತ್ತಿದ್ದಾರೆ.
ನಾವೀನ್ಯತೆ, ಸಂಶೋಧನೆ, ಮಾನವ ಬಾಹ್ಯಾಕಾಶ ಯಾನ, ತಂತ್ರಜ್ಞಾನ ಅಭಿವೃದ್ಧಿ ಮತ್ತು ಖಾಸಗಿ ಬಾಹ್ಯಾಕಾಶ ವಲಯದ ಬೆಳೆಯುತ್ತಿರುವ ಭಾಗವಹಿಸುವಿಕೆಯ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ-ಫ್ರಾನ್ಸ್ ಸಹಯೋಗವನ್ನು ಇನ್ನಷ್ಟು ಆಳಗೊಳಿಸುವ ತಮ್ಮ ಬದ್ಧತೆಯನ್ನು ಉಭಯ ಕಡೆಯವರು ಪುನರುಚ್ಚರಿಸುವುದರೊಂದಿಗೆ ಸಭೆಯು ಮುಕ್ತಾಯಗೊಂಡಿತು.


*****
(ಪ್ರಕಟಣೆ ಐ.ಡಿ.: 2306734)
ವಿಸಿಟರ್ ಕೌಂಟರ್ : 45