ರಕ್ಷಣಾ ಸಚಿವಾಲಯ
azadi ka amrit mahotsav

ಸ್ವಾತಂತ್ರ್ಯ ದಿನಾಚರಣೆ 2026ರಲ್ಲಿ ‘ವಂದೇ ಮಾತರಂ’ನ 150ನೇ ವರ್ಷ ಹಾಗೂ ‘ವಿಕಸಿತ ಭಾರತ@2047 ನಿರ್ಮಾಣದಲ್ಲಿ ಯುವಶಕ್ತಿʼಗೆ ಗೌರವ


ಐತಿಹಾಸಿಕ ಕೆಂಪುಕೋಟೆಯ ಕೊತ್ತಲದಿಂದ ಪ್ರಪ್ರಥಮ ಬಾರಿಗೆ ‘ವಂದೇ ಮಾತರಂ’ ಗೀತೆ ಗಾಯನ

ಪ್ರಧಾನಮಂತ್ರಿ ಅ​​​​​​​ವರಿಂದ ರಾಷ್ಟ್ರಧ್ವಜಾರೋಹಣ ಮತ್ತು ದೇಶವನ್ನುದ್ದೇಶಿಸಿ ಭಾಷಣ

ಭವ್ಯ ಆಚರಣೆಗೆ ಸಾಕ್ಷಿಯಾಗಲು ಸುಮಾರು 5,000 ವಿಶೇಷ ಅತಿಥಿಗಳಿಗೆ ಆಹ್ವಾನ

ಪ್ರಕಟಣಾ ದಿನಾಂಕ: 10 AUG 2026 5:48PM by PIB Bengaluru

2026ರ ಆಗಸ್ಟ್ 15ರಂದು ರಾಷ್ಟ್ರವು ತನ್ನ 80ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೆಹಲಿಯ ಐತಿಹಾಸಿಕ ಕೆಂಪುಕೋಟೆಯಿಂದ ನಡೆಯುವ ಆಚರಣೆಯ ನೇತೃತ್ವ ವಹಿಸಲಿದ್ದಾರೆ. ಆಗಸ್ಟ್ 10, 2026 ರಂದು ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಕ್ಷಣಾ ಕಾರ್ಯದರ್ಶಿ ಶ್ರೀ ರಾಜೇಶ್ ಕುಮಾರ್ ಸಿಂಗ್, 2026 ರಲ್ಲಿ ‘ವಂದೇ ಮಾತರಂ’ ನ 150 ವರ್ಷಗಳು ಪೂರ್ಣಗೊಳ್ಳುತ್ತಿರುವುದರಿಂದ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದ ರಾಷ್ಟ್ರೀಯ ಗೀತೆಗೆ ಗೌರವ ನಮನವಾಗಿ ಕೆಂಪುಕೋಟೆಯ ಕೊತ್ತಲದಿಂದ ಪ್ರಪ್ರಥಮ ಬಾರಿಗೆ ಇದನ್ನು ಹಾಡಲಾಗುವುದು ಎಂದು ತಿಳಿಸಿದರು.

ಪ್ರಧಾನಮಂತ್ರಿಯವರು ಕೆಂಪುಕೋಟೆಗೆ ಆಗಮಿಸಿದ ನಂತರ ‘ವಂದೇ ಮಾತರಂ’ ಗಾಯನ ನಡೆಯಲಿದೆ. ನಂತರ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ, ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ವರ್ಷದ ಆಚರಣೆಯಲ್ಲಿ ‘ಯುವ ಶಕ್ತಿ’ಗೂ ಮಹತ್ವ ನೀಡಲಾಗುತ್ತಿದ್ದು, 2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣದಲ್ಲಿ ಭಾರತದ ಯುವಜನತೆ ನೀಡುತ್ತಿರುವ ಕೊಡುಗೆಯನ್ನು ಗುರುತಿಸಲಾಗುವುದು ಎಂದು ರಕ್ಷಣಾ ಕಾರ್ಯದರ್ಶಿ ತಿಳಿಸಿದರು.

ವಂದೇ ಮಾತರಂ ನ 150 ವರ್ಷಗಳು

ಹೂವಿನ ಅಲಂಕಾರದಲ್ಲಿ ‘ವಂದೇ ಮಾತರಂ’ ಪ್ರದರ್ಶಿಸಲಾಗುವುದು. ಕೋಟೆಯ ಎದುರಿನ ಜ್ಞಾನಪಥದಲ್ಲಿ ಎನ್‌ ಸಿ ಸಿ ಯ ಒಟ್ಟು 2,500 ಬಾಲಕ ಮತ್ತು ಬಾಲಕಿಯರ ಕೆಡೆಟ್‌ ಗಳು ಹಾಗೂ ಮೈ ಭಾರತ್ ಸ್ವಯಂಸೇವಕರು ‘वंदे मातरम्’ ಆಕಾರದಲ್ಲಿ ನಿಲ್ಲಲಿದ್ದಾರೆ. ‘ವಂದೇ ಮಾತರಂ’ನ 150 ವರ್ಷಗಳನ್ನು ಸ್ಮರಿಸುವ ಬ್ಯಾನರ್‌ ನ್ನು ಹೊತ್ತ ಭಾರತೀಯ ವಾಯುಪಡೆಯ ಎಂಐ-17 ಹೆಲಿಕಾಪ್ಟರ್, ಕೆಂಪುಕೋಟೆಯಲ್ಲಿ ನೆರೆದಿರುವ ಜನರ ಮೇಲೆ ಪುಷ್ಪವೃಷ್ಟಿ ಮಾಡಲಿದೆ.

ಸೇನಾ ಬ್ಯಾಂಡ್ ಪ್ರದರ್ಶನಗಳು

ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ತಲೆಮಾರುಗಳನ್ನು ಒಂದಗೂಡಿಸಿದ ಮತ್ತು ಸ್ಫೂರ್ತಿ ನೀಡಿದ ಗೀತೆಗೆ ಗೌರವ ಸಲ್ಲಿಸಲು, ಆಗಸ್ಟ್ 08, 2026 ರಿಂದ ಭಾರತದಾದ್ಯಂತ ಹಲವಾರು ಬ್ಯಾಂಡ್ ಪ್ರದರ್ಶನಗಳನ್ನು ಆಯೋಜಿಸಲಾಗುತ್ತಿದೆ. ಸೇನೆ, ನೌಕಾಪಡೆ, ವಾಯುಪಡೆ, ಭಾರತೀಯ ಕರಾವಳಿ ರಕ್ಷಣಾ ಪಡೆ, ಎನ್‌ ಸಿ ಸಿ, ಕೇಂದ್ರ ಮೀಸಲು ಪೊಲೀಸ್ ಪಡೆ (ಸಿ ಆರ್‌ ಪಿ ಎಫ್), ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ), ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿ ಐ ಎಸ್‌ ಎಫ್), ಸಶಸ್ತ್ರ ಸೀಮಾ ಬಲ (ಎಸ್‌ ಎಸ್‌ ಬಿ), ಗಡಿ ಭದ್ರತಾ ಪಡೆ (ಬಿ ಎಸ್‌ ಎಫ್), ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್ (ಐಡಿಎಸ್), ರೈಲ್ವೇ ಭದ್ರತಾ ಪಡೆ (ಆರ್‌ ಪಿ ಎಫ್‌) ಮತ್ತು ಅಸ್ಸಾಂ ರೈಫಲ್ಸ್‌ ನ ಬ್ಯಾಂಡ್‌ ಪ್ರದರ್ಶನಗಳು 343 ಪ್ರಮುಖ ಸ್ಥಳಗಳಲ್ಲಿ ಆಗಸ್ಟ್ 15, 2026 ರವರೆಗೆ ಮುಂದುವರಿಯಲಿವೆ. ನಾಗರಿಕರಲ್ಲಿ ದೇಶಭಕ್ತಿಯ ಭಾವನೆಯನ್ನು ಉತ್ತೇಜಿಸಲು ಈ ಬ್ಯಾಂಡ್ ಪ್ರದರ್ಶನ ಸ್ಥಳಗಳಿಗೆ ಸಾರ್ವಜನಿಕರಿಗೆ ಪ್ರವೇಶ ಮುಕ್ತವಾಗಿರುತ್ತದೆ.

ಯುವ ಶಕ್ತಿ: ವಿಕಸಿತ ಭಾರತ @2047 ರತ್ತ ಪ್ರಯಾಣದ ನೇತೃತ್ವ

2026ರ ಸ್ವಾತಂತ್ರ್ಯ ದಿನಾಚರಣೆಯು ವಿವಿಧ ಕ್ಷೇತ್ರಗಳಲ್ಲಿ ಯುವಜನರ ಯಶಸ್ಸನ್ನು ಗುರುತಿಸಲಿದೆ. ಅಂತಾರಾಷ್ಟ್ರೀಯ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಿತಶಾಸ್ತ್ರ ಒಲಿಂಪಿಯಾಡ್ 2026 ರ 19 ಪದಕ ವಿಜೇತ ವಿದ್ಯಾರ್ಥಿಗಳ ಸಾಧನೆಯು ವಿಜ್ಞಾನ ಕ್ಷೇತ್ರದಲ್ಲಿ ಯುವ ಶಕ್ತಿಯ ಯಶಸ್ಸಿಗೆ ಒಂದು ಉದಾಹರಣೆಯಾಗಿದೆ. ಅವರನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದ್ದು, ಅವರಿಗೆ ಆಸನಗಳನ್ನು ಕಾಯ್ದಿರಿಸಲಾಗುತ್ತದೆ.

ಹಿನ್ನೆಲೆಯ ಅಲಂಕಾರಿಕ ಪರದೆಗಳು ಪರಮಾಣು ಮತ್ತು ಬಾಹ್ಯಾಕಾಶ ರಂಗದಲ್ಲಿ ಭಾರತ ಸಾಧಿಸಿರುವ ಪ್ರಗತಿಯನ್ನು ಪ್ರದರ್ಶಿಸಿದರೆ, ಗಾರ್ಡ್ ಆಫ್ ಆನರ್ (ಗೌರವ ವಂದನೆ) ಪ್ರದೇಶದಲ್ಲಿನ ಸುಂದರ ಹೂವಿನ ಅಲಂಕಾರವು 2047ರ ವೇಳೆಗೆ ಭಾರತವು 'ವಿಕಸಿತ ಭಾರತ'ವಾಗಿ ರೂಪುಗೊಳ್ಳುವ ಹಾದಿಯನ್ನು ವರ್ಣಮಯವಾಗಿ ಬಿಂಬಿಸಲಿದೆ

ವಿಶೇಷ ಅತಿಥಿಗಳು

ವಿವಿಧ ರಂಗಗಳಲ್ಲಿ ಸಾಧನೆ ಮಾಡಿ, ದೇಶದ ವಿಕಸಿತ ಭಾರತ ಪ್ರಯಾಣಕ್ಕೆ ಮಾರ್ಗದರ್ಶನ ನೀಡುತ್ತಿರುವ ಸುಮಾರು 5,000 ವಿಶೇಷ ಅತಿಥಿಗಳನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದೆ. ಈ ಕೆಳಗಿನ ವರ್ಗಗಳು ಇದರಲ್ಲಿ ಸೇರಿವೆ:

  • ರಾಷ್ಟ್ರೀಯ ನಾವೀನ್ಯತೆ ಕಾರ್ಯಕ್ರಮಗಳ ಅಡಿಯಲ್ಲಿ ಯುವ ನಾವೀನ್ಯಕಾರರು
  • ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆಯಡಿಯಲ್ಲಿ ಅತ್ಯುತ್ತಮ ಇಂಟರ್ನ್‌ ಗಳು
  • ವಿವಿಧ ಯೋಜನೆಗಳ ಅಡಿಯಲ್ಲಿ ಬೆಂಬಲಿತವಾದ ಅತ್ಯುತ್ತಮ ಸಾಧನೆಯ ನವೋದ್ಯಮಗಳು
  • ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿಯಲ್ಲಿ ತರಬೇತಿ ಪಡೆದ ಅತ್ಯುತ್ತಮ ಸಾಧನೆ ಮಾಡುತ್ತಿರುವ ಯುವಜನರು
  • ಸ್ಟಾರ್ಟ್‌ಅಪ್ ಇಂಡಿಯಾ ಸೀಡ್ ಫಂಡ್ ಅಡಿಯಲ್ಲಿ ಬೆಂಬಲಿತ ಅತ್ಯುತ್ತಮ ಕಾರ್ಯಕ್ಷಮತೆಯ ನವೋದ್ಯಮಗಳು
  • ಅತ್ಯುತ್ತಮ ಕಾರ್ಯಕ್ಷಮತೆ ತೋರಿದ 'ಮೈ ಭಾರತ್' ಸ್ವಯಂಸೇವಕರು
  • ನಮಸ್ತೆ, ಪ್ರಧಾನಮಂತ್ರಿ ಅಜಯ್, ಸಿ ಎಸ್‌ ಇ ಇ ಡಿ ಫಲಾನುಭವಿಗಳು
  • ವಿವಿಧ ರಸಪ್ರಶ್ನೆಗಳು ಮತ್ತು ಸ್ಪರ್ಧೆಗಳಿಂದ ಆಯ್ಕೆಯಾದ ದೆಹಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು

ವಿಕಸಿತ ಭಾರತ@2047 ರತ್ತ ಉದ್ಯಮಿಗಳು, ನಾವೀನ್ಯಕಾರರು ಮತ್ತು ತಳಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಕರ್ತರ ಕೊಡುಗೆಯನ್ನು ಗೌರವಿಸಿ, ಕೆಳಗಿನ ವರ್ಗಗಳಿಂದ ವಿಶೇಷ ಅತಿಥಿಗಳನ್ನು ಆಹ್ವಾನಿಸಲಾಗಿದೆ:

  • ಅಂತಾರಾಷ್ಟ್ರೀಯ ಯೋಗ ದಿನದ ಸ್ವಯಂಸೇವಕರು
  • ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿಯಲ್ಲಿ ಮಹಿಳಾ ಉದ್ಯಮಿಗಳು
  • ಪ್ರಧಾನಮಂತ್ರಿಎವೈ-ಯು ಯೋಜನೆಯ ಅತ್ಯುತ್ತಮ ಸಾಧನೆ ಮಾಡಿದ ಫಲಾನುಭವಿಗಳು
  • ವಿವಿಧ ಕ್ಷೇತ್ರಗಳ ನಾವೀನ್ಯಕಾರರು/ವಿಜ್ಞಾನಿಗಳು
  • ದೆಹಲಿಯ ಭಾರತ್ ಟ್ಯಾಕ್ಸಿಯ ಸಾರಥಿ/ಕ್ಯಾಬ್ ಚಾಲಕರು/ಟ್ಯಾಕ್ಸಿ ಚಾಲಕರು
  • ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್‌ ಯೋಜನೆಯ ಫಲಾನುಭವಿಗಳು
  • ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಡಿಯ ಕುಶಲಕರ್ಮಿಗಳು
  • ಪ್ರಧಾನಮಂತ್ರಿ ಶ್ರಮ ಯೋಗಿ ಮಾನಧನ್ (ಪಿಎಂ-ಎಸ್‌ ವೈ ಎಂ) ಯೋಜನೆಯ ಅತ್ಯುತ್ತಮ ಸಾಧನೆ ಮಾಡಿದ ಫಲಾನುಭವಿಗಳು
  • ಪ್ರಧಾನಮಂತ್ರಿ ಮತ್ಸ್ಯ ಕಿಸಾನ್ ಸಮೃದ್ಧಿ ಸಹ-ಯೋಜನೆಯ (ಪಿಎಂ-ಎಂ ಕೆ ಎಸ್‌ ಎಸ್‌ ವೈ) ಅತ್ಯುತ್ತಮ ಸಾಧನೆಯ ರೈತರು

ವಿಶೇಷ ಅತಿಥಿಗಳಲ್ಲಿ ಮೌನಯೋಧರೂ ಸೇರಿದ್ದಾರೆ. ಇತರರು ತಮ್ಮ ಗುರಿಗಳನ್ನು ಸಾಧಿಸಲು ನೆರವಾಗುವ ಸಲುವಾಗಿ ಇವರು ಹಗಲಿರುಳು ಶ್ರಮಿಸುತ್ತಾರೆ. ಅವರ ಕೊಡುಗೆಯನ್ನು ಗುರುತಿಸುವುದೂ ಸ್ವಾತಂತ್ರ್ಯ ದಿನಾಚರಣೆಯ ಒಂದು ಭಾಗವಾಗಿರುವುದರಿಂದ, ಕೆಳಗಿನ ವರ್ಗಗಳಿಂದಲೂ ವಿಶೇಷ ಅತಿಥಿಗಳನ್ನು ಆಹ್ವಾನಿಸಲಾಗಿದೆ:

  • ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿಯ ಬೀದಿಬದಿ ವ್ಯಾಪಾರಿಗಳು
  • ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ನಗರ ನೈರ್ಮಲ್ಯ ಸಿಬ್ಬಂದಿ
  • ದೆಹಲಿ ಮೆಟ್ರೋದ ಅತ್ಯುತ್ತಮ ಸಿಬ್ಬಂದಿ
  • ಕರ್ತವ್ಯ ಪಥ/ಸೆಂಟ್ರಲ್ ವಿಸ್ಟಾದ ಅತ್ಯುತ್ತಮ ಸಾಧನೆಯ ಕಾರ್ಮಿಕರು
  • ದೆಹಲಿಯ ಸರ್ಕಾರಿ ಆಸ್ಪತ್ರೆಗಳ ನರ್ಸಿಂಗ್ ಆರ್ಡರ್ಲಿಗಳು (ವಾರ್ಡ್ ಅಟೆಂಡೆಂಟ್‌ ಗಳು) ಮತ್ತು ಇತರ ಸಿಬ್ಬಂದಿ

ವಿವಿಧ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದ ಹಾಗೂ ದೆಹಲಿಯಲ್ಲಿ ನೆಲೆಸಿರುವ 1,500ಕ್ಕೂ ಹೆಚ್ಚು ಜನರನ್ನು ಸಾಂಪ್ರದಾಯಿಕ ಉಡುಪಿನಲ್ಲಿ ಈ ಭವ್ಯ ಸಮಾರಂಭಕ್ಕೆ ಸಾಕ್ಷಿಯಾಗಲು ಆಹ್ವಾನಿಸಲಾಗಿದೆ. ಅವರು ಕೆಂಪುಕೋಟೆಯಲ್ಲಿ 'ಕಿರು ಭಾರತ'ವನ್ನು ಪ್ರದರ್ಶಿಸಲಿದ್ದಾರೆ.

ಸ್ಪರ್ಧೆಗಳ ಮೂಲಕ ಮಕ್ಕಳನ್ನು ತೊಡಗಿಸಿಕೊಳ್ಳುವುದು

ಸ್ವಾತಂತ್ರ್ಯ ದಿನಕ್ಕೆ ಪೂರ್ವಭಾವಿಯಾಗಿ, ರಕ್ಷಣಾ ಸಚಿವಾಲಯವು My Gov ಸಹಯೋಗದೊಂದಿಗೆ ರಸಪ್ರಶ್ನೆಗಳು ಮತ್ತು ಸ್ಪರ್ಧೆಗಳನ್ನು ಆಯೋಜಿಸಿತ್ತು. ಇವುಗಳಲ್ಲಿ ‘2047 ರ ವೇಳೆಗೆ ವಿಕಸಿತ ಭಾರತ ನಿರ್ಮಾಣದಲ್ಲಿ ಕೃತಕ ಬುದ್ಧಿಮತ್ತೆಯ (ಎಐ) ಪಾತ್ರ’ ಕುರಿತು ಪ್ರಬಂಧ ಸ್ಪರ್ಧೆ; ‘ಭಾರತ 1947 vs ಭಾರತ 2047’ ಕುರಿತು ಚಿತ್ರಕಲೆ ಸ್ಪರ್ಧೆ; ಮತ್ತು ‘ಭಾರತದ ಸಂವಿಧಾನ – ಮೂಲಭೂತ ಹಕ್ಕುಗಳು, ಕರ್ತವ್ಯಗಳು, ಪ್ರಮುಖ ವಿಧಿಗಳು ಮತ್ತು ಸಂವಿಧಾನ ಶಿಲ್ಪಿಗಳು’, ‘ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಮಹಿಳೆಯರು – ರಾಣಿ ಲಕ್ಷ್ಮೀಬಾಯಿಯಿಂದ ಸರೋಜಿನಿ ನಾಯ್ಡು ಮತ್ತು ಅದರಿಂದಾಚೆಗೆ’, ‘ಆಧುನಿಕ ಭಾರತದ ಪ್ರಮುಖ ಮೈಲಿಗಲ್ಲುಗಳು: ತಾಂತ್ರಿಕ ಪ್ರಗತಿ ಮತ್ತು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಸಾಧನೆ’, ಮತ್ತು ‘ಪರಮಾಣು ತಂತ್ರಜ್ಞಾನದಲ್ಲಿ ಭಾರತದ ಯಶೋಗಾಥೆ’ ಎಂಬ ವಿಷಯಗಳ ಕುರಿತು ಆನ್‌ಲೈನ್ ರಸಪ್ರಶ್ನೆ ಸ್ಪರ್ಧೆಗಳು ಸೇರಿವೆ. ಸ್ಪರ್ಧೆಗಳಲ್ಲಿ ವಿಜೇತರಾದ ಸುಮಾರು 600 ಜನರು ಸಹ ಈ ಆಚರಣೆಯ ಭಾಗವಾಗಲಿದ್ದಾರೆ.

ಈ ರಾಷ್ಟ್ರೀಯ ಹಬ್ಬದ ಆಚರಣೆಯಲ್ಲಿ ನಾಗರಿಕರನ್ನು ತೊಡಗಿಸಿಕೊಳ್ಳಲು ಇತರ ಸಚಿವಾಲಯಗಳು/ಇಲಾಖೆಗಳು, ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‌ ಸಿ ಟಿ) ಸರ್ಕಾರ ಮತ್ತು ದೆಹಲಿ ಪೊಲೀಸರು ಸಹ ವಿವಿಧ ಆನ್‌ಲೈನ್ ಮತ್ತು ಆಫ್‌ಲೈನ್ ರಸಪ್ರಶ್ನೆಗಳು ಮತ್ತು ಚಟುವಟಿಕೆಗಳನ್ನು ಆಯೋಜಿಸುತ್ತಿದ್ದಾರೆ.

ಸಾರ್ವಜನಿಕ ಅನುಕೂಲಗಳು

  • ಕ್ಲೋಕ್ ರೂಮ್ ವ್ಯವಸ್ಥೆ: ಹಿಂದಿನ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕ್ಲೋಕ್ ರೂಮ್‌ ಗಳ ಲಭ್ಯತೆಯನ್ನು ವೀಕ್ಷಕರು ಶ್ಲಾಘಿಸಿದ್ದರು. ಜನರ ಅನುಕೂಲಕ್ಕಾಗಿ, ಮುಂಬರುವ ಆಚರಣೆಗಾಗಿ ಆರು ಸ್ಥಳಗಳಲ್ಲಿ 25 ಕ್ಲೋಕ್ ರೂಮ್‌ ಗಳನ್ನು ಸ್ಥಾಪಿಸಲಾಗಿದೆ.
  • ಸಹಾಯ ಕೇಂದ್ರಗಳಲ್ಲಿ ಸ್ವಯಂಸೇವಕರು: 200 ಸ್ವಯಂಸೇವಕರು - 'ಮೈ ಭಾರತ್'ನಿಂದ 100 ಮತ್ತು ಎನ್‌ ಸಿ ಸಿ ಯಿಂದ 100 - ಪೋಲಿಸ್ ಸಿಬ್ಬಂದಿಯೊಂದಿಗೆ ವೀಕ್ಷಕರು ಆಸನಗಳ ಆವರಣವನ್ನು ತಲುಪಲು ನೆರವಾಗಲಿದ್ದಾರೆ. ಕೆಂಪುಕೋಟೆಗೆ ಹೋಗುವ ಮಾರ್ಗದಲ್ಲಿ ಈ ಸ್ವಯಂಸೇವಕರನ್ನು ಗುರುತಿಸಬಹುದಾಗಿದೆ.
  • ಗಾಲಿಕುರ್ಚಿ ವ್ಯವಸ್ಥೆ: ಸಹಾಯದ ಅಗತ್ಯವಿರುವ ಎಲ್ಲಾ ವೀಕ್ಷಕರಿಗಾಗಿ ಗಾಲಿಕುರ್ಚಿಗಳ ನೆರವು ಒದಗಿಸಲು ಮೆಟ್ರೋ ನಿಲ್ದಾಣ ಮತ್ತು ಪಾರ್ಕಿಂಗ್ ಪ್ರದೇಶಗಳಲ್ಲಿ ಎನ್‌ ಸಿ ಸಿ ಕೆಡೆಟ್‌ ಗಳು ಉಪಸ್ಥಿತರಿರುತ್ತಾರೆ.
  • ಮೆಟ್ರೋ ಸೇವೆಗಳು: ಜನರು ಕಾರ್ಯಕ್ರಮದ ಸ್ಥಳವನ್ನು ತಲುಪಲು ಆಗಸ್ಟ್ 15 ರಂದು ಬೆಳಿಗ್ಗೆ 4 ಗಂಟೆಯಿಂದ ಮೆಟ್ರೋ ಸಂಚಾರ ಆರಂಭವಾಗಲಿದೆ. ಆಹ್ವಾನಿತರೆಲ್ಲರಿಗೂ ಮೆಟ್ರೋ ಸೇವೆಯನ್ನು ಉಚಿತವಾಗಿ ಒದಗಿಸಲಾಗುವುದು. ಇ-ಆಹ್ವಾನ ಪತ್ರಿಕೆಯೊಂದಿಗೆ ಮೆಟ್ರೋ ಕ್ಯೂಆರ್ ಕೋಡ್‌ ಗಳನ್ನು ಒದಗಿಸಲಾಗುತ್ತದೆ.
  • ಪರೇಡ್ ಮೈದಾನದಲ್ಲಿ ವಾಹನ ನಿಲುಗಡೆ ಸೌಲಭ್ಯ: ಸಿಂಧುತ್ವ ಹೊಂದಿರುವ ಪಾರ್ಕಿಂಗ್/ಲೇಬಲ್‌ ಗಳನ್ನು ಹೊಂದಿರುವ ವೀಕ್ಷಕರಿಗೆ ವಾಹನ ನಿಲುಗಡೆ ಸೌಲಭ್ಯ ಲಭ್ಯವಿರುತ್ತದೆ.
  • ಪಾದಚಾರಿಗಳಿಗೆ ರಾಂಪ್ ಸೌಲಭ್ಯ: ಮೇಲ್ಭಾಗದ ಸುಭಾಷ್ ಮಾರ್ಗದಿಂದ ಕೆಳಭಾಗದ ಸುಭಾಷ್ ಮಾರ್ಗಕ್ಕೆ ಪಾದಚಾರಿಗಳ ಸುಗಮ ಸಂಚಾರಕ್ಕಾಗಿ ರಾಂಪ್‌ಗಳು ಮತ್ತು ಮೆಟ್ಟಿಲುಗಳನ್ನು ಅಳವಡಿಸಲಾಗಿದೆ.
  • ಗೂಗಲ್ ಮತ್ತು Mappls ಮ್ಯಾಪ್‌ ಗಳ ಬಳಕೆ: ಮುಖ್ಯ ಕಾರ್ಯಕ್ರಮದ ದಿನದಂದು ಸಾರ್ವಜನಿಕರಿಗಾಗಿ ಗೂಗಲ್ ಮತ್ತು Mappls ಮ್ಯಾಪ್‌ ಗಳಲ್ಲಿ ಸಂಚಾರ ನಿರ್ಬಂಧಗಳು ಗೋಚರಿಸುತ್ತವೆ.
  • ರೇನ್ ಪಾಂಚೋಗಳು (ಮಳೆಯ ರಕ್ಷಣಾ ಉಡುಪುಗಳು): ಅಸ್ಥಿರ ಹವಾಮಾನ ಪರಿಸ್ಥಿತಿಗಳ ಕಾರಣದಿಂದಾಗಿ, ಕೋಟೆ ಆವರಣದಲ್ಲಿರುವ ಗಣ್ಯರ ಹೊರತಾಗಿ ಮಾಧವದಾಸ್ ಪಾರ್ಕ್ ಮತ್ತು ಆಗಸ್ಟ್ 15 ಪಾರ್ಕ್‌ ನಲ್ಲಿರುವ ಎಲ್ಲಾ ಆಹ್ವಾನಿತರಿಗೂ ರೇನ್ ಪಾಂಚೋಗಳನ್ನು ನೀಡಲಾಗುವುದು.

ಆಹ್ವಾನ ಪತ್ರಿಕೆ: ಸಾರ್ವಜನಿಕ ಸೇವೆ ಮತ್ತು ಕರ್ತವ್ಯ ನಿಷ್ಠೆ

ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ‘ಸೇವಾ ತೀರ್ಥ’ವನ್ನು ಸಮರ್ಪಿಸುವ ಸಂದರ್ಭದಲ್ಲಿ, ‘ಸೇವಾ ತೀರ್ಥ’ವು ಕರ್ತವ್ಯ, ಕರುಣೆ ಮತ್ತು 'ರಾಷ್ಟ್ರಕ್ಕೆ ಮೊದಲ ಆದ್ಯತೆ' ತತ್ವಕ್ಕೆ ಬದ್ಧತೆಯ ಉಜ್ವಲ ಹಾಗೂ ಶಕ್ತಿಶಾಲಿ ಸಂಕೇತವಾಗಿ ನಿಲ್ಲುತ್ತದೆ ಎಂದು ಹೇಳಿದರು. ಇದು ಪ್ರತಿಯೊಬ್ಬರ ಕಲ್ಯಾಣಕ್ಕಾಗಿ ನಿಸ್ವಾರ್ಥ ಸೇವೆ ಮತ್ತು ದಣಿವಿಲ್ಲದ ಸಮರ್ಪಣಾ ಮನೋಭಾವದ ಹಾದಿಯಲ್ಲಿ ನಡೆಯಲು ತಲೆಮಾರುಗಳಿಗೆ ಸ್ಫೂರ್ತಿ ನೀಡುತ್ತದೆ. ಇದೇ ಭಾವನೆಯೊಂದಿಗೆ, ಈ ವರ್ಷದ ಮುಖ್ಯ ಸಮಾರಂಭದ ಆಹ್ವಾನ ಪತ್ರಿಕೆಗಳಲ್ಲಿ ‘ಸೇವಾ ತೀರ್ಥ’ವನ್ನು ಪ್ರದರ್ಶಿಸಲಾಗಿದ್ದು, ಪ್ರತಿಯೊಬ್ಬ ನಾಗರಿಕನ ಕಲ್ಯಾಣಕ್ಕಾಗಿ ಸಮರ್ಪಣಾ ಮನೋಭಾವದಿಂದ ಮುನ್ನಡೆಯಲು ಜನರನ್ನು ಪ್ರೇರೇಪಿಸುತ್ತದೆ. ಆಹ್ವಾನ ಪತ್ರಿಕೆಯಲ್ಲಿರುವ ಧರ್ಮಚಕ್ರವು ಧರ್ಮನಿಷ್ಠ ಕರ್ತವ್ಯದ ಶಾಶ್ವತ ಚಲನೆ ಮತ್ತು ನಿರಂತರ ನಿಸ್ವಾರ್ಥ ಕಾರ್ಯವನ್ನು ಸಂಕೇತಿಸುತ್ತದೆ.

ಸ್ವಚ್ಛತಾ ಅಭಿಯಾನ

ಕರ್ತವ್ಯ ನಿಷ್ಠೆಯ ಮನೋಭಾವದೊಂದಿಗೆ, ಈ ವರ್ಷ ಎನ್‌ ಸಿ ಸಿ ಕೆಡೆಟ್‌ ಗಳು ಮತ್ತು ‘ಮೈ ಭಾರತ್’ ಸ್ವಯಂಸೇವಕರನ್ನು ಒಳಗೊಂಡಂತೆ ಕೆಂಪುಕೋಟೆಯಲ್ಲಿ ಕಾರ್ಯಕ್ರಮದ ನಂತರದ ಸ್ವಚ್ಛತಾ ಅಭಿಯಾನವನ್ನು ಆಯೋಜಿಸಲಾಗಿದೆ. ಪ್ರೇಕ್ಷಕರು ತೆರಳಿದ ನಂತರ ಅದೇ ದಿನ ಕಸವನ್ನು ವ್ಯವಸ್ಥಿತವಾಗಿ ಸಂಗ್ರಹಿಸುವುದು ಮತ್ತು ತಕ್ಷಣವೇ ವಿಲೇವಾರಿ ಮಾಡುವುದು ಹಾಗೂ ಸ್ವಚ್ಛ ಭಾರತ ಅಭಿಯಾನದ ಸಂದೇಶವನ್ನು ರವಾನಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ಈ ಅಭಿಯಾನವು ದೇಶದಾದ್ಯಂತದಿಂದ ಆಗಮಿಸುವ ವೀಕ್ಷಕರಿಗೆ ಕಾರ್ಯಕ್ರಮದ ನಂತರವೂ ಕೆಂಪುಕೋಟೆ ಲಭ್ಯವಿರುವುದನ್ನು ಖಚಿತಪಡಿಸುತ್ತದೆ.

ಆಸನಗಳ ಆವರಣಗಳ ಹೆಸರುಗಳು

ವಿಐಪಿ ಸಂಸ್ಕೃತಿಯನ್ನು ಅಂತ್ಯಗೊಳಿಸಲು ಮತ್ತು ಜಲ ಸಂರಕ್ಷಣೆಯ ಮಹತ್ವವನ್ನು ಎತ್ತಿಹಿಡಿಯಲು, 2026ರ ಗಣರಾಜ್ಯೋತ್ಸವದಲ್ಲಿ ಆಸನಗಳ ಆವರಣಗಳಿಗೆ ಭಾರತದ ನದಿಗಳ ಹೆಸರನ್ನು ಇಡಲಾಗಿತ್ತು. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗಾಗಿ, ಆಸನಗಳ ಆವರಣಗಳಿಗೆ ಭಾರತದ ಪ್ರಮುಖ ಸರೋವರಗಳ ಹೆಸರುಗಳನ್ನು ಇಡಲಾಗಿದೆ.

ಒಳಚರಂಡಿ ನಿರ್ವಹಣೆ

ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭದಲ್ಲಿ ಮಳೆಯಾಗುವ ಸಾಧ್ಯತೆಯನ್ನು ಪರಿಗಣಿಸಿ, ನೀರು ಉಕ್ಕಿ ಹರಿಯುವುದನ್ನು ತಡೆಯಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರಿಣಾಮವಾಗಿ, ಕೆಂಪುಕೋಟೆ ಮತ್ತು ಸುತ್ತಮುತ್ತಲಿನ ಆವರಣದಲ್ಲಿರುವ ಚರಂಡಿ ಮತ್ತು ಒಳಚರಂಡಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗುತ್ತಿದೆ.

 

*****

 


(ಪ್ರಕಟಣೆ ಐ.ಡಿ.: 2297363) ವಿಸಿಟರ್ ಕೌಂಟರ್ : 134
ಪ್ರಕಟಣೆಯನ್ನು ಇದರಲ್ಲಿ ಓದಿ: Punjabi , Telugu , Manipuri , Bengali , Odia , English , Urdu , हिन्दी , Marathi , Tamil , Malayalam