ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಮುಂಬೈನಲ್ಲಿ ಬ್ರಿಕ್ಸ್ ಸದಸ್ಯ ಮತ್ತು ಪಾಲುದಾರ ರಾಷ್ಟ್ರಗಳಿಂದ 500ಕ್ಕೂ ಅಧಿಕ  ಪ್ರತಿನಿಧಿಗಳನ್ನು ಒಗ್ಗೂಡಿಸಿದ ಸೃಜನಶೀಲ ಆರ್ಥಿಕತೆಗೆ ಪ್ರಮುಖ ಅಂತಾರಾಷ್ಟ್ರೀಯ ಮಾರುಕಟ್ಟೆಯಾದ ಬ್ರಿಕ್ಸ್ ವೇವ್ಸ್ ಬಜಾರ್


ಬ್ರಿಕ್ಸ್ ವೇವ್ಸ್ ಬಜಾರ್ ಜಾಗತಿಕ ಸೃಜನಶೀಲ ಆರ್ಥಿಕತೆಯ ಭವಿಷ್ಯ ರೂಪಿಸಲು ವಿನ್ಯಾಸಗೊಳಿಸಲಾದ ಉನ್ನತ ಮಟ್ಟದ, ಕ್ಯುರೇಟೆಡ್ ಸಂಗಮ; ಮಹಾರಾಷ್ಟ್ರ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ, ಎಐ ಮತ್ತು ಸಂಸ್ಕೃತಿ ಸಚಿವರಾದ ಆಶಿಶ್ ಶೆಲಾರ್ ಪ್ರತಿಪಾದನೆ

ಸೃಜನಶೀಲ ಆರ್ಥಿಕತೆಯಾದ್ಯಂತ ಬಲವಾದ ಸಾಂಸ್ಥಿಕ ಮತ್ತು ವಾಣಿಜ್ಯ ಸಂಪರ್ಕಗಳನ್ನು ಸೃಷ್ಟಿಸಲು ಭಾರತವು ತನ್ನ ಅನುಭವವನ್ನು ಹಂಚಿಕೊಳ್ಳಲು ಮತ್ತು ಬ್ರಿಕ್ಸ್ ಪಾಲುದಾರರೊಂದಿಗೆ ಕಾರ್ಯನಿರ್ವಹಿಸಲು ಸಿದ್ಧವ: ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಚಂಚಲ್ ಕುಮಾರ್

ಬ್ರಿಕ್ಸ್ ಸದಸ್ಯ ಮತ್ತು ಪಾಲುದಾರ ರಾಷ್ಟ್ರಗಳ ಪಾಲುದಾರರಿಗೆ IFFI 2026ರಲ್ಲಿ ಭಾಗವಹಿಸಲು ಆಹ್ವಾನ ನೀಡಿದ ಐಎಫ್ ಎಫ್ ಐ ಉತ್ಸವ ನಿರ್ದೇಶಕ ಶ್ರೀ ಅಶುತೋಷ್ ಗೋವಾರಿಕರ್ ; ಸೃಜನಶೀಲ ಮನಸ್ಸುಗಳು ಒಟ್ಟಿಗೆ ಬರುವ ಶಕ್ತಿ ಪ್ರದರ್ಶಿಸಲು ಪಾಲುದಾರರಿಗೆ ಕರೆ

प्रविष्टि तिथि: 06 AUG 2026 1:54PM by PIB Bengaluru

ಬ್ರಿಕ್ಸ್ ಸದಸ್ಯ ಮತ್ತು ಪಾಲುದಾರ ರಾಷ್ಟ್ರಗಳ 500ಕ್ಕೂ ಅಧಿಕ ಪ್ರತಿನಿಧಿಗಳನ್ನು ಒಗ್ಗೂಡಿಸುವ ಸೃಜನಶೀಲ ಆರ್ಥಿಕತೆಗೆ ಪ್ರಮುಖ ಅಂತಾರಾಷ್ಟ್ರೀಯ ಮಾರುಕಟ್ಟೆಯಾದ ಬ್ರಿಕ್ಸ್ ವೇವ್ಸ್ ಬಜಾರ್ ಮುಂಬೈನಲ್ಲಿಂದು ಆರಂಭವಾಯಿತು. ಎರಡು ದಿನಗಳ ಕಾಲ ನಡೆಯಲಿರುವ ಬ್ರಿಕ್ಸ್ ವೇವ್ಸ್ ಬಜಾರ್, ಆಡಿಯೋವಿಶುವಲ್ ಮತ್ತು ಸೃಜನಶೀಲ ಕೈಗಾರಿಕೆಗಳಲ್ಲಿ ಸಂವಾದ, ವ್ಯಾಪಾರ ತೊಡಗಿಸಿಕೊಳ್ಳುವಿಕೆ, ಜ್ಞಾನ ವಿನಿಮಯ ಮತ್ತು ಗಡಿಯಾಚೆಗಿನ ಪಾಲುದಾರಿಕೆಗಳಿಗೆ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಬ್ರಿಕ್ಸ್ ಸದಸ್ಯ ಮತ್ತು ಪಾಲುದಾರ ರಾಷ್ಟ್ರಗಳ ನಡುವಿನ ಸಹಯೋಗವನ್ನು ಬಲವರ್ಧನೆಗೊಳಿಸುವ ಗುರಿ ಹೊಂದಿದೆ. ಬಜಾರ್‌ನಲ್ಲಿ ಭಾಗವಹಿಸುವ ಪಾಲುದಾರರಲ್ಲಿ ಸರ್ಕಾರಿ ಪ್ರತಿನಿಧಿಗಳು, ಕೈಗಾರಿಕಾ ಸಂಸ್ಥೆಗಳು, ನಿರ್ದೇಶಕರು, ನಿರ್ಮಾಪಕರು, ಹೂಡಿಕೆದಾರರು, ಪ್ರಸಾರಕರು, ಒಟಿಟಿ ಪ್ಲಾಟ್‌ಫಾರ್ಮ್‌ಗಳು, ತಂತ್ರಜ್ಞಾನ ಕಂಪನಿಗಳು, ಸ್ಟಾರ್ಟ್‌ಅಪ್‌ಗಳು, ಸಾಂಸ್ಕೃತಿಕ ಸಂಸ್ಥೆಗಳು ಮತ್ತು ಸೃಜನಶೀಲ ಉದ್ಯಮಗಳು ಸೇರಿವೆ.

ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿದ ಮಹಾರಾಷ್ಟ್ರ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ, ಎಐ ಮತ್ತು ಸಂಸ್ಕೃತಿ ಸಚಿವ, ವಕೀಲ ಆಶಿಶ್ ಶೆಲಾರ್, ಜಾಗತಿಕ ಸೃಜನಶೀಲ ಕುಟುಂಬವನ್ನು ಭಾರತದ ಸೃಜನಶೀಲ ಪೂರಕ ವ್ಯವಸ್ಥೆಯ ಹೃದಯ ಎಂದು ಬಣ್ಣಿಸಿ ರೋಮಾಂಚಕ ನಗರವಾದ ಮುಂಬೈಗೆ ಸ್ವಾಗತಿಸಿದರು. ಕಲೆ ಮತ್ತು ತಂತ್ರಜ್ಞಾನದ ನಡುವಿನ ಗಡಿಗಳು ವೇಗವಾಗಿ ಕರಗುತ್ತಿವೆ ಎಂದು ಶ್ರೀ ಶೆಲಾರ್ ಹೇಳಿದರು. ಬ್ರಿಕ್ಸ್ ವೇವ್ಸ್ ಬಜಾರ್ ಕೇವಲ ಒಂದು ಪ್ರದರ್ಶನವಲ್ಲ, ಬದಲಾಗಿ ಜಾಗತಿಕ ಸೃಜನಶೀಲ ಆರ್ಥಿಕತೆಯ ಭವಿಷ್ಯ ರೂಪಿಸಲು ವಿನ್ಯಾಸಗೊಳಿಸಲಾದ ಉನ್ನತ ಮಟ್ಟದ, ಸಂಗಮವಾಗಿದೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತವು ವಿಶ್ವಗುರು ಮತ್ತು ಜಗತ್ತಿಗೆ ಸಾಂಸ್ಕೃತಿಕ ಮತ್ತು ಬೌದ್ಧಿಕ ಮಾರ್ಗದರ್ಶಕ ಬೆಳಕಾಗಿ ತನ್ನ ಸರಿಯಾದ ಸ್ಥಾನವನ್ನು ಸ್ಥಿರವಾಗಿ ಮರಳಿ ಪಡೆಯುತ್ತಿದೆ ಎಂದು ಶ್ರೀ ಶೆಲಾರ್ ಹೇಳಿದರು. ಈ ಭವ್ಯ ದೂರದೃಷ್ಟಿಯ ನಿರ್ಣಾಯಕ ಸ್ತಂಭವೆಂದರೆ 'ಸೃಜನಶೀಲ ಆರ್ಥಿಕತೆ' (ಆರೆಂಜ್ ಆರ್ಥಿಕತೆ), ಇದು ನಮ್ಮ ಪ್ರಾಚೀನ ಪರಂಪರೆ, ಅಪರಿಮಿತ ಸೃಜನಶೀಲತೆ ಮತ್ತು ಆಧುನಿಕ ವಾಣಿಜ್ಯ ಹಿತಾಸಕ್ತಿಗಳನ್ನು ಸಂಯೋಜಿಸುವ ಒಂದು ರೋಮಾಂಚಕ ಸ್ಥಳವಾಗಿದೆ ಎಂದು ಅವರು ಹೇಳಿದರು.

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಚಂಚಲ್ ಕುಮಾರ್ ಅವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರಗಳು ಮತ್ತು ಸಮುದಾಯಗಳನ್ನು ಸಂಪರ್ಕಿಸಲು ಸಂಸ್ಕೃತಿ ಮತ್ತು ಸೃಜನಶೀಲತೆಯ ಶಕ್ತಿಯನ್ನು ನಿರಂತರವಾಗಿ ಒತ್ತಿ ಹೇಳಿದ್ದಾರೆ ಮತ್ತು ಚಲನಚಿತ್ರಗಳಲ್ಲಿ ಬ್ರಿಕ್ಸ್ ಜೊತೆಗಿನ ಭಾರತದ ಸಹಕಾರವು ಈ ದೂರದೃಷ್ಟಿಯಿಂದ ಬೆಳೆದಿದೆ ಎಂದು ಹೇಳಿದರು. ಮುಂಬೈನಲ್ಲಿ ನಡೆಯುವ ಬ್ರಿಕ್ಸ್ ವೇವ್ಸ್ ಬಜಾರ್ ಮತ್ತು 2026 ರ ನವೆಂಬರ್‌ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್‌ಎಫ್‌ಐ) ಜೊತೆಗೆ ನಡೆಯಲಿರುವ ಬ್ರಿಕ್ಸ್ ಚಲನಚಿತ್ರೋತ್ಸವವು ವ್ಯವಹಾರ, ಪಾಲುದಾರಿಕೆ ಮತ್ತು ಮಾರುಕಟ್ಟೆ ಲಭ್ಯತೆಗಾಗಿ ಮತ್ತು ಇನ್ನೊಂದು ಚಲನಚಿತ್ರಗಳು, ಚಲನಚಿತ್ರ ನಿರ್ಮಾಪಕರು ಮತ್ತು ಪ್ರೇಕ್ಷಕರಿಗೆ ಪೂರಕ ವೇದಿಕೆಗಳನ್ನು ಒದಗಿಸುತ್ತದೆ ಎಂದು ಅವರು ಹೇಳಿದರು.

ಬ್ರಿಕ್ಸ್ ದೇಶಗಳು ಒಟ್ಟಾಗಿ ಕಥೆಗಳು, ಪ್ರತಿಭೆ, ಪ್ರೇಕ್ಷಕರು, ತಂತ್ರಜ್ಞಾನ ಮತ್ತು ಉದ್ಯಮದ ಅಗಾಧ ಸಂಪತ್ತನ್ನು ಹೊಂದಿವೆ ಮತ್ತು ಈ ಸಾಮರ್ಥ್ಯಗಳನ್ನು ಹೆಚ್ಚು ವ್ಯವಸ್ಥಿತವಾಗಿ ಸಂಯೋಜಿಸಲು ಇಲ್ಲಿ ಅವಕಾಶವಿದೆ ಎಂದು ಶ್ರೀ ಚಂಚಲ್ ಕುಮಾರ್ ಹೇಳಿದರು. ಯೋಜನೆಗಳನ್ನು ಕಂಡುಹಿಡಿಯುವ, ಪಾಲುದಾರಿಕೆಗಳನ್ನು ಆರಂಭಿಸುವ, ಸಹ-ನಿರ್ಮಾಣಗಳನ್ನು ಚರ್ಚಿಸುವ ಮತ್ತು ಹೊಸ ಮಾರುಕಟ್ಟೆಗಳನ್ನು ತೆರೆಯುವ ಜಾಗತಿಕ ಸೃಜನಶೀಲ ಆರ್ಥಿಕತೆಗೆ ವೇವ್ಸ್ ಬಜಾರ್ ಒಂದು ವೇದಿಕೆಯಾಗಲು ಪ್ರಯತ್ನಿಸುತ್ತದೆ ಎಂದು ಅವರು ಹೇಳಿದರು. ಚಲನಚಿತ್ರ, ದೂರದರ್ಶನ, ಅನಿಮೇಷನ್, VFX, ಗೇಮಿಂಗ್, ಸಂಗೀತ, ಡಿಜಿಟಲ್ ಮಾಧ್ಯಮ ಮತ್ತು ಉದಯೋನ್ಮುಖ ವಿಷಯ ಸ್ವರೂಪಗಳಲ್ಲಿ ಸಹಯೋಗಕ್ಕಾಗಿ ಬಲವಾದ ಮಾರ್ಗಗಳನ್ನು ರಚಿಸುವುದು ಎಂಬ ಹಂಚಿಕೆಯ ಉದ್ದೇಶದ ಸುತ್ತ 21 ದೇಶಗಳ ಬ್ರಿಕ್ಸ್ ಸದಸ್ಯರು ಮತ್ತು ಪಾಲುದಾರರನ್ನು ಇದು ಒಗ್ಗೂಡಿಸುತ್ತದೆ ಎಂದು ಅವರು ಹೇಳಿದರು. ವೇವ್ಸ್ ಬಜಾರ್ ಕಾಲಾನಂತರದಲ್ಲಿ ಬ್ರಿಕ್ಸ್‌ನಾದ್ಯಂತದ ಸೃಜನಶೀಲ ಉದ್ಯಮಗಳು ಭೇಟಿಯಾಗಲು, ವಹಿವಾಟು ನಡೆಸಲು, ಸಹಯೋಗಿಸಲು ಮತ್ತು ಬೆಳೆಯಲು ಮಾನ್ಯತೆ ಪಡೆದ ವೇದಿಕೆಯಾಗಿ ಅಭಿವೃದ್ಧಿ ಹೊಂದಬೇಕು ಎಂದು ಅವರು ಒತ್ತಾಯಿಸಿದರು.

ಬ್ರಿಕ್ಸ್ ಮಾರುಕಟ್ಟೆಗಳಲ್ಲಿ ಬ್ರಿಕ್ಸ್ ವಿಷಯದ ಪ್ರಸರಣವನ್ನು ಸುಧಾರಿಸುವ ಅವಶ್ಯಕತೆಯಿದೆ ಎಂದು ವಾರ್ತಾ  ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಹೇಳಿದರು. "ನಮ್ಮ ಪ್ರೇಕ್ಷಕರು ಪರಸ್ಪರರ ಚಲನಚಿತ್ರಗಳು, ಸರಣಿಗಳು, ಅನಿಮೇಷನ್, ಸಂಗೀತ ಮತ್ತು ಡಿಜಿಟಲ್ ವಿಷಯಗಳಿಗೆ ಹೆಚ್ಚಿನ ಲಭ್ಯತೆಯನ್ನು ಹೊಂದಿರಬೇಕು" ಎಂದು ಅವರು ಹೇಳಿದರು. ಸೃಜನಶೀಲ ಆರ್ಥಿಕತೆಯಾದ್ಯಂತ ಬಲವಾದ ಸಾಂಸ್ಥಿಕ ಮತ್ತು ವಾಣಿಜ್ಯ ಸಂಪರ್ಕಗಳನ್ನು  ಸೃಷ್ಟಿಸಲು ಭಾರತವು ತನ್ನ ಅನುಭವವನ್ನು ಹಂಚಿಕೊಳ್ಳಲು ಮತ್ತು ಬ್ರಿಕ್ಸ್ ಪಾಲುದಾರರೊಂದಿಗೆ ಕೆಲಸ ಮಾಡಲು ಸಿದ್ಧವಾಗಿದೆ ಎಂದು ಅವರು ಹೇಳಿದರು.

ಬ್ರಿಕ್ಸ್‌ನ ಈ ವ್ಯಾಪಕ ಸಹಯೋಗವನ್ನು ಭಾರತವು WAVES ಮತ್ತು WAVES ಬಜಾರ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜೀಸ್, ಇಂಡಿಯಾ ಸಿನಿ ಹಬ್ ಮತ್ತು ನಿರ್ಮಾಣ ಕೌಶಲ್ಯ, ಸ್ಟಾರ್ಟ್‌ಅಪ್‌ಗಳು ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಉಪಕ್ರಮಗಳ ಮೂಲಕ ಬೆಂಬಲಿಸಲು ಬಯಸುತ್ತಿದೆ ಎಂದು ಶ್ರೀ ಚಂಚಲ್ ಕುಮಾರ್ ಹೇಳಿದರು. ಅಂತಾರಾಷ್ಟ್ರೀಯ ಪಾಲುದಾರರೊಂದಿಗೆ ಭಾರತೀಯ ಸಾಮರ್ಥ್ಯಗಳನ್ನು ಸಂಯೋಜಿಸಲು ಮತ್ತು ಜಂಟಿ ಯೋಜನೆಗಳು, ತಂತ್ರಜ್ಞಾನ ಪಾಲುದಾರಿಕೆಗಳು, ಪ್ರತಿಭಾ ಅಭಿವೃದ್ಧಿ ಮತ್ತು ಮಾರುಕಟ್ಟೆ ಲಭ್ಯತೆಯನ್ನು ಒದಗಿಸಿಕೊಡಲು ಇದು ಸಹಾಯ ಮಾಡುತ್ತದೆ.

ವಾರ್ತಾ  ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಚಂಚಲ್ ಕುಮಾರ್ 2027 ರಲ್ಲಿ ಮುಂಬೈನಲ್ಲಿ ನಡೆಯಲಿರುವ ವೇವ್ಸ್ ನ ಮುಂದಿನ ಆವೃತ್ತಿಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಎಲ್ಲಾ ಬ್ರಿಕ್ಸ್ ಸದಸ್ಯ ಮತ್ತು ಪಾಲುದಾರ ರಾಷ್ಟ್ರಗಳನ್ನು ಆಹ್ವಾನಿಸಿದರು

ಖ್ಯಾತ ಚಲನಚಿತ್ರ ನಿರ್ಮಾಪಕ ಮತ್ತು ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರೋತ್ಸವದ (IFFI) ಚಲನಚಿತ್ರೋತ್ಸವ ನಿರ್ದೇಶಕ ಶ್ರೀ ಅಶುತೋಷ್ ಗೋವಾರಿಕರ್, 8 ಕ್ಯುರೇಟೆಡ್ ವಿಭಾಗಗಳಲ್ಲಿ ಸುಮಾರು 250 ಚಲನಚಿತ್ರಗಳನ್ನು ಪ್ರದರ್ಶಿಸಲಾಗುವ IFFI 2026 ರಲ್ಲಿ ಭಾಗವಹಿಸಲು ಎಲ್ಲಾ ಪಾಲುದಾರರಿಗೆ ಆಹ್ವಾನ ನೀಡಿದರು. ಸಿನಿಮಾ ಮತ್ತು ಸೃಜನಶೀಲ ಆರ್ಥಿಕತೆಯ ಶಕ್ತಿಯ ಬಗ್ಗೆ ಮಾತನಾಡಿದ ಅವರು, ನಾವು ಒಂದು ದೇಶವನ್ನು ಅದರ ಸಿನಿಮಾ, ಕಥೆಗಳು ಮತ್ತು ಸಂಸ್ಕೃತಿಯ ಮೂಲಕ ಕಂಡುಕೊಳ್ಳುತ್ತೇವೆ ಮತ್ತು ಭಾವನೆಗಳು ಅದ್ಭುತವಾಗಿ ಸಾರ್ವತ್ರಿಕವಾಗಿವೆ ಎಂದು ಹೇಳಿದರು. ಬ್ರಿಕ್ಸ್ ವೇವ್ಸ್ ಬಜಾರ್‌ನಂತಹ ವೇದಿಕೆಗಳು ಸ್ಕ್ರಿಪ್ಟ್‌ಗಳು ಚಲನಚಿತ್ರಗಳಾಗಲು ಕಾರಣವಾಗುತ್ತವೆ, ಚಲನಚಿತ್ರ ನಿರ್ಮಾಪಕರು ಸಹಯೋಗಿಗಳನ್ನು ಕಂಡುಕೊಳ್ಳುತ್ತಾರೆ ಮತ್ತು ಹೀಗೆ. ಸೃಜನಶೀಲ ಧ್ವನಿಗಳು ಒಟ್ಟಿಗೆ ಸೇರಿದಾಗ ಏನಾಗುತ್ತದೆ ಎಂಬುದನ್ನು ಜಗತ್ತಿಗೆ ತೋರಿಸಲು ಬ್ರಿಕ್ಸ್ ಪಾಲುದಾರರು ಒಗ್ಗೂಡಿ ಬರಬೇಕೆಂದು ಅವರು ಕರೆ ನೀಡಿದರು.

"ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣ" ಎಂಬ ಭಾರತದ ಅಧ್ಯಕ್ಷತೆಯ ವಿಷಯದ ಅಡಿಯಲ್ಲಿ ಬ್ರಿಕ್ಸ್ ವೇವ್ಸ್ ಬಜಾರ್ 2026 ಅನ್ನು ಆಯೋಜಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ (MER-III) ಶ್ರೀ ರಾಜೀವ್ ಬೋಡ್ವಾಡೆ ಹೇಳಿದ್ದಾರೆ. ಸೃಜನಶೀಲ ಆರ್ಥಿಕತೆಯು ಪ್ರಮುಖ ಆರ್ಥಿಕ ಚಾಲಕವಾಗಿದ್ದು, ಜಾಗತಿಕ ಜಿಡಿಪಿಗೆ ಶೇಕಡ 3.1 ರಷ್ಟು ಕೊಡುಗೆ ನೀಡುತ್ತದೆ ಮತ್ತು ಅಂತಾರಾಷ್ಟ್ರೀಯ ಸೇವಾ ರಫ್ತುಗಳಲ್ಲಿ 1.4 ಟ್ರಿಲಿಯನ್ ಡಾಲರ್‌ಗಳಿಗಿಂತ ಅಧಿಕ ಉತ್ಪಾದಿಸುತ್ತದೆ ಎಂದು ಅವರು ಹೇಳಿದರು. ನಮ್ಮ ಸಕ್ರಿಯ ಡಿಜಿಟಲ್ ಮಾರುಕಟ್ಟೆಗಳು ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂಯೋಜಿಸುವ ಮೂಲಕ, ಈ ಆವೇಗವನ್ನು ಬಳಸಿಕೊಳ್ಳಲು ಬ್ರಿಕ್ಸ್  ಅನನ್ಯ ಸ್ಥಾನದಲ್ಲಿದೆ ಎಂದು ಅವರು ಹೇಳಿದರು.

ಎನ್‌ಎಫ್‌ಡಿಸಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಪ್ರಕಾಶ್ ಮಗ್ಡಮ್ ಅವರು ಬಜಾರ್ ಎರಡು ದಿನಗಳಲ್ಲಿ ಉನ್ನತ ಮಟ್ಟದ ಸಮ್ಮೇಳನಗಳು, ಪ್ರಮುಖ ಭಾಷಣಗಳು, ಸಂವಾದ ಗೋಷ್ಠಿಗಳು, ವ್ಯಾಪಾರ ನೆಟ್‌ವರ್ಕಿಂಗ್ ಗೋಷ್ಠಿಗಳು ಮತ್ತು ಕ್ಯುರೇಟೆಡ್ ವ್ಯಾಪಾರದಿಂದ ವ್ಯಾಪಾರಕ್ಕೆ (B2B) ಸಭೆಗಳ ಸಮಗ್ರ ಕಾರ್ಯಕ್ರಮವನ್ನು ಒಳಗೊಂಡಿರುತ್ತದೆ ಎಂದು ಹೇಳಿದರು. ಅಂತಾರಾಷ್ಟ್ರೀಯ ಸಹ-ನಿರ್ಮಾಣ, ಕಂಟೆಂಟ್ ಫೈನಾನ್ಸ್, ಡಿಜಿಟಲ್ ಪರಿವರ್ತನೆ, ಬೌದ್ಧಿಕ ಆಸ್ತಿ, ಮಹಿಳಾ ನೇತೃತ್ವದ ಉದ್ಯಮಶೀಲತೆ, ಉದಯೋನ್ಮುಖ ತಂತ್ರಜ್ಞಾನಗಳು, ಸಾರ್ವಜನಿಕ ನೀತಿ ಮತ್ತು ದಕ್ಷಿಣ-ದಕ್ಷಿಣ ಸಹಯೋಗ ಸೇರಿದಂತೆ ಸೃಜನಶೀಲ ಆರ್ಥಿಕತೆಯ ಭವಿಷ್ಯವನ್ನು ರೂಪಿಸುವ ಪ್ರಮುಖ ವಿಷಯಗಳ ಮೇಲೆ ಚರ್ಚೆಗಳು ಕೇಂದ್ರೀಕರಿಸುತ್ತವೆ.

ಉದ್ಘಾಟನಾ ಸಮಾರಂಭಕ್ಕೆ ವಂದನಾರ್ಪಣೆ ಸಲ್ಲಿಸಿದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ಸೆಂಥಿಲ್ ರಾಜನ್, ಬ್ರಿಕ್ಸ್ ವೇವ್ಸ್ ಬಜಾರ್, ಸೃಜನಶೀಲ ಆರ್ಥಿಕತೆಯನ್ನು ನಾವೀನ್ಯತೆ, ಉದ್ಯಮಶೀಲತೆ, ಉದ್ಯೋಗ ಮತ್ತು ಆರ್ಥಿಕ ಬೆಳವಣಿಗೆಯ ಪ್ರಮುಖ ಚಾಲಕವಾಗಿ ಇರಿಸುವ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ನೀತಿ ನಿರೂಪಕರು ಮತ್ತು ಕೈಗಾರಿಕಾ ಪಾಲುದಾರರನ್ನು ಸಾಮಾನ್ಯ ವೇದಿಕೆಯಲ್ಲಿ ಒಗ್ಗೂಡಿಸುವ ಮೂಲಕ, ಬ್ರಿಕ್ಸ್ ವೇವ್ಸ್ ಬಜಾರ್ ದೀರ್ಘಾವಧಿಯ ಪಾಲುದಾರಿಕೆಗಳನ್ನು ಉತ್ತೇಜಿಸಲು ಮತ್ತು ಬ್ರಿಕ್ಸ್ ಸದಸ್ಯ ಮತ್ತು ಪಾಲುದಾರ ರಾಷ್ಟ್ರಗಳಲ್ಲಿ ವ್ಯಾಪಾರ, ಹೂಡಿಕೆ ಮತ್ತು ಸಾಂಸ್ಕೃತಿಕ ಸಹಯೋಗಕ್ಕಾಗಿ ಹೊಸ ಅವಕಾಶಗಳನ್ನು ತೆರೆಯಲು ಪ್ರಯತ್ನಿಸುತ್ತದೆ.

 

*****


(रिलीज़ आईडी: 2295472) आगंतुक पटल : 17
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Assamese , Gujarati , Tamil , Telugu , Malayalam