ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ವಿಕಸಿತ ಭಾರತ ಯುವ ನಾಯಕರ ಸಂವಾದ 2027 ‘ವಿಕಸಿತ ಭಾರತ ರಸಪ್ರಶ್ನೆ’ಯೊಂದಿಗೆ ಆರಂಭ
ಯುವಜನರಿಗೆ ಪ್ರಧಾನಮಂತ್ರಿಯವರನ್ನು ಭೇಟಿಯಾಗಿ ವಿಕಸಿತ ಭಾರತಕ್ಕಾಗಿ ತಮ್ಮ ಆಲೋಚನೆಗಳನ್ನು ಮಂಡಿಸುವ ಅವಕಾಶ
प्रविष्टि तिथि:
19 AUG 2026 4:39PM by PIB Bengaluru
ವಿಕಸಿತ ಭಾರತ ಯುವ ನಾಯಕರ ಸಂವಾದ (ವಿ ಬಿ ವೈ ಎಲ್ ಡಿ) 2027ಕ್ಕೆ ‘ವಿಕಸಿತ ಭಾರತ ರಸಪ್ರಶ್ನೆ’ಯ ಆರಂಭದೊಂದಿಗೆ ಚಾಲನೆ ನೀಡಲಾಗಿದೆ. ಇದರೊಂದಿಗೆ ದೇಶದ ಯುವಜನರಿಗೆ ನಾಯಕತ್ವ, ನಾವೀನ್ಯತೆ ಮತ್ತು ರಾಷ್ಟ್ರ ನಿರ್ಮಾಣದ ಕುರಿತಾದ ರಚನಾತ್ಮಕ ಹಾಗೂ ಅರ್ಹತೆ ಆಧಾರಿತ ಪಯಣದಲ್ಲಿ ಭಾಗವಹಿಸಲು ರಾಷ್ಟ್ರವ್ಯಾಪಿ ಅವಕಾಶ ದೊರೆಯಲಿದೆ. ಈ ಪಯಣವು ನವದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ವಿಕಸಿತ ಭಾರತ ಯುವ ನಾಯಕರ ಸಂವಾದದಲ್ಲಿ ಮುಕ್ತಾಯಗೊಳ್ಳಲಿದ್ದು, ಆಯ್ಕೆಯಾದ ಯುವಜನರಿಗೆ ಪ್ರಧಾನಮಂತ್ರಿಯವರ ಮುಂದೆ ತಮ್ಮ ಆಲೋಚನೆಗಳನ್ನು ಮಂಡಿಸುವ ಅವಕಾಶವೂ ದೊರೆಯಲಿದೆ.

ರಾಜಕೀಯ ಹಿನ್ನೆಲೆ ಇಲ್ಲದ ಒಂದು ಲಕ್ಷ ಯುವ ನಾಯಕರನ್ನು ರೂಪಿಸಬೇಕೆಂಬ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಶಯಕ್ಕೆ ಅನುಗುಣವಾಗಿ ವಿ ಬಿ ವೈ ಎಲ್ ಡಿ 2027 ಅನ್ನು ರೂಪಿಸಲಾಗಿದೆ. ರಾಜಕೀಯ ಕುಟುಂಬದ ಹಿನ್ನೆಲೆಯಿಲ್ಲದ ಪ್ರತಿಭಾವಂತ ಯುವ ಭಾರತೀಯರಿಗೆ ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಲು, ತಮ್ಮ ಆಲೋಚನೆಗಳನ್ನು ಕೊಡುಗೆಯಾಗಿ ನೀಡಲು ಮತ್ತು ರಾಷ್ಟ್ರ ನಿರ್ಮಾಣ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುವುದು ಇದರ ಉದ್ದೇಶವಾಗಿದೆ.
ವಿಕಸಿತ ಭಾರತ @2047 ನಿರ್ಮಾಣಕ್ಕೆ ಕೊಡುಗೆ ನೀಡಲು ಬಯಸುವ ಯುವಜನರನ್ನು ಗುರುತಿಸಿ, ಅವರನ್ನು ಬೆಳೆಸುವುದು ಮತ್ತು ಅವರಿಗೆ ರಾಷ್ಟ್ರೀಯ ವೇದಿಕೆ ಒದಗಿಸುವುದು ಈ ಉಪಕ್ರಮದ ಉದ್ದೇಶವಾಗಿದೆ. ಪಾರದರ್ಶಕ, ಅರ್ಹತೆ ಆಧಾರಿತ ಹಾಗೂ ಬಹುಹಂತದ ಪ್ರಕ್ರಿಯೆಯ ಮೂಲಕ ಭಾಗವಹಿಸುವವರು ಡಿಜಿಟಲ್ ರಸಪ್ರಶ್ನೆಯಿಂದ ಪ್ರಬಂಧ ಸ್ಪರ್ಧೆ, ಜಿಲ್ಲಾ ಚಾಂಪಿಯನ್‌ಶಿಪ್ ಮತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶ ಮಟ್ಟದ ವಿ ಬಿ ವೈ ಎಲ್ ಡಿ ಹಂತಗಳನ್ನು ದಾಟಿ ರಾಷ್ಟ್ರೀಯ ವಿ ಬಿ ವೈ ಎಲ್ ಡಿ ತಲುಪಲಿದ್ದಾರೆ.
ವಿಕಸಿತ ಭಾರತ ರಸಪ್ರಶ್ನೆ:ದೇಶಾದ್ಯಂತ ಭಾಗವಹಿಸುವಿಕೆಗೆ ಅವಕಾಶ
ವಿಕಸಿತ ಭಾರತ ಚಾಲೆಂಜ್ ಟ್ರ್ಯಾಕ್ ನ ಮೊದಲ ಹಂತವಾದ ವಿಕಸಿತ ಭಾರತ ರಸಪ್ರಶ್ನೆಯನ್ನು 2026ರ ಆಗಸ್ಟ್ 17ರಿಂದ ಸೆಪ್ಟೆಂಬರ್ 30ರವರೆಗೆ MY Bharat ಪೋರ್ಟಲ್ ನಲ್ಲಿ ಆಯೋಜಿಸಲಾಗುತ್ತಿದೆ.
15–29 ವರ್ಷ ವಯೋಮಾನದ ಯುವ ಭಾರತೀಯರು ಇದರಲ್ಲಿ ಭಾಗವಹಿಸಬಹುದು. ದೇಶದಾದ್ಯಂತದ ಯುವಜನರು ಭಾಗವಹಿಸಲು ಅನುಕೂಲವಾಗುವಂತೆ ರಸಪ್ರಶ್ನೆಯನ್ನು ಹಲವು ಭಾಷೆಗಳಲ್ಲಿ ಡಿಜಿಟಲ್ ಮಾಧ್ಯಮದ ಮೂಲಕ ನಡೆಸಲಾಗುತ್ತದೆ.
ರಸಪ್ರಶ್ನೆಯಲ್ಲಿ ಭಾಗವಹಿಸುವವರಲ್ಲಿ ಅಗ್ರ ಶೇ.10ರಷ್ಟು ಮಂದಿ, ಗರಿಷ್ಠ ನಾಲ್ಕು ಲಕ್ಷ ಭಾಗವಹಿಸುವವರ ಮಿತಿಗೆ ಒಳಪಟ್ಟು, ಮುಂದಿನ ಹಂತವಾದ ;ವಿಕಸಿತ ಭಾರತ ಪ್ರಬಂಧ ಸ್ಪರ್ಧೆʼಗೆ ಅರ್ಹತೆ ಪಡೆಯಲಿದ್ದಾರೆ. ಆಯ್ಕೆಯಾದ ಭಾಗವಹಿಸುವವರು ನಿಗದಿಪಡಿಸಲಾದ ವಿಕಸಿತ ಭಾರತ ವಿಷಯದ ಕುರಿತು 500 ಪದಗಳ ಪ್ರಬಂಧವನ್ನು MY Bharat ಪೋರ್ಟಲ್ ಮೂಲಕ ಸಲ್ಲಿಸಬೇಕಾಗುತ್ತದೆ.
ರಸಪ್ರಶ್ನೆಯಿಂದ ಜಿಲ್ಲಾ ಮತ್ತು ರಾಜ್ಯ ಚಾಂಪಿಯನ್ ಶಿಪ್ ಗಳವರೆಗೆ
ವಿಕಸಿತ ಭಾರತ ಚಾಲೆಂಜ್ ಐದು ಹಂತಗಳ ಪ್ರಕ್ರಿಯೆಯನ್ನು ಅನುಸರಿಸಲಿದೆ:
ವಿಕಸಿತ ಭಾರತ ರಸಪ್ರಶ್ನೆ → ಪ್ರಬಂಧ ಸ್ಪರ್ಧೆ → ಜಿಲ್ಲಾ ಚಾಂಪಿಯನ್ ಶಿಪ್ → ರಾಜ್ಯ/ಕೇಂದ್ರಾಡಳಿತ ಪ್ರದೇಶ ವಿ ಬಿ ವೈ ಎಲ್ ಡಿ → ರಾಷ್ಟ್ರೀಯ ವಿ ಬಿ ವೈ ಎಲ್ ಡಿ
ಜಿಲ್ಲಾ ಚಾಂಪಿಯನ್ ಶಿಪ್ ನಲ್ಲಿ ಪ್ರತಿ ಜಿಲ್ಲೆಯಿಂದ ಅಗ್ರ 50 ಪ್ರಬಂಧಗಳನ್ನು ಆಯ್ಕೆ ಮಾಡಿ, ನೇರ ಪ್ರಸ್ತುತಿ ಸುತ್ತಿಗೆ ಅರ್ಹಗೊಳಿಸಲಾಗುತ್ತದೆ. ಪ್ರತಿ ಜಿಲ್ಲೆಯಿಂದ ಅಗ್ರ ಇಬ್ಬರು ಪ್ರಸ್ತುತಿದಾರರು ರಾಜ್ಯ ವಿ ಬಿ ವೈ ಎಲ್ ಡಿಗೆ ಅರ್ಹತೆ ಪಡೆಯಲಿದ್ದಾರೆ. ಜಿಲ್ಲಾ ಚಾಂಪಿಯನ್ ಶಿಪ್ ಗಳನ್ನು 2026ರ ನವೆಂಬರ್ 10ರಿಂದ 16ರವರೆಗೆ ನಡೆಸಲು ನಿಗದಿಪಡಿಸಲಾಗಿದೆ.
2026ರ ನವೆಂಬರ್ 17ರಿಂದ ಡಿಸೆಂಬರ್ 7ರವರೆಗೆ ನಡೆಯಲಿರುವ ರಾಜ್ಯ/ಕೇಂದ್ರಾಡಳಿತ ಪ್ರದೇಶ ವಿ ಬಿ ವೈ ಎಲ್ ಡಿಯಲ್ಲಿ ವಿವಿಧ ವಿ ಬಿ ವೈ ಎಲ್ ಡಿ ಟ್ರ್ಯಾಕ್ ಗಳನ್ನು ರಾಜ್ಯ/ಕೇಂದ್ರಾಡಳಿತ ಪ್ರದೇಶ ಮಟ್ಟದಲ್ಲಿ ಆಯೋಜಿಸಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದವರು ತೀರ್ಪುಗಾರರ ಮುಂದೆ ತಮ್ಮ ಆಲೋಚನೆಗಳನ್ನು ಮಂಡಿಸಲಿದ್ದು, ಅವರ ಸಾಧನೆಯ ಆಧಾರದ ಮೇಲೆ ರಾಷ್ಟ್ರೀಯ ಹಂತಕ್ಕೆ ರಾಜ್ಯ ತಂಡಗಳನ್ನು ರಚಿಸಲಾಗುತ್ತದೆ.
ಯುವಜನರ ಪ್ರತಿಭೆ, ನಾಯಕತ್ವ ಮತ್ತು ನಾವೀನ್ಯತೆಯನ್ನು ಅನಾವರಣಗೊಳಿಸಲು ಆರು ಟ್ರ್ಯಾಕ್ ಗಳು
ವಿ ಬಿ ವೈ ಎಲ್ ಡಿ 2027ರಲ್ಲಿ ಯುವ ಭಾರತೀಯರಿಗೆ ಆರು ಪ್ರಮುಖ ಟ್ರ್ಯಾ ಕ್‌ಗಳ ಮೂಲಕ ವಿವಿಧ ಅವಕಾಶಗಳನ್ನು ಒದಗಿಸಲಾಗುತ್ತದೆ:
ವಿಕಸಿತ ಭಾರತ ಚಾಲೆಂಜ್: ರಸಪ್ರಶ್ನೆ, ಪ್ರಬಂಧ ಸ್ಪರ್ಧೆ ಮತ್ತು ಪ್ರಸ್ತುತಿ ಆಧಾರಿತ ಆಯ್ಕೆ ಪ್ರಕ್ರಿಯೆಯ ಮೂಲಕ ವಿಕಸಿತ ಭಾರತ @2047ಕ್ಕಾಗಿ ನವೀನ ಆಲೋಚನೆಗಳು ಮತ್ತು ಪರಿಹಾರಗಳನ್ನು ಮಂಡಿಸಲು ಯುವಜನರಿಗೆ ಅವಕಾಶ ಕಲ್ಪಿಸುವ ಪ್ರಮುಖ ಟ್ರ್ಯಾಕ್.
ಸಾಂಸ್ಕೃತಿಕ ಟ್ರ್ಯಾಕ್: ಜಾನಪದ ನೃತ್ಯ, ಜಾನಪದ ಗೀತೆ, ಚಿತ್ರಕಲೆ, ಭಾಷಣ ಮತ್ತು ಕವನ ರಚನೆ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಭಾರತದ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆ ಮತ್ತು ಸೃಜನಶೀಲ ಅಭಿವ್ಯಕ್ತಿಯನ್ನು ಪ್ರದರ್ಶಿಸಲು ಯುವಜನರಿಗೆ ಇದು ವೇದಿಕೆ ಒದಗಿಸುತ್ತದೆ.
ಭಾರತಕ್ಕಾಗಿ ವಿನ್ಯಾಸ: ನೈಜ ಅಭಿವೃದ್ಧಿ ಸವಾಲುಗಳಿಗೆ ಬಳಕೆದಾರ ಕೇಂದ್ರಿತ ಪರಿಹಾರಗಳನ್ನು ಅಭಿವೃದ್ಧಿಪಡಿಸುವುದರ ಮೇಲೆ ಕೇಂದ್ರೀಕರಿಸಿದ ರಾಷ್ಟ್ರೀಯ ವಿನ್ಯಾಸ ಸ್ಪರ್ಧೆ.
ಸಾಮಾಜಿಕ ಉದ್ದೇಶಕ್ಕಾಗಿ ಹ್ಯಾಕ್: ಸಾಮಾಜಿಕ ಮತ್ತು ಅಭಿವೃದ್ಧಿ ಸಂಬಂಧಿತ ಸವಾಲುಗಳಿಗೆ ವಿಸ್ತರಿಸಬಹುದಾದ ಡಿಜಿಟಲ್ ಪರಿಹಾರಗಳನ್ನು ಆಹ್ವಾನಿಸುವ ತಂತ್ರಜ್ಞಾನ ಆಧಾರಿತ ನಾವೀನ್ಯತಾ ಸ್ಪರ್ಧೆ.
ಯುವ ಉದ್ಯಮಿಗಳ ಸ್ಪರ್ಧೆ: ವಿ ಬಿ ವೈ ಎಲ್ ಡಿ 2027ರಲ್ಲಿ ಹೊಸದಾಗಿ ಸೇರ್ಪಡೆಗೊಂಡಿರುವ ಈ ಟ್ರ್ಯಾಕ್ ನಲ್ಲಿ ಯುವ ಉದ್ಯಮಿಗಳು ರಾಷ್ಟ್ರೀಯ ಅಭಿವೃದ್ಧಿಯ ಆದ್ಯತೆಗಳಿಗೆ ಹೊಂದಿಕೆಯಾಗುವ ತಮ್ಮ ನವೋದ್ಯಮಗಳ ಪ್ರಸ್ತಾವನೆಗಳು ಮತ್ತು ವ್ಯವಹಾರ ಯೋಜನೆಗಳನ್ನು ಮಂಡಿಸಲು ಅವಕಾಶವಿದೆ.
ಯುವ ಸಂಸತ್ತು: ವಿ ಬಿ ವೈ ಎಲ್ ಡಿ 2027ರಲ್ಲಿ ಇದನ್ನು ಸಂಯೋಜಿಸಲಾಗಿದ್ದು, ಇದರ ರಾಷ್ಟ್ರೀಯ ಹಂತದ ಅಂತಿಮ ಸುತ್ತಿನ ಸ್ಪರ್ಧಿಗಳು ರಾಷ್ಟ್ರೀಯ ವಿ ಬಿ ವೈ ಎಲ್ ಡಿಯಲ್ಲಿ ಭಾಗವಹಿಸಲಿದ್ದಾರೆ.
ಭಾರತದ ಅಭಿವೃದ್ಧಿಯ ಆದ್ಯತೆಗಳನ್ನು ಪರಿಹರಿಸಲು 10 - ವಲಯಗಳ ಚೌಕಟ್ಟು
ವಿಕಸಿತ ಭಾರತ ಚಾಲೆಂಜ್ ಗಾಗಿ 10-ವಲಯಗಳ ಚೌಕಟ್ಟನ್ನು ಅಳವಡಿಸಿಕೊಳ್ಳಲಾಗುತ್ತದೆ. ಇದರಲ್ಲಿ ವಿವಿಧ ವಲಯಗಳ ವೈವಿಧ್ಯಮಯ ಅಭಿವೃದ್ಧಿ ಆದ್ಯತೆಗಳು ಮತ್ತು ವಿಕಸಿತ ಭಾರತ @2047ರತ್ತ ಭಾರತದ ಪಯಣವನ್ನು ಪ್ರತಿಬಿಂಬಿಸುವ ವಲಯ-ನಿರ್ದಿಷ್ಟ ವಿಷಯಗಳು ಇರಲಿವೆ.
ಭವಿಷ್ಯದ ಆಡಳಿತ, ಹವಾಮಾನ ಭದ್ರತೆ, ಜನಸಂಖ್ಯಾ ಲಾಭಾಂಶ, ಸುಸ್ಥಿರ ಕೈಗಾರಿಕೀಕರಣ, ಸಂಪರ್ಕ ವ್ಯವಸ್ಥೆ, ಉತ್ಪಾದನೆ, ಬುಡಕಟ್ಟು ನಾಯಕತ್ವ, ನಾವೀನ್ಯತೆ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ನೀಲಿ ಆರ್ಥಿಕತೆ ಸೇರಿದಂತೆ ವಿವಿಧ ವಿಷಯಗಳು ಈ ಚೌಕಟ್ಟಿನ ವ್ಯಾಪ್ತಿಗೆ ಬರಲಿವೆ.
ದೇಶದ ವಿವಿಧ ಭಾಗಗಳ ಯುವಜನರು ತಮ್ಮ ಪ್ರದೇಶಗಳಿಗೆ ನಿರ್ದಿಷ್ಟವಾದ ಸವಾಲುಗಳನ್ನು ಗುರುತಿಸಿ, ನವೀನ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಮತ್ತು ಭಾರತದ ಅಭಿವೃದ್ಧಿಯ ಪಯಣಕ್ಕೆ ಮಾರ್ಗದರ್ಶನ ನೀಡಬಲ್ಲ ಆಲೋಚನೆಗಳನ್ನು ಕೊಡುಗೆಯಾಗಿ ನೀಡಲು ಈ ಚೌಕಟ್ಟು ನೆರವಾಗಲಿದೆ.
ಪ್ರಧಾನಮಂತ್ರಿಯವರ ಮುಂದೆ ಆಲೋಚನೆಗಳನ್ನು ಮಂಡಿಸಲು ರಾಷ್ಟ್ರೀಯ ಸಂವಾದದಲ್ಲಿ ಅವಕಾಶ
ಈ ಪಯಣವು 2027ರ ಜನವರಿ 10ರಿಂದ 12ರವರೆಗೆ ನವದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ವಿಕಸಿತ ಭಾರತ ಯುವ ನಾಯಕ ಸಂವಾದದಲ್ಲಿ ಮುಕ್ತಾಯಗೊಳ್ಳಲಿದೆ.
ಆರು ಟ್ರ್ಯಾಕ್ ಗಳಲ್ಲಿನ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಆಯ್ಕೆಯಾದ ತಂಡಗಳು ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ. ವಿಕಸಿತ ಭಾರತ ಚಾಲೆಂಜ್ ಅಡಿಯಲ್ಲಿ ಪ್ರಾದೇಶಿಕ ತಂಡಗಳು ವಿಷಯ ತಜ್ಞರು, ಕಾರ್ಯದರ್ಶಿಗಳು ಮತ್ತು ಕೇಂದ್ರ ಸಚಿವರ ಮುಂದೆ ತಮ್ಮ ಆಲೋಚನೆಗಳನ್ನು ಮಂಡಿಸಲಿವೆ. ಪ್ರಾದೇಶಿಕ ಹಂತದಲ್ಲಿ ಅಂತಿಮವಾಗಿ ಆಯ್ಕೆಯಾಗುವವರಿಗೆ ಪ್ರಧಾನಮಂತ್ರಿಯವರ ಮುಂದೆ ತಮ್ಮ ಆಲೋಚನೆಗಳನ್ನು ಮಂಡಿಸುವ ಅವಕಾಶ ದೊರೆಯಲಿದೆ.
ಹೀಗೆ, ವಿ ಬಿ ವೈ ಎಲ್ ಡಿ 2027 ಯುವ ನಾಯಕತ್ವಕ್ಕೆ ತಳಮಟ್ಟದಿಂದ ರಾಷ್ಟ್ರೀಯ ಮಟ್ಟದವರೆಗೆ ಸಾಗುವ ವೇದಿಕೆಯನ್ನು ನಿರ್ಮಿಸಲಿದೆ. ವಿಕಸಿತ ಭಾರತ ರಸಪ್ರಶ್ನೆಯಿಂದ ಆರಂಭವಾಗಿ, ಪ್ರಬಂಧ ಸ್ಪರ್ಧೆ, ಜಿಲ್ಲಾ ಹಾಗೂ ರಾಜ್ಯ/ಕೇಂದ್ರಾಡಳಿತ ಪ್ರದೇಶ ಮಟ್ಟದ ಚಾಂಪಿಯನ್ ಶಿಪ್ ಗಳ ಮೂಲಕ ಮುಂದುವರಿದು, ಆಯ್ಕೆಯಾದ ಯುವ ನಾಯಕರು ನೀತಿ ರೂಪಿಸುವವರೊಂದಿಗೆ ಸಂವಾದ ನಡೆಸಿ ಭಾರತದ ಭವಿಷ್ಯಕ್ಕಾಗಿ ತಮ್ಮ ಆಲೋಚನೆಗಳನ್ನು ಮಂಡಿಸಬಹುದಾದ ರಾಷ್ಟ್ರೀಯ ವೇದಿಕೆಯಲ್ಲಿ ಇದು ಮುಕ್ತಾಯಗೊಳ್ಳಲಿದೆ.
ಪ್ರಮುಖ ದಿನಾಂಕಗಳು
ವಿಕಸಿತ ಭಾರತ ರಸಪ್ರಶ್ನೆ: ಆಗಸ್ಟ್ 17 – ಸೆಪ್ಟೆಂಬರ್ 30, 2026
ವಿಕಸಿತ ಭಾರತ ಪ್ರಬಂಧ ಸ್ಪರ್ಧೆ: ಅಕ್ಟೋಬರ್ 5 – 19, 2026
ಜಿಲ್ಲಾ ಚಾಂಪಿಯನ್ ಶಿಪ್: ನವೆಂಬರ್ 10 – 16, 2026
ರಾಜ್ಯ/ಕೇಂದ್ರಾಡಳಿತ ಪ್ರದೇಶ ವಿ ಬಿ ವೈ ಎಲ್ ಡಿ: ನವೆಂಬರ್ 17 – ಡಿಸೆಂಬರ್ 7, 2026
ರಾಷ್ಟ್ರೀಯ ವಿ ಬಿ ವೈ ಎಲ್ ಡಿ, ನವದೆಹಲಿ: ಜನವರಿ 10 – 12, 2027
*****
(रिलीज़ आईडी: 2301295)
आगंतुक पटल : 23