ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಭಾರತದ ರಾಷ್ಟ್ರಪತಿ ಅವರಿಂದ 2024 ಮತ್ತು 2025ರ ಸಾಲಿನ ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್ ಗಳು ಹಾಗೂ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗಳ ಪ್ರದಾನ


ಭಾರತೀಯ ಪರಂಪರೆಯ ವಾಹಕರಾಗಿರುವ ಕಲಾವಿದರು, ನಮ್ಮ ಸಾಮೂಹಿಕ ಸ್ಮೃತಿಯ ರಕ್ಷಕರು ಮತ್ತು ಭವಿಷ್ಯದ ದೃಷ್ಟಿಕೋನದ ಸೃಷ್ಟಿಕರ್ತರು: ರಾಷ್ಟ್ರಪತಿ ದ್ರೌಪದಿ ಮುರ್ಮು

प्रविष्टि तिथि: 13 AUG 2026 3:23PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಆಗಸ್ಟ್ 13, 2026) ನವದೆಹಲಿಯಲ್ಲಿ 2024 ಮತ್ತು 2025ರ ಸಾಲಿನ ಶ್ರೇಷ್ಠ ಕಲಾವಿದರಿಗೆ ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್ ಗಳು ಹಾಗೂ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಯವರು, ಇಂದು ಗೌರವಿಸಲ್ಪಟ್ಟ ಕಲಾವಿದರು ಸಾಮೂಹಿಕವಾಗಿ ಭಾರತದ ಸಾಂಸ್ಕೃತಿಕ ನಕ್ಷೆಯನ್ನು ಪ್ರಸ್ತುತಪಡಿಸುತ್ತಾರೆ—ಈ ಮಣ್ಣಿನ ಕಥೆಗಳು ಮತ್ತು ಹಾಡುಗಳಿಂದ ಹೆಣೆಯಲ್ಪಟ್ಟ ನಕ್ಷೆ; ಈ ವೈವಿಧ್ಯಮಯ ಭೂತಾಯಿಯ ನೃತ್ಯಗಳು ಮತ್ತು ಹಬ್ಬಗಳನ್ನು ಒಳಗೊಂಡಿರುವ ಹಾಗೂ ಶತಮಾನಗಳಿಂದ ರೂಪುಗೊಂಡ ಭಾಷೆಗಳು ಮತ್ತು ಉಪಭಾಷೆಗಳ ನೆನಪುಗಳನ್ನು ಹೊಂದಿರುವ ನಕ್ಷೆ ಎಂದು ಹೇಳಿದರು.

ನಾವು ಅಪಾರ ಪ್ರಮಾಣದ ಸಂಗೀತ ಪರಂಪರೆಗಳು, ನೃತ್ಯ ಶೈಲಿಗಳು ಮತ್ತು ಜಾನಪದ ರಂಗಭೂಮಿಯ ಅಸಂಖ್ಯಾತ ರೂಪಗಳನ್ನು ಹೊಂದಿದ್ದೇವೆ ಎಂದು ರಾಷ್ಟ್ರಪತಿಯವರು ಹೇಳಿದರು. ಭಾರತೀಯ ಸಂಸ್ಕೃತಿಯು ಮಣ್ಣಿನಲ್ಲಿ ಆಳವಾಗಿ ಬೇರೂರಿದೆ. ಇದರ ವೈವಿಧ್ಯಮಯ ಪಾಕಪದ್ಧತಿಗಳು, ಉಡುಪುಗಳು, ನೃತ್ಯ ರೂಪಗಳು ಮತ್ತು ಸಂಗೀತ ಎಲ್ಲವೂ ಪ್ರಕೃತಿಯಿಂದ ಪ್ರೇರಿತವಾಗಿವೆ. ಕಲಾವಿದರು ತಮ್ಮ ನೃತ್ಯ ಮತ್ತು ಸಂಗೀತವನ್ನು ಪ್ರದರ್ಶಿಸಲು ಚಿಲಿಪಿಲಿಗುಟ್ಟುವ ಹಕ್ಕಿಗಳು, ಜುಳುಜುಳು ನಾದದ  ಹರಿವ ನೀರು, ಮರಗಳು ಮತ್ತು ಎಲೆಗಳು, ಮೋಡಗಳು ಹಾಗೂ ನದಿಗಳಿಂದ ಪ್ರೇರಣೆ ಪಡೆಯುತ್ತಾರೆ. ವೈವಿಧ್ಯತೆ ಮತ್ತು ಏಕತೆಯ ನಡುವಿನ ಈ ಬಾಂಧವ್ಯವು ನಮ್ಮ ಕಲೆಗಳ ದೊಡ್ಡ ಶಕ್ತಿಗಳಲ್ಲಿ ಒಂದಾಗಿದೆ ಎಂದು ಹೇಳಿದರು.

ಭಾರತದ ವೈವಿಧ್ಯಮಯ ಕಲಾ ಪ್ರಕಾರಗಳಲ್ಲಿ ಗುರು-ಶಿಷ್ಯ ಪರಂಪರೆಯು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿದೆ ಎಂದು ರಾಷ್ಟ್ರಪತಿಯವರು ಹೇಳಿದರು. ನಮ್ಮ ಕಲೆಗಳಿಗೆ ಗುರುವೇ ಅತ್ಯಂತ ಪ್ರಮುಖ ಪುಸ್ತಕವಾಗಿದ್ದಾರೆ. ಇಂದಿನ ವೇಗವಾಗಿ ಬದಲಾಗುತ್ತಿರುವ ಕಾಲದಲ್ಲಿ, ನಮ್ಮ ಅನೇಕ ಜಾನಪದ ಕಲಾ ಪ್ರಕಾರಗಳು ಅಳಿವಿನ ಅಂಚನ್ನು ಎದುರಿಸುತ್ತಿವೆ. ಇಂತಹ ಕಲಾ ಪ್ರಕಾರಗಳನ್ನು ದಾಖಲಿಸುವುದು ಮಾತ್ರವಲ್ಲದೆ ಅವುಗಳನ್ನು ಜೀವಂತವಾಗಿಡಲು ವಿಶೇಷ ಪ್ರಯತ್ನಗಳನ್ನು ಮಾಡುವುದು ಅತ್ಯಗತ್ಯವಾಗಿದೆ. ಈ ಉದ್ದೇಶದೊಂದಿಗೆ ಸಂಗೀತ ನಾಟಕ ಅಕಾಡೆಮಿಯು 'ಕಲಾ-ದೀಕ್ಷಾ' ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು. ಮುಂದಿನ ಪೀಳಿಗೆಯನ್ನು ರೂಪಿಸಲು ಸೂಕ್ತ ವ್ಯವಸ್ಥಿತ ಪ್ರಯತ್ನಗಳನ್ನು ಮಾಡುವಂತೆ ಅವರು ಹಿರಿಯ ಕಲಾವಿದರಿಗೆ ಕರೆ ನೀಡಿದರು.

ಕಲೆಯ ಮೌಲ್ಯಗಳು ಮತ್ತು ಸಂವೇದನೆಗಳ ಮೂಲಕ ಒಬ್ಬರ ಜೀವನವನ್ನು ಸಮೃದ್ಧಗೊಳಿಸಲು ಪ್ರಕೃತಿಯನ್ನು ಅತ್ಯಂತ ನೈಸರ್ಗಿಕ ತರಬೇತಿ ಕ್ಷೇತ್ರವೆಂದು ಪರಿಗಣಿಸಲಾಗಿದೆ ಎಂದು ರಾಷ್ಟ್ರಪತಿಯವರು  ಹೇಳಿದರು. ಜಾನಪದ ಮತ್ತು ಬುಡಕಟ್ಟು ಕಲೆಗಳು ಜೀವನದ ನೈಸರ್ಗಿಕ ಉತ್ಸಾಹವನ್ನು ಮತ್ತು ಪ್ರಕೃತಿಯೊಂದಿಗಿನ ಆಳವಾದ ಬಾಂಧವ್ಯವನ್ನು ಪ್ರತಿಬಿಂಬಿಸುತ್ತವೆ. ಈ ಕಲಾ ಪ್ರಕಾರಗಳಲ್ಲಿ, ಸಮುದಾಯದ ನೆನಪು ಮತ್ತು ಸಾಮೂಹಿಕ ಪ್ರಜ್ಞೆಯು ಸ್ವಯಂಪ್ರೇರಿತ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತದೆ. ಅದಕ್ಕಾಗಿಯೇ ಜಾನಪದ ಕಲೆಗಳು ಭಾರತದ ಸಾಂಸ್ಕೃತಿಕ ಗುರುತಿನ ಪ್ರಮುಖ ಅಡಿಪಾಯವಾಗಿವೆ ಎಂದರು.

ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್ ಗಳು ಮತ್ತು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದ ರಾಷ್ಟ್ರಪತಿಯವರು, ಭಾರತೀಯ ಪರಂಪರೆಯ ವಾಹಕರಾಗಿ ಅವರು ನಮ್ಮ ಸಾಮೂಹಿಕ ಸ್ಮೃತಿಯ ರಕ್ಷಕರು ಮತ್ತು ಭವಿಷ್ಯದ ದೃಷ್ಟಿಕೋನದ ಸೃಷ್ಟಿಕರ್ತರಾಗಿದ್ದಾರೆ ಎಂದು ಹೇಳಿದರು.

ಸಂಗೀತ ನಾಟಕ ಅಕಾಡೆಮಿಯನ್ನು ಭಾರತದ ಮೃದು ಶಕ್ತಿಯ  ಪ್ರಮುಖ ಕೇಂದ್ರವೆಂದು ಪರಿಗಣಿಸಲಾಗಿದೆ ಎಂದು ರಾಷ್ಟ್ರಪತಿಯವರು ಹೇಳಿದರು. ಮುಂಬರುವ ದಿನಗಳಲ್ಲಿ ಇದು ಭಾರತದ ಸಾಂಸ್ಕೃತಿಕ ಶಕ್ತಿಯೊಂದಿಗೆ ಇಡೀ ವಿಶ್ವವನ್ನು ಸಮೃದ್ಧಗೊಳಿಸುವುದನ್ನು ಮುಂದುವರಿಸುತ್ತದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು.

ರಾಷ್ಟ್ರಪತಿ ಅವರ ಭಾಷಣವನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

 

*****


(रिलीज़ आईडी: 2298948) आगंतुक पटल : 26
इस विज्ञप्ति को इन भाषाओं में पढ़ें: Telugu , Bengali , English , Urdu , हिन्दी , Marathi , Punjabi , Gujarati , Odia , Malayalam