ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಚಲನಚಿತ್ರೋತ್ಸವ ಹಬ್ಬದ ಸಿದ್ಧತೆಗಳ ಪರಿಶೀಲನೆಗಾಗಿ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರ ಅಧ್ಯಕ್ಷತೆಯಲ್ಲಿ 57ನೇ ಐಎಫ್ ಎಫ್ ಐಗಾಗಿ ಪ್ರಥಮ ಸಂಚಾಲನಾ ಸಮಿತಿ ಸಭೆ ಆಯೋಜನೆ
ಯುವ ಮತ್ತು ಉದಯೋನ್ಮುಖ ಚಲನಚಿತ್ರ ನಿರ್ಮಾಪಕರಿಗೆ ಹೆಚ್ಚಿನ ಅವಕಾಶಗಳು ಹಾಗೂ ಬಲವಾದ ಅಂತಾರಾಷ್ಟ್ರೀಯ ಸಂಪರ್ಕಕ್ಕೆ ಡಾ. ಮುರುಗನ್ ಕರೆ
ಭಾರತೀಯ ಮತ್ತು ಜಾಗತಿಕ ಸಿನೆಮಾದ ಅತ್ಯುತ್ತಮ ಚಿತ್ರಗಳನ್ನು ಪ್ರದರ್ಶಿಸಲು ಹಾಗೂ ಸೃಜನಾತ್ಮಕ ವಿನಿಮಯ ಮತ್ತು ಭಾರತದ ಬೆಳೆಯುತ್ತಿರುವ ಸೃಜನಶೀಲ ಆರ್ಥಿಕತೆಯನ್ನು ಬಲಪಡಿಸಲು ಐ ಎಫ್ ಎಫ್ ಐ ಸಜ್ಜು
ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಜಾಗತಿಕ ಸ್ಥಾನಮಾನವನ್ನು ಮತ್ತಷ್ಟು ಬಲಪಡಿಸುವ ಕ್ರಮಗಳನ್ನು ಚರ್ಚಿಸಲು ಮತ್ತು ಮುಂಬರುವ ಚಿತ್ರೋತ್ಸವದ ಸಿದ್ಧತೆಗಳನ್ನು ಪರಿಶೀಲಿಸಲು, ಭಾರತದ 57ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಐ ಎಫ್ ಎಫ್ ಐ) ಸಂಚಾಲನಾ ಸಮಿತಿಯ ಮೊದಲ ಸಭೆಯು 21 ಆಗಸ್ಟ್ 2026 ರಂದು ನವದೆಹಲಿಯ ಕರ್ತವ್ಯ ಭವನ-2 ರಲ್ಲಿ, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಭಾರತದ 57ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು (ಐ ಎಫ್ ಎಫ್ ಐ) ನವೆಂಬರ್ 20 ರಿಂದ 28, 2026 ರವರೆಗೆ ಗೋವಾದಲ್ಲಿ ನಡೆಯಲಿದೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಡಾ. ಎಲ್. ಮುರುಗನ್ ಅವರು, ಯುವ ವಿದ್ಯಾರ್ಥಿಗಳು, ಉದಯೋನ್ಮುಖ ಚಲನಚಿತ್ರ ನಿರ್ಮಾಪಕರು ಮತ್ತು ಭಾರತೀಯ ಚಲನಚಿತ್ರ ರಂಗದ ಅಪ್ರಸಿದ್ಧ ಕಲಾವಿದರಿಗೆ ಹೆಚ್ಚಿನ ಅವಕಾಶಗಳನ್ನು ನೀಡುವ ಬಗ್ಗೆ ತಮ್ಮ ಉದ್ದೇಶವನ್ನು ವ್ಯಕ್ತಪಡಿಸಿದರು. ಪ್ರಪಂಚದಾದ್ಯಂತದ ಅತ್ಯುತ್ತಮ ಚಲನಚಿತ್ರಗಳು ಮತ್ತು ಪ್ರಮುಖ ಸೃಜನಶೀಲ ನಾಯಕರನ್ನು ಭಾರತಕ್ಕೆ ತರುವ ಮೂಲಕ ಅಂತಾರಾಷ್ಟ್ರೀಯ ಸಂಪರ್ಕವನ್ನು ಹೆಚ್ಚಿಸುವುದು ಹಾಗೂ ಯುವ ಪ್ರತಿಭೆಗಳು ತಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಲು, ಪ್ರಸಿದ್ಧ ಚಲನಚಿತ್ರ ನಿರ್ಮಾಪಕರಿಂದ ಕಲಿಯಲು ಮತ್ತು ಜಾಗತಿಕ ಚಿತ್ರರಂಗದೊಂದಿಗೆ ಸಂಪರ್ಕ ಸಾಧಿಸಲು ಐಎಫ್ ಎಫ್ ಐ ಸೂಕ್ತ ವೇದಿಕೆಯನ್ನು ಒದಗಿಸಬೇಕು ಎಂದು ಅವರು ಹೇಳಿದರು.
ಶ್ರೀ ಅಶ್ವಿನಿ ವೈಷ್ಣವ್ ಅವರ ನೇತೃತ್ವದಲ್ಲಿ ಸಚಿವಾಲಯವು ಭಾರತದ 'ಕಿತ್ತಳೆ ಆರ್ಥಿಕತೆʼ (ಸೃಜನಶೀಲ ಆರ್ಥಿಕತೆ) ಅನ್ನು ಉತ್ತೇಜಿಸಲು, ದೇಶದ ಸೃಜನಶೀಲ ಉದ್ಯಮಗಳನ್ನು ಬಲಪಡಿಸಲು ಮತ್ತು ಪ್ರತಿಭೆ, ಆವಿಷ್ಕಾರ ಹಾಗೂ ಜಾಗತಿಕ ಸಹಯೋಗಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸಲು ಹೊಸ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಡಾ. ಮುರುಗನ್ ಒತ್ತಿ ಹೇಳಿದರು.
ಯುವ ಮತ್ತು ಉದಯೋನ್ಮುಖ ಪ್ರತಿಭೆಗಳಿಗಾಗಿ ಮಾಸ್ಟರ್ ಕ್ಲಾಸ್ ಗಳು, ಪ್ರಸಿದ್ಧ ಚಲನಚಿತ್ರ ನಿರ್ಮಾಪಕರೊಂದಿಗೆ ಸಂವಾದಗಳು ಮತ್ತು ಅರ್ಥಪೂರ್ಣ ಮಾರ್ಗದರ್ಶನ ಅವಕಾಶಗಳನ್ನು ವಿಸ್ತರಿಸುವ ಅಗತ್ಯದ ಬಗ್ಗೆ ಡಾ. ಮುರುಗನ್ ಒತ್ತಿ ಹೇಳಿದರು. ಅಂತಾರಾಷ್ಟ್ರೀಯ ಸಹಯೋಗ ಮತ್ತು ವೃತ್ತಿಪರ ವಿನಿಮಯವನ್ನು ಹೆಚ್ಚಿಸುವುದರ ಜೊತೆಗೆ, ಭಾರತೀಯ ಚಲನಚಿತ್ರದ ವೈವಿಧ್ಯತೆ ಮತ್ತು ಶಕ್ತಿಯನ್ನು ಪ್ರದರ್ಶಿಸುವ ಮಹತ್ವವನ್ನು ಅವರು ಎತ್ತಿ ತೋರಿಸಿದರು.
ಐ ಎಫ್ ಎಫ್ ಐ ಬೆಳವಣಿಗೆ ಮತ್ತು ನಿರಂತರ ಯಶಸ್ಸಿನಲ್ಲಿ ಗೋವಾ ಸರ್ಕಾರದ ಪ್ರಮುಖ ಪಾತ್ರವನ್ನು ಗುರುತಿಸಿದ ಸಚಿವರು, ಗೋವಾವನ್ನು ಅಂತಾರಾಷ್ಟ್ರೀಯ ಸಿನೆಮಾದ ಜಾಗತಿಕ ತಾಣವನ್ನಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗೋವಾದ ಮಾಜಿ ಮುಖ್ಯಮಂತ್ರಿ ದಿವಂಗತ ಶ್ರೀ ಮನೋಹರ್ ಪರಿಕ್ಕರ್ ಅವರ ಕೊಡುಗೆಯನ್ನು ಸ್ಮರಿಸಿದರು. ಐ ಎಫ್ ಎಫ್ ಐ ಅನ್ನು ವಿಶ್ವ ದರ್ಜೆಯ ಸಾಂಸ್ಕೃತಿಕ ಕಾರ್ಯಕ್ರಮವನ್ನಾಗಿ ಮಾಡಲು ನಿರಂತರ ಬೆಂಬಲ ನೀಡುತ್ತಿರುವ ಗೋವಾದ ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಪ್ರಮೋದ್ ಸಾವಂತ್ ಅವರ ಪ್ರಯತ್ನಗಳನ್ನು ಸಚಿವರು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಚಂಚಲ್ ಕುಮಾರ್, ಭಾರತದ ಬೆಳೆಯುತ್ತಿರುವ ಸೃಜನಶೀಲ ಆರ್ಥಿಕತೆಯನ್ನು ಉತ್ತೇಜಿಸಲು ಮತ್ತು ಭಾರತೀಯ ಹಾಗೂ ಅಂತರರಾಷ್ಟ್ರೀಯ ಸೃಜನಶೀಲ ಸಮುದಾಯಗಳ ನಡುವಿನ ಸಹಯೋಗವನ್ನು ಹೆಚ್ಚಿಸಲು ಐಎಫ್ ಎಫ್ ಐ ಅನ್ನು ಪ್ರಮುಖ ವೇದಿಕೆಯಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು. ಉತ್ಸವದಲ್ಲಿ ಪಾಲ್ಗೊಳ್ಳುವ ಚಲನಚಿತ್ರ ನಿರ್ಮಾಪಕರು, ಚಲನಚಿತ್ರ ಪ್ರೇಮಿಗಳು, ಪ್ರತಿನಿಧಿಗಳು ಮತ್ತು ಅತಿಥಿಗಳಿಗೆ ಅತ್ಯುತ್ತಮ ಮತ್ತು ಸುಗಮಕರವಾದ ಅನುಭವವನ್ನು ಖಚಿತಪಡಿಸಿಕೊಳ್ಳುವ ಮಹತ್ವವನ್ನು ಅವರು ಒತ್ತಿ ಹೇಳಿದರು.
ಎನ್ ಎಫ್ ಡಿ ಸಿ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪ್ರಕಾಶ್ ಮಗ್ದುಮ್ ಅವರು 57ನೇ ಐ ಎಫ್ ಎಫ್ ಐ ಗಾಗಿ ಕೈಗೊಳ್ಳಲಾಗುತ್ತಿರುವ ಸಿದ್ಧತೆಗಳು ಮತ್ತು ವಿವಿಧ ಉಪಕ್ರಮಗಳ ಕುರಿತು ವಿವರಣೆ ನೀಡಿದರು. ಐ ಎಫ್ ಎಫ್ ಐ ಚಲನಚಿತ್ರೋತ್ಸವದ ನಿರ್ದೇಶಕರಾದ ಶ್ರೀ ಅಶುತೋಷ್ ಗೋವಾರಿಕರ್ ಅವರು ಸಂಚಾಲನಾ ಸಮಿತಿಯ ಶಿಫಾರಸುಗಳನ್ನು ಸ್ವಾಗತಿಸಿದರು. ಮಾಸ್ಟರ್ ಕ್ಲಾಸ್ ಗಳನ್ನು ಬಲಪಡಿಸುವುದು, ಯುವ ಚಲನಚಿತ್ರ ನಿರ್ಮಾಪಕರಿಗೆ ಅವಕಾಶಗಳನ್ನು ನೀಡುವುದು, ಭಾರತ ಮತ್ತು ವಿದೇಶಗಳ ಅತ್ಯುತ್ತಮ ಚಿತ್ರಗಳ ಆಯ್ಕೆ ಹಾಗೂ ಪ್ರಪಂಚದಾದ್ಯಂತದ ಪ್ರಮುಖ ಚಲನಚಿತ್ರ ಪ್ರಮುಖರ ಭಾಗವಹಿಸುವಿಕೆಯ ಮಹತ್ವವನ್ನು ಅವರು ಉಲ್ಲೇಖಿಸಿದರು.
ಗೋವಾ ಸರ್ಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆಯ ಕಾರ್ಯದರ್ಶಿಯವರು ರಾಜ್ಯ ಸರ್ಕಾರ ಕೈಗೊಂಡಿರುವ ಸಿದ್ಧತೆಗಳ ಕುರಿತು ಸಮಿತಿಗೆ ಮಾಹಿತಿ ನೀಡಿದರು ಮತ್ತು 57ನೇ ಐ ಎಫ್ ಎಫ್ ಐ ಗಾಗಿ ಎಲ್ಲಾ ಸಿದ್ಧತೆಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಮತ್ತು ಸುಗಮವಾದ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಭರವಸೆ ನೀಡಿದರು.

ಪ್ರಪಂಚದಾದ್ಯಂತದ ಅತ್ಯುತ್ತಮ ಚಲನಚಿತ್ರಗಳನ್ನು ಆಯ್ಕೆ ಮಾಡುವುದು ಹಾಗೂ ವಿವಿಧ ದೇಶಗಳ ಪ್ರಮುಖ ಚಲನಚಿತ್ರ ನಿರ್ಮಾಪಕರು, ಕಲಾವಿದರು ಮತ್ತು ಸೃಜನಶೀಲ ವೃತ್ತಿಪರರನ್ನು ಆಹ್ವಾನಿಸುವ ಮೂಲಕ ಐಎಫ್ಎಫ್ಐ ಗೆ ವ್ಯಾಪಕ ಅಂತಾರಾಷ್ಟ್ರೀಯ ಮನ್ನಣೆ ತರಲು ಸ್ಟೀರಿಂಗ್ ಸಮಿತಿಯ ಸದಸ್ಯರು ಹೆಚ್ಚಿನ ಒತ್ತು ನೀಡಿದರು. ಈ ಉತ್ಸವವು ಕೇವಲ ಸಿನೆಮಾದ ಆಚರಣೆಯಾಗಿರದೆ, ಸೃಜನಾತ್ಮಕ ವಿನಿಮಯ, ಸಹಯೋಗ ಮತ್ತು ಭಾರತದ ಬೆಳೆಯುತ್ತಿರುವ ಸೃಜನಶೀಲ ಆರ್ಥಿಕತೆಯ ಪ್ರಚಾರಕ್ಕೆ ಒಂದು ಮುಖ್ಯ ವೇದಿಕೆಯಾಗಿದೆ ಎಂದು ಭಾವಿಸಲಾಗಿದೆ.
ಉತ್ಸವದ ಯಶಸ್ವಿ ಆಯೋಜನೆಗಾಗಿ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಎನ್ ಎಫ್ ಡಿ ಸಿ, ಗೋವಾ ಸರ್ಕಾರ ಮತ್ತು ಎಲ್ಲಾ ಸಂಬಂಧಿತ ಪಾಲುದಾರರ ನಡುವೆ ನಿಕಟ ಮತ್ತು ನಿರಂತರ ಸಮನ್ವಯದ ಅಗತ್ಯವನ್ನು ಸಂಚಾಲನಾ ಸಮಿತಿಯು ಪುನರುಚ್ಚರಿಸಿತು. 57ನೇ ಐಎಫ್ ಎಫ್ಐ ಸಿನೆಮಾ, ಸೃಜನಶೀಲತೆ, ಸಾಂಸ್ಕೃತಿಕ ವಿನಿಮಯ ಮತ್ತು ಜಾಗತಿಕ ಸಹಯೋಗದ ಪ್ರಮುಖ ಅಂತಾರಾಷ್ಟ್ರೀಯ ವೇದಿಕೆಯಾಗಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತದೆ ಎಂಬ ಜಂಟಿ ವಿಶ್ವಾಸವನ್ನು ಸಮಿತಿಯು ವ್ಯಕ್ತಪಡಿಸಿತು.
ಈ ಸಭೆಯಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಚಂಚಲ್ ಕುಮಾರ್; ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಮತ್ತು ಐ ಎಫ್ ಎಫ್ ಐ ನಿರ್ದೇಶಕ ಶ್ರೀ ಅಶುತೋಷ್ ಗೋವಾರಿಕರ್; ಎನ್ ಎಫ್ ಡಿ ಸಿ ವ್ಯವಸ್ಥಾಪಕ ನಿರ್ದೇಶಕ ಶ್ರೀ ಪ್ರಕಾಶ್ ಮಗ್ದುಮ್; ಗೋವಾ ಸರ್ಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆಯ ಕಾರ್ಯದರ್ಶಿ; ಹಾಗೂ ಸಂಚಾಲನಾ ಸಮಿತಿಯ ಪ್ರಮುಖ ಸದಸ್ಯರಾದ ಶ್ರೀಮತಿ ಭಾವನಾ ಖೇರ್, ರಾಮ್ ಸಂಪತ್, ಅಪರ್ಣಾ ಪುರೋಹಿತ್, ಪ್ರೇರಣಾ ಸಿಂಗ್, ನಮಿತಾ, ಸುಹಾಸಿನಿ ಮಣಿರತ್ನಂ, ಅಭಿಷೇಕ್ ಜೈನ್, ಸಂತೋಷ್ ಸಿವನ್, ಗೌರವ್ ಬ್ಯಾನರ್ಜಿ, ಆದಿತ್ಯ ಭಟ್, ಪ್ರಶಾಂತ್ ಚೋಠಾಣಿ ಮತ್ತು ಧರಮ್ ಗುಲಾಟಿ ಭಾಗವಹಿಸಿದ್ದರು.
*****
(रिलीज़ आईडी: 2302280)
आगंतुक पटल : 19