ರಾಷ್ಟ್ರಪತಿಗಳ ಕಾರ್ಯಾಲಯ
ಭಾರತದ ರಾಷ್ಟ್ರಪತಿ ಅವರು 12ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಲ್ಲಿ ಭಾಗಿಯಾಗಿ, ಸಂತ ಕಬೀರ್ ಕೈಮಗ್ಗ ಪ್ರಶಸ್ತಿ ಮತ್ತು 2025ರ ರಾಷ್ಟ್ರೀಯ ಕೈಮಗ್ಗ ಪ್ರಶಸ್ತಿ ಪ್ರದಾನ ಮಾಡಿದರು
ಕೈಮಗ್ಗ ಕ್ಷೇತ್ರದ ಸುಸ್ಥಿರ ಅಭಿವೃದ್ಧಿಗೆ ಹೊಸ ತಂತ್ರಜ್ಞಾನಗಳ ಸೂಕ್ತ ಬಳಕೆ ಅತ್ಯಗತ್ಯ: ರಾಷ್ಟ್ರಪತಿ ದ್ರೌಪದಿ ಮುರ್ಮು
ಸಾಂಪ್ರದಾಯಿಕ ಕಲೆಗಳನ್ನು ಆಧುನಿಕ ಪ್ರವೃತ್ತಿ ಗಳು, ಬ್ರ್ಯಾಂಡ್ ಗಳು ಮತ್ತು ಜಾಗತಿಕ ಮೌಲ್ಯ ಸರಪಳಿಗಳೊಂದಿಗೆ ಜೋಡಿಸುವ ಮೂಲಕ ಯುವ ಉದ್ಯಮಿಗಳು, ವಿನ್ಯಾಸಕರು ಮತ್ತು ನವೋದ್ಯಮಗಳು ಈ ಕ್ಷೇತ್ರದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಬಹುದು: ರಾಷ್ಟ್ರಪತಿ ದ್ರೌಪದಿ ಮುರ್ಮು
प्रविष्टि तिथि:
07 AUG 2026 4:27PM by PIB Bengaluru
ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಆಗಸ್ಟ್ 8, 2026) ನವದೆಹಲಿಯ ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ 12ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಲ್ಲಿ ಪಾಲ್ಗೊಂಡು ಸಂತ ಕಬೀರ್ ಕೈಮಗ್ಗ ಪ್ರಶಸ್ತಿ ಮತ್ತು 2025ರ ರಾಷ್ಟ್ರೀಯ ಕೈಮಗ್ಗ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಇದೇ ಸಂದರ್ಭದಲ್ಲಿ ಭಾರತದ ಶ್ರೀಮಂತ ಮತ್ತು ವೈವಿಧ್ಯಮಯ ಕೈಮಗ್ಗ ನೇಯ್ಗೆ ಪರಂಪರೆಯನ್ನು ಆಚರಿಸುವ ನಾಲ್ಕು ಸ್ಮರಣಾರ್ಥ ಅಂಚೆ ಚೀಟಿಗಳನ್ನು ಸಹ ಬಿಡುಗಡೆ ಮಾಡಲಾಯಿತು.

ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಯವರು, ಕೈಮಗ್ಗವು ಶತಮಾನಗಳಿಂದ ಭಾರತದ ನಾಗರಿಕತೆಯ ವಿಕಾಸದ ಪ್ರಯಾಣದ ಅವಿಭಾಜ್ಯ ಅಂಗವಾಗಿದೆ. ಇದು ನಮ್ಮ ದೇಶದ ಅಸಾಧಾರಣ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ನಮ್ಮ ಪ್ರಾದೇಶಿಕ ಅನನ್ಯತೆಯನ್ನು ಸಂರಕ್ಷಿಸಿದೆ. ಕೈಮಗ್ಗ ಕ್ಷೇತ್ರವು ಉದ್ಯೋಗ ಸೃಷ್ಟಿ, ಮಹಿಳಾ ಸಬಲೀಕರಣ, ಕಲೆ ಮತ್ತು ಸಂಸ್ಕೃತಿ ಹಾಗೂ ಪ್ರಕೃತಿಯ ಮೇಲಿನ ಪ್ರೀತಿಯನ್ನು ಉತ್ತೇಜಿಸುತ್ತದೆ. ಕೈಮಗ್ಗವು ಭಾರತದ ಸ್ವಾತಂತ್ರ್ಯ ಸಂಗ್ರಾಮ ಮತ್ತು ಸ್ವಾವಲಂಬನೆಯ ಸ್ಪೂರ್ತಿಯೊಂದಿಗೂ ಬೆಸೆದುಕೊಂಡಿದೆ ಎಂದು ಹೇಳಿದರು.

ಆಗಸ್ಟ್ 7, 1905 ರಂದು ಸ್ವದೇಶಿ ಚಳವಳಿಯನ್ನು ಅಧಿಕೃತವಾಗಿ ಪ್ರಾರಂಭಿಸಲಾಯಿತು ಎಂದು ರಾಷ್ಟ್ರಪತಿಯವರು ಹೇಳಿದರು. ಬಂಗಾಳ ವಿಭಜನೆಯನ್ನು ಪ್ರತಿಭಟಿಸಿ ಪ್ರಾರಂಭಿಸಲಾದ ಈ ಚಳವಳಿಯು ದೇಶೀಯ ಸರಕುಗಳು, ದೇಶೀಯ ಕೈಗಾರಿಕೆಗಳು ಮತ್ತು ವಿಶೇಷವಾಗಿ ದೇಶದ ಕೈಮಗ್ಗದ ನೇಕಾರರನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿತ್ತು. ಈ ಐತಿಹಾಸಿಕ ಘಟನೆಯ ಗೌರವಾರ್ಥವಾಗಿ, ಭಾರತ ಸರ್ಕಾರವು 2015 ರಿಂದ ಆಗಸ್ಟ್ 7 ರಂದು 'ರಾಷ್ಟ್ರೀಯ ಕೈಮಗ್ಗ ದಿನ'ವನ್ನಾಗಿ ಆಚರಿಸಿಕೊಂಡು ಬರುತ್ತಿದೆ. ರಾಷ್ಟ್ರೀಯ ಕೈಮಗ್ಗ ದಿನದಂದು ಕೈಮಗ್ಗ ಕ್ಷೇತ್ರಕ್ಕೆ ಸಂಬಂಧಪಟ್ಟ ಪ್ರತಿಯೊಬ್ಬರಿಗೂ ಅವರು ಅಭಿನಂದನೆ ಸಲ್ಲಿಸಿದರು. ಈ ಕಾರ್ಯಕ್ರಮವು ನಮ್ಮ ದೇಶದ ಸಾಂಸ್ಕೃತಿಕ ಏಕತೆಯನ್ನು ವ್ಯಾಖ್ಯಾನಿಸುವ ವೈವಿಧ್ಯತೆಯ ಆಚರಣೆಯಾಗಿದೆ. ಭಾರತದ ಕೈಮಗ್ಗ ಕ್ಷೇತ್ರಕ್ಕೆ ಶ್ರೇಷ್ಠ ಗುಣಮಟ್ಟದ ವರ್ಚಸ್ಸನ್ನು ಸ್ಥಾಪಿಸುತ್ತಿರುವ ಸರ್ಕಾರ ಮತ್ತು ನೇಕಾರ ಸಮುದಾಯದ ಜಂಟಿ ಪ್ರಯತ್ನಗಳನ್ನು ಗುರುತಿಸುವ ಸಂದರ್ಭ ಇದಾಗಿದೆ ಎಂದು ಅವರು ಹೇಳಿದರು.

ಭಾರತದ ಗ್ರಾಮೀಣ ಪ್ರೀಮಿಯಂ ಆರ್ಥಿಕತೆಗೆ ಮಾನವ ಕೇಂದ್ರಿತ ಉದಾಹರಣೆಯಾಗಿ ಹೊರಹೊಮ್ಮಲು ನಮ್ಮ ಕೈಮಗ್ಗ ಕ್ಷೇತ್ರಕ್ಕಿರುವ ಸಾಮರ್ಥ್ಯವು ಗಮನಾರ್ಹವಾಗಿ ಬಲಗೊಂಡಿದೆ ಎಂದು ರಾಷ್ಟ್ರಪತಿಯವರು ಹೇಳಿದರು. ಪ್ರಮುಖ ಕೈಮಗ್ಗ ಕ್ಲಸ್ಟರ್ ಗಳನ್ನು ಆಧುನಿಕ ತಂತ್ರಜ್ಞಾನ ಮತ್ತು ಸಮಕಾಲೀನ ತರಬೇತಿ ವಿಧಾನಗಳೊಂದಿಗೆ ಸಂಯೋಜಿಸಲಾಗುತ್ತಿದೆ. ನೇಕಾರರ ಆದಾಯವನ್ನು ಹೆಚ್ಚಿಸಲು ಸರ್ಕಾರ ಹಲವು ಕ್ರಮಗಳನ್ನು ಜಾರಿಗೊಳಿಸುತ್ತಿದೆ. ಕೈಮಗ್ಗ ಕ್ಷೇತ್ರವನ್ನು 'ಪರಿಶೀಲಿತ ಸಾಂಸ್ಕೃತಿಕ ಅರ್ಥವ್ಯವಸ್ಥೆ'ಯಾಗಿ ರೂಪಿಸಲು ಸರ್ಕಾರದ ಪ್ರಯತ್ನಗಳೊಂದಿಗೆ ಭಾರತೀಯ ಕೈಮಗ್ಗ ಕ್ಷೇತ್ರದ ಅಂತಾರಾಷ್ಟ್ರೀಯ ವರ್ಚಸ್ಸು ಹೆಚ್ಚುತ್ತಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು.
ತಂತ್ರಜ್ಞಾನ ಮತ್ತು ನವೀನ ವಿನ್ಯಾಸಗಳೊಂದಿಗೆ ಸಜ್ಜುಗೊಂಡಿರುವ ಅನೇಕ ಪ್ರತಿಭಾವಂತ ಯುವ ಉದ್ಯಮಿಗಳು ಈ ಕ್ಷೇತ್ರಕ್ಕೆ ಪ್ರವೇಶಿಸುತ್ತಿದ್ದಾರೆ ಎಂದು ರಾಷ್ಟ್ರಪತಿಯವರು ಹೇಳಿದರು. ಸರ್ಕಾರಿ ಯೋಜನೆಗಳು ಮತ್ತು ಸಂಸ್ಥೆಗಳ ಮೂಲಕ ಯುವಕರಿಗೆ ಸಕ್ರಿಯವಾಗಿ ಬೆಂಬಲ ನೀಡಬೇಕು, ಇದರಿಂದ ಅವರ ಉತ್ಸಾಹ ಮತ್ತು ಕೌಶಲ್ಯಗಳು ಈ ಕ್ಷೇತ್ರದ ದೀರ್ಘಕಾಲೀನ, ಬಹುಮುಖಿ ಯಶಸ್ಸನ್ನು ಖಚಿತಪಡಿಸಿಕೊಳ್ಳಬಹುದು ಎಂದು ಅವರು ಹೇಳಿದರು. ಸಾಂಪ್ರದಾಯಿಕ ಕಲೆಗಳನ್ನು ಆಧುನಿಕ ಪ್ರವೃತ್ತಿ (ಟ್ರೆಂಡ್) ಗಳು, ಬ್ರ್ಯಾಂಡ್ ಗಳು ಮತ್ತು ಜಾಗತಿಕ ಮೌಲ್ಯ ಸರಪಳಿಗಳೊಂದಿಗೆ ಜೋಡಿಸುವ ಮೂಲಕ ಯುವ ಉದ್ಯಮಿಗಳು, ವಿನ್ಯಾಸಕರು ಮತ್ತು ನವೋದ್ಯಮಗಳು ಈ ಕ್ಷೇತ್ರದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಬಹುದು. ಭಾರತೀಯ ಕೈಮಗ್ಗ ತಂತ್ರಜ್ಞಾನ ಸಂಸ್ಥೆಗಳು (ಐ ಐ ಎಚ್ ಟಿ) ಮತ್ತು ನೇಕಾರ ಸೇವಾ ಕೇಂದ್ರಗಳ ಅಡಿಯಲ್ಲಿರುವ ವಿನ್ಯಾಸ ಸಂಪನ್ಮೂಲ ಕೇಂದ್ರಗಳು (ಡಿಸೈನ್ ರಿಸೋರ್ಸ್ ಸೆಂಟರ್) ಯುವಕರನ್ನು ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಗಮನಾರ್ಹ ಕೆಲಸ ಮಾಡುತ್ತಿರುವುದಕ್ಕಾಗಿ ಅವರು ಹರ್ಷ ವ್ಯಕ್ತಪಡಿಸಿದರು.
ಈ ಕ್ಷೇತ್ರದ ಸುಸ್ಥಿರ ಅಭಿವೃದ್ಧಿಗೆ ಹೊಸ ತಂತ್ರಜ್ಞಾನಗಳ ಸೂಕ್ತ ಬಳಕೆ ಅತ್ಯಗತ್ಯ ಎಂದು ರಾಷ್ಟ್ರಪತಿಯವರು ಹೇಳಿದರು. ಆಧುನಿಕ ಡಿಜಿಟಲ್ ಪರಿಹಾರಗಳ ಮೂಲಕ ಮಾರುಕಟ್ಟೆ ಪ್ರವೇಶವನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಬಹುದು. ಮೇಲಾಗಿ, ಇ-ಕಾಮರ್ಸ್ ವೇದಿಕೆಗಳ ಮೂಲಕ ಜಾಗತಿಕ ಮಾರುಕಟ್ಟೆಗಳಿಗೆ ಭಾರತೀಯ ಕೈಮಗ್ಗ ಉತ್ಪನ್ನಗಳ ತಲುಪುವಿಕೆಯನ್ನು ಗಮನಾರ್ಹವಾಗಿ ಬಲಪಡಿಸಬಹುದು. ದೇಶದ ಒಳಗೊಳ್ಳುವಿಕೆಯ ಬೆಳವಣಿಗೆ ಮತ್ತು ಸ್ವಾವಲಂಬನೆಗೆ ಕೈಮಗ್ಗ ಕ್ಷೇತ್ರವು ಬಲವಾದ ಅಡಿಪಾಯವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸಂತ ಕಬೀರ್ ಕೈಮಗ್ಗ ಪ್ರಶಸ್ತಿಯು ಭಾರತದ ನೇಯ್ಗೆ ಪರಂಪರೆಯನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವಲ್ಲಿ ಅಸಾಧಾರಣ ಕೌಶಲ್ಯ, ಜೀವನಪರ್ಯಂತ ಸಮರ್ಪಣೆ ಮತ್ತು ನಿರಂತರ ಕೊಡುಗೆಗಳನ್ನು ನೀಡಿದ ಕೈಮಗ್ಗ ನೇಕಾರರಿಗೆ ನೀಡಲಾಗುವ ದೇಶದ ಅತ್ಯುನ್ನತ ಗೌರವವಾಗಿದೆ. ರಾಷ್ಟ್ರೀಯ ಕೈಮಗ್ಗ ಪ್ರಶಸ್ತಿಯು ಸಾಂಪ್ರದಾಯಿಕ ಕೌಶಲ್ಯಗಳನ್ನು ಸಂರಕ್ಷಿಸುವ ಜೊತೆಗೆ ಆಧುನಿಕ ತಂತ್ರಗಳನ್ನು ಅಳವಡಿಸಿಕೊಂಡು ಅತ್ಯುತ್ತಮ ಸೃಜನಶೀಲತೆ, ಗುಣಮಟ್ಟ, ನಾವೀನ್ಯತೆ ಮತ್ತು ಶ್ರೇಷ್ಠತೆಯನ್ನು ಪ್ರದರ್ಶಿಸಿದ ಕೈಮಗ್ಗ ನೇಕಾರರು ಮತ್ತು ಇತರ ಪಾಲುದಾರರನ್ನು ಗೌರವಿಸುತ್ತದೆ.
ರಾಷ್ಟ್ರಪತಿಯವರ ಭಾಷಣವನ್ನು ವೀಕ್ಷಿಸಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ:
*****
(रिलीज़ आईडी: 2296101)
आगंतुक पटल : 14