ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ಭಾರತ-ಜಪಾನ್ ಹೂಡಿಕೆ ಪಾಲುದಾರಿಕೆಗೆ ವೇಗ; ಹೆಚ್ಚಿನ ಜಪಾನಿನ ಸಾಂಸ್ಥಿಕ ಬಂಡವಾಳವನ್ನು ಆಹ್ವಾನಿಸಿದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್
ಅರೆವಾಹಕಗಳು (ಸೆಮಿಕಂಡಕ್ಟರ್ ಗಳು), ಎಐ, ಸ್ವಚ್ಛ ಇಂಧನ ಮತ್ತು ಡಿಜಿಟಲ್ ಮೂಲಸೌಕರ್ಯಗಳಲ್ಲಿ ಭಾರತದ ಪ್ರಬಲ ಬೆಳವಣಿಗೆಯ ಅಡಿಪಾಯ ಮತ್ತು ಅವಕಾಶಗಳನ್ನು ಎತ್ತಿಹಿಡಿದ ಶ್ರೀ ಗೋಯಲ್
ಜಪಾನಿನ ಹಣಕಾಸು ಸಂಸ್ಥೆಗಳಿಂದ ಭಾರತದ ಮೇಲೆ ದೀರ್ಘಕಾಲೀನ ವಿಶ್ವಾಸ; ಬಂಡವಾಳ ಹರಿವು ಮತ್ತು ಲಾಭದ ಪಾವತಿಗೆ ಹೆಚ್ಚಿನ ಸುಲಭತೆಯನ್ನು ಕೋರಿದ ಸಂಸ್ಥೆಗಳು
ಪ್ರಕಟಣಾ ದಿನಾಂಕ:
25 AUG 2026 10:44AM by PIB Bengaluru
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರು ಇಂದು ಟೋಕಿಯೊದಲ್ಲಿ ಪ್ರಮುಖ ಜಪಾನಿನ ಹಣಕಾಸು ಮತ್ತು ಹೂಡಿಕೆ ಸಂಸ್ಥೆಗಳ ಹಿರಿಯ ನಾಯಕರೊಂದಿಗೆ ದೀರ್ಘಕಾಲೀನ ಬಂಡವಾಳ ಹರಿವನ್ನು ಬಲಪಡಿಸುವುದು, ಹೂಡಿಕೆ ಸಹಭಾಗಿತ್ವವನ್ನು ಆಳವಾಗಿಸುವುದು ಮತ್ತು ಭಾರತದ ಬೆಳವಣಿಗೆಯಲ್ಲಿ ಜಪಾನಿನ ಭಾಗವಹಿಸುವಿಕೆಯನ್ನು ವಿಸ್ತರಿಸುವ ಕುರಿತು ಚರ್ಚೆ ನಡೆಸಿದರು.
ಈ ಸಭೆಯಲ್ಲಿ ಎಂಯುಎಫ್ಜಿ, ಡೆವಲಪ್ಮೆಂಟ್ ಬ್ಯಾಂಕ್ ಆಫ್ ಜಪಾನ್ (ಡಿಬಿಜೆ), ಮಿಜುಹೋ , ಮೋರ್ಗಾನ್ ಸ್ಟಾನ್ಲಿ, ನೊಮುರಾ ಮತ್ತು ನಿಪ್ಪಾನ್ ಲೈಫ್ ಸಂಸ್ಥೆಗಳ ಹಿರಿಯ ಪ್ರತಿನಿಧಿಗಳು ಭಾಗವಹಿಸಿದ್ದರು. ಚರ್ಚೆಗಳು ಭಾರತದ ಆರ್ಥಿಕ ಮುನ್ನೋಟ, ಉದಯೋನ್ಮುಖ ಹೂಡಿಕೆ ಅವಕಾಶಗಳು ಮತ್ತು ಭಾರತದಲ್ಲಿ ಜಪಾನಿನ ಸಾಂಸ್ಥಿಕ ಹೂಡಿಕೆಯನ್ನು ಇನ್ನಷ್ಟು ಸುಲಭಗೊಳಿಸುವ ಕ್ರಮಗಳ ಮೇಲೆ ಕೇಂದ್ರೀಕೃತವಾಗಿದ್ದವು.
ಜಾಗತಿಕ ಅನಿಶ್ಚಿತತೆಗಳ ನಡುವೆಯೂ ಭಾರತವು ಕಳೆದ ವರ್ಷ ಶೇಕಡಾ 7.7 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ ಮತ್ತು 2047ರ ವೇಳೆಗೆ 30 ಟ್ರಿಲಿಯನ್ ಅಮೆರಿಕನ್ ಡಾಲರ್ ಆರ್ಥಿಕತೆಯಾಗುವತ್ತ ಕೆಲಸ ಮಾಡುತ್ತಿದೆ ಎಂದು ಶ್ರೀ ಗೋಯಲ್ ಭಾರತೀಯ ಆರ್ಥಿಕತೆಯ ಶಕ್ತಿ ಮತ್ತು ಚೇತರಿಕೆಯನ್ನು ಎತ್ತಿಹಿಡಿದರು. ಭಾರತದ ಬ್ಯಾಂಕಿಂಗ್ ಕ್ಷೇತ್ರದ ಶಕ್ತಿ, ಬಲವಾದ ಬಂಡವಾಳ ಸಮರ್ಪಕತೆ, ಕಡಿಮೆ ಮಟ್ಟದ ನಿಷ್ಕ್ರಿಯ ಆಸ್ತಿಗಳು, ವಿಸ್ತರಿಸುತ್ತಿರುವ ಮಧ್ಯಮ ವರ್ಗ ಮತ್ತು ಹೆಚ್ಚುತ್ತಿರುವ ಉಳಿತಾಯ ಮಾಡಬಹುದಾದ ಆದಾಯವು ಸುಸ್ಥಿರ ಆರ್ಥಿಕ ಬೆಳವಣಿಗೆಯ ಮುಖ್ಯ ಚಾಲಕಗಳಾಗಿವೆ ಎಂದು ಅವರು ಒತ್ತಿಹೇಳಿದರು.
ಅರೆವಾಹಕಗಳು (ಸೆಮಿಕಂಡಕ್ಟರ್ ಗಳು), ಕೃತಕ ಬುದ್ಧಿಮತ್ತೆ , ದತ್ತಾಂಶ ಕೇಂದ್ರಗಳು, ನವೀಕರಿಸಬಹುದಾದ ಇಂಧನ, ಹಸಿರು ಹೈಡ್ರೋಜನ್, ಸುಧಾರಿತ ಉತ್ಪಾದನೆ ಮತ್ತು ಡಿಜಿಟಲ್ ಮೂಲಸೌಕರ್ಯಗಳಲ್ಲಿ ಜಪಾನಿನ ಹೂಡಿಕೆದಾರರಿಗೆ ಪ್ರಮುಖ ಅವಕಾಶಗಳಿವೆ ಎಂದು ಸಚಿವರು ಎತ್ತಿ ತೋರಿಸಿದರು. ಭಾರತದ ವಿಸ್ತರಿಸುತ್ತಿರುವ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಮತ್ತು ರಾಷ್ಟ್ರೀಯ ವಿದ್ಯುತ್ ಗ್ರಿಡ್, ಇಂಧನ-ಸಾಂದ್ರತೆಯ ಡಿಜಿಟಲ್ ಉದ್ಯಮಗಳ ಬೆಳವಣಿಗೆಗೆ ಬಲವಾದ ಅಡಿಪಾಯವನ್ನು ಒದಗಿಸುತ್ತದೆ, ಹಾಗೂ ಭಾರತದ ʻಸೆಮಿಕಂಡಕ್ಟರ್ ಮಿಷನ್ʼ ಉತ್ಪಾದನೆ ಮತ್ತು ತಂತ್ರಜ್ಞಾನದಾದ್ಯಂತ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ ಎಂದು ಅವರು ಹೇಳಿದರು.
ಭಾರತ ಮತ್ತು ಜಪಾನ್ ಸಂಬಂಧಗಳ ಆಯಾಮವನ್ನು ಪ್ರಸ್ತಾಪಿಸಿದ ಶ್ರೀ ಗೋಯಲ್, ಜಾಗತಿಕ ಉತ್ಪಾದನೆ, ತಂತ್ರಜ್ಞಾನ ಮತ್ತು ಹೂಡಿಕೆ ಕೇಂದ್ರವಾಗುವ ಭಾರತದ ಪ್ರಯಾಣದಲ್ಲಿ ಜಪಾನ್ ಅನ್ನು ನಂಬಿಕಸ್ಥ ಪಾಲುದಾರ ಎಂದು ಭಾರತ ಪರಿಗಣಿಸುತ್ತದೆ ಎಂದರು. ಬೌದ್ಧಿಕ ಆಸ್ತಿ ರಕ್ಷಣೆ, ಉತ್ತಮ ಗುಣಮಟ್ಟದ ಪ್ರತಿಭೆಗಳ ಲಭ್ಯತೆ, ನೀತಿ ಸುಧಾರಣೆಗಳು ಮತ್ತು ಅನುಕೂಲಕರ ವ್ಯಾಪಾರ ವಾತಾವರಣವನ್ನು ಸೃಷ್ಟಿಸಲು ಭಾರತ ಬದ್ಧವಾಗಿದೆ ಎಂದು ಅವರು ಒತ್ತಿ ಹೇಳಿದರು.
ಜಪಾನಿನ ಹಣಕಾಸು ಸಂಸ್ಥೆಗಳು ಭಾರತದೊಂದಿಗಿನ ತಮ್ಮ ಬೆಳೆಯುತ್ತಿರುವ ಸಂಬಂಧವನ್ನು ಹಂಚಿಕೊಂಡವು ಮತ್ತು ದೇಶದ ದೀರ್ಘಕಾಲೀನ ಬೆಳವಣಿಗೆಯ ಭವಿಷ್ಯದ ಬಗ್ಗೆ ಬಲವಾದ ವಿಶ್ವಾಸವನ್ನು ವ್ಯಕ್ತಪಡಿಸಿದವು. ಎಂ ಯು ಎಫ್ ಜಿ ಸಂಸ್ಥೆಯು ಶ್ರೀರಾಮ್ ಫೈನಾನ್ಸ್ ನಲ್ಲಿ ಸುಮಾರು 4 ಶತಕೋಟಿ ಅಮೆರಿಕನ್ ಡಾಲರ್ ಹೂಡಿಕೆ ಮಾಡಿರುವುದನ್ನು ಮತ್ತು ನವೀಕರಿಸಬಹುದಾದ ಇಂಧನ ಹಾಗೂ ಹೈಡ್ರೋಜನ್ (ಜಲಜನಕ) ಕ್ಷೇತ್ರಗಳಲ್ಲಿ ತನ್ನ ವಿಸ್ತರಿಸುತ್ತಿರುವ ಆಸಕ್ತಿಯನ್ನು ಎತ್ತಿಹಿಡಿಯಿತು. ಡಿಜಿಜೆ ಸಂಸ್ಥೆಯು ತನ್ನ ನಿರ್ದಿಷ್ಟ ಭಾರತೀಯ ಕಾರ್ಯತಂತ್ರ ಹಾಗೂ ರಿಯಲ್ ಎಸ್ಟೇಟ್ ಅಭಿವೃದ್ಧಿ, ವೆಂಚರ್ ಕ್ಯಾಪಿಟಲ್ ಮತ್ತು ಇತರ ದೀರ್ಘಕಾಲೀನ ಹೂಡಿಕೆ ಅವಕಾಶಗಳಲ್ಲಿ ಬೆಳೆಯುತ್ತಿರುವ ಆಸಕ್ತಿಯನ್ನು ವಿವರಿಸಿತು.
ಮಿಜುಹೋ ಸಂಸ್ಥೆಯು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಪಾನಿನ ಕಂಪನಿಗಳ ಸುಧಾರಿಸುತ್ತಿರುವ ಲಾಭದಾಯಕತೆ ಮತ್ತು ಪುಣೆಯಲ್ಲಿರುವ ತನ್ನ ಗ್ಲೋಬಲ್ ಕೆಪಾಸಿಟಿ ಸೆಂಟರ್ ಸೇರಿದಂತೆ ಭಾರತೀಯ ಕಾರ್ಯಾಚರಣೆಗಳ ವಿಸ್ತರಣೆಯನ್ನು ಎತ್ತಿಹಿಡಿಯಿತು. ಮೋರ್ಗಾನ್ ಸ್ಟಾನ್ಲಿ ಭಾರತವನ್ನು ತನ್ನ ಅತ್ಯಂತ ಪ್ರಮುಖ ಜಾಗತಿಕ ತಾಣಗಳಲ್ಲಿ ಒಂದೆಂದು ಬಣ್ಣಿಸಿದ್ದು, 19,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ ಮತ್ತು ಉನ್ನತ ಮೌಲ್ಯದ ಬಂಡವಾಳ ಮಾರುಕಟ್ಟೆಗಳು ಹಾಗೂ ಹಣಕಾಸು ಸೇವೆಗಳ ಕಡೆಗೆ ತನ್ನ ಭಾರತೀಯ ಕಾರ್ಯಾಚರಣೆಯ ವಿಕಸನವನ್ನು ಎತ್ತಿಹಿಡಿಯಿತು.
ನೊಮುರಾ ಸಂಸ್ಥೆಯು ಭಾರತದಲ್ಲಿ ತನ್ನ ದೀರ್ಘಕಾಲದ ಉಪಸ್ಥಿತಿಯನ್ನು ಮತ್ತು ಕೃತಕ ಬುದ್ಧಿಮತ್ತೆ ಹಾಗೂ ಸೈಬರ್ ಭದ್ರತೆಯಂತಹ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಸಾಮರ್ಥ್ಯಗಳ ಮೂಲಕ ಜಪಾನಿನ ಕಂಪನಿಗಳು ಮತ್ತು ಜಾಗತಿಕ ಉದ್ಯಮಗಳನ್ನು ಭಾರತೀಯ ಅವಕಾಶಗಳೊಂದಿಗೆ ಜೋಡಿಸುವ ತನ್ನ ಪಾತ್ರವನ್ನು ಎತ್ತಿಹಿಡಿಯಿತು. ನಿಪ್ಪಾನ್ ಲೈಫ್ ಸಂಸ್ಥೆಯು ದೀರ್ಘಕಾಲೀನ "ದೀರ್ಘಾವಧಿಯ ಬಂಡವಾಳದ" ಪ್ರಾಮುಖ್ಯತೆಯನ್ನು ಒತ್ತಿಹೇಳಿತು ಮತ್ತು ತನ್ನ ಭಾರತೀಯ ಕಾರ್ಯಾಚರಣೆಗಳಿಂದ ಬಂದ ಬಲವಾದ ಆದಾಯದ ಬಗ್ಗೆ ಗಮನ ಸೆಳೆಯಿತು.
ಭಾರತಕ್ಕೆ ಜಪಾನಿನ ಸಾಂಸ್ಥಿಕ ಬಂಡವಾಳದ ಹರಿವನ್ನು ಇನ್ನಷ್ಟು ಸುಲಭಗೊಳಿಸುವ ಕ್ರಮಗಳನ್ನು ಸಹ ಈ ಚರ್ಚೆಗಳು ಒಳಗೊಂಡಿದ್ದವು. ಲಾಭದ ಪಾವತಿ ಪ್ರಕ್ರಿಯೆಗಳನ್ನು ಸರಳೀಕರಿಸುವುದು, ಭಾರತೀಯ ಬಂಡವಾಳ ಮಾರುಕಟ್ಟೆಗಳಿಗೆ ಪ್ರವೇಶವನ್ನು ಸುಧಾರಿಸುವುದು ಮತ್ತು ದೀರ್ಘಕಾಲೀನ ಹೂಡಿಕೆದಾರರಿಗೆ ಹೆಚ್ಚಿನ ನಿಯಂತ್ರಕ ಮುನ್ಸೂಚನೆಯನ್ನು ಖಚಿತಪಡಿಸಿಕೊಳ್ಳುವ ಪ್ರಾಮುಖ್ಯತೆಯನ್ನು ಭಾಗವಹಿಸಿದವರು ಎತ್ತಿಹಿಡಿದರು.
ಚಲಾವಣಾ ನಾಣ್ಯ ಮೌಲ್ಯದ ಬದಲಾವಣೆಗಳು ಮತ್ತು ಕೆಲವು ನಿಯಂತ್ರಕ ಹಾಗೂ ನೀತಿ ಪರಿಗಣನೆಗಳುಲ್ಪಾವಧಿಯ ಹೂಡಿಕೆ ನಿರ್ಧಾರಗಳ ಮೇಲೆ ಪ್ರಭಾವ ಬೀರಬಹುದು ಎಂದು ಹೇಳಿದ ಜಪಾನಿನ ಸಂಸ್ಥೆಗಳು, ಭಾರತದ ಮೇಲಿನ ತಮ್ಮ ದೀರ್ಘಕಾಲೀನ ಕಾರ್ಯತಂತ್ರದ ದೃಷ್ಟಿಕೋನವು ಬಲವಾಗಿ ಧನಾತ್ಮಕವಾಗಿದೆ ಎಂದು ಪುನರುಚ್ಚರಿಸಿದವು. ಶ್ರೀ ಗೋಯಲ್ ಅವರು ಈ ಪ್ರತಿಕ್ರಿಯೆಯನ್ನು ಸ್ವಾಗತಿಸಿದರು ಮತ್ತು ವ್ಯಾಪಾರ ಮಾಡುವ ಸುಲಭತೆಯನ್ನು ನಿರಂತರವಾಗಿ ಸುಧಾರಿಸಲು ಹಾಗೂ ಹೆಚ್ಚು ತಡೆರಹಿತ ಹೂಡಿಕೆ ವಾತಾವರಣವನ್ನು ಸೃಷ್ಟಿಸಲು ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು.
ಈ ಸಭೆಯು ಭಾರತಕ್ಕೆ ಅಂತರರಾಷ್ಟ್ರೀಯ ಬಂಡವಾಳದ ಪ್ರವೇಶದ್ವಾರವಾಗಿ ಮತ್ತು ಜಪಾನ್ ಹಾಗೂ ಭಾರತದ ನಡುವೆ ಹೆಚ್ಚಿನ ಗಡಿಯ ಅಡೆತಡೆಯಿಲ್ಲದ ಹೂಡಿಕೆ ಹರಿವನ್ನು ಸುಲಭಗೊಳಿಸುವ ವೇದಿಕೆಯಾಗಿ ಗಿಫ್ಟ್ ಸಿಟಿಯ ಸಾಮರ್ಥ್ಯವನ್ನು ಪರಿಶೀಲಿಸಿತು.
ಭಾರತವು ಕೇವಲ ಬಂಡವಾಳವನ್ನು ಮಾತ್ರವಲ್ಲದೆ ತಂತ್ರಜ್ಞಾನ, ನಾವೀನ್ಯತೆ, ಉತ್ಪಾದನಾ ಸಾಮರ್ಥ್ಯಗಳು, ಉದ್ಯೋಗ ಮತ್ತು ಜಾಗತಿಕ ಮೌಲ್ಯ ಸರಪಳಿಗಳೊಂದಿಗೆ ಸಂಯೋಜನೆಯನ್ನು ತರುವ ದೀರ್ಘಕಾಲೀನ ಸಹಭಾಗಿತ್ವವನ್ನು ಬಯಸುತ್ತಿದೆ ಎಂದು ಶ್ರೀ ಗೋಯಲ್ ಒತ್ತಿಹೇಳಿದರು. ಅವರು ಹೊಸ ಹಾಗೂ ಉದಯೋನ್ಮುಖ ಕ್ಷೇತ್ರಗಳಲ್ಲಿ ಮತ್ತು ಆಧುನಿಕೀಕರಣ ಹಾಗೂ ತಾಂತ್ರಿಕ ನವೀಕರಣದ ಅಗತ್ಯವಿರುವ ಸ್ಥಾಪಿತ ಉದ್ಯಮಗಳಲ್ಲಿನ ಅವಕಾಶಗಳನ್ನು ಎತ್ತಿಹಿಡಿದರು.
ಮುಂದಿನ ದಶಕದಲ್ಲಿ ಭಾರತಕ್ಕೆ 10 ಟ್ರಿಲಿಯನ್ ಯೆನ್ ಜಪಾನೀಸ್ ಖಾಸಗಿ ಹೂಡಿಕೆಯನ್ನು ಸಜ್ಜುಗೊಳಿಸುವ ಭಾರತ-ಜಪಾನ್ ಗುರಿಯ ಹಿನ್ನೆಲೆಯಲ್ಲಿ ಈ ಚರ್ಚೆಗಳು ಮಹತ್ವ ಪಡೆದುಕೊಂಡಿವೆ. ಈ ಸಂವಾದವು ಭಾರತದ ದೀರ್ಘಕಾಲೀನ ಬೆಳವಣಿಗೆಯ ಭವಿಷ್ಯದಲ್ಲಿ ಪ್ರಮುಖ ಜಪಾನಿನ ಹಣಕಾಸು ಸಂಸ್ಥೆಗಳ ಬಲವಾದ ವಿಶ್ವಾಸವನ್ನು ಪುನರುಚ್ಚರಿಸಿತು ಮತ್ತು ದ್ವಿಪಕ್ಷೀಯ ಹೂಡಿಕೆ, ತಂತ್ರಜ್ಞಾನ ಮತ್ತು ವ್ಯಾಪಾರ ಸಂಪರ್ಕಗಳನ್ನು ವಿಸ್ತರಿಸುವ ಗಮನಾರ್ಹ ಸಾಮರ್ಥ್ಯವನ್ನು ಎತ್ತಿಹಿಡಿಯಿತು.
ಈ ಸಭೆಯು ಭಾರತ-ಜಪಾನ್ ಆರ್ಥಿಕ ಪಾಲುದಾರಿಕೆಯನ್ನು ಆಳವಾಗಿಸುವ ಮತ್ತು ಭಾರತದ ಮುಂದಿನ ಹಂತದ ಬೆಳವಣಿಗೆಗೆ ಜಪಾನಿನ ಸಾಂಸ್ಥಿಕ ದೀರ್ಘಕಾಲೀನ ಬಂಡವಾಳದ ಹೆಚ್ಚಿನ ಹರಿವನ್ನು ತೆರೆಯುವ ನಿಟ್ಟಿನಲ್ಲಿ ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ.

*****
(ಪ್ರಕಟಣೆ ಐ.ಡಿ.: 2303143)
ವಿಸಿಟರ್ ಕೌಂಟರ್ : 10
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Manipuri
,
Bengali
,
Bengali-TR
,
Gujarati
,
Tamil
,
Telugu
,
Malayalam