ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಪರಿಷ್ಕೃತ 'ಸಿಬಿಜಿ' ಬೆಲೆಯು ಗ್ರಾಹಕರ ಮೇಲೆ ಗಂಭೀರ ಪರಿಣಾಮ ಬೀರದೆ ಉತ್ಪಾದಕರನ್ನು ಬೆಂಬಲಿಸುತ್ತದೆ

ಪ್ರಕಟಣಾ ದಿನಾಂಕ: 29 AUG 2026 10:56AM by PIB Bengaluru

ಇತ್ತೀಚಿನ ಪತ್ರಿಕೆಯ ಲೇಖನವು ಗೋಬರ್ಧನ್ ಯೋಜನೆಯಡಿ ಸಂಕುಚಿತ ಜೈವಿಕ ಅನಿಲದ (ಸಿಬಿಜಿ) ಪರಿಷ್ಕೃತ ಬೆಲೆಯು ಸಿಎನ್ಜಿ ಮತ್ತು ಗೃಹೋಪಯೋಗಿ ಪಿಎನ್ಜಿ ಗ್ರಾಹಕರ ಮೇಲೆ ಗಮನಾರ್ಹ ಹೆಚ್ಚುವರಿ ಹೊರೆಯನ್ನು ಹೇರಬಹುದು ಎಂದು ಸೂಚಿಸಿದೆ.

ಈ ತೀರ್ಮಾನವು ಸರಿಯಾದ ಚಿತ್ರವನ್ನು ಪ್ರಸ್ತುತಪಡಿಸುವುದಿಲ್ಲ. ಇದು ಆಯ್ದ ಅಸಮಂಜಸ ಊಹೆಗಳನ್ನು ಆಧರಿಸಿದೆ:

    • ಅಸ್ತಿತ್ವದಲ್ಲಿರುವ ವ್ಯವಸ್ಥೆಯಡಿಯಲ್ಲಿ, ಸಿಬಿಜಿ ಉತ್ಪಾದಕರಿಗೆ ಪಾವತಿಸುವ ಬೆಲೆಯು ಸಿಎನ್‌ಜಿಯ  ಚಿಲ್ಲರೆ ಮಾರಾಟ ಬೆಲೆಯ ಶೇ.85 ಕ್ಕೆ ಸಂಬಂಧಿಸಿದೆ. ಇತ್ತೀಚಿನ ಪರಿಷ್ಕರಣೆಯ ಆಧಾರದ ಮೇಲೆ, ಇದು ಪ್ರತಿ ದಶಲಕ್ಷ ಬ್ರಿಟಿಷ್ ಥರ್ಮಲ್‌ ಯೂನಿಟ್‌ಗೆ( ('ಎಂಎಂಬಿಟಿಯು') ಸುಮಾರು ₹1,478 ಆಗುತ್ತದೆ.
    • ಗೋಬರ್ಧನ್ ಯೋಜನೆಯಡಿ, ಸಿಬಿಜಿ ಬೆಲೆಯನ್ನು ಪ್ರತಿ ಎಂಎಂಬಿಟಿಯುಗೆ ₹2,110 ಎಂದು ನಿಗದಿಪಡಿಸಲಾಗಿದೆ.
    • ಪ್ರತಿ ಎಂಎಂಬಿಟಿಯುಗೆ ₹1,478 ರಿಂದ ₹2,110 ಕ್ಕೆ ಹೆಚ್ಚಳವು ಸರಿಸುಮಾರು 43% ಆಗಿದೆ.
    • ಇದು ಸಿಬಿಜಿ ಉತ್ಪಾದಕರಿಗೆ ಪಾವತಿಸಿದ ಖರೀದಿ ಬೆಲೆಯಾಗಿದೆ. ಇದು ಸಿಎನ್‌ಜಿ ಅಥವಾ ಗೃಹೋಪಯೋಗಿ ಪಿಎನ್‌ಜಿ ಗ್ರಾಹಕರು ನೇರವಾಗಿ ಪಾವತಿಸುವ ಬೆಲೆಯಲ್ಲ.
    • ಪ್ರತಿ ಎಂಎಂಬಿಟಿಯುಗೆ  2,110 ರೂ. ಪೂರ್ಣ ಬೆಲೆಯನ್ನು ಅನಿಲ ಗ್ರಾಹಕರಿಂದ ವಸೂಲಿ ಮಾಡಲಾಗುವುದಿಲ್ಲ. ಸರ್ಕಾರವು ಪ್ರತಿ ಕೆಜಿ ಸಿಬಿಜಿಗೆ 10 ರೂ. ಕೈಗೆಟುಕುವ ಬೆಲೆ ಬೆಂಬಲವನ್ನು ಒದಗಿಸುತ್ತದೆ, ಇದು 95% ಮೀಥೇನ್ ಅಂಶವನ್ನು ಹೊಂದಿರುವ ಸಿಬಿಜಿಗೆ ಪ್ರತಿ ಎಂಎಂಬಿಟಿಯುಗೆ ಸುಮಾರು 215 ರೂ.ಗೆ ಸಮನಾಗಿರುತ್ತದೆ.
    • ಈ ಬೆಂಬಲಕ್ಕೆ ಸರ್ಕಾರವೇ ಧನಸಹಾಯ ನೀಡಲಿದ್ದು, ಇದನ್ನು ಅನಿಲ ಗ್ರಾಹಕರಿಂದ ಸಂಪೂರ್ಣವಾಗಿ ವಸೂಲಿ ಮಾಡುವುದಿಲ್ಲ. ಆದ್ದರಿಂದ, ಅನಿಲ ಗ್ರಾಹಕರ ವಿಶಾಲ ವ್ಯಾಪ್ತಿಯಿಂದ ವಸೂಲಿ ಮಾಡಲಾಗುವ ಪರಿಣಾಮಕಾರಿ ಸಿಬಿಜಿ ವೆಚ್ಚವು ಹೀಗಿರುತ್ತದೆ: ಪ್ರತಿ ಎಂಎಂಬಿಟಿಯುಗೆ 2,110 ರೂ. – ಪ್ರತಿ ಎಂಎಂಬಿಟಿಯುಗೆ 215 ರೂ. = ಸರಿಸುಮಾರು ಪ್ರತಿ ಎಂಎಂಬಿಟಿಯುಗೆ  ₹1,895.
    • ಪ್ರತಿ ಎಂಎಂಬಿಟಿಯುಗೆ 1,478 ರೂ.ನಷ್ಟಿರುವ ಹಾಲಿ ಸಿಬಿಜಿ  ಬೆಲೆಗೆ ಹೋಲಿಸಿದರೆ, ಪರಿಣಾಮಕಾರಿ ಹೆಚ್ಚಳವು ಸರಿಸುಮಾರು 28% ಆಗಿದೆ.
    • ಇದಲ್ಲದೆ, ಸಿಬಿಜಿಯನ್ನು ಅದರ ಖರೀದಿ ಬೆಲೆಗೆ 'ಸಿಜಿಡಿ' ಸಂಸ್ಥೆಗಳಿಗೆ ಮಾರಾಟ ಮಾಡಲಾಗುವುದಿಲ್ಲ. ಇದನ್ನು ಇತರ ದೇಶೀಯವಾಗಿ ಉತ್ಪಾದಿಸಲಾದ ನೈಸರ್ಗಿಕ ಅನಿಲದೊಂದಿಗೆ ಸಂಯೋಜಿಸಲಾಗುತ್ತದೆ ಮತ್ತು ಅದರ ವೆಚ್ಚವನ್ನು ಅನ್ವಯವಾಗುವ ದೇಶೀಯ ಅನಿಲ ಪೂಲ್‌ನಾದ್ಯಂತ ಹರಡಲಾಗುತ್ತದೆ.
    • ಈ ಹಿಂದೆ, ಸಿಬಿಜಿ ವೆಚ್ಚವನ್ನು ಸಿಎನ್‌ಜಿ (ಸಾರಿಗೆ) ಮತ್ತು ಪಿಎನ್‌ಜಿ (ಗೃಹಬಳಕೆ) ವಿಭಾಗಗಳಿಗೆ ನಿಗದಿಪಡಿಸಲಾದ 'ಎಪಿಎಂ' ಅನಿಲದ ಸೀಮಿತ ಪ್ರಮಾಣದಲ್ಲಿ ಮಾತ್ರ ಹಂಚಿಕೆ ಮಾಡಲಾಗುತ್ತಿತ್ತು. ಹೊಸ ಚೌಕಟ್ಟಿನ ಅಡಿಯಲ್ಲಿ, ಸಿಬಿಜಿಯ ನಿವ್ವಳ ವೆಚ್ಚವನ್ನು ಹಿಂದಿನ ನೆಲೆಗಿಂತ ಸರಿಸುಮಾರು 2.5 ರಿಂದ 3 ಪಟ್ಟು ದೊಡ್ಡದಾದ ದೇಶೀಯ ಅನಿಲ ನೆಲೆಯಾದ್ಯಂತ ಹರಡಲಾಗುತ್ತದೆ.
    • ದೊಡ್ಡ ಅನಿಲ ಸಂಗ್ರಹದಲ್ಲಿ ಸಿಬಿಜಿ ವೆಚ್ಚದ ವಿಶಾಲ ವ್ಯಾಪ್ತಿಯಿಂದಾಗಿ, ವೈಯಕ್ತಿಕ ಅನಿಲ ಗ್ರಾಹಕರ ಮೇಲೆ ಬೆಲೆಯ ಪರಿಣಾಮವು ನಗಣ್ಯವಾಗಿರುತ್ತದೆ.

ಪರಿಷ್ಕೃತ ಬೆಲೆ ಚೌಕಟ್ಟನ್ನು ಎರಡು ಉದ್ದೇಶಗಳನ್ನು ಸಮತೋಲನಗೊಳಿಸಲು ಎಚ್ಚರಿಕೆಯಿಂದ ವಿನ್ಯಾಸಗೊಳಿಸಲಾಗಿದೆ. ಸಿಬಿಜಿ ಉತ್ಪಾದಕರು ಸ್ಥಿರ ಮತ್ತು ಕಾರ್ಯಸಾಧ್ಯವಾದ ಬೆಲೆಯನ್ನು ಪಡೆಯುತ್ತಾರೆ, ಇದು ಸ್ಥಾವರಗಳನ್ನು ಸುಸ್ಥಿರವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಆದರೆ ಸರ್ಕಾರದ ಅನುದಾನಿತ ಕೈಗೆಟುಕುವ ಬೆಂಬಲ ದರ ಮತ್ತು ಗಣನೀಯವಾಗಿ ವ್ಯಾಪಕವಾದ ಅನಿಲ ಸಂಗ್ರಹವು ಗ್ರಾಹಕರನ್ನು ಯಾವುದೇ ಗಂಭೀರ ಬೆಲೆಯ ಪರಿಣಾಮದಿಂದ ರಕ್ಷಿಸುತ್ತದೆ.

 

*****

 


(ಪ್ರಕಟಣೆ ಐ.ಡಿ.: 2304519) ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Assamese , Bengali , Gujarati , Tamil , Malayalam