ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಕಳೆದ ಒಂದು ವರ್ಷದಲ್ಲಿ ಸಾರ್ವಜನಿಕ ಪ್ರಸಾರಕರ ಸಂಪಾದಕೀಯ ಸ್ವಾಯತ್ತತೆ ಅಥವಾ ಕಾರ್ಯನಿರ್ವಹಣೆಯ ಬಗ್ಗೆ ಯಾವುದೇ ಕುಂದುಕೊರತೆಗಳು ಬಂದಿಲ್ಲ
प्रविष्टि तिथि:
05 AUG 2026 3:26PM by PIB Bengaluru
2021-26ರ ಅವಧಿಯಲ್ಲಿ ದೇಶಾದ್ಯಂತ ʻಪ್ರಸಾರ ಭಾರತಿʼಯ ಪ್ರಸಾರ ಮೂಲಸೌಕರ್ಯದ ಅಭಿವೃದ್ಧಿ, ಆಧುನೀಕರಣ ಮತ್ತು ಉನ್ನತೀಕರಣಕ್ಕಾಗಿ ಸರ್ಕಾರವು ʻಪ್ರಸಾರ ಮೂಲಸೌಕರ್ಯ ಮತ್ತು ಸಂಪರ್ಕಜಾಲ ಅಭಿವೃದ್ಧಿʼ(ಬ್ರಾಡ್‌ಕಾಸ್ಟಿಂಗ್ ಇನ್‌ಫ್ರಾಸ್ಟ್ರಕ್ಚರ್ ಅಂಡ್ ನೆಟ್‌ವರ್ಕ್ ಡೆವಲಪ್‌ಮೆಂಟ್-ಬಿಐಎನ್‌ಡಿ) ಎಂಬ ಕೇಂದ್ರ ವಲಯದ ಯೋಜನೆಗೆ ಅನುಮೋದನೆ ನೀಡಿದೆ. ಈ ಯೋಜನೆಯನ್ನು 31.03.2027ರವರೆಗೆ ವಿಸ್ತರಿಸಲಾಗಿದೆ. ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನ, ವಾಸ್ತವಿಕ ವೆಚ್ಚ ಮತ್ತು ಆದಾಯ ಉತ್ಪಾದನೆಯ ವಿವರಗಳು ಪ್ರಸಾರ ಭಾರತಿಯ ವೆಬ್‌ಸೈಟ್‌ನಲ್ಲಿ ಲಭ್ಯವಿವೆ.
ಸಂಪಾದಕೀಯ ವಿಚಾರಗಳನ್ನು ಪ್ರಧಾನ ಸಂಪಾದಕರು ಮತ್ತು ಹಿರಿಯ ಸಂಪಾದಕೀಯ ತಂಡಗಳು ನಿಯಮಿತವಾಗಿ ಪರಿಶೀಲಿಸುತ್ತವೆ. ಪ್ರಸಾರ ಭಾರತಿಯ ಸಂಪಾದಕೀಯ ನೀತಿಗಳು ಮತ್ತು ಕಾರ್ಯಕ್ರಮ ಸಂಹಿತೆಯ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವುದರ ಜೊತೆಗೆ, ಸುದ್ದಿಯ ಗುಣಮಟ್ಟ, ನಿಖರತೆ, ಸಮತೋಲನ ಮತ್ತು ಪ್ರಸ್ತುತಿಯನ್ನು ಸುಧಾರಿಸಲು ಅಗತ್ಯವಿದ್ದಾಗ ಮಾರ್ಗದರ್ಶನ ಹಾಗೂ ಸರಿಪಡಿಸುವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ವೀಕ್ಷಕರ ದೂರುಗಳು ಅಥವಾ ಪ್ರತಿಕ್ರಿಯೆಗಳನ್ನು, ವಿಶೇಷವಾಗಿ ಸಂಪಾದಕೀಯ ವಿಷಯಗಳಿಗೆ ಸಂಬಂಧಿಸಿದವುಗಳನ್ನು, ಸ್ಥಾಪಿತ ನೀತಿಯ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಸಂಪಾದಕೀಯ ತಂಡಕ್ಕೆ ರವಾನಿಸಲಾಗುತ್ತದೆ.
ಕಳೆದ ಒಂದು ವರ್ಷದಲ್ಲಿ, ಸಾರ್ವಜನಿಕ ಪ್ರಸಾರಕರ ಸ್ವಾಯತ್ತತೆ, ನೇಮಕಾತಿಗಳು ಅಥವಾ ಸಂಪಾದಕೀಯ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಪತ್ರಕರ್ತರು, ಉದ್ಯೋಗಿಗಳು ಅಥವಾ ಮಾಧ್ಯಮ ಸಂಸ್ಥೆಗಳಿಂದ ಯಾವುದೇ ಕುಂದುಕೊರತೆಗಳು ಅಥವಾ ಔಪಚಾರಿಕ ಮನವಿಗಳು ಬಂದಿಲ್ಲ. ಆದಾಗ್ಯೂ, ನೇಮಕಾತಿಗೆ ಸಂಬಂಧಿಸಿದಂತೆ ಅರ್ಜಿದಾರರಿಂದ 07 ದೂರುಗಳು ಸ್ವೀಕೃತವಾಗಿವೆ.
‘ಆಕಾಶವಾಣಿ’ಯು ದೇಶದ ಸುಮಾರು 98% ಜನಸಂಖ್ಯೆಯನ್ನು ಮತ್ತು ಭೌಗೋಳಿಕವಾಗಿ 90% ಪ್ರದೇಶವನ್ನು ತಲುಪುತ್ತದೆ. ಚಂದಾದಾರಿಕೆ ಶುಲ್ಕವಿಲ್ಲದೆ ಸಂಪೂರ್ಣ ಉಚಿತವಾಗಿ ದೇಶದ ಯಾವುದೇ ಮೂಲೆಯಲ್ಲಾದರೂ "ಡಿಡಿ ಫ್ರೀ ಡಿಶ್" ಅನ್ನು ವೀಕ್ಷಿಸಬಹುದಾಗಿದೆ. ಪ್ರಸಾರ ಭಾರತಿಯು ವೀಕ್ಷಕರ ದತ್ತಾಂಶ, ಪ್ರೇಕ್ಷಕರ ಪ್ರತಿಕ್ರಿಯೆ ಮತ್ತು ಸಾಮಾಜಿಕ ಮಾಧ್ಯಮಗಳ ವಿಶ್ಲೇಷಣೆಯನ್ನು ಪರಿಶೀಲಿಸುತ್ತದೆ. ಜೊತೆಗೆ, ತನ್ನ ನಿಯಮಿತ ಸಂಪಾದಕೀಯ ಪ್ರಕ್ರಿಯೆಯ ಭಾಗವಾಗಿ ಸುದ್ದಿಯ ಗುಣಮಟ್ಟ, ಕಂಟೆಂಟ್ (ವಿಷಯ) ಮತ್ತು ಪ್ರಸ್ತುತಿಯನ್ನು ನಿರಂತರವಾಗಿ ಸುಧಾರಿಸಲು ಈ ಮಾಹಿತಿಯನ್ನು ಬಳಸಿಕೊಳ್ಳುತ್ತದೆ.
ಇಂದು ಲೋಕಸಭೆಯಲ್ಲಿ ವಕೀಲರಾದ ಪ್ರಿಯಾ ಸರೋಜ್ ಮತ್ತು ಶ್ರೀ ಪುಷ್ಪೇಂದ್ರ ಸರೋಜ್ ಅವರು ಕೇಳಿದ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ವಾರ್ತಾ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ಸಹಾಯಕ ಸಚಿವರಾದ ಡಾ. ಎಲ್. ಮುರುಗನ್ ಅವರು ಈ ಮಾಹಿತಿಯನ್ನು ಒದಗಿಸಿದ್ದಾರೆ.
*****
(रिलीज़ आईडी: 2294889)
आगंतुक पटल : 13